ಅಂತಃಕರಣದ ಕವಿ ಡಾ.ಎಚ್. ಎಸ್. ವೆಂಕಟೇಶ ಮೂರ್ತಿ ಅವರನ್ನು ಸಾಹಿತಿಯಾಗಿ ಬಲ್ಲವರಿಗೆ ಅವರೊಲ್ಲಬ್ಬ ಕಲಾವಿದನು ಅಡಗಿದ್ದಾನೆ ಎಂಬುದು ಗೊತ್ತಿಲ್ಲ. ಕೆಲ ದಿನಗಳ ಹಿಂದೆ ಹಸಿರು ರಿಬ್ಬನ್ ಚಿತ್ರದ ಮೂಲಕ ನಿರ್ದೇಶನಕ್ಕೆ ಇಳಿದಿದ್ದ ಕವಿಗಳು ಈಗ ಅಭಿನಯಕ್ಕೆ ಇಳಿದಿದ್ದಾರೆ. ಅವರು ನಟಿಸಿರುವ ಅಮೃತವಾಹಿನಿ ಚಲನಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಮತ್ತೊಬ್ಬ ಸುಪ್ರಸಿದ್ಧ ಕತೆಗಾರ ರಾಘವೇಂದ್ರ ಪಾಟೀಲರು ಬರೆದ ಕಥೆ ಆಧರಿಸಿದ ಚಿತ್ರ ಇದು. ಕೆ. ನರೇಂದ್ರಬಾಬು ನಿರ್ದೇಶಿಸಿದ್ದಾರೆ. ಕವಯತ್ರಿ ಮಾಲಿನಿ ಗುರುಪ್ರಸನ್ನ ಕನ್ನಡಪ್ರೆಸ್.ಕಾಮ್ ಗಾಗಿ ನಡೆಸಿದ ಈ ವಿಶೇಷ ಸಂದರ್ಶನದಲ್ಲಿ ಕವಿ, ನಟನೆಯೊಂದಿಗಿನ ತಮ್ಮ ನಂಟು , ಸಿನಿಮಾ ನಟನೆಯಲ್ಲಿನ ಸವಾಲುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.
ಇಂದು ನೀವು ನಟಿಸಿರುವ ಅಮೃತವಾಹಿನಿ ಚಲನಚಿತ್ರ ಬಿಡುಗಡೆಯಾಗುತ್ತಿದೆ. ಮೊದಲಿಗೆ ಶುಭಾಶಯಗಳು.
ಧನ್ಯವಾದ ಮಾಲಿನಿ.
ಈಗ ಅಭಿನಯ ಕ್ಷೇತ್ರಕ್ಕೂ ಕಾಲಿಟ್ಟಿದ್ದೀರಿ.. ಹೇಗನ್ನಿಸುತ್ತಿದೆ.?
ಬರವಣಿಗೆಯಲ್ಲಿ ಅಭಿನಯವೇ ಇದೆಯಲ್ಲವೇ? ಕಾವ್ಯ, ಕಥೆ ಬರೆಯುವಾಗ ಅನೇಕ ಪಾತ್ರಗಳು ಬರುತ್ತವೆ. ಆ ಪಾತ್ರ ನಾನಾಗದೇ ಬರಹದಲ್ಲಿ ಸಹಜತೆ ಬರುವುದಿಲ್ಲ. ಬುದ್ಧಚರಿತವನ್ನೇ ನೋಡು, ರಾಹುಲನ ಮಾತುಗಳನ್ನು ನಾನು ಬರೆಯಬೇಕಾದರೆ ರಾಹುಲನನ್ನು ನಾನು ಆವಾಹಿಸಿಕೊಳ್ಳಬೇಕು. ಸೀತೆಯಾಗಬೇಕಾದರೆ ಸೀತೆಯ ಹೆಣ್ತನವನ್ನು ನಾನು ಪಡೆಯದಿದ್ದರೆ ಸಹಜತೆ ಬರುವುದಿಲ್ಲ. ಕವಿಯ ಮನಸ್ಸು ಅನೇಕ ಸ್ಥರಗಳಲ್ಲಿ ಸಂಚಾರ ಮಾಡುತ್ತಿರುತ್ತದೆ. ವಿಫುಲ ರೂಪ ಧಾರಿಣಿ ಕವಿಯ ಮನಸ್ಸು ಎಂದು ಕುವೆಂಪು ಹೇಳಿಲ್ಲವೇ. ಹಾಗೆ ಬರವಣಿಗೆ ಎಂಬುದು ಅಂತರಂಗದಲ್ಲಿ ಅಭಿನಯ . ಸಿನಿಮಾ ನಾಟಕ ಎಂಬುದು ಬಹಿರಂಗದಲ್ಲಿ ತೋರಿಸಬೇಕಾದ್ದು.ಕವಿತೆ ಕಷ್ಟ ಏಕೆಂದರೆ ಅದರಲ್ಲಿ ಬರುವ ಎಲ್ಲಾ ಪಾತ್ರಗಳನ್ನೂ ಕವಿ ಅಭಿನಯಿಸಬೇಕು. ಆದರೆ ಇಲ್ಲಿ ತನಗೆ ಸಿಕ್ಕ ಒಂದು ಪಾತ್ರವನ್ನು ಆವಾಹಿಸಿಕೊಂಡರಾಯಿತು. ಸಾಹಿತ್ಯದಲ್ಲೂ , ಸಿನೆಮಾದಲ್ಲೂ ಪರಾನುಕಂಪಿ ಅಥವಾ ಸಹಾನುಭೂತಿ ಅಂದರೆ ನಾನು ನೀನಾಗುವಿಕೆ ಬಹಳ ಮುಖ್ಯ .ನಿನ್ನ ದುಃಖ ನನ್ನದಾಗಿಸಿಕೊಳ್ಳುವುದು, ನಿನ್ನ ಸಮಸ್ಯೆ ನನ್ನದೂ, ನಿನ್ನ ನಗು ನನ್ನದೇ .. ಹೀಗಾಗಿ ಇಷ್ಟು ವರ್ಷ ಬರಹಗಳ ರೂಪದಲ್ಲಿ ಒಳಗೆ ನಡೆಯುತ್ತಿದ್ದ ಅಭಿನಯ ಈಗ ಹೊರಗೆ ಬಂದಿದೆ ಅಷ್ಟೇ .
ನಿಮಗೆ ಹಿಂದೆ ಈ ರಂಗದ ಅನುಭವ ಇತ್ತಾ? ಹಿಂದೆ ನೀವು ಮಲ್ಲಾಡಿಹಳ್ಳಿಯಲ್ಲಿ ಬಂಡವಾಳವಿಲ್ಲದ ಬಡಾಯಿ ಎಂಬ ನಾಟಕದಲ್ಲಿ ಅಭಿನಯಿಸಿದ್ದಿರಿ ಎಂದು ಕೇಳಿ ಬಲ್ಲೆ. ಅದಕ್ಕೂ ಹಿಂದೆ ಏನಾದರೂ?
ಹೂ ಹೂ .. ನಿನ್ನ ತಂದೆ ಚಿದಂಬರ ರಾಯರು ನಿರ್ದೇಶಿಸಿದ್ದ ನಾಟಕ ಅದು. ಅದರಲ್ಲಿ ನಾನೂ ಬಣ್ಣ ಹಚ್ಚಿದ್ದೆ. ಅದಕ್ಕೂ ಹಿಂದೆ ನಾನು ಮಾಧ್ಯಮಿಕ ತರಗತಿಯಲ್ಲಿ ಓದುತ್ತಿದ್ದಾಗ ಸೈಂಧವ ಎಂದೊಂದು ನಾಟಕ ಬರೆದು ನಾನು ಈಶ್ವರಚಂದ್ರ ಅದನ್ನು ನಮ್ಮ ಮನೆಯ ಹಿತ್ತಲಿನಲ್ಲಿ ಪ್ರಯೋಗಿಸಿದ್ದೆವು. ನಮ್ಮ ಅಜ್ಜಿಗಳೇ ಅದಕ್ಕೆ ಪ್ರೇಕ್ಷಕರು. ನಾವಿಬ್ಬರೇ ನಟರು. ಅಲ್ಲೇ ಹೋದಿಗ್ಗೆರೆಯ ಹತ್ತಿರ ಗಂಗೂರು ಎಂಬ ಊರಿನಲ್ಲಿ ಬೊಂಬೆಮೇಳ ಬಹಳ ಪ್ರಸಿದ್ಧಿ. ಅದನ್ನು ನೋಡಲು ಹೋಗುತ್ತಿದ್ದೆ. ಅಲ್ಲಿಂದ ನನಗೆ ಈ ರಂಗದ ಕುರಿತು ಆಸಕ್ತಿ ಮೂಡಲಾರಂಭಿಸಿತು.
ಸಿನಿಮಾ ಬಗ್ಗೆ ?
ನನ್ನ ಪ್ರೌಢಶಾಲಾ ಹಂತದಿಂದ ಈ ಸಿನಿಮಾ ನೋಡುವ ಆಸಕ್ತಿ ವಿಪರೀತ ಹೆಚ್ಚಾಯಿತು.ರಾಜ್ ಕುಮಾರ್ ನನಗೆ ಬಹಳ ಇಷ್ಟದ ನಟ. ಅಶ್ವಥ್ ಕೂಡ ನನಗೆ ಬಹಳ ಇಷ್ಟ .
ನೀವು ನಿರ್ದೇಶನಕ್ಕೂ ಕೈ ಹಾಕಿದಿರಿ..
ಹಾಗೆ ನೋಡಿದರೆ ನಿರ್ದೇಶನವೂ ನನಗೇನು ಹೊಸತಲ್ಲ . ಹಿಂದೆ ಕಾಲೇಜಿನಲ್ಲಿ ಜಿ.ಕೆ. ಗೋವಿಂದರಾಯರು ನಿವೃತ್ತರಾದ ನಂತರ ನನ್ನ ಮೇಲೆ ನಾಟಕಗಳನ್ನು ಆಡಿಸುವ ಜವಾಬ್ದಾರಿ ಬಿದ್ದಿತ್ತು. .ಆಗ ಮಕ್ಕಳಿಗೆ ನಾನೇ ಅಭಿನಯಿಸಿ ತೋರಿಸಬೇಕಿತ್ತು ಕೂಡಾ. ಎಷ್ಟೋ ಬಾರಿ ನಾಟಕಗಳನ್ನು ನಾನೇ ಬರೆದು ಆಡಿಸುತ್ತಿದ್ದೆ.
ನಿಮ್ಮ ಅನೇಕ ನಾಟಕಗಳು ಹೀಗೆ ಹುಟ್ಟಿದ್ದಿರಬೇಕು ಅಲ್ಲವೇ?
ಹೌದು. ನಾನು ಅನೇಕ ಏಕಾಂಕಗಳನ್ನು ಮಕ್ಕಳಿಗಾಗಿಯೇ ಬರೆದೆ. ನೀವು ಪೂರ್ಣ ಪ್ರಮಾಣದ ನಾಟಕಗಳನ್ನು ಬರೆಯಬೇಕು ಎಂದು ಶ್ರೀನಿವಾಸ ಪ್ರಭು ಒತ್ತಾಯ ಮಾಡಿದರು. ಆಗ ನಾನು ಹೆಜ್ಜೆಗಳು ನಾಟಕ ಬರೆದೆ . ನಾಟಕ ಬರೆಯುವಾಗ ನಾವು ಅಭಿನಯಿಸಿಕೊಂಡೆ ಬರೆಯಬೇಕಾಗುತ್ತದೆ. ಅಂದರೆ ಅಭಿನಯವನ್ನು ನಾವು ಪ್ರೇಕ್ಷಕರೆದುರು ಮಾಡದೇ ಇರಬಹುದು. ನಮ್ಮೊಳಗಿನ ಕಲಾವಿದನನ್ನು ತೃಪ್ತಿ ಪಡಿಸಬೇಕಾಗುತ್ತದೆ. ಹೀಗೆ ಕಲಾವಿದ ಹೊರಗೆಲ್ಲೋ ಇರುವುದಿಲ್ಲ. ಒಳಗಿರುವವನನ್ನು ಹೊರಗೆ ತಂದು ನಿಲ್ಲಿಸಬೇಕಷ್ಟೆ .
ಈಗ ನೀವು ಅಮೃತವಾಹಿನಿ ಚಲನಚಿತ್ರದಲ್ಲಿ ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದೀರಿ . ನಿಮಗೆ ಕಷ್ಟವೆನ್ನಿಸಿತಾ ನಿರ್ವಹಣೆ. ? ನಿಮಗೆ ಸವಾಲು ಎನ್ನಿಸಿದ್ದು ಯಾವಾಗ?
ನನಗೆ ಅಭಿನಯ ಕಷ್ಟ ಎನ್ನಿಸಲೇ ಇಲ್ಲ. ಸವಾಲು ಎನ್ನಿಸಿದ್ದು ಟೆಕ್ನಿಕಲ್ ವಿಷಯಗಳು ಅಷ್ಟೇ. ನಾನು ಪಾಠ ಮಾಡುವಾಗ ರನ್ನ, ಕುಮಾರವ್ಯಾಸ ಪದ್ಯಗಳನ್ನು ವಿವರಿಸುವಾಗ ಅಭಿನಯಿಸಿಯೇ ಪಾಠ ಮಾಡುತ್ತಿದ್ದೆ. ಅದು ಧ್ವನಿಯಲ್ಲಿನ ಅಭಿನಯ . ಈಗ ನನಗೆ ಆಂಗಿಕ ಅಭಿನಯ ಮಾಡಬೇಕಾಗಿ ಬಂತು. ಅಭಿನಯಕ್ಕೆ ದೇಹವನ್ನು ಹೇಗೆ ಬಳಸಬೇಕು ಎಂಬುದು ಸವಾಲಾಗಿತ್ತು. ನನಗೆ ಅದೃಷ್ಟವಶಾತ್ ವಯಸ್ಸಾದವನ ಪಾತ್ರವೇ ಸಿಕ್ಕಿದ್ದರಿಂದ ಮುಪ್ಪಿನ ಅಭಿನಯವನ್ನು ಮುಪ್ಪೇ ಕಲಿಸಿಕೊಟ್ಟಿತು. ನಾನು ಸುಮ್ಮನೆ ನನ್ನ ಪಾಡಿಗೆ ಇದ್ದರೂ ಪಾತ್ರವೇ ನಾನಾಗಿಬಿಡುತ್ತಿದ್ದೆ. ತರುಣನಿಗೆ ವಯಸ್ಸಾದವನ ಪಾತ್ರಕ್ಕೆ ದೇಹ ಒಗ್ಗಿಸಿಕೊಳ್ಳುವುದು ಕಷ್ಟ. ನನಗೆ ಅದು ಸಮಸ್ಯೆ ಆಗಲಿಲ್ಲ.
ಟೆಕ್ನಿಕಲ್ ತೊಂದರೆ ಅಂದರೆ?
ನಾಟಕದಲ್ಲಿ ಮಾಡುವಷ್ಟು ಸುಲಭ ಅಲ್ಲ ಚಿತ್ರದಲ್ಲಿ ಮಾಡುವುದು . ಅಭಿನಯಿಸುವಾಗ ಕ್ಯಾಮೆರಾದಿಂದ ಅಂತರ ಕಾಪಾಡಿಕೊಳ್ಳುವುದು ಮುಂತಾದವು. ತಾಂತ್ರಿಕವಾದ ತೊಡಕುಗಳನ್ನು ನಿವಾರಿಸಿಕೊಳ್ಳುವುದೇ ಕಷ್ಟ. ಮೂರಡಿಗಿಂತ ಮುಂದೆ ಬರಬೇಡಿ ಎನ್ನುತ್ತಾರೆ . ನನಗೆ ಪಾತ್ರದ ಎಕ್ಸ್ಪ್ರೆಶನ್ ನೆನಪಿಡಬೇಕು, ಮಾತುಗಳನ್ನು ನೆನಪಿಡಬೇಕು, ಮೂವ್ಮೆಂಟ್ ನೆನಪಿಡಬೇಕು . ಮೊದಲೆರಡನ್ನು ನಿಭಾಯಿಸುವುದು ಸುಲಭ ಮೂರನೆಯದೇ ಕೊಂಚ ಕಷ್ಟವಾಗಿದ್ದು.
ಅಂತರ ಬಿಟ್ಟು ಮತ್ತಿನ್ನೇನು ಸವಾಲು?
ನಾಟಕದಲ್ಲಿ ಎದುರಿಗೆ ಒಬ್ಬ ಇದ್ದೇ ಇರುತ್ತಾನೆ. ಇಲ್ಲಿ ಕಲ್ಪಿಸಿಕೊಂಡು ಮಾತನಾಡಬೇಕು. ಆ ತನ್ಮಯತೆ ಬರಿಸಿಕೊಳ್ಳಬೇಕು. ಹೊಸ ರೀತಿಯ ಕಲೆ ಇದು. ಇದಕ್ಕೆ ಅಡಾಪ್ಟ್ ಆಗಬೇಕಿತ್ತು. ಕ್ಯಾಮೆರಾ ಕಡೆ ನೋಡುವಂತಿಲ್ಲ. ಏನೋ ಮಾತನಾಡುವಾಗ ದೃಷ್ಟಿ ಬದಲಾಯಿಸುವಂತಿಲ್ಲ..
ನೀವು ನಿರ್ದೇಶಕರಾಗಿ ಕೆಲಸ ಮಾಡಿದವರು. ಅದು ನಿಮಗೆಷ್ಟು ಸಹಕಾರಿಯಾಯಿತು?
ಬಹಳಷ್ಟು. ಅದರಿಂದಲೇ ನಾನು ಈ ಧೈರ್ಯ ಮಾಡಿದ್ದು .
ನಿರ್ದೇಶಕನಾಗಿ ಹೇಳುವುದಕ್ಕೂ ನಟನಾಗಿ ನಿರ್ವಹಿಸುವುದಕ್ಕೂ ಅನೇಕ ವ್ಯತ್ಯಾಸ ಇದೆ ಅಲ್ಲವೇ ?
ಖಂಡಿತ. ನಿರ್ದೇಶಕ ತನ್ನ ನಿರೀಕ್ಷೆಗಳನ್ನು ನಟನ ಮುಂದಿಡುತ್ತಾನೆ. ಅದನ್ನು ಸಾಕಾರಗೊಳಿಸುವುದು ನಟ. ಆ ನಿರೀಕ್ಷೆಯನ್ನು ಮುಟ್ಟುವುದು ನಟನ ಸವಾಲು.
ಈ ಪಾತ್ರ ಹೇಗಿತ್ತು? ನಿಮಗೆ ತೃಪ್ತಿ ಕೊಟ್ಟಿತಾ?
ತುಂಬಾ ತೃಪ್ತಿ ಕೊಟ್ಟಿದೆ. ನನ್ನ ಸ್ವಭಾವಕ್ಕೆ ಹೊಂದಿಕೊಂಡಿದ್ದರಿಂದ ನನಗೆ ತುಂಬಾ ಕಷ್ಟ ಆಗಲಿಲ್ಲ. ಹೊಸಹೊಸ ಅನುಭವಗಳು ದಕ್ಕಿವೆ. ಡಬ್ಬಿಂಗ್ ಅನುಭವ ಬಹಳ ಕುತೂಹಲಕಾರಿಯಾಗಿತ್ತು, ಅಷ್ಟೇ ಕಷ್ಟ ಕೂಡಾ. ಶೂನ್ಯದಲ್ಲಿ ಆಕೃತಿ ನಿರ್ಮಾಣ ಮಾಡಿದ ಹಾಗೆ ಸಿನಿಮಾದಲ್ಲಿ ನಟನೆ. .
ನಿಮ್ಮ ಮುಂದಿನ ಪಯಣದ ಬಗ್ಗೆ? ಮತ್ತೆ ನೀವು ಚಲನಚಿತ್ರಗಳಲ್ಲಿ ಪಾತ್ರ ನಿರ್ವಹಿಸುತ್ತೀರಾ? ಈ ಪಯಣ ಮುಂದುವರಿಯುತ್ತದೆಯೇ?
ಖಂಡಿತಾ ಇಲ್ಲ. ನನಗೆ ಅಭಿನಯಿಸುವ ಯಾವುದೇ ಇರಾದೆ ಇಲ್ಲ. ಆದರೆ ಮತ್ತೊಂದು ಸಿನಿಮಾ ಮಾಡಬೇಕು ಎಂಬ ಆಸೆ ಖಂಡಿತವಾಗಿಯೂ ಇದೆ.. ಏಕೆಂದರೆ ಅದೊಂದು ವಂಡರ್ಫುಲ್ ಎಕ್ಸ್ಪೀರಿಯೆನ್ಸ್. ಬೇರೆಯವರಿಂದ ಅಭಿನಯ ತೆಗೆಸುವುದಕ್ಕೂ ನಾನೇ ಅಭಿನಯ ಮಾಡುವುದಕ್ಕೂ ವ್ಯತ್ಯಾಸ ಇದೆ. ಇನ್ನು ಅಭಿನಯ ಕಷ್ಟ.
ಚಿತ್ರಗಳು: ಮನು
ಚಲನಚಿತ್ರ ಖಂಡಿತ ಯಶಸ್ವಿ ಆಗುವುದರಲ್ಲಿ ಸಂದೇಹ ವಿಲ್ಲ. ಸಂಭಾಷಣೆ, ಚಿತ್ರಕಥೆ, ಹಾಡುಗಳು, ನಿರ್ದೇಶನ ಈ ಎಲ್ಲಾ ರಂಗಗಳಲ್ಲಿ ಯಶಸ್ವಿಯಾದ ಎಚ್ಚೆಸ್ವಿ ಯವರು ಅಭಿನಯದಲ್ಲಿ ಖಂಡಿತ ಪ್ರೇಕ್ಷಕರನ್ನು ತೃಪ್ತಿ ಪಡಿಸುವುದರಲ್ಲಿ ಸಂಶಯವಿಲ್ಲ. ಶುಭ ಹಾರೈಕೆಗಳು.
Beautiful interview Malini Ma’am.
Apt questions & lovely replies.
Nice read.
Hats off to Dr HSV sir for his multi talented self & best wishes for his new avatar as an actor 🤗👍🏼🙏❤️
ಹೆ ಚ್.ಎಸ್.ವಿ.ಅವರ ಬಹುಮುಖ ಪ್ರತಿಭೆ ಪರಿಚಯ ಆಯ್ತು. ನಟನೆಯಲ್ಲು ಯಶಸ್ವಿ ಪಡೆ ಯಲಿ ಎಂದು ಆಶಿಸಿ ಎದುರು ನೋಡುವೆವು.👌👍🙏
ಸುಂದರ ಸಂದರ್ಶನ ಮಾಲಿನಿ.ಪ್ರಶ್ನೆಗಳು ಬಹಳ ಆಪ್ಟ್ ಆಗಿದ್ದವು.
ಎಚ್ ಎಸ್ ವಿ ಸರ್ ..
ನಿಮ್ಮನ್ನು ನಟರಾಗಿ ನೋಡುವುದು ಇನ್ನೂ ಚಂದ.ನಿಮಗೆ ಅಭಿನಯಿಸುವುದು ಕಷ್ಟವಾಗಿರಲಾರದು ಬಹುಶಃ. ಅದನ್ನೇ ಹೇಳಿದ್ದೀರಾ ಕೂಡ.
ಅಕ್ಷರದ ಮೂಲಕ ಎಷ್ಟೊಂದು ಪಾತ್ರಗಳನ್ನು ಆವಾಹಿಸಿಕೊಂಡಿದ್ದೀರಾ ನೀವು.ಅದೂ ಎಷ್ಟು ಸಹಜವಾಗಿ.
ಸಿನೆಮಾ ಶತದಿನೋತ್ಸವ ಕಾಣಲಿ.
ನಿಮಗೂ ಮಾಲಿನಿಗೂ ಅಭಿನಂದನೆಗಳು.
ಡಾ. ಎಚ್ ಎಸ್ ವಿ ನನಗೆ ಮಾವ ಆಗಬೇಕು. ಮಾವ ನಿಮಗೆ ಅಭಿನಯ ಕಷ್ಟ ಅಂತ ಆಗೋದೇ ಇಲ್ಲ.ಮಾವನ ಬಗ್ಗೆ ಗೊತ್ತಿರುವ ಮಾಲಿನಿಗೆ ಪ್ರಶ್ನೆ ಕೇಳುವುದು ಕಷ್ಟವೇನಲ್ಲ. ಮಾವನೂ ಅದಕ್ಕೆ ಸೂಕ್ತ ಉತ್ತರ ನೀಡಿದ್ದಾರೆ. ತುಂಬಾ ಚೆನ್ನಾಗಿದೆ ಕಣೇ ಮಾವನ ಜೊತೆ ಸಂದರ್ಶನ ಅನ್ನೋದಕ್ಕಿಂತ ನಿನ್ನ ಅವರ ಮಾತು ಕಥೆ. ಖಂಡಿತಾ ನಾನಂತೂ ಸಿನಿಮಾ ನೋಡುವೆ.
ಎಲ್ಲರಿಗೂ ಧನ್ಯವಾದಗಳು.