ಬೆಂಗಳೂರು ಉತ್ತರ ವಿವಿಗೆ 170 ಎಕರೆ ಭೂಮಿ;
ಜಂಗಮಕೋಟೆಯಲ್ಲಿ ನಾಲೆಡ್ಜ್ ಸಿಟಿ
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ಎಲ್ಲ ಸಿದ್ಧತೆಗಳು ಅಂತಿಮ ಹಂತದಲ್ಲಿರುವಾಗಲೇ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ; ರಾಜಧಾನಿಯ 28 ವಿಧಾನಸಭೆ ಕ್ಷೇತ್ರಗಳಲ್ಲಿ ಗುಣಮಟ್ಟದ ಪದವಿ ಕಾಲೇಜುಗಳನ್ನು ಸ್ಥಾಪನೆ ಮಾಡುವುದಾಗಿ ಪ್ರಕಟಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಉನ್ನತ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು; ಗುಣಮಟ್ಟದ ಕಲಿಕೆ, ಬೋಧನೆ ಮತ್ತು ಸಂಶೋಧನೆ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯ. ಅದರಂತೆ ಬೆಂಗಳೂರು ಕೇಂದ್ರ (ಸೆಂಟ್ರಲ್ ಕಾಲೇಜ್), ಬೆಂಗಳೂರು (ಜ್ಞಾನಭಾರತಿ) ಹಾಗೂ ಬೆಂಗಳೂರು ಉತ್ತರ (ಕೋಲಾರ) ವಿಶ್ವವಿದ್ಯಾಲಯಗಳ ಮೂಲಕವೇ ಇಷ್ಟೂ ವಿಧಾನಸಭೆ ಕ್ಷೇತ್ರಗಳಲ್ಲಿ ಅತ್ಯುತ್ತಮ ಗುಣಮಟ್ಟದ ಪದವಿ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದರು.
ಬೆಂಗಳೂರು ಅಗಾಧವಾಗಿ ಬೆಳೆಯುತ್ತಿದ್ದು, ಜನಸಂಖ್ಯೆ 1.50 ಕೋಟಿಯನ್ನೂ ಮೀರಿದೆ. ಈ ಹಿನ್ನೆಲೆಯಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಗಳನ್ನು ಪರಿಣಾಮಕಾರಿಯಾಗಿ ಪೂರೈಸಬೇಕಾದರೆ ಇಷ್ಟು ಕಾಲೇಜುಗಳ ನಿರ್ಮಾಣ ಅಗತ್ಯ. ಒಂದು ವೇಳೆ ಇಲ್ಲದಿದ್ದರೆ ಹೊಸ ಕಾಲೇಜನ್ನು ನಿರ್ಮಾಣ ಮಾಡಲಾಗುವುದು. ಖಾಸಗಿ ಕಾಲೇಜುಗಳಲ್ಲಿ ಶಿಕ್ಷಣ ಪಡೆಯಲಾಗದೆ ಆರ್ಥಿಕ- ಸಾಮಾಜಿಕವಾಗಿ ಹಿಂದುಳಿದಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಈ ಮೂಲಕ ಗುಣಮಟ್ಟದ ಶಿಕ್ಷಣ ಸಿಗಲಿದೆ ಎಂದು ಡಿಸಿಎಂ ಹೇಳಿದರು.
ಜಾಗ ಸರಕಾರದ್ದು:ಇಷ್ಟು ಕಾಲೇಜುಗಳನ್ನು ನಿರ್ಮಾಣ ಮಾಡುವುದು ದೊಡ್ಡ ಕನಸು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಇದಕ್ಕೆ ಅಗತ್ಯವಾದ ಭೂಮಿಯನ್ನು ಸರಕಾರವೇ ನೀಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಇಲಾಖೆಯ ಇವತ್ತಿನ ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಅವರ ಜತೆ ಮಾತುಕತೆ ನಡೆಸಿದ್ದೇನೆ. ನಗರದ ವ್ಯಾಪ್ತಿಯಲ್ಲಿ ಕಾಲೇಜುಗಳ ನಿರ್ಮಾಣಕ್ಕೆ ಬೇಕಾಗುವ ಭೂಮಿ ಎಲ್ಲೆಲ್ಲಿ ಲಭ್ಯವಿದೆ ಎಂಬ ಬಗ್ಗೆ ಅವರಿಂದ ಮಾಹಿತಿ ಕೇಳಿದ್ದೇನೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.
ಇನ್ನು ಕೆಲ ದಿನಗಳಲ್ಲಿಯೇ ನಗರದ ಎಲ್ಲ ಶಾಸಕರ ಸಭೆಯನ್ನು ಕರೆಯಲಿದ್ದೇನೆ. ಭೂಮಿ ಪಡೆಯುವ ಸಂಬಂಧ ಅವರೆಲ್ಲರ ವಿಶ್ವಾಸವನ್ನು ಪಡೆದು ಮುಂದಿನ ಹೆಜ್ಜೆ ಇಡಲಾಗುವುದು. ಎಲ್ಲ ಕ್ಷೇತ್ರಗಳೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಮಾನಾಂತರವಾಗಿ ಬೆಳೆಯಬೇಕು ಎಂಬುದು ನನ್ನ ಅಭಿಲಾಶೆಯಾಗಿದೆ. ಮೊದಲ ಹಂತದಲ್ಲಿ ಬೆಂಗಳೂರು ನಗರದಲ್ಲಿ ಈ ಯೋಜನೆಯನ್ನು ಕಾರ್ಯಗತ ಮಾಡಿ ನಂತರ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.
ಬೇಡಿಕೆ ಇರುವ ಕೋರ್ಸುಗಳು ಮಾತ್ರ:ಶಿಕ್ಷಣ ನೀತಿಯಲ್ಲಿ ಉಲ್ಲೇಖ ಮಾಡಿರುವ ಅಂಶಗಳ ಆಧಾರದ ಮೇಲೆ ಉದ್ಯೋಗಾಧಾರಿತ, ವೃತ್ತಿಪರ ಮತ್ತು ಜಾಗತಿಕವಾಗಿ ಬೇಡಿಕೆ ಹೊಂದಿರುವ ಕೋರ್ಸುಗಳನ್ನೂ ಆರಂಭಿಸಲಾಗುವುದು. ಈ ಮೂಲಕ ವಿದ್ಯಾರ್ಥಿಗಳ ಕನಸುಗಳು ಈಡೇರಿ ಅವರ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳು ಸುಧಾರಿಸುತ್ತವೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.
8,000 ಬೋಧಕರ ಮಂಜೂರು:ಪ್ರಸ್ತುತ ರಾಜ್ಯದ ಪದವಿ ಕಾಲೇಜುಗಳಲ್ಲಿ ಬೋಧಕರ ಕೊರತೆ ಇದೆ. ಇದಲ್ಲದೆ ಇನ್ನೂ 8,000 ಬೋಧಕ ಹುದ್ದೆಗಳನ್ನು ಮಂಜೂರು ಮಾಡುವಂತೆ ಕೋರಲಾಗಿದೆ. ಈಗ ಖಾಲಿ ಇರುವ ಹುದ್ದೆಗಳ ಜತೆಗೆ ಈ ಹುದ್ದೆಗಳ ಮಂಜೂರು ಮಾಡಬೇಕಾಗಿದೆ. ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈ ಬಗ್ಗೆ ಬೇಡಿಕೆ ಸಲ್ಲಿಸಲಾಗಿದೆ. ಹಾಗೇಯೇ, ಇಲಾಖೆಗೆ ಸಿಗುತ್ತಿರುವ ಒಟ್ಟಾರೆ ಅನುದಾನ ಕಡಿಮೆ ಇದ್ದು, ರಾಜ್ಯದ ಒಟ್ಟು ಬಜೆಟ್ ಗಾತ್ರದಲ್ಲಿ ಶೇ.3.5ರಷ್ಟು ಮೊತ್ತವನ್ನು ಉನ್ನತ ಶಿಕ್ಷಣಕ್ಕೆ ಮೀಸಲಿಡಬೇಕು ಎಂದು ಮನವಿ ಮಾಡಲಾಗಿದೆ. ಈಗ, ಅಂದರೆ; 2020-21ರ ಮುಂಗಪತ್ರದಲ್ಲಿ ಮಂಜೂರಾದ ಒಟ್ಟು 4687 ಕೋಟಿ ರೂ. ಅನುದಾನದಲ್ಲಿ ಶೇ.88ರಷ್ಟು ಅಂದರೆ; 3998 ಕೋಟಿ ರೂ. ವೇತನಕ್ಕೇ ಹೋಗಿದೆ. ಉಳಿದ ಶೇ.12ರಷ್ಟು ಅಂದರೆ 595 ಕೋಟಿ ರೂ. ಮೊತ್ತದಲ್ಲಿ ಮಾತ್ರ ಇಲಾಖೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ ಅನುದಾನವನ್ನು ಹೆಚ್ಚಿಸಬೇಕೆಂದು ಮುಖ್ಯಮಂತ್ರಿಗಳನ್ನು ಕೋರಲಾಗಿದೆ ಎಂದು ಮಾಹಿತಿ ನೀಡಿದರು ಉಪ ಮುಖ್ಯಮಂತ್ರಿ.
ಉತ್ತರ ವಿವಿಗೆ ಭೂಮಿ:ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಜಂಗಮಕೋಟೆ ಬಳಿ 172 ಎಕರೆ ಜಾಗ ಗುರುತಿಸಿದ್ದು, ಆ ಪೈಕಿ 57 ಎಕರೆಯನ್ನು ಹಸ್ತಾಂತರ ಮಾಡಲಾಗಿದೆ. ಇನ್ನೊಂದು ತಿಂಗಳಲ್ಲಿ 53 ಎಕರೆ ಹಸ್ತಾಂತರ ಮಾಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇದಲ್ಲದೆ 61 ಎಕರೆಯಲ್ಲಿ 51 ಎಕರೆ ಸರ್ಕಾರದ್ದೇ ಇದೆ ಎನ್ನುವುದು ಪರಿಶೀಲನೆ ವೇಳೆ ಗೊತ್ತಾಗಿದೆ. ಅದನ್ನೂ ವಶಕ್ಕೆ ಪಡೆಯಲಾಗುವುದು. ಇನ್ನೊಂದು ತಿಂಗಳ ಒಳಗಾಗಿ ಈ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ಪ್ರಕಟಿಸಿದರು.
ಜಂಗಮಕೋಟೆಯಲ್ಲಿ ನಾಲೆಡ್ಜ್ ಸಿಟಿ:2015ರಲ್ಲಿ ಈ ಬೆಂಗಳೂರು ಉತ್ತರ ವಿವಿ ಸ್ಥಾಪನೆ ಬಗ್ಗೆ ಸರಕಾರ ನಿರ್ಧಾರ ಕೈಗೊಂಡಿತಾದರೂ ಅದು ಅಸ್ತಿತ್ವಕ್ಕೆ ಬಂದಿದ್ದು 2018ರಲ್ಲಿ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಬಳಿ ಸುಸಜ್ಜಿತ ಕ್ಯಾಂಪಸ್ ನಿರ್ಮಾಣವಾಗಲಿದೆ. ಈ ಜಾಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಂಬಾ ಹತ್ತಿರದಲ್ಲಿದೆ. ಹೀಗಾಗಿ ಇಲ್ಲಿ ಒಂದು ಜ್ಞಾನ ನಗರ (ನಾಲೆಡ್ಜ್ ಸಿಟಿ) ವನ್ನು ಸ್ಥಾಪನೆ ಮಾಡಲಾಗುವುದು ಎಂದರು.
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ, ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ, ಬೆಂಗಳೂರು ಉತ್ತರ ವಿವಿ ಕುಲಪತಿ ಡಾ.ಕೆಂಪರಾಜು ಮತ್ತಿತರರು ಹಾಜರಿದ್ದರು.