ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಸುಶಿಕ್ಷಿತ ಸಮಾಜ, ನಾಗರಿಕ ಸಮಾಜ, ಕಲ್ಚರ್ಡ್ ಸೊಸೈಟಿ ಎಂದೆಲ್ಲಾ ನಾವು ಕರೆಯುವುದು ಮಾನವ ಕಲಿತಿದ್ದಾನೆ ಎನ್ನುವ ಕಾರಣಕ್ಕೆ. ಮಾನವನ ವ್ಯಕ್ತಿತ್ವ ಎಂಬುದು ಆತನ ಶಿಕ್ಷಣ ಆದರ್ಶಗಳಿಂದ ಪ್ರತಿಫಲಿತವಾಗಿರುತ್ತದೆ. ಜೀವನವೇ ಶಿಕ್ಷಣವೆಂಬ ಮಾತೂ ಇದೆ. ತನಗರಿವಿದ್ದೂ ಅರಿವಿಗೆ ಬಾರದೆ ನಿರಂತರ ಶಿಕ್ಷಣದಲ್ಲಿ ತೊಡಗುವವನು ಮಾನವ.ಮಾನವ ಬದುಕಿನ ಪ್ರತಿ ಕ್ಷಣವೂ ಒಂದಿಲ್ಲೊಂದು ಪಾಠವನ್ನು ಕಲಿಸುತ್ತಿರುತ್ತದೆ. ಒಟ್ಟಂದದಲಿ ಮನುಷ್ಯನ ಬದುಕು ಪಠ್ಯ ಹಾಗು ಪಾಠಗಳಿಂದ ಆವಕವಾಗಿರುತ್ತದೆ.
ಇಲ್ಲಿ ಮಾನವ ಕಲಿಯುವುದು ಮಾತ್ರವಲ್ಲ ಕಲಿಸುವವನೂ ಆಗಿರುತ್ತಾನೆ. ಇದನ್ನು ದಸರಯ್ಯಗಳ ಪುಣ್ಯಸ್ತ್ರೀ ಬೀರಮ್ಮನ ವಚನಗಳ ಮೂಲಕ ಅನುಸಂಧಾನ ಮಾಡಬಹುದು.
ಪರಿಪೂರ್ಣನಲ್ಲ-ಪ್ರದೇಶಿಕನಲ್ಲ
ನಿರತಿಶಯದೊಳತಿಶಯ ತಾ ಮುನ್ನಲ್ಲ
ಶರಣನಲ್ಲ, ಐಕ್ಯನಲ್ಲ, ಪರಮನಲ್ಲ, ಜೀವನಲ್ಲ
ನಿರವಯನಲ್ಲ ಸಾವಯನಲ್ಲ
ಪರವಿಹವೆಂಬುಭಯದೊಳಿಲ್ಲದವನು
ನಿರಾಲಯ “ನಿಜಗುರು” ಶಾಂತೇಶ್ವರನ ಶರಣನ ನಿಲುವು
ಉಪಮೆಗೆ ತಾನನುಪಮ
ಮಾನವ ತಾ ಕಲಿತಷ್ಟೂ ಬಾಹ್ಯ ಪ್ರಪಂಚದ ಅನುಭವಿಕನಾಗಿರುತ್ತಾನೆ. ಆಂತರ್ಯದಲ್ಲಿ ಸಮಾಜಕ್ಕೇ ಏನನ್ನಾದರೂ ಕೊಡಬೇಕೆಂಬ ಕುತೂಹಲದಲ್ಲಿಯೂ ಇರುತ್ತಾನೆ. ಶಿಕ್ಷಣದ ಮೌಲ್ಯವೆಂಬುದು ಏಕಮುಖಿಯಾಗಿರುವುದಿಲ್ಲ ಅದು ಜ್ಞಾನಸಂಪಾದನೆಯ, ಸುಶಿಕ್ಷಿತನಾಗಬೇಕೆನ್ನುವ, ಶಿಕ್ಷಣ ಸಾರ್ವತ್ರಿಕ ಸಂಸ್ಕೃತಿಯೆನ್ನುವ ಮೌಲ್ಯವನ್ನು ಹೇಳುತ್ತದೆ.
ವ್ಯಕ್ತಿ ತನ್ನ ಹುಟ್ಟು ಸಾವುಗಳ ನಡುವಿನ ಪ್ರಕ್ರಿಯೆಯನ್ನು ವಿಶ್ವಾಸದಿಂದ ನಂಬಿಕೆಯಿಂದ ಅತ್ಯಂತ ವಿನಯವಂತಿಕೆಯ ಮೂಲಕ ಸಾಗಿಸಬೇಕಾಗುತ್ತದೆ. ಇದು “ಉಪಮೆಗೆ ತಾನನುಪಮ”ನಾಗುವ “ನಿಜಚೈತನ್ಯಗುರು” ವಾಗುವ “ಪ್ರಯತ್ನ” ಹಾಗು “ಸಾಧನೆ” Task and Achievement ಎನ್ನಬಹುದು.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.