ಅಮೆರಿಕಾದಲ್ಲಿ ನೆಲಸಿರುವ ಭಾರತೀಯರಿಗೆ ಜೋ ಬೈಡನ್ ಉಡುಗೊರೆ. ಅಮೆರಿಕಾದ ಗ್ರೀನ್ ಕಾರ್ಡ್ ಹೊಂದುವುದು ಇನ್ನು ಮುಂದೆ ಮತ್ತಷ್ಟು ಸುಲಭ. ಬೈಡನ್ ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ ಮಹತ್ವಾಕಾಂಕ್ಷೆಯ ಹೊಸ ವಲಸೆ ಸುಧಾರಣಾ ನೀತಿಗೆ ಸಹಿ ಹಾಕಿ ಅದನ್ನು ಕಾಂಗ್ರೆಸ್ ಗೆ ರವಾನಿಸಿದ್ದಾರೆ. ಅದು ಜಾರಿಯಾದರೆ ಕಳೆದ ಎಂಟು ವರ್ಷಗಳಿಂದ ಚಾತಕ ಪಕ್ಷಿಯಂತೆ ‘ಗ್ರೀನ್ ಕಾರ್ಡ್’ ಹೊಂದಲು ಕಾಯುತ್ತಿರುವ ಸುಮಾರು ಐದು ಲಕ್ಷ ಭಾರತೀಯರಿಗೆ ಅಮೆರಿಕಾದ ಪೌರತ್ವ ಸಿಗಲಿದೆ.
‘US ಸಿಟಿಜೆನ್ ಷಿಪ್ ಆಕ್ಟ್ 2021’ನಿಂದ ಆಗುವ ಉಪಯೋಗಗಳೇನು
ಈ ಹೊಸ ಕಾಯಿದೆ US ಸಿಟಿಜೆನ್ ಷಿಪ್ ಆಕ್ಟ್ 2021 ಅಮೆರಿಕಾದ ಸಂಸತ್ ಆದ ಕಾಂಗ್ರೆಸ್ ನಲ್ಲಿ ಅಂಗೀಕರಿಸಿದ ನಂತರ, ವಲಸೆ ವ್ಯವಸ್ಥೆಯನ್ನು ಆಧುನಿಕರಿಸುವ ಜೊತೆಗೆ ಹಳೆಯ ಹಲವಾರು ಉಪಯೋಗವಲ್ಲದ ನಿಯಮಗಳನ್ನು ನಿಲ್ಲಿಸಿ, H1B ವೀಸಾ ನಿಯಮಗಳನ್ನು ಸರಳೀಕರಣಗೊಳಿಸುತ್ತದೆ. ಇದರಿಂದ ಈಗಾಗಲೇ ಅಮೆರಿಕಾದಲ್ಲಿ H1B ವೀಸಾ ಹೊಂದಿರುವವರಿಗೆ ಗ್ರೀನ್ ಕಾರ್ಡ್ ಹೊಂದಲು ಇನ್ನು ಮುಂದೆ ವರ್ಷಾನುಗಟ್ಟಲೆ ಕಾಯುವುದು ತಪ್ಪುತ್ತದೆ. ಜೊತೆಗೆ H1B ವೀಸಾ ಹೊಂದಿರುವವರ ಅವಲಂಬಿತರು ( ಗಂಡ, ಹೆಂಡತಿ, ಮಕ್ಕಳು, ಪೋಷಕರಿಗೆ) H-4 ವೀಸಾ ಶೀಘ್ರವಾಗಿ ಸಿಗುತ್ತದೆ.
- ಈ ಮೊದಲು ಗ್ರೀನ್ ಕಾರ್ಡ್ ಹೊಂದಲು ಹಲವಾರು ವರ್ಷಗಳು ಕಾಯಬೇಕಿತ್ತು ಹಾಗು ನಿರ್ದಿಷ್ಟ ವೇತನ ಶ್ರೇಣಿಯವರಿಗೆ ಆದ್ಯತೆ ಮೇಲೆ ಬೇಗ ಗ್ರೀನ್ ಕಾರ್ಡ್ ದೊರೆಯುತ್ತಿತ್ತು. ಇನ್ನು ಮುಂದೆ ಎಲ್ಲಾ ವೇತನ ಶ್ರೇಣಿಯವರಿಗೂ ಗ್ರೀನ್ ಕಾರ್ಡ್ ಬೇಗ ದೊರೆಯುವಂತೆ ಸರಳೀಕರಣ ಗೊಳಿಸಲಾಗಿದೆ.
- ಅಮೆರಿಕಾದಲ್ಲಿ H1B ವೀಸಾ ಪಡೆದು ಉದ್ಯೋಗ ಮಾಡುತ್ತಿದ್ದವರ ಅವಲಂಬಿತರು ಅಮೆರಿಕಾದಲ್ಲಿ ಉದ್ಯೋಗ ಮಾಡಲು ಅಡೆ ತಡೆ ಇದ್ದ ಹಲವಾರು ಅಂಶಗಳನ್ನು ಕೈ ಬಿಡಲಾಗಿದೆ. ಇದರಿಂದ ಅಮೆರಿಕಾದಲ್ಲಿರುವ ಹೆಚ್ಚಿನ ಅವಲಂಬಿತ ಭಾರತೀಯರು ಕೌಶಲ್ಯಾಧಾರಿತ ಉದ್ಯೋಗ ಮಾಡಲು ಅವಕಾಶ ಕಲ್ಪಿಸುತ್ತದೆ.
3. ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾಗೆ ಹೋಗಿ ‘ಸ್ಟೆಮ್ ಡಿಗ್ರಿಗಳನ್ನು’ ಪಡೆದ ಭಾರತೀಯ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಸುಲಭವಾಗಿ ಅಮೆರಿಕಾದ ಪೌರತ್ವ ಪಡೆಯಲು, ಅಮೆರಿಕಾದಲ್ಲಿ ಉದ್ಯೋಗ ಮಾಡಲು ಅನುಕೂಲವಾಗಲಿದೆ. - ಅಮೆರಿಕಾದ ಯಾವ ರಾಜ್ಯದಲ್ಲಿ ಬೇಕಾದರೂ ಎಷ್ಟು ವರ್ಷಗಳು ಬೇಕಾದರೂ ನೆಲೆಸಲು ಸಹಾಯವಾಗುತ್ತದೆ. ಹಾಗು ಅಮೆರಿಕಾ ದಿಂದ ಹೊರ ಹೋಗಲು ಮತ್ತೆ ಬರಲು ಯಾವುದೇ ಅಡೆತಡೆ ಇರುವುದಿಲ್ಲ.
- ಅಮೆರಿಕಾದ ಪೌರತ್ವ ಹೊಂದಲು ಗ್ರೀನ್ ಕಾರ್ಡ್ ಸಹಾಯಮಾಡಲಿದೆ. ಇದು ವರ್ಷ ಅಮೆರಿಕಾದಲ್ಲಿ ನೆಲಸಿದ ಗ್ರೀನ್ ಕಾರ್ಡ್ ಹೊಂದಿರುವವರು ಅಮೆರಿಕಾದ ಪೌರತ್ವ ಪಡೆಯಲು ಅರ್ಹರಾಗುತ್ತಾರೆ. ಜೊತೆಗೆ ಅಮೆರಿಕಾದ ಫೆಡರಲ್ ಸೌಲಭ್ಯಗಳು ಸಿಗಲಿವೆ. ಜೊತೆಗೆ ಅಮೆರಿಕಾದ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸುವ ಹಕ್ಕನ್ನು ಪಡೆದುಕೊಳ್ಳುತ್ತಾರೆ.
- ಗ್ರೀನ್ ಕಾರ್ಡ್ ಹೊಂದಿರುವವರು ತಮ್ಮದೇ ಆದ ಉದ್ಯೋಗ ಸೃಷ್ಟಿಸಿಕೊಳ್ಳಲು, ವ್ಯಾಪಾರ ವಹಿವಾಟು ಮಾಡಲು ಅನುಕೂಲವಾಗಲಿದೆ. ತಮ್ಮದೇ ಆದ ಸ್ವಂತ ಮನೆಯನ್ನು ಹೊಂದಲು ಸಹಾಯಕವಾಗಲಿದೆ.
- ಗ್ರೀನ್ ಕಾರ್ಡ್ ಹೊಂದಿರುವವರು ಅಮೆರಿಕಾದ ಯೂನಿವರ್ಸಿಟಿ ಯಲ್ಲಿ ಓದಲು ಸುಮಾರು 80% ಟ್ಯೂಷನ್ ಫಿ ಕಮ್ಮಿ ಆಗಲಿದೆ. ಹಾಗು ಅಮೆರಿಕಾ ಫೆಡರಲ್ ಸ್ಟೂಡೆಂಟ್ ಲೋನ್ ತೆಗೆದುಕೊಳ್ಳಲು ಅರ್ಹರಾಗುತ್ತಾರೆ.
H1B ,L1 ವೀಸಾ ಎಂದರೇನು?
H1B: ಹದಿನಾರು ವರ್ಷದ ವಿದ್ಯಾಭ್ಯಾಸ (ಎಂಜಿನಿಯರಿಂಗ್ ನಲ್ಲಿ ಯಾವುದೇ ಪದವಿ) ನಂತರ ಯಾವುದೇ ವಿಷಯದಲ್ಲಿ ಕೌಶಲ್ಯ ಗಳಿಸಿದ ಕಾರ್ಮಿಕನಿಗೆ/ತಂತ್ರಜ್ಞರಿಗೆ (ವೈಟ್ ಕಾಲರ್ ಜಾಬ್ ) ಅಮೆರಿಕಾದಲ್ಲಿ ಕೆಲಸ ಮಾಡಲು ಕೊಡುವ ವೀಸಾ. ಆರು ವರ್ಷದ ಪರಿಮಿತಿ ಹೊಂದಿದ ಈ ವೀಸಾ ಪಡೆದು ಅಮೆರಿಕಾದ ಯಾವುದೇ ಕಂಪೆನಿಗಳಲ್ಲಿ ನೇರವಾಗಿ ಕೆಲಸ ಮಾಡಬಹುದು ಹಾಗೂ ನವೀಕರಿಸಲೂ ಬಹುದು.
L1: ಇದು H1B ವೀಸಾ ಕಿಂತ ಸ್ವಲ್ಪ ಭಿನ್ನ, ಈಗಾಗಲೇ ಭಾರತದಲ್ಲಿ ಇರುವ ಕಂಪೆನಿಗಳಲ್ಲಿ ಕೆಲಸ ಮಾಡುವ ತಂತ್ರಜ್ಞರು ಅದೇ ಕಂಪನಿಯ ಅಥವಾ ಆ ಕಂಪನಿಯ ಒಡಂಬಡಿಕೆಯಲ್ಲಿ ಹೊಂದಿರುವ ಅಮೆರಿಕಾದಲ್ಲಿ ಇರುವ ಕಂಪನಿಗೆ ಕೌಶಲ್ಯ ತುಂಬಿದ ನುರಿತ ಕೆಲಸ ಮಾಡಲು ಕಳುಹಿಸುವುದು.
ಅಮೆರಿಕಾದಲ್ಲಿ ವರ್ಷಕ್ಕೆ ಸರಿ ಸುಮಾರು 65,000 H1B ವೀಸಾವನ್ನು ಲಾಟರಿ ಮೂಲಕ ವಿತರಣೆ ಮಾಡುತ್ತಾರೆ. ಇದರ ಜೊತೆ L1 ವೀಸಾ ದಡಿಯಲ್ಲಿ ಸುಮಾರು 70 ಸಾವಿರದಷ್ಟು ಜನರು ಭಾರತದಿಂದ ಅಮೆರಿಕಾಕ್ಕೆ ಕೆಲಸಕ್ಕಾಗಿ ವಲಸೆ ಹೋಗುತ್ತಾರೆ. ಅದರಲ್ಲಿ ಭಾರತದ IT ದಿಗ್ಗಜ ಕಂಪನಿಗಳಾದ ಇನ್ಫೋಸಿಸ್, ವಿಪ್ರೊ, ಟಿಸಿಎಸ್ ಪಾಲೇ ಹೆಚ್ಚು. ಅದರೊಟ್ಟಿಗೆ ನೇರವಾಗಿ ಕನ್ಸಲ್ಟೆಂನ್ಸಿಗಳ ಮೂಲಕವೂ H1B ಕೆಲಸಕ್ಕೆ ಅರ್ಜಿಹಾಕಿ ಅಮೆರಿಕಾ ಹಾರುವವರ ಸಂಖ್ಯೆಯೂ ಜಾಸ್ತಿಯೇ ಇದೆ.
ಉಪಯುಕ್ತ ಮಾಹಿತಿ🙏
ಸರ್ ಲೇಖನ ಚೆನ್ನಾಗಿದೆ hi b ಇತ್ಯಾದಿ ವೀಸಾ ಕುರಿತ ಸಂಗತಿಗಳನ್ನು ಸುಲಭವಾಗಿ ಅರ್ಥ ಮಾಡಿಸುವಂತಿದೆ
Informative 👍