18 C
Karnataka
Friday, November 22, 2024

    ಸೋಲಿಗರನ್ನು ಆರ್ಥಿಕವಾಗಿ ಕಾಡಿದ ಕೋವಿಡ್

    Must read

    ಬಿಳಿಗಿರಂಗನ ಬೆಟ್ಟದ ಹುಲಿ ಮೀಸಲು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿ ಸಂಕುಲಗಳಿಗೆ ಮಾತ್ರವಲ್ಲ, ಸೋಲಿಗ ಸಮುದಾಯಕ್ಕೆ ಸೇರಿದ ಬುಡಕಟ್ಟು ಜನರಿಗೂ ಆಶ್ರಯ ನೀಡಿದೆ. ಇಲ್ಲಿರುವ ಸೋಲಿಗರು ಅರಣ್ಯ ಪ್ರದೇಶಕ್ಕೆ ಸಮೀಪವೇ ವಾಸಿಸುತ್ತಿದ್ದಾರೆ. ಈ ಜನಾಂಗ ಕಾಡಿನ ಕೆಲಸ ಮತ್ತು ಕೂಲಿ ಕೆಲಸದಲ್ಲಿ ತೊಡಗಿಕೊಂಡಿದೆ. ಅರಣ್ಯಕ್ಕೆ ಅಂಟಿಕೊಂಡಿರುವ ಕನ್ನೇರಿ ಕಾಲೋನಿಯಲ್ಲಿ ಸುಮಾರು 230 ಮನೆಗಳಿದ್ದು ಸುಮಾರು 700 ಸೋಲಿಗರು ವಾಸಿಸುತ್ತಿದ್ದಾರೆ.

    ಕಳೆದ ವರ್ಷ ಮನುಕುಲವನ್ನು ಕಾಡಿದ ಕೋವಿಡ್ 19 ಸೋಂಕು ಇವರಿಗೆ ತಟ್ಟಿಲ್ಲವಾದರು ದಿನನಿತ್ಯದ ಕಾರ್ಯಗಳಿಗೆ ಅಡ್ಡಿಯನ್ನುಂಟು ಮಾಡಿತ್ತು. ಇದೀಗ ಪರಿಸ್ಥಿತಿ ಸುಧಾರಿಸುತ್ತಿದೆ. ಈ ಮೀಸಲು ಅರಣ್ಯದಲ್ಲಿ ಮರಗಳ ನಡುವೆ ಶತ ಶತ ಮಾನಗಳಿಂದ ಬೆಳೆದಿರುವ ಕಳೆಯದೆ ಒಂದು ದೊಡ್ಡ ಸಮಸ್ಯೆ. ಇದು ಅರಣ್ಯದ ಬೆಳವಣಿಗೆಗೆ ಮಾತ್ರವಲ್ಲ ಆನೆ, ಜಿಂಕೆಯಂಥ ಸಸ್ಯಾಹಾರಿ ಪ್ರಾಣಿಗಳಿಗೂ ತೊಂದರೆ ಉಂಟುಮಾಡುತ್ತದೆ. ಇದನ್ನು ನಿರ್ಮೂಲನೆ ಮಾಡಲು ಪಣ ತೊಟ್ಟಿರುವ ಅರಣ್ಯ ಇಲಾಖೆಯೆ ಜೊತೆ ಸೋಲಿಗರು ಕೆಲಸ ಮಾಡುತ್ತಾರೆ. ಇದರಲ್ಲಿ ಶೇಕಡ 60ರಷ್ಟು ಮಂದಿ ತೊಡಗಿಕೊಂಡಿದ್ದಾರೆ. ಈ ಕೆಲಸಕ್ಕಾಗಿ ಅವರಿಗೆ 250 ರಿಂದ 300 ರೂಪಾಯಿ ದಿನಗೂಲಿ ಸಿಗುತ್ತದೆ. ಪೊನ್ನಪ್ಪ ಎಂಬ ಸೋಲಿಗ ಇಲ್ಲಿ ಸಿಗುವ ಲ್ಯಾಂಟೆನಾ ದಿಂದ ಸೋಫಾ ತಯಾರಿಸುತ್ತಾನೆ. ಒಂದು ಸೋಫಾ 16000 ದಿಂದ 18000ಕ್ಕೆ ಮಾರಾಟವಾಗುತ್ತದೆ. ಇನ್ನು ಅನೇಕರು ಜೇನು ಸಂಗ್ರಹಿಸಿ ಸಂಸ್ಕರಿಸುತ್ತಾರೆ.

    ಲಾಕ್ ಡೌನ್ ಸಮಯದಲ್ಲಿ ಈ ಉತ್ಪನ್ನಗಳಿಗೆ ಬೇಡಿಕೆ ಕುಸಿಯಿತು. ಪಟ್ಟಣಗಳಿಗೆ ಸರಬರಾಜು ನಿಂತು ಹೋಯಿತು. ಈ ಸಮಯದಲ್ಲಿ ಅನೇಕರಿಗೆ ಆರ್ಥಿಕ ಸಂಕಷ್ಟವೂ ಎದುರಾಯಿತು. ಹಲವರಿಗೆ ಕೆಲಸವೂ ಇಲ್ಲದಂತೆ ಆಯಿತು. ಇಲ್ಲಿನ ಉತ್ಪನ್ನಗಳಿಗೆ ಬೆಂಗಳೂರು, ಚಾಮರಾಜನಗರ ಮತ್ತು ಮೈಸೂರಿನಲ್ಲಿ ಒಳ್ಳೆಯ ಬೇಡಿಕೆ ಇದೆ. ಈಗ ಪರಿಸ್ಥಿತಿ ನಿಧಾನವಾಗಿ ಮತ್ತೆ ಹಳಿಗೆ ಬರುತ್ತಿದೆ.

    ಇಲ್ಲಿನ ಸೋಲಿಗರು ಅಡವಿ ಹೆಸರಿನಲ್ಲಿ ಜೇನು ಉತ್ಪಾದಿಸುತ್ತಾರೆ. ಕಳೆದ ಆರು ತಿಂಗಳಲ್ಲಿ ಈ ಉದ್ಯಮ 2.5 ಲಕ್ಷ ರೂಪಾಯಿಗಳಷ್ಟು ನಷ್ಟ ಅನುಭವಿಸಿದೆ. ಕೋವಿಡ್ ಕಾರಣದಿಂದ ನಮ್ಮ ಉತ್ಪನ್ನಗಳನ್ನು ಪೇಟೆಗೆ ಒಯ್ದು ಮಾರಲು ಕಷ್ಟವಾಯಿತು. ಗ್ರಾಹಕರು ಅಂಗಡಿಗಳಿಗೆ ಬರುತ್ತಿರಲಿಲ್ಲ. ಹೀಗಾಗಿ ಕೋವಿಡ್ ಪೂರ್ವದ ಮಾರಾಟ ಗುರಿಯನ್ನು ಈ ಅವಧಿಯಲ್ಲಿ ತಲುಪಲು ಸಾಧ್ಯವಾಗಲಿಲ್ಲ ಎಂದು ಅಡವಿಯಲ್ಲಿ ಕೆಲಸ ಮಾಡುವ ಕುಮಾರ ಹೇಳುತ್ತಾರೆ.

    ಜಗತ್ತನ್ನೇ ಕಾಡಿದ ಕೋವಿಡ್ ಸೋಂಕು ಸೋಲಿಗರನ್ನು ಮುಟ್ಟಲೇ ಇಲ್ಲ. ಇಲ್ಲಿ ಕೋವಿಡ್ ಸೋಂಕಿತರೇ ಇಲ್ಲ. ಹೊರ ಜಗತ್ತಿನೊಂದಿಗೆ ಇವರ ಸಂಪರ್ಕ ಕಡಿಮೆ ಇರುವುದು ಇದಕ್ಕೆ ಒಂದು ಕಾರಣ. ಜೊತೆಗೆ ಪ್ರಕೃತಿಯೊಂದಿಗಿನ ಒಡನಾಟ ಮತ್ತು ಅವರ ಆಹಾರ ಪದ್ಧತಿಯೂ ಮತ್ತೊಂದು ಕಾರಣ. ಕೋವಿಡ್ ಕಾಲದಲ್ಲಿ ಇವರಿಗೆ ಆಹಾರ ಪದಾರ್ಥಗಳ ಪೂರೈಕೆ ಅಡ್ಡಿಯಾಗದಂತೆ ಅರಣ್ಯ ಇಲಾಖೆ ಎಲ್ಲಾ ವ್ಯವಸ್ಥೆ ಮಾಡಿತ್ತು. ಹೀಗಾಗಿ ಅಕ್ಕಿ , ರಾಗಿ ಇತ್ಯಾದಿ ದಿನ ನಿತ್ಯದ ವಸ್ತುಗಳು ಯಾವುದೇ ಅಡ್ಡಿಯಾಗದೆ ಸರಬರಾಜಾಯಿತು.

    ಅದೃಷ್ಟವಶಾತ್ ಯಾರು ಸೋಂಕು ಪೀಡಿತರಾಗಲಿಲ್ಲ. ನಮ್ಮ ಮನೆಗಳ ಬಳಿಯೇ ಆರೋಗ್ಯ ಸೇವೆ ಬೇಕು ಎಂಬುದು ಇಲ್ಲಿನವರ ಆಗ್ರಹ . ಈಗ ಚಿಕಿತ್ಸೆ ಬೇಕೆಂದರೆ ಇವರು ಆಸ್ಪತ್ರೆಗೆಂದು 25 ಕಿ.ಮೀ ಸಾಗಬೇಕು.

    ಕೋವಿಡ್ ಕಾರಣದಿಂದ ತೊಂದರೆಗೆ ಒಳಗಾದವರೆಂದರೆ ವಿದ್ಯಾರ್ಥಿಗಳು. ಇವರು ಆನ್ ಲೈನ್ ಕ್ಲಾಸ್ ಪಡೆಯಲು ನೆಟ್ ವರ್ಕೂ ಇಲ್ಲ. ಮೂಲ ಸೌಲಭ್ಯವೂ ಇಲ್ಲ. ವಿದ್ಯಾಗಮ ನಡೆಸಲು ಕಾಡು ದಾಟಿ ಬರಬೇಕಾದ ಶಿಕ್ಷಕರೂ ಬರಲಿಲ್ಲ.

    ಈಗ ಪರಿಸ್ಥಿತಿ ಸುಧಾರಿಸುತ್ತಿರುವದರಿಂದ ಎಲ್ಲವೂ ಸಹಜ ವಾಗುವ ನಿರೀಕ್ಷೆಯಲ್ಲಿ ಸೋಲಿಗ ಸಮುದಾಯವಿದೆ.

    ಸನತ್ ಪ್ರಸಾದ್
    ಸನತ್ ಪ್ರಸಾದ್
    ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರ. ಬೆಂಗಳೂರಿಗನೆಂದು ಕರೆಸಿಕೊಳ್ಳಲು ಹೆಮ್ಮೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಶಿಕ್ಷಣ, ಆರೋಗ್ಯ, ಎಕನಾಮಿ ವಿಷಯಗಳ ವರದಿಗಾರಿಕೆಯಲ್ಲಿ ಆಸಕ್ತಿ.
    spot_img

    More articles

    4 COMMENTS

    1. ಸೋಲಿಗರು ಆರ್ಥಿಕವಾಗಿ ನಷ್ಟ ಅನುಭವಿಸಿದರೂ ಅರೋಗ್ಯ ಭಾಗ್ಯ ಇದೆಯಲ್ಲಾ ಅದೇ ಅವರಿಗೆ ಭಗವಂತ ನೀಡಿರುವ ವರ. ಶ್ರಮಜೀವಿಗಳು.ಸನತ್ ಪ್ರಸಾದ್ ಅವರು ಸೋಲಿಗರಬವಣೆ ಗಳನ್ನು ಚೆನ್ನಾಗಿ ವಿವರಿಸಿದ್ದಾರೆ.ಧನ್ಯವಾದಗಳು

    LEAVE A REPLY

    Please enter your comment!
    Please enter your name here

    Latest article

    error: Content is protected !!