26.3 C
Karnataka
Saturday, November 23, 2024

    ಆದರ್ಶ ಶಿಕ್ಷಕ ಹೇಗಿರಬೇಕು?

    Must read

    ರಾಷ್ಟ್ರ ನಿರ್ಮಾಣವೆಂದರೆ ಗಗನ ಚುಂಬಿ ಕಟ್ಟಡಗಳ ನಿರ್ಮಾಣವಲ್ಲ. ನಿಜವಾದ ಅರ್ಥದಲ್ಲಿ, ರಾಷ್ಟ್ರ ನಿರ್ಮಾಣವೆಂದರೆ ಮೌಲ್ಯ ಪೂರ್ಣ ಪ್ರಜೆಗಳ ನಿರ್ಮಾಣ. ಇಂತಹ ಉತ್ತಮ ಪ್ರಜೆಗಳ ನಿರ್ಮಾಣ ಕಾರ್ಯದಲ್ಲಿ ಮಾತಾ ಪಿತೃಗಳ ಪಾತ್ರ ಬಹಳಮುಖ್ಯ ಮತ್ತು ತಂದೆ ತಾಯಂದಿರೇ ಮೊದಲ ಗುರುಗಳು. ಮನೆಯೇ ಮೊದಲ ಪಾಠಶಾಲೆ ಮತ್ತು ತಾಯಿಯೇ ಮೊದಲ ಗುರು  ಎಂಬ ಮಾತನ್ನು ನಾವುಗಳು ಕೇಳಿದ್ದೇವೆ. ದುರದುಷ್ಟಕರ ಸಂಗತಿಯೆಂದರೆ, ಇಂದಿನ ಮಾತಾ ಪಿತೃಗಳಲ್ಲಿ ತಮ್ಮ ಮಕ್ಕಳನ್ನು ಸತ್ಪ್ರಜೆಗಳಾಗಿ ಬೆಳೆಸುವ ಸಾಮರ್ಥ್ಯ ಹಾಗೂ ವ್ಯವಧಾನವಿದ್ದಂತೆ ಕಾಣುವುದಿಲ್ಲ.

    ನನ್ನ ನಲವತ್ತೈದು ವರ್ಷಗಳ ಅನುಭವದಿಂದ ಈ ಮಾತನ್ನು ಹೇಳುತ್ತಿದ್ದೇನೆ. ಇಂದಿನ ವಿದ್ಯಾರ್ಥಿಗಳ ನಡವಳಿಕೆಗಳನ್ನು ಗಮನಿಸಿದರೆ ಇದು ತಿಳಿಯುತ್ತದೆ. ಹಲವಾರು ಪೋಷಕರು ಅವರ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಬೆಳೆಸಲು ತಮ್ಮಿಂದ ಸಾಧ್ಯವಾಗದೆ, ಶಿಕ್ಷಕರ ಮತ್ತು ಶಾಲೆಯ / ಕಾಲೇಜಿನ ಪ್ರಾಂಶುಪಾಲರ ಮೊರೆ ಹೋಗುವುದನ್ನು ನಾನು ಕಂಡಿದ್ದೇನೆ. ಏಕೆಂದರೆ, ಮಾತಾ ಪಿತೃಗಳ ನಂತರ, ವಿದ್ಯಾರ್ಥಿಗಳನ್ನು, ಯುವಕ / ಯುವತಿಯರನ್ನು ತಿದ್ದಿ ಒಳ್ಳೆಯ ದಾರಿಗೆ ತರುವ ಕಾರ್ಯ ಮಾಡಬೇಕಾದದ್ದು ಶಿಕ್ಷಕರು. ಎಷ್ಟೊ ಬಾರಿ, ತಂದೆ ತಾಯಂದಿರಿಂದ ಸಾಧ್ಯವಾಗದೇ, ಶಿಕ್ಷಕರಿಂದ ಯಶಸ್ವಿಯಾದ ಉದಾಹರಣೆಗಳಿವೆ. 

    ಶಿಕ್ಷಕರ ಸ್ಥಾನ

    ಸತ್ಪ್ರಜೆಗಳ ನಿರ್ಮಾಣ ಕಾರ್ಯದಲ್ಲಿ ಮಾತಾ ಪಿತೃಗಳು ಮೊದಲನೇ ಸ್ಥಾನದಲ್ಲಿದ್ದರೆ, ಶಿಕ್ಷಕರು ಎರಡನೇ ಸ್ಥಾನವನ್ನು ಪಡೆಯುತ್ತಾರೆ. ಆದ್ದರಿಂದ, ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮವಾದ ಶಿಕ್ಷಕರಿದ್ದರೆ, ಸುಸಂಸ್ಕೃತ ಪ್ರಜೆಗಳನ್ನು ಹೊಂದಿದ ರಾಷ್ಟ್ರ ನಿರ್ಮಾಣ ನಿಶ್ಚಯವಾಗಲು ಸಾಧ್ಯವಾಗುತ್ತದೆ. “A teacher is a nation builder” ಎಂಬ ಮಾತು ಪ್ರಚಲಿತವಾಗಿದೆ.

    ನಮ್ಮ ಸಂಸ್ಕೃತಿಯಲ್ಲಿ, ಶಿಕ್ಷಕ ವೃತ್ತಿ ಪವಿತ್ರವಾದಂತ ವೃತ್ತಿಯೆಂದು ಪರಿಗಣಿಸಲಾಗಿದೆ. ತೈತ್ತರೀಯ ಉಪನಿಷತ್‍ನಲ್ಲಿ “ಆಚಾರ್ಯ ದೇವೋ ಭವ” ಎಂದು ಹೇಳುವುದರ ಮೂಲಕ, ಶಿಕ್ಷಕರನ್ನು ದೇವರಿಗೆ ಹೋಲಿಸಲಾಗಿದೆ. ಗುರುವನ್ನು ದಿವ್ಯತ್ರಯರಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಿಗೆ ಹೋಲಿಸಲಾಗಿದೆ. “ಉತ್ತಮ ಶಿಕ್ಷಕ ರಾಷ್ಟ್ರ ರಕ್ಷಕ” ಎಂಬ ಮಾತನ್ನು ನಾವು ಕೇಳಿದ್ದೇವೆ. ಇನ್ನು ಆರೋಗ್ಯಕರ ಸಮಾಜವನ್ನು ಅಭಿವೃದ್ದಿ ಪಡಿಸುವಲ್ಲಿ, ಆರ್ಥಿಕತೆಯ ಬೆಳವಣಿಗೆಯಲ್ಲಿ, ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರ ಅಪಾರ. ಈ ಅಂಶವು ಕೆಳಗಿನ ಹೇಳಿಕೆಗಳಿಂದ / ನಾಣ್ನುಡಿಗಳಿಂದ ಧೃಡಪಡುತ್ತದೆ.

    “ನೀವು ಒಂದು ವರ್ಷದ ಮಟ್ಟಿಗೆ ಯೋಜಿಸಿದರೆ, ಧಾನ್ಯಗಳ ಬೀಜಗಳನ್ನು ಬಿತ್ತನೆ ಮಾಡಿ. ಒಂದು ದಶಕದ ಕಾಲಕ್ಕೆ ಯೋಜಿಸಿದರೆ, ಮರಗಳನ್ನು ನೆಡುವ ಕಾರ್ಯ ಮಾಡಿ. ಒಂದು ಶತಮಾನಕ್ಕೂ ಹೆಚ್ಚಿನ ಅವಧಿಗೆ ಯೋಜಿಸಿದರೆ, ಶಿಕ್ಷಣದ ಬೀಜಗಳನ್ನು ಬಿತ್ತನೆ ಮಾಡಿ” – ಚೈನೀಸ್‍ ನಾಣ್ನುಡಿ.

    ದಕ್ಷಿಣ ಆಫ್ರಿಕಾದ ಒಂದು ವಿಶ್ವ ವಿದ್ಯಾಲಯದ ಪ್ರವೇಶ ದ್ವಾರದಲ್ಲಿ ಸಂದರ್ಶಕರ ಚಿಂತನೆಗಾಗಿ ಕೆಳಕಂಡಂತೆ ಫಲಕವನ್ನು ಅಳವಡಿಸಲಾಗಿತ್ತು.

    “ಯಾವುದೇ ರಾಷ್ಟ್ರವನ್ನು ನಾಶ ಮಾಡಲು ಅಣುಬಾಂಬಿನ ಅಥವಾ ದೂರ ವ್ಯಾಪ್ತಿಯ ಕ್ಷಿಪಣಿಗಳು (Missiles) ಅವಶ್ಯಕತೆಯಿರುವುದಿಲ್ಲ. ನಾಶಮಾಡಲು, ಶಿಕ್ಷಣದ ಗುಣ ಮಟ್ಟವನ್ನು ಕಡಿಮೆ ಮಾಡಿ, ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ನಕಲು ಮಾಡಲು ಅವಕಾಶ ಮಾಡಿಕೊಟ್ಟರೆ ಸಾಕು”.

     “Build a good school today, Avoid hundred jails tomorrow” – Swami Veereshananda Saraswathi Swamiji, Ramakrishnamutt, Tumkur. 

    “Destiny of nation is shaped in the classrooms” – Education report of 1968.

    ಈ ಹೇಳಿಕೆಗಳಿಂದ ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಗಳು ರಾಷ್ಟ್ರದ ಪ್ರಗತಿಗೆ ಎಷ್ಟು ಮುಖ್ಯ ಎಂಬ ಅಂಶ ಸ್ಪಟಿಕದಂತೆ ಸ್ಪಷ್ಟವಾಗುತ್ತದೆ.

    ಶಿಕ್ಷಕರು ಶಿಕ್ಷಣ ಸಂಸ್ಥೆಯ ಬೆನ್ನೆಲುಬು

    ಯಾವುದೇ ಶಿಕ್ಷಣ ಸಂಸ್ಥೆಯು ಉತ್ತಮವಾಗಿ ಕಾರ್ಯ ನಿರ್ವಹಿಸ ಬೇಕಾದರೆ, ಉತ್ತಮ ಶಿಕ್ಷಣ ಪದ್ದತಿಯನ್ನು ಕಾರ್ಯಗತಗೊಳಿಸ ಬೇಕಾದರೆ, ಶೈಕ್ಷಣಿಕ ಯೋಜನೆಗಳು ಫಲಕಾರಿಯಾಗ ಬೇಕಾದರೆ, ಉತ್ತಮ ಹಾಗೂ ಸಮರ್ಥ ಶಿಕ್ಷಕರು ಬೇಕೇ ಬೇಕು. ಶಿಕ್ಷಕರು ಶಿಕ್ಷಣ ಸಂಸ್ಥೆಯ ಬೆನ್ನೆಲುಬು. ಒಂದು ಶಿಕ್ಷಣ ಸಂಸ್ಥೆಯು ಸುಂದರವಾದ ಬೃಹದಾಕಾರದ ಕಟ್ಟಡ ಹೊಂದಿದ್ದು, ಎಲ್ಲಾ ಮೂಲಭೂತ ಸೌಕರ್ಯಗಳಿದ್ದರೂ ಸಹ, ಉತ್ತಮ ಶಿಕ್ಷಕರಿಲ್ಲದಿದ್ದರೆ, ಆ ವಿದ್ಯಾ ಸಂಸ್ಥೆಯು ಯಶಸ್ಸನ್ನು ಕಾಣಲು ಸಾಧ್ಯವಿಲ್ಲ. ಇಂತಹ ಮಹಾತ್ಕಾರ್ಯದಲ್ಲಿ ತೊಡಗಿಸಬಲ್ಲ ಶಿಕ್ಷಕರು ಹೇಗಿರ ಬೇಕು, ಮತ್ತು ಇಂತಹ ಪವಿತ್ರವಾದಂತಹ ವೃತ್ತಿಗೆ ಯಾರು ಅರ್ಹರು ಎಂಬ ಅಂಶಗಳನ್ನು ತಿಳಿಯೋಣ.

    ಶಿಕ್ಷಕರಾಗಲು ಬಯಸುವವರು, ಈ ಕೆಳಗಿನ ವಿಶೇಷ ಗುಣಗಳನ್ನು ಹೊಂದಿರಬೇಕು.

    • ಶಿಕ್ಷಕ ವೃತ್ತಿಯನ್ನು ಇಷ್ಟಪಟ್ಟು, ಸಂತಸದಿಂದ ಆಯ್ಕೆ ಮಾಡಿಕೊಂಡು ಶಿಕ್ಷಕನಾಗಬೇಕು.
    • ಶಿಕ್ಷಣ ವೃತ್ತಿಯ ಬಗ್ಗೆ ಅಪಾರ ಅಭಿಲಾಷೆಯಿರಬೇಕು.
    • ಶಿಕ್ಷಕ ಆಯ್ಕೆ ಮಾಡಿಕೊಂಡ ಶಿಸ್ತೀಯ ವಿಷಯಗಳ ಬಗ್ಗೆ ಉತ್ತಮ ಮಟ್ಟದ ಜ್ಞಾನವನ್ನು ಹೊಂದಿರಬೇಕು.
    • ವಿದ್ಯಾರ್ಥಿಗಳನ್ನು ತನ್ನ ಮಕ್ಕಳಂತೆ ಕಾಣುವ ಗುಣವಿರಬೇಕು ಮತ್ತು ಸಹನೆಯು ಮುಖ್ಯ. ಪ್ರೀತಿ ವಾತ್ಸಲ್ಯಗಳಿಂದ ಬೋಧನೆ ಮಾಡಬೇಕು.
    • ಬೋಧಿಸುವ ವಿಷಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಕುತೂಹಲವನ್ನುಂಟು ಮಾಡುವ ಸಾಮರ್ಥ್ಯ ಹೊಂದಿರಬೇಕು.
    • ಸೃಜನಾತ್ಮಕ ಮತ್ತು ವಿಮರ್ಶಾತ್ಮಕ ಸಾಮರ್ಥ್ಯಗಳನ್ನು ಹೊಂದಿರಬೇಕು.
    • ಉತ್ತಮ ಗುಣಮಟ್ಟದ ಸಂವಹನ ಕೌಶಲ್ಯವನ್ನು ಹೊಂದಿರಬೇಕು.
    • ಜೀವನ ಪರ್ಯಂತ ಹೊಸತನ್ನು ಕಲಿಯುವ ಮತ್ತು ಜ್ಞಾನವನ್ನು ಬೆಳೆಸಿಕೊಳ್ಳುವ ಇಚ್ಛಾಶಕ್ತಿಯಿರಬೇಕು.
    • ಎಲ್ಲಾ ವಿದ್ಯಾರ್ಥಿಗಳಲ್ಲಿ ಕಲಿಯುವ ಸಾಮರ್ಥ್ಯ ಒಂದೇ ಮಟ್ಟದಲ್ಲಿರುವುದಿಲ್ಲ. ವಿದ್ಯಾರ್ಥಿಗಳ ಕಲಿಕೆಯ ಸಾಮರ್ಥ್ಯದಲ್ಲಿರುವ ವ್ಯತ್ಯಾಸಗಳನ್ನು ತಿಳಿದು, ಅದರಂತೆ ಬೋಧನಾ ಕ್ರಮವನ್ನು ಅಳವಡಿಸಿಕೊಂಡು ಎಲ್ಲಾ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಪಾಠ ಪ್ರವಚನಗಳನ್ನು ಮಾಡುವ ಸಾಮರ್ಥ್ಯ ಮತ್ತು ಸಹನೆಯಿರಬೇಕು.
    • ವಿದ್ಯಾರ್ಥಿ ಸಮೂಹ ಮತ್ತು ಸಮಾಜವು ಮೆಚ್ಚುವ ಉತ್ತಮ ನಡವಳಿಕೆ ಇರಬೇಕು. ಶಿಕ್ಷಕನ ನಡವಳಿಕೆ ಆದರ್ಶ ಪ್ರಾಯವಾಗಿರಬೇಕು.
    • ಶಿಕ್ಷಕನಲ್ಲಿ ವೃತ್ತಿಪರ ನಡವಳಿಕೆಗೂ ಮತ್ತು ವೈಯಕ್ತಿಕ ನಡವಳಿಕೆಗೂ ವ್ಯತ್ಯಾಸವಿರಬಾರದು, ಪ್ರತ್ಯೇಕಿಸಬಾರದು.
    • ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಅದರ ವಿಕಾಸಕ್ಕೆ ಅವಕಾಶ ಮಾಡಿಕೊಟ್ಟು, ಪ್ರೋತ್ಸಾಹಿಸಬೇಕು.
    • ಪಾಠದ ಜೊತೆಗೆ, ಮುಖ್ಯವಾಗಿ ಮಾನವೀಯ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಆಸಕ್ತಿಯಿರಬೇಕು.

    ಉತ್ತಮ ಶಿಕ್ಷಕ ಬಹು ಆಯಾಮದ ಪಾತ್ರವನ್ನು ವಹಿಸಬೇಕಾಗುತ್ತದೆ. ಉದಾಹರಣೆಗೆ ಕಲ್ಲನ್ನು ಕೆತ್ತಿ ಸುಂದರವಾದ ವಿಗ್ರಹವನ್ನು ಮಾಡುವಂತೆ, ವಿದ್ಯಾರ್ಥಿಗಳ ಬುದ್ದಿಯನ್ನು ತಿದ್ದಿ, ಸುಶಿಕ್ಷಿತ ಪ್ರಜೆಯನ್ನು ಮಾಡುವ ಶಿಲ್ಪಿಯಾಗಬೇಕು. ವಿದ್ಯಾರ್ಥಿಗಳನ್ನು ಹುರಿದುಂಬಿಸುವ ಪ್ರೇರಕನಾಗಬೇಕು. ಬುದ್ಧಿ ಹೇಳುವ ಉತ್ತಮ ಸಲಹೆಗಾರನಾಗಬೇಕು. ಮುಖ್ಯವಾಗಿ ಶೈಕ್ಷಣಿಕ ಪೋಷಕ (Academic parent) ಮತ್ತು ಶೈಕ್ಷಣಿಕ ನಾಯಕನಾಗ ಬೇಕಾಗಿದೆ (Academic leader).

    ಉತ್ತಮ ಶಿಕ್ಷಕರು, ಶಿಕ್ಷಣ ಸಂಸ್ಥೆಯ ಮತ್ತು ವಿದ್ಯಾರ್ಥಿಗಳ ಏಳಿಗೆಗೆ ಕಾರಣರಾಗುತ್ತಾರೆ. ಶಿಕ್ಷಕ ವೃತ್ತಿ ಬಹಳ ಜವಾಬ್ದಾರಿಯುತವಾದ ಮತ್ತು ಪ್ರಯಾಸದ ಕೆಲಸವೆಂದು ಹೇಳಬಹುದು. ಒಂದು ತರಗತಿಯಲ್ಲಿ ವಿಭಿನ್ನವಾದ ಆಸಕ್ತಿ, ಸಾಮರ್ಥ್ಯ, ಬುದ್ಧಿಶಕ್ತಿ, ಚಂಚಲ ಬುದ್ಧಿಯಿರುವ ಜೊತೆಗೆ, ವಿವಿಧ ಸಂಸ್ಕೃತಿ, ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆಯಿರುವ ವಿದ್ಯಾರ್ಥಿಗಳಿರುತ್ತಾರೆ. ಇವರೆಲ್ಲರ ಬುದ್ಧಿಯನ್ನು ತಿದ್ಧಿ ಸುಶಿಕ್ಷಿತ ವ್ಯಕ್ತಿಗಳನ್ನಾಗಿ ಮಾಡುವ ಕೆಲಸ ಮಹಾ ಸಾಧನೆಯ ಕಾರ್ಯ. ಈ ಕೆಲಸ ಸಮರ್ಥ ಶಿಕ್ಷಕರಿಂದಲೇ ಸಾಧ್ಯ.

    ಅಪಾರ ಜ್ಞಾನವನ್ನು ಹೊಂದಿ, ಸಕಲ ಸದ್ಗುಣಗಳನ್ನು ಮತ್ತು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡರೆ ಮಾತ್ರ ಉತ್ತಮ ಶಿಕ್ಷಕರಾಗಲು ಸಾಧ್ಯ.ಶಿಕ್ಷಕರು ಸರಿಯಿಲ್ಲದಿದ್ದರೆ, ಮುಂದಿನ ಯುವ ಪೀಳಿಗೆ ನಾಶವಾಗುತ್ತದೆ. ವಕೀಲನಾಗಬಹುದು, ವೈದ್ಯನಾಗಬಹುದು, ಅಧಿಕಾರಿಯಾಗಬಹುದು ಹಾಗೂ ರಾಜಕಾರಣಿಯೂ ಆಗಬಹುದು. ಎಲ್ಲರನ್ನು ತಯಾರು ಮಾಡುವವರು ಶಿಕ್ಷಕರು. ಆದ್ದರಿಂದ ಶಿಕ್ಷಕ ವೃತ್ತಿಯನ್ನು ಆರಿಸಿಕೊಳ್ಳುವ ಸ್ನೇಹಿತರಲ್ಲಿ ನನ್ನ ಒಂದು ವಿನಂತಿ.

    ಮೊಟ್ಟ ಮೊದಲನೆಯದಾಗಿ, ಯಾವ ಕೆಲಸವೂ ಸಿಗಲಿಲ್ಲ, ಆದ್ದರಿಂದ ಶಿಕ್ಷಕ ವೃತ್ತಿಯನ್ನು ಆರಿಸಿಕೊಳ್ಳುವ ಮನೋಭಾವ ಬೇಡ. ನಿಜವಾಗಿಯೂ ಶಿಕ್ಷಕ ವೃತ್ತಿಯಲ್ಲಿ ಆಸಕ್ತಿಯಿದ್ದರೆ ಮಾತ್ರ ಶಿಕ್ಷಕರಾಗಿ. ಒಂದು ವೇಳೆ ಆಕಸ್ಮಿಕವಾಗಿ ಶಿಕ್ಷಕರಾದರೂ ಸಹ, ನಂತರ ಮೇಲೆ ತಿಳಿಸಿರುವ ಗುಣಗಳನ್ನು ಬೆಳಸಿಕೊಳ್ಳಿ, ಉತ್ತಮ ಶಿಕ್ಷಕರಾಗಿ, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಯಶಸ್ವಿಯಾಗಿರಿ. “Education is the panacea for ills in the society” ಎಂಬ ಹೇಳಿಕೆಯನ್ನು ಮರೆಯ ಬೇಡಿ. ಉತ್ತಮ ಶಿಕ್ಷಕರಾಗುವ ಮೂಲಕ ಆರೋಗ್ಯಕರ, ಸಧೃಢ ಸಮಾಜವನ್ನು, ಸುಶಿಕ್ಷಿತ, ಭವ್ಯ ಭಾರತ ನಿರ್ಮಾಣ ಮಾಡುವ ಕಾರ್ಯದಲ್ಲಿ ಕೈ ಜೋಡಿಸಿ.

    “ಸ್ವದೇಶೇ ಪೂಜ್ಯತೇ ರಾಜಾ, ವಿದ್ವಾನ್ ಸರ್ವತ್ರ ಪೂಜ್ಯತೇ”

    ಚಿತ್ರ: ಕಿರಣ್ ಮಾಡಾಳು

    ಡಾ. ಬಿ. ಎಸ್ . ಶ್ರೀಕಂಠ
    ಡಾ. ಬಿ. ಎಸ್ . ಶ್ರೀಕಂಠ
    ನಾಡಿನ ಹೆಸರಾಂತ ಶಿಕ್ಷಣ ತಜ್ಞರಾದ ಡಾ. ಬಿ.ಎಸ್ .ಶ್ರೀಕಂಠ ಅವರು ಕಳೆದ ನಲುವತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸಧ್ಯ ಬೆಂಗಳೂರಿನ ಸಿಂಧಿ ಕಾಲೇಜಿನ ನಿರ್ದೇಶಕರಾಗಿ ನಿವೃತ್ತರಾಗಿರುವ ಬಿ. ಎಸ್ . ಶ್ರೀಕಂಠ ಅವರು ಈ ಹಿಂದೆ ಸುರಾನಾ, ಆರ್ ಬಿ ಎ ಎನ್ ಎಂ ಎಸ್ ಕಾಲೇಜಿನ ಪ್ರಿನ್ಸಿಪಾಲರು ಆಗಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಆಡಳಿತಗಾರ ಎಂಬ ಹೆಸರು ಪಡೆದಿರುವ ಅವರು ಪ್ರಾಧ್ಯಾಪಕರಾಗಿಯೂ ವಿದ್ಯಾರ್ಥಿ ವಲಯದಲ್ಲಿ ಜನಪ್ರಿಯ. ವಿಜ್ಞಾನಿ ಆಗಿಯೂ ಅವರು ಶೈಕ್ಷಣಿಕ ವಲಯದಲ್ಲಿ ಪರಿಚಿತ. ಸಧ್ಯ ಬೆಂಗಳೂರಿನ ಇಂಡಿಯನ್ ಅಕಾಡೆಮಿ ಪದವಿ ಕಾಲೇಜಿನಲ್ಲಿ ಶೈಕ್ಷಣಿಕ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ .
    spot_img

    More articles

    11 COMMENTS

    1. ಡಾ. ಬಿ.ಎಸ್. ಶ್ರೀಕಂಠ ಅವರ ಲೇಖನ ಉತ್ತಮ ಮಾಹಿತಿ ನೀಡಿದೆ. ಶಿಕ್ಷಕರ ಗುರುತರ ಜವಾಬ್ದಾರಿಯನ್ನು ಎಲ್ಲಾ ಶಿಕ್ಷಕರಿಗೂ ತಿಲುಹಿಸುವ ಲ್ಲಿ ಮಹತ್ತರ ಪಾತ್ರವಹಿಸಿದೆ. ಸರ್ ಗೂ ಇಂತಹ ಉತ್ತ್ಸ್ಮ ಲೇಖನ ಪ್ರಕಟಿಸಿದ ಕನ್ನಡ ಪ್ರೆಸ್ ಗೂ ಧನ್ಯವಾದಗ ಳು.🙏🙏

    2. ಶಿಕ್ಷಕ ವೃತ್ತಿಯ ಧ್ಯೇಯ ಸಮರ್ಪಕವಾಗಿ ಚಿತ್ರಿಸಿದ್ದೀರ ಸರ್. ಇಂದಿನ ಬಹುತೇಕ ಶಿಕ್ಷಕರು ಜೀವನೋಪಾಯಕ್ಕಾಗಿ ಕರ್ತವ್ಯ ಪ್ರಜ್ಞೆ ಎನುವರು. ಶಿಕ್ಷಕ ವೃತಿ ಸಮರ್ಪಣೆ. ನಿಮ್ಮ ಬರಹ ಶಿಕ್ಷಕ ಪವಿತ್ರ ವೃತಿಗೆ ಕೈಪಿಡಿ

    3. Sadhrud bharat nirmanadalli shikshakra mahattara patravannu adbhutvad vivaraneyannu nidiruv tavu innu anek lekhanegala moolak shikshana kshetrakke dhare ereyabekendu bhagavantanalli prarthisuttene.

    4. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ಪಾತ್ರ ಅತ್ಯಮೂಲ್ಯವಾದದ್ದು. ತಂದೆ ತಾಯಿಗಳು ತಮ್ಮ ಮಕ್ಕಳ ಮೇಲೆ ನಂಬಿಕೆ ಕಳೆದು ಕೊಳ್ಳಬಹುದು ಆದರೆ ಶಿಕ್ಷಕ ತಮ್ಮ ವಿದ್ಯಾರ್ಥಿಯನ್ನು ಗುರಿ ಮುಟ್ಟಿಸಲು ಕೊನೆಯವರೆಗೂ ಪ್ರಯತ್ನಿಸುತ್ತಾನೆ. ಶಿಕ್ಷಣ ಮತ್ತು ಶಿಕ್ಷಕರ ಬಗ್ಗೆ ಭಾರತೀಯ ಹಾಗೂ ಪಾಶ್ಚಾತ್ಯ ವಿದ್ವಾಂಸರುಗಳ ಹೇಳಿಕೆಗಳನ್ನು ದಾಖಲಿಸಿರುತ್ತೀರಿ.
      ಉತ್ತಮ ಶಿಕ್ಷಕನಾಗಬೇಕೆಂಬ ಕನಸು ಕಾಣುತ್ತಿರುವ ಶಿಕ್ಷಕರು ತಾವು ಸೂಚಿಸಿರುವ ಅಂಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಶಿಕ್ಷಕ ನಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಎಲ್ಲಾ ಶಿಕ್ಷಕ ವರ್ಗದವರು ಓದಲೇಬೇಕಾದ ಉತ್ತಮವಾದ ಲೇಖನ.
      ಉತ್ತಮವಾದ ಲೇಖನವನ್ನು ಓದಲು ನಮಗೆ ನೀಡಿದ ತಮಗೆ ಧನ್ಯವಾದಗಳು ಸ🙏

    5. ಶಿಕ್ಷಕರು ಉತ್ತಮ ಅಧ್ಯಾಪನ ಯೋಗ್ಯತೆಯನ್ನು ಬೆಳೆಸಿಕೊಂಡು ಸತತ ಅಭ್ಯಾಸದಿಂದ ಪಾಂಡಿತ್ಯವನ್ನು ಪಡೆದು ಯೋಗ್ಯರಿಗೆ ಶಿಕ್ಷಣವನ್ನು ಕೊಡಬೇಕು. ಪಾಂಡಿತ್ಯ ಮತ್ತು ಬೋಧನಾ ಕೌಶಲ ಶಿಕ್ಷಕನ ಸಹಜ ಗುಣವಾಗಿರಬೇಕು. ಮಾನ್ಯ ಪ್ರಾಚಾರ್ಯರು ಹೇಳಿದ ಗುಣಗಳನ್ನು ಶಿಕ್ಷಕರು ಬೆಳೆಸಿಕೊಂಡು ಶಿಕ್ಷಣವನ್ನು ನೀಡಿದರೆ ವಿದ್ಯಾರ್ಥಿಗಳ ಜೀವನ ಕ್ರಮದಲ್ಲಿ ಬದಲಾವಣೆಗಳನ್ನು ಕಾಣಬಹುದು.

    LEAVE A REPLY

    Please enter your comment!
    Please enter your name here

    Latest article

    error: Content is protected !!