18 C
Karnataka
Friday, November 22, 2024

    ಒಪ್ಪಿಕೊಂಡು ಎಂಎಲ್ ಸಿ ಯಾದವರು ಮಂತ್ರಿಯಾದರು, ಸ್ವಪ್ರತಿಷ್ಠೆಗೆ ಅಂಟಿಕೊಂಡವರು ಹತಾಶರಾದರು

    Must read

    ಅಶೋಕ ಹೆಗಡೆ

    ರಾಜಕಾರಣದಲ್ಲಿ ಯಾವ ಕ್ಷಣದಲ್ಲಿ ಏನು ಏಕಾದರೂ ಆಗಬಹುದು. ಒಂದೇ ಒಂದು ಘಟನೆ ಎಷ್ಟೆಲ್ಲ ಪರಿಣಾಮಗಳನ್ನು ಉಂಟುಮಾಡಬಹುದು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಕೈಗೊಂಡಿರುವ ಸಂಪುಟ ವಿಸ್ತರಣೆ ಸಹ ಅಂತಹ ಹಲವು ಪರಿಣಾಮಗಳನ್ನು ಉಂಟುಮಾಡಿದೆ.

    ಹದಿನೇಳು ಶಾಸಕರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಇಬ್ಬರ ಸೋಲಿನ ಬಗ್ಗೆ ಯಡಿಯೂರಪ್ಪನವರಿಗೆ ಸ್ಪಷ್ಟ ಮಾಹಿತಿ ಇತ್ತು. ಹೀಗಾಗಿ ಟಿಕೆಟ್ ನೀಡದೇ ವಿಧಾನ ಪರಿಷತ್ ಸದಸ್ಯರಾಗಿ ಮಾಡುವ ಭರವಸೆ ನೀಡಿದರು.ಒಬ್ಬರು ಅದನ್ನ ಒಪ್ಪಿಕೊಂಡು ಎಮ್ಮೆಲ್ಸಿಯಾಗಿ, ಈಗ ಮಂತ್ರಿಯೂ ಆದರು. ಇನ್ನೊಬ್ಬರು ಸ್ವಪ್ರತಿಷ್ಠೆಗೆ ಕಟ್ಟುಬಿದ್ದು,ಉಪ ಚುನಾವಣೆಯಲ್ಲಿ ಸ್ಪರ್ಧಿಸಿ, ಸೋತು, ರಾಜಕೀಯ ಸಂಧ್ಯಾಕಾಲದಲ್ಲಿ ಹತಾಶ ಸ್ಥಿತಿ ತಲುಪಿದ್ದಾರೆ. ಆ ಇಬ್ಬರು ಆರ್.ಶಂಕರ್ ಮತ್ತು ಎಚ್.ವಿಶ್ವನಾಥ್ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.

    ಸಂಪುಟದಲ್ಲಿ ಸ್ಥಾನ ಸಿಗದ ಹತಾಶೆಯಿಂದ ವಿಶ್ವನಾಥ್ ಅವರು ಈಗ ಯಡಿಯೂರಪ್ಪ ಮಾತಿಗೆ ನಿಲ್ಲುವ ನಾಯಕ ಅಲ್ಲ ಎನ್ನುತ್ತಿದ್ದಾರೆ. ಹಿಂದೆ ಇದೇ ವಿಶ್ವನಾಥ್ ಮಾತಿಗೆ ತಪ್ಪದ ನಾಯಕ ಯಡಿಯೂರಪ್ಪ ಎಂದಿದ್ದರು. ಉಪ ಚುನಾವಣೆ ಸ್ಪರ್ಧೆ ಬೇಡವೆಂದರೂ ಹಠಕ್ಕೆ ಬಿದ್ದು ಸ್ಪರ್ಧಿಸಿದರು. ಸೋತರೂ ಯಡಿಯೂರಪ್ಪ ಕೈ ಬಿಡಲಿಲ್ಲ. ಹೇಗೋ ವರಿಷ್ಠರ ಮನವೊಲಿಸಿ ವಿಧಾನ ಪರಿಷತ್‌ಗೆ ನಾಮಕರಣ ಮಾಡಿದರು. ಅದೇ ಯಡಿಯೂರಪ್ಪ ಮಾಡಿದ ತಪ್ಪು. ಎಂಎಲ್ ಸಿ ಆದ ಕಾರಣದಿಂದಲೇ ತಾನೆ ವಿಶ್ವನಾಥ್ ಈಗ ಸಚಿವರಾಗಲು ಆಸೆ ಪಡುತ್ತಿರುವುದು?

    ವಿಶ್ವನಾಥ್‌ಗಿಂತಲೂ ಮುನಿರತ್ನ ಎಷ್ಟೋ ವಾಸಿ ಮತ್ತು ಪ್ರಬುದ್ಧರಂತೆ ಕಾಣಿಸುತ್ತಾರೆ. ವಿಶ್ವನಾಥ್ ಉಪ ಚುನಾವಣೆಯಲ್ಲಿ ಹೀನಾಯವಾಗಿ ಸೋತರು, ಮುನಿರತ್ನ ಭಾರಿ ಅಂತರದಿಂದ ಗೆದ್ದರು. ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮುಕ್ತ ಮನಸ್ಸು ಯಡಿಯೂರಪ್ಪನವರಿಗೂ ಇತ್ತು. ಅದಕ್ಕಾಗಿ ಕೊನೆ ಕ್ಷಣದವರೆಗೂ ಪ್ರಯತ್ನ ಮಾಡಿದರು. ಮುನಿರತ್ನ ವಿರುದ್ಧ ದಾಖಲಾಗಿರುವ ಕೇಸ್ ಇತ್ಯರ್ಥವಾಗವವರೆಗೆ ಕಾಯಲೇಬೇಕು ಎಂದು ಹೈಕಮಾಂಡ್ ಸ್ಪಷ್ಟ ನಿರ್ದೇಶನ ನೀಡಿದ್ದರಿಂದ ಮುಖ್ಯಮಂತ್ರಿ ಸುಮ್ಮನಾಗಬೇಕಾಯಿತು. ಇದೆಲ್ಲವೂ ಅರಿವಿರುವುದರಿಂದ ಮುನಿರತ್ನ ಬಹಿರಂಗವಾಗಿ ಅಸಮಾಧಾನ ತೋಡಿಕೊಳ್ಳದೇ ಪ್ರೌಢತೆ ಮೆರೆದಿದ್ದಾರೆ. ಎಲ್ಲ ಸತ್ಯಗಳು ಗೊತ್ತಿದ್ದೂ ವಿಶ್ವನಾಥ್ ವಾಚಾಳಿತನ ತೋರಿಸಿ ತಮ್ಮ ಹಿರಿತನ ಕಡಿಮೆ ಮಾಡಿಕೊಂಡಿದ್ದಾರೆ,

    ವಿಶ್ವನಾಥ್ ಮತ್ತು ಮುನಿರತ್ನ ಅವರ ರಾಜಕೀಯ ಪ್ರತಿಸ್ಪರ್ಧಿಗಳ ವಿಚಾರದಲ್ಲಿ ಸ್ವಲ್ಪ ವ್ಯತ್ಯಾಸವಿದೆ ನಿಜ. ಮುನಿರತ್ನಗೆ ಖುದ್ದು ಮುಖ್ಯಮಂತ್ರಿ ಮಾತ್ರವಲ್ಲದೆ ಪ್ರಭಾವಿ ಶಾಸಕರ ನೈತಿಕ ಬೆಂಬಲವಿದೆ. ವಿಶ್ವನಾಥ್‌ಗೆ ಅತ್ತ ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ, ಇತ್ತ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಕುಟುಕುತ್ತಿದ್ದಾರೆ. ಮಂತ್ರಿಯಾಗಲಿಲ್ಲ ಎಂಬ ಅವಮಾನಕ್ಕಿಂತ ಅವರ ಟೀಕಾಸ್ತ್ರಗಳನ್ನು ಎದುರಿಸುವುದು ವಿಶ್ವನಾಥ್ ಅವರಿಗೆ ಭಾರಿ ನೋವಿನ ಸಂಗತಿ. ಆದರೆ, ಅವರಿಬ್ಬರನ್ನು ಎದುರು ಹಾಕಿಕೊಂಡಿದ್ದೂ ತಮ್ಮ ನಾಲಗೆಯನ್ನ ಬೇಕಾಬಿಟ್ಟಿ ಬಳಸಿಯೇ ಎನ್ನುವ ಸತ್ಯವನ್ನು ವಿಶ್ವನಾಥ್ ಮರೆಯಬಾರದು. ಈಗಲೂ ಮನಸ್ಸಿಗೆ ತೋಚಿದಂತೆ ಮಾತನಾಡಿದರೆ ಬಾಯಿ ಹರುಕ ನಾಯಕನೆಂಬ ಕುಖ್ಯಾತಿಯನ್ನು ರಾಜಕೀಯ ಜೀವನದ ಕೊನೆಗಾಲದಲ್ಲಿ ಶಾಶ್ವತವಾಗಿ ಅಂಟಿಸಿಕೊಳ್ಳಬೇಕಾಗುತ್ತದೆ ಅಷ್ಟೆ.

    ಸೇಡು ತೀರಿಸಿಕೊಂಡ ಜಾರಕಿಹೊಳಿ

    ಸಚಿವ ರಮೇಶ್ ಜಾರಕಿಹೊಳಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಿನ ಕಾಳಗದಲ್ಲಿ ಸದ್ಯಕ್ಕೆ ಗೆದ್ದವರು ‘ಸಾಹುಕಾರ್’ ಜಾರಕಿಹೊಳಿ. ಬೆಳಗಾವಿ ರಾಜಕಾರಣದಲ್ಲಿ ಮೂಗು ತೂರಿಸಲು ಹೋಗಿದ್ದರ ಫಲವನ್ನು ಡಿಕೆಶಿ ಈಗ ಅನುಭವಿಸಬೇಕಾಗಿದೆ. ಡಿಕೆಶಿಗೆ ಟಾಂಗ್ ನೀಡಲೆಂದೇ ಜಾರಕಿಹೊಳಿ ಪಟ್ಟು ಹಿಡಿದು, ಸಿ.ಪಿ.ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಸಿಗುವಂತೆ ನೋಡಿಕೊಂಡರು. ರಾಜಕಾರಣದಲ್ಲಿ ಎಲ್ಲ ಸಮಯದಲ್ಲೂ ಮಾತಿನ ಬಲ, ತೋಳ್ಬಲ ನಡೆಯುವುದಿಲ್ಲ ಎನ್ನುವುದನ್ನು ರಮೇಶ್ ಜಾರಕಿಹೊಳಿ ತೋರಿಸಿಕೊಟ್ಟಿದ್ದಾರೆ.

    ಅಂತೂ ಇಂತೂ ಸಚಿವ ಸಂಪುಟ ವಿಸ್ತರಣೆಯಂತೂ ಆಗಿದೆ. ಮೂರ‍್ನಾಲ್ಕು ತಿಂಗಳಲ್ಲಿ ಸಂಪುಟ ಪುನರ್‌ರಚನೆಯ ಹೊಸ ಜೇನುತುಪ್ಪವನ್ನು ವರಿಷ್ಠರು ಸವರಿ ಹೋಗಿದ್ದಾರೆ. ಈ ನಡುವೆ ಯಡಿಯೂರಪ್ಪನವರಿಗೆ ಸ್ಥಾನ ಭದ್ರತೆಯ ಖಾತರಿ ಸಿಕ್ಕಿದೆ. ಕನ್ನಡಿಗರು ಇನ್ನಾದರೂ ಉತ್ತಮ ಆಡಳಿತವನ್ನು ನಿರೀಕ್ಷೆ ಮಾಡಬಹುದೇ?

    spot_img

    More articles

    1 COMMENT

    LEAVE A REPLY

    Please enter your comment!
    Please enter your name here

    Latest article

    error: Content is protected !!