26.2 C
Karnataka
Thursday, November 21, 2024

    ಚಿನ್ನಮ್ಮನ ಪುನರಾಗಮನ ಕಳಗಂ ನಲ್ಲಿ ಕೋಲಾಹಲ

    Must read

    ಚುನಾವಣೆ ಪೂರ್ವ ಸಮೀಕ್ಷೆ


    ಜನತಂತ್ರದ ಪ್ರಮುಖ ಪ್ರಕ್ರಿಯೆ ಚುನಾವಣೆ. ದೇಶದ ಸುಮಾರು 19 ರಾಜ್ಯಗಳಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳನ್ನು ಆಯಾ ರಾಜ್ಯಗಳಿಗೆ ಹೋಗಿ ಸಮೀಕ್ಷಿಸುವುದು ಅತಿ ಪ್ರಯಾಸಕರ. ಬೆಂಗಳೂರಿನ ವರದಿಗಾರರ ತಂಡವೊಂದು ಕಳೆದ 25 ವರುಷಗಳಿಂದ ಚುನಾವಣೆ ಜನಾಭಿಪ್ರಾಯ ಸಮೀಕ್ಷೆ ನಡೆಸುತ್ತಾ ಬಂದಿದೆ. ಹಿರಿಯ ಪತ್ರಕರ್ತ ಎಸ್.ಕೆ. ಶೇಷಚಂದ್ರಿಕ ಈ ತಂಡದ ನೇತೃತ್ವ ವಹಿಸುತ್ತಾ ಬಂದಿದ್ದಾರೆ. ಇನ್ನೇನು ಎರಡು ತಿಂಗಳಲ್ಲಿ ನಡೆಯುವ ತಮಿಳುನಾಡು ರಾಜ್ಯ ವಿಧಾನಸಭೆಯ ಚುನಾವಣೆಯ ನಾಡಿ ಮಿಡಿತವನ್ನು ಅರಿಯುವ ಯತ್ನವನ್ನು ಈ ತಂಡ ಮಾಡಿದೆ.ಚುನಾವಣಾ ಸಮೀಕ್ಷೆಯ ಎರಡನೆ ಕಂತು ಇಲ್ಲಿದೆ.


    ಎಸ್.ಕೆ. ಶೇಷಚಂದ್ರಿಕ

    ತಮಿಳುನಾಡಿನ ಮತದಾರ ಮತ್ತು ಚುನಾವಣೆಗಳಲ್ಲಿ ಆತನ ಪಾಲ್ಗೊಳ್ಳುವಿಕೆ ಕುರಿತು ವರದಿ ಮಾಡುವ ಮುನ್ನ ತಮಿಳು ಜನರ ಅಮಿತೋತ್ಸಾಹ ಸಂಕಲ್ಪಗಳ ಬಗೆಗೆ ಹೇಳಲೇಬೇಕು.

    ಕನಸಿನ ಶೋ ಪ್ರಪಂಚದಿಂದ ಭೂಮಿಗೆ ನೇರವಾಗಿ ಇಳಿದುಬಂದವರು ತಮಿಳು ಜನ. ಸಿನಿಮಾದಲ್ಲಿ ನಟ ನಟಿ ಆಡಿತೋರಿಸುವುದನ್ನೆಲ್ಲಾ ಬಹುತೇಕ ಜನಸಾಮಾನ್ಯರು,ನಿಜಜೀವನದಲ್ಲಿ ಮಾಡಿ ತೋರಿಸುತ್ತಾರೆ ಎಂದು ಖಚಿತವಾಗಿ ನಂಬಿದವರು. ಕಳೆದ ನಾಲ್ಕು ದಶಕಗಳ ಸಿನಿರಂಗದ ನಟ ನಟಿಯರು ಮತ್ತು ರಾಜಕೀಯ ಪಕ್ಷಗಳ ಅವಿನಾಭಾವ ನೆಂಟಸ್ಥಿಕೆ ಇದಕ್ಕೊಂದು ನಿದರ್ಶನ.

    ಎರಡನೆಯ ಬಹುಮುಖ್ಯ ಅಂಶವೆಂದರೆ ತಮಿಳುನಾಡು ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ಪ್ರಣಾಳಿಕೆ, ತತ್ವ ಸಿದ್ಧಾಂತ ಮತ್ತು ಭರವಸೆಗಳಿಗಿಂತ ಇಲ್ಲಿನ ಮತದಾರರ ಗಮನ ಮುಂದಿನ ಮುಖ್ಯಮಂತ್ರಿ ಆಯ್ಕೆ. ಅಮೇರಿಕಾ ಜನತಂತ್ರವನ್ನು ಮೀರಿಸುವ ಚಾಲಾಕಿ ತಮಿಳು ಮತದಾರ.ಬಣಹಚ್ಚಿ ಮೇಕಪ್ ನಲ್ಲಿದ್ದ ನಟ ನಟಿಯರನ್ನು ನೇರವಾಗಿ ಮುಖ್ಯಮಂತ್ರಿ ಪಟ್ಟಕ್ಕೆ ಕೂರಿಸುವ ಹೆಗ್ಗಳಿಕೆ ಇಲ್ಲಿನ ಮತದಾರ ಸಂಸ್ಕೃತಿ.

    ರಾಜಮಾತೆಯಾದ ಶಶಿಕಲಾ

    ಮತದಾರನ ಈ ಮನೋಭೂಮಿಕೆಯ ಹಿನ್ನಲೆಯಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಯ ಪ್ರಕ್ರಿಯೆಗಳು ಈಗಾಗಲೇ ತಾರಕಕ್ಕೇರಿದಂತಾಗಿದೆ ತಮಿಳುನಾಡಿನ ಚಿತ್ರ. ಪ್ರಧಾನ ಕಳಗಂ ಪಕ್ಷ ಗಳಾದ ಪ್ರತಿಪಕ್ಷ ದ್ರಾವಿಡ ಮುನ್ನೇತ್ರ ಕಳಗಂ ಮತ್ತು ಆಡಳಿತಾರೂಢ ಎಐಎಡಿಎಂಕೆ ಪಕ್ಷಗಳ ಕಾರ್ಯಕರ್ತರು ಭಾಜಾ ಭಜಂತ್ರಿಯೊಂದಿಗೆ ಚುನಾವಣಾ ತಾಲೀಮು ನಡೆಸಿದ್ದಾರೆ. ಚೆನ್ನೈ, ಮಧುರೈ, ಸೇಲಂ, ತಿರುವಳ್ಳೂರು, ತೂತುಕುಡಿ, ದಿಂಡಿಗಲ್ ಇವೇ ಮೊದಲಾದ ಪ್ರಮುಖ ರಾಜಕಾರಣ ಕೇಂದ್ರಗಳಲ್ಲಿ ಪಕ್ಷದ ಕಚೇರಿಗಳು ಹುಟ್ಟಿಕೊಂಡಿವೆ.

    ತಮಿಳು ರಾಜಕಾರಣಿಗಳು ಬಹು ಚಾಣಾಕ್ಷ ಮಂದಿ. ಚುನಾವಣಾ ಆಯೋಗದ ನೀತಿ ಸಂಹಿತೆಗಳು ಜಾರಿಗೆ ಬರುವ ಮೊದಲೇ ತಮಿಳುನಾಡಿನ ನಗರ ಪಟ್ಟಣಗಳಲ್ಲಿ ಬೃಹತ್ ಬೋರ್ಡ್ ಗಳು, ಭಿತ್ತಿಪತ್ರಗಳು ಕಣ್ಣು ಕುಕ್ಕಲು ಆರಂಭಿಸಿವೆ.

    ಉದಾಹರಣೆಗೆ ಎಂ ಕೆ ಸ್ಟಾಲಿನ್ನರ ಡಿಎಂಕೆ ಪಕ್ಷ ಚಾಲೂಕಿನಿಂದ ಪ್ರಮುಖ ರಸ್ತೆಗಳಲ್ಲಿನ ಅಂಗಡಿ ಶೋ ರೂಮ್ ಗಳ ಮನ ಒಲಿಸಿ ಅವರ ಬೋರ್ಡಿನ ಮೇಲೆ ತಾತ್ಕಾಲಿಕವಾಗಿ ಡಿಎಂಕೆ ಪ್ರಚಾರ ನಡೆಸಿದೆ.

    ಏತನ್ಮಧ್ಯೆ ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದು, ಇದೀಗ ಬಿಡುಗಡೆಯಾಗಿರುವ ದಿ. ಜಯಲಲಿತಾರ ಬಲಗೈನಂತಿದ್ದ ಶಶಿಕಲಾ ಚೆನ್ನೈ ಸೇರಿದ್ದಾರೆ. ರಾತ್ರೋರಾತ್ರಿ ರಾಜಮಾತೆಯ ಪಟ್ಟಕ್ಕೆ ಏರಿರುವ ಚಿನ್ನಮ್ಮನ ಚೆನ್ನೈ ಪ್ರಯಾಣ ತಮಿಳುನಾಡಿನಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿದೆ.

    ದಿನಕರನಿಗೆ ಭಾಗ್ಯದ ಬಾಗಿಲು

    ಸಣ್ಣಪುಟ್ಟ ಕಾರಣಗಳಿಗೆಲ್ಲ ಕೈಕೈ ಮಿಲಾಯಿಸಿ ಉದ್ರಿಕ್ತರಾಗುವ ಕಳಗಂ ಪಕ್ಷಗಳೆರಡರ ಕಾರ್ಯಕರ್ತರಿಗೂ ಶಶಿಕಲಾರ ಪುನರಾಗಮನ ಬಹು ಮಹತ್ವದ್ದಾಗಿದೆ. ಮುಖ್ಯಮಂತ್ರಿ ಇರಪ್ಪಾಡಿ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಪನ್ನೀರಸೆಲ್ವಂ ತಮ್ಮ ಕುರ್ಚಿಗೆ ಸಂಚಕಾರ ಬಂತಂತೆ ಚಡಪಡಿಸುತ್ತಿದ್ದಾರೆ. ಗಾಳಿ ಬೀಸಿದತ್ತ ಹೊರಳುವ ಎಐಎಡಿಎಂಕೆ ಶಾಸಕರಿಗೆ ಶಶಿಕಲಾ ಆಗಮನ ನೂರೆಂಟು ಆಶೋತ್ತರಗಳ ಕನಸನ್ನು ತಂದಿದೆ. ಒಳಜಗಳ ತಾರಕಕ್ಕೇರಿದೆ.

    ಶಶಿಕಲಾಗೆ ಮಾನಸ ಪುತ್ರನೊಬ್ಬನಿದ್ದಾನೆ. ಮನೆ ಸಂಬಂಧದಲ್ಲಿ ಸೋದರಳಿಯ. ಈತನ ಹೆಸರು ಟಿ ಟಿ ಎ ದಿನಕರನ್. ಶಶಿಕಲಾ ಅವರ ಬಿಡುಗಡೆ ದಿನಕರನಿಗೆ ಭಾಗ್ಯದ ಬಾಗಿಲು ತೆರೆದಂತಾಗಿದೆ.ಈ ವಿವಾದದಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಎಐಎಡಿಎಂಕೆ ಪಕ್ಷದ ಬಾವುಟದ ಬಳಕೆ ಕುರಿತು ಜಟಾಪಟಿ ನಡೆದಿದೆ. ಈಗಾಗಲೇ ಪರಪ್ಪನ ಅಗ್ರಹಾರದಿಂದ ರೆಸಾರ್ಟ್ ಗೆ ಶಶಿಕಲಾ ಕಾರಿನಲ್ಲಿ ಹೋದಾಗ ದಿನಕರ್ ಪಕ್ಷದ ಬಾವುಟ ಹಾರಿಸಿದ್ದ.

    ಬಾವುಟದೊಂದಿಗೆ ಮೆರವಣಿಗೆ ನಡೆಸಲೇ ಬೇಕೆಂಬ ಹಟ
    ಸಾಧಿಸುತ್ತಿರುವ ದಿನಕರನ್ “ಸೇನಾ ದಂಡ ನಾಯಕನೇ ಎದುರು ನಿಂತರೂ ” ಮೆರವಣಿಗೆ ನಿಲ್ಲುವುದಿಲ್ಲ ಎಂದು ಸಿನಿಮೀಯ ರೀತಿಯಲ್ಲಿ ಸವಾಲೆಸೆದಿದ್ದ. ಆತ ಹಾಕಿದ್ದ ಮತ್ತೊಂದು ಬೆದರಿಕೆಯೆಂದರೆ “ದೇಹದಲ್ಲಿ ಬಾಂಬ್ ಇಟ್ಟು ಕೊಂಡಿರುವ ಆತ್ಮಾರ್ಪಣೆಯ ಕಾರ್ಯಕರ್ತರು ನಮ್ಮೊಂದಿಗಿದ್ದಾರೆ”. ಆತ ಅಂದು ಕೊಂಡಂತೆ ಚಿನ್ನಮ್ಮನ ತಮಿಳುನಾಡು ಪ್ರವೇಶ ಭರ್ಜರಿಯಾಗಿದೆ. ಬೆಂಗಳೂರಿನಿಂದ ಚೆನ್ನೈ ತಲುಪುಲು ಶಶಿಕಲಾ ತೆಗದುಕೊಂಡ ಸಮಯ 23 ಗಂಟೆ. ಹಾದಿ ಮಧ್ಯೆ ಬರುವ ಪ್ರತಿ ಊರಲ್ಲೂ ಭರ್ಜರಿ ಸ್ವಾಗತ.64 ಕಡೆ ಅದ್ದೂರಿ ಸಮಾರಂಭ. ಎಲ್ಲೆಡೆಯೂ ಚಿನ್ನಮ್ಮನದು ಜಯಲಲಿತಾ ಸ್ಟೈಲೇ.

    ಪೆರಂಬೂರಿನಲ್ಲಿ ಹಿಂದೆ ರಾಜೀವ್ ಗಾಂಧಿಯವರ ಹತ್ಯೆ ಯನ್ನು ಕಂಡಿದ್ದ ತಮಿಳುನಾಡು ಆಡಳಿತಕ್ಕೆ ಟಿ ಟಿ ಎ ದಿನಕರನ್ ಭಾರೀ ತಲೆನೋವಾಗಿದ್ದಾನೆ.

    ಇಬ್ಬರ ಜಗಳ ಮೂರನೆಯವನಿಗೆ ಲಾಭ

    ಚುನಾವಣೆಯ ವೇಳಾಪಟ್ಟಿಯ ಪ್ರಕಟಣೆಗೆ ಕ್ಷಣಗಣನೆ ಆರಂಭವಾಗಿರುವ ಪರಿಸ್ಥಿತಿಯಲ್ಲಿ ಎಐಎಡಿಎಂಕೆ ಮತ್ತು ಬಂಡಾಯ ಪಕ್ಷವಾದ ‘ಅಮ್ಮ ಮುನ್ನೇತ್ರ ಕಳಗಮ್’ ನಡುವೆ ತೀವ್ರ ರೀತಿಯ ವಾಗ್ವುದ್ಧ ನಡೆದಿರುವುದು ತಮಿಳುನಾಡು ರಾಜಕಾರಣಕ್ಕೆ ಹೊಸ ತಿರುವು ಸಿಕ್ಕಂತಾಗಿದೆ. ಪಕ್ಷದ ಜನನಿ, ಅಧಿನಾಯಕಿ,ಅನಭಿಷಕ್ತೆ ದಿ. ಜಯಲಲಿತಾಳ ಹೆಸರಿನಲ್ಲಿ ಚುನಾವಣೆಯಲ್ಲಿ ಆಯ್ಕೆಗೊಂಡು ಅಧಿಕಾರದಲ್ಲಿರುವ ಅಖಿಲ ಭಾರತ ಅಣ್ಣಾ ಡಿಎಂಕೆ (ಎಐಎಡಿಎಂಕೆ) ಪಕ್ಷದ ಅಸ್ತಿತ್ವಕ್ಕೆ ಪೆಟ್ಟು ಬಿದ್ದಂತಾಗಿದೆ. ಜೈಲಿನಿಂದ ಹೊರಬಂದ ಶಶಿಕಲಾ ಗಾಯಗೊಂಡ ಹುಲಿಯಂತಾಗಿದ್ದಾರೆ. ಪಕ್ಷದ ಭವಿಷ್ಯಕ್ಕಿಂತ ತನ್ನ ಇರುವಿಕೆಗೆ ಸವಾಲಾದ ಮರ್ಯಾದೆಯ ಪ್ರಶ್ನೆ ಇದರಲ್ಲಿ ಅಡಗಿದೆ.

    ಇದೇ ಸ್ಥಿತಿ ಮುಂದುವರಿದರೆ ಎಂಜಿಆರ್, ಜಯಲಲಿತಾ ಕಟ್ಟಿ ಬೆಳೆಸಿದ ಪಕ್ಷ ಉಳಿಯುವುದು ಕಷ್ಟವೆನಿಸುತ್ತದೆ.

    ನಿಮ್ಮ ಮನೆ ಅಂಗಳದಲ್ಲಿ ಸ್ಟಾಲಿನ್

    ಚುನಾವಣಾ ವೇಳಾಪಟ್ಟಿ ಪ್ರಕಟಣೆಯನ್ನು ಕಾಯದೆ ಮತದಾರರನ್ನು ಒಲಿಸಲು ಬೃಹತ್ ಪ್ರಚಾರಕಾರ್ಯಗಳನ್ನು ಹಮ್ಮಿಕೊಳ್ಳುವುದರಲ್ಲಿ ಕಳಗಂ ದ್ರಾವಿಡ ಪಕ್ಷಗಳು ಎತ್ತಿದ ಕೈ.ಉದಾಹರಣೆಗೆ ಪ್ರತಿಪಕ್ಷ ಡಿಎಂಕೆ ಮತ್ತು ಪಕ್ಷದ ನಾಯಕ ಎಂ ಕೆ ಸ್ಟಾಲಿನ್.ಆಡಳಿತಾರೂಢ ಎಐಎಡಿಎಂಕೆ ಪಕ್ಷದ ಆಂತರಿಕ ಕಚ್ಚಾಟ ವೈಮನಸ್ಸುಗಳಿಗಿಂತ ಮುಂಚೆಯೇ, ಈ ವರ್ಷದ ಜನವರಿ ಒಂದರಿಂದ ತಮ್ಮ ಚುನಾವಣಾ ಕಾರ್ಯ ಆರಂಭಿಸಿದ ನಾಯಕ ಸ್ಟಾಲಿನ್.ಈಗಂತೂ ಮುಖ್ಯಮಂತ್ರಿ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಪನ್ನೀರ್ ಸೆಲ್ವಂರವರ ಅಸಹಾಯಕ ಪರಿಸ್ಥಿತಿ ಡಿಎಂಕೆ ಪಕ್ಷಕ್ಕೆ ಅನಿರೀಕ್ಷಿತ ಬೋನಸ್ ಸಿಕ್ಕಂತಾಗಿದೆ.2016ರ ಚುನಾವಣೆಯಲ್ಲಿ ಕೇವಲ 97 ಸ್ಥಾನಗಳಿಸಿ ಅಧಿಕಾರಕ್ಕೆ ಬರುವಲ್ಲಿ ವಿಫಲವಾದ ಸ್ಟಾಲಿನ್ ಈ ಬಾರಿ ಶತಾಯ ಗತಾಯ ಪಕ್ಷದ ಯಶಸ್ಸಿಗೆ ಕಂಕಣ ತೊಟ್ಟಿದ್ದಾರೆ.ಪಕ್ಷದ ಕಾರ್ಯಕರ್ತರಿಗೆ ‘ತಳಪತಿ’ ಎಂದೇ ಪರಿಚಿತರಾದ ಅರುವತ್ತೇಳು ವರುಷದ ಎಂ ಕೆ ಸ್ಟಾಲಿನ್ ದಿ. ಕರುಣಾನಿಧಿಯವರ ಪುತ್ರ. ನಾವು ಕಂಡಂತೆ ಸಮಕಾಲೀನ ರಾಜಕೀಯ ನಾಯಕರುಗಳ ಪೈಕಿ ತಮಿಳುನಾಡಿನಲ್ಲಿ ಸ್ಟಾಲಿನ್ ಅಮೋಘ ವಾಗ್ಮಿ, ಗೋಧಿ ಬಣ್ಣ,ಸಾಧಾರಣ ಮೈಕಟ್ಟು , ಅಗಲ ಹಣೆ, ನೀಟಾಗಿ ಬಾಚಿದ ತಲೆಕೂದಲು, ಯುದ್ಧಕ್ಕೆ ಮುನ್ನುಗ್ಗುವ ಭಂಗಿ ಇವು ಈತನ ಆಕರ್ಷಣೆ.ತಮಿಳು ಸಾಹಿತ್ಯ ಮತ್ತು ಇತಿಹಾಸವನ್ನು ಆಳವಾಗಿ ಅಭ್ಯಾಸ ಮಾಡಿರುವ ಸ್ಟಾಲಿನ್ ಅವರ ಭಾಷಣ ಕೇಳಲು ಬಲು ಚೆಂದ, ಆಕರ್ಷಕ. ತಮಿಳು ಭಾಷಾ ಜಗತ್ತಿನ ದಾರ್ಶನಿಕರು, ವಿಚಾರವಾದಿಗಳು, ಕವಿಗಳು ವಾಗ್ಗೇಯಕಾರರು, ಜನಪದ ಸಾಹಿತ್ಯ ಪ್ರಾಕಾರಗಳು ಸ್ಟಾಲಿನ್ ನಾಲಿಗೆಯ ಮೇಲೆ ಕುಣಿದಾಡುತ್ತವೆ. ಎಷ್ಟೇ ಹೊತ್ತು ಮಾತನಾಡಿದರೂ ಇನ್ನೂ ಕೇಳಬೇಕೆನಿಸುವ ಭಾಷಣ ಶೈಲಿ ಈತನದು.ಯಾವುದಾದರೊಂದು ಆಕರ್ಷಕ ತಲೆಬರಹದ ಘೋಷಣೆಯೊಂದಿಗೆ ಚುನಾವಣಾ ಭಾಷಣ ಮಾಲಿಕೆ ಆರಂಭಿಸುವುದು ಸ್ಟಾಲಿನ್ನರ ಪದ್ದತಿ. ಕಳೆದ ಬಾರಿ ಇವರಿಟ್ಟ ಘೋಷಣೆ ನಮ್ಮಕ್ಕುಂ ನಾಮೆ ( ತಮಿಳರಾದ ನಾವು ಎಲ್ಲಕ್ಕೂ ಮುಂದೆ). ಟೆಂಪೋ ಟ್ರಾವೆಲರ್ ಅಥವ ಮಿನಿ ಬಸ್ಸಿನಲ್ಲಿ ಸಂಚರಿಸುತ್ತಾ ಮೋಹಕವಾಗಿ ಮತದಾರನಿಗೆ ಮಾತಿನಿಂದ ಮುತ್ತಿಕ್ಕುವುದು ಸ್ಟಾಲಿನ್ನು ರ ಭಾಷಣ ಶೈಲಿ.ಈ ಬಾರಿ ಸ್ಟಾಲಿನ್ ರ ಶೋ ಹೆಸರು ” ಉಂಗಳ್ ತೌಗತ್ತಿಯೊಳ್ ಸ್ಟಾಲಿನ್ ” ಕನ್ನಡದಲ್ಲಿ ಭಾಷಾಂತರಿಸಿ ಹೇಳಬಹುದಾದರೆ “ನಿಮ್ಮ ಮನೆಯಂಗಳದಲ್ಲಿ ಸ್ಟಾಲಿನ್ “.


    ಎಸ್ .ಕೆ. ಶೇಷಚಂದ್ರಿಕ ನಾಡಿನ ಹಿರಿಯ ಪತ್ರಕರ್ತರು.  ಭಾರತ ಸರಕಾರದ ಕ್ಷೇತ್ರ ಪ್ರಚಾರಾಧಿಕಾರಿಯಾಗಿ, ದೂರದರ್ಶನ, ಆಕಾಶವಾಣಿಯಲ್ಲಿ ಸುದ್ದಿ ಸಂಪಾದಕ, ವಿಶೇಷ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಪತ್ರಿಕಾ ಕಾರ್ಯದರ್ಶಿಯೂ ಆಗಿದ್ದರು.ದಿ ಟ್ರಿಬ್ಯೂನ್ ಪತ್ರಿಕೆಯ ವಿಶೇಷ ವರದಿಗಾರರು ಆಗಿ ಸೇವೆ ಸಲ್ಲಿಸಿದ ಅವರು ಈಗ ಬೆಂಗಳೂರು ನ್ಯೂಸ್ ಬ್ಯೂರೋದ ವಿಶೇಷ ವರದಿಗಾರರು ಹಾಗೂ ಗಾಂಧಿಯನ್ ಥಾಟ್ಸ್ ನ ವಿಸಿಟಿಂಗ್ ಪ್ರೊಫೆಸರ್ ಕೂಡ ಹೌದು.


    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!