ಬಣ್ಣಗಳಿಗೆ ಉದಾಹರಣೆ ಈ ಹೂವು . ಜಗತ್ತಿನಲ್ಲಿ ಲಕ್ಷಾಂತರ ರೀತಿಯ ಹೂವುಗಳಿದ್ದರೂ ಪ್ರತಿಯೊಂದು ಹೂವು ಆಕಾರದಿಂದಲೂ ಪರಿಮಳದಿಂದಲೂ ಬೇರೆ ಬೇರೆ ರೀತಿಯದ್ದಾಗಿರುವುದು ವಿಶೇಷವೇ ಸರಿ .
ಅದೇನೋ ಗೊತ್ತಿಲ್ಲ ಹೂವು ಅನ್ನೋ ಪದ ಕಿವಿಗೆ ಬಿದ್ದಾಕ್ಷಣ ಮನಸ್ಸು ಪ್ರಶಾಂತವಾಗುತ್ತದೆ . ಹೂವಿಗೆ ಕೈ ಇಟ್ಟ ಎಂತಹ ಒರಟನ ಕೈ ಸಹ ಮೃದುವಾಗುತ್ತದೆ . ಹೂವು ಹಗುರವಾಗಿದ್ದರೂ ಸಹ ತುಂಬಾ ತೂಕದ ಬೆಲೆ ಉಳಿಸಿಕೊಂಡಿದೆ .
ಘೋರಯುದ್ದವನ್ನು ನಿಲ್ಲಿಸುವ ಶಕ್ತಿ ಹೂವಿಗಿದೆ . ಒಳ್ಳೆಯ ಮನಸ್ಸುಗಳನ್ನು ಹೂವಿಗೆ ಹೋಲಿಸುತ್ತಾರೆ . ಹೆಣ್ಣು ಮಕ್ಕಳಿಗೆ ಹೂವಿನ ಹೆಸರನ್ನೇ ಇಡುತ್ತಾರೆ .
ಹೂವು ಅಂದರೇನೇ ಶ್ರೇಷ್ಠ . ಧರ್ಮ ಗ್ರಂಥಗಳಲ್ಲಿ ಹೂವಿನ ಬಗ್ಗೆ ಅದ್ಭುತವಾದ ಕತೆಗಳಿವೆ . ಬಿಡಿಯಾಗಿದ್ದಾಗ ಹೂ ಕಟ್ಟಿದಾಗ ಹೂವು . ಮುಳ್ಳಿನ ಮಧ್ಯೆಯೇ ಇರಲಿ ಬೇಲಿಯ ಮಧ್ಯೆಯೇ ಇರಲಿ ಕೆಸರಿನ ನಡುವೆಯೇ ಇರಲಿ ತಲೆಯೆತ್ತಿ ನಿಲ್ಲುತ್ತದೆ .
ಹೂವಿಲ್ಲದೇ ಜಗತ್ತನ್ನ ಊಹಿಸಿಕೊಳ್ಳಲು ಸಾಧ್ಯವಿಲ್ಲ . ದೇವರನ್ನು ಪೂಜಿಸಲು ,ಕವಿಗಳು ಬರೆಯಲು , ಹೆಂಗಸರು ಮುಡಿಯಲು , ಗಾಯಕರು ಹಾಡುಲು , ರೈತರು ದುಡಿಯಲು ಹೂವು ಬೇಕು . ಇದಕ್ಕೆಂದೇ ಒಂದು ಮಾರುಕಟ್ಟೆ ಇದೆ .
ಶೃಂಗಾರಕ್ಕೇ, ಸಿಂಗಾರಕ್ಕೇ ,ಸನ್ಮಾನಕ್ಕೆ, ಸಮಾರಂಭಕ್ಕೆ, ಆರಾಧನೆಗೆ ಸಮಾರಾಧನೆಗೆ ಹೂವು ಕಡ್ಡಾಯ .
ದೇವಸ್ಥಾನದಲ್ಲಿ ಬಲಗಡೆ ದೇವರ ವಿಗ್ರಹಕ್ಕೆ ಸಿಕ್ಕಿಸಿದ್ದ ಹೂವು ಬಿದ್ದರೆ ವರ ಸಿಕ್ಕಿತೆಂಬ ನಂಬಿಕೆ . ಹುಡುಗ ಕೊಟ್ಟ ಹೂವು ಹುಡುಗಿ ಸ್ವೀಕರಿಸಿದರೆ ಪ್ರೀತಿ ಒಪ್ಪಿದಳೆಂಬ ಖಾತ್ರಿ .
ಕವಿಗಳು ಕತೆಗಾರರು ಸಾಹಿತಿಗಳು ಹೂವು ಮಾತನಾಡುತ್ತದೆ ಎಂದು ಬಣ್ಣಿಸುತ್ತಾರೆ ಆದರೆ ಈ ಹೂವು ಮಾತಾಡೋದು ಹೆಂಗಸರ ಜೊತೆ ಮಾತ್ರ. ಅದು ನಮಗೆ ಹೆಂಗ್ ಗೊತ್ತಾಗುತ್ತೆ ಅಂದ್ರೆ ಅವರು ಪ್ರತೀ ಹಬ್ಬದಲ್ಲೂ ‘ ಹೂವನ್ನ ಮಾತಾಡ್ಸಕ್ಕೇ ಆಗಲ್ಲ ಅಷ್ಟು ರೇಟಾಗೋಗಿದೆ ಅಂತಿರ್ತಾರೆ .
ಯಾರೊ ಎಷ್ಟು ಚೆನ್ನಾಗಿ ಹೇಳಿದಾರೆ ನೋಡಿ …. ಮಲಗಿದ್ದಾಗ ನಮ್ಮ ‘ ಕೆಳಗೆ ‘ ಹೂವು ಇದ್ರೆ ಪ್ರಥಮ ರಾತ್ರಿಯಂತೆ , ನಮ್ಮ ‘ ಮೇಲೆ ‘ ಹೂವಿದ್ದರೆ ಅಂತಿಮ ರಾತ್ರಿಯಂತೆ .
ಬಣ್ಣಗಳಿಗೆ ಉದಾಹರಣೆ ಈ ಹೂವು . ಜಗತ್ತಿನಲ್ಲಿ ಲಕ್ಷಾಂತರ ರೀತಿಯ ಹೂವುಗಳಿದ್ದರೂ ಪ್ರತಿಯೊಂದು ಹೂವು ಆಕಾರದಿಂದಲೂ ಪರಿಮಳದಿಂದಲೂ ಬೇರೆ ಬೇರೆ ರೀತಿಯದ್ದಾಗಿರುವುದು ವಿಶೇಷವೇ ಸರಿ .
ಹೂವಿನ ಆಯಸ್ಸು ತುಂಬಾನೇ ಕಡಿಮೆಯಾದರೂ ಇದ್ದಷ್ಟೂ ಕಾಲ ನಗುನಗುತ್ತಾ ಉಪಯೋಗವಾಗಿಯೇ ಬಾಡುತ್ತದೆ . ಬಿಡಿಸದೇ ಗಿಡದಲ್ಲಿಯೇ ಇದ್ದರೆ ಉದುರಿ ಗೊಬ್ಬರವಾದರೂ ಆಗುತ್ತದೆ . ಹೂವಿಗೂ ಒಂದು ರುಚಿಯಿದೆ ಅದರ ಹೆಸರೇ ಜೇನು .
Photo by Boris Smokrovic on Unsplash
ಹೂವಿನ ಬಗ್ಗೆ ಮಧುರ ಲೇಖನ
ಹೂವಿನ ವಿವಿಧ ಮಜಲುಗಳ ನ್ನು ತಿಲುಹಿಸಿರುವುದು ಚೆಂದವಿದೆ.