ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.
ಮೊದಲು ಬಂದ ಕಿವಿಗಿಂತಲೂ ನಂತರ ಬಂದ ಕೋಡು ಹರಿತವಾಗಿತ್ತು-ನಯಸೇನ ಬರೆದಿರುವ ‘ಧರ್ಮಾಮೃತ’ ಕೃತಿಯಲ್ಲಿ ಉಲ್ಲೇಖವಾಗಿರುವ ಅರ್ಥಪೂರ್ಣ ಮಾತಿದು. ಹೊಸ ನೀರು ಬಂದು ಹಳೆ ನೀರನ್ನು ಕೊಚ್ಚಿಕೊಂಡು ಹೋಯಿತು ಎಂಬ ಮಾತನ್ನು ಸಂವಾದಿಯಾಗಿಲ್ಲಿ ಉಲ್ಲೇಖಿಸಬಹುದು.
ಹೊಸದು ಬಂದೊಡನೆಯೆ ಹಳೆಯದು ತನ್ನ ಸ್ಥಾನದಿಂದ ತಾನೆ ಹಿಂದೆ ಸರಿಯಬೇಕು. ಹಾಗೆಯೇ ಹೊಸದೂ ಕೂಡ ತನ್ನ ಅಸ್ತಿತ್ವವನ್ನು ಹಳೆಯದರ ಆಧಾರದ ಮೇಲೆ ಮುನ್ನಡೆಸಿಕೊಂಡು ಹೋಗಬೇಕು ಬದಲಿಗೆ ಹಳೆಯದೆಲ್ಲವು ಕನಿಷ್ಠ ಹೊಸದೆಲ್ಲವೂ ಗರಿಷ್ಠ ಎಂದು ಭಾವಿಸುವುದು ತಪ್ಪು.
ನಮ್ಮಲ್ಲಿ ಹೊಸದಾಗಿ ಕೆಲಸಕ್ಕೆ ಸೇರಲಿ, ಯಾವುದಾದರೂ ಪಾಲುದಾರಿಕೆಯಲ್ಲಿ ವ್ಯವಹಾರ ಮಾಡಲಿ, ಹಳಬರ ಅಸ್ತಿತ್ವವನ್ನು ಮರೆತೆಬಿಡುತ್ತಾರೆ. ಒಂದು ರೀತಿಯ ಅಭದ್ರತೆಯ ಭಾವದಿಂದ ಹೀಗಾಗುತ್ತದೆಯೇ? ಯೋಚಿಸಬೇಕಾದ ವಿಷಯವೇ….! ಉಡಾಫೆಯೇ ? ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕೆಂಬ ಹಂಬಲವೇ ಯೋಚಿಸಬೇಕು……!
ವಂಶಪಾರಂಪರ್ಯದಿಂದ ಮಾಡುವ ವ್ಯಾಪಾರ ವಹಿವಾಟುಗಳಲ್ಲಿ ಹೀಗಾಗುತ್ತದೆ. ವ್ಯಾಪಾರ ಪ್ರಾರಂಭಿಸಿದವರು ಅತ್ಯಂತ ಸೌಜನ್ಯದಿಂದ ವರ್ತಿಸುತ್ತಿರುತ್ತಾರೆ. ಧನಬಳಕೆಗಿಂತಲೂ ಜನಬಳಕೆ ತುಂಬಾ ಮುಖ್ಯವೆಂದು ತಿಳಿದಿರುತ್ತಾರೆ. ಆದರೆ ಹೊಸಬರು ಹಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟು ಹೊಸ ಬದಲಾವಣೆಗಳನ್ನು , ಕಾನೂನುಗಳನ್ನು ತರಹೋದಲ್ಲಿ ಸಹಜವಾಗಿ ಗೊಂದಲಗಳು ಸೃಷ್ಟಿಯಾಗಿ ಅಲ್ಲಿದ್ದವರಿಗೆ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗದೇ ಹೋಗಬಹುದು. ಆ ಸಂದರ್ಭದಲ್ಲಿ ಮೊದಲ ಬಂದ ಸಾಹುಕಾರರ ನಡವಳಿಕೆಗಿಂತಲೂ ನಂತರ ಬಂದ ವಾರಸುದಾರರ ಉಪಟಳ , ಕಿರಿ ಕಿರಿ ಹೆಚ್ಚಾಯಿತು ಎಂಬ ಅರ್ಥವನ್ನು ಮೇಲಿನ ಮಾತು ಹೇಳುತ್ತದೆ.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.
ಮೊದಲು ಬಂದ ಕಿವಿಗಿಂತ ನಂತರ ಬಂದ ಕೋ ದು ಹರಿತವಾಗಿತ್ತು ಎಂಬುದು ಹೊಸ ನೀರು ಬಂದು ಹಳೆ ನೀರು ಕೊಚ್ಚಿಹೊಯ್ತು ಎಂಬುದನ್ನು ದ್ವನಿಸಿರುವುದು ವಾಸ್ತವ ವನ್ನು ಪ್ರತಿನಿದಿಸಿದೆ. ಚೆಂದದ ಲೇಖನ. ಸುಮ ವೀಣಾವ ವ ರೆ.👌👍