ಕನ್ನಡಪ್ರೆಸ್.ಕಾಮ್ ನ ಜನಪ್ರಿಯ ಬರಹಗಾರ್ತಿ ನಂದಿನಿ ಹೆದ್ದುರ್ಗ ಅವರು ಇತ್ತೀಚೆಗೆ ಬರೆದ ಪ್ರಬಂಧಗಳು ಪುಸ್ತಕ ರೂಪ ಪಡೆದಿದೆ.ಗುರುವಾರವಷ್ಟೆ ಮಾರುಕಟ್ಟೆಗೆ ಬಂದಿರುವ ಈ ಪುಸ್ತಕವನ್ನು ತೇಜು ಪ್ರಕಾಶನ ಹೊರ ತಂದಿದೆ. ಖ್ಯಾತ ವಿಮರ್ಶಕ ಕೆ. ಸತ್ಯನಾರಾಯಣ ಮುನ್ನುಡಿ ಬರೆದಿದ್ದಾರೆ. ಪತ್ರಕರ್ತ ಬಿ ಎಂ ಹನೀಫ್ ಬೆನ್ನುಡಿ ಬರೆದಿದ್ದಾರೆ. ಈ ಸಂಕಲನದಲ್ಲಿ ಹದಿನಾರು ಪ್ರಬಂಧಗಳಿದ್ದು ಓದಿಸಿಕೊಂಡು ಹೋಗುತ್ತವೆ. ಲೇಖಕಿ ಬರೆದ ಮಾತುಗಳು ಇಲ್ಲಿವೆ.
ಬ್ರೂನೋ ದಿ ಡಾರ್ಲಿಂಗ್
ಬಿಡುವ ಮುನ್ನ……
ಸಾಹಿತ್ಯದ ಸಾಂಗತ್ಯಕ್ಕೆ ಆತ್ಮೀಯರಾದವರು ಆಗಾಗ ಕೇಳುವ ಪ್ರಶ್ನೆ’ಏನು ಬರೆದ್ರಿ ಹೊಸದು.?’
ಮೂಲತಃ ಕವಿತಾಪ್ರಿಯಳಾದ ನಾನು ಕವಿತೆ ಹುಟ್ಟದ ಹೊತ್ತಿನಲ್ಲಿ ಇಂತಹ ಪ್ರಶ್ನೆ ಎದುರಾದಾಗೆಲ್ಲ ‘ಕವಿತೆ ಹುಟ್ಟುತ್ತಿಲ್ಲ’ ಅಂತ ಪ್ಯಾಲಿ ನಗುನಕ್ಕು ನನ್ನ ದುಃಖವನ್ನು ಅವರಿಗೂ ಹಂಚಿ ಸಮಾನದುಃಖಿಯಾಗಲು ಸದಾ ಯತ್ನಿಸುತ್ತಿದ್ದೆ.
ಆದರೆ ಎದುರಿನಿಂದ ಬರುತ್ತಿದ್ದ ಪ್ರತಿಕ್ರಿಯೆಯ ಕಿರಿಕಿರಿ ಎಂಥದ್ದು ಅಂತೀರಾ.?
ವಾಟ್ಸಪ್ಪಿನ ಉಚಿತ ಈಮೋಜಿಗಳನ್ನು (ಅದೂ ಗಹಗಹಿಸಿ ನಗ್ತಿರುವುದು)ಕಳಿಸಿ ನನ್ನ ಮುರುಮುರು ಮನಸ್ಸನ್ನು ಮತ್ತಷ್ಟು ಹದಗೆಡಿಸ್ತಿದ್ರು.
ಇರಲಿ.
ಕೋಪವೂ ಒಳ್ಳೆಯದೇ.ಹಂಗೆ ವಿನಾಕಾರಣ ಬಂದ ಚಂದದ ಸಿಟ್ಟೇ ಇಲ್ಲಿನ ಅನೇಕ ಲಘುಬರಹಗಳಿಗೆ ಕಾರಣವಾಗಿದೆ.
ನನ್ನ ಕವಿತೆಗಳನ್ನು ಓದಲು ಯತ್ನಿಸಿ ‘ಏನೋಪಾ..ನಿನ್ನ ಕವಿತೆ ಈ ಮಡ್ಡು ತಲೆಗೆ ಹಿಡಿಯೋದೇ ಇಲ್ಲ’
ಅಂತಲೋ
‘ತಾಯೇ..ಕನ್ನಡದಲ್ಲೇ ಬರೀಬಾರದಾ’ಅಂತಲೋ ಅಂದು ಬೆಚ್ಚಿಬೀಳಿಸುವ ನನ್ನ ಸಾಹಿತ್ಯಾಭ್ಯಾಸಿಗಳಲ್ಲದ ಆತ್ಮೀಯರು ನನಗೆ ಆಗಾಗ ತಲೆ ಕೆಡಿಸಿದ್ದಿದೆ.
‘ಹಾಗಿದ್ದರೆ ನನ್ನ ಕವಿತೆಗಳು ಓದಿದವರೆದೆಯ ರಸೋತ್ಪತ್ತಿಗೆ ಕಾರಣವಾಗಿಲ್ಲವೇ’
ಇಂತಹದೊಂದು ಮೂಲಭೂತ ಪ್ರಶ್ನೆ ನನ್ನನ್ನು ಇನ್ನಿಲ್ಲದಂತೆ ಕಾಡಿದ್ದೂ ಇದೆ.ಅಚ್ಚರಿಯೆಂಬಂತೆ ಆಗೀಗ ಬರೆದು ಪ್ರಕಟಿಸಿದ ಈ ಲೈಟ್ ರೀಡಿಂಗು ಬರಹಗಳು ಎಲ್ಲರನ್ನೂ ಮುಟ್ಟಿ ‘ಅಯ್ಯೋ..ನಂಗೂ ಹಂಗೇಯಾ..ನಮ್ಮನೆಲೂ ಅದೇಯಾ,ನಮ್ ಪಾರಿ ಮಾರುವಾಗಲೂ ಹಿಂಗೇ ಅತ್ತಿದ್ದೆ ,ನಮ್ ಜಾನಿನೂ ಹೀಗೇ…’ಎನ್ನುವ ಮುದ್ದಾದ ಪ್ರತಿಕ್ರಿಯೆಗಳು ಬಂದು ನನ್ನ ವಿಶ್ವಾಸವನ್ನು ಹೆಚ್ಚಿಸಿವೆ.
ಕತೆ ಕವಿತೆಯ ಓದು ಹೃದಯಕ್ಕೆ ಘನಭಾರ ಎನ್ನುವ ಲೋಕವೂ ಇದೆ ಎನ್ನುವುದು ನನಗೆ ತಿಳಿದಿದ್ದೇ ಈ ಬರಹಗಳಿಗೆ ಬಂದ ಪ್ರತಿಕ್ರಿಯೆಯಿಂದ.
ಇಂತಹ ಲೈಟ್ ರೈಟಿಂಗ್ ಬರಹಕ್ಕೆ ‘ತಲೆ ಒಂದಿಟ್ಟು ಓದಿದ್ರೆ ಉಳ್ಳಾಡಕೊಂಡು ನಗಬಹುದು.’ ಎನ್ನುವ ಮಾತು ಖುಷಿ ಕೊಡದಾ ಹೇಳಿ.?…
ಇಲ್ಲಿನ ಕೊರೊನಾ ಋತುವಿನ ಬರಹಗಳಿಗೆ ಆಗಿನ ತತ್ತರದ ,ತತ್ವಾರದ ಪರಿಸರದಲ್ಲಿ ಪರಿಸ್ಥಿತಿಯಲ್ಲಿ ಲಘು ಧಾಟಿಯನ್ನು ಒದಗಿಸಲಾಗಿಲ್ಲ.
ಆದಾಗ್ಯೂ ಅವುಗಳನ್ನೂ ಇಲ್ಲಿ ಒಳಗೊಂಡಿದ್ದೇನೆ.
ಮುಂದೊಂದು ಕಾಲಕ್ಕೆ ಈ ಸಂಕಲನವನ್ನು ಮರುಓದಿಗೆ ಯಾರಾದರೂ ಎತ್ತಿಕೊಂಡರೆ ‘ಓಹ್ ಇದು ಕೊರೊನಾ ಕಾಲದ ಫಸಲು’ ಎಂದು ಕೊಳ್ಳಬಹುದು.
ಬಂದ ಭಾವಗಳಿಗೆ ಕಾಲಕ್ಕೆ ತಕ್ಕಂತೆ ಕೊಂಚ ಲಘುತನವನ್ನೂ ಕೊಂಚ ಘನವನ್ನೂ ಪ್ರಾಮಾಣಿಕವಾಗಿ ಒದಗಿಸಿದ್ದೇನೆ ಅಂದುಕೊಂಡಿರುವೆ.
ಬರೆಯುವವರು ಹೆಚ್ಚು ಹೆಚ್ಚು ಭೂತವನ್ನು ಧೇನಿಸುತ್ತಾ ನಾಸ್ಟಾಲ್ಜಿಕ್ ಆಗಬಾರದು ಎನ್ನುವ ಮಾತಿದೆ. ವರ್ತಮಾನದ ಯಾವ ಸಂಗತಿಯ ದಾಖಾಲಾತಿಗೆ ಹೊರಟರೂ ಅದು ಭೂತಕ್ಕೆ ಜಾರಿ ಮತ್ತೆ ವರ್ತಮಾನದಲ್ಲಿ ವಿರಮಿಸಿ ಭವಿಷ್ಯಕ್ಕೆ ಹೊರಳಿಕೊಳ್ಳುವುದು ನನಗೆ ಚಾಳಿಯಾಗಿದೆ.
ಅಂತಹುದೇ ಹೆಚ್ಚುಹೆಚ್ಚು ನೆನಪುಗಳು ನನ್ನ ಈ ಬರಹಗಳಲ್ಲಿ ಕಂಡರೆ ಕೊಸರದಿರಿ.
ಇಲ್ಲಿನ ಬ್ರೂನೋ ನಿಮ್ಮನೆಗೂ ಬಂದು ಬಿಸ್ಕತ್ತು ಕೇಳಿದರೆ,ನಮ್ ಗೌರಿ ನಿಮ್ಮ ಹೂದೋಟದ ದಾಸವಾಳ ಮುರಿದು ಹಾಕಿದರೆ, ನಾಮ ಪುರಾಣದ ಸಣ್ಣ ನಿರವಾಣಿ ನಿಮ್ಮೂರಲ್ಲೂ ಇದ್ದರೆ, ಇಲ್ಲಿನ ಉಗುಳುವೀರನ ಎಂಜಲು ನಿಮ್ಮ ಕಿರುಬೆರಳಿಗೂ ಹಾರಿದರೆ,ದೀಪಾವಳಿಗೆ ನೀವೂ ಪಟಾಕಿ ಬ್ಯಾಡಂತ ನಿರ್ಧರಿಸಿ ಬಿಟ್ಟರೆ ಆ ಮಟ್ಟಿಗೆ ಖುಷಿ ನನಗೆ.
ನನ್ನ ಸೈನ್ ಥೀಟಾ ಓದಿದ ಗೆಳತಿಯೊಬ್ವಳು ‘ಆ ಥೀಟಾ ಮನೆಗೆ ಬೆಂಕಿ ಬೀಳಲಿ ಮಾರಾಯ್ತಿ.ಅದರಿಂದಲೇ ನನ್ ಕತೆನೂ ಹೀಗಾದದ್ದು’ಅಂತ ಹಿಡಿ ಶಾಪ ಹಾಕಿದ್ದು ಕೇಳಿ ಸಮಾನ ಸುಖಿಗಳು ಬಾಳಾ ಇದಾರೆ ಲೋಕದಲ್ಲಿ ಅನಿಸಿ ಸಮಾಧಾನ ಪಟ್ಕೊಂಡಿದ್ದಿದೆ.
ನನ್ನ ದಂತಕತೆಗೆ ‘ನಾವೆಲ್ಲಾ ಹಲ್ ಕಟ್ ಪುರಾಣದವರೇ’ಅಂದ ಗೆಳೆಯರು ಅದನ್ನು ಮತ್ತೆಮತ್ತೆ ಶೇರ್ ಮಾಡಿ ಬಂದ ಪ್ರತಿಕ್ರಿಯೆಯನ್ನು ನನಗೆ ಓದಿಸಿ ಸಂಭ್ರಮಿಸಿದ್ದಾರೆ.
‘ಕೊರೊನಾ ಹೇರಕಟ್ಟು’ ಕೊರೊನಾ ಋತುಮಾನ ಕಲಿಸಿದ ವಿಶೇಷ ಕೌಶಲ್ಯ ಎನ್ನುವುದನ್ನೂ ಇಲ್ಲಿ ಮರೆಯುವಂತಿಲ್ಲ ನೀವು.
9449255628 ಈ ನಂಬರ್ ಗೆ ಫೋನ್ ಮಾಡಿದರೆ ಪುಸ್ತಕ ಪಡೆಯುವ ವಿವರ ದೊರೆಯುತ್ತದೆ.
ಚೆನ್ನಾಗಿದೆ ಮೇಡಂ
ಮತ್ತೆ ಮತ್ತೆ ಓದಿಸಿ ಕೊಂಡಿತು..
ಹವ್ದಾ…?!
ಅಷ್ಟೊಂದು ಚೆನ್ನಾಗಿದೆ ಅಂತೀರಾ?
ಹಂಗಲ್ಲ…
ಮೊದಲ ಓದಿನಲ್ಲಿ ಅಷ್ಟಾಗಿ ಮನಸ್ಸಿಗೆ ತಟ್ಟಲಿಲ್ಲ. ಹಾಗಾಗಿ ಮತ್ತೊಮ್ಮೆ ಓದ ಬೇಕಾಯಿತು…
ಹಾಗಂತ…
ಚೆನ್ನಾಗಿಲ್ಲ ಅಂತಾನು ಅಲ್ಲ.
ಬರಹ ಚೆನ್ನಾಗಿಯೇ ಇದೆ.
ಪದ ಬಳಕೆ ಗಮನ ಸೆಳೆಯುತ್ತದೆ.