19.5 C
Karnataka
Friday, November 22, 2024

    ಒಂದು ಪುಸ್ತಕ ನಿಮ್ಮ ಮಗುವಿನ ಬದುಕನ್ನೇ ಬದಲಿಸಬಹುದು

    Must read

    ನನ್ನ ಎರಡು ವರ್ಷದ ಪುಟ್ಟ ಮಗ ಕೈಯಲ್ಲೊಂದು ಪುಸ್ತಕ ಹಿಡಿದು ಎಲ್ಲೋ ಪರೀಕ್ಷೆ ಹತ್ತಿರ ಬರುತ್ತಿರುವ ಮಕ್ಕಳು ಓದುತ್ತಿರುವಂತೆ ನಟಿಸುವುದನ್ನು ನೋಡುವುದೇ ಒಂದು ಖುಷಿ.  ಸಮಯ ಸಿಕ್ಕಾಗೆಲ್ಲ ಪುಸ್ತಕ ತಿರುವಿ ಹಾಕುವ ಇಲ್ಲವೇ ತನಗೆ ಬರುವ ಪದ್ಯಗಳನ್ನು ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಮಾಡಿ , ಹಾಡಿ ತೋರಿಸುವ ಪರಿ ಮನಸ್ಸಿಗೆ ಮುದ ಕೊಡುತ್ತದೆ.ಇಂದಿನ ಮಕ್ಕಳು ದಿನವಿಡೀ ಗ್ಯಾಜೆಟ್ ಕೊಟ್ಟರೂ ಹಿಡಿದು ಕುಳಿತುಬಿಡುವುದನ್ನು ನೋಡಿದರೆ ಎಂತಹ  ಪೋಷಕರಿಗೂ ಖೇದ ಎನಿಸದಿರದು.

    ನಮ್ಮ ಮಕ್ಕಳೂ ಕಥೆ ಓದಬೇಕು , ಸಾಹಿತ್ಯ  ತಿಳಿಯಬೇಕು ನಮ್ಮಂತೆಯೇ ಗಿಡಮರ ಮಣ್ಣುಗಳ  ಮಧ್ಯೆ ಬೆಳೆಯಬೇಕು ಎಂಬುದು ಎಲ್ಲರ ಆಕಾಂಕ್ಷೆ.  ಮಲೆನಾಡಿನ ಹಳ್ಳಿಯ ಹಸಿರುಗಾಡಿನ ಮಧ್ಯೆ ಹುಟ್ಟಿ ಬೆಳೆದ ನನಗೆ ನನ್ನ ಮಗ ಲಂಡನ್ ನ ಸಿಟಿಯಲ್ಲಿ ಬೆಳೆದರೆ ಏನೋ ಕಳೆದುಕೊಳ್ಳುವನೇನೋ ಎಂಬ ಆತಂಕ ಸದಾ  ಕಾಡುತ್ತಿತ್ತು.  ಆದರೆ ಹಾಗಾಗಲಿಲ್ಲ. ಅದಕ್ಕೆ ಕಾರಣವೆಂದರೆ ಇಲ್ಲಿನ ಚಿಲ್ಡ್ರನ್ ಸೆಂಟರ್ ಗಳು .

    ಇಲ್ಲಿನ ಪೋಷಕರಿಗೆ ಹಿರಿಯರ ನೆರವಿರುವುದಿಲ್ಲ ನಿಜ  , ಏನಾದರೂ ಆದರೆ ಮನೆಮದ್ದು ಮಾಡಲು, ಮಕ್ಕಳನ್ನು ಸಂತೈಸಲು  ಕೂಡ ಗೊತ್ತಿರದ ಯುವ ಪೋಷಕರ ಆತಂಕವನ್ನು ಕಡಿಮೆ ಮಾಡಲೆಂದೇ ಇಲ್ಲಿನ ಚಿಲ್ಡ್ರನ್ ಸೆಂಟರ್ ಗಳು ವಿಶೇಷ ಕಾಳಜಿ ತೆಗೆದುಕೊಂಡು ,  ವಿವಿಧ ರೀತಿಯ ತರಗತಿಗಳನ್ನು ಪ್ರತಿದಿನ ಇಟ್ಟಿರುತ್ತಾರೆ. ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳನ್ನು ಬುದ್ದಿವಂತರನ್ನಾಗಿ  ಮಾಡಬೇಕು ಎಂಬ ಆಸೆ ಇರುತ್ತದೆ. ಮಕ್ಕಳಲ್ಲಿ ಓದುವ ಗೀಳನ್ನು ಹಚ್ಚಬೇಕು ಹಾಗೆ ಮಾಡಿದಲ್ಲಿ ಅವರಿಗೆ ತರಗತಿಯಲ್ಲಿ ಕೂಡ ಏಕಾಗ್ರತೆ ಹೆಚ್ಚಲು ಮತ್ತು ಆಸಕ್ತಿ ಹೊಂದಲು ಸಹಕಾರಿಯಾಗುತ್ತದೆ ಎಂಬುದು ಇಲ್ಲಿನ ಮಕ್ಕಳ ತಜ್ಞರ ಅಂಬೋಣ .

    ಮಕ್ಕಳು ಗ್ಯಾಜೆಟ್ ಗಳನ್ನು ಹೆಚ್ಚು ಹೆಚ್ಚು ಬಳಸಿದಂತೆಲ್ಲ ಅವರ ಅರೋಗ್ಯ ಕೂಡ ಹದಗೆಡುತ್ತದೆ , ಕಣ್ಣಿನ ತೊಂದರೆ ಬರುತ್ತದೆ ,ಕುಳಿತಲ್ಲಿಂದ ಏಳದೆ ಬೊಜ್ಜು ಕೂಡ ಬರಬಹುದು. ಹಾಗೆಯೇ ಇಡೀ ದಿನ ಮಕ್ಕಳ ಮನಸ್ಸಿನಲ್ಲಿ ಗೇಮ್ಸ್ ತಲೆಯಲ್ಲಿ ಓದುವುದರಿಂದ ಓದಿನ ಬಗ್ಗೆ ಶಾಲೆಯೆಲ್ಲಿ ಮಾಡುವ ಪಾಠದ ಬಗ್ಗೆ ಯಾವುದೇ ರೀತಿಯ ಇಚ್ಛೆ ತೋರಿಸಲಾರರು . 

    ಅಷ್ಟೇ ಅಲ್ಲ ಮಕ್ಕಳು ಮನೆ ಬಿಟ್ಟು ಹೊರಹೋಗಲು ಕೂಡ ಚಿಂತಿಸುತ್ತಾರೆ . ಹಿಂದೆ ಮಕ್ಕಳು ಹೊರಹೋಗಲು ಕಾದು ಕುಳಿತಿರುತ್ತಿದ್ದರು , ಪರಿಚಯವಿಲ್ಲದ ಕಡೆಗಳಿಗೆ ಹೋದರೂ ಅಲ್ಲಿ ಸಿಕ್ಕ ಇತರ ಮಕ್ಕಳೊಂದಿಗೆ ಗೆಳೆತನ ಮಾಡಿಕೊಳ್ಳುತ್ತಿದ್ದರು . ಈ ರೀತಿಯಾಗಿ ಸಾಮಾಜಿಕವಾಗಿ ಬೆರೆಯುತ್ತಿದ್ದರು . ಆದರೆ ಈಗಿನ ಮಕ್ಕಳಿಗೆ  ನೆಂಟರಿಶ್ಟರ ಮದುವೆ , ಮುಂಜಿಗಳಿಗೆ ಹೋದರೆ ಅಲ್ಲಿ ಆಟವಾಡಲು ಮೊಬೈಲ್ ಬೇಕು , ಹೆಚ್ಚಿನ ಮಕ್ಕಳು ಹೊರಗೆ ಕರೆದುಕೊಂಡು ಹೋದರೆ ಮಂಕಾಗಿ ಕುಳಿತುಕೊಳ್ಳುವುದು ಕಂಡುಬರುತ್ತದೆ.    ಮಕ್ಕಳು ಗ್ಯಾಜೆಟ್ ಗಳ  ಮೊರೆ ಹೋಗಿ ದಿನವಿಡೀ ಅದರೊಂದಿಗೆ ಕಳೆಯುವುದನ್ನು ನೋಡಿದರೆ ಖೇದವೆನಿಸುತ್ತದೆ.

    ನಮ್ಮ ಕಾಲದಲ್ಲಿ ಗ್ಯಾಜೆಟ್ ಇಲ್ಲದೆ ನಾವೆಲ್ಲಾ ಮಣ್ಣು , ಗಿಡಮರಗಳ ನಡುವೆ ಆಡುತ್ತಾ ಬೆಳೆದಿರುವುದು ಅದೃಷ್ಟ ಎನ್ನಬಹುದು. ಹಾಗಾದರೆ ಈಗಿನ ಮಕ್ಕಳು ಹೀಗೆ ಗ್ಯಾಜೆಟ್ ಹಿಡಿದು ಕೂರುವುದನ್ನು ತಡೆಯಲು ಸಾಧ್ಯವಿಲ್ಲವೇ ? ಖಂಡಿತ ಸಾಧ್ಯ.  ಇದನ್ನು ಪೋಷಕರಾದ ನಾವೇ ಮನೆಯಿಂದಲೇ  ಪ್ರಾರಂಭಿಸಬೇಕು.  ಇದಕ್ಕಾಗಿ ಮಕ್ಕಳ ಜೊತೆ ಕಳೆಯಲು ಸಮಯ ನಿಗದಿ ಪಡಿಸಿಕೊಳ್ಳುವುದು ಅಷ್ಟೇ ಅವಶ್ಯಕ.

    ಲಂಡನ್ ನ ಪ್ರತಿ ಚಿಲ್ಡ್ರನ್ ಸೆಂಟರ್ ಗಳು ಇದಕ್ಕಾಗಿ ವಿವಿಧ ತರಗತಿಗಳನ್ನು ಮಾಡುತ್ತಿವೆ. ಮಗು ಮೂರು ತಿಂಗಳು ಇರುವಾಗಲೇ ಅವಕ್ಕೆ ಪುಸ್ತಕವನ್ನು ತೋರಿಸಲು ಪ್ರಾರಂಭಿಸಿದರೆ ಅವಕ್ಕೆ ಪುಸ್ತಕ ಪ್ರೀತಿ ಹುಟ್ಟುತ್ತದೆ ಎಂಬುದು ಸಂಶೋಧಕರು ಕಂಡುಕೊಂಡ ಸತ್ಯ. ಮೊದಮೊದಲು ಪುಸ್ತಕವನ್ನು ಬಾಯಿಗೆ ಇಡಬಹದು, ಕಾಲ ಕಳೆದಂತೆ ಅದರ ಪುಟವನ್ನು ತಿರುಗಿಸಿ ಅದರೊಂದಿಗೆ ಆಡಲು ಪ್ರಾರಂಭಿಸುವ ಮಗು ಕ್ರಮೇಣ ಪುಸ್ತಕದಲ್ಲಿರುವ ಚಿತ್ರಗಳ ಮೇಲೆ ತನ್ನ ಗಮನವನ್ನು ಹರಿಸುತ್ತದೆ. ಒಂದೇ ಪುಸ್ತಕವನ್ನು ಮತ್ತೆ ಮತ್ತೆ ತೋರಿಸಿ ಅದರಲ್ಲಿರುವ ಕಥೆ ಓದಲು ಪ್ರಾರಂಭಿಸಿದರೆ ಅಥವಾ ಅದರಲ್ಲಿರುವ ಬಣ್ಣ ಬಣ್ಣದ ಚಿತ್ರಗಳನ್ನು ತೋರಿಸಿದರೆ  ಮಗು ಅದರಲ್ಲಿ ಕುತೂಹಲ ಹೊಂದುವುದು ಮಾತ್ರವಲ್ಲ ಅದರ ಶಬ್ದಕೋಶ ಕೂಡ ಬೆಳೆಯುತ್ತಾ ಹೋಗುತ್ತದೆ. ದಿನದಲ್ಲಿ ಕೇವಲ ಅರ್ಧ ತಾಸಿನಷ್ಟು ಕಥೆ ಓದುವ ದಿನಚರಿ ಇಟ್ಟುಕೊಂಡರೆ ಮಗು ಒಂದು ವರ್ಷವಾಗುವಷ್ಟರಲ್ಲಿ ಸಾಕಷ್ಟು ವಸ್ತುಗಳನ್ನು ಗುರುತಿಸುತ್ತದೆ . ತೊದಲು ನುಡಿ ನುಡಿಯಲು ಕಲಿಯುತ್ತದೆ. ರೈಮ್ಸ್ ಗಳನ್ನು ಅಥವಾ ಕಥೆಗಳನ್ನು ದಿನನಿತ್ಯದ ಅಭ್ಯಾಸವಾಗಿಸಿಕೊಂಡ ಮಗು ಇತರ ಮಕ್ಕಳಿಗಿಂದ ಬೇಗ ಮಾತನಾಡುವುದನ್ನು ಕಲಿಯುವುದನ್ನು ಗಮನಿಸಬಹುದು. 

    ಮಕ್ಕಳ ಬುದ್ದಿ ವಿಕಾಸಕ್ಕೆ ಅವರು ಮಾಡುವ ಕೆಲಸದಲ್ಲಿ ಅಥವಾ ಆಟದಲ್ಲೇ ಇರಲಿ ಏಕಾಗ್ರತೆ ಹೆಚ್ಚಿಸಲು ಮಗುವಾಗಿರುವಾಗಲೇ ಕಥೆ ಓದುವುದು , ರೈಮ್ಸ್ ಹೇಳುವುದು ಈ ರೀತಿ ದಿನದಲ್ಲಿ ಸ್ವಲ್ಪ ಸಮಯವನ್ನು ಮೀಸಲಿಟ್ಟಲ್ಲಿ ಬಹಳಷ್ಟು ಉಪಯೋಗವಾಗುತ್ತದೆ ಎಂದು ತಜ್ಞರು ಕೂಡ ಹೇಳುತ್ತಾರೆ.

    ಒಟ್ಟಾರೆಯಾಗಿ ಕಲಿಕೆಯಲ್ಲಿ ಒಂದು ಮಗು ಮುಂದುವರೆಯಬೇಕು ಎಂದಲ್ಲಿ ಪುಸ್ತಕ ಪ್ರೀತಿ ಒರೆ ಹಚ್ಚುವುದು ಅಷ್ಟೇ ಅವಶ್ಯಕ. ಇಲ್ಲಿನ ಚಿಲ್ಡ್ರನ್ ಸೆಂಟರ್ ಗಳಲ್ಲಿ ಹೇಳುವ ಪ್ರಕಾರ ಮಕ್ಕಳಿಗೆ ಊಟ ತಿಂಡಿ ಮಾಡುವಾಗ ಟೀವಿ ಹಾಕಿಯೋ ಅಥವಾ ಮೊಬೈಲ್ ನಲ್ಲಿ ಸಾಕಷ್ಟು ಹಾಡುಗಳನ್ನು ಹಾಕಿಯೋ ತಿನಿಸುವುದು ಪೋಷಕರು ಮಾಡುವ ದೊಡ್ಡ ತಪ್ಪು , ಹಿಂದೆ ಈ ರೀತಿ ಮಾಡದೆ ಚಂದಮಾಮ ತೋರಿಸಿ ಅಥವಾ ಮರಗಿಡ ಇತರ ಪ್ರಾಣಿಗಳನ್ನು ತೋರಿಸಿ ಅಥವಾ ಕಟ್ಟು ಕಥೆ ಹೇಳಿ ಮಕ್ಕಳಿಗೆ ಊಟ ಮಾಡಿಸುತ್ತಿದ್ದರು ಇದರಿಂದ ಮಕ್ಕಳ ಯೋಚನಾ ಶಕ್ತಿ ಹೆಚ್ಚಿ ಮಕ್ಕಳು ಹೆಚ್ಚು ಕ್ರಿಯಾಶೀಲರಾಗುವಂತೆ ಮಾಡುತ್ತದೆ.

    ಹೌದು ಪೋಷಕರೇ ನಮ್ಮ ಮಕ್ಕಳು ಕಲಿಕೆಯಲ್ಲಿ ಮುಂದಿರಬೇಕು , ಬುದ್ದಿವಂತರಾಗಬೇಕು ಎಂದಿದ್ದಲ್ಲಿ  ಮಗುವಾಗಿರುವಾಗಿನಿಂದಲೇ ಎಚ್ಚೆತ್ತುಕೊಳ್ಳಕೊಳ್ಳೋಣ . ಅವರೊಡನೆ ಬೆರೆತು ಮಕ್ಕಳೊಡನೆ ಕುಳಿತು , ಟಿವಿ , ಮೊಬೈಲ್ , ಟ್ಯಾಬ್ಲೆಟ್ ಗಳನ್ನು ದೂರವಿಟ್ಟು ಮಗುವಿನಿನೊಡನೆ ಮಗುವಾಗಿ ಬೆರೆತುಬಿಡೋಣ. ಮಕ್ಕಳೊಡನೆ ಕಳೆಯುವ ಸಮಯ ನಮ್ಮ ಆರೋಗ್ಯವನ್ನು ಉಲ್ಲಸಿತವಾಗಿಡುವುದರಲ್ಲಿ ಅನುಮಾನವಿಲ್ಲ. ಇಂದೇ ಹೋಗಿ ನಿಮ್ಮ ಮಗುವಿಗೆ ಪುಸ್ತಕ ತಂದು ಕೊಡಿ , ಒಂದು ಪುಸ್ತಕ ನಿಮ್ಮ ಮಗುವಿನ ಬದುಕನ್ನೇ ಬದಲಿಸಬಹುದು.

    Photo by 🇸🇮 Janko Ferlič on Unsplash

    ಅರ್ಪಿತಾ ರಾವ್
    ಅರ್ಪಿತಾ ರಾವ್
    ಹುಟ್ಟಿ ಬೆಳೆದಿದ್ದು ಮಲೆನಾಡಿನ ಸೊರಬ ತಾಲೂಕಿನ ಬರಿಗೆ ಎಂಬ ಪುಟ್ಟಹಳ್ಳಿಯಲ್ಲಿ . ಓದಿದ್ದು ಉಜಿರೆ ಕಾಲೇಜಿನಲ್ಲಿ ಪತ್ರಿಕೋದ್ಯಮ .ಮದುವೆಯಾಗಿ ಕಳೆದ ಹತ್ತು ವರ್ಷಗಳಿಂದ ಯು.ಕೆ ಯಲ್ಲಿ ವಾಸ . ಬರವಣಿಗೆ ಹವ್ಯಾಸ . ಹಲವಾರು ಪತ್ರಿಕೆಗಳಲ್ಲಿ ಬರಹಗಳು ಪ್ರಕಟಗೊಂಡಿವೆ .
    spot_img

    More articles

    2 COMMENTS

    1. ಒಂದು ಪುಸ್ತಕ ಮಗುವಿನ ಬದುಕನ್ನೆ ಬದಲಿಸಿದೆ, ಬದಲಿಸುತ್ತಿದೆ ಎಂಬುದು ವಾಸ್ತವದಲ್ಲಿ ಸತ್ಯನೇ. ಈ ಬದಲಾವಣೆಯಲ್ಲಿ ಮಗುವಿನ ಬದುಕಿನ ಭವಿಷ್ಯ ದ ಜೊತೆ ದೇಶದ ಭವಿಷ್ಯ ವೂ ಸೇರಿದೆ. ಉತ್ತಮ ಮಾಹಿತಿ ಒದಗಿಸಿರುವ ಅರ್ಪಿತ ರಾವ್ ಅವರಿಗೆ ಧನ್ಯವಾದಗಳು.🙏

    LEAVE A REPLY

    Please enter your comment!
    Please enter your name here

    Latest article

    error: Content is protected !!