ಸಂದೇಶ ಕಳೆಸುವ ಹಾಗು ಉತ್ತರಿಸುವ ಪದ್ಧತಿ ಪ್ರಾಚೀನಕಾಲದಿಂದಲೂ ನಡೆದುಕೊಂಡು ಬಂದಿದೆ. ಮನುಷ್ಯ ಸಂವೇದನಾ ಶೀಲ. ತನ್ನ ಸಂವೇದನೆಯನ್ನು ಹಲವಾರು ವಿಧದಲ್ಲಿ ಹಂಚಿಕೊಳ್ಳುವುದು, ಆಯಾ ಕಾಲಕ್ಕೆ ತಕ್ಕಂತೆ ಪರಿಷ್ಕರಿಕೊಳ್ಳುತ್ತಾ ಹೋಗಿದ್ದಾನೆ. ಮೊದಮೊದಲು ಹಂಸ ಪಕ್ಷಿ, ಪಾರಿವಾಳ, ಗಿಡುಗ, ತಾಳೆಗರೆ, ತಾಮ್ರ ಹಾಳೆ, ಬಟ್ಟೆ ಲಕೋಟೆ ಯಲ್ಲಿ ಸಂದೇಶ ವಿನಿಮಯ ನೆಡೆಯುತ್ತಿತ್ತು. ಕೈಗಾರಿಕಾ ಕ್ರಾಂತಿ ಶುರುವಾದ 19ನೇ ಹಾಗು 20ನೇ ಶತಮಾನದಿಂದ ಮಾನವ ಕಾಗದದಲ್ಲಿ ಪತ್ರ ವ್ಯವಹಾರ 1990ನೆೇ ವರೆಗೆ ನಡೆಸುತ್ತಾ ಬಂದ. ಆ ನಂತರ ಪತ್ರ ರಹಿತ ಸಂದೇಶ ರವಾನೆ ಹೆಚ್ಚು ಜನಪ್ರಿಯವಾಯಿತು.
1990 ರ ದಶಕದಲ್ಲಿ ಆವಿಷ್ಕಾರ ಗೊಂಡ ಇ ಮೇಲ್ ಶೀಘ್ರದಲ್ಲಿ ಸಂದೇಶ ವಿನಿಮಯಕ್ಕೆ, ಹೊಸ ರೂಪ ತಂದು ಕೊಟ್ಟಿತ್ತು. ನಂತರ ಸಣ್ಣ ಸಂದೇಶ ಸೇವೆ -sms -ಮೊಬೈಲ್ ನಲ್ಲಿ ಪ್ರಾರಂಭ ವಾದಮೇಲೆ ಕಂಪ್ಯೂಟರ್ ಸಹಾಯವಿಲ್ಲದೆ, ಕೈಯಲ್ಲಿರುವ ಮೊಬೈಲ್ ನಲ್ಲೆ ಶೀಘ್ರವಾಗಿ ಸಂದೇಶ ವಿನಿಮಯ ಮತ್ತೊಂದು ಕ್ರಾಂತಿಯನ್ನು ಸೃಷ್ಟಿಸಿತು. ಜೊತೆಗೆ ಒಂದು ಸಂದೇಶಕ್ಕೆ ಇಂತಿಷ್ಟು ಹಣ ನಿಗದಿ ಮಾಡಿ ಅದರಿಂದ ಹೆಚ್ಚು ಆದಾಯವನ್ನು ಸೇವಾ ಪೂರೈಕೆದಾರರಿಗೆ ತಂದು ಕೊಟ್ಟಿತು.
ಹೊಸ ಹೊಸ ಆವಿಷ್ಕಾರ ಮಾನವನಿಗೆ ಬಹು ಉಪಯೋಗಿ ಯಾಗತೊಡಗಿದ್ದು ಅಂತರ್ಜಾಲ ಕ್ರಾಂತಿಯ ನಂತರ. ಅಂತರ್ಜಾಲದ ಮಾಯಾಲೋಕದಲ್ಲಿ ಯಾವುದಿಲ್ಲ ಎನ್ನುವ ಹಂತಕ್ಕೆ ಬಂದಾಗ, ಹೆಚ್ಚುವೆಚ್ಚವಿಲ್ಲದೆ ಹೆಚ್ಚು ಹೆಚ್ಚು ಸಂದೇಶಗಳನ್ನೂ ಕಳುಹಿಸಬಹುದಾದ, ಹೊಸ ವಿಧಾನದ ಭಾಗವಾಗಿ ಅತ್ಯಂತ ವೇಗವಾಗಿ ಎಲ್ಲರ ಮೊಬೈಲ್ ಸೇರಿದ್ದು ‘ವಾಟ್ಸ್ ಆಪ್ ‘.
ಮೊದಮೊದಲು ಕೇವಲ ಸಂದೇಶ ರವಾನೆಗೆ ಸೀಮಿತವಾಗಿದ್ದ ಸೇವೆ, ನಂತರದ ದಿನಗಳಲ್ಲಿ ಇಂಟರ್ ನೆಟ್ ಕರೆ, ಇಂಟರ್ ನೆಟ್ ವಿಡಿಯೋ ಕರೆ, ಇಂಟರ್ ನೆಟ್ ಮೂಲಕ ವ್ಯವಹಾರ ನಡೆಸುವಷ್ಟರ ಮಟ್ಟಿಗೆ ಜನರಿಗೆ ಹತ್ತಿರವಾಗತೊಡಗಿತು. ಅದರಂತೆ ಇಂಥಾ ಸಂದೇಶ ರವಾನೆಯಾಗ ಬೇಕಾದರೆ ವೈಯಕ್ತಿಕ ಮಾಹಿತಿ ಸೋರತೊಡಗಿತು ಎನ್ನುವ ಆತಂಕ ಸೃಷ್ಟಿಯಾಯಿತು. ಕೊನೆಗೆ ಸರ್ಕಾರದ ಆದೇಶದಂತೆ ಯಾವುದೇ ಸಂದೇಶ ಸೋರಿಕೆ ಯಾಗದಂತೆ ಎಂಡ್ ಟು ಎಂಡ್ encription ಮಾಡಿ ಬಳಕೆದಾರರ ಆತಂಕವನ್ನು ವಾಟ್ಸಪ್ ದೂರ ಮಾಡಿತ್ತು.
ಆದರೆ ವೈಯಕ್ತಿಕ ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ಆತಂಕ ಮೊದಲಿನಿಂದಲೂ ಇದ್ದರೂ ಈಗ ವಾಟ್ಸ್ ಆಪ್ ವ್ಯವಹಾರ ವಿಸ್ತರಿಸಲು, ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಫೇಸ್ ಬುಕ್ ಗೆ ವಿನಿಮಿಮಯ ಮಾಡಿಕೊಳ್ಳುಲು ಹವಣಿಸುತ್ತಿದ್ದು ಅದನ್ನು ಒಪ್ಪಿದರೆ ಮಾತ್ರ ಮುಂದೆ ವಾಟ್ಸ್ ಆಪ್ ಉಪಯೋಗಿಸಬಹುದು ಇಲ್ಲವಾದರೆ ಸೇವೆ ಸ್ಥಗಿತ ಗೊಳ್ಳುತ್ತದೆ ಎಂಬ ವಿಷಯ ಗ್ರಾಹಕರನ್ನು ಚಿಂತೆಗೀಡುಮಾಡಿದೆ.
ಮುಂದೇನು ಎಂದು ಹುಡುಕುವಾಗ ಎಲ್ಲರ ಕಣ್ಣಿಗೆ ಬಿದ್ದಿದ್ದು ಹೊಸ ಆಪ್ ‘ಸಿಗ್ನಲ್’ ಹಾಗು ಹಲವು ವರ್ಷಗಳಿಂದ ಭಾರತದಲ್ಲಿ ಹೆಚ್ಚು ಉಪಯೋಗಿಸುವ ಆಪ್ ‘ಟೆಲಿಗ್ರಾಂ’.
ಯಾರು ಹಿತವರು ವಾಟ್ಸ್ ಆಪ್, ಸಿಗ್ನಲ್, ಟೆಲಿಗ್ರಾಂ ಈ ಮೂವರೊಳಗೆ. ಬನ್ನಿ, ಈ ಮೂರೂ ಆಪ್ ಹೇಗೆ ಕಾರ್ಯ ನಿರ್ವಹಿಸುತ್ತವೆ ಹಾಗು ಎಷ್ಟರ ಮಟ್ಟಿಗೆ ವೈಯಕ್ತಿಕ ವಿಷಯಗಳನ್ನು ಸಂಗ್ರಹಿಸುತ್ತವೆ ಹಾಗೂ ಯಾವುದು ಹೆಚ್ಚು ಸುರಕ್ಷಿತ ಎಂಬುದನ್ನುಅರಿತುಕೊಳ್ಳೋಣ.
ಮೇಲೆ ತಿಳಿಸಿದ ಮೂರೂ ಆಪ್ ಗಳು ನೋಡಲು ಒಂದೇ ತರನಾಗಿದ್ದರೂ ಅವುಗಳದೇ ಆದ ಅನುಕೂಲಗಳು ಹಾಗು ಅನಾನುಕೂಲಗಳು ಇವೆ. ಅದಕ್ಕಿಂತ ಹೆಚ್ಚಾಗಿ ಇಡೀ ಪ್ರಪಂಚದಲ್ಲಿ ಎಲ್ಲರೂ ಸಾಮಾನ್ಯವಾಗಿ ಉಪಯೋಗಿಸುತ್ತಿರುವುದು ವಾಟ್ಸ್ ಆ್ಯಪ್. ಅದರಲ್ಲೂ ಈಗಾಗಲೇ ತಮ್ಮದೇ ಆದ ಗ್ರೂಪ್ ಗಳನ್ನು ಮಾಡಿಕೊಂಡು ಬಳಸುತ್ತಿರುವವರು ಬೇರೆ ಅಪ್ಲಿಕೇಶನ್ ಗಳಿಗೆ ಅಷ್ಟು ಬೇಗ ಬದಲಾಯಿಸಿಕೊಳ್ಳುವುದು ಸುಲಭವಲ್ಲ.
ನಾವು ಒಪ್ಪಿದ ನಿಯಮಗಳು ಹಾಗು ಷರತ್ತುಗಳ ಪ್ರಕಾರ ಸಧ್ಯ ವಾಟ್ಸ್ ಪ್ ಕೆಳಗಿನ ನಮ್ಮ ವೈಯಕ್ತಿಕ ವಿವರಗಳನ್ನು ಸಂಗ್ರಹಿಸಿ ಉಪಯೋಗಿಸುತ್ತಿದೆ. ಹೆಸರು, ವಯಸ್ಸು, ಇಮೇಲ್ ಐಡಿ, ಜೆಂಡರ್, ಫೋನ್ ನ ಡಿವೈಸ್ ಐಡಿ, ಲೊಕೇಶನ್ ಐಡಿ, ಪೇಮೆಂಟ್ ಯಾವ್ಯಾವ ರೀತಿ ಮಾಡಿದ್ದೀರಿ ಅನ್ನೋ ವಿಷಯ , ಕೊಂಡು ವಸ್ತುಗಳ ವಿವರ ಹಾಗು ಇತಿಹಾಸ, ಜಾಹಿರಾತಿನ ವಿಷಯ ನಮಗೆ ಅರಿವಿಲ್ಲದಂತೆ ದಿನ ನಿತ್ಯ ಕ್ರೋಢೀಕರಿಸುತ್ತದೆ. ಜೊತೆಗೆ ವಾಟ್ಸ್ ಆಪ್ ಫೇಸ್ ಬುಕ್ ನ ಅಂಗ ಸಂಸ್ಥೆಯಾಗಿರುವುದರಿಂದ ನಿಮ್ಮ ಎಲ್ಲಾ ಮಾಹಿತಿ ಫೇಸ್ ಬುಕ್ ಜೊತೆ ವಿನಿಮಯ ಮಾಡಿಕೊಳ್ಳುವುದಾಗಿ ಹೇಳುತ್ತಿದೆ. ಅದಕ್ಕೆ ಒಪ್ಪಿದರೆ ಸೇವೆ ಮುಂದರಿಯಲಿದೆ ಎನ್ನುತ್ತದೆ. ಫೇಸ್ ಬುಕ್ ಸಾಮಾಜಿಕ ಜಾಲ ತಾಣವಾಗಿರುವುದರಿಂದ ತಮ್ಮ ವೈಯಕ್ತಿಕ ಗೋಪ್ಯತೆಗೆ ಅಪಾಯ ಎಂಬುದು ಕೆಲ ತಜ್ಞರ ಅಭಿಪ್ರಾಯ.
ಒಂದು ಉದಾಹರಣೆ ಕೊಡುವುದಾದರೆ: ಇಂದು ನೀವು ವಾಟ್ಸ್ ಆಪ್ ನಲ್ಲಿ ಯಾವೊದೋ ಒಂದು ವಸ್ತುವನ್ನು ಕೊಂಡುಕೊಳ್ಳಲು ಸಂದೇಶ ಕಳುಹಿಸಿದರೆ ಆ ವಿಷಯ ಫೇಸ್ ಬುಕ್ ಜೊತೆ ಹಂಚಿಕೆಯಾಗಬಹುದು. ಆಗ ನಿಮ್ಮ ಫೇಸ್ ಬುಕ್ ಖಾತೆಗೆ ಅಲ್ಲಿ, ನೀವು ಹುಡುಕಿದ/ ಹುಡುಕುವ ವಸ್ತುಗಳ ಮಾರಾಟಗಾರರ ಹಲವಾರು advertisements ಲಿಂಕ್ ಗಳು ಬರಲು ಪ್ರಾರಂಭಿಸುತ್ತವೆ. ಒಂದು ಪಕ್ಷ ಆ ವಸ್ತು ಕೊಂಡರೆ, ಯಾವ ವಸ್ತು ಎಷ್ಟು ಹಣ ಕೊಟ್ಟು ಕೊಂಡಿರಿ, ಯಾವ ಬ್ಯಾಂಕ್ ಯಿಂದ ಆ ಹಣ ವರ್ಗಾವಣೆಯಾಯಿತು ಹಾಗು ತಿಂಗಳಿಗೆ ಎಷ್ಟು ಈ ರೀತಿ ವಸ್ತುಗಳನ್ನು ಕೊಂಡುಕೊಳ್ಳುತ್ತಾರೆ ಮತ್ತೆ ತಿಂಗಳಿಗೆ ಎಷ್ಟು ಹಣ ವ್ಯಯಿಸುತ್ತಾರೆ ಎಂಬುವುದನ್ನು ಅತಿ ಸುಲಭವಾಗಿ ತಿಳಿದುಕೊಳ್ಳಬಹುದು. ಜೊತೆಗೆ ಈ ತಿಂಗಳಲ್ಲಿ ನೀವು ಯಾವ ಯಾವ ಸ್ಥಳಗಳಿಗೆ ಭೇಟಿ ಕೊಟ್ಟಿದ್ದೀರಿ, ಎಷ್ಟು ಹೊತ್ತು ಇದ್ದೀರಿ ಎಂಬುದು ನಮಗೆ ಅರಿವಿಲ್ಲದಂತೆ ಈ ಆ್ಯಪ್ ಗಳು ಸಂಗ್ರಹಿಸುತ್ತವೆ.
ಬಿಸ್ನಸ್ ಅಕೌಂಟಿಗೆ ಸಂಬಂಧಿಸಿದಂತೆ ಮಾತ್ರ ಪಾಲಿಸಿ ಬದಲಾಗುತ್ತದೆ . ತಾನು ಯಾರ ವೈಯಕ್ತಿಕ ಮಾಹಿತಿಯ ಬಗ್ಗೆಯೂ ತಲೆ ಹಾಕುವುದಿಲ್ಲ ಎಂದು ವಾಟ್ಸ್ ಪ್ ಹೇಳುತ್ತಿದೆ. ಕೇವಲ ಬಿಸಿನೆಸ್ ಗೆ ಸಂಬಂಧಿಸಿದ ಅಕೌಂಟ್ ಗಳ ಬಗ್ಗೆ ಮಾತ್ರ ಹೊಸ ನಿಯಮ ಅಪ್ಲೆಯಾಗುತ್ತದೆ. ಅದು ಕೂಡ ಬಿಸ್ನೆಸ್ ಗೆ ಹೆಲ್ಪ್ ಮಾಡಲು ಎಂದು ವಾಟ್ಸಾಪ್ ಹೇಳುತ್ತಿದೆ. ಈಗ ವಾಟ್ಸಾಪ್ ಏನು ಹೇಳುತ್ತಿದೆ ನೋಡಿ.
ಅದಕ್ಕೀಗ ಪ್ರತಿಸ್ಪರ್ಧಿಯಾಗಿ ಬಂದಿರುವ ಸಿಗ್ನಲ್ ತಾನು ಯಾವುದೇ ಮಾಹಿತಿ ಹಂಚುವುದಿಲ್ಲ ಹಾಗೂ ಸಂಗ್ರಹಿಸುವುದೂ ಇಲ್ಲ ಎಂದು ಹೇಳುತ್ತಿದೆ. ಯಾರಿಗೆ ಗೊತ್ತು ಮುಂದೆ ಅದು ಯಾವ ದಾರಿ ಹಿಡಿಯುವುದೋ. ವಾಟ್ಸಪ್ ಕೂಡ ಗೋಪ್ಯತೆ ವಿಚಾರದಲ್ಲಿ ಬಳಕೆದಾರರು ಆತಂಕ ಪಡಬೇಕಿಲ್ಲ ಎಂದಿದೆ.
ವಾಟ್ಸಾಪ್ ಡಿವೈಸ್ ಐಡಿ, ಯೂಸರ್ ಐಡಿ, ಫೋನ್ ನಂಬರ್, ಇ ಮೇಲ್, ಕಂಟಾಕ್ಟ್ಸ್, ಅಡವರ್ಟೈಸಿಂಗ್ ಡಾಟಾ, ಪೇ ಮೆಂಟ್ ಮಾಹಿತಿ ಇತ್ಯಾದಿಗಳನ್ನು ಸಂಗ್ರಹಿಸುತ್ತದೆ. ಸಿಗ್ನಲ್ ನಿಮ್ಮ ಪೋನ್ ನಂಬರನ್ನು ಮಾತ್ರ ಸಂಗ್ರಹಿಸುತ್ತದೆ. ಟೆಲಿಗ್ರಾಮ್ ಯೂಸರ್ ಐಡಿ ಮತ್ತು ಫೋನ್ ನಂಬರ್ ಮಾತ್ರ ಸಂಗ್ರಹಿಸುತ್ತದೆ. ಇವೆರಡಕ್ಕೆ ಹೋಲಿಸಿದರೆ ವಾಟ್ಸಾಪ್ ಸಂಗ್ರಹಿಸುವ ಡೇಟಾ ಹೆಚ್ಚು.
ಟ್ವಿಟರ್ ನಲ್ಲಿ ಹರಿದಾಡುತ್ತಿರುವ ಈ ಮಾಹಿತಿ ನೋಡಿ
ವಾಟ್ಸಪ್ ನ ಹೊಸ ಪಾಲಿಸಿ ಪ್ರಕಟಿಸಿದ ನಂತರ ಟೆಲಿಗ್ರಾಂನ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಜನರು ತಮ್ಮ ವೈಯಕ್ತಿಕ ಮಾಹಿತಿ ಸೋರಿಕೆಯಾಗುವುದನ್ನು ಬಯಸುವುದಿಲ್ಲ ಎಂದು ಟೆಲಿಗ್ರಾಂ ಸಂಸ್ಥಾಪಕ ಪಾವೆಸ್ ದುರವ್ ಹೇಳಿದ್ದಾರೆ. ಅವರ ಪ್ರಕಾರ ಟೆಲಿಗ್ರಾಂ ನಲ್ಲಿ ವೈಯಕ್ತಿಕ ಮಾಹಿತಿ ಸೇಫ್.
ಹೀಗಾಗಿ ಗೋಪ್ಯತೆಯನ್ನು ಕಾಪಾಡುವ ಮೊಬೈಲ್ ಆಪ್ ಗಳನ್ನೂ, ಸಂದೇಶ ವಿನಿಮಯಕ್ಕಾಗಿ ಉಪಯೋಗಿಸಿದರೆ ಉತ್ತಮ. ಯಾವ ಆಪ್ ನಮ್ಮ ವೈಯಕ್ತಿಕ ವಿವರ ಸಂಗ್ರಹಿಸುವುದಿಲ್ಲವೋ, ಯಾವ ಆಪ್ ನಮ್ಮ ವಿವರಗಳನ್ನು ಬೇರೆಯವರ ಜೊತೆ ಹಂಚಿಕೊಳ್ಳುವುದಿಲ್ಲವೋ, ಯಾವ ಆಪ್ ನಾವು ಕಳುಹಿಸುವ ಸಂದೇಶ, ಚಿತ್ರ, ವಿಡಿಯೋ, ಕಾಲ್ ವಿವರ ಸಂಗ್ರಹಿಸಿ ಇಡುವುದಿಲ್ಲವೋ ಅಂಥಾ ಆಪ್ ಗಳನ್ನೂ ಉಪಯೋಗಿಸುವುದು ಸುರಕ್ಷಿತ ದೃಷ್ಟಿಯಿಂದ ಉತ್ತಮ. ಭಾರತ ಸರಕಾರ ಈ ಬಗ್ಗೆ ಎದ್ದಿರುವ ಗೊಂದಲಗಳಿಗೆ ಅಧಿಕೃತವಾಗಿ ತೆರೆ ಎಳೆಯಬೇಕಿದೆ.
ಈ ಎಲ್ಲಾ ವಿಷಯಗಳನ್ನು ಪರಿಗಣಿಸಿ ನೀವೇ ನಿರ್ಧರಿಸಿ.
ಯಾರು ಹಿತವರು ವಾಟ್ಸ್ ಆಪ್, ಸಿಗ್ನಲ್, ಟೆಲಿಗ್ರಾಂ ಈ ಮೂವರೊಳಗೆ. !