ಶಿಕ್ಷಣ ಕ್ಷೇತ್ರವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಅನೇಕ ಕ್ರಾಂತಿಕಾರಕ ಸುಧಾರಣೆಗಳನ್ನು ರಾಜ್ಯ ಸರಕಾರ ಕೈಗೊಂಡಿದ್ದು, ಈ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರು ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಮಂಗಳೂರಿನಲ್ಲಿಂದು ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ʼಸೆಂಟರ್ ಆಫ್ ಎಕ್ಸ್‌ಲೆನ್ಸ್, ರೀಸರ್ಚ್ ಡಿಸೈನ್ ಲ್ಯಾಬ್ ಮತ್ತು ಇಂಡಸ್ಟ್ರೀ ಹಬ್ʼ ಅನ್ನು ಉದ್ಘಾಟನೆ ಮಾಡಿದ ನಂತರ ಭಾಷಣ ಮಾಡಿದ ಅವರು; ಈಗ ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಸರಕಾರಿ ಮತ್ತು ಖಾಸಗಿ ಕ್ಷೇತ್ರದ ಎಲ್ಲ ಎಂಜಿನಿಯರಿಂಗ್ ಕಾಲೇಜುಗಳ ಸ್ಥಿತಿಗತಿಗಳು ಆಮೂಲಾಗ್ರವಾಗಿ ಸುಧಾರಿಸುತ್ತವೆ ಎಂದರು.
ಪಠ್ಯವೂ ಪರಿಷ್ಕೃತ:ವೃತ್ತಿಪರ ನೈಪುಣ್ಯತೆ ಹಾಗೂ ನಾವಿಣ್ಯತೆಗೆ ಒತ್ತು ನೀಡುವ ನಿಟ್ಟಿನಲ್ಲಿ ಡಿಪ್ಲೊಮಾ ತರಗತಿಗಳ ಪಠ್ಯವನ್ನು ಆಮೂಲಾಗ್ರವಾಗಿ ಬದಲಾವಣೆ ಅಥವಾ ಪರಿಷ್ಕರಣೆ ಮಾಡಲಾಗುತ್ತಿದೆ. ಈಗಾಗಲೇ ಈ ಕೆಲಸ ಪ್ರಗತಿಯಲ್ಲಿದ್ದು ಆದಷ್ಟು ಬೇಗ ಜಾರಿಗೆ ತರಲಾಗುವುದು ಎಂದರು ಉಪ ಮುಖ್ಯಮಂತ್ರಿಗಳು.
ಉದ್ಯೋಗ ಮಾರುಕಟ್ಟೆ, ಜಾಗತಿಕ ಔದ್ಯೋಗಿಕ ಅಗತ್ಯಗಳನ್ನು ಮನದಲ್ಲಿಟ್ಟುಕೊಂಡು ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಸುಧಾರಣೆಗಳನ್ನು ತರಲಾಗುತ್ತಿದೆ. ಅದಕ್ಕಾಗಿ ಡಿಪ್ಲೊಮೋ ಹಾಗೂ ಎಂಜಿಯರಿಂಗ್ ಕಾಲೇಜುಗಳೂ ಸೇರಿದಂತೆ ಉನ್ನತ ಶಿಕ್ಷಣದ ಎಲ್ಲ ಸಂಸ್ಥೆಗಳಿಗೂ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. ಈ ಪೈಕಿ ಕೈಗಾರಿಕೆಗಳಲ್ಲಿಯೇ ಇಂಟ್ರನ್‌ಶಿಪ್‌ಗೆ ಅವಕಾಶ ಕಲ್ಪಿಸುವ ಉದ್ದೇಶವಿದೆ. ಇದೇ ದಿಸೆಯಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಗಮನಾರ್ಹ ಸುಧಾರಣೆಗಳನ್ನು ಜಾರಿ ಮಾಡಲಾಗುತ್ತಿದೆ ಎಂದು ಅವರು ನುಡಿದರು.
ಸಹ್ಯಾದ್ರಿ ಎಂಜಿಯರಿಂಗ್ ಕಾಲೇಜು ಉತ್ತಮ ವ್ಯವಸ್ಥೆ ಇದೆ. ನಮ್ಮ ನಿರೀಕ್ಷೆಯ ಮಟ್ಟದಲ್ಲಿ ಈ ಕಾಲೇಜಿದೆ. ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವೂ ಉನ್ನತ ಮಟ್ಟದಲ್ಲಿದೆ ಎಂಬ ನಂಬಿಕೆ ನನ್ನದು ಎಂದರು ಡಿಸಿಎಂ.
ಖಾಸಗಿ ಶಿಕ್ಷಣ ಸಂಸ್ಥೆಗಳು ಆಡಳಿತದಲ್ಲಿ ಸೋಲುತ್ತಿವೆ. ಹಾಗೆ ಆಗಬಾರದು. ಪಕ್ಕಾ ಯೋಜನೆ ರೂಪಿಸಿಕೊಂಡು ಸಂಸ್ಥೆಯನ್ನು ಮುನ್ನಡೆಸಬೇಕು. ಆಗ ಉತ್ತಮ ಆಡಳಿತದ ಜತೆಗೆ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವೂ ಸಿಗುತ್ತದೆ. ಸಹ್ಯಾದ್ರಿ ಕಾಲೇಜಿನಲ್ಲಿ ಈ ಕೊರತೆ ಕಾಣುತ್ತಿಲ್ಲ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಅಧ್ಯಕ್ಷ ಮಂಜುನಾಥ ಭಂಡಾರಿ ಸೇರಿದಂತೆ ಕಾಲೇಜಿನ ಆಡಳಿತ ಮಂಡಳಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.