ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.
ಕೂಳುಗೇಡಿಂಗೆ ಒಡಲ ಹೊರುವಿರಿ- ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದು ಕರೆಸಿಕೊಂಡಿರುವ ಕುಮಾವ್ಯಾಸನ ಗದುಗಿನ ಭಾರತದಲ್ಲಿ ಬರುವ ಮಾತಿದು. ಐದೂ ಜನ ಗಂಡರಿದ್ದು ನನ್ನೊಬ್ಬಳನ್ನು ರಕ್ಷಿಸುವುದಕ್ಕೆ ನಿಮ್ಮಿಂದಾಗುವುದಿಲ್ಲವೇ ಎಂದು ನೋವಿನಿಂದ, ವಿಷಾದದಿಂದ ಹತಾಶೆಯಿಂದ ದ್ರೌಪದಿ ಭೀಮನನ್ನು ಕುರಿತು ಈ ಮಾತುಗಳನ್ನಾಡುತ್ತಾಳೆ.
ಮನುಷ್ಯ ಬುದ್ಧಿಜೀವಿ ಎಂಬುದಾದರೆ ಆತ ತನ್ನ ಜೀವಿತಾವಧಿಯಲ್ಲಿ ಒಂದಿಲ್ಲೊಂದು ಒಳ್ಳೆಯ ಕೆಲಸವನ್ನು ಮಾಡಬೇಕು. ಇಲ್ಲವಾದರೆ ವ್ಯರ್ಥವೇ. (ಇಲ್ಲಿ ‘ಕೂಳು’ ಎಂದರೆ ಅನ್ನ ಎಂದರ್ಥ. ಕೂಳು ಆಧುನಿಕ ಕಾಲದಲ್ಲಿ ಹೀನಾರ್ಥ ಪಡೆದುಕೊಂಡಿದೆ)
ಆಹಾರ ಸೇವನೆ ಪ್ರಾಣ ರಕ್ಷಣೆಗೆ.ಅದನ್ನು ಬಿಟ್ಟು ಅಳತೆಯಲ್ಲಿ ಮೂರಂಗುಲವಿರುವ ನಾಲಗೆಯ ಸೆಳೆತಕ್ಕೆ ಒಳಗಾಗಬಾರದು . “ಜಿಹ್ವಾಚಾಪಲ್ಯಕ್ಕಿಂತ ಜವಾಬ್ದಾರಿ” ಮುಖ್ಯ ಎಂಬುದನ್ನು ಈ ವಾಕ್ಯ ಹೇಳುತ್ತದೆ. ಆಹಾರಕ್ಕೆ ಮಾತ್ರ ಈ ಬದುಕು ಎಂದರೆ ಈ ಹುಟ್ಟು ವ್ಯರ್ಥವೆಂದೇ ತಿಳಿಯಬೇಕು. ಪ್ರಾಣಿಗಳು ತಿಂದು ಬದುಕುತ್ತವೆ. ಜನ ತಿಳಿದು ಬದುಕುತ್ತಾರೆ ಎಂದು ಹೇಳವುದು ಇದಕ್ಕೆ ಅಲ್ಲವೆ!
ತಮ್ಮ ಜವಾಬ್ದಾರಿಯನ್ನು ಚಾಚೂ ತಪ್ಪದೆ ಪಾಲಿಸಬೇಕು ಇಲ್ಲವಾದರೆ ಈ ಹುಟ್ಟು ವ್ಯರ್ಥ ಎಂದೇ ಇಲ್ಲಿ ವೇದ್ಯವಾಗುತ್ತದೆ. ತಿನ್ನುವುದು ಉಡುವುದು ತೊಡುವುದರಾಚೆಗಿನ ಜೀವನ ಜೀವಿಸುವುದು ಮುಖ್ಯ ಅದನ್ನು ಬಿಟ್ಟು ಮೂಲ ಅವಶ್ಯಕತೆಗಳೆ ಮುಖ್ಯವಾಗಬಾರದು. ಅವಲಂಬಿತರ ಮಾನಕ್ಕೆ ಧಕ್ಕೆಯುಂಟಾದಾಗ ಶೀಘ್ರ ಸ್ಪಂದಿಸಬೇಕು ಎಂಬ ಕಳಕಳಿ “ಕೂಳುಗೇಡಿಂಗೆ ಒಡಲ ಹೊರುವಿರಿ” ಮಾತಿನ ಹಿಂದಿದೆ.ವೈಯುಕ್ತಿಕ ಹಿತಾಸಕ್ತಿಗಳಿಗೆ ತನ್ನವರ ಮರ್ಯಾದೆಯನ್ನು ಪದೇ ಪದೇ ಪಣಕ್ಕಿಡುವುದು ಹೇಡಿಗಳ ಲಕ್ಷಣ ಎಂಬ ಅರ್ಥವೂ ಇಲ್ಲಿ ಸ್ಫುರಿಸುತ್ತದೆ.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.
ಉತ್ತಮ ಲೇಖನ. ಸುಮ ವೀಣಾ ಅಭಿನಂದನೆಗಳು.
ಧನ್ಯವಾದಗಳು