ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಖಾಸಗಿ ಅನುದಾನರಹಿತ ಶಾಲಾ ಕಾಲೇಜುಗಳ ಶುಲ್ಕಗಳ ಕುರಿತ ಪೋಷಕರ ತರಕಾರುಗಳ ಪರಿಹಾರಕ್ಕೆ ಅಧಿಕಾರಯುಕ್ತ ಸಮಿತಿಗಳನ್ನು ರಚಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಕೋವಿಡ್-19ರ ಹಿನ್ನೆಲೆಯಲ್ಲಿ 2020-21ನೇ ಸಾಲಿನಲ್ಲಿ ಖಾಸಗಿ ಅನುದಾನರಹಿತ ಶಾಲೆಗಳು 2019-20ನೇ ಸಾಲಿನ ಬೋಧನಾ ಶುಲ್ಕದ ಶೇ. 70ರಷ್ಟು ಮೊತ್ತವನ್ನು ಒಟ್ಟಾರೆ ಶುಲ್ಕವನ್ನಾಗಿ ಪಡೆಯಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಜ. 29ರಂದು ಆದೇಶ ಹೊರಡಿಸಿದ್ದು, ಆದೇಶದ ಭಾಗವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತಾಲಯ ಈ ಸಂಬಂಧದ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಯುಕ್ತ ಸಮಿತಿಗಳನ್ನು ರಚಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 6 ವಲಯಗಳಲ್ಲಿ ಪ್ರತ್ಯೇಕ ಸಮಿತಿಗಳು, ಮೈಸೂರು ಜಿಲ್ಲೆಯಲ್ಲಿ 2 ಸೇರಿದಂತೆ ರಾಜ್ಯದ ಎಲ್ಲ ಶೈಕ್ಷಣಿಕ ಜಿಲ್ಲೆಗಳಲ್ಲಿ ಒಂದೊಂದು ಸಮಿತಿಯನ್ನು ರಚಿಸಲಾಗಿದೆ. ಇಲಾಖಾ ನಿರ್ದೇಶಕರು, ಸಹ ನಿರ್ದೇಶಕರು, ಡಿಡಿಪಿಐ, ಡಯಟ್ ಪ್ರಾಚಾರ್ಯರು, ಡಯಟ್‍ನ ಹಿರಿಯ ಉಪನ್ಯಾಸಕರನ್ನೊಳಗೊಂಡ ವಿವಿಧ ಜಿಲ್ಲಾ ಸಮಿತಿಗಳನ್ನು ರಚಿಸಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಪೋಷಕರು ಪ್ರಸ್ತುತ ವರ್ಷದ ಶುಲ್ಕ ಪಾವತಿಯ ಸಂಬಂಧದ ಸಮಸ್ಯೆಗಳನ್ನು ಈ ಸಮಿತಿಯ ಮುಂದೆ ಪ್ರಸ್ತಾಪಿಸಿ ಪರಿಹರಿಸಕೊಳ್ಳಬಹುದೆಂದು ಸಚಿವರು ತಿಳಿಸಿದ್ದಾರೆ.
ಇಂತಹ ಸಮಸ್ಯೆಗಳ ಸಂದರ್ಭದಲ್ಲಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಸಲ್ಲಿಸುವ ಸಂಬಂಧದಲ್ಲಿ ಪೋಷಕರು, ಶಾಲೆಗಳು ಯಾವ ಕ್ರಮಗಳನ್ನು ಅನುಸರಿಸಬೇಕು ಮತ್ತು ಅರ್ಜಿ ಸ್ವೀಕರಿಸುವ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಮಿತಿಗಳ ಕರ್ತವ್ಯಗಳ ಕುರಿತು ಸವಿವರ ಕ್ರಮಗಳನ್ನು ಸುತ್ತೋಲೆಯಲ್ಲಿ ವಿವರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸುತ್ತೋಲೆಯ ವಿವರ ಇಲ್ಲಿದೆ:
Photo by Kimberly Farmer on Unsplash