19.5 C
Karnataka
Friday, November 22, 2024

    ಆಸೆಯೇ ದುಃಖಕ್ಕೆ ಮೂಲ

    Must read


    ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.


     “ Litreture is not only the effect of social causes it is also the cause of social effects”  ಹ್ಯಾರಿಸ್ ಲಿವಿಸ್  ಅವರ  ಈ ಮಾತುಗಳು ಸಾಹಿತ್ಯ ಮತ್ತು ಸಮಾಜಗಳ ನಡುವೆ ಇರುವ ಆಂತರಂಗಿಕ ಸಂಬಂಧವನ್ನು  ವಿವರಿಸುತ್ತದೆ. ಅಂತೆಯೇ ಬಸವಣ್ಣನವರ  ವಚನಗಳಲ್ಲಿಯೂ ಅವರ ಸಾಮಾಜಿಕ ಚಿಂತನೆಗಳಲ್ಲಿಯೂ ಇಂತಹ ಆಂತರಂಗಿಕ ಸಮಾಜವನ್ನು ಬೆಸೆಯುವ ಅಂಶಗಳನ್ನು ನೋಡಬಹುದು.  ಇಲ್ಲಿ ವ್ಯಕ್ತಿಸುಧಾರಣೆ, ಸಮಾಜ ಸುಧಾರಣೆ ಎಂಬ  ಎರಡು ಭಾಗಗಳನ್ನು ನೋಡಬಹುದು ಸಮಾಜ ಸುಧಾರಣೆಯ ಪರಿಪ್ರೇಕ್ಷದಲ್ಲಿ ಬರುವ  ಆರ್ಥಿಕ ಚಿಂತನೆ  ಕುರಿತ ವಚನ ಸಾರ್ವಕಾಲಿಕ ಮಹತ್ವವನ್ನು ಪಡೆದುಕೊಂಡಿದೆ. ಸಂಪತ್ತಿನ  ಅಕ್ರೋಢಿಕರಣ ಅದರಲ್ಲಿ ಪ್ರಮುಖವಾದುದು.

     ‘ ಸಂಪತ್ತನ್ನು ಹೊಂದಬೇಕೆನ್ನುವ  ಹಂಬಲ ಹಾಗೂ  ಆ ಬಗೆಗಿನ ಚತುರತೆ ಏನಿದೆಯೊ ಅದು ದುರಾಸೆಯ ಜೀವನಾಡಿ.  ಇದನ್ನೆ  ಗೌತಮಬುದ್ಧನೂ ಆಸೆಯೇ ದುಃಖಕ್ಕೆ ಮೂಲ  ಎಂದಿರುವುದು. ಸಂಪತ್ತನ್ನು ಕೂಡಿ ಹಾಕುವುದರಿಂದ ಸಮಾಜದಲ್ಲಿ ಅಸಮಾನತೆ ಉಂಟಾಗುತ್ತದೆ.ಇದನ್ನುತೀವ್ರವಾಗಿ ವಿರೋಧಿಸಿದವರು ಭಕ್ತಿ ಭಂಡಾರಿ ಬಸವಣ್ಣನವರು.  ಅನಗತ್ಯ ಸಂಪತ್ತನ್ನು ಕೂಡಿ ಹಾಕುವುದಕ್ಕೆ ವಿರೋಧವಿರುವ ವಚನವೊಂದು ಹೀಗಿದೆ-

           ಹೊನ್ನಿನಿಳಗೊಂದೊರೆಯ, ಸೀರೆಯೊಳಗೊಂದೆಳೆಯ

          ಇಂದಿಂಗೆ ನಾಳಿಂಗೆ ಬೇಕೆನೆಂದಾದರೆ

          ನಿಮ್ಮಾಣೆ! ಪುರಾತನರಾಣೆ,

          ನಿಮ್ಮ ಶರಣಿರಿಗಲ್ಲದೆ ಮತ್ತೊಂದನರಿಯೆ ಕೂಡಲಸಂಗಮದೇವಾ.

     ಸಂಪತ್ತಿನ ಸಂಗ್ರಹವಾದಂತೆಲ್ಲಾ ಅದು ಆಯಾ ವ್ಯಕ್ತಿಗಳಲ್ಲಿ ಇಲ್ಲದ ಪ್ರತಿಷ್ಠೆ ಮತ್ತು ಅಹಂಕಾರಗಳು ಹುಟ್ಟಲು ಕಾರಣವಾಗುತ್ತದೆ. ಅದೂ ಅನಾಯಾಸವಾಗಿ, ಮೋಸದಿಂದ, ವಾಮಮಾರ್ಗದಿಂದ,   ಇನ್ನೊಬ್ಬರಿಗೆ ಆತ್ಮವಂಚನೆ, ಅರ್ಥವಂಚನೆ ಮಾಡಿ ಅವರ ದಿಕ್ಕು ತಪ್ಪಿಸಿ ಅವರಿಗೆ ಅವಮಾನ ಮಾಡಿ ಪಡೆದಾಗಲಂತೂ  ಹೆಚ್ಚು.  ಇದರಿಂದ  ಕುಟುಂಬದಲ್ಲಿ, ಸಮಾಜದಲ್ಲಿ ಅಸಮತೋಲನ ಹೆಚ್ಚಿ, ಅದು ಎಲ್ಲಾ ಬಗೆಯ ಮಾನಸಿಕ ಕ್ಷೋಭೆಗಳಿಗೆ ಕಾರಣವಾಗಬಲ್ಲದು. ಸಂಬಂಧಗಳ ತಿರಸ್ಕಾರಕ್ಕೆ ಕಾರಣವಾಗಬಹುದು.

    ಈ ಕ್ಷೋಭೆಗಳೆ ಸಮಾಜದಲ್ಲಿ ಅರಾಜಕತೆಯನ್ನು ಸೃಷ್ಠಿಸಬಲ್ಲವು. ಎಂಬ  ಆತಂಕ ಬಸವಣ್ಣನವರಿಗೆ ಶತಮಾನಗಳ ಹಿಂದೆಯೇ ಕಾಡಿತ್ತು .ಅದು ಅಕ್ಷರಶಃ ಈಗಲೂ ನಡೆಯುತ್ತದೆ. ಹಣದ ವ್ಯಾಮೋಹಕ್ಕೆ,  ನಿಧಿಯ ವ್ಯಾಮೋಹಕ್ಕೆ ಭಗವಂತನ ಸನ್ನಿಧಿಯನ್ನು ನಾವು ಮರೆಯುತ್ತ ಇದ್ದೇವೆ.  “ಪರರ ವಸ್ತು ಪಾಷಾಣ” ಎಂಬ ಮಾತನ್ನು ನಮ್ಮ ಹಿರಿಯರು ಬಹಳ ಹಿಂದೆಯೇ ಹೇಳಿದ್ದಾರೆ  ಆದರೆ ನಮ್ಮ ಸಮಾಜದಲ್ಲಿ  ಮರೆತೇ ಹೋಗಿದೆ ಲೋಭಿತನದ ಬದುಕನ್ನು ಬದುಕುವ ಕುಹಕಿಗಳೆ ನಮ್ಮ ನಡುವಿರುವುದು. ಹಣದ ವಿಷಯ ವಿಷವಿದ್ದಂತೆ ನಿಧಾನವಾಗಿಯಾದರು ಅದು ಆಪೋಷಣ ತೆಗೆದುಕೊಳ್ಳುತ್ತದೆ.  ಹಾಗಾಗಿ ನಮ್ಮದೇನಿದೆಯೊ ಅಷ್ಟನ್ನು ಬಿಟ್ಟು ಪರರ ಪಾಲನ್ನು ಅನುಭವಿಸಿದರೆ  ಪಾಷಾಣ ತಿಂದಂತೆಯೇ. 

    ಸಂಪತ್ತಿನ ಅಕ್ರೋಢಿಕರಣ ಕುರಿತ ಇಂಥ ಬಸವಣ್ಣನವರ ವಚನಗಳು ಸಮಾಜ ಸುಧಾರಣೆಯ  ಉದ್ದೇಶಗಳನ್ನು ಹೊಂದಿದೆ. ಈ ಸುಧಾರಣೆಗಳು ವ್ಯಕ್ತಿ ಸುಧಾರಣೆಯಿಂದಲೇ ಆಗಬೇಕೆನ್ನುವುದು  ಪ್ರಸ್ತುತ ವಚನದ ಮುಖ್ಯ ಆಶಯವಾಗಿದೆ

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ. 

    spot_img

    More articles

    1 COMMENT

    1. ಉತ್ತಮವಾದ ಸಂದೇಶ…. ಧನ್ಯವಾದಗಳು ವಿಚಾರಗಳು ಸದಾ ಹೀಗೆ ಮುಂದುವರಿಯಲಿ

    LEAVE A REPLY

    Please enter your comment!
    Please enter your name here

    Latest article

    error: Content is protected !!