26 C
Karnataka
Thursday, November 21, 2024

    ಮನೆಗೆ ಬರುವ ನೆಂಟರು ಇಷ್ಟರು ಈಗ ಅಪರೂಪ

    Must read

    ಆವಾಗೆಲ್ಲಾ ಫೋನು ಮತ್ತೊಂದು ಇರಲಿಲ್ಲ . ‘ ಸಂಬಂಧಿಕರು ‘ ಇಂತಾ ದಿನ ನಿಮ್ಮ ಮನೇಗೆ ಬರ್ತೀವಿ ಅಂತ ಕಾಗದದ ಮುಖೇನ ತಿಳಿಸಿ ಬರುತ್ತಿದ್ದರು . ಕೆಲವರಂತೂ ಕಾಗದವನ್ನೂ ಹಾಕ್ತಿರಲಿಲ್ಲ ಹಾಗೇ ಬಂದುಬಿಡೋವ್ರು . ಅವರು ನಮ್ಮ ಮನೆಗಳಿಗೆ ಬಂದ್ರೆ ಮನೆಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿರೋದು. ಅವರೆಲ್ಲಾ ಹೊಸ ಬಟ್ಟೆಗಳನ್ನು ತೊಟ್ಟು ಅವರ ಮಕ್ಕಳಿಗೂ ಹೊಸ ಬಟ್ಟೆ ತೊಡಿಸಿ. ಒಣಗಿದ ಅರಳೆಲೆಯಲ್ಲಿ ಬಿಳಿದಾರದೊಂದಿಗೆ ಸುತ್ತಿದ್ದ ತಾಜಾ ಕನಕಾಮ್ರ ಹೂವು, ಗ್ಲೂಕೋಸ್ ಬಿಸ್ಕೆಟ್ಟು ಹಾಗೂ ಪಕೋಡ ಪೊಟ್ಟಣ ಹಿಡಿದು ಬಂದಿರೋವ್ರು .ಸ್ವಲ್ಪ ಸ್ಥಿತಿವಂತರೇನಾದರೂ ಬಂದ್ರೆ ಮೈಸೂರು ಪಾಕು , ಚೌಚೌ , ಹೂವು ಹಣ್ಣು ತಂದಿರೋವ್ರು .

    ನಾವು ಶಾಲೆ ಮುಗಿಸಿ ಮನೆಗೆ ಹೋದಾಗ ಅವರೆಲ್ಲರನ್ನೂ ನೋಡಿ ಖುಷಿಯಾಗ್ಬಿಡ್ತಿದ್ವಿ , ಅವರೂ ನಮ್ಮನ್ನ ತೊಡೆ ಮೇಲೆ ಕೂರಿಸಿಕೊಂಡು ಯಾವ ಸ್ಕೂಲು ? ಮುಂದೆ ದೊಡ್ಡವನಾದ ಮೇಲೆ ಏನ್ ಆಗ್ತೀಯಾ ? ನಿನಗೆ ಅಪ್ಪ ಇಷ್ಟಾನ ಅಮ್ಮ ಇಷ್ಟಾನ ? ಹಿಂಗೆಲ್ಲಾ ಪ್ರೀತಿಯಿಂದ ವಿಚಾರಿಸೋವ್ರು .ಅವರು ತಂದ ತಿಂಡಿಯನ್ನ ಅಮ್ಮ ಕೊಡೋವ್ರು ತಿಂದು ಸಂಭ್ರಮಿಸುತ್ತಿದ್ದೆವು .

    ವಾರ ಪೂರ್ತಿ ದಿನಕ್ಕೊಂದು ರೀತಿಯ ಅಡುಗೆ ತಯಾರಾಗೋದು , ಎಲ್ಲಾ ಒಟ್ಟಿಗೇ ಊಟಕ್ಕೆ ಕೂರುತ್ತಿದ್ದೆವು . ಅವರ ಮಕ್ಕಳು ತಂದ ಅಟಿಕೆಗಳ ಜೊತೆ ನಾವು ಆಟ ಆಡ್ತಿದ್ವಿ . ಅವರ ಜೊತೆ ಕೂಗಾಡ್ತಿದ್ವಿ ಕಿರುಚಾಡ್ತಿದ್ವಿ ಜಗಳ ಮಾಡ್ತಿದ್ವಿ . ಮನೆಯಲ್ಲಿ ನೆಂಟರಿದ್ದರೆ ನಮ್ಮನ್ನ ಹೊಡೆಯಲ್ಲ ಅನ್ನೋ ಧೈರ್ಯ ನಮ್ಮದು , ಮನೆಯವರು ನಮ್ಮ ಉಪಟಳವನ್ನ ತುಂಬಾನೇ ಸಹಿಸ್ಕೋಳೋವ್ರು .

    ನೆಂಟರ ಜೊತೆ ನಮ್ಮನ್ನ ನಾಟಕ ಸಿನಿಮಾ ಸರ್ಕಸ್ಸು ಹೋಟೆಲ್ಲು ಪಾರ್ಕು ಅಂತ ಕರ್ಕೊಂಡು ಸುತ್ತಾಡ್ಸೋವ್ರು . ಮನೆಗೆ ಬಂದು ತಡರಾತ್ರಿವರೆಗೂ ಅವರ ಕಷ್ಟ ಸುಖಗಳನ್ನು ಮಾತಾಡ್ತಾ ಕೂತಿರೋವ್ರು , ನಾವು ಚಾಪೆ ಜಮಖಾನ ಹಾಸಿಗೆಯ ಮೇಲೆ ಎದ್ದು ಬಿದ್ದು ಫೈಟಿಂಗ್ ಮಾಡ್ತಾ ಬೈಸಿಕೊಂಡು ಮಲಗ್ತಿದ್ವಿ .

    ಬೆಳಿಗ್ಗೆ ಎಲ್ಲರಿಗೂ ಒಟ್ಟಿಗೇ ಕಾಫಿ ಎಲ್ಲರೂ ಬೆಳಗಿನ ಕಾಫಿಯನ್ನು ಹೀರುತ್ತಾ ಆನಂದ ಅನುಭವಿಸುತ್ತಿದ್ದೆವು .ನಮ್ಮ ಮನೆಯವರ ಪ್ರೀತಿ ಆತಿಥ್ಯಕ್ಕೆ ಕಟ್ಟುಬಿದ್ದು ಎರಡು ದಿನಕ್ಕೆ ಅಂತ ಬಂದವರು ಒಂದು ವಾರ ಇರೋವ್ರು . ಹೆಂಗಸ್ರು ನಮ್ಮ ತಾಯಿಯ ಸೀರೆ ಉಟ್ಟರೆ , ಅವರ ಯಜಮಾನರು ನಮ್ಮ ತಂದೆಯವರ ಪಂಚೆ ಲುಂಗಿಯನ್ನು ತೊಡೋವ್ರು . ತಂಗಿದ್ದಷ್ಟು ಕಾಲ ತುಂಬಾನೇ ಅನ್ಯೋನ್ಯತೆಯಿಂದ ಇರೊವ್ರು . ಯಾರ ಮನಸ್ಸಿನಲ್ಲೂ ಕಲ್ಮಷ ಇರಲಿಲ್ಲ . ನಮ್ಮನೆಯವರ ಹತ್ತಿರ ಹಣವಿರಲೀ ಇಲ್ಲದೇ ಇರಲಿ ಸಾಲ ಮಾಡಿಯಾದರೂ ನೆಂಟರನ್ನು ತುಂಬಾ ಚೆನ್ನಾಗಿ ನೋಡಿಕೊಂಡು ಕಳಿಸುತ್ತಿದ್ದರು . ಅವರೂ ಹೋಗುವಾಗ ಅರಿಷಿಣ ಕುಂಕುಮ ಪಡೆದು ಭಾವುಕರಾಗೋವ್ರು . ಅವರ ಮನೆಗೆ ಬರಲೇಬೇಕೆಂದು ಆಹ್ವಾನಿಸೋವ್ರು . ನಮ್ಮನೆಯವರು ಬೇಡ ಅಂದ್ರೂ ಒತ್ತಾಯ ಮಾಡಿ ನಮ್ಮ ಕೈಗೆ ಕಾಸು ಕೊಡೋವ್ರು .

    ಅದ್ಯಾಕೋ ಗೊತ್ತಿಲ್ಲ ಬೆಳೀತಾ ಬೆಳೀತಾ ಜಗತ್ತು ಹತ್ತಿರವಾದಂತೆಲ್ಲಾ ನೆಂಟರು ಸಂಬಂಧಿಕರು ದೂರ ಆಗ್ತಾ ಹೋದರು .ಸಂಬಂಧಗಳೆಲ್ಲಾ ಫೋನಲ್ಲಿ ಕನೆಕ್ಟ್ ಆಗ್ತಾ ಫೋನಲ್ಲೇ ಡಿಸ್ಕನೆಕ್ಟ್ ಆಗ್ತಾ ಹೋದವು . ಋಣಾನೇ ಆಗ್ಲಿ ಹಣಾನೇ ಆಗ್ಲಿ ಮೌಲ್ಯ ಕಳೆದುಕೊಂಡಿತು .
    ನಮ್ಮ ಹಿರಿಯರು ಸಂಬಂಧಿಕರನ್ನು ‘ನೆಂಟರಿಷ್ಟರು’ ಅಂತ ಕರೀತಿದ್ರು , ಅವರುಗಳಿಗೆ ಸ್ಥಾನವಿರಲಿ ಇಲ್ಲದೇ ಇರಲಿ ಹೃದಯದಲ್ಲಿ ಸ್ಥಾನ ಕೊಟ್ಟಿರುತ್ತಿದ್ದರು .

    ಆದರೆ ಈಗಿನ ಮಂದಿ …..

    ‘ ನಮಗೆ ಯಾರೂ ಬೇಕಾಗಿಲ್ಲ . ನಾವು ಯಾರ್ನೂ ಮನೆ ಬಾಗಿಲಿಗೂ ಸೇರ್ಸಲ್ಲ ಅನ್ನೋ ಕಠೋರ ನಿಲುವಿಗೆ ಬಂದುನಿಂತಿದ್ದಾರೆ ‘ .

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಮಾಸ್ತಿ
    ಮಾಸ್ತಿhttps://kannadapress.com
    ಕನ್ನಡ ಚಿತ್ರರಂಗದಲ್ಲಿ ಪ್ರಸ್ತುತ ಬೇಡಿಕೆ ಇರುವ ಸಂಭಾಷಣೆಕಾರ ಮಾಸ್ತಿ ಮೂಲತಃ ಕೋಲಾರ ಜಿಲ್ಲೆಯವರು. ಸುಂಟರಗಾಳಿ ಚಿತ್ರದಿಂದ ಆರಂಭವಾದ ಇವರ ಸಿನಿಮಾ ಜರ್ನಿ ನಟ, ಸಹ ನಿರ್ದೇಶಕ, ಈಗ ಕಥೆಗಾರ, ಸಂಭಾಷಣೆಕಾರ ಮತ್ತು ಚಿತ್ರಕಥೆಗಾರರಾಗಿ ಮುಂದುವರೆದಿದೆ. ಟಗರು ಇವರ ವೃತ್ತಿ ಜೀವನದ ಮೈಲಿಗಲ್ಲು.
    spot_img

    More articles

    3 COMMENTS

    1. ಸಂಬಂದಾ, ಸ್ನೇಹ ಎಲ್ಲ ಬರಬರುತ್ತಾ ಗೌಣ ವಾಗಿ ಬಿಡುತ್ತೇನೋ ಅನಿಸುತ್ತೆ. ಅಂದಿನ ದಿನಗಳ ಪ್ರೀತಿ, ವಿಶ್ವಾಸ, ಮತ್ತೆ ಬರಲಿ.

    LEAVE A REPLY

    Please enter your comment!
    Please enter your name here

    Latest article

    error: Content is protected !!