23 C
Karnataka
Saturday, September 21, 2024

    ಮ್ಯೂಚುಯಲ್‌ಫಂಡ್‌: ಉಳಿತಾಯದ ಸುಲಭ ಸೂತ್ರ -ನಿಯಂತ್ರಣವಿದ್ದರೆ ಮಾತ್ರ

    Must read

    ಈಗಿನ ಸಂಕೀರ್ಣಮಯ ಜಗತ್ತಿನಲ್ಲಿ ಎಲ್ಲವೂ ತೇಲಾಡುವ ಪರಿಸ್ಥಿತಿ ಇರುವಾಗ ಪರಂಪರಾಯುತವಾಗಿ ಮುಂದುವರೆಯುತ್ತಿರುವ ಕೆಲವು ಭಾವನಾತ್ಮಕ ಚಟುವಟಿಕೆಗಳಿಂದ ದೂರವಾಗುವುದೇ ಸವಾಲಾದಂತಿದೆ. 

    ಬ್ಯಾಂಕ್‌ ಬಡ್ಡಿದರ, ಪೆಟ್ರೋಲ್‌, ಬಸ್‌ ಪ್ರಯಾಣದ ದರ, ಷೇರುಪೇಟೆಗಳ ಚಲನೆ ಎಲ್ಲವೂ ತೇಲಾಡುವ ಪರಿಸ್ಥಿತಿಯಲ್ಲಿರುವಾಗ ನಮ್ಮ ನಿರ್ಧಾರಗಳನ್ನು ಸಹ ಹೆಚ್ಚು ತೇಲಾಡುವಂತೆ ಮಾಡುತ್ತಿದೆ. ಈ ಸಮಯದಲ್ಲಿ ದೀರ್ಘಕಾಲೀನ ಯೋಜನೆ ಎಂದು ಹೂಡಿಕೆ ಮಾಡಿದರೂ, ಅನಿರೀಕ್ಷಿತವಾಗಿ ತೇಲಿಬಂದ ಅವಕಾಶಗಳನ್ನು ಬಳಸಿಕೊಳ್ಳುವುದು ಹೂಡಿಕೆಯ ಯಶಸ್ಸಿನ ಗುಟ್ಟು.ಕರಗುತ್ತಿರುವ ಬ್ಯಾಂಕ್‌ ಬಡ್ಡಿದರ ಉಂಟುಮಾಡಿದೆ ಉಳಿತಾಯ ಯೋಜನೆಗಳ ಬರ.   ಮ್ಯೂಚುಯಲ್‌ ಫಂಡ್‌ ಒದಗಿಸಿವೆ ವೈವಿಧ್ಯಮಯ ಯೋಜನೆಗಳು. ಆದರೆ ನಮ್ಮ ಅನುಕೂಲಕ್ಕೆ ತಕ್ಕಂತಹ ಯೋಜನೆ ಆಯ್ಕೆ ನಿರ್ವಹಣೆ ನಮ್ಮದಾಗಿದೆ. ಆಯ್ಕೆ,  ನಿರ್ವಹಣೆ ಸರಿಯಾಗಿದ್ದರೆ ಉತ್ತಮ ಫಲಾನುಭವಿಗಳಾಗಬಹುದು.

    ಒಂದುಕಾಲದಲ್ಲಿಬೆಂಗಳೂರಿನಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅಲ್ಪ ಸಮಯದಲ್ಲೇ ತಲುಪಬಹುದಿತ್ತು.  ಹೊರ ಊರುಗಳಿಗೆ ಹೋಗಲು ದೀರ್ಘ ಸಮಯಬೇಕಾಗುತ್ತಿತ್ತು.ಆದರೆ ಈಗ ಪರಿಸ್ಥಿತಿ ತದ್ವಿರುದ್ಧ. ಇಂದು ಮೂರೂವರೆ ಗಂಟೆಯೊಳಗೆ ದಾವಣಗೆರೆ ತಲುಪಬಹುದು. ಆದರೆ ಪೀಕ್ ಅವರ್ ನಲ್ಲಿ ಜಯನಗರದಿಂದ ದೇವನಹಳ್ಳಿ ಏರ್ ಪೋರ್ಟ್ ತಲುಪುವುದೇ ಒಮ್ಮೊಮ್ಮೆ ದೀರ್ಘಾವಧಿ ಆಗಿಬಿಡುತ್ತದೆ.

    ಆಗಿನ ದಿನಗಳಲ್ಲಿ ಸುದ್ಧಿ ಸಮಾಚಾರಗಳು ಈಗಿನಷ್ಟು ತ್ವರಿತವಾಗಿ ಜನರನ್ನು ತಲುಪುತ್ತಿರಲಿಲ್ಲ.  ಆಗ ಬೆಳವಣಿಗೆಗಳು, ಘಟನೆಗಳು ಮುಂತಾದವುಗಳನ್ನು ತಲುಪಿಸಲು ಮುದ್ರಣಮಾಧ್ಯಮವನ್ನೇ ಅವಲಂಬಿಸಬೇಕಿತ್ತು.  ಈಗಿನಂತೆ ದೂರವಾಣಿ, ಸನಿಹವಾಣಿ, ಮಿಂಚಂಚೆ, ಸಾಮಾಜಿಕಜಾಲ ತಾಣಗಳು ಇರಲಿಲ್ಲ.   ಹಾಗಾಗಿ ಎಲ್ಲವೂ ಮಂದಗತಿಯಲ್ಲಿರುತ್ತಿದ್ದ ಕಾರಣ ದೀರ್ಘಾವಧಿ ಎಂಬುದಕ್ಕೆ ಪ್ರಾಶಸ್ತ್ಯವಿತ್ತು.

    ಈಗ ವೇಗವಾದ ಬದಲಾವಣೆಗಳ ಕಾರಣ ಜೀವನ ಶೈಲಿಗಳೂ ಸಹ ಹೆಚ್ಚಿನ ಬದಲಾವಣೆಗಳನ್ನು ಕಂಡು ವಾಣಿಜ್ಯೀಕರಣದತ್ತ ತಿರುಗಿವೆ.  ವಿಶೇಷವಾಗಿ ಭಾರತವು ಜಾಗತೀಕರಣಕ್ಕೆ ತೆರೆದುಕೊಂಡಾಗ ಈ ವ್ಯವಹಾರಿಕ ಚಿಂತನೆಗಳು ಹೆಚ್ಚು ತಾಂಡವವಾಡುತ್ತಿವೆ.  ಇದರ ಪ್ರಭಾವವೇ ನಗರದಲ್ಲೇ ಓಡಾಡಲು ಹೆಚ್ಚು ಸಮಯ ಬೇಕಾಗುತ್ತದೆ ಆದರೆ ಹೊರ ಊರಿಗೆ ಹೋಗಲು ಮೊದಲಿಗಿಂತ ಕಡಿಮ ಸಮಯ ಸಾಕಾಗುತ್ತದೆ.

    ಮ್ಯೂಚುಯಲ್‌ ಫಂಡ್‌ ಗಳೆಂದರೇನು?

    ಲವಾರು ಹೂಡಿಕೆದಾರರು ಒಂದೇ ಗುರಿಯೊಂದಿಗೆ  ಹಣವನ್ನು ಸೇರಿಸಿ,  ಕಾರ್ಪೊರೇಟ್‌ ಶೈಲಿಯಲ್ಲಿ,  ಹೂಡಿಕೆ ಅನುಪಾತಕ್ಕೆ ತಕ್ಕಂತೆ ರೂ.10 ರ ಮುಖಬೆಲೆಯಲ್ಲಿ ಘಟಕಗಳನ್ನು (UNITS) ಪಡೆಯುವರು.  ಈ ರೀತಿ ಸಂಗ್ರಹಿಸಿದ ಹಣವನ್ನು ಷೇರುಗಳಲ್ಲಿ, ಬಾಂಡ್‌ ಗಳಲ್ಲಿ,  ಮತ್ತಿತರ ಸೆಕ್ಯುರಿಟೀಸ್‌ ಗಳಲ್ಲಿ ತೊಡಗಿಸಿ ಅದನ್ನು ನಿರ್ವಹಿಸಲು ನಿಧಿ ನಿರ್ವಾಹಕರನ್ನು ನೇಮಿಸಲಾಗುವುದು.  ಈ ಹೂಡಿಕೆಯಿಂದ ಬಂದ ಲಾಭವನ್ನು  ಘಟಕಗಳನ್ನು ಹೊಂದಿರುವ ಹೂಡಿಕೆದಾರರಿಗೆ ವೆಚ್ಚಗಳ ನಂತರದ ಹಣವನ್ನು ಲಾಭಾಂಶವನ್ನಾಗಿ ವಿತರಿಸಲಾಗುವುದು. ‌ ತಮ್ಮ ಹೂಡಿಕೆಯನ್ನು ನಿರ್ವಹಿಸಲು ಸಮಯವಿಲ್ಲದಿದ್ದರೆ, ಅರಿವಿಲ್ಲದಿದ್ದರೆ,ಅಂತಹವರ ಪರವಾಗಿ ಹೂಡಿಕೆ ನಿರ್ವಹಿಸಲು ಹೊರಗುತ್ತಿಗೆಯ ರೀತಿ ನಿಯಂತ್ರಿತ,  ವೃತ್ತಿಪರ ಅನಭವಸ್ಥರ ಸಂಸ್ಥೆಗೆ ನೀಡಬಹುದು. ಆ ನಿಯಂತ್ರಿತ ಸಂಸ್ಥೆಯೇ ಮ್ಯೂಚುಯಲ್‌ ಫಂಡ್‌ ಹೌಸ್.  ಆದರೆ ಆ ನಿಯಂತ್ರಿತ ಸಂಸ್ಥೆ ನಿರ್ವಹಿಸುವ ನಿಮ್ಮ ಹೂಡಿಕೆಗೆ ಗ್ಯಾರಂಟಿ ಇರುವುದಿಲ್ಲ.   ಆದರೆ ಪೇಟೆಯ ಏರಿಳಿತಗಳ ಲಾಭ ಪಡೆಯಲು ಹೆಚ್ಚಿನ ಯೋಜನೆಗಳು ಸಮಯಾಧಾರಿತವಾಗಿರದೆ, ಬೇಕಾದಾಗ ನಗದೀಕರಣಗೊಳಿಸಿ ಕೊಳ್ಳಬಹುದಾಗಿದೆ.

    ಮ್ಯೂಚುಯಲ್‌ ಫಂಡ್‌ ಚಟುವಟಿಕೆಯ ಚಕ್ರ:

    ಈ ರೀತಿ ಗಳಿಸಿದ ಲಾಭವನ್ನು ಬೇಕಾದರೆ ಪುನರ್‌  ಹೂಡಿಕೆ ಮಾಡಲೂ ಅವಕಾಶವಿರುತ್ತದೆ.  ಒಂದು ಘಟಕದ ಆಂತರಿಕ ಸಾಧನೆಯನ್ನುಮಾಪನ ಮಾಡಲು  ನೆಟ್‌ ಅಸ್ಸೆಟ್‌ ವ್ಯಾಲ್ಯು (NAV) ಎನ್ನುವರು.  ರೂ.10ರ ಯುನಿಟ್‌ ಗೆ  ಆಂತರಿಕ ಸಾಧನೆಯಾಧರಿಸಿ ಮೌಲ್ಯ ಕಟ್ಟುವರು.  ಆ ಯೋಜನೆಯಡಿ ಹೂಡಿಕೆ ಮಾಡಿದ ಸ್ವತ್ತುಗಳ ಮಾರ್ಕೆಟ್‌ ಬೆಲೆಯನ್ನು ಘಟಕಗಳಿಂದ ಭಾಗಿಸಿದಾಗ ಬರುವ ಒಂದು ಘಟಕದ ಬೆಲೆಯೇ ಎನ್‌ ಎ ವಿ ಯಾಗಿರುತ್ತದೆ.  ಒಂದು ಘಟಕದ ಎನ್‌ ಎ ವಿ ಯು ರೂ.10ಕ್ಕಿಂತ ಹೆಚ್ಚಾದರೆ ಅದು ಲಾಭದಲ್ಲಿರುವ ಹೂಡಿಕೆ ಎಂದು, ಒಂದು ವೇಳೆ  ಹೂಡಿಕೆಯು ಹಾನಿಗೊಳಗಾದರೆ ಅದರ ಎನ್‌ ಎ ವಿ ಯೂ ಸಹ ಮುಖಬೆಲೆಯೊಳಗೆ ಕುಸಿಯುತ್ತದೆ. 

    ಮ್ಯುಚುಯಲ್ ಫಂಡ್‌ ಗಳನ್ನು  ನಿರಂತರವಾಗಿ  ಖರೀದಿಸಲು ಅವಕಾಶವಿದ್ದರೆ ಅದು ಓಪನ್‌ ಎಂಡೆಡ್‌ ಫಂಡ್‌ ಎಂದು ಮತ್ತು ನಿಗದಿತ ಅವಧಿಯವರೆಗೂ ಮಾತ್ರ ಮಾರಾಟ ಮಾಡುವುದಾದರೆ ಅದು ಕ್ಲೋಸ್ಡ್‌ ಎಂಡ್‌ ಫಂಡ್‌ ಎನ್ನುವರು.  ಫಂಡ್ ನ ಘಟಕಗಳನ್ನು ಆಯಾ ಫಂಡ್‌ ಗಳು ಹಿಂದಿರುಗಿಸುವಾಗ (redemption)  ಅಂದಿನ ಎನ್‌ ಎ ವಿ ಆಧರಿಸಿ ಹಣ ನೀಡುತ್ತವೆ.  ಕೆಲವು ಯೋಜನೆಗಳು ಸ್ಟಾಕ್‌ ಎಕ್ಷ್ ಚೇಂಜ್‌ ಗಳಲ್ಲಿಯೂ ವಹಿವಾಟಿಗೆ ನೋಂದಾಯಿಸಿ ಕೊಂಡಿರುತ್ತವೆ. ಅವುಗಳನ್ನು ಎಕ್ಸ್‌ ಚೇಂಜ್‌ ಟ್ರೇಡೆಡ್‌ ಫಂಡ್‌ ಎನ್ನುವರು.

    ಮ್ಯೂಚುಯಲ್‌ ಫಂಡ್‌ ಗಳಲ್ಲಿ ಹೂಡಿಕೆ ಹೇಗೆ ಲಾಭದಾಯಕ:

    *ಈ ಫಂಡ್‌ ಗಳು ನಿರ್ವಹಿಸುವ ನಿಧಿಯ ಗಾತ್ರ ಅತಿ ಹೆಚ್ಚಾಗಿರುವುದರಿಂದ,  ವಹಿವಾಟಿನ ವೆಚ್ಚವು ಕಡಿಮೆಯಾಗಿರುತ್ತದೆ.  ಅಲ್ಲದೆ ಆ ನಿಧಿಯನ್ನು ವೈವಿಧ್ಯಮಯ ಯೋಜನಗಳಲ್ಲಿ ತೊಡಗಿಸಲು ಅನುಕೂಲವಾಗುವುದರಿಂದ  ಅಪಾಯದ ಪ್ರಮಾಣ ಕಡಿಮೆಯಾಗಿರುತ್ತದೆ. 

    * ಈ ಫಂಡ್‌ ಗಳನ್ನು ನಿರ್ವಹಿಸುವವರು ವೃತ್ತಿಪರ ನೈಪುಣ್ಯತೆಯುಳ್ಳವರಾದ್ದರಿಂದ ಉತ್ತಮ ಸಾಧನೆ ತೋರಬಹುದು.

    * ಆವಶ್ಯಕತೆ ಇದ್ದಾಗ, ಬೇಕೆನಿಸಿದಾಗ ಮ್ಯುಚುಯಲ್‌ ಫಂಡ್‌ ಘಟಕಗಳನ್ನು, ತೆರಿಗೆ ರಿಯಾಯಿತಿ ಯೋಜನೆಗಳು, ಕ್ಲೋಸ್ಡ್‌ ಎಂಡ್‌ ಯೋಜನೆಗಳನ್ನು ಹೊರತುಪಡಿಸಿ, ಎನ್‌ ಎ ವಿ ಆಧಾರಿತ ಬೆಲೆಯಲ್ಲಿ ಹಿಂದಿರುಗಿ ಹಣ ಪಡೆಯಬಹುದು.

    * ನಿಯಂತ್ರಿತ ವ್ಯವಸ್ಥೆಯಾದ್ದರಿಂದ ಸುರಕ್ಷಿತ.  ಆದರೆ ಹೂಡಿಕೆಗೆ ಗ್ಯಾರಂಟಿ ಎಂಬುದಿಲ್ಲ.

    ಮ್ಯೂಚುಯಲ್‌ಫಂಡ್‌ಗಳ ವಿಧಗಳು:

    ಫಂಡ್‌ ಗಳಲ್ಲಿ ಅವುಗಳು ವಿನಿಯೋಗಿಸುವ ಶೈಲಿಯಾಧರಿಸಿ  ವೃದ್ಧಿ (ಗ್ರೋಥ್) ಯೋಜನೆ,  ಆದಾಯ ತರುವ ಯೋಜನೆ, ಸಮತೋಲನಾ ಯೋಜನೆ,  ವಿತ್ತೀಯ ಪೇಟೆಗಳ ಯೋಜನೆ, ತೆರಿಗೆ ರಿಯಾಯಿತಿ ಯೋಜನೆ, ಸೂಚ್ಯಂಕಗಳಾಧರಿತ (Index)  ಯೋಜನೆ,  ವಿನಿಮಯ ಕೇಂದ್ರಗಳಲ್ಲಿ ವಹಿವಾಟಾಗುವ ನಿಧಿ (ETF),   ಅಲ್ಲದೆ  ಮಿಡ್‌ ಕ್ಯಾಪ್‌, ಲಾರ್ಜ್‌ ಕ್ಯಾಪ್‌, ಸ್ಮಾಲ್‌ ಕ್ಯಾಪ್‌,  ವಿವಿಧ ವಲಯಾಧರಿತ ಅಂದರೆ ಫಾರ್ಮ , ಐಟಿ, ಬ್ಯಾಂಕಿಂಗ್‌,  ಸಾರ್ವಜನಿಕ ವಲಯ ಕಂಪನಿಗಳ ನಿಧಿ,   ಇನ್ಪ್ರಾ, ರಿಯಾಲ್ಟಿ,  ಎಫ್‌ ಎಂ ಸಿ ಜಿ,  ಅವಕಾಶಗಳ ನಿಧಿ    ಮುಂತಾದ  ವಲಯಾಧಾರಿತ  ಈಕ್ವಿಟಿ ಷೇರುಗಳಲ್ಲಿ ಹೂಡಿಕೆ ಮಾಡುವ  ವಿಧಗಳಾಗಿ ವಿಂಗಡಿಸಲಾಗಿದೆ.   ಆದ್ದರಿಂದ ಮ್ಯೂಚುಯಲ್‌ ಫಂಡ್‌ಗಳಲ್ಲಿ ಹೂಡಿಕೆಗೆ ಮುನ್ನ ಯಾವ ವಲಯದ ನಿಧಿಗಳಲ್ಲಿ ಹೂಡಿಕೆ ಮಾಡುತ್ತಿದ್ದೇವೆ ಎಂಬುದನ್ನು ತಿಳಿದು  ನಿರ್ಧರಿಸಬೇಕು.

    ಎಸ್‌ ಐ ಪಿ ಹೂಡಿಕೆ:

    ಎಸ್‌ ಐ ಪಿ ಎಂದರೆ ಸಿಸ್ಟಮೆಟಿಕ್‌ ಇನ್ವೆಸ್ಟ್ಮೆಂಟ್‌ ಪ್ಲಾನ್‌.   ನಿಯತಕಾಲಿಕವಾಗಿ  ಹೂಡಿಕೆ ಮಾಡಲು ಅವಕಾಶ ಒದಗಿಸುವ ವಿಧವಾಗಿದೆ.   ಸಾಮಾನ್ಯವಾಗಿ ಈ ಯೋಜನೆಯಲ್ಲಿ ಮಾಸಿಕ ಕಂತುಗಳಲ್ಲಿ ಹೂಡಿಕೆ ಮಾಡುವುದರಿಂದ  ಪೇಟೆಗಳ ಏರಿಳಿತಗಳನ್ನಾಧರಿಸಿದ ಎನ್‌ ಎ ವಿ ಗಳನ್ನು ಸರಾಸರಿಯಾಗಿಸುವ ಕಾರಣ ಇದು ಸಮತೋಲನಾತ್ಮಕ ವಿಧವೆನಿಸುತ್ತದೆ.  ಈ ವಿಧದಲ್ಲಿ ಮಾಡಿದ ಹೂಡಿಕೆಯನ್ನು ಭಾಗಶ: ಅಥವಾ ಪೂರ್ಣವಾಗಿ ಹಿಂಪಡೆಯಲು ಸಾಧ್ಯವಿದೆ.   ಮಾಸಿಕ ಕಂತುಗಳನ್ನು ಎಲೆಕ್ಟ್ರಾನಿಕ್‌  ಅಥವಾ ಪೋಸ್ಟ್‌ ಡೇಟೆಡ್ ಚೆಕ್ಕುಗಳ ಮೂಲಕವೂ  ಪಾವತಿ ಮಾಡಬಹುದು.  ಆದರೆ ಒಂದು ಮುಖ್ಯವಾದ ಅಂಶವನ್ನು ಗಮನದಲ್ಲಿರಿಸಬೇಕಾದುದೇನೆಂದರೆ ಇಲ್ಲಿನ ಹೂಡಿಕೆಯಾದಿಯಾಗಿ ಯಾವ ಮ್ಯೂಚುಯಲ್‌ ಫಂಡ್ ಯೋಜನೆಗಳಲ್ಲೂ‌,  ಕ್ಯಾಪಿಟಲ್‌ ಪ್ರೊಟೆಕ್ಷನ್‌ ಫಂಡ್‌ ಸೇರಿ,  ಗ್ಯಾರಂಟಿ ಎಂಬುದಿಲ್ಲ.  ಎಲ್ಲವೂ ಪೇಟೆಯ ಏರಿಳಿತಗಳಿಗನುಗುಣವಾಗಿರುತ್ತದೆ.  ಹೆಚ್ಚಿನ ಯೋಜೆನಗಳು ಈಕ್ವಿಟಿ ಷೇರುಗಳ ಮೇಲೆ ಹೂಡಿಕೆ ಮಾಡುವುದರಿಂದ ಷೇರುಪೇಟೆಯ ಏರಿಳಿತಗಳಿಗನುಗುಣವಾಗಿ ಎನ್‌ ಎ ವಿ ಪ್ರದರ್ಶಿತವಾಗುತ್ತದೆ.  ಇದುವರೆಗೂ ಡೆಟ್‌ (DEBT) ಫಂಡ್‌ ಗಳು ಸುರಕ್ಷಿತವೆಂಬ ಭಾವನೆ ಇತ್ತು.  ಆದರೆ ಅವೂ ಸಹ ಇತ್ತೀಚಿನ ದಿನಗಳಲ್ಲಿ ಹೆಚ್ಚು ಒತ್ತಡವನ್ನೆದುರಿಸುತ್ತಿರುತ್ತವೆ.-

    ಎಸ್‌ ಐಪಿಕಾರ್ಯವಿಧಾನ

    ಮ್ಯೂಚುಯಲ್ಫಂಡ್ನಿಯಂತ್ರಕರುಮತ್ತುAMFI

    ವಿತ್ತೀಯ ಪೇಟೆಗಳ ನಿಯಂತ್ರಕ ಸಂಸ್ಥೆಯಾದʼ ಸೆಬಿʼ ಮ್ಯೂಚುಯಲ್‌ಫಂಡ್‌ಗಳನ್ನೂ ಸಹ ನಿಯಂತ್ರಿಸುತ್ತದೆ.  ಸೆಬಿ (ಮ್ಯೂಚುಯಲ್‌ಫಂಡ್)‌ ರೆಗ್ಯುಲೇಷನ್ಸ್‌ 1996 ಮೂಲಕ ಸೆಬಿಗೆ ನಿಯಂತ್ರಣ ಆಧಿಕಾರ ನೀಡಲಾಗಿದೆ ಮ್ಯೂಚುಯಲ್‌ ಫಂಡ್‌ಗಳು ಸೆಬಿಯೊಂದಿಗೆ ನೋಂದಾಯಿಸಿಕೊಂಡಮೇಲೆಯೇ ತಮ್ಮ ಚಟುವಟಿಕೆಗಳನ್ನುಆರಂಭಿಸಬೇಕು.   ಇದಲ್ಲದೆ ಮ್ಯೂಚುಯಲ್‌ ಫಂಡ್‌ಗಳು ತಮ್ಮದೇ ಆದ ಸಂಘಟನೆಯನ್ನು ಹೊಂದಿದೆ ಅದು ಅಸೋಸಿಯೇಷನ್ ‌ಆಫ್‌ ಮ್ಯೂಚುಯಲ್ ‌ಫಂಡ್ಸ್ ‌ಇನ್‌ ಇಂಡಿಯಾ(AMFI).   ಮ್ಯೂಚುಯಲ್‌ ಫಂಡ್‌ ಇಂಡಸ್ಟ್ರಿಯನ್ನು ಆರೋಗ್ಯಕರವಾದ, ನೈತಿಕತೆಯಾಧಾರಿತ ವೃತ್ತಿಪರತೆಯೊಂದಿಗೆ ಅಭಿವೃಧ್ಧಿಪಡಿಸುವ ಹೊಣೆ ಹೊತ್ತ ಸ್ವನಿಯಂತ್ರಣ ಸಂಸ್ಥೆಇದಾಗಿದೆ.  ಸರ್ಕಾರ,ನಿಯಂತ್ರಕರ ಮತ್ತು ಮ್ಯೂಚುಯಲ್ ‌ಫಂಡ್‌ ಇಂಡಸ್ಟ್ರಿಯ ನಡುವಿನ ಸೇತುವೆಯಂತೆ ಕಾರ್ಯನಿರ್ವಹಿಸುತ್ತದೆ.  ಮ್ಯೂಚುಯಲ್ ‌ಫಂಡ್ ‌ಸಲಹೆಗಾರರಾಗಲು AMFI ಯಿಂದ ಸರ್ಟಿಫಿಕೇಷನ್‌ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕಾದುದು ಕಡ್ಡಾಯ. 

    ಮ್ಯೂಚುಯಲ್ಫಂಡ್ಗಳಲ್ಲಿಯಾರುಹೂಡಿಕೆಮಾಡಬಹುದು:

    ಮ್ಯೂಚುಯಲ್ ‌ಫಂಡ್‌ಗಳಲ್ಲಿ18 ವರ್ಷದ ಮೇಲಿನವರು ಯಾರು ಬೇಕಾದರೂ ತೊಡಗಿಸಬಹುದು.  ಗೃಹಿಣಿಯರೂ ಸಹ ಹೂಡಿಕೆ ಮಾಡಬಹುದು.  ಅನಿವಾಸಿ ಭಾರತೀಯರೂ ಸಹಹೂಡಿಕೆ ಮಾಡಬಹುದಾಗಿದೆ.  ಕನಿಷ್ಠರೂ.1000 ದಿಂದ ಹೂಡಿಕೆ ಆರಂಭಿಸಬಹುದು.  SIP  ಯಲ್ಲಿಹೂಡಿಕೆಯನ್ನುಪ್ರತಿ ತಿಂಗಳು ರೂ.100 ರಿಂದಲೂ ಆರಂಭಿಸಲು ಅವಕಾಶವಿದೆ.  ಆದರೆ ನಿಗದಿತ ಪ್ರಮಾಣದಲ್ಲಿ ಲಾಭ ಸಿಕ್ಕೇಸಿಗುತ್ತದೆ ಎಂಬಭ್ರಮೆಬೇಡ.  ಷೇರುಪೇಟೆ, ಬಾಂಡ್‌ ಪೇಟೆಗಳ ಏರಿಳಿತಕ್ಕನುಗುಣವಾಗಿ ಎನ್‌ಎವಿ ಬದಲಾಗುತ್ತಿರುತ್ತದೆ.  ಪೇಟೆಗಳು ಇಳಿಕೆಯಲ್ಲಿದ್ದಾಗ ಒಂದೇ ಬಾರಿ ಹೂಡಿಕೆ ಮಾಡಲು ಸದವಕಾಶ.  ಅದೇ ಪೇಟೆಗಳು ಏರಿಕೆಯಲ್ಲಿದ್ದಾಗ ಲಾಭದ ನಗದೀಕರಣ ಮಾಡುವುದು ಸೂಕ್ತ.

    ಹೂಡಿಕೆಗಳ ಯಶಸ್ಸಿನ ಸುಲಭ ಸೂತ್ರ:

    ಇಂದಿನ ಚಟುವಟಿಕೆಯ ಶೈಲಿಯು ಎಲ್ಲವನ್ನೂ ವ್ಯಾಪಾರದ ದೃಷ್ಠಿಯಿಂದ ಕಾಣುವುದಾಗಿದೆ.   ಬ್ಯಾಲನ್ಸ್‌ಶೀಟ್‌ನತ್ತಲೇ ಎಲ್ಲರ ಗಮನ, ಅದರಲ್ಲೂ ಲಾಭ ನಷ್ಟದ ವಿಚಾರವೇ ಹೆಚ್ಚುಆದ್ಯತೆ.  ಅದಕ್ಕನುಗುಣವಾಗಿ ನಿಶ್ಚಯಿಸಿದ ಗುರಿ ತಲುಪಲು ಸತತಪ್ರಯತ್ನಗಳು ನಿರಂತರವಾಗಿದ್ದುಈದಿಶೆಯಲ್ಲಿ ಸಾಗಲು ಆಯ್ಕೆ ಮಾಡಿಕೊಳ್ಳುವ ಮಾರ್ಗ ಮಾತ್ರ ನಗಣ್ಯವಾಗಿದೆ.

    ಗುರಿ ಸಾಧನೆಗೆ ಅನುಸರಿಸುವ ಮಾರ್ಗಕ್ಕೆ ನಿಂಬಂಧನೆಗಳಿಲ್ಲದ ಕಾರಣ ಸ್ಪರ್ಧಾತ್ಮಕ ಸಂದರ್ಭದಲ್ಲಿ ಎಡುವುವ ಸಾಧ್ಯತೆಗಳೇ ಹೆಚ್ಚು.  ‌  ಹಾಗಾಗಿ ಹೂಡಿಕೆ ಮಾಡುವಾಗ ಹೆಚ್ಚಿನ ಎಚ್ಚರಿಕೆ ಅತ್ಯಗತ್ಯ.  ನಮ್ಮ ಹೂಡಿಕೆಯ ಸುರಕ್ಷತೆಯ ಮೇಲೆ ಸದಾ ನಿಗಾ ವಹಿಸಿರುವುದು ಅನಿವಾರ್ಯವಾಗಿದೆ.   ಉಲ್ಲಾಸಭರಿತ ಯಶಸ್ಸಿಗೆ ಸರಳ ಸೂತ್ರ:ಶ್ವಾನ ನಿದ್ದೆ, ಬಕ ದ್ಯಾನ, ಗಜ ಸ್ನಾನ ಅಂದರೆ ನಮ್ಮ ಎಲ್ಲಾ ಚಟುವಟಿಕೆಗಳ, ಅದರಲ್ಲೂ ವಿತ್ತೀಯ ಚಟುವಟಿಕೆಗಳ ಮೇಲೆ, ನಾಯಿ ಹೇಗೆ ಮಲಗ್ಗಿದ್ದರೂ ಸದಾ ಎಚ್ಚರಿಕೆಯಲ್ಲಿರುವುದೋ ಹಾಗಿದ್ದರೆ ಒಳಿತು,  ನಮ್ಮ ಹೂಡಿಕೆಗಳು ಅನಿರೀಕ್ಷಿತವಾಗಿ ಒದಗಿಸುವ ಅಧಿಕ ಲಾಭದ ಸಂದರ್ಭಗಳನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ  ಬಕಪಕ್ಷಿಯ ರೀತಿ ಹಠವಿದ್ದಲ್ಲಿ ಮಾತ್ರ ಚಟುವಟಿಕೆಯು ಗಜ ಸ್ನಾನದ ತೃಪ್ತಿಯನ್ನು ಪಡೆಯಲು ಸಾಧ್ಯ.

    ಸಾಮಾನ್ಯವಾಗಿ ಗೃಹಿಣಿಯರು ಸಮತೋಲನಾ ಮನಸ್ಕರಾಗಿರುವುದರಿಂದ,  ಎಸ್‌ ಐ ಪಿ ವಿಧದಲ್ಲಿ ತಮ್ಮ ಉಳಿತಾಯದ ಹಣವನ್ನು ಹೂಡಿಕೆಮಾಡಿ, ಫಂಡ್‌ ಯೋಜನೆಯೊಳಗಿನ ಆಗು ಹೋಗುಗಳನ್ನು ತುಲನಾತ್ಮಕವಾಗಿ ತೂಗಿ ನಿರ್ಧರಿಸುವುದರಿಂದ,  ಇದು ಉತ್ತಮ ಉಳಿತಾಯ ಮಾರ್ಗವೆನ್ನಬಹುದು.

    ನೆನಪಿಡಿ: ಮ್ಯೂಚುಯಲ್‌ ಫಂಡ್‌ ಗಳಲ್ಲೂ ಸಹ ಗ್ಯಾರಂಟೀ ಎಂಬುದಿಲ್ಲ.  ಪೇಟೆಯ ಏರಿಳಿತಗಳಿಗನುಗುಣವಾಗಿ ಯೋಜನೆಗಳ ಎನ್ ಎ ವಿ ಬದಲಾಗುತ್ತಿರುತ್ತದೆ.   ಅದರಂತೆ ನಗದೀಕರಿಸಬಹುದಾದ ಯೂನಿಟ್‌ ಗಳ ಮೊತ್ತವೂ ಸಹ ಏರಿಳಿತ ಕಾಣುತ್ತದೆ.

    Photo by Micheile Henderson on Unsplash

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!