ಷೇರುಪೇಟೆಗೆ ಆರಂಭಿಕ ಷೇರು ವಿತರಣೆಗಳು ಕಳಸಪ್ರಾಯಗಳಿದ್ಧಂತೆ. ಷೇರುಪೇಟೆಯಲ್ಲಿ ವಹಿವಾಟಾಗಲು ಸಾಮಾನ್ಯವಾಗಿ ಐಪಿಒ ಗಳು ಅತ್ಯವಶ್ಯಕ. ಹಾಗಾಗಿ ಹೆಚ್ಚಿನ ಕಂಪನಿಗಳು ಆರಂಭದಲ್ಲಿ ಪ್ರವೇಶವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಬೇಕೆಂದು ವೈವಿಧ್ಯಮಯ ರೀತಿಯ ಅಲಂಕಾರಿಕವಾದ ಪ್ರಚಾರ ನೀಡುತ್ತವೆ. ತಾರಾಮಣಿಗಳ ಮೂಲಕವೂ ಪ್ರಚಾರಗಳಿಗೆ ಹೆಚ್ಚಿನ ಒತ್ತು ನೀಡುತ್ತವೆ. ಇದಕ್ಕೆ ಪೂರಕವಾಗಿ ಐಪಿಒ ಗಳಿಗೆ ನಿಗದಿ ಪಡಿಸುವ ವಿತರಣೆ ಬೆಲೆಗಳು ಸಹ ಹೆಚ್ಚಾಗಿರುವುದರಿಂದ ಮಾರ್ಕೆಟಿಂಗ್ ತಂತ್ರವಾಗಿಯೂ ಪ್ರಚಾರ ನೀಡಬೇಕಾಗುತ್ತದೆ.
ಪೇಟೆಯ ಸೂಚ್ಯಂಕಗಳು ಗರಿಷ್ಠಮಟ್ಟದಲ್ಲಿದ್ದಾಗ ಕಾರ್ಪೊರೇಟ್ ವಲಯದಲ್ಲಿ ಉತ್ಸಾಹ ತಾಂಡವವಾಡುತ್ತದೆ. ಈ ಉತ್ಸಾಹ ಆಂತರಿಕ ಸಾಧನೆಯಿಂದ ಆಗಿರದೆ ಅದು ಯಾವ ರೀತಿ ತನ್ನ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳಬೇಕು ಎಂಬುದರ ಬಗ್ಗೆ ಆಗಿರುತ್ತದೆ. ಹೀಗಾಗಿ ಆರಂಭದಲ್ಲಿ ವಿಜೃಂಭಿಸಿದ ಐಪಿಓ ಗಳು ದೀರ್ಘಕಾಲ ಅದೇ ಸಾಧನೆ ಮಾಡದೆ ಹೂಡಿಕೆದಾರರಿಗೆ ನಿರಾಶೆ ಮಾಡುತ್ತಿವೆ.
ಸೆನ್ಸೆಕ್ಸ್ ಏರಿಕೆ- ಸಂಪನ್ಮೂಲ ಸಂಗ್ರಹಣೆ ಪೂರಕ
ಈಗ ಸೆನ್ಸೆಕ್ಸ್ ಆದಿಯಾಗಿ ಎಲ್ಲಾ ಸೂಚ್ಯಂಕಗಳು ಗರಿಷ್ಠದಲ್ಲಿವೆ. ಈ ಸಂದರ್ಭದಲ್ಲಿ ಅನೇಕ ಕಂಪನಿಗಳು ನಾನ್ ಕನ್ವರ್ಟಬಲ್ ಬಾಂಡ್ ಗಳ ಮೂಲಕ ಸಂಪನ್ಮೂಲ ಸಂಗ್ರಹಣೆಗೆ ಮುಂದಾಗಿವೆ. ಅವುಗಳಲ್ಲಿ ಸಾರ್ವಜನಿಕ ವಲಯದ ಕಂಪನಿಗಳೂ ಕೂಡ ಸ್ಪರ್ಧಾತ್ಮಕ ರೀತಿಯಲ್ಲಿ ಸಾಗಿವೆ.
ಪವರ್ ಫೈನಾನ್ಸ್ ಕಾರ್ಪೊರೇಷನ್ ಇತ್ತೀಚೆಗೆ ರೂ.1,000 ಮುಖಬೆಲೆಯ ಎನ್ ಸಿ ಡಿಗಳನ್ನು ಶೇ.7.15 ರ ಗರಿಷ್ಠ ಕೂಪನ್ ದರದಲ್ಲಿ ವಿತರಿಸಿದರೆ, ಎನ್ ಟಿ ಪಿ ಸಿ ಕಂಪನಿಯು ಶೇ.6.43 ರಂತೆ, ಎಸ್ ಜೆ ವಿ ಎನ್ ಎಲ್ ಕಂಪನಿ ರೂ.2,000 ಕೋಟಿ ಮೌಲ್ಯದ ಬಾಂಡ್ ಗಳನ್ನು ವಿತರಿಸಲು ಮುಂದಾಗಿವೆ. ಈ ಮಧ್ಯೆ ಹಿಂದಿನ ವರ್ಷ ಹೆಚ್ಚಿನ ಆಪತ್ತಿನಲ್ಲಿದ್ದು, ರೂ.8,000 ಕ್ಕೂ ಹೆಚ್ಚಿನ ಮೌಲ್ಯದ ಬಾಂಡ್ ಗಳನ್ನು ರೈಟಾಫ್ ಮಾಡಿದ, ಶೇಕಡ 75% ಷೇರುಗಳನ್ನು ಮೂರು ವರ್ಷಗಳವರೆಗೂ ಸ್ಥಗಿತಗೊಳಿಸಿದ ಯೆಸ್ ಬ್ಯಾಂಕ್ ತನ್ನ ಡಿಸೆಂಬರ್ ಫಲಿತಾಂಶ ಪ್ರಕಟಿಸಿದ ತಕ್ಷಣವೇ ರೂ.10,000 ಕೋಟಿ ಮೌಲ್ಯದ ಸಂಪನ್ಮೂಲ ಸಂಗ್ರಹಣೆಯ ಗುರಿಹೊಂದಿದೆ. ಇದು ಹಿಂದಿನ ವರ್ಷದ ಜುಲೈ ನಲ್ಲಿ ರೂ.15,000 ಕೋಟೆ ಮೌಲ್ಯದ ಹಕ್ಕಿನ ಷೇರು ವಿತರಿಸಿತ್ತು. ಎಲ್ & ಟಿ ಫೈನಾನ್ಸ್ ಹೋಲ್ಡಿಂಗ್ಸ್, ಊರ್ಜಾ ಗ್ಲೋಬಲ್ ಕಂಪನಿಗಳು ಸಹ ಹಕ್ಕಿನ ಷೇರಿನ ಮೂಲಕ ಸಂಪನ್ಮೂಲ ಹೆಚ್ಚಿಸಿಕೊಳ್ಳಲು ಯೋಜಿಸಿವೆ.
ಕಂಪನಿಗಳು ವಿತರಿಸುವ ಪರ್ಪೆಚುಯಲ್ ಬಾಂಡ್ ಗಳಿಗೆ ಹೆಚ್ಚಿನ ಕೂಪನ್ ದರ ನಿಗದಿಪಡಿಸಲಾಗುತ್ತಿದೆ. ಅಲ್ಲದೆ ಈ ಬಾಂಡ್ ಗಳ ಮುಖಬೆಲೆ ರೂ.10 ಲಕ್ಷವಾಗಿರುತ್ತದೆ. ಸೆಕ್ಯೂರ್ಡ್ ಎಂಬ ನಾಮಾಂಕಿತದಲ್ಲಿ ವಿತರಿಸಲಾಗುವ ಬಾಂಡ್ ಗಳೇ ಆಪತ್ತಿಗೆ ತಳ್ಳುವಾಗ, ಅಪಾಯದ ಹೂಡಿಕೆ ಎಂದು ಮೊದಲೇ ತಿಳಿದಿರುವ ಈ ಪರ್ಪೆಚುಯಲ್ ಬಾಂಡ್ ಗಳಲ್ಲಿ ಸಾಮಾನ್ಯರೂ ಹೂಡಿಕೆ ಮಾಡಲು ಅವಕಾಶ ಕಲ್ಪಿಸುವುದು ಅಗತ್ಯ. ಇದರ ಜೊತೆಗೆ ವಿತರಿಸಿದ ಬಾಂಡ್ ಗಳು ಸ್ಟಾಕ್ ಎಕ್ಸ್ ಚೇಂಜ್ ಫ್ಲೋರ್ ನಲ್ಲಿ ವಹಿವಾಟಿಗೆ ನೋಂದಾಯಿಸುವುದು ಕಡ್ಡಾಯ ಮಾಡಬೇಕು. ಈಗಿನಂತೆ ಕೇವಲ ಮ್ಯೂಚುಯಲ್ ಫಂಡ್ ಗಳು ವಿತ್ತೀಯ ಸಂಸ್ಥೆಗಳು ಮಾತ್ರ ಹೂಡಿಕೆಗೆ ಅವಕಾಶವಿದ್ದರೂ, ಮ್ಯೂಚುಯಲ್ ಫಂಡ್ ಗಳು ವಿತ್ತೀಯ ಸಂಸ್ಥೆಗಳಲ್ಲಿ ಪರೋಕ್ಷವಾಗಿ ಸಣ್ಣ ಹೂಡಿಕೆದಾರರ ಹೂಡಿಕೆಯೂ ಇರುತ್ತದೆ ಎಂಬುದು ಗಮನಾರ್ಹ ಅಂಶ.
ಇವುಗಳಲ್ಲದೆ ಅನೇಕ ಕಂಪನಿಗಳು ಐ ಪಿ ಒ ಮೂಲಕ ಷೇರು ವಿತರಣೆಯ ಯೋಜನೆ/ ಯೋಚನೆಗಳನ್ನು ರೂಪಿಸಿಕೊಂಡಿವೆ. ಈ ತಿಂಗಳಲ್ಲಿ ಸಾರ್ವಜನಿಕ ವಲಯದ ಕಂಪೆನಿಯಾದ ಇಂಡಿಯನ್ ರೇಲ್ವೆ ಫೈನಾನ್ಸ್ ಕಾರ್ಪೊರೇಷನ್, ಇಂಡಿಗೋ ಪೇಂಟ್ಸ್, ಹೋಂ ಫಸ್ಟ್ ಫೈನಾನ್ಸ್ ಗಳು ಐ ಪಿ ಒ ಮೂಲಕ ಷೇರು ವಿತರಣೆ ಪ್ರಕ್ರಿಯೆ ಆರಂಭಿಸಿವೆ. ಸ್ಟೋವ್ ಕ್ರಾಫ್ಟ್ ಕಂಪನಿಯ ರೂ.385 ರಂತೆ ಷೇರು ವಿತರಣೆ 25 ರಿಂದ ಆರಂಭವಾಗಲಿದೆ. ಈ ಐ ಪಿ ಒ ಗಳು ಸರಣಿ ರೂಪದಲ್ಲಿ ಅಂದರೆ ಒಂದಾದ ನಂತರ ಒಂದರಂತೆ ಆರಂಭವಾಗುವ ರೀತಿ ಯೋಜಿಸಲಾಗಿದೆ ಎಂಬುದು ಗಮನಾರ್ಹ ಅಂಶ.
ಗ್ರೇ ಮಾರ್ಕೆಟ್ ಎಂಬ ಭೂತಗನ್ನಡಿ
ಷೇರುಗಳ ಐಪಿಒ ಗಳ ವಿತರಣೆಗೆ ಮುನ್ನ ಗ್ರೇ ಮಾರ್ಕೆಟ್ ಎಂಬ ಭೂತಗನ್ನಡಿಯ ಪ್ರಚಾರಕ್ಕೆ ಗಮನ ನೀಡುವುದು ಒಳಿತಲ್ಲ.ಗ್ರೇ ಮಾರ್ಕೆಟ್ ಎಂದು ಅನಾದಿಕಾಲದಿಂದ ಕರೆಯುವ ಊಹಾ ಪೋಹಗಳ ಆಧಾರಿತ ವರದಿಗಳು ಐಪಿಓ ಪ್ರೀಮಿಯಂ ದರದಲ್ಲಿ ವಿತರಣೆಯಾಗುವ ಸುದ್ದಿ ಹಬ್ಬಿಸುತ್ತವೆ. ಇದಕ್ಕೆ ಯಾವುದೇ ಆಧಾರ ಇರುವುದಿಲ್ಲ. ನಂತರ ವಿತರಣೆಯ ಕೊನೆಯ ದಿನ ಅಥವಾ ಲಿಸ್ಟಿಂಗ್ ಮುಂಚಿನ ದಿನಗಳಲ್ಲಿ ಗ್ರೇ ಮಾರ್ಕೆಟ್ ಪ್ರೀಮೀಯಂ ಕರಗಿಹೋಗಿರುತ್ತದೆ. ಈ ಗ್ರೇ ಮಾರ್ಕೆಟ್ ಎಂಬುದು ಅನಧಿಕೃತವಾಗಿದ್ದು, ಕಾನೂನು ಬಾಹಿರವಾದುದಾಗಿದೆ. ಸಣ್ಣ ಹೂಡಿಕೆದಾರರನ್ನು ಐಪಿಒ ಗಳಲ್ಲಿ ಹಣ ತೊಡಗಿಸಲು ಪ್ರೇರೇಪಿಸುವ ತಂತ್ರವೂ ಆಗಿರುತ್ತದೆ.
ಆರಂಭ ಶೂರತ್ವ
ಅನೇಕ ಕಂಪನಿಗಳು ವಿತರಣೆಯ ನಂತರ ಲಿಸ್ಟಿಂಗ್ ಪ್ರೈಸ್ ಉತ್ತಮವಾಗಿದ್ದು, ನಂತರದ ದಿನಗಳಲ್ಲಿ ಅವುಗಳ ಬೆಲೆ ವಿತರಣೆ ಬೆಲೆಗಿಂತ ಹೆಚ್ಚಿದ್ದರೂ ಆರಂಭದ ಗರಿಷ್ಠಮಟ್ಟವನ್ನು ಉಳಿಸಿಕೊಳ್ಳಲಾಗದೆ ಜಾರಿವೆ. ಒಂದು ರೀತಿಯ ಆರಂಭಿಕ ಶೂರತ್ವವನ್ನು ಪ್ರದರ್ಶಿಸುತ್ತವೆ. ಆದ್ದರಿಂದ ಹೆಚ್ಚಿನವುಗಳಲ್ಲಿ ಆರಂಭಿಕ ಹಂತದಲ್ಲೇ ಮಾರಾಟಮಾಡುವುದಕ್ಕೆ ಪ್ರೇರೇಪಿಸುತ್ತವೆ. ಇದು ಐ ಪಿ ಒ ಗಳು ಕೇವಲ ವ್ಯವಹಾರಿಕ ಪ್ರಕ್ರಿಯೆ ಎಂದು ಸಾಬೀತುಪಡಿಸಿವೆ.
ಇತ್ತೀಚಿನ ಕೆಲ ಐ ಪಿ ಒ ಗಳ ಉದಾಹರಣೆ ಹೀಗಿವೆ:
ಎಸ್ ಬಿ ಐ ಕಾರ್ಡ್ಸ್: ಎಸ್ ಬಿ ಐ ಕಾರ್ಡ್ಸ್ ಮಾರ್ಚ್ 2020 ರಲ್ಲಿ ರೂ.755 ರಲ್ಲಿ ವಿತರಣೆಯಾದ ನಂತರ ರೂ. 500 ರೊಳಗೆ ಕುಸಿದು ನಂತರ ಪುಟಿದೆದ್ದಿದೆ. ಈ ಕುಸಿತಕ್ಕೆ ಪೇಟೆಗಳು ಲಾಕ್ ಡೌನ್, ಕೊರೋನ ಕಾರಣದ ಸೀಮಿತ ಚಟುವಟಿಕೆಗಳೂ ಕಾರಣವಿರಬಹುದಾದರೂ, ಹೂಡಿಕೆದಾರರಿಗೆ ಲಾಭದಾಯಕವೇ ಎಂಬುದು ಮುಖ್ಯ.
ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ನಾಲಜೀಸ್:ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ನಾಲಜೀಸ್ ಸೆಪ್ಟೆಂಬರ್ 2020 ರಲ್ಲಿ ರೂ.166 ರಲ್ಲಿ ವಿತರಿಸಿದ್ದು ರೂ.350 ರ ಸಮೀಪದಲ್ಲಿ ಲಿಸ್ಟಿಂಗ್ ಆದ ನಂತರ ನವೆಂಬರ್ ನಲ್ಲಿ ರೂ.286 ರವರೆಗೂ ಕುಸಿಯಿತು. ನಂತರ ಜನವರಿಯಲ್ಲಿ ರೂ.395 ಕ್ಕೆ ಜಿಗಿಯಿತು. ಸಧ್ಯ ರೂ.370 ರ ಸಮೀಪವಿದೆ.
ಕೆಂಕಾನ್ ಸೆಷಾಲಿಟಿ ಕೆಮಿಕಲ್ಸ್:ಕೆಂಕಾನ್ ಸೆಷಾಲಿಟಿ ಕೆಮಿಕಲ್ಸ್ ಕಂಪನಿ ಸೆಪ್ಟೆಂಬರ್ 2020 ರಲ್ಲಿ ರೂ.340 ರಂತೆ ವಿತರಿಸಿದ್ದು, ರೂ.730 ರ ಸಮೀಪದಿಂದ ಆರಂಭವಾಗಿ ರೂ.743 ತಲುಪಿ ಅಕ್ಟೋಬರ್ ನಲ್ಲಿ ರೂ.398 ರವರೆಗೂ ಕುಸಿದು ನಂತರ ರೂ.440 ರ ಸಮೀಪಕ್ಕೆ ಹಿಂದಿರುಗಿಸಿದರೂ ಗರಿಷ್ಠದ ಬೆಲೆ ತಲುಪದಾಗಿದೆ.
ಬರ್ಜರ್ ಕಿಂಗ್:ಬರ್ಜರ್ ಕಿಂಗ್ ಡಿಸೆಂಬರ್ ನಲ್ಲಿ ರೂ.60 ರಂತೆ ವಿತರಣೆಯಾದ ನಂತರ ರೂ.115 ರಂತೆ ಲೀಸ್ಟಿಂಗ್ ಆಗಿ ರೂ.219 ರವರೆಗೂ ಜಿಗಿದು ಮೂರೇ ದಿನಗಳಲ್ಲಿ ರೂ.108 ರವರೆಗೂ ಕುಸಿಯಿತು.
ಆಂಟೋಣಿ ವೇಸ್ಟ್ ಹ್ಯಾಂಡ್ಲಿಂಗ್ ಸೆಲ್:ಕಳೆದ ಮಾರ್ಚ್ ತಿಂಗಳಲ್ಲಿ ಪ್ರತಿ ರೂ. 5 ರ ಮುಖಬೆಲೆಯ ಷೇರಿಗೆ ರೂ.300 ರಂತೆ ಐಪಿಒ ಮೂಲಕ ಷೇರು ವಿತರಿಸಲು ಪ್ರಯತ್ನಿಸಿ ವಿಫಲವಾದ ಈ ಕಂಪನಿ ಡಿಸೆಂಬರ್ ತಿಂಗಳಲ್ಲಿ ಪ್ರತಿಷೇರಿಗೆ ರೂ.315 ರಂತೆ ಷೇರು ವಿತರಿಸಲು ಜಯಶಾಲಿಯಾಗಿದೆ. ಇದು ಕಂಪನಿಗಳ ಧನದಾಹಿಗುಣವನ್ನು ಬಿಂಬಿಸುತ್ತದೆ. ಆರಂಭದಲ್ಲಿ ರೂ.436 ರಲ್ಲಿದ್ದು ನಂತರ ರೂ.492 ವರೆಗೂ ಜಿಗಿತ ಕಂಡು ಕೇವಲ 10/12 ದಿನಗಳಲ್ಲಿ ರೂ.296 ರವರೆಗೂ ಕುಸಿದು ಸಧ್ಯ ರೂ.302 ರ ಸಮೀಪವಿದೆ.
ಹೂಡಿಕೆದಾರರ ಬಂಡವಾಳ ಕರಗಿಸಿದ ಐಪಿಒ ಗಳು
ವಾಟೆಕ್ ವಾಬಾಗ್ ಕಂಪನಿ 2011 ರಲ್ಲಿ ರೂ.1,310 ರಂತೆ ವಿತರಿಸಿದ ನಂತರ 2015 ರಲ್ಲಿ 1:1 ರ ಬೋನಸ್ ನೀಡಿತು. ಈಗ ರೂ.194 ರ ಸಮೀಪವಿದೆ.
ಇರೋಸ್ ಮೀಡಿಯಾ ಕಂಪನಿ ರೂ.175 ರಂತೆ ವಿತರಿಸಿದ್ದು ಈಗ ರೂ.22 ರ ಸಮೀಪವಿದೆ.
ರಾಂಕಿ ಇನ್ಫ್ರಾಸ್ಟ್ರಕ್ಚರ್ ರೂ.450 ರಂತೆ ವಿತರಿಸಿದ್ದು ಈಗ ರೂ.46 ರ ಸಮೀಪವಿದೆ.
ಬ್ರೂಕ್ಸ್ ಲ್ಯಾಬೊರೇಟರೀಸ್ ಕಂಪನಿ 2011 ರಲ್ಲಿ ಪ್ರತಿ ಷೇರಿಗೆ ರೂ.100 ರಂತೆ ವಿತರಿಸಿತು, ಆದರೆ ಷೇರಿನ ಬೆಲೆ ವಿತರಣೆಬೆಲೆಯಿಂದ ದೂರವಿದ್ದು ಸಧ್ಯ ರೂ.61 ರ ಸಮೀಪವಿದೆ. ಈ ವರ್ಷದ ಕನಿಷ್ಠ ಬೆಲೆ ರೂ.14.05 ಆಗಿದೆ.
ಪ್ರಕಾಶ್ ಸ್ಟೀಲ್ ಏಜ್ : ರೂ.110 ರಂತೆ ವಿತರಿಸಿದ ಈ ಕಂಪನಿ ಷೇರಿನ ಬೆಲೆ ರೂ.0.95 ರಲ್ಲಿದೆ
ತಿಜಾರಿಯಾ ಪೊಲಿಪೈಪ್ಸ್: 2011 ರಲ್ಲಿ ರೂ.60 ರಂತೆ ವಿತರಿಸಿದ ಈ ಕಂಪನಿ ಷೇರಿನ ಬೆಲೆ ರೂ.8 ರ ಸಮೀಪವಿದೆ.
ಟಿಡಿ ಪವರ್ ಸಿಸ್ಟಂ, ಬಜಾಜ್ ಕಾರ್ಪ್ ( ಈಗಿನ ಬಜಾಜ್ ಕನ್ಸೂಮರ್ಸ್), ನಿತೇಶ್ ಎಸ್ಟೇಟ್ಸ್ ( ಎನ್ ಇ ಎಲ್ ಹೋಲ್ಡಿಂಗ್ಸ್), ಸ್ಟರ್ಲಿಂಗ್ ಅಂಡ್ ವಿಲ್ಸನ್ ಸೋಲಾರ್, ಚಲೆಟ್ ಹೋಟೆಲ್ಸ್, ವರೋಕ್ ಇಂಜಿನಿಯರಿಂಗ್, ಲೆಮನ್ ಟ್ರೀ ಹೊಟೆಲ್ಸ್, ಹೆಚ್ ಎ ಎಲ್, ನ್ಯೂ ಇಂಡಿಯಾ ಅಶುರನ್ಸ್ ಕಂ, ಜನರಲ್ ಇನ್ಶೂರನ್ಸ್ ಕಾರ್ಪೊರೇಷನ್, ಹುಡ್ಕೋ, ಬಿ ಎಸ್ ಇ, ಮ್ಯೂಸಿಕ್ ಬ್ರಾಡ್ ಕ್ಯಾಸ್ಟ್, ಮುಂತಾದ ಕಂಪನಿಗಳು ಈ ಪಟ್ಟಿಯಲ್ಲಿವೆ.
ಆಂಕರ್ ಇನ್ವೆಸ್ಟರ್ಸ್:ಕಂಪನಿಗಳು ತಮ್ಮ ಐಪಿಒ ಗಿಂತ ಮುಂಚಿತವಾಗಿ, ಹೂಡಿಕೆದಾರರಲ್ಲಿ, ವಿಶೇಷವಾಗಿ ಸಣ್ಣ ಹೂಡಿಕೆದಾರರಲ್ಲಿ ಕಂಪನಿಯ, ವಿತರಿಸುತ್ತಿರುವ ದರದ ಬಗ್ಗೆ ನಂಬಿಕೆ ಮೂಡಿಸಲು 2009 ರಲ್ಲಿ ಆಂಕರ್ ಇನ್ವೆಸ್ಟರ್ ಯೋಜನೆ ಜಾರಿಗೊಳಿಸಲಾಯಿತು. ಇದರಂತೆ ಶೇ.30 ರಷ್ಠು ವಿತರಣೆಯನ್ನು ಹಿತಾಸಕ್ತರ ಹೊರತಾದವರಿಗೆ, ಕನಿಷ್ಠ ರೂ.5 ಕೋಟಿಗೂ ಹೆಚ್ಚಿನ ಮೌಲ್ಯದ ಷೇರುಗಳನ್ನು ಹಿಂದಿನದಿನ ವಿತರಿಸಬಹುದಾಗಿದೆ. ಈ ರೀತಿ ವಿತರಿಸಿದ ಷೇರುಗಳು 30 ದಿನಗಳ ಲಾಕ್ ಇನ್ ಇದ್ದು, 30 ದಿನಗಳ ನಂತರ ಆಂಕರ್ ಇನ್ವೆಸ್ಟರ್ ಗಳು ಈ ಷೇರುಗಳನ್ನು ಮಾರಾಟಮಾಡಬಹುದಾಗಿದೆ.
ವಿಸ್ಮಯಕಾರಿ ಅಂಶ:ಸೆನ್ಸೆಕ್ಸ್ 50 ಸಾವಿರದ ಗಡಿದಾಟಿ ದಾಖಲೆ ನಿರ್ಮಿಸಿದೆ. ಆದರೆ ಅದರ ಮಾತೃ ಸಂಸ್ಥೆ ಬಿ ಎಸ್ ಇ ಷೇರಿನ ಬೆಲೆ ಮಾತ್ರ ವಿತರಣೆ ಬೆಲೆಗಿಂತ ಕಡಿಮೆಯಿದೆ. 2017 ರಲ್ಲಿ ಪ್ರತಿ ಷೇರಿಗೆ ರೂ.806 ರಂತೆ ವಿತರಿಸಿದ ಈ ಷೇರಿನ ಬೆಲೆ ರೂ.601 ರ ಸಮೀಪವಿದೆ.
ಈ ಎಲ್ಲಾ ಬೆಳವಣಿಗೆಗಳನ್ನು ಪರಿಶೀಲಿಸಿದಾಗ ಐಪಿಒ ಎಂದರೆ ಕೇವಲ ಇರಿಟೆಟಿಂಗ್ ಪಬ್ಲಿಕ್ ಆಫರ್ ಆಗಿದೆಯೇ ಎಂಬ ಭಾವನೆ ಸಾಮಾನ್ಯ ಹೂಡಿಕೆದಾರರಲ್ಲಿ ಬರುವಂತಾಗಿದೆ. ವಿತರಣೆಯಲ್ಲಿ ಹೆಚ್ಚು ಸಂಗ್ರಹಣೆಯಾದಲ್ಲಿ ಅಲಾಟ್ಮೆಂಟ್ ದೊರೆಯದು, ಕಡಿಮೆಯಾದಲ್ಲಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಲಭಿಸದು. ಆದ್ದರಿಂದ ಉತ್ತಮ ಮಾರ್ಗ ಎಂದರೆ ಲಿಸ್ಟಿಂಗ್ ಆದ ನಂತರ ಪೇಟೆಯ ಚಟುವಟಿಕೆ, ಕಂಪನಿಯ ಗುಣಮಟ್ಟ ಆಧರಿಸಿ ಖರೀದಿ ನಡೆಸುವುದಾಗಿದೆ.
Photo by Alec Favale on Unsplash