ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟುಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.
ಪೆತ್ತಬ್ಬೆಗೆ ತಮ್ಮತ್ತಣಿಂ ಅಳಿವಾಯ್ತು-ಮುದ್ದಣನ ‘ರಾಮಾಶ್ವಮೇಧ’ದಲ್ಲಿ ಉಲ್ಲೇಖವಾಗಿರುವ ಮಾತು ಇದು. ಪ್ರಕೃತಿ ವರ್ಣನೆ ಮಾಡುವಾಗ ಕವಿ ರಸಬಾಳೆಯ ದೊಡ್ಡಗೊನೆಗಳು ಕೆಳಮುಖವಾಗಿ ಬಾಗಿರುವ ದೃಶ್ಯವನ್ನು ವರ್ಣಿಸಿದ್ದಾನೆ. “ಬಾಳೆಗೊಂದೇ ಗೊನೆ ಬಾಳಿಗೊಂದೇ ಮಾತು” ಇರುವ ಹಾಗೆ ಗೊನೆ ಬಿಟ್ಟ ನಂತರ ಆ ಗಿಡದಿಂದ ಪ್ರಯೋಜನವಿಲ್ಲವೆಂದು ಕಡಿದುಬಿಡುತ್ತಾರೆ. ಅದನ್ನೇ ಕವಿ “ತಮ್ಮನ್ನು ಹೆತ್ತ ತಾಯಿಗೆ ತಮ್ಮಿಂದ ಸಾವು ಉಂಟಾಯಿತೆಂದು ನಾಚಿಕೆಯಿಂದ ತಲೆತಗ್ಗಿಸಬೇಕು” ಎನ್ನುತ್ತಾನೆ. ನಾವು ಯಾವ ಕಾಣಿಕೆ ಕೊಟ್ಟರೂ ತಾಯಿಯ ಋಣ ತೀರಿಸಲು ಸಾಧ್ಯವಾಗುವುದಿಲ್ಲ ಅವರೂ ಏನನ್ನೂ ಬಯಸುವುದಿಲ್ಲ. ಅಂಥವರಿಗೆ ಅಪಕೀರ್ತಿ ತಂದು ಬಿಟ್ಟರೆ ಸಹಜವಾಗಿ ಅವರಿಗೆ ನೋವಾಗುತ್ತದೆ.
ಲೋಕದಲ್ಲಿ ಕೀರ್ತಿವಂತರಾಗಬೇಕೇ ವಿನಃ ಅಪರಾಧಿ ಕೃತ್ಯಗಳಲ್ಲಿ ಸಿಲುಕಿ ಹೆತ್ತವರನ್ನು ಮುಜುಗರಕ್ಕೆ ಈಡುಮಾಡುವುದು ಸರಿಯಲ್ಲ ಎನಿಸುತ್ತದೆ. ಮಕ್ಕಳ ಸುಖಕ್ಕಿಂತ ದೊಡ್ಡದು ಇನ್ನೊಂದಿಲ್ಲ ಎಂದು ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಕೊಡುವ ತಂದೆ ತಾಯಿಗಳಿಗೆ ಮಕ್ಕಳು ಅವಿಧೇಯರಾಗಿ ಮಾದಕ -ದ್ರವ್ಯ ಸೇವನೆ, ಸಮಾಜ ವಿರೋಧಿ ಚಟುವಟಿಕೆಗಳಲ್ಲೆಲ್ಲಾ ಭಾಗಿಯಾಗುವುದನ್ನು ಕಂಡಿದ್ದೇವೆ. ಇಂಥ ವೈರುಧ್ಯವನ್ನು ಮುದ್ದಣ ರಾಮಾಶ್ವಮೇಧ ಬರೆಯುವ ಕಾಲಕ್ಕೇ ಗ್ರಹಿಸಿ ಬರೆದಿರುವುದು ಸಾರ್ವಕಾಲಿಕವಾಗಿದೆ.
“ಬಾಳೆಗೊಂದೇ ಗೊನೆ ಚೇಳಿಗೊಂದೇ ಬಸುರು” ಎಂಬಂತೆ ಚೇಳು ಮರಿಗಳಿಗೆ ಜನ್ಮ ನೀಡುತ್ತಲೆ ಹಸಿವಾದ ಮರಿಗಳಿಗೆ ತನ್ನ ದೇಹವನ್ನೆ ತಿನ್ನಲು ಬಿಡುತ್ತದೆಯಂತೆ ಹಾಗೆ ತಮ್ಮ ಜೀವದ ಉಸಿರನ್ನು ಬಸಿದು ಸಾಕುವ ನಮ್ಮ ಪೋಷಕರಿಗೆ , ಅವರ ನೆಮ್ಮದಿಗೆ “ಭಂಗ ತರಬಾರದು” ಎಂಬ ನೀತಿ ಇಲ್ಲಿದೆ.
“ಬಾಳೆಗೊಂದೇ ಗೊನೆ ಬಾಳಿಗೊಂದೇ ಮಾತು” ಎಂಬ ಮಾತಿನಂತೆ ನಡೆದುಕೊಂಡರೆ. ಹೆತ್ತವರಿಗೆ ನಮ್ಮಿಂದಲೇ ಹಾನಿಯಾಯಿತು ಎಂಬ ಪಾಪಪ್ರಜ್ಞೆಯಿಂದ ದೂರವಿರಬಹುದು. ಮಕ್ಕಳಾಗಿ ಹೆತ್ತವರಿಗೆ ಮಾನಸಿಕವಾಗಿ ಹಿಂಸೆ, ದೈಹಿಕ ಹಿಂಸೆ ಕೊಡುವ ಅನೇಕ ಉದಾಹರಣೆಗಳನ್ನು ಕಂಡಿದ್ದೇವೆ. ಮಕ್ಕಳಂತೆ ಹತ್ತವರನ್ನು ನೋಡಿಕೊಳ್ಳುವ ಮಕ್ಕಳೂ ಇದ್ದಾರೆ. “ಇಂಥವರ ಮಕ್ಕಳು ಒಳ್ಳೆಯವರು, ಲೋಕೋತ್ತರ ಕೆಲಸ ಮಾಡಿದ್ದಾರೆ ಎನ್ನಿಸಿಕೊಳ್ಳಬೇಕು. ಲೋಕದಲ್ಲಿ ಅಪಕೀರ್ತಿವಂತರಾಗಿ ಬಾಳುವುದಕ್ಕಿಂತ ಲೋಕವೇ ಬೆರಗುಗಣ್ಣಿನಿಂದ ನೋಡುವ ಮಕ್ಕಳಾಗಬೇಕು ಎಂಬುದು “ಪೆತ್ತಬ್ಬೆಗೆ ತಮ್ಮತ್ತಣಿಂ ಅಳಿವಾಯ್ತು” ಮಾತಿನ ಅನನ್ಯ ಅರ್ಥ.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.
Good one…
ಲೊಕವೇ ಬೆರಗುಗಣ್ಣಿ ನಿಂದ ನೋಡುವ ಮಕ್ಕಳು ಆಗ ಬೇಕು ಎಂಬುದನ್ನು ಚೆನ್ನಾಗಿ ತಿಳಿಸಿರುವ ಸುಮ ವೀಣಾ ಅವರಿಗೂ ಇಂತಹ ಉತ್ತಮ ಲೇಖನ ಗಳ ನ್ನು ಪ್ರಕಟಿಸುತ್ತಿರುವ ಕನ್ನಡ ಪ್ರೆಸ್ ಗೂ ಧನ್ಯವಾದಗಳು.🙏🙏