23.4 C
Karnataka
Friday, April 4, 2025

    ತಮಿಳುನಾಡು: ಚುನಾವಣೆಯಲ್ಲೂ ಮೆರೆಯುವ ಭಾಷಾಭಿಮಾನ

    Must read

    ಜನತಂತ್ರದ ಪ್ರಮುಖ ಪ್ರಕ್ರಿಯೆ ಚುನಾವಣೆ. ದೇಶದ ಸುಮಾರು 19 ರಾಜ್ಯಗಳಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳನ್ನು ಆಯಾ ರಾಜ್ಯಗಳಿಗೆ ಹೋಗಿ ಸಮೀಕ್ಷಿಸುವುದು ಅತಿ ಪ್ರಯಾಸಕರ. ಬೆಂಗಳೂರಿನ ವರದಿಗಾರರ ತಂಡವೊಂದು ಕಳೆದ 25 ವರುಷಗಳಿಂದ ಚುನಾವಣೆ ಜನಾಭಿಪ್ರಾಯ ಸಮೀಕ್ಷೆ ನಡೆಸುತ್ತಾ ಬಂದಿದೆ. ಹಿರಿಯ ಪತ್ರಕರ್ತ ಎಸ್.ಕೆ. ಶೇಷಚಂದ್ರಿಕ ಈ ತಂಡದ ನೇತೃತ್ವ ವಹಿಸುತ್ತಾ ಬಂದಿದ್ದಾರೆ. ಇನ್ನೇನು ಎರಡು ತಿಂಗಳಲ್ಲಿ ನಡೆಯುವ ತಮಿಳುನಾಡು ರಾಜ್ಯ ವಿಧಾನಸಭೆಯ ಚುನಾವಣೆಯ ನಾಡಿ ಮಿಡಿತವನ್ನು ಅರಿಯುವ ಯತ್ನವನ್ನು ಈ ತಂಡ ಮಾಡಿದೆ

    ನಮ್ಮ ದೇಶದ ರಾಜಕೀಯ ನಕ್ಷೆಯಲ್ಲಿ ತಮಿಳುನಾಡು ಜನ ನಾಯಕರು, ಪಕ್ಷಗಳು ಮತ್ತು ಮತದಾರರ ನಡೆ ನುಡಿ ಉಳಿದ ಭಾಷೆಯ ಜನರಿಗೆ ವಿಚಿತ್ರ ಹಾಗೂ ವಿಲಕ್ಷಣ ಎಂದು ಕಾಣಿಸಬಹುದು.  ಅನ್ಯ ಪ್ರಾಂತ್ಯದ ಜನಕ್ಕೆ ಅಸಂಗತವೆನ್ನುವಂತಹದು ತಮಿಳು ಮತದಾರನಿಗೆ ಗ್ರಾಹ್ಯ ಇಲ್ಲವೇ ಮುಖ್ಯ ಎನ್ನಿಸಿರುವುದೇ ಇದಕ್ಕೆ ಕಾರಣ.

    ಒಮ್ಮೆ ಆಯ್ಕೆಯಾದ ಸರ್ಕಾರ ಇಲ್ಲವೇ ನಾಯಕನನ್ನು ಮತದಾರ ಮುಂದಿನ ಚುನಾವಣೆಯಲ್ಲಿ ಹೊಸಕಿ ಹಾಕಬಲ್ಲ. ಜನಪ್ರಿಯನಾಗಿದ್ದ ಸಾಹಿತಿ ಮುತ್ತುವೇಲು ಕರುಣಾನಿಧಿಯ ಸುಮಾರು ಎರಡು ದಶಕಗಳ ಆಡಳಿತವನ್ನು ಕಿತ್ತುಹಾಕಿ ಅಮ್ಮ ಜಯಲಲಿತರನ್ನು ಪಟ್ಟಕ್ಕೆ ತಂದದ್ದು ತಮಿಳು ಮತದಾರನ ಇಂಥ ನಿರ್ವಿಕಾರ ಭಾವನೆಗೊಂದು ನಿದರ್ಶನ.

    ಈಗಲೂ ಅಷ್ಟೆ.  ಇವತ್ತಿಗೂ ತಮಿಳುನಾಡು ಮತದಾರನ ಮನಸ್ಸು ಒಂದು ರೀತಿ ಒಗಟು.  ನಾಳೆ ಏಪ್ರಿಲ್ –  ಮೇ ಚುನಾವಣೆಯಲ್ಲಿ ತಮಿಳು ಮತದಾರ ಯಾರನ್ನು  ಕೆಳಗಿಳಿಯುವಂತೆ, ಯಾರನ್ನು ಮೇಲಿರಿಸುವನೋ  ಹೇಳಲಾಗದು.

    ಎಚ್ಚೆತ್ತ ಮತದಾರರ ನಿರೀಕ್ಷೆ

    ಭಾರತದಂತಹ ಅಭಿವೃದ್ಧಿಶೀಲ ಮತ್ತು ವಿಕಸಿತ ಪ್ರಜಾತಂತ್ರದಲ್ಲಿ ಜನಕಲ್ಯಾಣ ಆಗಬೇಕಾದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿ ಗಳು ಜನ ಮನದ ನಾಡಿಯ ಸ್ಪಂದನೆ ತಿಳಿಯಬೇಕೆಂದು ನಮ್ಮ ಸಂವಿಧಾನ ರಚನೆಕಾರರು ನಿರೀಕ್ಷಿಸಿದ್ದರು. ಸಂವಾದ, ಭಾಷಣ, ಸಭೆ ಸಮಾರಂಭ ಇತ್ಯಾದಿ ವೇದಿಕೆಗಳ ಮೂಲಕ ಪರಸ್ಪರ ಸ್ಪರ್ಧಿ ಮತ್ತು ಮತದಾರ ವಿಚಾರವಿನಿಮಯ ನಡೆಸಬೇಕೆಂದು  ಗಾಂಧೀಜಿ, ಅಂಬೇಡ್ಕರ್, ಪಟೇಲ್ ಮೊದಲಾಗಿ ನಮ್ಮ ಹಿರಿಯರು ಆಶಿಸಿದ್ದರು.ಇಂದು ನಡೆಯುವ ಚುನಾವಣೆಗಳಲ್ಲಿ ಸಂವಿಧಾನದ ಆಶೋತ್ತರಗಳನ್ನು ಸುಸ್ಥಿರಗೊಳಿಸುವ ಯಾವ ಪ್ರಯತ್ನವೂ ನಡೆಯುತ್ತಿಲ್ಲ.

    ಬೆಂಗಳೂರಿನ ವರದಿಗಾರರಾದ ನಾವು ಚುನಾವಣೆಯ ಸಮಯದಲ್ಲಿ ಜನಾಭಿಪ್ರಾಯ ಸಮೀಕ್ಷೆ ನಡೆಸುವ ಪ್ರಯತ್ನ ಮಾಡುತ್ತಿದ್ದೇವೆ. ತಮಿಳುನಾಡಿನಲ್ಲಿ ಈಗಾಗಲೇ ಎರಡು ವಿಧಾನಸಭಾ ಚುನಾವಣೆಗಳ ಸಮೀಕ್ಷೆ ನಡೆಸಿದ ಅನುಭವ ನಮ್ಮದು.

    ತಮಿಳರಿಗಿರುವ ಭಾಷೆ ನಂಟು

    ತಮಿಳು ಮತದಾರ ದೇಶದ ಉಳಿದೆಡೆಗಳಲ್ಲಿನ ಮತದಾರರಿಗಿಂತ ಕೊಂಚಮಟ್ಟಿಗೆ ಎಚ್ಚೆತ್ತ ಪ್ರಜೆ. ಪಶ್ಚಿಮ ಬಂಗಾಳ ಮತ್ತು ಕೇರಳ ಸಮಾಜಗಳಲ್ಲಿಯೂ ಇದೇ ವಾತಾವರಣವಿದೆ. ಈ ಮೂರೂ ಸಮಾಜಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ತಮಿಳುನಾಡಿನಲ್ಲಿ ಚುನಾವಣೆ ಸಮಯದಲ್ಲಷ್ಟೇ ಅಲ್ಲ, ಉಳಿದ ಕಾಲದಲ್ಲಿ ಸಹಿತ ತಾಯ್ನುಡಿಯ ಮೂಲಕ ಮತದಾರನ ನಾಡಿಮಿಡಿತ ಮತ್ತು ನಿರೀಕ್ಷೆಗಳನ್ನು ಅರ್ಥ ಮಾಡಿಕೊಂಡು ಜನಸಾಮಾನ್ಯರ ಸಂಪರ್ಕವನ್ನು ಸಾಧಿಸಿವೆ ಇಲ್ಲಿಯ ರಾಜಕೀಯ ಪಕ್ಷಗಳು.

    ಚುನಾವಣೆ ಸಮಯದಲ್ಲಂತೂ  ತಮಿಳುನಾಡು  ರಾಜಕೀಯ ಪಕ್ಷಗಳಿಗೆ ಜನಮನದ ಒಲವು ಗಳಿಸಿ, ಯಶಸ್ವಿಯಾಗಲು ತಮಿಳು ಸಾಹಿತ್ಯ ಮತ್ತು ಸಂಸ್ಕೃತಿಯೇ ಸಾಧನ ಮತ್ತು ಅಸ್ತ್ರ.ಇಲ್ಲಿ ತಮಿಳೇ ಬಂಡವಾಳ. ತಮಿಳು ಭಾಷಣಗಳೇ ಜೇನುತುಪ್ಪ. 

    ಭಾಷೆ ಮತ್ತು ಸಂಸ್ಕೃತಿಯ ಬಗೆಗಿರುವ ಶುದ್ಧಾಂತ:ಕರಣ, ನಂಟು ಮತ್ತು ದಿನ ಬಳಕೆಯನ್ನು ಕಂಡಿದೆ. ಭಾಷಾವಾರು ಪ್ರಾಂತ್ಯ ವಿಂಗಡಣೆಯ ಪರಿಕಲ್ಪನೆ ಎಲ್ಲಾದರೂ ಸಾಫಲ್ಯ ಗೊಂಡಿದ್ದರೆ ಅದು ತಮಿಳುನಾಡಿನಲ್ಲಿ ಎನಿಸುತ್ತದೆ.

    ಬ್ರಿಟಿಷರು ಮರಳಿ ಹೋಗುವಾಗ ಬಿಟ್ಟುಹೋದ ಬಳುವಳಿ ಇಂಗ್ಲಿಷ್ ಭಾಷೆ. ದುರದೃಷ್ಟವೆಂದರೆ ಇಂಗ್ಲಿಷ್ ಅರಿವಿದ್ದೋ ಇಲ್ಲದೆಯೋ ಪ್ರಾದೇಶಿಕ ಸಂಸ್ಕೃತಿ ಮತ್ತು ಸಾಹಿತ್ಯವನ್ನು ನುಂಗಿ ಹಾಕುತ್ತಿದೆ. ಕನ್ನಡದಂತಹ ಪ್ರಾಚೀನ ಭಾಷೆಯ ದಿನಬಳಕೆ ಮಾತಿನಲ್ಲಿ ಪ್ರತಿ ಎರಡನೆಯ ಪದ ಇಂಗ್ಲಿಷ್ ಆಗದಿರುವುದು ಶೋಚನೀಯ.

    ತಮಿಳು ಸಮಾಜ ಇದಕ್ಕೆ ಹೊರತಾಗಿದೆ ಆರ್ಷೇಯವಾದ ಅಪ್ಪಟ ತಮಿಳಿನ ಮೇಲೆ ಎಳ್ಳಷ್ಟೂ ಪ್ರಭಾವ ಬೀರಿಲ್ಲ. ತಮಿಳು ಸಾಹಿತ್ಯ, ತಮಿಳು ಸಂಗೀತ ,ತಮಿಳು ಸಂಸ್ಕೃತಿ, ತಮಿಳು ವಿಜ್ಞಾನ ಹೀಗೆ ಜನಸಾಮಾನ್ಯರ ಬದುಕಿನ ಎಲ್ಲ ಪ್ರಕಾರಗಳು ಸ್ವಚ್ಛವಾಗಿದೆ ಪರಿಶುದ್ಧವಾಗಿದೆ. ಬದುಕಿನಲ್ಲಿ ಬೆರೆತಿದೆ.  ಹೀಗಾಗಿ ತಮಿಳು ಭಾಷಿಕರು ತಮ್ಮ ಭಾಷೆಯನ್ನು ಮುತ್ತಮಿಳ್,  ಸೆಂದಮಿಳ್ ಎಂದು ಅಭಿಮಾನದಿಂದ ಹೇಳಿಕೊಳ್ಳುವುದರಲ್ಲಿ ಅರ್ಥವಿದೆ.

    ನಾಯಕರುಗಳಲ್ಲಿರುವ ಭಾಷಾಪ್ರಭುತ್ವ

    ನಾವು ಚುನಾವಣೆಯ ಸಂದರ್ಭದಲ್ಲಿ ಕಂಡದ್ದು ತಮಿಳು  ರಾಜಕೀಯ ನಾಯಕರುಗಳಲ್ಲಿರುವ ಭಾಷಾಪ್ರಭುತ್ವ ಮತ್ತು ತಾಯ್ನುಡಿಯಲ್ಲಿ ಮತದಾರರನ್ನು ಸ್ಪರ್ಶಿಸುವ ನುಡಿ ನರ್ತನ.

    ಅಂದಿನ ರಾಜಕಾರಣಿಗಳಾದ ಕಾಮರಾಜ್ ಮತ್ತು ಅಣ್ಣಾದೊರೈ ರವರ  ಮಾತುಗಳಂತೂ ತಮಿಳಿನ ಮುತ್ತು ಮಾಣಿಕ್ಯದಂತಿರುತ್ತಿದ್ದವು. ಕರುಣಾನಿಧಿ, ಎಂಜಿಆರ್, ಜಯಲಲಿತಾ, ಕ್ಯಾಪ್ಟನ್ ವಿಜಯಕಾಂತ್, ಮೈಕೋ ಅನ್ಬಳಗನ್, ಪುನರೂತಿ ರಾಮಚಂದ್ರನ್, ಇವಿಎಸ್ ಅಳಂಗೋವನ್, ತೊಳ್ ತಿರುಮಾಮಲನ್ , ಸಾಹಿತಿ ಮನುಷ್ಯ ಪುತ್ರ ನ್, ಚೋ.ರಾಮಸ್ವಾಮಿ,ಚಾರು ನಿವೇದಿತಾ,  ಎ ದಕ್ಷಿಣಾಮೂರ್ತಿ – ಹೀಗೆ ಜನ ನಾಯಕರು, ಚಿಂತಕರು , ಸಾಹಿತಿಗಳು ಅಚ್ಛ ತಮಿಳಿನಲ್ಲಿ, ಸ್ವಚ್ಛ ತಮಿಳಿನಲ್ಲಿ ಮಾತನಾಡಿ, ಮತದಾರರು ಮತ್ತು ಸಾಮಾನ್ಯ ತಮಿಳಿಗರನ್ನು ತಾಯ್ನುಡಿಯ ಪ್ರೇಮಿಗಳನ್ನಾಗಿ ಮಾಡಿದ್ದನ್ನೂ ತಂದಿದ್ದೇವೆ.

    ಜಯಲಲಿತಾ ಮೊದಮೊದಲು ಮಡಿವಂತಿಕೆ ತೋರಿಸಿ ಚುನಾವಣೆಗಳಲ್ಲಿ ಮಾತನಾಡಲು ಹಿಂಜರಿದಿದ್ದರು. ಆದರೆ ಡಿಎಂಕೆ ನಾಯಕರ ಅಸ್ಖಲಿತ ಮತ್ತು ಲೀಲಾಜಾಲ ಮಾತಿನ ಮೋಡಿಯಲ್ಲಿ ಮತದಾರರು ತೇಲಿಹೋಗುತ್ತಿದ್ದುದನ್ನು ಗುರ್ತಿಸಿದ ‘ಅಮ್ಮ’ ಬೀದಿಗಿಳಿದು, ಜನಭಾಷೆಯಲ್ಲಿ ಇಡೀ ತಮಿಳುನಾಡನ್ನು ಗೆದ್ದದ್ದು ಇತಿಹಾಸ.

    ಎಂ ಕರುಣಾನಿಧಿಯವರಂತೂ ತಮಿಳು ಜನಕ್ಕೆ ಶಬ್ಧಬ್ರಹ್ಮ.  ಇವರ  ಬದುಕು ಆರಂಭವಾದದ್ದೇ ಸಿನಿ ಲೇಖನದಿಂದ. ತಮಿಳು ಇತಿಹಾಸದ ಪುಟಪುಟಗಳನ್ನೂ ಮಧುರಗೀತೆಯಾಗಿ ಮಾಡಿ ತಮಿಳು ಹೃದಯಗಳನ್ನು ಗೆದ್ದ ಮೋಡಿಗಾರ ಕರುಣಾನಿಧಿ.

    ಬಹುತೇಕ ಇವರೆಲ್ಲರ ಚುನಾವಣಾ ಭಾಷಣಗಳಲ್ಲಿ ತಮಿಳು ಸಾಹಿತ್ಯ ಮತ್ತು ತಮಿಳು ಚಿಂತನದ ಮಾತುಗಳೇ ಮತದಾರನಿಗೆ ಹಿತವಾಗಿ ಕಾಣುತ್ತಿದ್ದವು.

    ರಾಜಕೀಯ ಭಾಷಣದಲ್ಲಿ ಸಾಹಿತ್ಯ

    ಸ್ವಾತಂತ್ರ್ಯಾನಂತರದ ಚುನಾವಣಾ ಭಾಷಣಗಳಲ್ಲಿ ಸಾಹಿತ್ಯಕ್ಕೆ ಪ್ರಾಧಾನ್ಯತೆ ನೀಡಿರುವುದು ತಮಿಳರ ವಿಶೇಷ. ಇಂದಿಗೂ ಸ್ವಾತಂತ್ರ್ಯ ಪೂರ್ವದ ಸುಬ್ರಹ್ಮಣ್ಯ ಭಾರತೀಯಾರ್ ರವರನ್ನು ಅಭ್ಯರ್ಥಿ ಗಳು ನೆನೆಯುವುದುಂಟು. ದ್ರಾವಿಡಕಳಗಂ ಪಕ್ಷವನ್ನು ಕಟ್ಟಲು ಪೆರಿಯಾರ್ ಇ.ವಿ. ರಾಮಸ್ವಾಮಿ ನಾಯ್ಕರ್ ತಮಿಳು ಸಾಹಿತ್ಯದ ಶಿಲಪ್ಪಾದಿಕಾರಂ (ಎರಡನೆಯ ಶತಮಾನ) ಮತ್ತು ತಿರುಕ್ಕುರಳ್ ಗಳಂತೆ ಉಲ್ಲೇಖಿಸುತ್ತಿದ್ದರಂತೆ. ಇಂದಿಗೂ ರಾಜಕೀಯ ಭಾಷಣಗಳ ಒಂದು ಭಾಗದಂತಿದೆ ಮುಪ್ಪಾಲ್ ಮತ್ತು ಕುರುಳ್ (ಮಧ್ಯಕಾಲೀನ ಸಾಹಿತ್ಯ) ಹಾಗೂ ಚೆಂಗ ಸಾಹಿತ್ಯದ ಪ್ರಕಾರಗಳು.

    ಖ್ಯಾತ ಚಿಂತಕರಾದ ಕಂಬಂರ್, ತಿರುವಳ್ಳುವರ್ ,ಕಣ್ಣದಾಸನ್,  ವೈರಮುತ್ತು, ನಾಗೂರ್ ಹನೀಫ, ನಾಮಕ್ಕಲ್ ರಾಮಲಿಂಗಮ್, ಜಯಕಾಂತನ್ ಇವರೇ ಮೊದಲಾದ ತಮಿಳು ಸಾಹಿತ್ಯ ದಿಗ್ಗಜಗಳ ಕೃತಿಗಳನ್ನು ನಿರರ್ಗಳವಾಗಿ ಉಪಯೋಗಿಸಿ ಇಂದಿಗೂ ತಮಿಳು ಜನನಾಯಕರು ಚುನಾವಣೆ ಗೆಲ್ಲುತ್ತಿದ್ದಾರೆ.

    ಮುಂದಿನ ಸಮೀಕ್ಷೆಯಲ್ಲಿ ಇಂದಿನ ತಮಿಳು ಚುನಾವಣೆ ದೃಶ್ಯ ಗಳನ್ನು ಪ್ರಸ್ತುತಪಡಿಸಲಿದ್ದೇವೆ. 


    ಎಸ್ .ಕೆ. ಶೇಷಚಂದ್ರಿಕ ನಾಡಿನ ಹಿರಿಯ ಪತ್ರಕರ್ತರು.  ಭಾರತ ಸರಕಾರದ ಕ್ಷೇತ್ರ ಪ್ರಚಾರಾಧಿಕಾರಿಯಾಗಿ, ದೂರದರ್ಶನ, ಆಕಾಶವಾಣಿಯಲ್ಲಿ ಸುದ್ದಿ ಸಂಪಾದಕ, ವಿಶೇಷ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಪತ್ರಿಕಾ ಕಾರ್ಯದರ್ಶಿಯೂ ಆಗಿದ್ದರು.ದಿ ಟ್ರಿಬ್ಯೂನ್ ಪತ್ರಿಕೆಯ ವಿಶೇಷ ವರದಿಗಾರರು ಆಗಿ ಸೇವೆ ಸಲ್ಲಿಸಿದ ಅವರು ಈಗ ಬೆಂಗಳೂರು ನ್ಯೂಸ್ ಬ್ಯೂರೋದ ವಿಶೇಷ ವರದಿಗಾರರು ಹಾಗೂ ಗಾಂಧಿಯನ್ ಥಾಟ್ಸ್ ನ ವಿಸಿಟಿಂಗ್ ಪ್ರೊಫೆಸರ್ ಕೂಡ ಹೌದು.


    pic By L.vivian.richard at English Wikipedia

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!