26.6 C
Karnataka
Friday, November 22, 2024

    ಪ್ರಥಮ ಪಿಯು ಆರಂಭಕ್ಕೆ ಪ್ರಿನ್ಸಿಪಾಲರ ಒತ್ತಾಯ;ಶೀಘ್ರ ನಿರ್ಧಾರ ಎಂದ ಸುರೇಶ್ ಕುಮಾರ್

    Must read

    ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ಪೋಷಕರ ಮತ್ತು ವಿದ್ಯಾರ್ಥಿಗಳ ಹೆಚ್ಚಿನ ಒತ್ತಡದ ಹಿನ್ನೆಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದ ಪ್ರಥಮ ಪದವಿಪೂರ್ವ ತರಗತಿಗಳನ್ನು ಶೀಘ್ರದಲ್ಲೇ ಆರಂಭಿಸಬೇಕೆಂದು ವಿವಿಧ ಜಿಲ್ಲೆಗಳ ಪ್ರಾಚಾರ್ಯರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ.

    ದ್ವಿತೀಯ ಪಿಯು ತರಗತಿಗಳ ಆರಂಭದ ಪ್ರಗತಿ ಕುರಿತು ಬುಧವಾರ ಬೆಂಗಳೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ಆಯ್ದ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರಥಮ ಪಿಯು ತರಗತಿಗಳನ್ನು ತಕ್ಷಣವೇ ಆರಂಭಿಸಬೇಕೆಂದು ಆಗ್ರಹಿಸಿದರು.

    ಪ್ರಾಚಾರ್ಯರ ಎಲ್ಲ ಅಭಿಪ್ರಾಯಗಳನ್ನು ಆಲಿಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಪ್ರಥಮ ಪಿಯು ತರಗತಿ ಆರಂಭಿಸುವ ಕುರಿತು ತಮ್ಮ ಇಲಾಖೆ ರಾಜ್ಯ ಕೋವಿಡ್ ತಾಂತ್ರಿಕ ಸಮಿತಿಯ ಅಭಿಪ್ರಾಯ ಪಡೆದು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ ಎಂದರು.

    ಈಗಾಗಲೇ ಪದವಿ ತರಗತಿಗಳು ಪೂರ್ಣವಾಗಿ ಆರಂಭವಾಗಿವೆ. ಶಾಲಾರಂಭದ ನಂತರ ತಾವು ಈತನಕ ವಿವಿಧ ಜಿಲ್ಲೆಗಳ 150ಕ್ಕೂ ಹೆಚ್ಚು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದಾಗ ಶಾಲಾರಂಭ ಕುರಿತು ಮಕ್ಕಳು ಮತ್ತು ಪೋಷಕರು ಉತ್ಸುಕರಾಗಿದ್ದು, ಶಾಲೆಗಳ ವಾತಾವರಣ ಮತ್ತು ಸುರಕ್ಷತೆ ಕುರಿತು ಭರವಸೆ ಮೂಡಿರುವುದರಿಂದ ಪ್ರಥಮ ಪಿಯು ಮತ್ತು 8 ಹಾಗೂ 9ನೇ ತರಗತಿಗಳನ್ನು ಆರಂಭಿಸಬೇಕೆಂಬ ಒತ್ತಾಯಿಸುತ್ತಿದ್ದಾರೆ ಎಂದು ಸಚಿವರು ಹೇಳಿದರು.

    ಶಾಲಾ ತರಗತಿಗಳನ್ನು ಆರಂಭಿಸಲು ಮತ್ತು ಪರೀಕ್ಷೆಯ ಮೂಲಕವೇ ಉತ್ತೀರ್ಣರಾಗಬೇಕೆಂಬುದು ಎಲ್ಲ ಮಕ್ಕಳ ಬಯಕೆಯಾಗಿದೆ. ಪರೀಕ್ಷೆಗಳಿಲ್ಲದೇ ಪಾಸಾಗುವುದನ್ನು ಬಹುತೇಕ ವಿದ್ಯಾರ್ಥಿಗಳು ಬಯಸುವುದಿಲ್ಲ. ಪರೀಕ್ಷೆ ಮೂಲಕವೇ ತಮ್ಮ ಸಾಮರ್ಥ್ಯ ಪ್ರಕಟಿಸಬೇಕೆಂಬುದೇ ಪ್ರತಿಯೊಬ್ಬರ ಇಚ್ಛೆಯಾಗಿರುವುದರಿಂದ ಶಾಲೆಗೆ ಭೌತಿಕವಾಗಿ ಹಾಜರಾಗಲು ನಾಡಿನ ಮಕ್ಕಳು ಇಚ್ಛಿಸುತ್ತಿದ್ದಾರೆ. ಇದು ನಾನು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳನ್ನು ಮಾತನಾಡಿಸಿದಾದ ಕಂಡುಕೊಂಡ ಸತ್ಯವಾಗಿದೆ ಎಂದು ಸುರೇಶ್ ಕುಮಾರ್ ತಮ್ಮ ಅನುಭವಗಳನ್ನು ಮೆಲುಕು ಹಾಕಿದರು.

    ಇದು ಸಂಕಷ್ಟ ಮತ್ತು ಸವಾಲಿನ ಸಮಯವಾಗಿದ್ದು, ಸಮಾಜದ ಪ್ರತಿಯೊಬ್ಬರೂ ಸಾಮಾಜಿಕ ಜವಾಬ್ದಾರಿಯ ಹಿನ್ನೆಲೆಯಲ್ಲಿ ಕೆಲಸ ಮಾಡಬೇಕಾದ ಸಂದರ್ಭ ಇದಾಗಿದೆ. ಮಕ್ಕಳಿಗೆ ಪರೀಕ್ಷಾ ಸಮಯ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಉಪನ್ಯಾಸಕರು, ಪ್ರಾಚಾರ್ಯರು ನಿಗದಿತ ಪಠ್ಯಾಂಶ ಪೂರ್ಣಗೊಳಿಸಲು ಹೆಚ್ಚಿನ ಸಮಯ ನೀಡುವುದರೊಂದಿಗೆ ಮಕ್ಕಳ ಹಿತಕ್ಕೆ ಪೂರಕವಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದರು. ಕೋವಿಡ್‍ನಂತಹ ಆರ್ಥಿಕ ಸಂಕಷ್ಟದ ಸಮಯದಲ್ಲೂ ಸರ್ಕಾರ ಯಾರೊಬ್ಬರಿಗೂ ವೇತನವನ್ನು ಕಡಿಮೆ ಮಾಡಿಲ್ಲ, ಸವಲತ್ತುಗಳನ್ನು ವ್ಯತ್ಯಯ ಮಾಡಿಲ್ಲ, ಹಾಗಾಗಿ ನಾವೆಲ್ಲರೂ ಇಂತಹ ಸವಾಲಿನ ಸಮಯದಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ಅರ್ಥೈಸಿಕೊಂಡು ಮುನ್ನಡೆಯಬೇಕಿದೆ ಎಂದು ಸಚಿವರು ಹೇಳಿದರು.

    ಈಗಾಗಲೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳು ಆರಂಭವಾಗಿವೆ. ಈ ಕುರಿತು ಪ್ರಾಚಾರ್ಯರು ಮಕ್ಕಳಿಗೆ ತಿಳಿ ಹೇಳಬೇಕೆಂದರಲ್ಲದೇ ಪ್ರತಿಯೊಬ್ಬ ಪ್ರಾಚಾರ್ಯರಿಂದ ತಮ್ಮ ಕಾಲೇಜಿನ ಪರಿಸ್ಥಿತಿ, ಮಕ್ಕಳ ಹಾಜರಾತಿ, ಕಾಲೇಜು ಆರಂಭದ ಕುರಿತು ಅಭಿಪ್ರಾಯಗಳನ್ನು ಆಲಿಸಿದರು.

    ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ವಿವಿಧ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು, ಬಹುತೇಕ ವಿದ್ಯಾರ್ಥಿಗಳು, ಪೋಷಕರು ಪ್ರಥಮ ಪಿಯು ತರಗತಿಗಳನ್ನು ಜ.1ರಿಂದಲೇ ಆರಂಭಿಸಬೇಕಿತ್ತು. ಈಗಾಲಾದರೂ ಪ್ರಥಮ ಪಿಯು ತರಗತಿಗಳನ್ನಕು ಆರಂಭಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಪ್ರತಿದಿನವೂ ನಮಗೆ ಹಾಗೂ ಉಪನ್ಯಾಸಕರಿಗೆ ಪ್ರಥಮ ಪಿಯು ಆರಂಭಿಸಬೇಕೆಂದು ಒತ್ತಾಯಿಸಿ ದೂರವಾಣಿ ಕರೆ ಮಾಡುತ್ತಿದ್ದಾರೆ. ಕಾಲೇಜು ಆರಂಭವಾಗಿರುವುದರಿಂದ ಕಾಲೇಜಿಗೂ ಬಂದು ಒತ್ತಾಯಿಸುತ್ತಿದ್ದಾರೆ. ಪದವಿ ಪೂರ್ವ ಶಿಕ್ಷಣದಲ್ಲಿ ಪುನರ್ಮನನ ತರಗತಿಗಳನ್ನು ನಡೆಸಬೇಕು ಎನ್ನುತ್ತಿದ್ದಾರೆ. ನಾಳೆಯಿಂದಲೇ ಪ್ರಥಮ ಪಿಯು ತರಗತಿಗಳನ್ನು ಆರಂಭಿಸಬೇಕೆಂದು ಒತ್ತಾಯಿಸಿದರು. ಹಾಗೆಯೇ ಒಂದು ಬೆಂಚಿಗೆ ಇಬ್ಬರು ವಿದ್ಯಾರ್ಥಿಗಳಂತೆ ಕೂರಿಸಲು ಅನುವಾಗುವಂತೆ ಕೋವಿಡ್ ನಿಯಮಗಳಲ್ಲಿ ಸ್ವಲ್ಪ ಸಡಿಲಿಕೆ ಮಾಡಿ, ಮಕ್ಕಳು ಮನೆಯಿಂದ ಊಟ-ಉಪಹಾರ ತರಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.

    ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ಎದುರಿಸುವ ಮಕ್ಕಳು ಪ್ರಥಮ ಮತ್ತು ದ್ವಿತೀಯ ಪಿಯು ತರಗತಿಗಳ ಒಟ್ಟಾರೆ ಪಠ್ಯಗಳ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಬೇಕಿರುವುದರಿಂದ ಪಿಯು ತರಗತಿಗಳು ಮುಖ್ಯವಾಗಿದೆ. ಹಾಗೆಯೇ ಎಲ್ಲ ಪ್ರಾಚಾರ್ಯರು ಪ್ರಥಮ ಪಿಯು ತರಗತಿಗಳನ್ನು ಆರಂಭಿಸಬೇಕೆಂಬ ಪೋಷಕರ ಮತ್ತು ಮಕ್ಕಳ ಒಟ್ಟಾರೆ ಅಭಿಪ್ರಾಯಗಳು ಮತ್ತು ಈ ಸಭೆಯಲ್ಲಿ ವ್ಯಕ್ತವಾದ ಅಂಶಗಳನ್ನು ತಾವು ರಾಜ್ಯ ಕೋವಿಡ್ ತಾಂತ್ರಿಕ ಸಮಿತಿ ಗಮನಕ್ಕೆ ತಂದು ಶೀಘ್ರದಲ್ಲೇ ಪ್ರಥಮ ಪಿಯು ತರಗತಿಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

    ಉಪನ್ಯಾಸಕರ ಕೊರತೆ:ಪರೀಕ್ಷಾವಧಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಈಗಾಗಲೇ ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಸಂಬಂಧಪಟ್ಟವರೊಂದಿಗೆ ಚರ್ಚಿಸಲಾಗುವುದೆಂದು ಹೇಳಿದ ಸುರೇಶ್ ಕುಮಾರ್, ಇಂತಹ ವಿಷಮ ಸಂದರ್ಭದಲ್ಲಿ ವಿದ್ಯಾರ್ಥಿ ಕಾಳಜಿಯುಳ್ಳ ಸೇವೆಯಿಂದ ನಿವೃತ್ತಿಯಾಗಿರುವ ಉಪನ್ಯಾಸಕರುಗಳು ಉಚಿತವಾಗಿ ಪಾಠ ಮಾಡಲು ಇಚ್ಛಿಸಿದಲ್ಲಿ ಅವರ ಸನಿಹದ ಕಾಲೇಜುಗಳಲ್ಲಿ ಅವಕಾಶ ನೀಡಲಾಗುತ್ತದೆ. ಈ ಬಗ್ಗೆ ಇಷ್ಟರಲ್ಲಿಯೇ ಎಲ್ಲರಿಗೂ ಪತ್ರ ಬರೆದು ಮನವಿ ಮಾಡಲಾಗುವುದು ಎಂದು ಹೇಳಿದರು.

    ಪರೀಕ್ಷಾವಧಿ ಹತ್ತಿರವಾಗುತ್ತಿರುವುದರಿಂದ ಪಠ್ಯಭಾಗವನ್ನು ಪೂರ್ಣಗೊಳಿಸಬೇಕಾದ ಅಗತ್ಯದ ಹಿನ್ನೆಲೆಯಲ್ಲಿ ಈ ಸಂಕಷ್ಟದ ವರ್ಷದ ಮಿತಿಯಲ್ಲಿ ಕಾರ್ಯಭಾರ ಕಡಿಮೆಯಿರುವ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುವ ಉಪನ್ಯಾಸಕರು ವಾರದ ಮೂರು ದಿನ ಇನ್ನೊಂದು ಕಾಲೇಜಿನಲ್ಲಿ ಬೋಧನೆ ಮಾಡಬೇಕೆಂಬ ಪದವಿ ಪೂರ್ವ ಶಿಕ್ಷಣ ಇಲಾಖೆಯ ಡೆಪ್ಯುಟೇಷನ್ ಸುತ್ತೋಲೆಯನ್ನು ಹಿಂಪಡೆಯಬೇಕೆಂಬ ಉಪನ್ಯಾಸಕರ ಅಗ್ರಹವನ್ನು ಸಹಾನುಭೂತಿಯಿಂದ ಪರಿಶೀಲಿಸಲಾಗುವುದು. ಆದರೆ ಉಪನ್ಯಾಸಕರೂ ಸಹ ಮಕ್ಕಳ ಹಿತದೃಷ್ಟಿಯಿಂದ ಹೆಚ್ಚಿನ ಶ್ರಮ ವಹಿಸಲು ಮುಂದಾಗಬೇಕೆಂದು ಸಚಿವರು ಮನವಿ ಮಾಡಿದರು.

    ಸಂಚಿತ ನಿಧಿ ಬಳಸಿ:ಶಾಲಾ ಕಾಲೇಜುಗಳ ಸ್ಯಾನಿಟೈಸೇಷನ್ ಮತ್ತು ಶೌಚಾಲಯ ಸ್ವಚ್ಛತೆಯನ್ನು ಸರ್ಕಾರ ಪ್ರಸ್ತುತ ಸಂದರ್ಭದಲ್ಲಿ ಆಯಾ ಮಟ್ಟದ ಸ್ಥಳೀಯ ಸಂಸ್ಥೆಗಳಿಗೆ ವಹಿಸಿದೆ. ಅಗತ್ಯ ಬಿದ್ದರೆ ಶೌಚಾಲಯ ಸ್ವಚ್ಛತೆ ಹಾಗೂ ಗ್ರೂಪ್-ಡಿ ನೌಕರರ ನೇಮಕಕ್ಕೆ ಕಾಲೇಜು ಖಾತೆಯಲ್ಲಿರುವ ಸಂಚಿತ ನಿಧಿ ಹಣವನ್ನು ಬಳಸಿಕೊಳ್ಳಬಹುದಾಗಿದೆ ಎಂದೂ ಅವರು ಸೂಚಿಸಿದರು.

    ವಿಧಾನಪರಿಷತ್ ಸದಸ್ಯ ಹಾಗೂ ರಾಜ್ಯ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೆ.ಟಿ. ಶ್ರೀಕಂಠೇಗೌಡ ಪ್ರಥಮ ಪಿಯು ತರಗತಿಗಳೂ ಪ್ರಮುಖವಾಗಿರುವುದರಿಂದ ಪ್ರಥಮ ಪಿಯು ತರಗತಿಗಳನ್ನು ತಡಮಾಡದೇ ಆರಂಭಿಸಬೇಕೆಂದು ಒತ್ತಾಯಿಸಿದರು.

    ಸಭೆಯಲ್ಲಿ ರಾಜ್ಯ ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೇಗೌಡ, ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಗಂಗಾಧರ ಸೇರಿದಂತೆ 100ಕ್ಕೂ ಹೆಚ್ಚು ಪ್ರಾಚಾರ್ಯರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್, ಪಿಯು ಇಲಾಖೆ ನಿರ್ದೇಶಕರಿ ಆರ್. ಸ್ನೇಹಲ್ ಸೇರಿದಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!