ಷೇರುಪೇಟೆಯಲ್ಲಾಗುತ್ತಿರುವ ಬದಲಾವಣೆಗಳು, ಬೆಳವಣಿಗೆಗಳು ಎಲ್ಲವೂ ತಾತ್ಕಾಲಿಕ ಅದರಲ್ಲೂ ವಿಶೇಷವಾಗಿ ಎಲ್ಲಾ ಸೂಚ್ಯಂಕಗಳು ಗರಿಷ್ಠದಲ್ಲಿರುವ ಈಗಿನ ಸಂದರ್ಭದಲ್ಲಿ ಹೆಚ್ಚು ಕಾಲ್ಪನಿಕ ಎಂದೆನಿಸುತ್ತದೆ. ಹಿಂದಿನ ಗುರುವಾರ ಅಂದರೆ 21 ನೇ ಜನವರಿಯಂದು ಸೆನ್ಸೆಕ್ಸ್ 50,184 ಪಾಯಿಂಟುಗಳನ್ನು ತಲುಪಿ ವಿಜೃಂಭಿಸಿದ ನಂತರ ಸುಮಾರು 3,900 ಪಾಯಿಂಟುಗಳಷ್ಠು ಕುಸಿತ ಕಂಡಿದೆ. ಡಿಸೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಹೆಚ್ಚಿನ ಕಂಪನಿಗಳು ಅತ್ಯಂತ ಆಕರ್ಷಕ ಸಾಧನೆಗಳನ್ನು ಪ್ರಕಟಿಸಿವೆ. ಅದರಲ್ಲೂ ಪ್ರಮುಖ ಕಂಪನಿಗಳಾದ ಮಾರುತಿ ಸುಝುಕಿ, ಹಿಂದೂಸ್ಥಾನ್ ಲೀವರ್, ಕೋಟಕ್ ಮಹೀಂದ್ರ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ನಂತಹ ಕಂಪನಿಗಳು ಉತ್ತಮ ಸಾಧನೆಯ ನಂತರವೂ ಕುಸಿತಕ್ಕೊಳಗಾಗಿವೆ. ಮಾರುತಿ ಸುಝುಕಿಯಂತೂ ಒಂದೇ ವಾರದಲ್ಲಿ ರೂ.1,000 ದಷ್ಠು ಕರಗಿಸಿಕೊಂಡಿದೆ. ಶುಕ್ರವಾರ ಒಂದೇ ದಿನ ರೂ.380 ರಷ್ಟು ಹಾನಿಗೊಳಗಾಗಿದೆ.
ಕಂಪನಿಗಳು ಉತ್ತಮವಾದ ಫಲಿತಾಂಶ ಪ್ರಕಟಿಸಿದರೂ ಏಕೆ ಹೀಗೆ? ಎಂಬುದು ಅನೇಕರ ಚಿಂತನೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಈ ಕಂಪನಿಗಳು ಕಳೆದ 8-10 ತಿಂಗಳುಗಳಲ್ಲಿ ಅತಿ ಹೆಚ್ಚಿನ ಏರಿಕೆ ಕಂಡಿವೆ. ಅಲ್ಲದೆ ಈ ಕಂಪನಿಗಳು ಇದೇ ರೀತಿ ಸಾಧನೆ ಪ್ರದರ್ಶಿಸಬಹುದೆಂಬ ಮುಂಚಿತ ಕಲ್ಪನೆಯೂ ಆಗಿದೆ. ಈ ರೀತಿ ಏರಿಕೆ ಕಂಡಾಗ ಲಾಭದ ನಗದೀಕರಣ ಮಾಡಿಕೊಂಡಲ್ಲಿ ಹೂಡಿಕೆ ಮಾಡಿದ ಬಂಡವಾಳ ಫಲಪ್ರಧವಾಗುತ್ತದೆ. ಗರಿಷ್ಠಮಟ್ಟದಲ್ಲಿರುವ ಪೇಟೆಯು ಎಷ್ಠರಮಟ್ಟಿಗೆ ಹರಿತ – ತ್ವರಿತ ಎಂದರೆ, 20 ನೇ ಜನವರಿಯಲ್ಲಿ ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.197.70 ಲಕ್ಷ ಕೋಟಿಯಾಗಿದ್ದು 29 ರಂದು ಅದು ರೂ.186.12 ಲಕ್ಷ ಕೋಟಿಗೆ ಇಳಿದಿದೆ.
ಹಿಂದೂಸ್ಥಾನ್ ಯೂನಿ ಲೀವರ್ :ಹೂಡಿಕೆದಾರರ ಬಂಡವಾಳವು ಯಾವ ರೀತಿ ವಿಸ್ತಾರವಾಗಿ ಹರಡಬೇಕು. ಅದು ಹೇಗಿರಬೇಕೆಂಬುದನ್ನು ಸೆನ್ಸೆಕ್ಸ್ ಕಂಪನಿ ಹಿಂದೂಸ್ಥಾನ್ ಯೂನಿಲೀವರ್ ಕಂಪನಿಯ ಯಶಸ್ಸಿನಿಂದ ಅರಿಯಬಹುದು.
ಹಿಂದೂಸ್ಥಾನ್ ಯೂನಿಲೀವರ್ ಕಂಪನಿಯಲ್ಲಿ ಬ್ರೂಕ್ ಬಾಂಡ್ ಕಂಪನಿಯು 1996 ರಲ್ಲಿ ವಿಲೀನಗೊಂಡಿತು. ಅದಕ್ಕೂ ಮುಂಚೆ 1994 ರಲ್ಲಿ ಲಿಪ್ಟನ್ ಇಂಡಿಯಾ ಕಂಪನಿಯು ಬ್ರೂಕ್ ಬಾಂಡ್ ಕಂಪನಿಯಲ್ಲಿ ವಿಲೀನಗೊಂಡಿತು. 1993 ರಲ್ಲಿ ಟಾಟಾ ಆಯಿಲ್ ಮಿಲ್ಸ್, ಸಹ ಈ ಕಂಪನಿಯಲ್ಲಿ ವಿಲೀನಗೊಂಡಿತು. 1998 ರಲ್ಲಿ ಪಾಂಡ್ಸ್ ಕಂಪನಿಯನ್ನು ತನ್ನಲ್ಲಿ ವಿಲೀನಗೊಳಿಸಿಕೊಂಡಿದೆ. ನಂತರ ಅಲ್ಲಿಯವರೆಗೂ ಸೋಪು, ಡಿಟರ್ಜೆಂಟ್ ವಲಯದಲ್ಲಿ ಕೇಂದ್ರೀಕರಿಸಿಕೊಂಡಿದ್ದ ಕಂಪನಿಯು ಇತರೆ ವಲಯಗಳತ್ತಲೂ ವಿಸ್ತರಿಸಿಕೊಂಡಿತು. ಈತ್ತೀಚಿನ ಬೆಳವಣಿಗೆಯಲ್ಲಿ ಕಂಪನಿಯು ಹಾರ್ಲಿಕ್ಸ್ ನ್ನು ತನ್ನ ಜೋಳಿಗೆಗೆ ಸೇರಿಸಿಕೊಂಡಿದೆ. ಸದ್ಯ ಈ ಕಂಪನಿಯ ಬತ್ತಳಿಕೆಯಲ್ಲಿರುವ ಬ್ರಾಂಡ್ ಗಳು ಇಂತಿವೆ. ಈ ಎಲ್ಲಾ ಬ್ರಾಂಡ್ ಉತ್ಪನ್ನಗಳು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಪ್ರತಿದಿನವೂ ಜಾಹಿರಾತುಗಳ ಮೂಲಕ ಪ್ರಚಾರಪಡೆಯುತ್ತವೆ. ಒಂದು ದಿನದ ಸುಮಾರು ಶೇಕಡ 75 ರಿಂದ 80ರಷ್ಟು ಜಾಹಿರಾತುಗಳು ಈ ಕಂಪನಿಯ ಉತ್ಪನ್ನಗಳದ್ದೇ ಆಗಿರುತ್ತದೆ. ಒಂದೊಂದು ಬ್ರಾಂಡ್ ಹೆಸರಿನಲ್ಲಿ ಅನೇಕ ಉಪ ಬ್ರಾಂಡ್ ಗಳು ಮಾರಾಟವಾಗುತ್ತಿವೆ.
ಈ ಕಂಪನಿಯು ಭಾರತದ ಗೃಹಬಳಕೆ, ದಿನಬಳಕೆ ಸಾಮಾಗ್ರಿಗಳ ವಲಯದಲ್ಲಿ ಏಕಚಕ್ರಾಧಿಪತ್ಯವನ್ನುಹೊಂದಿದೆ ಎನ್ನಬಹುದು. ಕೆಇವುಗಳಲ್ಲಿ ಆಹಾರ, ಆರೋಗ್ಯ, ವೈಯಕ್ತಿಕ ರಕ್ಷಣಾ ಸಾಮಾಗ್ರಿ, ಗೃಹಬಳಕೆಪದಾರ್ಥಗಳಿರುವುದರಿಂದ ಯಾವುದನ್ನು ಬಳಸಿದರೂ ಕಂಪನಿಗೆ ಲಾಭಕರ. ದೇಶದ ಖಜಾನೆಗೂ ಕೊಡುಗೆಯಾಗುವುದಲ್ಲದೆ ಷೇರುದಾರರಿಗೆ ಆಕರ್ಷಕ ಕಾರ್ಪೊರೇಟ್ ಫಲಗಳೂ ಲಭ್ಯ.ಕೆಲವು ಉತ್ಪನ್ನಗಳ ಪಟ್ಟಿ ಇಂತಿವೆ.
ಬ್ರೂ, ಬ್ರೂ ಗ್ರೀನ್ ಲೇಬಲ್ ನೈಸ್,ರೆಡ್ ಲೇಬಲ್, ತಾಜಾ, ತಾಜ್ ಮಹಲ್, 3 ರೋಸಸ್,ಲಕ್ಸ್, ಹಮಾಮ್, ರೆಕ್ಸೋನ, ಡೋವ್, ಪಿಯರ್ಸ್, ಲೈಫ್ ಬಾಯ್, ಲಿರಿಲ್, ಟ್ರೆಸಮ್,ಕ್ಲಿನಿಕ್ ಶಾಂಪೂ, ಲೀವರ್ ಆಯುಶ್, ಇಂದುಲೇಖ ಆಯುರ್ವೇದಿಕ್ ಹೇರ್ ಆಯಿಲ್,ಲಾಕ್ಮೆ ಐಕೋನಿಕ್ ಕಾಜಲ್, ಪಾಂಡ್ಸ್, ಗ್ಲೋ ಅಂಡ್ ಲೌಲಿ, ವ್ಯಾಸಲಿನ್,ಅನ್ನಪೂರ್ಣ ಸಾಲ್ಟ್, ಅನ್ನಪೂರ್ಣ ಅಟ್ಟಾ,ಕಿಸಾನ್ ಕೆಚಪ್, ಜ್ಯೂಸ್, ಜಾಮ್ಸ್,ಪೆಪ್ಸೋಡೆಂಟ್, ಕ್ಲೋಸ್ ಅಪ್,ಸರ್ಫ್ ಎಕ್ಸೆಲ್, ರಿನ್, ಕಂಫರ್ಟ್ ಫ್ಯಾಬ್ರಿಕ್ ಸಾಫ್ಟ್ನರ್, ಡೊಮೆಕ್ಸ್ ಟಾಯಿಲೆಟ್ ಕ್ಲೀನರ್,ವಿಮ್,ಹಾರ್ಲಿಕ್ಸ್ ವುಮನ್ ಪ್ಲಸ್,ಹಾರ್ಲಿಕ್ಸ್ ಜೂನಿಯರ್ ಹೀಗೆ ಪಟ್ಟಿ ಬೆಳೆಯುತ್ತದೆ.
ಒಂದೇ ಕಂಪನಿಯು ಇಷ್ಟೆಲ್ಲಾ ಬ್ರಾಂಡ್ ಗಳ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕೆ? ಇದರಿಂದಾಗುವ ಪ್ರಯೋಜನವೇನು?
ಅತ್ಯಧಿಕ ಉತ್ಪನ್ನಗಳ ಮಾರ್ಕೆಟಿಂಗ್ ನಲ್ಲಿ ತೊಡಗಿಸಿಕೊಂಡಿರುವುದರಿಂದ ಕಂಪನಿಯ ಗ್ರಾಹಕರ ಸಂಖ್ಯೆ ಅಗಾಧವಾಗಿ ಬೆಳೆದಿದೆ. ಸೋಪ್ ಗಳಾಗಲಿ, ಡಿಟರ್ಜೆಂಟ್ ಗಳಾಗಲಿ, ಅಥವಾ ಹಾರ್ಲಿಕ್ಸ್ ಉತ್ಪನ್ನಗಳಿಗೆ ವಿವಿಧ ಹೆಸರಿನಲ್ಲಿ ಆ ಸಮುದಾಯವನ್ನು ತನ್ನತ್ತ ಸೆಳೆಯುತ್ತದೆ. ಉದಾಹರಣೆಗೆ ಹಾರ್ಲಿಕ್ಸ್ ಜೂನಿಯರ್, ಎಂದರೆ ಆ ವಯಸ್ಸಿನ ಗ್ರಾಹಕರನ್ನು ತನ್ನತ್ತ ಸೆಳೆಯುತ್ತದೆ. ಹೀಗೆ ವಿವಿಧ ವಯೋಮಾನದ ಗ್ರಾಹಕರನ್ನು ತನ್ನತ್ತ ಆಕರ್ಷಿಸುವುದು. ಮತ್ತೊಂದು ಪ್ರಮುಖ ಅಂಶ ಎಂದರೆ ಸ್ನಾನದ ಸೋಪ್ ನ ಅನೇಕ ಪ್ರಮುಖ ಬ್ರಾಂಡ್ ಗಳನ್ನು ತೇಲಿಬೆಟ್ಟಿರುವುದರಿಂದ ಗ್ರಾಹಕರು ಒಂದಲ್ಲ ಒಂದು ಬ್ರಾಂಡ್ ಗೆ ಅಂಟಿಕೊಳ್ಳಲು ಸಾಧ್ಯ. ಇಷ್ಟೆಲ್ಲಾ ಬ್ರಾಂಡ್ ನ ಉತ್ಪನ್ನಗಳಿರುವುದರಿಂದ ಕಂಪನಿಯ ಸಾಧನೆಯು ಬಲಿಷ್ಠವಾಗಿರುವುದು.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕಂಪನಿಗಳು ವಿವಿದೋದ್ದೇಶಗಳಿಂದ ಸಾರ್ವಜನಿಕವಾಗಿ ಸಂಪನ್ಮೂಲ ಸಂಗ್ರಹಣೆಗೆ ಪ್ರಯತ್ನಿಸುತ್ತಿವೆ. ಆದರೆ ಈ ಕಂಪನಿಯು ಸಂಪನ್ಮೂಲ ಸಂಗ್ರಹಣೆಯತ್ತ ಕೈ ಹಾಕುವ ಪ್ರಯತ್ನವನ್ನು ಮಾಡಿಲ್ಲ. ಎಫ್ ಎಂ ಸಿ ಜಿ ವಲಯದ ಇತರೆ ಕಂಪನಿಗಳಾದ ಕಾಲ್ಗೇಟ್ ಪಾಲ್ಮೊಲಿವ್, ಐ ಟಿ ಸಿ ಯಂತಹ ಕಂಪನಿಗಳಿಗೆ ಸಂಪನ್ಮೂಲ ಸಂಗ್ರಹಣೆಯ ಆವಶ್ಯಕತೆ ಇಲ್ಲ. ಬದಲಾಗಿ ಕಂಪನಿಗಳೇ ಷೇರುದಾರರಿಗೆ ಆಕರ್ಷಕ ಕಾರ್ಪೊರೇಟ್ ಫಲಗಳನ್ನು ನೀಡುತ್ತಾ ಬಂದಿವೆ. ಒಂದು ಸಮಯದಲ್ಲಿ ಸಿಗರೇಟ್ ಒಂದೇ ಐಟಿಸಿ ಕಂಪನಿಯ ಉತ್ಪಾದನೆಯಾಗಿತ್ತು. ಕಾಲ್ಗೇಟ್ ಎಂದರೆ ಕೇವಲ ದಂತವಲಯಕ್ಕೆ ಸೀಮಿತವಾಗಿದ್ದ ಕಂಪನಿಯಾಗಿತ್ತು. ಆದರೆ ಈಗ ಈ ಕಂಪನಿಗಳೂ ತಮ್ಮ ಚಟುವಟಿಕೆಯನ್ನು ಗೃಹಬಳಕೆ, ದೈನಂದಿನ ಬಳಕೆ ವಲಯಕ್ಕೆ ಪ್ರವೇಶಿಸಿ ಉತ್ತಮ ಜನಸ್ಪಂಧನ ಪಡೆಯುತ್ತಿವೆ.
ಇದೇ ರೀತಿ ಒಂದು ಬಲಿಷ್ಠ ಹೂಡಿಕೆ ಗುಚ್ಚ ( Portfolio) ಹೊಂದಲು ಕೇವಲ ಕೆಲವೇ ಕಂಪನಿಗಳಿಗೆ ಸೀಮಿತಗೊಳಿಸದೆ ಹೂಡಿಕೆ ಗುಚ್ಚದಲ್ಲಿ ಅನೇಕ, ವೈವಿಧ್ಯಮಯ ಕಂಪನಿಗಳನ್ನು, ಒಂದೇ ವಲಯದ ವಿವಿಧ ಕಂಪನಿಗಳನ್ನು ಸೇರಿಸಿದಲ್ಲಿ ಆ ಹೂಡಿಕೆ ಗುಚ್ಚವು ಸುಭದ್ರವಾಗಿರುವುದಲ್ಲದೆ, ಪೇಟೆಯಲ್ಲಾಗುವ ಉಬ್ಬರ ವಿಳಿತಗಳ ರೀತಿಯ ಏರಿಳಿತಗಳಿಗೂ ಜಗ್ಗದ ಹೂಡಿಕೆಗುಚ್ಚವಾಗುವುದು. ಬ್ರಾಡ್ ಬೇಸ್ ಇದ್ದಲ್ಲಿ ಅದು ಒಂದು ರೀತಿಯ ಷಾಕ್ ಅಬ್ಸಾರ್ಬರ್ ರೀತಿ ಕಾರ್ಯನಿರ್ವಹಿಸಿ, ಅಪಾಯದ ಮಟ್ಟವನ್ನು ಮೊಟಕುಗೊಳಿಸುತ್ತದೆ. ಒಂದು ದಿನಸಿ ಅಂಗಡಿಯಂತೆ ಬಹಳಷ್ಠು ಕಂಪನಿಗಳನ್ನು ತಮ್ಮ ಹೂಡಿಕೆ ಗುಚ್ಚದಲ್ಲಿ ಸೇರಿಸಿದ್ದರೆ ಅಪಾಯವು ಕ್ಷೀಣಿತ ಮಟ್ಟದಲ್ಲಿರುತ್ತದೆ. ಎಂತಹ ಏರಿಳಿತಗಳುಂಟಾದರೂ ಒಂದಲ್ಲ ಒಂದು ಕಂಪನಿಯು ಉತ್ತಮ ಅವಕಾಶಗಳನ್ನು ಒದಗಿಸುತ್ತಿರುತ್ತವೆ. ಅಲ್ಲದೆ ಕಾರ್ಪೊರೇಟ್ ಫಲಗಳನ್ನು ಸಹ ನೀಡುತ್ತಿರುತ್ತವೆ. ಷೇರುಪೇಟೆಯ ಹೂಡಿಕೆಗೆ ಹಿಂದೂಸ್ಥಾನ್ ಲೀವರ್ ಶೈಲಿಯು ಮಾರ್ಗದರ್ಶಕ ಎಂದರೆ ತಪ್ಪಾಗಲಾರದು. ಅಲ್ಲವೇ ?