ಭಾರತದ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರು ತಾಷ್ಕೆಂಟ್ ನಲ್ಲಿ ನಿಧನರಾದ ದಿನದ ನೆನಪು ನನ್ನ ಮನಸಿನಲ್ಲಿ ಚಿರಸ್ಮರಣೀಯವಾಗಿ ಉಳಿದಿದೆ .ಅಂದು ಜನವರಿ 11,1966. ನಾನು ನವದೆಹಲಿಯ ಆಕಾಶವಾಣಿ ಭವನದಲ್ಲಿದ್ದ ಪ್ರೆಸ್ ಇನ್ ಫರ್ಮೇಷನ್ ಬ್ಯುರೋ – ಪಿಐಬಿ ಕಚೇರಿಯಲ್ಲಿ- ಅಸಿಸ್ಟೆಂಟ್ ಜರ್ನಲಿಸ್ಟ್. ಇದು ಭಾರತ ಸರ್ಕಾರದ ವಾರ್ತಾ ಸೇವೆಯ ಮುಖ್ಯ ಕೇಂದ್ರ. ಹಾಗೂ ಕೇಂದ್ರ ಸರಕಾರದ ಮುಖವಾಣಿ.
ಪಿಐಬಿ ಒಂದು ಅಂಗವಾದ ಪ್ರೆಸ್ ಫೆಸಿಲಿಟೀಸ್ ನಲ್ಲಿ ನಾನು ಸೇವಾ ನಿಯೋಜಿತನಾಗಿದ್ದೆ. ರಾಷ್ಟ್ರ ರಾಜಧಾನಿಯಲ್ಲಿರುವ ರಾಷ್ಟ್ರೀಯ ಪತ್ರಿಕೆಗಳು ಮತ್ತು ಪಿಟಿಐ, ಯುಎನ್ ಐ ಮತ್ತಿತರ ನ್ಯೂಸ್ ಏಜೆನ್ಸಿಗಳಿಗೆ ವಾರ್ತೆ- ಮಾಹಿತಿ ಒದಗಿಸುವುದು ಪಿಐಬಿಯ ಮುಖ್ಯ ಕೆಲಸ . ಆಗ ಟೆಲಿವಿಷನ್ ಇನ್ನೂ ಭಾರತಕ್ಕೆ ಕಾಲಿಟ್ಟಿರಲಿಲ್ಲ. ಫಿಲ್ಮ್ ಡಿವಿಜನ್ ವಾರಾಂತ್ಯಕ್ಕೆ ಬಿಡುಗಡೆ ಮಾಡುತ್ತಿದ್ದ ಇಂಡಿಯನ್ ನ್ಯೂಸ್ ರೀಲ್ ಗಳು ಸಿನೆಮಾ ಮಂದಿರಗಳ ಮೂಲಕ ‘ಲೈವ್’ ದೃಶ್ಯ ತೋರಿಸುತ್ತಿತ್ತು. ಆಕಾಶವಾಣಿಯೊಂದೇ ದೇಶದ ಪ್ರಮುಖ ಸುದ್ದಿ ಬಿಂದು.
ಈ ಹಿನ್ನೆಲೆಯಲ್ಲಿ ಜನವರಿ 11ರಂದು ರಾತ್ರಿ ಹತ್ತು ಗಂಟೆವರೆಗೆ ಕೆಲಸ ಮುಗಿಸಿ ಕಾರಿನಲ್ಲಿ ನನ್ನ ರೂಮಿಗೆ ಡ್ರಾಪ್ ತೆಗೆದುಕೊಳ್ಳಲು ಸಿದ್ಧನಾಗುತ್ತಿದ್ದೆ. ವಾಹನ ಬರುವುದು ತಡವಾಗಿತ್ತು. ಸುಂದರ್ ರಾಜನ್ ಅವರು ನಮ್ಮ ಹಿರಿಯ ಸಹೋದ್ಯೋಗಿ. ಇನ್ನೇನು ಬೀಗ ಹಾಕಿ ಹೊರಡಲು ಸನ್ನದ್ಧರಾದಾಗ ವಾರ್ತಾಧಿಕಾರಿಯ ಮೇಜಿನ ಮೇಲಿದ್ದ ಹಾಟ್ ಲೈನ್ ಸದ್ದು ಮಾಡಿತು. ಜೊತೆಗೆ ಸೈರನ್ ಕೂಗಿನೊಂದಿಗೆ ವಿದೇಶಾಂಗ ವ್ಯವಹಾರದ ಪಬ್ಲಿಸಿಟಿ ವಿಭಾಗದ ಅಧಿಕಾರಿಗಳ ತಂಡ ನಾನಿದ್ದಲ್ಲಿಗೆ ಧಾವಿಸಿ ಬಂದಿತು. ಏನು ಅನಾಹುತದ ಮುನ್ಸೂಚನೆ ಸ್ಪಷ್ಟವಾಯಿತು. ರಷ್ಯಾದಲ್ಲಿ ಅಧಿಕೃತ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ಲಾಲಬಹಾದ್ದೂರ ಶಾಸ್ತ್ರಿ ನಿಧನರಾಗಿದ್ದಾರೆ ಎಂಬ ಸುದ್ದಿ ಬಂದಿತು.
ಸುದ್ದಿ ಆಘಾತ ನಿಜ. ಅಂತೆಯೇ ನಮ್ಮ ಕರ್ತವ್ಯ ಪ್ರಜ್ಞೆ ಜಾಗೃತವಾಯಿತು ಅಂಥ ದಿನಗಳಲ್ಲಿ ಟೆಲೆಕ್ಸ್ ಯಂತ್ರವೊಂದರ ಬಿಟ್ಟರೆ ಮತ್ತಾವುದೇ ತಾಂತ್ರಿಕ ಯಾಂತ್ರಿಕ ಸಾಧನ ಇರಲಿಲ್ಲ. ಇಡೀ ದೇಶಕ್ಕೆ ಅಧಿಕೃತ ಮಾಹಿತಿ ನೀಡುವ ಜವಾಬ್ದಾರಿ ನಮಗೆ ಅರಿವಿಲ್ಲದಂತೆಯೇ ನಮಗೆ ಬಂದಿತ್ತು. ದಿಲ್ಲಿಯ ವರದಿಗಾರರೆಲ್ಲ ಪಿಐಬಿಗೆ ಮುತ್ತಿಗೆ ಹಾಕಿದರು. ಕ್ಷಣ ಕ್ಷಣದ ಮಾಹಿತಿಯನ್ನು ಲೌಡ್ ಸ್ಪೀಕರ್ ಮೂಲಕ ತಿಳಿಸುವ ವ್ಯವಸ್ಥೆಯಾಯಿತು.
ಇನ್ಫರ್ಮೇಷನ್ ಆಫೀಸರ್ ಡೆಸ್ಕ್ ನಲ್ಲಿ ಕೂತವನು ಕುರ್ಚಿ ಬಿಟ್ಟು ಎದ್ದುದ್ದು ಬೆಳಿಗ್ಗೆ ಎಂಟು ಗಂಟೆಗೆ.ಪುನಃ ಕುಳಿತು ಮಾಹಿತಿ ವಿತರಣೆಗೆ ಧಾವಿಸಿದ್ದು ಕೆಲವೇ ನಿಮಿಷಗಳ ನಂತರ. ದಿ. ಲಾಲಬಹುದ್ದೂರ್ ಶಾಸ್ತ್ರಿ ಅವರ ಪಾರ್ಥಿವ ಶರೀರ ನವದೆಹಲಿಗೆ ಬಂದು ಸಾರ್ವಜನಿಕ ಗೌರವ ಅರ್ಪಣೆ, ಅಂತಿಮ ಯಾತ್ರೆ ಇದೆಲ್ಲವೂ ಮುಗಿಯುವವರೆಗೆ ಸತತವಾಗಿ 40 ಗಂಟೆ ಕೆಲಸ ಮಾಡಿದ್ದೆವು. ಅದಾವ ದೈತ್ಯ ಶಕ್ತಿ ಪಿಐಬಿಯಲ್ಲಿದ್ದ ನಮಗೆ ಬಂದಿತ್ತೋ ತಿಳಿಯದು.
ಈ ಸಂದರ್ಭದಲ್ಲಿ ನಮ್ಮೊಂದಿಗೆ ಇದ್ದು ಸೇವೆ ಸಲ್ಲಿಸಿದ ಮಹನೀಯ ಅಧಿಕಾರಿಯೆಂದರೆ ಟಿ. ಕಾಶಿನಾಥ.ಭಾರತ ಸರ್ಕಾರ ಅಧಿಕೃತ ಫೋಟೋ ಡಿವಿಜನ್ ನ ಮುಖ್ಯಸ್ಥ ಕಾಶಿನಾಥರು ಕನ್ನಡಿಗರು. ರಾಷ್ಟ್ರಮಟ್ಟದ ಖ್ಯಾತ ಫೋಟೊಗ್ರಾಫರ್ . ಅಂದಿನ ದಿನಗಳಲ್ಲಿ ರಾಷ್ಟ್ರೀಯ ನ್ಯೂಸ್ ಏಜೆನ್ಸಿಗಳಿಗೆ, ದೇಶ ವಿದೇಶದ ಪತ್ರಿಕೆಗಳಿಗೆ ಫೋಟೋ ಫೋಟೊ ರವಾನಿಸಿದ ಮಹನೀಯರು ಇವರು. ಜೊತೆಜೊತೆಗೆ ಮಾಹಿತಿ ಒದಗಿಸುವ ಕೆಲಸ ನನ್ನದಾಗಿತ್ತು. ಇದು ನಾನು ಪುಣ್ಯ ಜೀವಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಸಲ್ಲಿಸಿದ ಶ್ರದ್ಧಾಂಜಲಿ.
ಎಸ್ .ಕೆ. ಶೇಷಚಂದ್ರಿಕ ನಾಡಿನ ಹಿರಿಯ ಪತ್ರಕರ್ತರು. ಭಾರತ ಸರಕಾರದ ಕ್ಷೇತ್ರ ಪ್ರಚಾರಾಧಿಕಾರಿಯಾಗಿ, ದೂರದರ್ಶನ, ಆಕಾಶವಾಣಿಯಲ್ಲಿ ಸುದ್ದಿ ಸಂಪಾದಕ, ವಿಶೇಷ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಪತ್ರಿಕಾ ಕಾರ್ಯದರ್ಶಿಯೂ ಆಗಿದ್ದರು.ದಿ ಟ್ರಿಬ್ಯೂನ್ ಪತ್ರಿಕೆಯ ವಿಶೇಷ ವರದಿಗಾರರು ಆಗಿ ಸೇವೆ ಸಲ್ಲಿಸಿದ ಅವರು ಈಗ ಬೆಂಗಳೂರು ನ್ಯೂಸ್ ಬ್ಯೂರೋದ ವಿಶೇಷ ವರದಿಗಾರರು ಹಾಗೂ ಗಾಂಧಿಯನ್ ಥಾಟ್ಸ್ ನ ವಿಸಿಟಿಂಗ್ ಪ್ರೊಫೆಸರ್ ಕೂಡ ಹೌದು.
ತುಂಬಾ ಚೆನ್ನಾಗಿ ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ.