18.6 C
Karnataka
Friday, November 22, 2024

    ಷೇರುಪೇಟೆಯೆಂಬ ಚಕ್ರವ್ಯೂಹದಲ್ಲಿ ಅಭಿಮನ್ಯುವಾಗದೆ ಅರ್ಜುನನಾಗುವುದೆ ಜಾಣತನ

    Must read

    ಷೇರುಪೇಟೆಯ ಹೆಗ್ಗುರುತಾದ ಸೆನ್ಸೆಕ್ಸ್‌ ಸರ್ವಕಾಲೀನ ಗರಿಷ್ಠ ಮಟ್ಟಕ್ಕೆ ಜಿಗಿದು ವಿಶ್ವದಾದ್ಯಂತ ಸರ್ವರ ಗಮನವನ್ನು ಸೆಳೆದಿದೆ. ಇದಲ್ಲದೆ ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.200 ಲಕ್ಷಕೋಟಿ ದಾಟಿದೆ. ಈಗ ಮುಂದಿನ ಗುರಿ ನ್ಯಾಷನಲ್‌ ಸ್ಟಾಕ್‌ ಎಕ್ಸ್‌ ಚೇಂಜ್‌ ನ ನಿಫ್ಟಿ 15 ಸಾವಿರದ ಗಡಿ ದಾಟುವುದಾಗಿದೆ. ಇಂತಹ ಪೇಟೆಯಲ್ಲಿ ಸಣ್ಣ ಹೂಡಿಕೆದಾರರು ಚಟುವಟಿಕೆ ನಡೆಸಲು ಸಾಧ್ಯವೇ? ಎಂಬುದು ಬಹು ಜನರ ಅನಿಸಿಕೆಯಾಗಿರುತ್ತದೆ. ಇದಕ್ಕೆ ಉತ್ತರವಾಗಿ ಕೆಳಗಿನ ಕೆಲವು ಕಂಪನಿ ಷೇರುಗಳು ಪ್ರದರ್ಶಿಸಿದ ವ್ಯಾಲ್ಯು ಪಿಕ್‌ ಅವಕಾಶಗಳನ್ನು ಗಮನಿಸಬಹುದಾಗಿದೆ.

    ಡಾಕ್ಟರ್‌ ರೆಡ್ಡಿ ಲ್ಯಾಬೊರೇಟರೀಸ್:ಸೋಮವಾರ ಮತ್ತು ಮಂಗಳವಾರ ರೂ.4,400 ರ ಹಂತಕ್ಕೆ ಕುಸಿದಿದ್ದ ಷೇರಿನ ಬೆಲೆ, ಶುಕ್ರವಾರದಂದು ಈ ಷೇರಿನ ಬೆಲೆ ರೂ.4,830 ಕ್ಕೆ ಜಿಗಿತ ಕಂಡು ಕೇವಲ ನಾಲೈದು ದಿನಗಳಲ್ಲಿ ಶೇ.10% ರಷ್ಟು ಗಳಿಕೆಯ ಅವಕಾಶ ಕಲ್ಪಿಸಿಕೊಟ್ಟಿದೆ. ಕಾರಣವೇನೇ ಇರಲಿ ಅವಕಾಶ ಕಲ್ಪಿತವಂತೂ ಸಹಜವಲ್ಲವೇ?

    ಟಾಟಾ ಮೋಟಾರ್ಸ್‌ : ಸೋಮವಾರದಂದು ರೂ.258 ರ ಸಮೀಪದಲ್ಲಿದ್ದು ಮಂಗಳವಾರ ರೂ.330 ನ್ನು ದಾಟಿತು. ಬುಧವಾರದಂದು ರೂ.340 ನ್ನು ತಲುಪಿ ಗುರುವಾರ ರೂ.322 ಕ್ಕೆ ಕುಸಿಯಿತು. ಶುಕ್ರವಾರದಂದು ರೂ.316 ರವರೆಗೂ ಜಾರಿಕೊಂಡಿತು. ಅಂದರೆ ಸುಮಾರು ರೂ.80 ಕ್ಕೂ ಹೆಚ್ಚಿನ ಏರಿಳಿತ ಪ್ರದರ್ಶಿಸಿದೆ. ಪ್ರತಿ ವಾರವೂ ಇದೇ ರೀತಿಯ ವಾತಾವರಣ ಸೃಷ್ಠಿಯಾಗದು. ಆದರೆ ಅಂತಹ ಅವಕಾಶಗಳನ್ನು ಬಳಸಿಕೊಳ್ಳುವ ಕೌಶಲ್ಯವನ್ನು ಅಳವಡಿಸಿಕೊಂಡಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ.

    ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್ :ಈ ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಯು ಪ್ರತಿ ಷೇರಿಗೆ ರೂ.7.50ಯಂತೆ ಡಿವಿಡೆಂಡ್‌ ಪ್ರಕಟಿಸಿದೆ. ಈ ಕಾರಣವು ಷೇರಿನ ಬೆಲೆಯಲ್ಲಿ ಬಹಳಷ್ಠು ಚೇತರಿಕೆ ಮೂಡಲು ಕಾರಣವಾಯಿತು. ಸೋಮವಾರದಂದು ರೂ.94 ರ ಸಮೀಪವಿದ್ದ ಈ ಷೇರು ಮಂಗಳವಾರ ರೂ.99 ರವರೆಗೂ ಜಿಗಿಯಿತು, ಬುಧವಾರ ರೂ.102 ರವರೆಗೂ ತಲುಪಿ ಗುರುವಾರ ಮತ್ತು ಶುಕ್ರವಾರ ರೂ.104 ನ್ನು ದಾಟಿ ರೂ.102 ರ ಸಮೀಪ ವಾರಾಂತ್ಯ ಕಂಡಿದೆ. ಅಂದರೆ ಕಂಪನಿ ಘೋಷಿಸಿದ ರೂ.7.50 ಡಿವಿಡೆಂಡ್‌ ಗೆ ಷೇರಿನ ಬೆಲೆ ರೂ.10 ಕ್ಕೂ ಹೆಚ್ಚಿನ ಏರಿಕೆಯನ್ನು ಒಂದೇ ವಾರದಲ್ಲಿ ಪ್ರದರ್ಶಿಸಿದೆ. 9 ನೇ ಮಂಗಳವಾರದಿಂದ ಈ ಷೇರು ಎಕ್ಸ್-ಡಿವಿಡೆಂಡ್‌ ವಹಿವಾಟಾಗಲಿದೆ. ಅಂದರೆ ಸೋಮವಾರದ ವಹಿವಾಟು ಕಂ-ಡಿವಿಡೆಂಡ್‌ ಅಧಾರದಲ್ಲಿರುತ್ತದೆ.

    ಐ ಟಿ ಸಿ:ಸೋಮವಾರದಂದು ಈ ಷೇರಿನ ಬೆಲೆ ರೂ.202 ರ ಸಮೀಪದಲ್ಲಿತ್ತು. ಈ ನೀರಸ ವಾತಾವರಣಕ್ಕೆ ಬಜೆಟ್‌ ನಲ್ಲಿ ಸಿಗರೇಟ್‌ ಗಳ ಮೇಲೆ ಹೆಚ್ಚಿನ ಹೊರೆ ಬೀಳಬಹುದೇನೋ ಎಂಬ ಚಿಂತನೆಯಾಗಿತ್ತು. ಆದರೆ ಯಾವುದೇ ಬದಲಾವಣೆವಿಲ್ಲದ ಕಾರಣ ಅಂದೇ ರೂ.210 ನ್ನು ದಾಟಿತು. ನಂತರದ ದಿನಗಳಲ್ಲಿ ಬಹು ಬೇಡಿಕೆಯಿಂದ ರೂ.238 ರವರೆಗೂ ಜಿಗಿತ ಕಂಡು ರೂ.234 ರ ಸಮೀಪ ವಾರಾಂತ್ಯ ಕಂಡಿದೆ. ಈ ಕಂಪನಿಯ ಆಡಳಿತ ಮಂಡಳಿಯು ಈ ತಿಂಗಳ 11 ರಂದು ತನ್ನ ತ್ರೈಮಾಸಿಕ ಫಲಿತಾಂಶದೊಂದಿಗೆ ಮಧ್ಯಂತರ ಲಾಭಾಂಶ ಪ್ರಕಟಿಸುವುದಾಗಿ ತಿಳಿಸಿದೆ. ಈ ಅಂಶವು ಕಂಪನಿಯ ಷೇರಿನಲ್ಲಿ ಹೆಚ್ಚಿನ ಚಟುವಟಿಕೆಯನ್ನು ತುಂಬಬಹುದು.

    ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ:ಈ ಷೇರಿನ ಬೆಲೆ ಸೋಮವಾರದಂದು ರೂ.282 ರಲ್ಲಿತ್ತು. ಆದರೆ ವಾರಾಂತ್ಯದಲ್ಲಿ ರೂ.408 ರವರೆಗೂ ಜಿಗಿತ ಕಂಡು ರೂ.398 ರ ಸಮೀಪ ಕೊನೆಗೊಂಡಿತು. ಮಂಗಳವಾರ ರೂ.337 ರವರೆಗೂ, ಬುಧವಾರ ರೂ.340 ರವರೆಗೂ, ಗುರುವಾರ ಕಂಪನಿಯ ಫಲಿತಾಂಶ ಪ್ರಕಟಣೆಯದಿನವಾದ್ದರಿಂದ ರೂ.331 ರಿಂದ ರೂ.358 ರವರೆಗೂ ಏರಿಳಿತ ಪ್ರದರ್ಶಿಸಿ ಶುಕ್ರವಾರ ರೂ.408 ರ ವಾರ್ಷಿಕ ಗರಿಷ್ಠ ದಾಖಲಿಸಿ ರೂ.398 ರಲ್ಲಿ ಕೊನೆಗೊಂಡಿತು. ಈ ರೀತಿಯ ಏರಿಕೆಯ ಹಿಂದೆ ಫಲಿತಾಂಶಗಳ ವಿಶ್ಲೇಷಣೆಗಳಲ್ಲದೆ, ಈ ಬ್ಯಾಂಕ್‌ ಸೆನ್ಸೆಕ್ಸ್‌ ನ ಅಂಗವಾಗಿದ್ದು ಇತ್ತೀಚಿನ ದಿನಗಳಲ್ಲಿ ಸೆನ್ಸೆಕ್ಸ್‌ ನ ಪ್ರಮುಖ ಕಂಪನಿಗಳಾದ ಹೆಚ್‌ ಡಿ ಎಫ್‌ ಸಿ, ಹೆಚ್‌ ಡಿ ಎಫ್‌ ಸಿ ಬ್ಯಾಂಕ್‌, ಬಜಾಜ್‌ ಫಿನ್ಸರ್ವ್‌, ಬಜಾಜ್‌ ಫೈನಾನ್ಸ್‌, ಇಂಡಸ್ ಇಂಡ್‌ ಬ್ಯಾಂಕ್‌, ಆಕ್ಸಿಸ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಭಾರಿ ಏರಿಕೆ ಕಂಡಿದ್ದು ದಣಿದಿದ್ದ ಕಾರಣ ಅವಕ್ಕೆ ಸುಧಾರಿಸಿಕೊಳ್ಳುವ ಅವಕಾಶ ನೀಡಿ ಸೆನ್ಸೆಕ್ಸ್‌ ಏರಿಕೆಗೆ ಪೂರಕವಾಗಿ ಈ ಬ್ಯಾಂಕ್‌ ನ ಫಲಿತಾಂಶವು ಸಹಕಾರಿಯಾಗಿದೆ.

    ಇಂಡಿಯನ್‌ ರೇಲ್ವೆ ಕ್ಯಾಟರಿಂಗ್‌ ಅಂಡ್‌ ಟೂರಿಸಂ ಕಾರ್ಪೊರೇಷನ್ (ಐ ಆರ್‌ ಸಿ ಟಿ ಸಿ ):ಈ ಕಂಪನಿಯ ಶೇ.15 ರಷ್ಟನ್ನು ಕೇಂದ್ರ ಸರ್ಕಾರವು ತನ್ನ ಬಂಡವಾಳ ಹಿಂತೆಗೆತ (Disinvestment) ಯೋಜನೆಯಡಿ ಪ್ರತಿ ಷೇರಿಗೆ ರೂ.1,367 ರ ಬೇಸ್‌ ಪ್ರೈಸ್‌ ನಲ್ಲಿ ಡಿಸೆಂಬರ್‌ ತಿಂಗಳಲ್ಲಿ ಮಾರಾಟಮಾಡಿತು. ಈ ಪ್ರಕ್ರಿಯೆಗೆ ಮೊದಲು ಷೇರಿನ ಬೆಲೆ ರೂ.1,700 ಕ್ಕೂ ಹೆಚ್ಚಿತ್ತು. ಈ ವಾರ ಈ ಕಂಪನಿ ಷೇರಿಗೆ ಶುಕ್ರದೆಶೆ ಬಂದಿದೆ. ರೂ.1,451 ರ ಕನಿಷ್ಠ ಬೆಲೆಯಿಂದ ಶುಕ್ರವಾರ ರೂ.1,580 ರವರೆಗೂ ಜಿಗಿತ ಕಂಡು ಉತ್ತಮ ಚಟುವಟಿಕೆ ಪ್ರದರ್ಶಿಸಿದೆ.

    ಇವುಗಳಲ್ಲದೆ ಕಂಪನಿಗಳಾದ ಡಿ ಎಲ್‌ ಎಫ್‌, ಸ್ಟೀಲ್‌ ಅಥಾರಿಟೀಸ್‌ ಆಫ್‌ ಇಂಡಿಯಾ, ಇಂಡಸ್‌ ಇಂಡ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌, ಟಾಟಾ ಕೆಂ, ಮಹೀಂದ್ರ ಅಂಡ್‌ ಮಹೀಂದ್ರ, ಬಯೋಕಾನ್‌, ಬಿ ಪಿ ಸಿ ಎಲ್‌, ಬ್ರಿಟಾನಿಯಾ, ಆಸ್ಟ್ರಾಜನಿಕ, ಸಿಪ್ಲಾ, ಯುಪಿಎಲ್‌, ಕೋಲ್‌ ಇಂಡಿಯಾ, ಲಾರ್ಸನ್‌ ಅಂಡ್‌ ಟೋಬ್ರೋ, ಹೆಚ್‌ ಐ ಎಲ್‌, ರಾಂಕೋ ಸೀಮೆಂಟ್‌, ಇಂಡಿಯನ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ, ಕರ್ನಾಟಕ ಬ್ಯಾಂಕ್‌, ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ , ಕಲ್ಪತರು ಪವರ್‌, ಬಜಜ್‌ ಎಲೆಕ್ಟ್ರಿಕಲ್‌ ನಂತಹ ಅನೇಕ ಕಂಪನಿಗಳು ಏರಿಳಿತಗಳೊಂದಿಗೆ ಏರಿಕೆ ಕಂಡಿವೆ. ಹಾಗೆಂದ ಮಾತ್ರಕ್ಕೆ ಏಲ್ಲಾ ಕಂಪನಿಗಳು ಏರಿಕೆ ಕಂಡು ಖರೀದಿಸಲು ಅವಕಾಶವಿಲ್ಲವೆಂದಲ್ಲ. ಈ ವಾತಾವರಣದಲ್ಲೂ ಕಂಪನಿಗಳಾದ ಸಿ ಇ ಎಸ್‌ ಸಿ, ಕೋರಮಂಡಲ್‌ ಇಂಟರ್‌ ನ್ಯಾಶನಲ್‌, ಚಂಬಲ್‌ ಫರ್ಟಿಲೈಸರ್ಸ್‌, ಝೀ ಎಂಟರ್ ಟೇನ್ಮೆಂಟ್‌, ನಂತಹ ಕಂಪನಿಗಳು ಇಳಿಕೆಯಲ್ಲಿವೆ. ಹಾಗೆಯೇ ಇತ್ತೀಚೆಗೆ ಏರಿಕೆ ಪ್ರದರ್ಶಿಸಿ ಇಳಿಕೆ ಕಂಡ ಯು ಪಿ ಎಲ್‌, ಬಂದನ್‌ ಬ್ಯಾಂಕ್‌, ಎಲ್‌ ಐ ಸಿ ಹೌಸಿಂಗ್‌ ಫೈನಾನ್ಸ್‌ ಗಳಂತಹವು ಮತ್ತೊಮ್ಮೆ ಪುಟಿದೇಳಲೂಬಹುದು.ಇಲ್ಲದೆಯೂ ಇರಬಹುದು. ಷೇರು ಪೇಟೆ ಹೀಗೆ ವರ್ತಿಸುತ್ತದೆ ಎಂದು ಹೇಳುವುದು ಎಂಥವರಿಗೂ ಕಷ್ಟ. ಓಟ್ಟಾರೆ ವಿದೇಶಿ ವಿತ್ತೀಯ ಸಂಸ್ಥೆಗಳ ಒಳಹರಿವಿನ ಪ್ರಮಾಣವು ಪೇಟೆಯ ವಾತಾವರಣವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದೆ.

    ಹಿತವಾದ, ಮಿತವಾದ ಸಂಖ್ಯೆಯ ಷೇರುಗಳಲ್ಲಿ ವಹಿವಾಟು ನಡೆಸಿದಲ್ಲಿ, ಒಂದು ವೇಳೆ ಖರೀದಿಸಿದ ಷೇರಿನ ಬೆಲೆ ಇಳಿಕೆ ಕಂಡರೂ, ಹೂಡಿಕೆಯಾಗಿ ಮುಂದುವರೆಸಿಕೊಂಡುಹೋಗುವ ಭಾವನೆಯಿಂದ ಉತ್ತಮ ಕಂಪನಿಗಳನ್ನು ಮಾತ್ರ ಆಯ್ಕೆಮಾಡಿಕೊಳ್ಳಬೇಕು. ಈಗಿನ ಷೇರುಪೇಟೆ ಎಂಬ ಚಕ್ರವ್ಯೂಹದಲ್ಲಿ ಯಶಸ್ಸು ಕಾಣಬೇಕಾದರೆ – ಬೇಕಾದಾಗ ಒಳಹೊಕ್ಕುವ, ಅಗತ್ಯವಿದ್ದಾಗ ಹೊರಬರುವ ಗುಣ ಹೊಂದಿರುವ ಅರ್ಜುನನ ರೀತಿಯಿದ್ದಲ್ಲಿ ಮಾತ್ರ ಸಾಧ್ಯ. ಕೇವಲ ಖರೀದಿಸಿ ಸುಮ್ಮನಾದಲ್ಲಿ ಅಭಿಮನ್ಯುವಿನಂತಾಗಬಹುದು. Markets have reached trading zone from holding zone. ಹಾಗಾಗಿ ಭಾವನಾತ್ಮಕ ಚಿಂತನೆಯಿಂದ ಹೊರಬಂದು ಲಾಭ ಗಳಿಕೆಯ ಚಿಂತನೆ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯ.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!