ಭೂಮಿ ತನ್ನ ಸುತ್ತ ತಾನೇ ತಿರುಗುತ್ತಾ, ಸೂರ್ಯನ ಸುತ್ತ ಸುತ್ತುತ್ತದೆ. ತನ್ನ ಸುತ್ತ ತಿರುಗುವುದರಿಂದ ರಾತ್ರಿ,ಹಗಲುಗಳೂ, ಸೂರ್ಯನ ಸುತ್ತ ಸುತ್ತುವುದರಿಂದ ಋತುಗಳೂ ಉಂಟಾಗುತ್ತವೆ – ಐದಾರನೇ ತರಗತಿಯಲ್ಲಿ ಇದ್ದಿರಬಹುದು. ಆಗ ತಾನೇ ನಮ್ಮ ಶಾಲೆಗೆ UNICEF -United Nations international Children’s Emergency Fund- ನಮ್ಮಶಾಲೆಗೆ ಮಂಜೂರಾಗಿದ್ದರಿಂದ,ಹಲವಾರು ಬೋಧನಾ ಸಾಮಗ್ರಿಗಳು ಶಾಲೆಗೆ ಬಂದಿದ್ದವು. ಜೊತೆಯಲ್ಲಿ ಮಧ್ಯಾಹ್ನದ ಆಹಾರವಾಗಿ ಹಳದಿಬಣ್ಣದ ಉಪ್ಪಿಟ್ಟನ್ನೂ ಕೊಡುತ್ತಿದ್ದರು.ಎಣ್ಣೆ ಡಬ್ಬದ ಮೇಲೆ,ಒಂದು ತರಹ ಪ್ಲಾಸ್ಟಿಕ್ ಎನ್ನಬಹುದಾದ ರವೆಯ ಚೀಲದ ಮೇಲೆ Made in USSR ಅಂತ ಬರೆದದ್ದನ್ನ ಓದೋದೂ ಒಂದು ಸಂಭ್ರಮ ಆಗ. ಹಾಗೆ ಬಂದ ಸಾಮಗ್ರಿಯಲ್ಲಿ ನಮ್ಮ ಉಂಡೆ ಆಕಾರದ ಭೂಚೆಂಡು(globe) ಒಂದು ಪ್ಲಾಸ್ಟಿಕ್ ಸ್ಟ್ಯಾಂಡ್ ಮೇಲೆ ಒರೆಯಾಗಿ ನಿಂತಿತ್ತು. ಅದನ್ನು ತಿರುಗಿಸಿ ನೋಡೋದೇ ಖುಷಿ ಆಗ. ಅದರ ಮೇಲಿದ್ದ ಓದಲು ಆಗದಂತಹ ಅಕ್ಷರಗಳು, ಅಡ್ಡಡ್ಡ,ಉದ್ದುದ್ದ ನಸುಗಪ್ಪು ಗೆರೆಗಳೂ,ಬಣ್ಣ ಬಣ್ಣದ ಆಕಾರದ ದೇಶಗಳು,ಸಮುದ್ರಗಳು ನನ್ನನ್ನು ಇನ್ನಿಲ್ಲದ ಕುತೂಹಲ ಲೋಕಕ್ಕೆ ಕೊಂಡೊಯ್ಯುತ್ತಿದ್ದವು. ಎಷ್ಟೋ ಸಾರಿ ತುಂಬಾ ಹೊತ್ತು ಅದನ್ನ ನೋಡೋದು ನನ್ನ ನೆಚ್ಚಿನ ಅಭ್ಯಾಸವೂ ಆಗಿಬಿಟ್ಟಿತ್ತು.
ಇಂತಹ ನನ್ನ ನೆಚ್ಚಿನ ಭೂ ಚೆಂಡನ್ನು ಕೈಯಲ್ಲಿ ಹಿಡಿದು ಒಂದು ದಿನ ಕನ್ನಡ ಮತ್ತು ಸಮಾಜ ವಿಜ್ಞಾನ ಕಲಿಸುತ್ತಿದ್ದ ಶೆಲಿಯಪ್ಪನಹಳ್ಳಿ ಷಣ್ಮುಖಪ್ಪ ಮೇಷ್ಟ್ರು ನನ್ನ ತರಗತಿಗೆ ಬಂದು ಬಿಟ್ಟರು. ನನ್ನ ಸಂಭ್ರಮ ಮತ್ತು ಕುತೂಹಲ ಎಲ್ಲೆ ಮೀರಿತ್ತು.
ಟೇಬಲ್ಲಿನ ಒಂದು ತುದಿಗೆ ಈ ಭೂಗೋಳವನ್ನು ಇಟ್ಟು, ಮಧ್ಯೆ ಒಂದು ಮೇಣದ ಬತ್ತಿ ಹಚ್ಚಿಸಿ, ಬಾಗಿಲು ಕಿಟಕಿ ಮುಚ್ಚಿಸಿ ಕತ್ತಲು ಮಾಡಿ, ಈ ಮೇಣದ ಬತ್ತಿಯ ಬೆಳಕು ಸೂರ್ಯ ಅಂತ ಹೇಳುತ್ತಾ, ಭೂಚೆಂಡನ್ನು ಮೆಲ್ಲಗೆ ತಿರುಗಿಸಿ ಬೆಳಕು ಬೀಳುವ ಪ್ರದೇಶ ದಿನ ಅಂತಲೂ ಅದರ ಹಿಂದಿದ್ದ ಪ್ರದೇಶ ಕತ್ತಲು ಅಂತಲೂ ಹೇಳಿದರು. ಹಾಗೆಯೇ ತಿರುಗುತ್ತಿದ್ದ ಭೂಚೆಂಡನ್ನು ಮೇಣದ ಬತ್ತಿಯ ಸುತ್ತ ಮೊದಲೇ ಟೇಬಲ್ ಮೇಲೆ ಬರೆದಿದ್ದ ಮೊಟ್ಟೆ ಆಕಾರದ ಗೆರೆಯಗುಂಟ ತಳ್ಳುತ್ತಾ ಒಂದು ರೌಂಡ್ ಹಾಕಿಸಿ, ಇಲ್ಲಿಗೆ ಒಂದು ವರ್ಷ ಆಗುತ್ತದೆ ಅಂತ ಹೇಳಿದರು!
ಸಾರ್ ಈ ಭೂಚೆಂಡು ನೆಟ್ಟಗಿರದೆ, ಒರೆಯಾಗಿ ಯಾಕೆ ಇದೆ ಅಂತ ಕೇಳಿದ್ದ ನನ್ನ ಬಹುದಿನದ ಕುತೂಹಲದ ಪ್ರಶ್ನೆಗೆ ಅದು ನಿನಗೆ ಈಗ ಹೇಳಿದರೆ ಅರ್ಥ ಆಗಲ್ಲ, ಈಗ ಹಗಲು,ರಾತ್ರಿ,ಋತುಗಳನ್ನು ಮಾತ್ರ ತಿಳಿದುಕೊ. ಮುಂದಿನ ತರಗತಿಗಳಲ್ಲಿ ಅದರ ಬಗ್ಗೆ ಹೇಳುತ್ತಾರೆ ಅಂದದ್ದು ನನಗೆ ನಿರಾಶೆ ಉಂಟು ಮಾಡಿತ್ತು. ಸುಮ್ಮನಾಗದ ನಾನು ಮನೆಯಲ್ಲಿ ಅಪ್ಪನ ತಲೆಯನ್ನೂ ತಿಂದಿದ್ದೆ. ಯಾಕೆ ಹಾಗಿದೆ ಗೊತ್ತಿಲ್ಲ ಆದರೆ ಅದು ಒರೆಯಾಗೇ ಇದೆ ಅಂತ ಖಗೋಳ ಶಾಸ್ತ್ರಜ್ಞರು ಕಂಡು ಕೊಂಡಿದ್ದಾರೆ. ಹಾಗೆ ಇರುವುದರಿಂದಲೇ ಚಳಿಗಾಲ,ಮಳೆಗಾಲ, ಬೇಸಿಗೆ ಕಾಲಗಳು ಭೂಮಿಯ ಮೇಲೆ ಆಗುತ್ತವೆ. ದೇವರೇ ಹಾಗೆ ಮನುಷ್ಯನಿಗೆ ಅನುಕೂಲ ಆಗಲಿ ಅಂತ ಇಟ್ಟು ಬಿಟ್ಟಿದ್ದಾನೆ ಅಂದಿದ್ದರು. ಆ ದೇವರು ಎಲ್ಲಿರಬಹುದು,ಅವನನ್ನೇ ಕೇಳಿಬಿಡುವುದು ಒಳ್ಳೆಯದೇನೋ, ಯಾವಾಗ ನನಗೆ ಕಾಣುತ್ತಾನೋ ಕೇಳಿಬಿಡುತ್ತೇನೆ ಅಂತ ಯೋಚಿಸುತ್ತಾ ಆಗ ಮಲಗುತ್ತಿದ್ದೆ.
ಮುಂದೆಂದೂ ಮತ್ತೆ ನನ್ನ ತರಗತಿಗಳಲ್ಲಿ ನನ್ನ ನೆಚ್ಚಿನ ಬಣ್ಣ ಬಣ್ಣದ ಭೂಚೆಂಡು ನನಗೆ ಕಾಣಲಿಲ್ಲ. ನಂತರ ಕಲಿತ ಭೂಗೋಳ ತರಗತಿಗಳಲ್ಲಿ ನಕ್ಷೆ ಬಿಡಿಸಿ ಕೇಳುತ್ತಿದ್ದ ದೇಶಗಳ, ಊರುಗಳನ್ನು ಗುರುತಿಸಿ ತೋರಿಸುವುದರಲ್ಲೇ ನನ್ನ ಭೂಗೋಳ ಪಾಠಗಳು ಮುಗಿದು ಹೋಗಿದ್ದವು.
ಸಿವಿಲ್ ಎಂಜಿನಿಯರಿಂಗ್ 3ನೇ ವರ್ಷದಲ್ಲಿ ಸರ್ವೆಯಿಂಗ್ (surveying) ಅಂತ ಇದ್ದ ವಿಷಯದಲ್ಲಿ Astronomical Survey ಅನ್ನುವ ಭಾಗ ಇತ್ತು. ಸೌರಮಂಡಲದ ನಕ್ಷತ್ರಗಳನ್ನು ಆಧಾರವಾಗಿಟ್ಟುಕೊಂಡು ಭೂಮಿಯ ಮೇಲೆ ಕೆಲವಾರು ಸ್ಥಳಗಳನ್ನು ಗುರುತಿಸಲು ಬೇಕಾಗುವ ಜ್ಞಾನವನ್ನು ಈ ವಿಷಯ ತಿಳಿಸುತ್ತದೆ. ಇದನ್ನು ಕಲಿಯುವಾಗ ಮತ್ತೆ ನನ್ನ ಬಾಲ್ಯದ ಕುತೂಹಲ ಮರುಕಳಿಸಿ ಭೂಗೋಳದ ಆಕಾರ, ಚಲಿಸುವ ಪಥ, ಎಷ್ಟು ಓರೆಯಾಗಿದೆ, ಇದರ ಪರಿಣಾಮ ಏನು ಅನ್ನುವಂತಹ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತ್ತು! ಸಿವಿಲ್ ಎಂಜಿನಿಯರ್ ಗಳಿಗೆ ಉತ್ತರ ದಿಕ್ಕು ತುಂಬಾ ಪವಿತ್ರವಾದದ್ದು. ಭೂಮಿಯ ಉತ್ತರ, ಖಗೋಳ ಅಥವಾ ಸೌರಮಂಡಲದ ಉತ್ತರ ಅಂತ ಎರಡು ಉತ್ತರಗಳಿವೆ ಅವುಗಳ ಅಂತರ 23.5 ಡಿಗ್ರಿಗಳು ಅನ್ನುವ ವಿಷಯಕ್ಕೆ ಬುನಾದಿಯೇ ನನ್ನ ಭೂಚೆಂಡಿನ ಓರೆ!!!
ಭೂಮಿಯು ಸೂರ್ಯನ ಸುತ್ತುವ ಪಥವನ್ನು ,ತನ್ನ ಸುತ್ತ ತಿರುಗುವ ಪರಿಯನ್ನು ಪ್ರಪಂಚದ ಎಲ್ಲ ನಾಗರಿಕತೆಗಳ ಖಗೋಳ ಶಾಸ್ತ್ರಜ್ಞರು ಅಚ್ಚರಿಯ ವಿಷಯವಾಗಿಯೇ ಅಭ್ಯಸಿಸಿ, ತಮ್ಮದೇ ಆದ ಜ್ಞಾನದ ಸಿದ್ದಾಂತವನ್ನು ಮಂಡಿಸಿದ್ದಾರೆ. ಹಾಗಾಗಿಯೇ ಬೇರೆ ಬೇರೆ ಹೆಸರುಗಳಿದ್ದರೂ ವಾರಕ್ಕೆ 7 ದಿನಗಳು, ತಿಂಗಳಿಗೆ 4 ವಾರಗಳು, ವರ್ಷಕ್ಕೆ 12 ತಿಂಗಳುಗಳು ಮತ್ತು 365 ದಿನಗಳು ಎನ್ನುವುದು ಸಾರ್ವತ್ರಿಕವಾಗಿ ಪರಿಗಣಿಸಲಾಗಿದೆ. ಭಾರತೀಯರಾದ ನಮ್ಮ ಖಗೋಳ ಶಾಸ್ತ್ರಜ್ಞರು ಈ ಭೂಮಿಯ ಪಥವನ್ನು 12 ಭಾಗಗಳಾಗಿ ಮಾಡಿ ರಾಶಿಗಳು ಅಂತ ಹೆಸರಿಸಿದ್ದಾರೆ. ಮತ್ತೆ ರಾಶಿಗಳನ್ನು 27 ನಕ್ಷತ್ರಗಳಲ್ಲಿ ವಿಭಾಗಿಸಿದ್ದಾರೆ. ಈ ರಾಶಿಗಳೂ, ನಕ್ಷತ್ರಗಳೂ ಭೂಮಿ ಕ್ರಮಿಸುವ ಪಥದ ಕಾಲಮಾನ ,ಋತುಮಾನ ತಿಳಿಸುವ ಒಂದು ಕಾಲ್ಪನಿಕ ವ್ಯವಸ್ಥೆ. ಭೂಮಿಯ ಮೇಲಿನ ಎಲ್ಲ ಖಗೋಳ ಶಾಸ್ತ್ರಜ್ಞರಿಗಿಂತಲೂ ನಮ್ಮವರು ಹೆಚ್ಚು ನಿಖರತೆಯ ಮಾಪನವನ್ನು ರಾಶಿ,ನಕ್ಷತ್ರ,ಪಾದ ಅಂತ ವಿಂಗಡಿಸಿಕೊಂಡು ಕಂಡುಕೊಂಡಿರುವುದು ನಮಗೆಲ್ಲ ಹೆಮ್ಮೆಯ ಮತ್ತು ಅದ್ಭುತ ವಿಷಯ. ಆ ರೀತಿಯ ಮಾಪನದ ಕಲ್ಪನೆಯೇ ನನಗೆ ಇಂದಿಗೂ ಮೈನವಿರೇಳಿಸುವ ವಿಷಯ. ನಿರಂತರ ಖಗೋಳದ ವೀಕ್ಷಣೆ,ವಿಸ್ಮಯಗಳ ದಾಖಲೆಗಳ ಜೊತೆಗೆ ಇದು ಹೀಗೆಯೇ ಆಗಬೇಕು,ಆಗುತ್ತದೆ ಅನ್ನುವ ನಿಖರತೆಗೆ ಬರುವುದು ಇದೆಯಲ್ಲಾ ಅದು ಇಂದಿನ ಯಾವ ಸಂಶೋಧನೆಗಳಿಗೂ ಮೀರಿದ್ದು.
ಸೂರ್ಯ ಆ ರಾಶಿಗೆ ಪ್ರವೇಶ ಆದ,ಈ ರಾಶಿಗೆ ಪ್ರವೇಶ ಆದ ಅನ್ನುವುದು ಕಾಲ್ಪನಿಕ. ನಿಜವಾಗಿ ಸೂರ್ಯ ಚಲಿಸುವುದಿಲ್ಲ. ಚಲಿಸುವುದು ಭೂಮಿ. ಭೂಮಿಯ ಚಲನೆಯಿಂದ ಭೂಮಿಯ ಮೇಲಿರುವ ನಮಗೆ ಸೂರ್ಯ ಚಲಿಸಿದಂತೆ ತೋರುತ್ತಾನೆ ಅಷ್ಟೇ. ಬಸ್ಸುಗಳಲ್ಲಿ ಹೋಗುವ ನಮಗೆ ರಸ್ತೆ ಬದಿಯ ಮರ ಗಿಡಗಳು ಓಡುತ್ತಿವೆ ಅನ್ನುವ ಭಾವ ಇದೆಯಲ್ಲಾ ಹಾಗೆ. ನಮ್ಮ ಕಾಲಮಾನದ ವ್ಯವಸ್ಥೆಗಾಗಿ,ನಾವು ಮಾಡಿಕೊಂಡ ಈ ವಿಧಾನದಲ್ಲಿ ಸೂರ್ಯನ ಚಲನೆಯ ವಿಷಯ ನಿಜವಲ್ಲದಿದ್ದರೂ ವ್ಯವಸ್ಥೆಯ ಪರಿಣಾಮ ನಿಜವಾಗಿದೆ ಅನ್ನುವುದು ಇಂದಿನ ಎಂತಹ ತಾರ್ಕಿಕ ಮನಸ್ಸುಗಳನ್ನೂ ಅಚ್ಚರಿಗೊಳಿಸುತ್ತದೆ! ಹಾಗಾಗಿಯೇ ನಮ್ಮವರು ಇದನ್ನು ಭೂಮಿಯ ಪರಿ ಭ್ರಮಣೆ ಅಂದರು.
ಹೀಗೆ ಭೂಮಿ ಸುತ್ತುವ ಪಥದಲ್ಲಿ ಎರಡು ಕಾಲ್ಪನಿಕ ಸ್ಥಳಗಳು ತುಂಬಾ ಮುಖ್ಯವಾಗಿವೆ. ಯಾಕೆಂದರೆ ಭೂಮಿ ಆ ಸ್ಥಳಗಳಲ್ಲಿ ಬಂದಾಗ ಅಪರೂಪದ ಬದಲಾವಣೆಗಳು ಆಗುತ್ತವೆ. ಆ ಎರಡು ಸ್ಥಳಗಳನ್ನು ನಮ್ಮವರು ಕರ್ಕಾಟಕ ಸಂಕ್ರಮಣ ಮತ್ತು ಮಕರ ಸಂಕ್ರಮಣ ಅಂದಿದ್ದಾರೆ. ಕರ್ಕಾಟಕ ಸಂಕ್ರಮಣದ ದಿನ ವರ್ಷದ ಎಲ್ಲ ದಿನಗಳಿಗಿಂತ ಹೆಚ್ಚು ದೊಡ್ಡದಾದ ದಿನವಾಗಿರುತ್ತದೆ.(13 ಘಂಟೆಗೂ ಮೀರಿ). ಮಕರ ಸಂಕ್ರಮಣದ ದಿನ ಅತಿ ಕಡಿಮೆ ಅವಧಿಯ ದಿನ ಆಗಿರುತ್ತದೆ. ಪಾಶ್ಚಿಮಾತ್ಯರು ಕರ್ಕಾಟಕ ಸಂಕ್ರಮಣವನ್ನು Summer solstice(ದಕ್ಷಿಣಾಯನ) ಅಂತಲೂ ಮಕರ ಸಂಕ್ರಮಣ ವನ್ನು Winter solstice (ಉತ್ತರಾಯಣ) ಅಂತಲೂ ಕರೆದಿದ್ದಾರೆ.
ಸೂರ್ಯನನ್ನು ಮಧ್ಯೆ ಇಟ್ಟು ಕಲ್ಪಿಸಿಕೊಂಡು ಹೇಳುವುದಾದರೆ, ಮಕರ ಸಂಕ್ರಮಣ ದ ದಿನದಿಂದ ಭೂಮಿ ಮೇಲಕ್ಕೆ ಅಂದರೆ ಉತ್ತರಕ್ಕೆ ಚಲಿಸುತ್ತದೆ. ಹಾಗಾಗಿ ನಮ್ಮವರು ಇದನ್ನು ಉತ್ತರಾಯಣ ಅಂದಿದ್ದಾರೆ. ಹಾಗೆಯೇ ಕರ್ಕಾಟಕ ಸಂಕ್ರಮಣದ ದಿನದಿಂದ ಭೂಮಿ ಕೆಳಕ್ಕೆ ಅಂದರೆ ದಕ್ಷಿಣಕ್ಕೆ ಚಲಿಸುತ್ತದೆ. ಅದಕ್ಕೆ ದಕ್ಷಿಣಾಯಣ ಅಂದಿದ್ದಾರೆ.
ಜನವರಿ 14 ಮಕರ ಸಂಕ್ರಮಣ. ಸಂಕ್ರಮಣ ಅಂದರೆ ಪ್ರವೇಶ. ಕಲ್ಪನೆಯ ಪಥವನ್ನು 12 ವಿಭಾಗ ಮಾಡಿ ಒಂದೊಂದಕ್ಕೂ ಒಂದು ರಾಶಿ ಹೆಸರು ಇಟ್ಟರಲ್ಲ, ಹಾಗೆ ಇಟ್ಟ ಮಕರ ರಾಶಿಯ ಜಾಗಕ್ಕೆ ಇಂದಿನಿಂದ ಸೂರ್ಯ ಪ್ರವೇಶ ಆಗುತ್ತಾನೆ ಅಂತ ಭಾಸ ಮಾಡಿಕೊಂಡಿರುವುದು.
ನಮ್ಮವರು ಉತ್ತರಾಯಣ, ಮಕರ ಸಂಕ್ರಾಂತಿ ಒಂದೇ ದಿನ ಅಂತ ಹೇಳಿದರು. ಈಗಿನ ಅರ್ಥದಲ್ಲಿ ಉತ್ತರಾಯಣ ಡಿಸೆಂಬರ್ 22,2020 ರಂದು ಶುರುವಾಗಿದೆ. (Winter solstice) ಉತ್ತರಾಯಣಕ್ಕೆ ನಮ್ಮವರು ಬಹಳ ಪ್ರಾಶಸ್ತ್ಯ ಕೊಟ್ಟು ಸ್ವರ್ಗದ ಬಾಗಿಲು ತೆರೆದಿರುತ್ತದೆ ಅಂತ ಹೇಳಿದರು. ಭೀಷ್ಮಾಚಾರ್ಯರು 58 ದಿನ ಶರಪಂಜರದಲ್ಲಿ ಮಲಗಿ ಉತ್ತರಾಯಣ ಬರುವುದಕ್ಕೆ ಕಾದು ದೇಹ ತ್ಯಾಗ ಮಾಡಿದರು ಅಂತ ಹೇಳಿ ಇದರ ಪ್ರಾಮುಖ್ಯತೆಯನ್ನು ನಮಗೆಲ್ಲ ಹೇಳಿದ್ದಾರೆ. ಅದೇನೇ ಇದ್ದರೂ ಡಿಸೆಂಬರ್ 21/22 ರಿಂದ ಜೂನ್ 21/22 ರ ವರೆಗೆ ಭೂಮಿಯ ವಾತಾವರಣ ಹಿತವಾಗಿರುತ್ತದೆ ಅನ್ನುವುದು ನಮಗೆಲ್ಲ ತಿಳಿದ ವಿಷಯವಾಗಿದೆ.
ನಮ್ಮವರು ಉತ್ತರಾಯಣದ ಪುಣ್ಯದಿನ, ಮಕರ ಸಂಕ್ರಾಂತಿಯ ದಿನ ಒಂದೇ ಅಂತ ಯಾಕೆ ಹೇಳಿದರು ಅಂತ ನೋಡಿದರೆ ಅದರ ಕಾರಣವನ್ನು ಹೇಳುವುದೇ ಈ ನನ್ನ ಭೂಚೆಂಡಿನ ಓರೆ!!
ಭೂಗೋಳದ ಓರೆ 22.2 ಡಿಗ್ರಿ ಇಂದ 24.5 ಡಿಗ್ರಿಗಳ ವರೆಗೆ 41 ಸಾವಿರ ವರ್ಷಗಳ ಅಂತರದಲ್ಲಿ ವಾಲುತ್ತದೆ. ನೂರು ಇನ್ನೂರು ವರ್ಷಗಳ ವರೆಗೆ ಈ ವಾಲುವಿಕೆಯ ಪರಿಣಾಮ ಅಷ್ಟಾಗಿ ಗೋಚರಿಸುವುದಿಲ್ಲ. ಈಗಿನ ಶತಮಾನದಲ್ಲಿ ಇದರ ವಾಲುವಿಕೆ 23.5 ಡಿಗ್ರಿ ಇದೆ. ಇದರ ವಾಲುವಿಕೆ 22.5 ರಿಂದ 23 ರ ಮಧ್ಯೆ ಇರುವಾಗ ನಮ್ಮವರು ಉತ್ತರಾಯಣ,ಮಕರ ಸಂಕ್ರಾಂತಿ ಒಂದೇ ದಿನ ಬಂದದ್ದನ್ನು ನೋಡಿಕೊಂಡು, ಎರಡನ್ನೂ ಒಂದೇ ದಿನಕ್ಕೆ ಹೇಳಿರಬಹುದಾದ ಅಂಶ ಗೊತ್ತಾಗುತ್ತದೆ. ಇದರ ಆಧಾರದ ಮೇಲೆ ಹೇಳುವುದಾದರೆ ಹೀಗೆ ಹೇಳಿ ಅಥವಾ ಆಚರಣೆ ಬಂದು ಸುಮಾರು ಸಾವಿರ ವರ್ಷಗಳು ಕಳೆದಿರಬಹುದು.
ವರ್ಷಕ್ಕೆ 12 ಸಂಕ್ರಮಣಗಳು ಇದ್ದರೂ(ಪ್ರತಿ ರಾಶಿಯಲ್ಲಿ ಸೂರ್ಯನ ಪ್ರವೇಶವನ್ನು ಆಯಾಯ ರಾಶಿಯ ಸಂಕ್ರಮಣ ಎಂದೇ ಕರೆಯುವುದು) . ನಾಳೆ ಈ ಭೂಚೆಂಡಿನ ಓರೆ ಸೂರ್ಯನ ವಿರುದ್ಧ ದಿಕ್ಕಿಗೆ ಇರುವುದರಿಂದ ನೇರವಾಗಿ ಭೂಮಿಯ ಮೇಲಿರುವ ಮಕರ ಸಂಕ್ರಾಂತಿ ರೇಖೆಯ ಮೇಲೆ ಬೀಳುವ ಸೂರ್ಯನ ರಶ್ಮಿಗಳು ವರ್ಷದ ಅತೀ ಕಡಿಮೆ ಅವಧಿಯ ದಿನವನ್ನಾಗಿಸಿ, ದೀರ್ಘ ರಾತ್ರಿಯ ದಿನವಾಗಿಸುವುದು ಇದರ ಮೂಲ ವೈಶಿಷ್ಟವಾಗಿದೆ. ವರ್ಷಕ್ಕೊಮ್ಮೆ ಬರುವ ಇಂತಹ ಖಗೋಳ ಕೌತುಕವನ್ನು ಸಂಭ್ರಮಿಸುವುದು ಸಹಜವಾಗಿದೆ.
ಉತ್ತರಾಯಣದ ಅತೀ ಕಡಿಮೆ ಅವಧಿಯ ದಿನ, ದಿನೇ ದಿನೇ ವೃದ್ಧಿಗೊಳ್ಳುತ್ತಾ, ದಕ್ಷಿಣಾಯಣ ದಿನದಂದು ಅತೀ ದೀರ್ಘ ದಿನವಾಗುತ್ತದೆ. ಹಾಗಾಗಿ ಈ ದಿನ ವೃದ್ಧಿಕಾಲವನ್ನು ನಮ್ಮವರು ವೃದ್ಧಿಯ ವಿಶೇಷತೆ ಅಂತ ಭಾವಿಸಿ, ಈ ಕಾಲಕ್ಕೆ ಮಹತ್ವ ಕೊಟ್ಟಿದ್ದಾರೆ.
ಭಾರತದ ಭೂ ಭಾಗದಲ್ಲಿ ಇದರ ಪರಿಣಾಮ ಹೆಚ್ಚು,ಕಡಿಮೆ ಒಂದೇ ತೆರನಾಗಿ ಇರುವುದರಿಂದ ಈ ದಿನವನ್ನು ಬೇರೆ ಬೇರೆ ಹೆಸರುಗಳಿಂದ ಕರೆದುಕೊಂಡು ದೇಶದಾದ್ಯಂತ ಸಡಗರದಿಂದ ಆಚರಿಸುತ್ತಿರುವುದು ನಮ್ಮ ಖಗೋಳ ಶಾಸ್ತ್ರಜ್ಞರ ವಿದ್ವತ್ತಿಗೆ ತೋರುವ ಗೌರವವಾಗಿ ನನಗೆ ತೋರುತ್ತಿದೆ.
ಎಲ್ಲರಿಗೂ ಮಕರ ಸಂಕ್ರಾಂತಿ ಶುಭಾಶಯ.
Photo by fotografierende from Pexels
ಖಗೋಳ ಚಟುವಟಿಕೆಗಳ ಬಗ್ಗೆ ನಿಖರ ಸ್ಪಷ್ಟನೆ ನೀಡಲು ಚಲನೆಗಳ ಪರಿಕಲ್ಪನೆ, ನಿರಂತರ ಏಕಾಗ್ರತೆಯ ಚಿಂತನೆಯಿಂದ ಸಾಧ್ಯ. ನಿನ್ನೆಲ್ಲ ಸುದೀರ್ಘ ಚಿಂತನೆಗಳ ಸಾರ ಸಂಕ್ರಾಂತಿಯ ಸಂಕ್ರಮಣದ ಸಂಕೀರ್ಣತೆಯನ್ನು ಸರಳವಾಗಿ ಆಸಕ್ತಿ ಕೆರಳುವಂತೆ ಪ್ರಸ್ತುತಪಡಿಸಿದ್ದೀಯ.
ನಿನ್ನ ಲೇಖನಮಾಲೆಗೆ ಧನ್ಯವಾದಗಳು
ವಿಷಯ ತುಂಬಾ ಸರಳವಾಗಿ ವಿವರಿಸಿದ್ದೀಯ👍. ಹಾಗಾಗಿ ನನ್ನ ಪರಿಚಯದ ಕೆಲವು ಹೈಸ್ಕೂಲ್ ಮಕ್ಕಳಿಗೆ ಫಾರ್ವರ್ಡ್ ಕೂಡಾ ಮಾಡಿದೆ🙏
👌.. ಇದರಲ್ಲಿ ಎಷ್ಟೋ ವಿಷಯಗಳು ನನಗೂ ಗೊತ್ತಿರಲಿಲ್ಲ ವಿವರವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು
Nicely explained 👌👌🙏
ಮಕರ ಸಂಕ್ರಾಂತಿಯ ಬಗೆಗಿನ ನಿಮ್ಮ ಬರಹ ಮಾಹಿತಿಪೂರ್ಣ ವಾಗಿದ್ದು ಅಭಿನಂದನೆಗಳು💐💐
ಲೇಖನ ತುಂಬಾ ಚನ್ನಾಗಿ ಬಂದಿದೆ ನಿಮ್ಮ ನೆನಪಿನ ಶಕ್ತಿ ಅದ್ಭುತ. ನನಗು ಗ್ಲೊಬ್ ನೋಡಿದಾಗ ಯಾಕೆ ಇದು ಹೀಗೆ ಇದೆ ಅಂತ ಅನಿಸಿ ಮೇಸ್ಟ್ರು ಬಂದಾಗ ಕೇಳಿದೆ ಅವರು ನಮ್ಮ ಹಳ್ಳಿಯವರೇ ಆದ್ರೆ ಅವರು ಉತ್ತರ ಹೇಳದೆ ತಲೆಹರಟೆ ನೀನು ಕುತ್ಕೋ ಅಂದ ನೆನಪು ಆಮೇಲೆ ಮುಂದಿನ ತರಗತಿ ಗೆ ಹೋದಾಗ ತಿಳೀತು. ಭೂಮಿ ಮೊಟ್ಟೆ ಆಕಾರ ದಲಿದೆ ಹಾಗೆ ಹೀಗೆ ಏನು ಬಗೆಯರಿಯದ ಗೊಂದಲ. ನಿಮ್ಮ ಲೇಖನ ಮತ್ತೆ ನನ್ನನ್ನು ಹಳೆ ನೆನಪು ಗಳ್ಳನ್ನು ಸ್ಮರಣೆ ಮಾಡುವಂತ್ತೆ ಮಾಡಿತು. ಧನ್ಯವಾದಗಳು
Namaste sir. 🙏
The depth of your knowledge is really amazing. I am really zapped & in a sort of awe / wonderment today about ur article.
I am really feeling you are one of the *finest* *writer* in the Kannada literature in present era. Honestly I am not praising you. Very proud of you sir. 👌👏
Sorry for responding you lately to this excellent article on the occasion of Makar Sankranti.
Really a wonderful experience to go through your article.
Have a great time sir
🙏🙏👍👍🌹🌺🇮🇳