ಷೇರುಪೇಟೆ ಎಂದೊಡೆ ಎಲ್ಲರ ಚಿತ್ತವೂ ಚುರುಕಾಗುವ ವಾತಾವರಣ ನಿರ್ಮಿತವಾಗಿದೆ. ಇದಕ್ಕೆ ಕಾರಣ ಷೇರುಪೇಟೆಯ ಹೆಗ್ಗುರುತಾದ ಸೆನ್ಸೆಕ್ಸ್ ಒಂದೇ ವರ್ಷದಲ್ಲಿ ದ್ವಿಗುಣಗೊಂಡಿರುವುದಲ್ಲದೆ ಸರ್ವಕಾಲೀನ ಗರಿಷ್ಠ ಮಟ್ಟಕ್ಕೆ ಜಿಗಿದಿರುವುದಾಗಿದೆ.
ಇನ್ನು ಬಿ ಎಸ್ ಇ ಮಿಡ್ ಕ್ಯಾಪ್ ಇಂಡೆಕ್ಸ್ ಸಹ ದ್ವಿಗುಣಗೊಂಡರೆ, ಬಿ ಎಸ್ ಇ ಸ್ಮಾಲ್ ಕ್ಯಾಪ್ ಇಂಡೆಕ್ಸ್ ಸುಮಾರು ಎರಡೂವರೆ ಪಟ್ಟಿಗೆ ಸಮೀಪವಿದೆ. ಬಿಎಸ್ ಇ ಆಟೋ ಇಂಡೆಕ್ಸ್ ಸುಮಾರು ಎರಡೂವರೆಪಟ್ಟು ಹೆಚ್ಚಾಗಿದೆ. ಬಿ ಎಸ್ ಇ ಬ್ಯಾಂಕ್ ಇಂಡೆಕ್ಸ್ ಸಹ ಎರಡು ಪಟ್ಟಿಗೂ ಹೆಚ್ಚಿನ ಏರಿಕೆ ಪ್ರದರ್ಶಿಸಿದೆ. ಬಿ ಎಸ್ ಇ ಕನ್ಸೂಮರ್ ಡ್ಯೂರಬಲ್ಸ್, ಬಿ ಎಸ್ ಇ ಕ್ಯಾಪಿಟಲ್ ಗೂಡ್ಸ್ ಇಂಡೆಕ್ಸ್ , ಬಿ ಎಸ್ ಇ ಹೆಲ್ತ್ ಕೇರ್ ಇಂಡೆಕ್ಸ್ ಗಳೂ ಸಹ ದ್ವಿಗುಣಗೊಂಡಿವೆ.
ಹೀಗಿರುವಾಗ ಷೇರುಪೇಟೆಯಲ್ಲಿ ವಹಿವಾಟಿಗೆ ಲಿಸ್ಟಿಂಗ್ ಆಗಿರುವ ಎಲ್ಲಾ ಷೇರುಗಳೂ ಏರಿಕೆಯನ್ನು ಕಂಡಿವೆ ಎಂಬ ಭ್ರಮೆ ಬೇಡ. ಬಹಳಷ್ಠು ಕಂಪನಿಗಳು ಹಿಂದೆ ಕಂಡಂತಹ ಬೆಲೆಗಳನ್ನು ಮತ್ತೆ ತಲುಪುದಾಗಿವೆ. ಉತ್ತಮ ಕಂಪನಿಗಳೇ ಆದರೂ ಪೇಟೆಯಲ್ಲಿ ಏರಿಕೆ ಕಾಣದ ಪರಿಸ್ಥಿತಿಗೆ ತಲುಪಿವೆ. ಇವುಗಳಲ್ಲಿ ಕೆಲವನ್ನು ಉದಾಹರಣೆಗಾಗಿ ನೀಡಲಾಗಿದೆ.
ಚೇತರಿಕೆ ಕಂಡ ಕಂಪನಿಗಳ ಇತಿಹಾಸ:
- ವೊಡಫೋನ್ ಐಡಿಯಾ ಕಂಪನಿಯ ಷೇರು ಕಳೆದ ಒಂದು ವರ್ಷದಲ್ಲಿ ರೂ.2.83 ರಿಂದ ರೂ.13.80 ರವರೆಗೂ ಜಿಗಿದಿದೆ. ಆದರೂ ಈ ಷೇರಿನ ಬೆಲೆ ಏಪ್ರಿಲ್ 2017 ರಲ್ಲಿದ್ದ ರೂ.90 ಹಂತಕ್ಕೆ ತಲುಪುವ ಸಾಧ್ಯತೆ ಸದ್ಯಕ್ಕಂತೂ ಕಾಣುತ್ತಿಲ್ಲ.
- ದಾಲ್ಮಿಯಾ ಭಾರತ್ ಶುಗರ್ಸ್ ಕಂಪನಿ ಷೇರಿನ ಬೆಲೆ ರೂ.40 ರಿಂದ ರೂ.158 ರವರೆಗೂ ಏರಿಕೆ ಕಂಡಿದ್ದರೂ 2017 ರ ನವೆಂಬರ್ ತಿಂಗಳ ರೂ.175 ರ ಹಂತವನ್ನು ಇನ್ನೂ ತಲುಪಿಲ್ಲ.
- ಪ್ರತಿ ಷೇರಿಗೆ ರೂ.6 ರಂತೆ ಡಿವಿಡೆಂಡ್ ವಿತರಿಸಿದ ಬಜಾಜ್ ಕನ್ಸೂಮರ್ ಕೇರ್ ಕಂಪನಿ ಷೇರಿನ ಬೆಲೆ ರೂ.118 ರ ಸಮೀಪದಿಂದ ರೂ.284 ರವರೆಗೂ ಏರಿಕೆಯನ್ನು ಕಂಡಿದ್ದರೂ 2019 ರ ಡಿಸೆಂಬರ್ ತಿಂಗಳ ರೂ.325 ನ್ನು ತಲುಪಲು ಇನ್ನಷ್ಠು ಸಮಯಬೇಕಾಗಬಹುದು.
- ಕ್ಯಾಸ್ಟ್ರಾಲ್ ಇಂಡಿಯಾ ಷೇರಿನ ಬೆಲೆ ಹಿಂದಿನ ಫೆಬ್ರವರಿಯಲ್ಲಿ ರೂ.162 ರಲ್ಲಿತ್ತು. ಈ ಬೆಲೆಯು 2018 ರ ಆಗಷ್ಟ್ ತಿಂಗಳ ಬೆಲೆಯಾಗಿದ್ದು, ಅಲ್ಲಿಂದ ರೂ.89 ರವರೆಗೂ ಕುಸಿದು, ಸದ್ಯ ರೂ.129 ರ ಸಮೀಪವಿದೆ. ಎಲ್ಲಾ ಇಂಡೆಕ್ಸ್ ಗಳು ಏರಿಕೆ ಕಂಡಿದ್ದರೂ ಈ ಕಂಪನಿ ಷೇರಿನ ಬೆಲೆ ಇಳಿಕೆಯಲ್ಲೇ ಇದೆ.
- ಎವರೆಸ್ಟ್ ಕ್ಯಾಂಟೋ ಸಿಲಿಂಡರ್ ಕಂಪನಿಯ ಎರಡು ರೂಪಾಯಿಗಳ ಮುಖಬೆಲೆಯ ಷೇರಿನ ಬೆಲೆ ರೂ.9 ರ ಸಮೀಪದಿಂದ ರೂ.70 ರ ವರೆಗೂ ಏರಿಕೆ ಕಂಡಿದೆ. ಈ ಕಂಪನಿಯು 2013 ರ ನಂತರದಲ್ಲಿ ಡಿವಿಡೆಂಡ್ ನೀಡಿಲ್ಲ. ಸಧ್ಯ ಕಂಪನಿಯು ಲಾಭ ಗಳಿಸುತ್ತಿದೆ. 2009 ರಲ್ಲಿ ರೂ.223 ರ ಸಮೀಪವಿದ್ದ ಈ ಷೇರನ್ನು ಆಗ ಖರೀದಿಸಿರುವವರು ಅನೇಕರು ತಮ್ಮ ಹೂಡಿಕೆಯನ್ನು ಮುಂದುವರೆಸಿದ್ದಾರೆ.
- ವಕ್ರಾಂಗಿ ಲಿಮಿಟೆಡ್ ಕಂಪನಿಯ ಷೇರಿನ ಬೆಲೆ ಈ ವರ್ಷ ರೂ.17 ರ ಸಮೀಪದಿಂದ ರೂ.69 ರವರೆಗೂ ಜಿಗಿತ ಕಂಡಿದೆಯಾದರೂ 2018 ರ ಮಾರ್ಚ್ ಸಮಯದ ಬೆಲೆ ರೂ.150 ನ್ನು ತಲುಪದಾಗಿದೆ.
- 2000 ದ ಟೆಕ್ನಾಲಜಿ ಬೂಮ್ ಸಮಯದಲ್ಲಿ ಸಾವಿರಾರು ರೂಪಾಯಿಗಳಲ್ಲಿ ವಹಿವಾಟಾಗುತ್ತಿದ್ದ ಜಿ ಟಿ ಎಲ್ ಲಿಮಿಟೆಡ್ ಕಂಪನಿಯ ಷೇರಿನ ಬೆಲೆ 2011 ರ ಜೂನ್ ನಲ್ಲಿ ರೂ.145 ರ ಸಮೀಪವಿತ್ತು. ಆದರೆ ಈ ವರ್ಷ ಈ ಷೇರಿನ ಬೆಲೆ ರೂ.1 ರ ಸಮೀಪದಲ್ಲಿದ್ದು ಅಲ್ಲಿಂದ ರೂ.9 ನ್ನು ತಲುಪಿ ಈಗ ರೂ.7 ರ ಸಮೀಪವಿದೆ. ಸುಮಾರು 9/10 ವರ್ಷಗಳ ಹಿಂದೆ ಖರೀದಿಸಿದವರ ಬೆಲೆ ಮತ್ತೊಮ್ಮೆ ತಲುಪಬಹುದೇ?
- 2018 ರಲ್ಲಿ ರೂ.1,000 ಕ್ಕೂ ಹೆಚ್ಚಿದ್ದ ಗೋವಾ ಕಾರ್ಬನ್ ಕಂಪನಿ ಷೇರು ಈ ವರ್ಷ ರೂ.110 ರವರೆಗೂ ಕುಸಿದು ನಂತರ ಚೇತರಿಕೆಯಿಂದ ರೂ.300 ರ ಸಮೀಪವಿದೆ.
- ರಿಲಯನ್ಸ್ ಎಡಿಎಜಿ ಸಮೂಹ, ಎನ್ ಬಿ ಸಿ ಸಿ, ಐ ಡಿ ಎಫ್ ಸಿ, ಜೆ ಪಿ ಅಸೋಸಿಯೇಟ್ಸ್, ಎರೋಸ್ ಇಂಟರ್ನ್ಯಾಶನಲ್, ಲ್ಯಾಂಕೋ ಇನ್ಫ್ರಾ, ರಿಸರ್ಜರ್ ಮೈನ್ಸ್, ಸುಜುಲಾನ್, ಅಸ್ಟ್ರಾಲ್ ಕೋಕ್, ಗಳು ಹೂಡಿಕೆದಾರರ ಸಂಪತ್ತನ್ನು ಕರಗಿಸಿದ ಕಂಪನಿಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿವೆ. ಇಂತಹ ಕಂಪನಿಗಳ ಪಟ್ಟಿಯು ಇನ್ನೂ ವಿಸ್ತಾರವಾಗಿದೆ.
ಹಕ್ಕಿನ ಷೇರು ವಿತರಿಸಿದ ಕಂಪನಿಗಳ ಸ್ಥಿತಿ
2015 ರಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಪ್ರತಿ ಷೇರಿಗೆ ರೂ.450 ರಂತೆ ಹಕ್ಕಿನ ಷೇರು ವಿತರಿಸಿತು. ಆದರೆ ಆ ಷೇರಿನ ಬೆಲೆ ನಿರಂತರವಾಗಿ ಕುಸಿಯುತ್ತಾ ಬಂದು ಈ ವರ್ಷ ರೂ.64 ನ್ನು ತಲುಪಿತ್ತು. ನಂತರದಲ್ಲಿ ಹತ್ತು ದಿನಗಳ ಹಿಂದೆ ರೂ.341 ರವರೆಗೂ ಏರಿಕೆ ಕಂಡು ವಿಜೃಂಭಿಸಿತು. ಆದರೂ ಆರು ವರ್ಷಗಳ ಹಿಂದೆ ವಿತರಿಸಿದ ಹಕ್ಕಿನ ಬೆಲೆ ಅರ್ಥಹೀನವಾಗಿಯೇ ಇದೆ.
ಇಂದಿನ ಬಹಳಷ್ಟು ಕಂಪನಿಗಳ ಆಪತ್ತಿಗೆ ಅವುಗಳ ಆಡಳಿತ ಮಂಡಳಿಗಳ ತಪ್ಪು ನಿರ್ಧಾರಗಳೇ ಕಾರಣ ಎನ್ನಬಹುದಾಗಿದೆ. 2006 ರ ಸಮಯದಲ್ಲಿ ಪೇಟೆಗಳು ಉತ್ತುಂಗದಲ್ಲಿದ್ದಾಗ ಅನೇಕ ಕಂಪನಿಗಳು ಫಾರಿನ್ ಕರೆನ್ಸಿ ಕನ್ವರ್ಟಬಲ್ ಬಾಂಡ್ಸ್ ಗಳನ್ನು ಅಧಿಕ ಪ್ರೀಮಿಯಂನಲ್ಲಿ ವಿತರಿಸಿದವು. ಷೇರುಪೇಟೆಯಲ್ಲಿ ಷೇರಿನ ದರಗಳು ಏರುತ್ತಲೇ ಇರುತ್ತವೆ ಎಂಬುದು ತಪ್ಪು.
ಬದಲಾವಣೆಗಳ ವೇಗ ಅತಿ ಹೆಚ್ಚಾಗಿರುವುದರಿಂದ ಷೇರಿನ ದರಗಳು ಗರಿಷ್ಠದಲ್ಲಿದ್ದಾಗ ಹೆಚ್ಚಿನ ಎಚ್ಚರ ಅಗತ್ಯ. ನಂತರದ ದಿನಗಳಲ್ಲಿ ಆರ್ಥಿಕತೆ ಕುಸಿದ ಪರಿಣಾಮ ಅನೇಕ ಕಂಪನಿಗಳು ಆಪತ್ತಿಗೊಳಗಾದವು. ಅವುಗಳಲ್ಲಿ ಸಿಂಟೆಕ್ಸ್ ಇಂಡಸ್ಟ್ರೀಸ್ ಸಹ ಒಂದು. ಒಂದು ಕಾಲದಲ್ಲಿ ಭಾರತ್ ವಿಜಯ್ ಮಿಲ್ಸ್ ಎಂದಿದ್ದ ಈ ಕಂಪನಿ ತನ್ನ ನೀರಿನ ಟ್ಯಾಂಕ್ ಯೋಜನೆಯ ಯಶಸ್ಸಿನ ಕಾರಣ ಹೆಸರನ್ನು ಬದಲಿಸಿಕೊಂಡಿತು. ಈ ಕಂಪನಿ ರೂ.91.16 ರಂತೆ ಪರಿವರ್ತಿಸಿದ ಷೇರುಗಳು ಈ ತಿಂಗಳ 10ರಿಂದ ವಹಿವಾಟಿಗೆ ಬಿಡುಗಡೆಯಾಗಿವೆ. ಅಂದರೆ ರೂ.91.16 ರ ಷೇರುಗಳು ರೂ.4 ರಲ್ಲಿದ್ದಾಗ ಚಲಾವಣೆಗೆ ಬಂದಲ್ಲಿ ಪೇಟೆಯ ಮೇಲೆ ಯಾವುದೇ ಪರಿಣಾಮ ಬೀರದು ಕಾರಣ ಆ ಷೇರುಗಳ ಮಾರಾಟದ ಸಾಧ್ಯತೆ ತೀರಾ ವಿರಳ. ಈ ಕಂಪನಿಯು 2016 ರಲ್ಲಿ ರೂ.1 ರ ಮುಖಬೆಲೆಯ ಪ್ರತಿ ಷೇರಿಗೆ ರೂ.65 ರಂತೆ ಹಕ್ಕಿನ ಷೇರು ವಿತರಿಸಲಾಯಿತು. ಈಗಿನ ಬೆಲೆ ರೂ.4 ರ ಸಮೀಪವಿದೆ. ಕಂಪನಿಯ ಉತ್ಪನ್ನವೇನೋ ಪೇಟೆಯಲ್ಲಿ ಪ್ರತಿಷ್ಠಿತವಾಗಿದ್ದರೂ, ಆಂತರಿಕವಾಗಿ ಆರ್ಥಿಕ ಒತ್ತಡದಲ್ಲಿದೆ ಎನ್ನಬಹುದು. ಡಿಸೆಂಬರ್ ತಿಂಗಳ ತ್ರೈಮಾಸಿಕದಲ್ಲಿ ವಹಿವಾಟಿನ ಗಾತ್ರ ಹೆಚ್ಚಿರುವುದು ಆಶಾಭಾವನೆ ಮೂಡಿಸಿದೆ.
ಕೆನರಾ ಬ್ಯಾಂಕ್ 2017 ರಲ್ಲಿ ಪ್ರತಿ ಷೇರಿಗೆ ರೂ.207 ರಂತೆ ಹಕ್ಕಿನ ಷೇರು ವಿತರಿಸಿದೆ ಆದರೆ ನಂತರದಲ್ಲಿ ಷೇರಿನ ಬೆಲೆಗಳು ಕುಸಿದು ನೀರಸ ವಾತಾವರಣವನ್ನೆದುರಿಸಿತು. ಹಿಂದಿನ ವರ್ಷ ಫೆಬ್ರವರಿಯಲ್ಲಿ ರೂ.187 ರ ಗರಿಷ್ಠದಲ್ಲಿದ್ದ ಈ ಷೇರು ಮಾರ್ಚ್ ನಲ್ಲಿ ಉಂಟಾದ ಕುಸಿತದ ಕಾರಣ ಷೇರಿನ ಬೆಲೆ ರೂ.74 ರ ಸಮೀಪಕ್ಕೆ ಜಾರಿತು. ಈ ತಿಂಗಳಲ್ಲಿ ರೂ.172 ರವರೆಗೂ ಏರಿಕೆ ಕಂಡು ಸಧ್ಯ ರೂ.157 ರ ಸಮೀಪವಿರುವ ಈ ಕಂಪನಿ ಷೇರಿನ ಬೆಲೆ ಹಕ್ಕಿನ ಷೇರಿನ ಬೆಲೆ ರೂ.207 ಎಂದು ತಲುಪುವುದೋ ಕಾದುನೋಡಬೇಕಾಗಿದೆ.
ಹಾಗೆಂದು ಎಲ್ಲಾ ಹಕ್ಕಿನ ಷೇರುಗಳೂ ನಿಶ್ಪಲವಾಗಿವೆ ಎಂದಲ್ಲ, 2015 ರಲ್ಲಿ ಕ್ಯಾನ್ ಫಿನ್ ಹೋಮ್ಸ್ ರೂ.450 ರಂತೆ ಹಕ್ಕಿನ ಷೇರು ವಿತರಿಸಿದೆ. ಅದರ ಬೆಲೆ ಈಗ ರೂ.516 ರಲ್ಲಿದೆ.
2015 ರಲ್ಲಿ ಜಿ ಎಂ ಆರ್ ಇನ್ಫ್ರಾಸ್ಟ್ರಕ್ಚರ್ ಲಿ ಕಂಪನಿಯು ರೂ.15 ರಂತೆ ಹಕ್ಕಿನ ಷೇರು ವಿತರಿಸಿದೆ ಆ ಷೇರಿನ ಬೆಲೆ ರೂ.26 ರ ಸಮೀಪವಿದೆ. ಆದರೆ ಈ ಕಂಪನಿ ಷೇರು 2010 ರಲ್ಲಿ ರೂ.50/60 ರಲ್ಲಿತ್ತು ಆಗ ಖರೀದಿಸಿದವರು ದೀರ್ಘಕಾಲೀನ ಹೂಡಿಕೆದಾರರಾಗಿ ಮುಂದುವರಿಯುತ್ತಿದ್ದಾರೆ.
2016 ರಲ್ಲಿ ಕರ್ನಾಟಕ ಬ್ಯಾಂಕ್ ಪ್ರತಿ ಷೇರಿಗೆ ರೂ.70 ರಂತೆ ಹಕ್ಕಿನ ಷೇರು ವಿತರಿಸಿತ್ತು. ನಂತರದ ಸುಧೀರ್ಘ ಕುಸಿತದ ನಂತರ ಈಗ ಮತ್ತೆ ವಿತರಣೆ ಬೆಲೆ ಸಮೀಪಕ್ಕೆ ಹಿಂದಿರುಗಿದೆ.
2017 ರಲ್ಲಿ ಇಂಡಿಯನ್ ಹೋಟೆಲ್ ಪ್ರತಿ ಷೇರಿಗೆ ರೂ.75 ರಂತೆ ವಿತರಣೆ ಮಾಡಿತ್ತು. ಈ ವರ್ಷ ಷೇರಿನ ಬೆಲೆ ರೂ.62 ರವರೆಗೂ ಕುಸಿದು ನಂತರ ಚೇತರಿಕೆಯಿಂದ ರೂ.130 ರ ಸಮೀಪದಲ್ಲಿದೆ.
ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದಾಗ ಷೇರುಪೇಟೆಯಲ್ಲಿ ಹೂಡಿಕೆ ಮಾಡುವಾಗ ಷೇರಿನ ಬೆಲೆಗಳು ಸೂಚ್ಯಂಕಗಳು ಗರಿಷ್ಠದಲ್ಲಿದ್ದಾಗ ಚಂಚಲತೆ ಹೆಚ್ಚು ಪ್ರದರ್ಶಿಸುವ ಕಾರಣ ಹೂಡಿಕೆಯನ್ನು ಅಲ್ಪಕಾಲೀನವಾಗಿಸಬೇಕು. ಉತ್ತಮ ಕಂಪನಿಗಳನ್ನು ಮಾತ್ರ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಬೇಕು. ಪೇಟೆಗಳು ಕುಸಿತದಲ್ಲಿದ್ದಾಗ ದೀರ್ಘಕಾಲೀನ ತಂತ್ರ ಅಳವಡಿಸಬೇಕು. ಎಂತಹ ಪರಿಸ್ಥಿತಿಯಾದರೂ, ಹೂಡಿಕೆ ಮಾಡಿದ ಷೇರುಗಳ ಮೇಲೆ ಹೆಚ್ಚಿನ ನಿಗಾ ಇರಲೇಬೇಕು.
ಉತ್ತಮ ಘನತೆಯ ಕಂಪನಿಗಳು, ಕುಸಿದರೂ ಪುಟಿದೇಳುವ ಸಾಧ್ಯತೆಗಳು ಹೆಚ್ಚು. ಇದಕ್ಕೆ ಸರಿಯಾದ ಉದಾಹರಣೆ ಎಂದರೆ ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಕ್ಲಾರಿಯಂಟ್ ಕೆಮಿಕಲ್ಸ್, ಅಶೋಕ್ ಲೇಲ್ಯಾಂಡ್, ಮಹೀಂದ್ರ ಅಂಡ್ ಮಹೀಂದ್ರ, ಸಿಪ್ಲಾ, ಬಯೋಕಾನ್, ಕೆನರಾ ಬ್ಯಾಂಕ್, ಎಸ್ ಬಿ ಐ, ಯು ಪಿ ಎಲ್ ಮುಂತಾದವಾಗಿವೆ.
ಷೇರು ಪೇಟೆಯನ್ನು ಹೂಡಿಕೆಯಾಗಿ ಆಯ್ಕೆ ಮಾಡಿಕೊಂಡಲ್ಲಿ ಬಂಡವಾಳ ಅಲ್ಪಮಟ್ಟಿನ ಸುರಕ್ಷಿತ. ಸ್ಪೆಕ್ಯುಲೇಷನ್ ಎಂದರೆ ಅನಿಶ್ಚಿತತೆ ಅಪರಿಮಿತ.