ಪೋಷಕರು ಮತ್ತು ಖಾಸಗಿ ಶಾಲಾ ಕಾಲೇಜುಗಳ ಮಧ್ಯೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ಪ್ರಸ್ತುತ ಶೈಕ್ಷಣಿಕ ವರ್ಷದ ಶುಲ್ಕ ಪಾವತಿ ಸಂಬಂಧದಲ್ಲಿ ಸರ್ಕಾರ ಎಲ್ಲರಿಗೂ ಅನುಕೂಲವಾಗುವಂತಹ ನಿಟ್ಟಿನಲ್ಲಿ ಚಿಂತಿಸಿ ಆದೇಶ ಹೊರಡಿಸಿದ್ದು ಅದನ್ನು ಈ ವರ್ಷದ ಮಟ್ಟಿಗೆ ಉಭಯತ್ರರೂ ಪಾಲಿಸುವುದರಿಂದ ನಮ್ಮ ವಿದ್ಯಾರ್ಥಿಗಳ ಹಿತರಕ್ಷಣೆ ಸಾಧ್ಯವಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಬುಧವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಹಿನ್ನೆಲೆಯಲ್ಲಿ ಶಾಲೆಗಳು ಭೌತಿಕವಾಗಿ ಆರಂಭವಾಗದೇ ಇರುವುದರಿಂದ ಆರ್ಥಿಕವಾಗಿ ಜರ್ಝರಿತವಾಗಿದ್ದ ಪೋಷಕರು ಶುಲ್ಕ ಪಾವತಿಸಿರಲಿಲ್ಲವಾದ್ದರಿಂದ ಖಾಸಗಿ ಶಾಲೆಗಳೂ ಸಹ ತೀವ್ರ ತೊಂದರೆಗೀಡಾಗಿದ್ದುದನ್ನು ಗಮನಿಸಿ ಸರ್ಕಾರ ಒಂದು ಸಮನ್ವಯ ಸೂತ್ರ ಪಾಲಿಸಿ ಕಳೆದ ವರ್ಷದ ಬೊಧನಾ ಶುಲ್ಕದ ಶೇ. 30ರಷ್ಟು ಪಾವತಿಸಲು ಮತ್ತು ಸ್ವೀಕರಿಸಲು ಸೂಚಿಸಿ ಆದೇಶ ಹೊರಡಿಸಿತ್ತು ಎಂದರು.
ಆದರೆ ಶೇ. 30 ಬೋಧನಾ ಶುಲ್ಕ ಪಾವತಿ ಆದೇಶವನ್ನು ಬಹುತೇಕ ಖಾಸಗಿ ಶಾಲಾ ಸಂಘಟನೆಗಳು ಸ್ವಾಗತಿಸಿದರೆ, ಕೆಲ ಖಾಸಗಿ ಶಾಲಾ ಸಂಘಟನೆಗಳು ಅಸಮಧಾನ ವ್ಯಕ್ತಪಡಿಸಿವೆ. ಹಿಂದೆಂದೂ ಕಾಣದಂತಹ ಈ ವರ್ಷದ ವಿಚಿತ್ರ ಸನ್ನಿವೇಶದಲ್ಲಿ ಎಲ್ಲ ಶೈಕ್ಷಣಿಕ ಪಾಲುದಾರರೊಂದಿಗೆ ಹತ್ತಾರು ಬಾರಿ ಚರ್ಚಿಸಿ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅವರ ಒಪ್ಪಿಗೆ ಪಡೆದು ಈ ವರ್ಷದ ಮಟ್ಟಿಗೆ ಶೇ. 30 ಶುಲ್ಕ ಪಾವತಿ ಕುರಿತು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.
ಕೊರೋನಾ ಹಿನ್ನೆಲೆಯಲ್ಲಿ ಶುಲ್ಕ ಪಾವತಿಸಲು ಪೋಷಕರು ಹಿಂಜರಿದಾಗ ಖಾಸಗಿ ಶಾಲೆಗಳು ತೊಂದರೆ ಅನುಭವಿಸಿದವು. ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಈ ಮೊದಲು ಒಂದು ಕಂತಿನ ಶುಲ್ಕ ಪಾವತಿಸಲು ಪೋಷಕರಿಗೆ ಸೂಚಿಸಿ ಸುತ್ತೋಲೆ ಹೊರಡಿಸಿತ್ತು. ಸÀಂಗ್ರಹವಾದ ಶುಲ್ಕವನ್ನು ಶಿಕ್ಷಕರ ಮತ್ತು ಸಿಬ್ಬಂದಿಯ ವೇತನಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಸದರಿ ಸುತ್ತೋಲೆಯಲ್ಲಿ ಶಾಲೆಗಳಿಗೆ ಸೂಚಿಸಲಾಗಿತ್ತು. ಜೊತೆಗೆ ಈ ಬಾರಿ ಇದು ಸಂಕಷ್ಟದ ಸಮಯವಾದ್ದರಿಂದ ಈ ವರ್ಷ ಶುಲ್ಕ ಹೆಚ್ಚಳ ಮಾಡದಿರುವಂತೆ ಮತ್ತೊಂದು ಸುತ್ತೋಲೆ ಸಹ ಹೊರಡಿಸಿತ್ತು. ಈ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಭೌತಿಕವಾಗಿ ಆರಂಭವಾಗದೇ ಇರುವುದರಿಂದ ಎಷ್ಟು ಶುಲ್ಕ ಪಾವತಿಸಬೇಕೆಂದು ಗೊತ್ತಾಗದೇ ಪೋಷಕರು ಶುಲ್ಕ ಪಾವತಿಗೆ ಮುಂದಾಗಲಿಲ್ಲ. ಹಲವಾರು ತಿಂಗಳು ಶುಲ್ಕ ಪಾವತಿಯಾಗದೇ ಶಾಲೆಗಳು ಆರ್ಥಿಕವಾಗಿ ತೊಂದರೆಗೊಳಗಾಗಿ ಶಿಕ್ಷಕರು ಸಿಬ್ಬಂದಿ ವೇತನಕ್ಕೆ ಪರದಾಡುವಂತಾಯಿತು. ಇದೆಲ್ಲವನ್ನೂ ಮನಗಂಡು ಎಲ್ಲರ ಹಿತದೃಷ್ಟಿಯಿಂದ ಸರ್ಕಾರ ಎಲ್ಲರೊಂದಿಗೆ ಚಿರ್ಚಿಸಿಯೇ ಒಂದು ಸಮನ್ವಯ ಸೂತ್ರದಂತೆ ಶೇ. 30 ಶುಲ್ಕ ಪಾವತಿಸಲು ಸೂಚಿಸಿತು ಎಂದು ಸಚಿವರು ಹೇಳಿದರು.
ಸರ್ಕಾರ ಶೇ. 30ರಷ್ಟು ಶುಲ್ಕ ಪಾವತಿಸುವಂತೆ ಆದೇಶ ಹೊರಡಿಸಿದಾಗ ಪೋಷಕರು ತಮ್ಮ ಮಕ್ಕಳ ಶಾಲೆಗಳಿಗೆ ಶುಲ್ಕ ಪಾವತಿಸಲು ಮುಂದಾಗಿದ್ದಾರೆ. ಇದರಿಂದ ಅನೇಕ ಶಾಲೆಗಳು ಸದರಿ ಶುಲ್ಕ ಪಾವತಿಗೆ ಪೋಷಕರಿಗೆ ಅನುವು ಮಾಡಿಕೊಟ್ಟಿವೆ. ಇದರಿಂದ ಆ ಶಾಲೆಗಳ ಸಿಬ್ಬಂದಿಯ ವೇತನಕ್ಕೆ ಅನುಕೂಲವಾಗಿರುವುದಂತೂ ನಿಜ. ಸರ್ಕಾರ ಈ ಆದೇಶ ಹೊರಡಿಸಿದ್ದರ ಪರಿಣಾಮ ಪ್ರಸ್ತುತ ಶಾಲೆಗಳಲ್ಲಿ ಶುಲ್ಕ ಸಂಗ್ರಹವಾಗುತ್ತಿದೆ. ಇಲ್ಲದೇ ಹೋಗಿದ್ದರೆ ಇದು ಇನ್ನೂ ಬಿಗಡಾಯಿಸುತಿತ್ತು. ಸರ್ಕಾರ ಶುಲ್ಕ ಪಾವತಿಸಬೇಕೆಂದು ಆದೇಶ ಹೊರಡಿಸಿದ್ದರಿಂದಲೇ ಪೋಷಕರು ಶುಲ್ಕ ಪಾವತಿಸಲು ಮುಂದಾಗಿದ್ದಾರೆ ಎಂಬುದನ್ನು ನಮ್ಮ ಶಾಲೆಗಳು ಅರ್ಥೈಸಿಕೊಳ್ಳಬೇಕಿದೆ ಎಂದು ಸಚಿವರು ಹೇಳಿದರು.
ಈ ಸಮಸ್ಯೆಯನ್ನು ಯಾವ ರೀತಿ ಪರಿಹರಿಸಬೇಕೆಂದು ಯಾರಾದರೂ ನನಗೆ ಸಲಹೆ ನೀಡಿದರೆ ನಾನಂತೂ ಮುಕ್ತವಾಗಿ ಸ್ವೀಕರಿಸುತೇನೆ. ಇದನ್ನು ನಾವು ಮಾತುಕತೆಯಿಂದಲೇ ಬಗೆಹರಿಸಿಕೊಳ್ಳಬೇಕು. ಇಂತಹ ವಿಚಿತ್ರ ಸನ್ನಿವೇಶದಲ್ಲಿ ನಾವು ನೀವೆಲ್ಲರೂ ಪೋಷಕರನ್ನೂ ಒಳಗೊಂಡು ಕುಳಿತು ಚರ್ಚೆ ಮಾಡೋಣ. ಈ ವಿಚಿತ್ರ ಸನ್ನಿವೇಶದಲ್ಲಿ ಈ ವರ್ಷದ ಮಟ್ಟಿಗೆ ಎಲ್ಲರೂ ಸಹಕಾರ ನೀಡುವ ಮೂಲಕ ನಮ್ಮ ಮಕ್ಕಳ ಭವಿಷ್ಯವನ್ನು ಕಾಯಲು ನಾವೆಲ್ಲ ಮುಂದಾಗಬೇಕು ಎಂದು ಸಚಿವರು ಪೋಷಕರು ಮತ್ತು ಶಾಲಾಡಳಿತ ಮಂಡಳಿಗಳಿಗೆ ಮನವಿ ಮಾಡಿದ್ದಾರೆ.