21.2 C
Karnataka
Sunday, September 22, 2024

    ಕೇರಳ ನಿಶ್ಯಬ್ದ; ತಮಿಳುನಾಡು ಗೊಂದಲಮಯ.

    Must read

    ಜನತಂತ್ರದ ಪ್ರಮುಖ ಪ್ರಕ್ರಿಯೆ ಚುನಾವಣೆ. ದೇಶದ ಸುಮಾರು 19 ರಾಜ್ಯಗಳಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳನ್ನು ಆಯಾ ರಾಜ್ಯಗಳಿಗೆ ಹೋಗಿ ಸಮೀಕ್ಷಿಸುವುದು ಅತಿ ಪ್ರಯಾಸಕರ. ಬೆಂಗಳೂರಿನ ವರದಿಗಾರರ ತಂಡವೊಂದು ಕಳೆದ 25 ವರುಷಗಳಿಂದ ಚುನಾವಣೆ ಜನಾಭಿಪ್ರಾಯ ಸಮೀಕ್ಷೆ ನಡೆಸುತ್ತಾ ಬಂದಿದೆ. ಹಿರಿಯ ಪತ್ರಕರ್ತ ಎಸ್.ಕೆ. ಶೇಷಚಂದ್ರಿಕ ಈ ತಂಡದ ನೇತೃತ್ವ ವಹಿಸುತ್ತಾ ಬಂದಿದ್ದಾರೆ. ಇನ್ನೇನು ಎರಡು ತಿಂಗಳಲ್ಲಿ ನಡೆಯುವ ಕೇರಳ ವಿಧಾನಸಭೆಯ ಚುನಾವಣೆಯ ನಾಡಿ ಮಿಡಿತವನ್ನು ಅರಿಯುವ ಯತ್ನವನ್ನು ಈ ತಂಡ ಮಾಡಿದೆ.


    ಎಸ್.ಕೆ. ಶೇಷಚಂದ್ರಿಕ

    ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸಾರ್ವತ್ರಿಕ ಚುನಾವಣೆಯ ಆಸುಪಾಸಿನ ದಿನಗಳಲ್ಲಿ ಸಂಚರಿಸುತ್ತಿರುವುದಾಗಿ ಭಾವಿಸಿಕೊಳ್ಳಿ. ಆಗ ನಿಮಗೆ ಅಕ್ಕಪಕ್ಕದ ಎರಡು ಸಮಾಜಗಳಲ್ಲಿನ ಮತದಾರರು ಚುನಾವಣಾ ಪ್ರಕ್ರಿಯೆಗಳನ್ನು ಕಾಣುವ ಹಾಗೂ ಪಾಲ್ಗೊಳ್ಳುವಿಕೆಯ   ವಿಧಾನ ದಲ್ಲಿ ಅಜಗಜಾಂತರ ವ್ಯತ್ಯಾಸ ಕಾಣುವಿರಿ.

    ಕೆಲವೇ ಕಿಲೋಮೀಟರ್ ಗಳು  ಗಡಿ ಅಂತರದಲ್ಲಿದ್ದರೂ ಮಲೆಯಾಳಂ ಮತದಾರನ ದೃಷ್ಟಿಯೇ ಬೇರೆ ; ತಮಿಳು ಭಾಷಿಗರ ಚುನಾವಣಾ ಸಂಸ್ಕೃತಿಯೇ ಬೇರೆ. ಒಬ್ಬ ಪಶ್ಚಿಮ; ಮತ್ತೊಬ್ಬ  ಪೂರ್ವ.   ನಾವು ಎರಡೂ ರಾಜ್ಯಗಳಲ್ಲಿ ಈವರೆಗೆ ಮೂರು ಬಾರಿ ಸಮೀಕ್ಷೆಗಾಗಿ ಸಂಚರಿಸಿದ್ದುಂಟು.  ನಾವು ಕಂಡಂತೆ ಕೇರಳ ಮತದಾರ ಮೌನಿ . ತಮಿಳು ಮತದಾರ  ಬಾಯಿ ಮುಚ್ಚಿರುವುದೇ ಕಡಮೆ.

    ಕೇರಳದ ಮತದಾರನ ಮನಸ್ಸಿನಲ್ಲಿ ಏನಿದೆ ಅಥವಾ ಏನಿತ್ತು ಎಂದು ಫಲಿತಾಂಶ ಬಂದ ಬಳಿಕ ತಿಳಿಯಬಹುದೇ ವಿನಃ ಮುಂಚೆ ತಿಳಿಯುವುದು ಕಷ್ಟಸಾಧ್ಯ.   ತಮಿಳುನಾಡಿನ ಜನ ಹೀಗಲ್ಲ.  ಚುನಾವಣಾ ವಿಷಯದಲ್ಲಂತೂ ಅವರು ವ್ಯಾಖ್ಯಾನಕಾರರು ಮತ್ತು ವಾಗ್ಗೇಯಕಾರರು. ಇದು ವರದಿಗಾರರಾದ ನಮ್ಮ ಅನುಭವ.

    ಪ್ರಸ್ತುತ  ಕೇರಳದ ವಿದ್ಯಮಾನಗಳು ಹೀಗೆಯೇ ಇದೆ.  ಇನ್ನೇನು ಚುನಾವಣೆ ಮನೆಬಾಗಿಲಿಗೇ ಬರುವಂತಿದೆ ಎನ್ನುವುದು ಖಚಿತವಾದರೂ ಕೇರಳದ ಮತದಾರ ನಿರ್ಲಿಪ್ತ ನಂತೆಯೇ ಕಾಣ್ತಿದ್ದಾನೆ. ರಸ್ತೆ  ಗೋಡೆಗಳು ಸ್ವಚ್ಛವಾಗಿವೆ. ರಾಜಕೀಯ ಪಕ್ಷಗಳ ಕಚೇರಿ ಬಾಗಿಲು ಇನ್ನೂ ತೆರೆದಂತಿಲ್ಲ.  ಭಿತ್ತಿಪತ್ರಗಳು ಕೈಗೆ ಸಿಕ್ಕಿಲ್ಲ.  ರಸ್ತೆ , ಬಜಾರು, ಸಂತೆಗಳಲ್ಲಿ ಗುಂಪುಗಳಾಗಿ ಪಕ್ಷಗಳ ಕಾರ್ಯಕರ್ತರು ಸೇರುತ್ತಿಲ್ಲ.

    ಹೋಲಿಕೆಗಾಗಿ ಉಲ್ಲೇಖಿಸಬಹುದಾದರೆ ತಮಿಳುನಾಡಿನಲ್ಲಿ ಮೊನ್ನೆ  ಜೈಲಿನಿಂದ ಹೊರ ಬಂದ ಚಿನ್ನಮ್ಮ  ಉರುಫ್ ಶಶಿಕಲಾ ಬೆಂಗಳೂರಿನಿಂದ ಚೆನ್ನೈ ತಲುಪುವುದರೊಳಗಾಗಿ
    ಇಡೀ ತಮಿಳುನಾಡು ಮತದಾರರಲ್ಲಿ ಕೋಲಾಹಲ ಕಾತರ ಎದ್ದು ಕಂಡಿತ್ತು. ಅಮೆರಿಕೆಯ ಟ್ರಂಪ್ ಚುನಾವಣೆಗೆ ಮೀರಿದ ಪ್ರಚಾರ ಚಿನ್ನಮ್ಮನಿಗೆ ದಕ್ಕಿತ್ತು. 

    ನಿರ್ಲಿಪ್ತ ಸ್ವಭಾವದ ಮತದಾರ

    ಕೇರಳ ಜನರ ನಡೆ ನುಡಿ ಹಾಗೂ ಬದುಕಿನ ರೀತಿ ನೀತಿಯೇ ಹೀಗೆ.  ಬೇರೆಯವರ ವಿಷಯಕ್ಕೆ ತಲೆ ಹಾಕದ ಜನ ಇವರು.  ಇಡೀ ದೇಶದಲ್ಲಿ ಶಾಂತಿಯುತ ಮತ್ತು ವ್ಯವಸ್ಥಿತವಾಗಿ ಚುನಾವಣೆಗಳು ನಡೆಯುವ ರಾಜ್ಯಗಳಲ್ಲಿ ಕೇರಳ ಮೊದಲನೆಯದು. ಮತಗಟ್ಟೆಗಳ ಮೇಲಿನ ದಾಳಿ, ಇಲ್ಲವೇ ಪಕ್ಷಗಳ ಗುಂಪು ಘರ್ಷಣೆ ಕೇರಳದಲ್ಲಿ ಅತಿ ಕಡಿಮೆ.  ಜನ ಬಾಹುಳ್ಯವಿದ್ದರೂ ಒಂದೇ ಹಂತದ  ಮತದಾನ ಮಲೆಯಾಳದ ಪರಿಪಾಠ.  ಚುನಾವಣಾ ಆಯೋಗಕ್ಕೆ ಕೇರಳವೆಂದರೆ ನಿಶ್ಚಿಂತೆ.

    ಮತದಾರರು ನಿರ್ಲಿಪ್ತರೆಂದ ಮಾತ್ರಕ್ಕೆ ರಾಜಕೀಯ ನಾಯಕರು ಹರಿಶ್ಚಂದ್ರರೆಂದೇನೂ ಅರ್ಥವಲ್ಲ. ಇತ್ತೀಚಿನ ಚಿನ್ನದ ರಹಸ್ಯ ರವಾನೆಯ ತಿರುವನಂತಪುರದ ಪ್ರಕರಣಗಳು ನಾಗರಿಕ ಸಮಾಜ ತಲೆತಗ್ಗಿಸುವಂತಹುದು. ಕೆಲವು ರಾಜಕೀಯ ನಾಯಕರು ವಂಚನೆ ಮತ್ತು ಭ್ರಷ್ಟಾಚಾರದಲ್ಲಿ ವಿಶ್ವ ಖ್ಯಾತಿ ಗಳಿಸಿದವರು ಕೇರಳದಲ್ಲಿದ್ದಾರೆ.

    ಯುಡಿಎಫ್ v/s ಎಲ್ ಡಿ ಎಫ್

    ಕೇರಳದ ಮುಂಬರುವ ಚುನಾವಣೆಗಾಗಿ ಸಿದ್ಧತೆ ನಡೆಸಿರುವ ಪ್ರತಿಪಕ್ಷವೆಂದರೆ ಯುಡಿಎಫ್ ಒಕ್ಕೂಟದ ನಾಯಕತ್ವ ವಹಿಸಿಕೊಂಡಿರುವ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ.  ಹೆಸರಿಗೆ ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್ ಎನ್ನುವ ಶಿರೋನಾಮೆ ಇದ್ದರೂ ಕಾಂಗ್ರೆಸ್ಸಿನದೇ ಇಲ್ಲಿ ಪಾರುಪತ್ಯ.  ಕಾಂಗ್ರೆಸ್ ಜೊತೆ ಕೈಜೋಡಿಸಿರುವ ಯುಡಿಎಫ್ ನ ಉಳಿದ ಅಂಗ ಪಕ್ಷಗಳೆಂದರೆ ಮುಸ್ಲಿಮ್ ಲೀಗ್, ಕೇರಳ ಕಾಂಗ್ರೆಸ್ (ಜೋಸೆಫ್ ಪಂಗಡ) ಆರ್ ಎಸ್ ಪಿ (ರೆವಲ್ಯೂಷನರಿ ಸೋಷಲಿಸ್ಟ್ ಪಕ್ಷ ) ಮತ್ತು ಕೆಲವು ಸ್ಥಳೀಯ ಪಕ್ಷಗಳು.  ಯುಡಿಎಫ್ – ಇದು ಚುನಾವಣೆಯ ಮುಂಚೆಯೇ ನಿರ್ದಿಷ್ಟವಾಗಿ ಒಂದಾಗುವ ಸಂಘಟನೆ.  ಕಳೆದ  9 ವರ್ಷಗಳಿಂದ ಅಧಿಕಾರಕ್ಕೆ ಬರಲು ಯುಡಿಎಫ್ ಕೇರಳದಲ್ಲಿ ವಿಫಲ ಪ್ರಯತ್ನ ಮುಂದುವರಿಸಿದೆ.

    ಇನ್ನು ಉಳಿದದ್ದು ಈಗ ಆಡಳಿತದಲ್ಲಿರುವ ಎಡಪಂಥೀಯ ಲೆಫ್ಟ್ ಡೆಮಾಕ್ರೆಟಿಕ್ ಒಕ್ಕೂಟ (ಎಲ್ ಡಿ ಎಫ್ ) ಎಡಪಂಥೀಯ ಎಲ್ ಡಿ ಎಫ್ ನ  ಪಕ್ಷಗಳೆಂದರೆ ಕಮ್ಯುನಿಸ್ಟ್ (ಮಾರ್ಕ್ಸಿಸ್ಟ್) ಪಕ್ಷ (ಸಿಪಿಎಂ),  ಸಿಪಿಐ, ಇಂಡಿಯನ್ ನ್ಯಾಷನಲ್ ಲೀಗ್ ಮತ್ತು ಕೇರಳ ಕಾಂಗ್ರೆಸ್(ಎಂ)

    ಅಂಗ ಪಕ್ಷಗಳು ಸೇರಿದಂತೆ ಆಡಳಿತಾರೂಢ ಎಲ್ ಡಿ ಎಫ್ ನಲ್ಲಿ  93 ಶಾಸಕರಿದ್ದಾರೆ.  ಪ್ರತಿಪಕ್ಷವಾಗಿ ಯುಡಿಎಫ್ ಶಾಸಕರ
    ಸಂಖ್ಯೆ 47. ಕೇರಳ ವಿಧಾನ ಸಭೆಯ ಶಾಸಕರ ಒಟ್ಟು ಸಂಖ್ಯೆ 140.  ಕರ್ನಾಟಕದ  224 ಶಾಸಕರ ವಿಧಾನಸಭೆಗೆ ಹೋಲಿಸಿದರೆ ಕೇರಳ ಸಂಖ್ಯೆಯಲ್ಲಿ ಚಿಕ್ಕದು.

    ಚುನಾವಣೆಯ ಸಂದರ್ಭದಲ್ಲಿ ಒಗ್ಗೂಡುವ ಕೇರಳದ ರಾಜಕೀಯ ಪಕ್ಷಗಳು ಭದ್ರತೆ ಮತ್ತು ಅಸ್ತಿತ್ವ ಕಾಪಾಡಿಕೊಳ್ಳುವ ಸಲುವಾಗಿ ಪಕ್ಷಾಂತರಕ್ಕೆ ಹೆಚ್ಚು ಒತ್ತು ಕೊಡುತ್ತಿಲ್ಲ.  ಹೀಗಾಗಿ ಕಳೆದ ನಲವತ್ತು ವರ್ಷಗಳಿಂದ ಎಡಪಂಥಿಯ ಎಲ್ ಡಿ ಎಫ್ ಅಥವಾ ಕಾಂಗ್ರೆಸ್ ನೇತೃತ್ವದ ಯು ಡಿ ಎಫ್ ಈ ಎರಡೇ ಪಕ್ಷ ಒಕ್ಕೂಟಗಳು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವುದು ಕೇರಳ ರಾಜಕಾರಣದ ವೈಶಿಷ್ಟ್ಯ ಎನ್ನಬಹುದು.

    ಎಲ್ ಡಿಎಫ್ ಮತ್ತು ಯುಡಿಎಫ್ ಗಳಲ್ಲಿ ಪ್ರಧಾನವಾಗಿ ಕಾಣುವ ತತ್ವ ಸಿದ್ಧಾಂತದ  ಸಮಾನ ಕಾರ್ಯ ನೀತಿಯೆಂದರೆ ಜಾತ್ಯತೀತತೆ ಮತ್ತು ಸಮಾಜವಾದಿ ಕಾರ್ಯಕ್ರಮಗಳು. ಎಡಪಂಥೀಯ ರಾಜಕೀಯ ಧೋರಣೆಯ ಎಲ್ ಡಿಎಫ್ ನಲ್ಲಿ ಮಾತ್ರ ಕಮ್ಯೂನಿಸ್ಟ್  ಸಿದ್ಧಾಂತ. ಉಳಿದೆಲ್ಲ ಚಿಂತನೆಗಿಂತ ಹೆಚ್ಚಿನ ಪ್ರಾಧಾನ್ಯತೆ ಇದಕ್ಕಿದೆ.

    ಕೇರಳ ಎಲ್ ಡಿಎಫ್ ನ ಮತ್ತೊಂದು ವಿಶೇಷವೆಂದರೆ ಇಲ್ಲಿನ ಕಮ್ಯೂನಿಸ್ಟ್ ಮಾರ್ಕಿಸ್ಟ್ ಪಕ್ಷ ಪ್ರಾದೇಶಿಕ ಪಕ್ಷ ಎನಿಸುವ ಮಟ್ಟಿಗೆ ಸ್ವಾಯತ್ತತೆ ಮತ್ತು ಸ್ವತಂತ್ರ್ಯ ಕಾಪಾಡಿಕೊಂಡು ಬಂದಿದೆ. ಆಡಳಿತ ಕೈಯಲ್ಲಿರುವ ಕಾರಣ ಕೇಂದ್ರಮಟ್ಟದ ಸಿಪಿಎಂ ವರಿಷ್ಠರು ಕೇರಳ ಕಮ್ಯುನಿಸ್ಟರ ಅಧೀನರು ಎಂದರೂ  ಸರಿಯಾದೀತು.

    ಮುಂಬರುವ ಚುನಾವಣೆಯಲ್ಲಿ ಯುಡಿಎಫ್ ಒಕ್ಕೂಟ ಎಲ್ ಡಿಎಫ್ ಗೆ ತೀವ್ರ  ಹೆದರಿಕೆ ಹುಟ್ಟಿಸಿದಂತಿದೆ ಇಂದಿನ ಸ್ಥಿತಿ.

    ಬೂದಿ ಮುಚ್ಚಿದ ಕೆಂಡ  – ಶಬರಿಮಲೈ

    ಕೇರಳ ವಿಧಾನಸಭೆಯ ಈ ಬಾರಿಯ ಚುನಾವಣೆಯಲ್ಲಿ ಮತದಾರರ ಮೇಲೆ ನಿಶ್ಚಲವಾಗಿ ಹಾಗೂ ಖಚಿತವಾಗಿ ಪರಿಣಾಮ ಬೀರುವ ವಿವಾದವೆಂದರೆ ಶಬರಿಮಲೈ.ಶಬರಿಮಲೈ ದೇವಾಲಯಕ್ಕೆ ಮಹಿಳೆಯರು ಹೋಗಲು ನಿರ್ಬಂಧವಿಲ್ಲವೆಂದು ಸುಪ್ರೀಂಕೋರ್ಟ್ ಆದೇಶದ ಬಳಿಕ ಕೇರಳದ ಧಾರ್ಮಿಕ ಕ್ಷೇತ್ರದಲ್ಲಿ ನಂಬಿಕೆ ಸಂಪ್ರದಾಯಗಳ ವಿಷಯದಲ್ಲಿ ಭಿನ್ನಾಭಿಪ್ರಾಯಗಳು ಬೃಹತ್ ರೂಪ ತಾಳಿವೆ.

    ಶಬರಿಮಲೈ ವಿವಾದವನ್ನು ಕೇವಲ ಒಂದು ಪುಟ ಇಲ್ಲವೇ ಒಂದು  ದಿನದಲ್ಲಿ ಹೇಳಿ ಮುಗಿಸುವುದು ಅಸಾಧ್ಯ. ಸಂಕ್ಷಿಪ್ತವಾಗಿ ಹೇಳಿ ಮುಗಿಸುವುದಾದರೆ 2018ರ ಸೆಪ್ಟೆಂಬರ್ 20ರಂದು ಸುಪ್ರೀಂಕೋರ್ಟಿನ  ಐದು ನ್ಯಾಯಾಧೀಶರುಗಳ ಪೀಠ ತೀರ್ಪಿತ್ತು  ತಾತ್ಕಾಲಿಕವಾಗಿ ಮಹಿಳೆಯರ ಪ್ರವೇಶವನ್ನು ಎತ್ತಿ ಹಿಡಿದಿದೆ. ಈಗ ಸುಪ್ರೀಂ ಕೋರ್ಟ್ ನ  ಏಳು ನ್ಯಾಯಾಧೀಶರುಗಳ ಮತ್ತೊಂದು ಪೀಠ ಪ್ರಕರಣದ
    ಮರುಪರಿಶೀಲನೆಯತ್ತ ಸಾಗಿದೆ.

    ಈಗ ಚುನಾವಣೆ ಕಾಲ . ಅಂದ ಬಳಿಕ ನಮ್ಮ ಪ್ರಜಾತಂತ್ರದಲ್ಲಿ ರಾಜಕಾರಣ ಮತ್ತು ಧರ್ಮ ಕಾರಣಗಳಿಗೆ ಸಂಘರ್ಷ ಕಾಲವೂ ಹೌದು,  ಪರೀಕ್ಷೆಯ ಕಾಲ ಸಹಿತ ಬಂದಂತಾಗಿದೆ.

    ಕೇರಳದ ರಾಜಕೀಯ ಪಕ್ಷಗಳ ಪೈಕಿ ಕಳೆದ ಎರಡು ಸಾರ್ವತ್ರಿಕ ಚುನಾವಣೆಗಳಲ್ಲೂ ಎಡಪಂಥೀಯ ಒಕ್ಕೂಟಕ್ಕೆ ಜನ ಮನ್ನಣೆ ಸಿಕ್ಕಿತ್ತು. ಮಾರ್ಕ್ಸಿಸ್ಟ್ ಕಮ್ಯುನಿಸ್ಟ್ ನಾಯಕ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಸುಪ್ರಿಂಕೋರ್ಟಿನ ‘ಮುಕ್ತ ನಿರ್ಣಯ’ ಎಡಪಂಥೀಯ ಚಿಂತನೆ ಗಳಿಗೆ ದೊರೆತ ಬೆಂಬಲ ಎಂದು ಭಾವಿಸಿದುದು ಸಹಜವಾಗಿತ್ತು. ಆದರೆ ಧಾರ್ಮಿಕ ಭಾವನೆಗಳು ಜನಮನದ ಮೇಲೆ ಉಂಟುಮಾಡುವ ಪರಿಣಾಮಗಳನ್ನು ಗಂಭೀರವಾಗಿ ಪರಿಗಣಿಸದೇ ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ಪ್ರೋತ್ಸಾಹಿದುದು ತಪ್ಪುಹೆಜ್ಜೆಯಾಯಿತು. 2019ರ  ಜನವರಿ 2ರಂದು ಪ್ರಗತಿಗಾಮಿ ಮಹಿಳೆಯರಿಬ್ಬರು ದೇವಾಲಯಕ್ಕೆ ‘ನುಗ್ಗಿದ್ದು’ ಹಿಂದೂ ಧರ್ಮೀಯರನ್ನು ಕೆರಳಿಸಿತು.  ಪಿನರಾಯಿ ವಿಜಯರಿಗೆ ಕೆಟ್ಟ ಹೆಸರು ಬಂತು.

    ಇದರ ಲಾಭ ಪಡೆದದ್ದು ಕಾಂಗ್ರೆಸ್.  ಎಚ್ಚರಿಕೆಯ ಹೆಜ್ಜೆ ಇಟ್ಟ ಕಾಂಗ್ರೆಸ್ ಹಿಂದೂ ಧರ್ಮೀಯರ ಮನ ಗೆದ್ದಿತ್ತು. ಹೀಗಾಗಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಎಪ್ಪತ್ತು ಸ್ಥಾನಗಳ ಪೈಕಿ ಕಾಂಗ್ರೆಸ್ ಹತ್ತೊಂಬತ್ತು ಸ್ಥಾನ ಗಳಿಸಿತ್ತು.

    ಇದಾದ ಬಳಿಕ ಇತ್ತೀಚಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಂಥೀಯ ಎಲ್ ಡಿ ಎಪ್ ಭಾರಿ ಜಯ ಗಳಿಸಿರುವುದು ಕಾಂಗ್ರೆಸ್ ಗೆ ಚಿಂತೆ ತಂದಿದೆ.ಏತನ್ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಒಂದು ದಿನದ ಭೇಟಿಗಾಗಿ ರಾಜ್ಯಕ್ಕೆ ಬರಲಿದ್ದಾರೆ.

    ಒಟ್ಟಿನಲ್ಲಿ ದೇಶದಲ್ಲಿಯೇ ಅತ್ಯಂತ ಉತ್ತಮ ದರ್ಜೆಯ ಪ್ರಜ್ಞಾವಂತ ಮತದಾರನೆಂಬ ಹೆಸರು ಗಳಿಸಿದ ಮಲೆಯಾಳಿ ಪ್ರಜೆ ಶಬರಿಮಲೈ ವಿವಾದದಿಂದ ವಿಚಲಿತನಾಗಿದ್ದ ನೆಂಬುದು ಶತಸ್ಸಿದ್ಧ. 


    ಎಸ್ .ಕೆ. ಶೇಷಚಂದ್ರಿಕ ನಾಡಿನ ಹಿರಿಯ ಪತ್ರಕರ್ತರು.  ಭಾರತ ಸರಕಾರದ ಕ್ಷೇತ್ರ ಪ್ರಚಾರಾಧಿಕಾರಿಯಾಗಿ, ದೂರದರ್ಶನ, ಆಕಾಶವಾಣಿಯಲ್ಲಿ ಸುದ್ದಿ ಸಂಪಾದಕ, ವಿಶೇಷ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಪತ್ರಿಕಾ ಕಾರ್ಯದರ್ಶಿಯೂ ಆಗಿದ್ದರು.ದಿ ಟ್ರಿಬ್ಯೂನ್ ಪತ್ರಿಕೆಯ ವಿಶೇಷ ವರದಿಗಾರರು ಆಗಿ ಸೇವೆ ಸಲ್ಲಿಸಿದ ಅವರು ಈಗ ಬೆಂಗಳೂರು ನ್ಯೂಸ್ ಬ್ಯೂರೋದ ವಿಶೇಷ ವರದಿಗಾರರು ಹಾಗೂ ಗಾಂಧಿಯನ್ ಥಾಟ್ಸ್ ನ ವಿಸಿಟಿಂಗ್ ಪ್ರೊಫೆಸರ್ ಕೂಡ ಹೌದು.


    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!