18.6 C
Karnataka
Friday, November 22, 2024

    ಭಾರತೀಯ ಭಾಷೆಗಳ ಸಬಲೀಕರಣ ಇಂದಿನ ಅಗತ್ಯ

    Must read

    ಜಗತ್ತಿನಲ್ಲಿ ಮಾನವನನ್ನು ಒಗ್ಗೂಡಿಸುವ ಹಲವು ಸಾಧನಗಳು ಇರಬಹುದು. ಗಡಿ, ಸಮಾನ ಶತ್ರು, ಧರ್ಮ, ಸಿದ್ಧಾಂತಗಳು.. ಹೀಗೆ. ಆದರೆ ಈ ಎಲ್ಲಕ್ಕಿಂತ ಸಹಜವೂ, ಬಲಶಾಲಿಯೂ ಆಗಿರುವ ಸಾಧನ ಎಂದರೆ “ನುಡಿ” ಇಬ್ಬರು ಅಪರಿಚಿತರ ನಡುವೆ ಕೂಡಾ “ಇವ ನಮ್ಮವ” ಎಂದೆನಿಸುವಂತೆ ಮಾಡುವ ಶಕ್ತಿ ನುಡಿಗಿದೆ. ಒಂದೇ ತಾಯ್ನುಡಿಯ ಜನರಾದರಂತೂ ಈ ಬೆಸೆಯುವ ಬಲ ದುಪ್ಪಟ್ಟು ಆಗಿರುತ್ತದೆ. ಇದನ್ನು ನಾವು ಹೊರದೇಶಕ್ಕೆ ಹೋದಾಗ ಸಿಗುವ ನಮ್ಮ ನುಡಿಯವರನ್ನು ಭೇಟಿಯಾದಾಗ ಅನುಭವಿಸಬಹುದು. ಅಲ್ಲವೇ!

    ಇಂತಿಪ್ಪ “ನುಡಿ ಗುರುತ”ನ್ನು ನಗಣ್ಯ ಎನ್ನುವಂತೆ ಮಾಡಿ ಮತ್ತಾವುದೋ ಇದಕ್ಕಿಂತ ಹಿರಿದು ಎಂದು ಅದರ ಆಧಾರದ ಮೇಲೆ ಸಮಾಜ ರೂಪಿಸಲು ಹೋದರೆ ಇಡೀ ದೇಶವೇ ಸೋಲಬೇಕಾಗುತ್ತದೆ.

    ಪಾಕಿಸ್ತಾನ ಧರ್ಮದ ಆಧಾರದ ಮೇರೆಗೆ ಭಾರತದಿಂದ ಸಿಡಿದು ಸ್ವತಂತ್ರ ದೇಶವಾಗಿದ್ದನ್ನು ನಾವೆಲ್ಲರೂ ಬಲ್ಲೆವು. ಈ ಪಾಕಿಸ್ತಾನವು ಪೂರ್ವ ಪಾಕಿಸ್ತಾನ ಹಾಗೂ ಪಶ್ಚಿಮ ಪಾಕಿಸ್ತಾನ ಎನ್ನುವ ಎರಡು ಭಾಗಗಳಾಗಿ ಅಸ್ತಿತ್ವದಲ್ಲಿತ್ತು. ಪಂಜಾಬಿ, ಸಿಂಧ್, ಪಶ್ತೂನ್ ತಾಯ್ನುಡಿಯ ಪಶ್ವಿಮ ಪಾಕಿಸ್ತಾನ ಹಾಗೂ ಬಂಗಾಲಿ ನುಡಿಯ ಪೂರ್ವ ಪಾಕಿಸ್ತಾನಗಳಿಗೆ ಉರ್ದು ಭಾಷೆಯನ್ನು ರಾಷ್ಟ್ರಭಾಷೆ ಮಾಡಲಾಯಿತು. ಇದಕ್ಕೆ ಬಂಗಾಲಿ ಪ್ರದೇಶದಿಂದ ತೀವ್ರವಾದ ಪ್ರತಿರೋಧ ಎದುರಾಯಿತು. ಪ್ರತಿಭಟನೆಗಳು, ಮೆರವಣಿಗೆಗಳು ದಿನಚರಿಯಾದವು. ಇದನ್ನು ಪೊಲೀಸ್ ಹಾಗೂ ಸೈನ್ಯ ಬಳಸಿ ಸರ್ಕಾರ ಹತ್ತಿಕ್ಕಲು ಮುಂದಾಯಿತು. ಫೆಬ್ರವರಿ 21ರಂದು ಢಾಕಾ ನಗರದಲ್ಲಿ ಬಾಂಗ್ಲಾ ನುಡಿಗಾಗಿ ದನಿಯೆತ್ತಿ ಪ್ರತಿಭಟಿಸಿ ಹೋರಾಡಿದವರ ಮೇಲೆ ಗೋಲಿಬಾರ್ ನಡೆದು ಅನೇಕ ಹೋರಾಟಗಾರರು ಗುಂಡಿಗೆ ಬಲಿಯಾಗಿ ಹುತಾತ್ಮರಾದರು. ಈ ಹೋರಾಟ ಕೊನೆಗೆ ಬಾಂಗ್ಲಾ ಭಾಷಿಕ ಪೂರ್ವ ಪಾಕಿಸ್ತಾನ, ತಾನೊಂದು ಪ್ರತ್ಯೇಕ ದೇಶವಾಗುವ ಮೂಲಕ ಪರ್ಯವಸಾನವಾಯ್ತು.

    ಬಂಗಾಲಿ ಭಾಷಾ ಹೋರಾಟದಲ್ಲಿ ಮಡಿದವರ ನೆನಪಿಗೆ ಢಾಕಾದಲ್ಲಿ ನಿರ್ಮಾಣವಾಗಿರುವ ಸ್ಮಾರಕ

    1999 ರಲ್ಲಿ ವಿಶ್ವಸಂಸ್ಥೆಯ ಯುನೆಸ್ಕೋ, ಈ ದಿನವನ್ನು ವಿಶ್ವ ತಾಯ್ನುಡಿ ದಿನ ಎಂದು ಆಚರಿಸಲು ಕರೆ ಕೊಟ್ಟಿತು.2000ನೆಯ ವರ್ಷದಿಂದ ಜಗತ್ತಿನ ಎಲ್ಲೆಡೆ ವಿಶ್ವ ತಾಯ್ನುಡಿ ದಿನಾಚರಣೆ ಆಚರಿಸಲಾಗುತ್ತಿದೆ. ಪಾಕಿಸ್ತಾನವು ಉರ್ದುವನ್ನು ರಾಷ್ಟ್ರಭಾಷೆ ಎಂದು ಘೋಷಿಸಿದಾಗ ಸಿಡಿದೆದ್ದ ಪಶ್ಚಿಮ ಪಾಕಿಸ್ತಾನದ ಜನರು ತಮ್ಮ ತಾಯ್ನುಡಿ ಬಂಗಾಳಿಗಾಗಿ ದನಿಯೆತ್ತಿ ಹೋರಾಡಿದರು. ನುಡಿಯ ಮಹತ್ವ ತಿಳಿಯದೆ ಪಾಕಿಸ್ತಾನ 1971ರಲ್ಲಿ ಹೋಳಾಯ್ತು.

    ಭಾರತದ ಭಾಷಾನೀತಿ ಸಂವಿಧಾನದ 17ನೆಯ ಭಾಗದಲ್ಲಿ 343~351ನೆಯ ವಿಧಿಗಳಲ್ಲಿ ಬರೆಯಲಾಗಿದ್ದು, ಹಿಂದೀ ಮತ್ತು ಇಂಗ್ಲಿಷ್ ಭಾಷೆಗಳನ್ನು ಮಾತ್ರವೇ ಈ ದೇಶದ ಆಡಳಿತ ಭಾಷೆಗಳು ಎನ್ನಲಾಗಿದೆ. ಇದರ ಪರಿಣಾಮವಾಗಿ ಹಿಂದಿಯೇತರ ನಾಡುಗಳ ಜನರಿಗೆ ಶಿಕ್ಷಣ, ಉದ್ಯೋಗ, ನ್ಯಾಯದಾನ, ಆಡಳಿತ, ಗ್ರಾಹಕ ಸೇವೆಗಳಲ್ಲಿ ಕೂಡಾ ತಮ್ಮ ನುಡಿ ಇಲ್ಲದ, ಬೇಡಿ ಹೋರಾಡಿ ಪಡೆಯಬೇಕಾದ ದುಃಸ್ಥಿತಿ ಬಂದೊದಗಿದೆ. ಇದನ್ನೆಲ್ಲ ಸರಿ ಮಾಡಲು ಸಂವಿಧಾನದ 17ನೆಯ ಭಾಗಕ್ಕೆ ತಿದ್ದುಪಡಿ ಮಾಡಬೇಕಾಗಿದೆ.

    ನಮ್ಮ ಭಾರತದ ಹಿರಿಮೆ ಅಡಗಿರುವುದೆ ವಿವಿಧತೆಯಲ್ಲಿ.ಕನ್ನಡವೂ ಸೇರಿದಂತೆ ಎಲ್ಲಾ ಭಾಷೆಗಳು ಎಲ್ಲಾ ರಂಗದಲ್ಲೂ ಸಮಾನ ಸ್ಥಾನ ಮಾನ ಪಡೆಯಬೇಕು. ಆಡಳಿತದ ಎಲ್ಲಾ ಹಂತಗಳಲ್ಲೂ ಭಾರತೀಯ ಭಾಷೆಗಳಿಗೆ ಸಮಾನ ಸ್ಥಾನ ಮಾನ ಸಿಗಬೇಕು.ಯಾವ ಭಾಷೆಯೂ ದೊಡ್ಡದಲ್ಲ. ಯಾವುದೂ ಚಿಕ್ಕದಲ್ಲ. ಅವರವರ ತಾಯ್ನಡಿ ಅವರಿಗೆ ದೊಡ್ಡದು. ನುಡಿ ಸಮಾನತೆ ಇಲ್ಲದೆ ಮತ್ಯಾವ ಸಮಾನತೆಯನ್ನು ಕೂಡಾ ಸಾಧಿಸಲು ಆಗಲ್ಲ. ವಿಶ್ವ ತಾಯ್ನುಡಿ ದಿನದಂದು ಭಾರತ ತನ್ನೆಲ್ಲಾ ನುಡಿಗಳಿಗೆ ಸಮಾನ ಸ್ಥಾನಮಾನ ನೀಡಲು ಮುಂದಾಗಲಿ.

    (ಚಿತ್ರ ಸೌಜನ್ಯ: ಮುನ್ನೋಟ ಮಳಿಗೆಯ ಟ್ವಿಟ್ಟರ್ ಪುಟ)


    ಆನಂದ್‌ ಜಿ
    ಆನಂದ್‌ ಜಿ
    “ಡಬ್ಬಿಂಗ್ – ಇದು ಕನ್ನಡಿಗರ ಆಯ್ಕೆ ಸ್ವಾತಂತ್ರದ ಹಕ್ಕೊತ್ತಾಯ” ಹಾಗೂ “ಡಬ್ಬಿಂಗ್ – ಇದು ಕನ್ನಡಪರ” ಪುಸ್ತಕಗಳ ಬರಹಗಾರರು. ಕನ್ನಡಕ್ಕೆ ಡಬ್ಬಿಂಗ್ ತರಬೇಕೆನ್ನುವ ಜಾಗೃತಿಯನ್ನು 2006ರಿಂದಲೂ ಮೂಡಿಸುತ್ತಾ ಬಂದಿದ್ದಾರೆ ಮತ್ತು ಡಬ್ಬಿಂಗ್ ಪರ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಕನ್ನಡ ಕನ್ನಡಿಗ ಕರ್ನಾಟಕ – ಇವುಗಳ ಕುರಿತು ಹತ್ತಾರು ಪುಸ್ತಕಗಳನ್ನು ಹೊರತಂದಿದ್ದಾರೆ. ಬನವಾಸಿ ಬಳಗ ಕನ್ನಡಪರ ಸಂಸ್ಥೆಯ ಹಾಲಿ ಅಧ್ಯಕ್ಷರು ಮತ್ತು “ನುಡಿ ಸಮಾನತೆ ಮತ್ತು ಹಕ್ಕು ಚಳವಳಿ” ಸಂಸ್ಥೆಯ ಉಪಾಧ್ಯಕ್ಷರು. ನಾಡು ನುಡಿ ಕುರಿತಾದ ಜಾಗೃತಿ ಕಾರ್ಯಚಟುವಟಿಕೆಗಳಲ್ಲಿ ತೊಡಗಿದ್ದಾರೆ..
    spot_img

    More articles

    2 COMMENTS

    1. ಆನಂದ್ ಜಿ.ಅವರ ಲೇಖನ ಪ್ರಸ್ತುತತೆಗೆ ಅಗತ್ಯವಾಗಿದೆ ಪ್ರತಿಯೊಬ್ಬರನ್ನು ಚಿಂತನೆಗೆ ಒಡ್ಡು ವ ಲೇಖನ.🙏👌

    LEAVE A REPLY

    Please enter your comment!
    Please enter your name here

    Latest article

    error: Content is protected !!