23 C
Karnataka
Saturday, September 21, 2024

    ಎಲ್ಲಾ ಡಿಗ್ರಿ ತರಗತಿಗಳು ಜನವರಿ 15 ರಿಂದ ಪುನರಾರಂಭ; ಹಾಸ್ಟೆಲ್ ಗಳೂ ಶುರು

    Must read

    ಪದವಿ, ಸ್ನಾತಕೋತ್ತರ, ಎಂಜಿನಿಯರಿಂಗ್‌ ಮತ್ತು ಡಿಪ್ಲೊಮೋ ತರಗತಿಗಳ ಎಲ್ಲ ವರ್ಷಗಳ ವಿದ್ಯಾರ್ಥಿಗಳಿಗೆ ಆಫ್‌ಲೈನ್‌ ತರಗತಿಗಳನ್ನು ಇದೇ 15ರಿಂದ ಆರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಕಟಿಸಿದರು.

    ಈ ಸಂಬಂಧ ಬೆಂಗಳೂರಿನಲ್ಲಿ ಸೋಮವಾರ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಡಿಸಿಎಂ ಅವರು, ಅಂತಿಮ ವರ್ಷದ ಆಫ್‌ಲೈನ್‌ ತರಗತಿಗಳು ಈಗಾಗಲೇ ಆರಂಭವಾಗಿ ಯಶಸ್ವಿಯಾಗಿ ನಡೆಯುತ್ತಿವೆ. ಉಳಿದಂತೆ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳು ಕೂಡ ತಮಗೂ ನೇರ ತರಗತಿಗಳನ್ನು ಆರಂಭಿಸುವಂತೆ ಒತ್ತಾಯ ಮಾಡುತ್ತಿದ್ದರು. ಅದರಂತೆ, ಈ ತಿಂಗಳಿನಿಂದಲೇ ತರಗತಿಗಳನ್ನು ಆರಂಭ ಮಾಡುತ್ತಿದ್ದೇವೆ ಎಂದರು.

    ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಪ್ರಥಮ, ದ್ವಿತೀಯ ಹಾಗೂ ಮೂರನೇ ವರ್ಷದ ಆಫ್‌ಲೈನ್‌ ತರಗತಿಗಳು ಕೂಡ ಇದೇ ದಿನ ಶುರುವಾಗುತ್ತಿವೆ ಎಂದು ಡಿಸಿಎಂ ಮಾಹಿತಿ ನೀಡಿದರು.

    ಇದರ ಜತೆಗೆ, ತರಗತಿಗಳು ಆರಂಭವಾಗುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳನ್ನು ತೆರೆಯಲಾಗುತ್ತಿದೆ. ಕಾಲೇಜುಗಳ ಬಸ್‌ ವ್ಯವಸ್ಥೆಯೂ ಪುನಾರಂಭವಾಗುತ್ತಿದೆ ಎಂದ ಅವರು, ಕೋವಿಡ್‌ ಮಾರ್ಗಸೂಚಿಯಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಕಾಲೇಜುಗಳಲ್ಲಿ ಕೋವಿಡ್‌ ತಪಾಸಣೆ, ಸ್ಯಾನಿಟೈಸ್ ವ್ಯವಸ್ಥೆ, ದೈಹಿಕ ಅಂತರ ಪಾಲನೆ ಸೇರಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳೂ ಇರುತ್ತವೆ ಎಂದರು.

    ಬಸ್‌ ಪಾಸ್‌ ಬಗ್ಗೆಯೂ ಕ್ರಮ:

    ಈಗಾಗಲೇ ವಿದ್ಯಾರ್ಥಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ಬಸ್‌ ಪಾಸ್‌ಗಳನ್ನು ತ್ವರಿತವಾಗಿ ವಿತರಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಸಾರಿಗೆ ಇಲಾಖೆಯು ಒಪ್ಪಿದ್ದು, ಆಯಾ ಕಾಲೇಜುಗಳು ತಮ್ಮ ವ್ಯಾಪ್ತಿಯಲ್ಲಿರುವ ಸಾರಿಗೆ ವಿಭಾಗೀಯ ಕಚೇರಿಗಳ ಅಧಿಕಾರಿಗಳ ಜತೆ ಸಂಪರ್ಕ ಸಾಧಿಸಿ ಆದಷ್ಟು ಬೇಗ ಬಸ್‌ಪಾಸ್‌ಗಳ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

    ಎನ್ ಸಿ ಸಿ ಮತ್ತು ‌ಎನ್ ಎಸ್ ಎಸ್ ತರಬೇತಿಗೂ ಅವಕಾಶ ನೀಡಲಾಗಿದೆ. ಎನ್ ಸಿ ಸಿ ಕೂಡ ಪರೀಕ್ಷೆ ಗಳನ್ನು ಆಯೋಜಿಸಬೇಕಾಗಿದ್ದು ಇದಕ್ಕಾಗಿ ಅಲ್ಪಾವಧಿಯ ಶಿಬಿರಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಬಿ- ಸರ್ಟಿಫಿಕೇಟ್ ಪರೀಕ್ಷೆ ಗೆ ಮೂರು ದಿನಗಳ ಹಾಗೂ ಸಿ- ಸರ್ಟಿಫಿಕೇಟ್ ಪರೀಕ್ಷೆ ಗೆ ಐದು ದಿನಗಳ ಶಿಬಿರ ‌ನಡೆಸುವುದಕ್ಕೂ ಅವಕಾಶ ನೀಡಲಾಗಿದೆ ಎಂದು ಡಿಸಿಎಂ ಹೇಳಿದರು.

    ಪ್ರತ್ಯೇಕ ಎಸ್‌ಒಪಿ:

    ಪೂರ್ಣ ಪ್ರಮಾಣದಲ್ಲಿ ಹಾಸ್ಟೆಲ್‌ಗಳನ್ನು ತೆರೆಯಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ಪ್ರತ್ಯೇಕ ಮಾರ್ಗಸೂಚಿ (ಎಸ್‌ಒಪಿ) ಸಿದ್ಧಪಡಿಸುವಂತೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳನ್ನು ಕೋರಲಾಗಿದೆ. ಕಾಲೇಜುಗಳಲ್ಲಿ ಗ್ರಂಥಾಲಯ, ಕ್ಯಾಂಟೀನ್‌, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆ, ಕ್ರೀಡಾಕೂಟ ಆಯೋಜನೆಗೂ ಎಸ್‌ಒಪಿಯನ್ನು ಸಿದ್ಧಪಡಿಸಲಾಗಿದೆ ಎಂದು ಡಿಸಿಎಂ ತಿಳಿಸಿದರು.

    ಪರೀಕ್ಷೆ ವೇಳಾಪಟ್ಟಿ ಶೀಘ್ರ:

    ಅಂತಿಮವಾಗಿ, ಏಕಕಾಲಕ್ಕೆ ಎಲ್ಲೆಡೆ ಆಫ್‌ಲೈನ್‌ನಲ್ಲಿಯೇ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಈಗಾಗಲೇ ರಾಜ್ಯದ ಎಲ್ಲ ಸರಕಾರಿ-ಖಾಸಗಿ ವಲಯದ ವಿವಿಗಳ ಕುಲಪತಿಗಳ ಜತೆ ಸಮಾಲೋಚನೆ ನಡೆಸಲಾಗಿದೆ. ಆದಷ್ಟು ಬೇಗ ಪರೀಕ್ಷೆ ದಿನದ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು ಉಪ ಮುಖ್ಯಮಂತ್ರಿ.

    ಪದವಿ ಮತ್ತು ಸ್ನಾತಕೋತ್ತರ ತರಗತಿಗಳನ್ನು ಆರಂಭಿಸುವ ಕುರಿತ ಡಿಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್, ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೆದ್ ಅಖ್ತರ್, ಹಿಂದುಳಿದ ವರ್ಗಗಳ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರವಿಕುಮಾರ ಸುರಪುರ್, ಹಿಂದುಳಿದ ವರ್ಗಗಳ ಇಲಾಖೆ ಆಯುಕ್ತ ವಸಂತ ಕುಮಾರ್ ಮುಂತಾದ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು

    spot_img

    More articles

    1 COMMENT

    LEAVE A REPLY

    Please enter your comment!
    Please enter your name here

    Latest article

    error: Content is protected !!