ಮೊನ್ನೆ ಗೆಳತಿಯ ಮನೆಗೆ ಹೋಗಿದ್ದೆ.ಅವಳ ಪತಿರಾಯರು ತುಸು ಹೊತ್ತು ಕುಶಲೋಪರಿ ಮಾತನಾಡಿದ ಮೇಲೆ ಮಹಡಿಯ ಅವರ ಕೋಣೆಗೆ ಹೋಗುತ್ತಾ ಮೆಟ್ಟಿಲಲ್ಲಿ ನಿಂತು ಮಂಜೇಗೌಡ ..ಮಂಜೇಗೌಡ ಅಂತ ದೊಡ್ಡ ಧ್ವನಿಯಲ್ಲಿ ಕರೆದರು.ವಿಷ್ಣುಭಕ್ತರ ಮನೆಯಲ್ಲಿ ಮಂಜೇಗೌಡ ಹೇಗೆ ಬಂದ ಅಂತ ನಾನು ತುಸು ಕನ್ಫ್ಯೂಸ್ ನಲ್ಲಿ ಇರುವಾಗಲೇ ಹಿಂದಿನ ಬಾಗಿಲಿಂದ ಇದ್ದಿಲಿಗಿಂತಲೂ ಕಪ್ಪಗಿನ ಎತ್ತರದ ನಾಯಿಯೊಂದು ಪೂರ್ಣ ಹಸನ್ಮುಖಿಯಾಗಿ ಬಾಲ,ಸೊಂಟ ಮುಖದವರೆಗೂ ವಿಧವಿಧವಾಗಿ ನುಲಿಯುತ್ತಾ ಗೆಳತಿಯ ಪತಿಯ ಹತ್ತಿರ ಹೋಗಿ ನಿಂತಾಗ ಈ ಮಂಜೇಗೌಡ ಯಾರೂಂತ ನನಗೆ ಗೊತ್ತಾದದ್ದು.
ಇದೆಂಥ ಹೆಸರೇ ತಾಯಿ ಅಂತ ನನ್ನ ಗೆಳತಿಯನ್ನು ಕೇಳಿದ್ದಕ್ಕೆ ವ್ಯವಹಾರದಲ್ಲಿ ವಂಚಿಸಿದ ಗೆಳೆಯನೊಬ್ಬನ ಹೆಸರನ್ನು ನಾಯಿಗೆ ಇಟ್ಟುಕೊಂಡು ತೃಪ್ತರಾಗಿದ್ದಾರಂತೆ ಅವಳ ಪತಿರಾಯರು.
ಈ ಸಾಕುಪ್ರಾಣಿಗಳಿಗೂ ಮನುಷ್ಯರ ಹೆಸರೇ ಇಡುತ್ತರಾದರೂ ಈಗೀಗ ಅವಕ್ಕೂ ವಿಪರೀತ ಹೊಸ ಮಾದರಿ ಹೆಸರುಗಳು.
ಹಸುಗಳಿಗೆ ಗೌರಿ,ಪಾರು,ಮಂಗಳಿ,ಕೆಂಪಿ ಅಂತಲೂ ನಾಯಿಗಳಿಗೆ ಸೋನಿ,ಬ್ರೂನೋ,ರಂಗಣ್ಣ,ಕರಿಯ ಅನ್ನೋ ಸೆಮಿ ಸ್ಟೈಲಿಷ್ ಹೆಸರುಗಳು ಹಳೆಯ ಫ್ಯಾಷನ್ನಾದರೂ ನಮ್ಮ ಹಳ್ಳಿಯಲ್ಲಿ ಇನ್ನೂ ಹಳೆಯ ಹೆಸರುಗಳೇ ಮುಂದುವರೆದಿದ್ದು ನಾಯಿ ಹಸುಗಳೂ ಇದಕ್ಕೆ ಯಾವ ವಿರೋಧ ವ್ಯಕ್ತಪಡಿಸದೆ ಸಹಕರಿಸುತ್ತಿರುವುದರಿಂದ ನಮ್ಮಲ್ಲಿ ಪರಿಸ್ಥಿತಿ ಸಹಜವಾಗಿಯೇ ಇದೆ.
ಇತ್ತೀಚೆಗೆ ನನ್ನ ಹಳ್ಳಿಯಲೊಂದು ಘಟನೆ ನಡೆಯಿತು.
ನಮ್ಮೂರಿನ ಅರವತ್ತೆಂಟು ವರ್ಷದ ಅಜ್ಜ ಒಬ್ರು ಬಂದು ಸಣ್ಣನಿರ್ವಾಣಯ್ಯ ಅನ್ನೋ ಅವರ ಹೆಸರು ತೀರ ಹಳೇ ಥರವಾಗಿದೆಯಂತಲೂ,ಹೊಸದೊಂದು ಹೆಸರನ್ನು ತಾನು ಇಟ್ಕೋಬೇಕಂತಲೂ ಹೇಳಿ ,ನಾನಾದರೆ ಹೊರಗೆ ಹೋಗಿ ನಾಲ್ಕು ಜನರ ಜೊತೆಗೆ ಓಡಾಡಿದವಳಾದ್ದರಿಂದ ಈ ಹೆಸರು ಬದಲಿಸಿಕ್ಕೊಳ್ಳುವ ವಿಧಿ ವಿಧಾನಗಳು ತಿಳಿದಿರುತ್ತವದ್ದಾರಿಂದ ತನಗೆ ನೇರ್ಪು ಕೊಡಬೇಕಂತಲೂ ಕೇಳಿದರು.
ಸದಾ ಪಟಾಪಟಿ ಡ್ರಾಸು(ಒಳಚಡ್ಡಿ),ಮೇಲೊಂದು ಶತಮಾನದ ಹಿಂದಿನ ಸಾವಿರ ಕಲೆಗಳುಳ್ಳ ಬಿಳಿ ಎಂದು ಹೆಸರಿಸಲಾಗುವ ಶರ್ಟು ತೊಡುವ ಅವರಿಗೆ ಹುಟ್ಟಿರುವ ಈ ಕೊನೆಯ ಇಚ್ಛೆ ಕೇಳಿ ಪ್ರಜ್ಞೆ ತಪ್ಪಿದಂತಾದರೂ ಮನಸು ಬೆಳೆದಂತೆಲ್ಲಾ ಹಸಿವೂ ಬೆಳೆಯುವುದು ಎನ್ನುವ ಡಿವಿಜಿಯವರ ಮಾತು ನೆನಪಾಗಿ ಇದೆಲ್ಲವೂ ನಾಗರಿಕತೆಯ ಕುರುಹು ಅಂದುಕೊಂಡು ನಮ್ಮ ಹಳ್ಳಿ ಬೆಳೆಯುತ್ತಿರುವ ಕುರಿತು ಮೆಚ್ಚುಗೆಯೆನಿಸಿತು.ಅವರ ಜೀವನ್ಮುಖಿ ಮನಸ್ಸನ್ನು ಸಂತೋಷವಾಗಿಡಲು ಮಾಡಬೇಕಾದ ಸಹಾಯವೆಲ್ಲವನ್ನು ಮಾಡಿದ ನಂತರ ಅವರ ಎರಡು ಜೊತೆ ಚಪ್ಪಲಿ ಸವೆದು ಮೂರನೆಯದು ಕೊಳ್ಳುವ ಹೊತ್ತಿಗೆ ಸಣ್ಣನಿರ್ವಾಣಯ್ಯ ಎಂಬುವ ನಾನು ನಿರಂಜನನೆಂದು ಹೆಸರು ಬದಲಿಸಿಕೊಂಡಿರುವುದಕ್ಕೆ ಪತ್ರಿಕಾ ಪ್ರಕಟಣೆ, ಅಫಿಡವಿಟ್ಟು,ಅಧಿಕೃತ ದಾಖಲೆಗಳು ಅವರ ಕೈ ಸೇರಿದವು.
ಆದರೆ ಅವರು ಮುಂದಲ ಕದ ಮುಚ್ಚಿ ಚಪ್ಪಲಿ ಮೆಟ್ಟಿದೊಡನೆ ಎತ್ಲಗ್ ಹೊಂಟೆ ಸಣ್ನಿರ್ವಾಣಣ್ಣೋ ಅನ್ನೋ ಮಾತು ಮಾತ್ರ ಕೊನೆವರೆಗೂ ಹಾಗೇ ಉಳಿದಿದ್ದು ವಿಪರ್ಯಾಸ.ಕೊನೆಗೆ ಅವರ ಕಾರ್ಯದ ಕಾರ್ಡಿನಲ್ಲೂ ಅವರ ಬಯಕೆಯ ‘ನಿರಂಜನ’ ಹೆಸರನ್ನು ಬ್ರಾಕೆಟ್ಟಿನಲ್ಲಾದರೂ ಇರಿಸುವಷ್ಟರಲ್ಲಿ ಸಾಕುಬೇಕಾಗಿದ್ದು ವಿಧಿಯ ಆಟವೇ ಸರಿ.
ಒಂಚೂರು ಪುರಾಣ ಕಾಲಕ್ಕೆ ಹೋಗಿಬರೋದಾದ್ರೆ
ಅಂಥ ಸೂರ್ಯ ಪುತ್ರನಿಗೆ..,ಹುಟ್ಟಿದಾಗಲೇ ಕುಂಡಲಗಳನ್ನು, ಕವಚವನ್ನೂ ಹೊಂದಿಯೇ ಹುಟ್ಟಿದ್ದ ಎನ್ನಲಾಗುವ ಕರ್ಣನಿಗೆ ..ಕರ್ಣ ಎನ್ನುವ ಹೆಸರನ್ನು ಅವನ ಅಮ್ಮ ಕುಂತಿ ಇಟ್ಟಿದ್ದಾ ಅಥವಾ ಸಾಕಿದ ಅಪ್ಪ ರಾಧೇಯ ಇಟ್ಟಿದ್ದ ಅನ್ನುವುದೂ ಯಾವಾಗಲೂ ನನ್ನ ತಕರಾರು.ರಾಧೇಯನೇ ಇಟ್ಟಿದ್ದರೂ ಕಿವಿಯೋಲೆಯೊಂದಿಗೇ ಹುಟ್ಟಿದ ಮಗನಿಗೆ ಕರ್ಣ ಅನ್ನುವುದೇ ಸೂಕ್ತ ಅಂತ ಬಾಸ್ಕೆಟ್ಟಿನೊಳಗಿಟ್ಟು ಹೊಳೆಗೆ ಬಿಡುವಾಗಲೇ ಕುಂತಿಗೂ ಅನಿಸಿರಬಹುದು.ಅದೂ ಅಲ್ಲದೇ ಆಗೆಲ್ಲಾ ಪುರಾಣಗಳಲ್ಲಿ ಅಷ್ಟು ಅದ್ಭುತವಾದ ಹೆಸರನ್ನು ಹುಡುಕಿದವರು ಯಾರು.?ರಂಭಾ,ಶಚಿ,ಮೇನಾ,ಶಕುಂತಲಾ, ದೇವಯಾನಿ, ನಚಿಕೇತ,ಪುರು,ಅಹಲ್ಯಾ..!!
ಓಹ್ ..ಒಂದೇ ಎರಡೇ..
ಯಾವ ಹೆಸರೂ ಕೇಳಿದ್ರೂ ಇದನ್ನು ನನ್ನ ಮೊಮ್ಮಗುವಿಗೆ ಇಡೋಣಾ,ಇದನ್ನು ಅದರ ಮಗುವಿಗೆ ಇಡೋಣಾ ಅನಿಸುವಷ್ಟು ಚಂದ.ಅದೂ ಅಲ್ಲದೇ ಈ ಪುರಾಣದ ಪಾತ್ರಗಳಿಗೆಲ್ಲಾ
ಒಂದೇ ವ್ಯಕ್ತಿಗೆ ನಾಕಾರು ಹೆಸರುಗಳನ್ನು ಇಡುವ ಪದ್ದತಿಯಂತೆ.ಕರೆಯುವಾಗ ಕನ್ಫ್ಯೂಸ್ ಆಗ್ತಿರಲಿಲ್ಲವೇ ಅನ್ನುವ ಒಂದಷ್ಟು ಜಾಗತಿಕ ಮಟ್ಟದ ಪ್ರಶ್ನೆಗಳೂ ನನ್ನಲ್ಲಿ ಈ ಹೆಸರಿನ ವಿಷಯದಲ್ಲಿ ಆಗಾಗ ಕಾಡುವುದಿದೆ.
ಇರಲಿ.ಅದೆಲ್ಲಾ ಮುಗಿದು ಹೋದ ಮಾತು..ಕಂಡವರಾರು..
ಇನ್ನೊಂದು ವಿಚಾರವಿದೆ.
ಕೆಲವರು ಚಂದ ಅಂದರೆ ಚಂದ.! ಥೇಟು ಇಂದ್ರ ಲೋಕದ ರಂಭೆಯರಂತೆ.ಅವರ ಹೆಸರುಗಳೂ ಅಷ್ಟೇ ಚಂದ.ಆಗೆಲ್ಲಾ ಇವರ ಚಂದ ನೋಡಿ ಇವರಿಗೆ ಈ ಹೆಸರಿಟ್ರೋ ಅಥವಾ ಚಂದದ ಹೆಸರಿನಿಂದಾಗಿಯೇ ಇವರು ಇಷ್ಟು ರೂಪವತಿಯಾದರಾ ಅನ್ನುವ ಸಮಸ್ಯೆ ಕೇವಲ ನನ್ನನ್ನು ಮಾತ್ರ ಕಾಡಿದ್ದಿರಬಹುದು.
ಹೋಗಲಿ ಬಿಡಿ..ಇಲ್ಲಿ ಇದಕ್ಕಿಂತಲೂ ಚಂದದ ಇನ್ನೊಂದು ನಾಮಪುರಾಣವಿದೆ.ಮಗಳು ಗರ್ಭಿಣಿಯಾದ ಕೂಡಲೇ ಅಣ್ಣಪ್ಪ ಸ್ವಾಮಿಯ ದಯೆಯಿಂದ ಕೂಸು ಗಂಡಾದರೇ ‘ಅ’ ಯಿಂದಲೇ ಆರಂಭಿಸಿ ಹೆಸರು ಇಡುತ್ತೇನೆ ಅಂತ ನನ್ನ ಅಮ್ಮ ಹರಸಿಕೊಂಡಿದ್ದರು.
ಮಗಳಾದ ಕಾರಣಕ್ಕೆ ಹದಿನಾರಕ್ಕೇ ಮದುವೆ ಮಾಡಿ ಹೊರೆ ಇಳಿಸಿಕೊಂಡಿದ್ದ ಅಮ್ಮ ಹೊಟ್ಟೆಯ ಕೂಸು ಗಂಡಾಗಬೇಕೆಂದು ಬಯಸಿದ್ದು ಸಹಜವೇ ಬಿಡಿ.ಇಷ್ಟೆಲ್ಲಾ ಪೂರ್ವತಯಾರಿಯೊಂದಿಗೆ ಸಂಡೆ ಹುಟ್ಟಿದ ಮಗು ಗಂಡೇ ಆಗಿ ಅಮ್ಮನ ಆಸೆ ಕೈಗೂಡಿ ಅವನಿಗೆ ‘ಅ’ಯಿಂದ ಆರಂಭವಾಗುವ ಹೆಸರಿಟ್ಟು ವರ್ಷ ತುಂಬುವುದರೊಳಗಾಗಿ ಪುಟ್ಟ ಬೊಗಸೆಯಲ್ಲಿ ಕಾಸು ಅಭಿಷೇಕವನ್ನು ಅಣ್ಣಪ್ಪನಿಗೆ ಮಾಡಿಸಿ ಹರಕೆ ತೀರಿಸಿ ಸಂಭ್ರಮಿಸಿದ್ದು ಸಹಜ ಸಂಗತಿಯೇ.
ಮಗನಿಗೆ ಮೂರು ವರ್ಷವಾಗುವಷ್ಟರಲ್ಲಿ ನಾಲ್ಕು ಮಾತು ಕಲಿತು ಜಗದೆಲ್ಲ ಪ್ರಶ್ನೆಗಳಿಗೂ ಇಂದೇ ,ಈ ಕ್ಷಣವೇ ಉತ್ತರ ಕಂಡುಕೊಳ್ಳುವವನಂತೆ ಅರಳುಹುರಿಯುತ್ತಿದ್ದವ ಅಜ್ಜನನ್ನು ಕುಂತಲ್ಲಿ,ನಿಂತಲ್ಲಿ ‘ಕತೆ ಹೇಳ್ತಾತ ,ಕತೆ ಹೇಳ್ತಾತ’
ಅಂತ ಪೀಡಿಸಿ ಪೀಡಿಸಿ ಉಸಿರುಗಟ್ಟಿಸುತ್ತಿದ್ದ.
ಹಗಲೆಲ್ಲಾ ತೋಟದಲ್ಲಿ ತಿರುಗಿ ಹೈರಾಣಾಗಿರುತ್ತಿದ್ದ ಅಪ್ಪ ಮಾತ್ರ ಮೊದಲ ಮೊಮ್ಮಗನೆಂಬ ಕಾರಣಕ್ಕೆ ತುಸುವೂ ಬೇಸರಿಸಿಕೊಳ್ಳದೇ ರಾತ್ರಿ ಹೊಟ್ಟೆ ಮೇಲೆ ಹತ್ತಿ ಎದೆಪದಕವಾಗುತ್ತಿದ್ದ ಪುಟ್ಟ ಬಾಹುಬಲಿಯಂತ ಮೊಮ್ಮಗನಿಗೆ ಭೀಮ,ಅರ್ಜುನ, ಕೃಷ್ಣ,ಪುಣ್ಯ ಕೋಟಿಯ ಕತೆಗಳನ್ನು ಹೇಳಿದ್ದೇ ಹೇಳಿದ್ದು.ಅಪ್ಪನ ಕಥೆ ಹೇಳುವ ಚಂದಕ್ಕೆ ಮರುಳಾಗಿ ನಾನೂ ಹೂಃಗುಟ್ಟರೆ ಅವನಿಗೆ ಸಿಟ್ಟೋಸಿಟ್ಟು..
ಹೀಗೆ ನನ್ನ ಮಗ ಕೇಳಿಸಿಕೊಂಡ ಒಂದು ವಿಶೇಷ ಕಥೆ ಭೀಮ ಮತ್ತು ಬಕಾಸುರರದ್ದು.
ಬಂಡಿ ಅನ್ನವುಂಡು ಕೊಲ್ಲಲು ಬಂದ ಬಕಾಸುರನನ್ನು ಭೀಮ ಕೊಂದ ಈ ಕತೆ ನನ್ನ ಮಗನ ಮೇಲೆ ಯಾವ ರೀತಿ ಪರಿಣಾಮ ಬೀರಿತೆಂದರೆ ಈ ಕತೆ ಶುರುವಾದೊಡನೆ ಹೊಟ್ಟೆಯ ಮೇಲೆ ಮಲಗಿದ್ದವನು ಚಕ್ಕನೆ ಎದ್ದುಕೂತು ಕತೆ ಹೇಳುವ ತಾತನ ಮುಖವನ್ನೇ ನೋಡುತ್ತಿದ್ದ.ಕಥೆಯೊಂದಿಗೆ ಬದಲಾಗುತ್ತಿದ್ದ ಅವನ ದೇಹಭಾವ ,ಮುಖಬಾವ ಕಥೆ ಉಂಟು ಮಾಡಿದ ಪರಿಣಾಮ ಅಂತ ನಿಸ್ಸಂದೇಹವಾಗಿ ಹೇಳಬಹುದಿತ್ತು.
ಪ್ರತೀಸಂಜೆಯೂ ಭೀಮನ ಕತೆಯೊಂದಿಗೆ ಆರಂಭವಾಗುವ ಕಥಾಕಾಲಕ್ಷೇಪ ಮೂರು ಗಂಟೆ ಮುಂದುವರೆದು ಅದೇ ಕಥೆಯೊಂದಿಗೆ ಮುಗಿಯಬೇಕಿತ್ತೆಂದರೆ ಆಗುವ ಕಿರಿಕಿರಿಯನ್ನು ಓದುಗರು ಊಹಿಸಿಕೊಳ್ಳಬಹುದು.ಅದಷ್ಟೇ ಆಗಿದ್ದರೆ ಈ ಪ್ರಸಂಗವನ್ನು ಇಲ್ಲಿ ಹೇಳಬೇಕಾಗಿಲ್ಲ.
ಸುಮಾರು ಹತ್ತು ದಿನ ಈ ಕಥೆ ಕೇಳಿದ ಮೇಲೆ ನನ್ನ ಮಗ ಇದ್ದಕ್ಕಿದ್ದಂತೆ ಒಂದು ದಿನ “ನಾನು ಭೀಮ, ನನ್ನ ಭೀಮ ಅನ್ನಿ”
ಅಂತ ಅನ್ನಲು ಶುರು ಮಾಡಿದ.ಕಥೆಯ ಎಫೆಕ್ಟ್ ಅಂದುಕೊಂಡ ನಾವು ಅವನು ಕೆನ್ನೆಯುಬ್ಬಿಸಿ ದೇಹ ಸೆಟೆದು “ನಾನು ಭೀಮ “ಎನ್ನುವುದನ್ನು ಮತ್ತೆಮತ್ತೆ ಕೇಳಿ ಸಂಭ್ರಮಿಸಿದ್ದೂ ಆಯ್ತು.
ಆದರೆ ಪರಿಸ್ಥಿತಿ ಗಂಭೀರವಾದದ್ದೇ ಆಮೇಲೆ.
‘ಚಿನ್ನಾರಿ ,ಹಾಲು ಕುಡಿ ಬನ್ನಿ’ ಅಂದರೆ ” ಚಿನ್ನಾರಿ ಅಲ್ಲ ನಾನು..ಭೀಮ..”ಅಂತ ಹೂಃಕರಿಸುತ್ತಿದ್ದ.ಹಾಲು ಕುಡಿ ಬಾ ಭೀಮ ಅಂತ ಕರೆದ ಮೇಲೇ ಅವನ ಹಾಲೂ,ಊಟ,ಸ್ನಾನ ಎಲ್ಲವೂ ಆಗಿ ಒಂಥರಾ ಪೇಚಿಗೆ ಸಿಕ್ಕಿಕೊಂಡ ಹಾಗಾಯ್ತು ಪರಿಸ್ಥಿತಿ.
ಮಾತಿಗೂ ಮೊದಲು ನನ್ನ ಭೀಮ ಅನ್ನಿ ಅನ್ನುತ್ತಿದ್ದ ಈ ಮೂರು ವರ್ಷದ ಪುಟ್ಟ ಘಟೋತ್ಕಜ ಒಂದು ದಿನ ಬೆಳಿಗ್ಗೆ ಅಪ್ಪ ಕೇಳುತ್ತಿದ್ದ ರೇಡಿಯೋ ಹತ್ರ ನಿಂತು ”ಅವರಿಗೆ ಹೇಳಿ ,ನಾನು ಭೀಮ ಆಗಿದ್ದೀನಿ ಅಂತ ” ಅಂತಂದು ರಚ್ಚೆ ಹಿಡಿದು ಅಳತೊಡಗಿದವನನ್ನು ಸಮಾಧಾನ ಮಾಡಬೇಕಾದರೆ ಸಾಕುಬೇಕಾಯ್ತು.ಇದ್ಯಾಕೋ ಅತಿರೇಕವಾಯ್ತು ಅಂತ ಹೆದರಿ ಒಂದು ದಿನ ಕರೆದು ಕೂರಿಸಿ ಕೊಂಡು ಮುದ್ದುಗರೆಯುತ್ತಾ ‘ಇಲ್ಲ ಕಂದ.ಮಾಮಿ ನಿಂಗೆ ಅಮೃತ್ ಅಂತಲೇ ಹೆಸರಿಟ್ಟಿರುವುದು.ಹಂಗೆಲ್ಲಾ ಭೀಮ ಅಂತ ಕರೆದ್ರೆ ನಿನ್ನ ಅಮ್ಮನನ್ನೂ ಬದಲು ಮಾಡಿಬಿಡುತ್ತೆ ಮಾಮಿ..!ಆಗುತ್ತಾ.?’ ಅಂತ ಸಾಮ ಪ್ರಯೋಗ ಮಾಡಿದ್ದೆ.
ಅಮ್ಮ ಬದಲಾದರೆ ಅಂತ ತುಸು ಹೆದರಿ ದೊಡ್ಡ ಕಣ್ಣ ತುಂಬಾ ದಿಗಿಲು ತುಂಬಿಕೊಂಡು ಆ ರಾತ್ರಿ ಕಳೆಯುವವರೆಗೂ ಸುಮ್ಮನಾಗಿದ್ದ.
ನಾನೂ ಹೇಗೋ ಭೀಮನಾಗುವ ಆಸೆ ತಪ್ಪಿತಲ್ಲ ಅಂತ ಸಮಾಧಾನಪಟ್ಟಿದ್ದು ರಾತ್ರಿ ಕಳೆಯುವವರೆಗಷ್ಟೆ..
ಬೆಳಿಗ್ಗೆ ಅಮ್ಮ ಪೂಜೆ ಮಾಡುವಾಗ ಅಜ್ಜಿಯ ಪಕ್ಕ ಅಂಟಿಕೊಂಡು ಕುಳಿತು ‘ಅಜ್ಜಿ..ಅಜ್ಜೀ..ನನ್ನ ಭೀಮನ್ನ ಮಾಡು ಅಂತ ಮಾಮಿಗೆ ಹೇಳು..ಪ್ಲೀಸ್’ ಅಂತ ಪಿಸುಗುಟ್ಟ.
ಮೊಮ್ಮಗುವಿನ ಮನಸ್ಸಿನ ಹೊಯ್ದಾಟಕ್ಕೆ ಅಮ್ಮನಿಗೆ ಪೂಜೆ ಮುಂದುವರಿಸಲೂ ಆಗದೇ ಅಲ್ಲೇ ಕಣ್ಣಿರಿಟ್ಟು ಅಪ್ಪನ್ನ ಬಯ್ಯಲಿಕ್ಕೆ ಶುರು ಮಾಡಿದ್ಳು .ಕೆಲಸಕ್ಕೆ ಬಾರದ ಕತೆ ಹೇಳಿ ಮಗಿನ ಮನಸಲ್ಲಿ ಆಸೆ ಹುಟ್ಟಿಸಿದ್ದಕ್ಕೆ ಅವಳಿಗೆ ಅಪ್ಪನ ಮೇಲೆ ವಿಪರೀತ ಕೋಪ.
ಮಗನ ಸಂಕಟಕ್ಕೆ ನಾನೂ ಇದೇನಾಗೋಯ್ತು ಅಂತ ಅಂದು ಅತ್ತುಕರೆದದ್ದೂ ಆಯ್ತು.
“ನನ್ನ ಭೀಮ ಅನ್ನಿ” ಅನ್ನುವ ನನ್ನ ಪುಟಾಣಿ ಮಗನ ಆಸೆ ಯಾವ ಗರಿಷ್ಠ ಮಟ್ಟ ತಲುಪಿತೆಂದರೆ ಒಬ್ಬೊಬ್ಬನೇ ದೇವರ ಮನೆಯಲ್ಲಿ ಕುಳಿತು ‘ನನ್ನ ಭೀಮನ್ನ ಮಾಡು ಮಾಮಿ’ ಅಂತ ಕೇಳುವಷ್ಟು.
ಮೂರು ತಿಂಗಳಿನಷ್ಟು ಸುದೀರ್ಘವಾಗಿ ನಡೆದ ಈ ಭೀಮನಾಮ ಪ್ರಸಂಗ ನಿಧಾನವಾಗಿ ಅಪ್ಪನ “ಒಂದೂರಲ್ಲಿ ಒಬ್ಬ ರಾಜ ಇದ್ನಂತೆ.
ಅವನ ಹತ್ರ ಮೂರು ಕುದುರೆಗಳಿದ್ವಂತೆ.ಅವನಿಗೆ ಮೂರು ಮಕ್ಕಳಿದ್ರಂತೆ.” ಎನ್ನುವ ಹೊಸ ಕತೆಯ ಶ್ರವಣದೊಂದಿಗೆ ಕ್ಷೀಣಗೊಂಡಿದ್ದು ಭೀಮನಾಮ ಪ್ರಸಂಗದ ಸುಖಾಂತ್ಯ ಅಂತಲೇ ಭಾವಿಸಬೇಕು.
**********
ಇನ್ನು ನಾನು ಸ್ಕೂಲಿಗೆ,ಕಾಲೇಜಿಗೆ ಹೋಗುವಾಗ ಯಾವುದಾದರೂ ದಾಖಲೆಗೆ ನನ್ನ ತಾಯಿಯ ಹೆಸರು ಕೇಳಿದಾಗೆಲ್ಲಾ ಭೂಮಿಗಿಳಿದು ಹೋಗುತ್ತಿದ್ದೆ.ಬಾಲಮಣಿ ಎನ್ನುವ ಸುಂದರ ಹೆಸರಿನ ಅಮ್ಮ ತನ್ನ ಐದನೆ ಇಯತ್ತೆ ನಪಾಸಿನ ಕಾರಣದಿಂದ ಅದನ್ನು “ಬಾಲಾ ಮಣಿ “
ಅಂತ ಅಂಕುಡೊಂಕಾಗಿ ಬರೆಯುತ್ತಿದ್ದು ಅದೇ ದಾಖಲೆಯಲ್ಲೂ ಸೇರಿಹೋಗಿತ್ತು.ಹೆಸರಿನಲ್ಲೇ ಬಾಲ ಇರುವ ಇದು ನನ್ನ ಆ ವಯಸ್ಸಿಗೆ ಭಾರಿ ಮುಜುಗರದ ವಿಷಯ.
ತಾಯಿಯ ಹೆಸರು ಅಂತ ದಾಖಲೆಯವರೇನಾದರೂ ಕೇಳುವಾಗ ಮೆಲ್ಲಗೆ ನಾನು ಬಾಲಾಮಣಿ ಅನ್ನುತ್ತಿದ್ದೆ.ಮತ್ತೊಮ್ಮೆ ಹೇಳಿ ಎನ್ನುವಾಗ ತುಸು ಜೋರಾಗಿ,ಅದೂ ಕೇಳದೇ ಮತ್ತೆ ಸ್ಪೆಲಿಂಗ್ ಕೇಳುವಾಗ ಸ್ಪಷ್ಟವಾಗಿ ಹೇಳಿ ಬೆವರೊರೆಸಿಕೊಂಡಿದ್ದೂ ಇದೆ.
ಗೆಳತಿಯರೆಲ್ಲಾ ‘ಅದೆಂತ ಹೆಸರೇ ಮಾರಾಯ್ತಿ.?
ಬಾಲಾ. ಲಾ… ಮಣಿ ..?’ ಅಂದಾಗ ಅಮ್ಮನನ್ನು ಸರಿಯಾಗಿ ತರಾಟೆಗೆ ತಗೋಬೇಕು ಅಂತ ಅನಿಸಿದರೂ ಆಗ ಅದಕ್ಕೆ ಕಾಲ ಸಹಕರಿಸಿರಲಿಲ್ಲ ಎನುವುದು ಈಗ ಹೊಳೆವ ವಿಷಯ.ವೇದವತಿ ಎನ್ನುವ ನನ್ನ ಅಧಿಕೃತ ಹೆಸರೂ ಅದರ ಮೊದಲ ವೇದದ ಹೊರತಾಗಿ ಕೊನೆಯ
‘ವತಿ’ಯಿಂದ ಓತಿಕ್ಯಾತನ ಹೆಸರಿನಂತೆ ಅನ್ನಿಸಿ ಭಾರಿ ಬೇಸರವಾಗಿದ್ದೂ ಇದೆ.
ದೇವರ ದಯದಿಂದ ನನ್ನ ಅಪ್ಪ ಅಮ್ಮನಿಗೆ ಮೊದಲಿಗೆ ಮಗ ಹುಟ್ಟಿ ಅವನಿಗೆ ನಂದೀಶ ಎನ್ನುವ ಹೆಸರಿಟ್ಟ ಮೇಲೆ ಎರಡನೆಯವಳಾದ ನನಗೆ ಸಹಜವಾಗಿ ನಂದಿನಿ ಹೆಸರು ದಕ್ಕಿ ಜೀವನಪರ್ಯಂತದ ಖುಷಿಗೆ ಕಾರಣವಾಗಿದೆ.
ಒಂದು ತಿಳಿವಳಿಕೆಯ ಪ್ರಕಾರ ಕೆಲವೊಂದು ಎವರ್ಗ್ರೀನ್ ಹೆಸರುಗಳಿರುತ್ತವೆ.ಅವು ಕಾಲದೇಶಗಳಿಗೂ ಮೀರಿ ತಮ್ಮ ಸೌಂದರ್ಯ ಉಳಿಸಿಕೊಳ್ಳಲು ಸಮರ್ಥವಾಗಿರುತ್ತವೆ.ನಂದಿನಿ ಅಂತ ಒಂದು ಪರಮ ಅದ್ಭುತ ಹೆಸರು.
ಅದರಲ್ಲೂ ಒಂದು ತೊಡಕಿದೆ ನೋಡಿ..
ಇತ್ತಿಚೆಗೆ ನಾಕು ಮಾತಾಡಿ ಪರಿಚಯವಾದವರೆಲ್ಲಾ ನಂದು….ನಂದು..ನನ್ನದು ಅಂದು ಕರೆದು ಗೊಂದಲ ಮಾಡ್ತಾರೆ.ಹೆಣ್ಣುಮಕ್ಕಳು ,ಗೆಳತಿಯರೆಲ್ಲಾ “ನಂದು ನಂದು” ಅಂದರೆ ಏನ್ ಪರವಾಗಿಲ್ಲ ಬಿಡಿ.ಆದರೆ ಲಿಂಗಭೇದವಿಲ್ಲದೇ ನಂದು.. ನಂದೂ..ಅಂತ ಅಂದು.,ನಿಧಾನವಾಗಿ ನಂದು ಮೀನ್ಸ್ ನನ್ನದು.. ಎನಿಸಿಕೊಳುವುದೂ ಹೆಂಗಿರಬೇಡಾ ಯೋಚಿಸಿ ನೋಡಿ.
ಇದೇ ಹೆಸರು ಪ್ರಾಯದಲಿದ್ದಾಗ ರೋಡ್ ರೋಮಿಯೋಗಳಿಗೆ ನಂದಿನಿ ಡೈರಿ ಅಂತಲೂ ಆಗಿ ಮೊದಲೇ ನಾಚಿಕೆ ಮುದ್ದೆಯಾದ ನಾನು ಇದ್ದ ಒಂದೇ ಒಂದು ದುಪ್ಪಟ್ಟವನ್ನು ಮೈತುಂಬ ಹೊದ್ದು ಹೋದರೂ ನಂದಿನಿ ಜಾಹೀರಾತು ಎಲ್ಲೆಲ್ಲೂ ಕಂಡು ಮತ್ತೂ ಕುಗ್ಗಿ ಹೋದದ್ದು,ಬಗ್ಗಿ ನಡೆದದ್ದು ಆಗಿನ ಕಾಲಕ್ಕೆ ಏನು ಕಮ್ಮಿ ವಿಷಯವಲ್ಲ.
ನಂದಿನಿ ಅನ್ನುವ ನನ್ನದೇ ಫೇವರಿಟ್ ಆದ ನನ್ನ ಹೆಸರು ಯಜಮಾನರ ಬಾಯಲ್ಲಿ ಎಲ್ಲೂ ಕೇಳದ,ಯಾರೂ ಇಟ್ಟುಕೊಂಡಿರದ
“ನನ್ನಿ” ಯಾಗಿದ್ದು ಮಾತ್ರ ನನ್ನ ಅದೃಷ್ಟವೇ.!
ನನ್ನ ಮಗ ಎರಡು ವರ್ಷದವನಿದ್ದಾಗ ನಿಮ್ಮ ಅಮ್ಮನ ಹೆಸರೇನು ಅಂತ ಪ್ರೀತಿಗೆ ಕೇಳುವಾಗ ಅವನ ತೊದಲುನುಡಿಗೆ ಹುಟ್ಟಿದ ಹೆಸರೇ ಈ ನನ್ನಿ ..!ಇವರೇನಾದರೂ ನಂದಿನಿ ಅಂತ ನನ್ನ ಪೂರ್ತಿ ಹೆಸರು ಕರೆದರೆ ಥೇಟು ಕಾಮಧೇನು ಮೈಮೇಲೆ ಬಂದವಳಂತೆ ಬುಸುಗುಡುವುದು ಇದ್ದದ್ದೆ.
ಸಂಬಂಧಗಳೇ ಹಾಗಲ್ಲವೇ.ಯಾರು ಯಾವ ಹೆಸರಿಂದ ಕರೆಯುತ್ತಾರೋ ಹಾಗೇ ಕರೆಯಬೇಕು ಕೊನೆಯವರೆಗೂ.ನಂದಿನಿ,ನಂದು,ನನ್ನಿ,ನ್ನೀ…ಹೀಗೆ..
ಅವರವರ ಅಕ್ಕರೆಗೆ ದಕ್ಕಿದ ಹೆಸರಿನ ಅರ್ದಗಿರ್ಧ ಭಾಗ ಅವರವರ ಪಾಲಿಗೆ.ಹೆಸರು ತುಂಡಾದಷ್ಟೂ ಬಾಂಧವ್ಯ ಹೆಚ್ಚಿದೆ ಅಂತ ಅರಿಕೆಯಾಗುವುದೂ ಒಂಥರ ಸುಖವೇ.
ಇನ್ನೊಂದು ಸೊಗದ ಸಂಗತಿಯೆಂದರೆ, ಮಧ್ಯಯುಗದ(!) ಅರ್ಧ ಪ್ರತಿಶತ ಸಿನೆಮಾಗಳ ನಾಯಕಿ ನಂದಿನಿಯಾದರೆ,ನಾಯಕ ವಿಶ್ವ.ಅದೇ ಪದ್ದತಿ ಈಗಲೂ ಮುಂದುವರೆದಿರುವುದು,ಮುಂದಿನ ನೂರು ವರುಷವೂ ಕನ್ನಡ ಸಿನೆಮಾದ ನಾಯಕಿ ನಂದಿನಿಯೇ ಆಗಿರುವುದು ಸದ್ಯದ ಅವಲೋಕನದಲ್ಲಿ ಖಚಿತವೇ.
ಇದೂ ಕೂಡ ನನ್ನ ಹೆಸರು ಕೊಟ್ಟ ಸಂತೋಷಕ್ಕೆ ಮತ್ತೊಂದು ರೀಸನ್ನು.
**********
ಹುಟ್ಟಿದ ನಕ್ಷತ್ರಕ್ಕೆ ಅನುಸಾರ ನನ್ನ ಮಗಳಿಗೆ ಇಟ್ಟ ಹೆಸರು ಬೇರೆಯೇ ಇದ್ದರೂ ಅವಳದ್ದೂ ನಾಮಕರಣ ಪುರಾಣ ನಡೆಯುತ್ತಲೇ ಇದೆ.
ಎರಡು ರಾತ್ರಿ ಸಹಿಸಲಾರದ ನೋವಿನೊಂದಿಗೆ ಕೊನೆಗೂ ಹುಟ್ಟಿದ ಈ ನನ್ನ ಮಗಳು ಹುಟ್ಟುವಾಗಲೇ ಹೊಕ್ಕಳುಬಳ್ಳಿ ಸುತ್ತಿಕೊಂಡು ,ಗರ್ಭದಲ್ಲಿ ನೀರು ಬತ್ತಿ ,ತಲೆಕೆಳಗೆ ಮಾಡಿ ಅಂಗಾಲು ಮಿಡಿದರೂ ,ಬುರುಡೆಗೆ ಹೊಡೆದರೂ
ಕಂಯ್ ಕುಂಯ್ ಅಂತ ಅಳದೇ ಸಣ್ಣಗೆ ಮುಗುಳ್ನಕ್ಕು ಸುಮ್ಮನಾದ್ದುದ್ದಕ್ಕೆ ದಿಗಿಲಾಗಿ ಮಗು ಆರೋಗ್ಯವಾಗಿರಲಿ ನಿನ್ನ ಹೆಸರಿಟ್ಟು ಕರೆಯುತ್ತೇನೆ ಅಂತ ಪಾರ್ವತಿ ದೇವಿಗೆ ಹರಸಿಕೊಂಡಿದ್ದೆ.ಈಗಲೂ ಅವಳಿಗೆ ಕಟ್ಟಿದ ಹೆಸರಷ್ಟೇ ಇದ್ದು “ಪಾರ್ವತಿ ” ಅಂತ ಬದಲಾಯಿಸಬೇಕೆಂಬ ಆಸೆ ಕೈಗೂಡದೇ ಮುಂದಕ್ಕೆ ಹೋಗುತ್ತಲೇ ಇದೆ.
ನಂದಿನಿ ಹೇಗೆ ನಂದು…ನನ್ನದು ಆಗಿಬಿಡುತ್ತದೋ ಹಾಗೇ ಕೆಲವು ಹೆಸರುಗಳನ್ನು ಕತ್ತರಿಸಿದರೆ ,ಅದಕ್ಕೆ ಅಣ್ಣ ಅಕ್ಕ ಸೇರಿಸಿದರೆ ಆಭಾಸ ಆಗಿಹೋಗುವ ಸಾಧ್ಯತೆಗಳೂ ಇವೆ.
ವಸುಂಧರಾ ,ಇಂದಿರಾ ಇವರೆಲ್ಲಾ ರಾ ರಾ ಅಂತ ಆಪ್ತಮಿತ್ರದ ಆತ್ಮದ ಪ್ರತಿರೂಪವೆನಿಸಿದರೆ..ಮಲ್ಲಿಕಾ ,ರೇಣುಕಾ ಗಳಿಗೆ ಅಕ್ಕನನ್ನು ಸೇರಿಸಿದರೆ ಮಲ್ಲಿಕಕ್ಕ,ರೇಣುಕಕ್ಕಗಳು ಆಗಿ ವಿಪರೀತವಾಗಿ ಅವರನ್ನು ಚಿಕ್ಕವರೂ ಹೆಸರು ಹಿಡಿದೇ ಕರೆಯಬೇಕು ಅಥವಾ ಬರೀ ಅಕ್ಕ ಎನ್ನಬೇಕು.ಕೆಲವರಿಗೆ ಹೆಸರೆಷ್ಟೇ ಚಂದವಿದ್ದರೂ ಅವರ ಗುಣ ಸ್ವಭಾವ,ನಡಾವಳಿಗೆ ಅನುಗುಣವಾಗಿ ಅವರಿಗೆ ಅಡ್ಡ ಹೆಸರೂ,ಉದ್ದ ಹೆಸರೂ ಸಮುದಾಯದಿಂದ ನಾಮಕರಣವಾಗಿ ಅದೇ ಹೆಸರೂ ಶಾಶ್ವತವಾಗಿ ಉಳಿಯೋ ಸಾಧ್ಯತೆಗಳೂ ನಮ್ಮಲ್ಲಿ ಬಹಳಷ್ಟಿವೆ.
ಪಿಟೀಲು, ಮೊಳೆ,ಗಾಂಧಿ, ಕಾಗೆ,ಬೊಬ್ಬೆ ,ಐಲು,ಬಿಜೆಪಿ,ಇವು ನಮ್ಮ ಹಳ್ಳಿಯಲ್ಲಿ ಸಮುದಾಯದ ಸಹಕಾರದೊಂದಿಗೆ ಕರೆಯಲ್ಪಡುತ್ತಿರುವ ಕೆಲವು ನಾಮಾವಳಿಗಳು.ನಮ್ಮ ಹಳ್ಳಿ ಹುಡುಗನೊಬ್ಬ ಪೇಟೆಗೆ ಹೋಗಿ ಶೂಸ್ ಕೊಳ್ಳಬೇಕು ಅಂತ ಚಪ್ಪಲಿ ಅಂಗಡಿಗೆ ಹೋದ.ಅವನ ವೇಷಭೂಷಣಗಳನ್ನು ನೋಡಿದ ಅಂಗಡಿಯವ ಅವನಿಗೆ ಐನೂರು ರೂಪಾಯಿಗಳ ಶೂ ತೋರಿಸಿದ.
“ಇದಲ್ಲ..ಬೇರೆ ಥರದ್ದು” ಅಂದ ಇವ.
ಯಾವ ಥರದ್ದು ಬೇಕು ಅಂದಾಗ ಸ್ವಲ್ಪ ಕಾಸ್ಟಲೀ ದು ತೋರ್ಸಿ ಅಂದ.
ಅವರು ಎಂಟನೂರು ರೂಪಾಯಿ ದು ತೋರಿಸಿದ್ರು.
ಇವನು ಇನ್ನೂ ಸ್ವಲ್ಪ ಕಾಸ್ಟಲೀ ಅಂದ..
ಅವರು ಒಂದೂವರೆ ಸಾವಿರದ್ದು ತೋರಿಸಿದ್ರು.
ಇವನು ಇನ್ನೂ ಕಾಸ್ಟ…
ಎಷ್ಟ್ರುದ್ದು ಬೇಕಣ್ಣ ನಿಂಗೆ ಅಂದಾ ಅಂಗಡಿಯವ.
ಇವನು ಸ್ವಲ್ಪ ಕಾಸ್ಟಲೀದು ಬೇಕಾಗಿತ್ತು ಅಂತ ತಲೆ ತುರಿಸ್ಕೊಂಡ.
ಅದೇ ಎಷ್ಟು.
ಮುನ್ನೂರು ರೂಪಾಯೊಳಗೆ ಅಂದ..ಆಂಗಡಿಯವ ಮುಗುಳ್ನಕ್ಕು ‘ತಗೋಳಣ್ಣಾ ,ನಿನ್ನ ಕಾಸ್ಟಲೀ ಶೂಸು ‘ ಅಂತ್ಹೇಳಿ ಇನ್ನೂರೈತ್ತರ ಶೂಸ್ ತೋರಿಸಿದ ಮೇಲೆ ಇವನ ಮುಖ ಬೆಳಗಿನ ಕಮಲದಂತೆ ಅರಳಿತು.
ಅಂದಿನಿಂದ ಇವನಿಗೆ ಕಾಸ್ಟಲೀ ಅಂತಲೇ ಹೆಸರು. ಅವನೂ ಯಾವ ಬಿಗುಮಾವನ್ನೂ ತೋರಿಸದೆ ಕಾಸ್ಟಲೀ ಅಂದರೇ ಓ ಅಂತಾನೆ.
ಹೆಸರಿನಿಂದಲೇ ಧರ್ಮದ ಗುರುತು ಹಿಡಿಯುವುದು ಜಗದ ಜನರ ಗುಣವಾದರೂ ಬೇರೆ ಧರ್ಮದ ಹೆಸರಿನ ಆಕರ್ಷಣೆ ಮಾತ್ರ ಯುವ ಮನಸ್ಸಿಗೆ ಸದಾ ಇರುವಂಥದ್ದೇ. ಶೀಬಾ,ರೀಮಾ,ರಿಯಾ,ನಿಧಾ ದಂತಹ ಚಂದದ ಹೆಸರುಗಳು ಮೌಸಮಿ,ಚಾರುಲತ,ಸುನೈನ,ಸುವಿಂಧ್ಯ ದವರನ್ನು ಆಕರ್ಷಿಸಿದರೆ ವಾನಿ,ಸೌರಭ,ದೇವಯಾನಿ,ಮಂಗಳಗೌರಿಯರು
ಮ್ಯೂರಲ್,ಜೆನಿ,ಕ್ಲಿಯೋನಾ,ಲೀಡಾ,ಲೀಸಾಗಳ ಫೇವರಿಟ್ಟು.
ಎಲ್ಲಾ ಕಾಲಕ್ಕೂ ವಸಿಷ್ಠ, ಕೌಶಿಕ್,ಹಿಮ,ಮೇನಾ,ಸ್ನಿಗ್ಧಗಳು ಅತ್ಯದ್ಭುತ ಹೆಸರುಗಳೇ. ಎಲ್ಲವೂ ಹಾಗೇ ತಾನೇ ..? ಇರುವುದೆಲ್ಲವಾ ಬಿಟ್ಟು ಇರುದುದಕೆ ತುಡಿಯುವುದು.!
ನನ್ನ ಮದುವೆಯಾದ ಹೊಸತರಲ್ಲಿ ಮಧ್ಯಾಹ್ನ ತೋಟದಿಂದ ಬಂದ ಮಾವ ಅತ್ತೆಯ ಹತ್ತಿರ ‘ಕುಬೇರಪ್ಪ ಸಿಕ್ಕಿದ್ದ.ಸಂಜೆ ಮನೆಗೆ ಬರ್ತಿನಿ ಅಂದಿದ್ದಾನೆ’ ಅಂತಿದ್ರು.
ಮನೆಯ ಮಾಮೂಲಿ ಜನರನ್ನೇ ನೋಡಿ ನೋಡಿ ಬೇಸರವಾಗಿದ್ದ ನನಗೆ ಈ ಹೊಸ ಕುಬೇರಪ್ಪ ಹೇಗಿರಬಹುದು ಅಂತೆಲ್ಲಾ ಯೋಚಿಸಿ
ಹೆಸರೇ ಇಷ್ಟು ಚಂದ ಇರುವಾಗ ವ್ಯಕ್ತಿ ಹೇಗಿರಬೇಡ ಅಂತೆಲ್ಲ ಕಲ್ಪಿಸಿ ಸಂಭ್ರಮಿಸಿದ್ದೆ.
ಹೊತ್ತು ಮುಳುಗಿದ ಮೇಲೆ ಇಳಿದ ಈ ಕುಬೇರಪ್ಪ ಹೆಸರಲ್ಲಿ ಮಾತ್ರ ಕು ಬೇರನನ್ನು ಇಟ್ಟುಕೊಂಡು ಉಳಿದಂತೆ ದಶರಂದ್ರವಿರುವ ಅಂಗಿಯ ಮಹಾನುಭಾವರಾಗಿದ್ದರಲ್ಲದೆ ಗಂಟಲುಮಟ ಸುರೆಯನ್ನೂ ಏರಿಸಿಕೊಂಡೇ ಬಂದಿದ್ದರು. ಆದರೂ ಇಂಥ ಹೆಸರಿನ ಇವರು ಪುಡಿಗಾಸು ಇರದ ಕುಚೇಲನಾಗಿದ್ದಾದರೂ ಹೇಗೆ ಎನ್ನುವ ಪ್ರಶ್ನೆ ನನ್ನ ಸಣ್ಣ ವಯಸ್ಸಿಗೆ ಸಹಜವಾದ ಕುತೂಹಲವಾಗಿ ಕೊನೇವರೆಗೂ ಹಾಗೇ ಉಳಿಯಿತು.
ನಾಮ ಪುರಾಣಗಳು ಇನ್ನೂ ಅನೇಕನೇಕವಿದ್ದು ಕೆಲವರಿಗೆ ತಮ್ಮ ಮಕ್ಕಳಿಗೆ ತಮ್ಮಿಬ್ಬರ ಹೆಸರಿನ ಮೊದಲ ಅಕ್ಷರಗಳನ್ನು ಸೇರಿಸಿ ಹೆಸರಿಡುವ ಬಯಕೆ.
ಇದೊಂಥರ ಅಫಿಡವಿಟ್ಟು.ರಿಜಿಸ್ಟ್ರೇಷನ್ ಮಾಡಿಸಿದ ಹಾಗೆ ಅನಿಸುತ್ತದೆ ನನಗೆ.
ಇನ್ನೂ ಕೆಲವರು ಫ್ಯಾಷನ್ ಹೆಸರಿನಲ್ಲಿ ಅರ್ಥವಿರದ ಅಕ್ಷರಗಳನ್ನು ಒಟ್ಟು ಮಾಡಿ ಹೆಸರಿಟ್ಟು ಸಂಭ್ರಮಿಸುತ್ತಾರೆ.
ಇನ್ನು ನ್ಯೂಮರಾಲಜಿಯ ಪ್ರಕಾರ ಕೂಡಿಸಿ ,ಕಳೆದು ಗೂಗಲ್ಲಣ್ಣನಲ್ಲಿ ಅರ್ದ ಶತಮಾನ ಹುಡುಕಿ ಹೆಸರಿಡುವ ಸಮರವೀರರೂ ಇದ್ದಾರೆ.
ಅಜ್ಜನ,ಮುತ್ತಜ್ಜನ ಹೆಸರನ್ನೂ ಮಕ್ಕಳಿಗಿಡುವ ಖುಷಿ ಒಂದೆಡೆಯಾದರೆ ಹೆಸರೇ ಇರದೇ ಬೀದಿಗೆ ಬಿದ್ದ ಮಗುವಿಗೆ ಯಾರೋ ಕರೆದ ಎಂಥದ್ದೋ ಅಡ್ಡ ಹೆಸರೇ ಹೆಸರಾಗಿರುವ ಕಥೆಗಳೂ ನಮ್ಮಲ್ಲಿ ಇವೆ.
ಹೆಸರಿನಿಂದಲೇ ಕೀಳರಿಮೆ ಬೆಳೆಸಿಕೊಂಡು ಹಿಂದೆ ಉಳಿದ ಉದಾಹರಣೆಗಳೂ ಕಡಿಮೆ ಇಲ್ಲ.
ನನ್ನ ಮಗನಿಗೆ ಇಂಥದ್ದೇ ಹೆಸರಿಡಬೇಕೆಂದು ನಿರ್ಧರಿಸಿಕೊಂಡ ತಾಯಿಗೆ ಗಂಡನ ಮನೆಯವರಿಂದ ಆ ಹೆಸರಿಡಲು ಸಹಕಾರ ಸಿಗದೇ ಆ ಮದುವೆಯನ್ನೇ ಧಿಕ್ಕರಿಸಿ ಇನ್ನೊಂದು ಮದುವೆಯಾಗಿ ಮಗನನ್ನು ಪಡೆದು ಅದಕ್ಕೆ ಆ ಹೆಸರಿಟ್ಟ ತಾಯಿಯ ಕಥೆಯೂ ನಮ್ಮ ನಡುವೆ ಶ್ರೇಷ್ಠ ಕಥೆ ಎನಿಸಿಕೊಂಡಿದ್ದಿದೆ.
ದೇಹವನ್ನು ಹೀಗಳೆಯಬೇಡ ಮನುಜ ದೇಹವನ್ನು ಹೀಗೆ ಅಳೆಯಬೇಡ ಎನ್ನುವ ಕವಿವಾಣಿಯ ಹಾಗೆ ಹೆಸರಿಗೂ ತನ್ನದೇ ಆದ ಪ್ರಾಮುಖ್ಯತೆ ಇದೆ.
ಅಜ್ಜ ಹೇಳಿದ್ರು,ಅವ್ವ ಹೇಳಿದ್ಳು ,ಹರಕೆ ಹೊತ್ತಕೊಂಡಿದ್ದೆ ಅಂತ ಕರಿಮಾರಿಯಮ್ಮ ಅಂತಲೋ,ದುಗ್ಗಣ್ಣ ಅಂತಲೋ ಹೆಸರಿಡುವುದು ಹಳೆಯ ಮಾತಾಯಿತು ಅಂದುಕೊಂಡರೂ ಈಗಲೂ ನಮ್ಮ ನಡುವೆ ಅಂತವರಿರುವುದನ್ನು ಅಲ್ಲಲ್ಲಿ ಕಾಣುತ್ತೇವೆ.
ದೇಹ ಎಷ್ಟು ಮುಖ್ಯವೋ ಆ ದೇಹಕ್ಕಿಡುವ ಹೆಸರೂ ಅಷ್ಟೇ ಸುಂದರವೂ,ಧ್ವನಿಪೂರ್ಣವೂ ಆಗಿದ್ದರೆ ಮಕ್ಕಳು ಮುಂದೆ ನೀವಿಟ್ಟ ಈ ಹೆಸರಿನಿಂದಾಗಿ ನಂಗೆ ಹೀಗಾಯ್ತು ಹಾಗಾಯ್ತು ಅಂತ ದೂರುವುದು ತಪ್ಪುತ್ತದೆ.ಆದರೂ ಸುಂದರವಾದ ಹೆಸರು ಪ್ರತೀ ಮಗುವಿನ ಹಕ್ಕು.
ಈ ಬರಹವನ್ನು ಇನ್ನೇನು ಬರೆದು ಮುಗಿಸಬೇಕು ಎನ್ನುವಾಗ ಕರೆಯೊಂದು ಬಂದು ನಂದಿನಿ ವಿಶ್ವನಾಥ ಹೆದ್ದುರ್ಗ ಎನ್ನುವ ನನ್ನ ಹೆಸರನ್ನು ಹೊಸದಾಗಿ ತುಂಡರಿಸಿ ಹೆದ್ದುರ್ಗೇಶ್ವರಿಯವರಾ ಅಂದರು..?
ನಾನು ಹೌದು ಅನ್ನಬೇಕೆ ಅಲ್ಲ ಅನ್ನಬೇಕೆ ತಿಳಿಯದೇ
ತಡವರಿಸಿದೆ..!!

ಈ ಬರಹದೊಂದಿಗೆ ಪ್ರಕಟವಾಗಿರುವ ಚಿತ್ರ ರಚಿಸಿದವರು ಕಿರಣ್ ಮಾಡಾಳು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಕಿರಣ್ ಫೈನ್ ಆರ್ಟ್ಸ್ ಓದಿದ್ದಾರೆ.ಇಲ್ ಸ್ಟ್ರೇಷನ್, ವ್ಯಂಗ್ಯ ಚಿತ್ರ , ಕಂಪ್ಯೂಟರ್ ಗ್ರಾಫಿಕ್ಸ್ ಎಲ್ಲದರಲ್ಲೂ ಅವರಿಗೆ ಪರಿಣತಿ. ಆಧ್ಯಾತ್ಮ ಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.ಅವರ ಸಂಪರ್ಕ ಸಂಖ್ಯೆ 9964655156
ನಕ್ಕು ನಗಿಸುವ ಸುಂದರ ಸುಲಲಿತ ಪ್ರಬಂಧ. ಹೆಸರುಗಳು ನಿಜಕ್ಕೂ ವಿಸ್ಮಯವಾದವು ನಗು ಬರಿಸುವಂತವು ಕೂಡ.