23.2 C
Karnataka
Friday, November 22, 2024

    ಸ್ವತಂತ್ರ ಭಾರತದ ಮೊದಲ ಮಹಿಳಾ ಗಲ್ಲು ಶಿಕ್ಷಾರ್ಥಿ

    Must read

    ಲತೇಶ್ ಸಾಂತ

    ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಮಹಿಳೆಯೊಬ್ಬಳು ನೇಣುಗಂಬ ಏರುತ್ತಿದ್ದಾಳೆ. ಹೌದು, ಉತ್ತರಪ್ರದೇಶದ ಅಮ್ರೋಹ ಜಿಲ್ಲೆಯ ಹಸನ್‌ಪುರದ ಶಬನಮ್ ಗೆ ಗಲ್ಲು ಶಿಕ್ಷೆಯಾಗಿದೆ. ಇದೀಗ ಆಕೆ ಉತ್ತರ ಪ್ರದೇಶ ರಾಜ್ಯಪಾಲರಿಗೆ ಕ್ಷಮಾ ದಾನದ ಅರ್ಜಿಯನ್ನು ಮತ್ತೆ ಸಲ್ಲಿಸಿದ್ದಾಳೆ. ಅದೂ ಇತ್ಯರ್ಥವಾಗುವವರೆಗೆ ಆಕೆಗೆ ಗಲ್ಲು ಶಿಕ್ಷೆ ಜಾರಿಯಾಗದು.

    ಅಷ್ಟಕ್ಕೂ ಆಕೆ ಮಾಡಿದ ತಪ್ಪೇನು

    ಒಂದು ಸರ್ಕಾರಿ ಶಾಲೆಯಲ್ಲಿ ಟೀಚರ್ ಆಗಿದ್ದ ಶಬನಮ್, ಇಂಗ್ಲಿಷ್ ಮತ್ತು ಜಿಯಾಗ್ರಫಿ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದ ಹೆಣ್ಣು ಮಗಳು. ಈಕೆ ಸಲೀಂ ಎಂಬ ಒಬ್ಬ ಹುಡುಗನನ್ನ ಪ್ರೀತಿಸುತ್ತಿದ್ದಳು. ಆದರೆ ಆ ಹುಡುಗ ಶಬನಮ್ ಮನೆಯವರಿಗೆ ಇಷ್ಟವಾಗಲಿಲ್ಲ. ಕಾರಣ ಸಲೀಂ ಆರನೇ ಕ್ಲಾಸ್ ನಲ್ಲೇ ಶಾಲೆ ಬಿಟ್ಟಿದ್ದ, ಇವಳು ಡಬಲ್ ಡಿಗ್ರೀ ಹೋಲ್ಡರ್. ಅವನು ಮರದ ಮಿಲ್‌ನಲ್ಲಿ ಕೆಲಸ ಮಾಡ್ತಾ ಇದ್ದ. ಇವಳು ಸರ್ಕಾರಿ ಕೆಲಸದಲ್ಲಿದ್ದಳು. ಅದಲ್ಲದೆ ಸಮುದಾಯದಗಳು ಬೇರೆ ಬೇರೆ. ಶಬನಮ್ ಅವನನ್ನ ಪ್ರೀತಿಸುತ್ತಿದ್ದಳು ಮಾತ್ರವಲ್ಲದೆ ತನ್ನನ್ನು ಆತನಿಗೆ ಅರ್ಪಿಸಿಕೊಂಡಿದ್ದಳು. ಮನೆಯವರ ಈ ವಿರೋಧ ಮುಂದೆ ಯಾರೂ ಕಲ್ಪಸಿಕೊಳ್ಳಲಾಗದ ಒಂದು ಭೀಭತ್ಸ ಘಟನೆಗೆ ನಾಂದಿಯಾಯಿತು.

    ಪೊಲೀಸರ ಪ್ರಕಾರ ಅದು 2008 ಎಪ್ರೀಲ್ 14 ಅಥವಾ 15ರ ಮಧ್ಯರಾತ್ರಿ. ಶಬನಮ್ ತನ್ನ ಮನೆಯವರ ಊಟದಲ್ಲಿ ನಿದ್ರೆ ಮಾತ್ರೆ ಹಾಕಿದ್ದಳು, ಮಲಗಿದ ನಂತರ ಶಬನಮ್ ಕೊಡಲಿಯಲ್ಲಿ ಮನೆಯವರ ತಲೆಕಡಿದು ಹಾಕಿದ್ದಳು. ಒಟ್ಟು ಒಂದು ಮಗುವೂ ಸೇರಿದಂತೆ ಏಳು ಜನರ ಹತ್ಯೆ ಆಗಿ ಹೋಗಿತ್ತು. ಆಗ ಸಲೀಂ ಅವರುಗಳ ತಲೆಗೂದಲು ಹಿಡಿದು ಅವಳಿಗೆ ಸಹಾಯ ಮಾಡಿದ್ದನಂತೆ!. ಈ ಸಂದರ್ಭದಲ್ಲಿ ಅವಳು ಎಂಟು ತಿಂಗಳ ಗರ್ಭಿಣಿಯಾಗಿದ್ದಳು. ಇದಾದ ಐದು ದಿನಗಳ ನಂತರ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಅದೇ ವರ್ಷದ ಡಿಸೆಂಬರ್‌ನಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ್ದಳು.

    2010ರಲ್ಲೇ ಗಲ್ಲು ಶಿಕ್ಷೆ

    ಇವಳು ನಡೆಸಿದ ಈ ಕೃತ್ಯಕ್ಕೆ 2010ರಲ್ಲಿ ಅಮ್ರೋಹದ ಸೆಷನ್ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತು, 2013ರಲ್ಲಿ ಅಲಹಾಬಾದ್ ಹೈಕೋರ್ಟ್ ಅದನ್ನು ಎತ್ತಿಹಿಡಿಯಿತು ಮತ್ತು ನಂತರ 2015ರಲ್ಲಿ ಸುಪ್ರೀಂಕೋರ್ಟ್ ಸಹ ಅವಳ ಶಿಕ್ಷೆ ಕಾಯಂ ಮಾಡಿತು. ಆದರೆ ಅದಾದ ಹತ್ತು ದಿನಗಳಲ್ಲಿ ಅವಳ ಡೆತ್ ವಾರಂಟ್ ಗೆ ಸುಪ್ರೀಂ ಕ್ಷಮಾದಾನಕ್ಕೆ ಅರ್ಜಿ ಹಾಕುವುದಿದ್ದರೆ ಹಾಕಲಿ ಎಂದು ತಡೆಹಿಡಿಯಿತು.

    2015ರ ಸಪ್ಟೆಂಬರ್ ನಲ್ಲಿ ಉತ್ತರಪ್ರದೇಶದ ರಾಜ್ಯಪಾಲರಾಗಿದ್ದ ರಾಮ್ ನಾಯಕ್ ಅವರಲ್ಲಿ ತನ್ನ ಮಗನ ಯೋಗಕ್ಷೇಮಕ್ಕಾಗಿ ತನ್ನನ್ನು ಕ್ಷಮಿಸಿ ಎಂದು ಹಾಕಿದ ಕ್ಷಮಾದಾನದ ಅರ್ಜಿಯನ್ನು ತಿರಸ್ಕರಿಸಲಾಯಿತು. 2016 ರಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೂ ಸಹ ಅವಳ ಅರ್ಜಿ ತಿರಸ್ಕರಿಸಿದ್ದರು. 2020ರ ಜನವರಿಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಜಸ್ಟೀಸ್ ಎಸ್.ಎ.ಬೋಬ್ಡೆ ಅವರ ಪೀಠವೂ ಅವಳ ಗಲ್ಲನ್ನು ಖಾತ್ರಿ ಮಾಡಿತು.

    ಈ ಪ್ರಕರಣದಲ್ಲಿ ಶಬನಮ್, “ಆ ರಾತ್ರಿ ನಾವೆಲ್ಲಾ ಮಲಗಿದ್ದಾಗ ಸಲೀಂ ಮನೆಯವರನ್ನೆಲ್ಲಾ ಕೊಂದಿದ್ದಾನೆ. ನನಗೆ ಈ ವಿಚಾರ ಏನೂ ತಿಳಿದಿಲ್ಲ” ಎನ್ನುತ್ತಿದ್ದಾಳೆ. ಇನ್ನೊಂದೆಡೆ ಸಲೀಂ “ಆಕೆಯೇ ನನ್ನನ್ನು ಕರೆದಳು ಮತ್ತು ನಾನು ಬರುವಷ್ಟರಲ್ಲಿ ಅವರೆಲ್ಲರನ್ನೂ ಕೊಂದು ಹಾಕಿದ್ದಳು” ಎಂದು ವಾದಿಸುತ್ತಿದ್ದಾನೆ. ಇವರೇ ಪರಸ್ಪರ ಕಿತ್ತಾಡುತ್ತಿದ್ದಾರೆ.

    ಸಧ್ಯಕ್ಕೆ ಈ ವಿಚಾರ ಚರ್ಚೆಗೆ ಬರಲು ಕಾರಣ ಕಳೆದ ಮಾರ್ಚ್‌ನಲ್ಲಿ ನಿರ್ಭಯಾ ಹಂತಕರನ್ನು ನೇಣಿಗೇರಿಸಿದ್ದ ಪವನ್ ಕುಮಾರ್ ಅವರು ಭಾರತದ ಏಕೈಕ ಮಹಿಳಾ ಗಲ್ಲು ಶಿಕ್ಷೆಯ ಸೌಲಭ್ಯವಿರುವ ಮಥುರಾದ ಜೈಲಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರೀಕ್ಷಿಸಿದ್ದಾರೆ. ಇದರಿಂದ ಅವರೇ ಇವಳನ್ನು ನೇಣಿಗೇರಿಸುತ್ತಾರೆ ಎಂದೂ ಹೇಳಲಾಗುತ್ತಿದೆ. ಫೆಬ್ರವರಿ 18ರಂದು ಅವಳ ಮಗ ತಾಜ್ ಹಾಕಿದ್ದ ಅರ್ಜಿಯನ್ನೂ ರಾಷ್ಟ್ರಪತಿಗಳು ತಿರಸ್ಕರಿಸಿದ್ದಾರೆ. ಡೆತ್ ವಾರಂಟ್ ಬಿಡುಗಡೆಯಾದ ತಕ್ಷಣ ಅವಳನ್ನು ಗಲ್ಲಿಗೇರಿಸಲಾಗುತ್ತದೆ. ಒಂದು ವೇಳೆ ಹಾಗಾದರೆ, ಶಬನಮ್‌ ಸ್ವತಂತ್ರ ಭಾರತದ ಇತಿಹಾಸದಲ್ಲಿ ಗಲ್ಲಿಗೇರಿದ ಮೊದಲ ಮಹಿಳಾ ಕೈದಿಯಾಗಲಿದ್ದಾಳೆ. ಇವಳ ಜೊತೆ ಕೊಲೆ ಮಾಡಿದ ಸಲೀಂ ಕೂಡ ಮರಣದಂಡನೆಯ ಸಾಲಿನಲ್ಲಿದ್ದಾನೆ.

    ಭಾರತದಲ್ಲಿ ಇವಳೊಬ್ಬಳೇ ಅಲ್ಲದೆ ಇನ್ನೂ ಹನ್ನೆರಡು ಮಹಿಳೆಯರು ಬೇರೆ ಬೇರೆ ಕೇಸ್‌ಗಳಲ್ಲಿ ಶಿಕ್ಷೆ ಪಡೆದು ಮರಣದಂಡನೆಯ ಸಾಲಿನಲ್ಲಿದ್ದಾರೆ.


    ಲತೇಶ್ ಸಾಂತ, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ
    ಪ್ರಥಮ ಬಿ.ಎ, ಪತ್ರಿಕೋದ್ಯಮ ವಿಭಾಗ ವಿದ್ಯಾರ್ಥಿ

    spot_img

    More articles

    1 COMMENT

    LEAVE A REPLY

    Please enter your comment!
    Please enter your name here

    Latest article

    error: Content is protected !!