ಫೆಬ್ರವರಿ 28 ರಂದು ನಮ್ಮ ರಾಷ್ಟ್ರದಲ್ಲಿ “ರಾಷ್ಟ್ರೀಯ ವಿಜ್ಞಾನ ದಿನ”ವನ್ನು ಆಚರಿಸಲಾಗುತ್ತದೆ.ಫೆಬ್ರವರಿ 28,1928 ರಂದು ಸರ್.ಸಿ.ವಿ.ರಾಮನ್‍ರವರು “ರಾಮನ್ ಪರಿಣಾಮ”ವನ್ನು ಕಂಡು ಹಿಡಿದ ದಿನ. ಈ ಸಂಶೋಧನೆಗೆ ರಾಮನ್‍ರಿಗೆ ನೊಬೆಲ್ ಪ್ರಶಸ್ತಿ ದೊರಕಿತು.ಏಷ್ಯಾ ಖಂಡದಲ್ಲಿಯೇ ಭೌತಶಾಸ್ತ್ರಕ್ಕೆ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಮೊದಲ ವಿಜ್ಞಾನಿ.ವಿಜ್ಞಾನ, ರಾಮನ್‍ರ ಜೀವ ಮತ್ತು ಉಸಿರಾಗಿತ್ತು ಎಂದರೆ ತಪ್ಪಾಗಲಾರದು.ಅವರಿಗೆ ವಿಜ್ಞಾನ ಮತ್ತು ವೈಜ್ಞಾನಿಕ ಚಟುವಟಿಕೆಗಳು, ಮನಸ್ಸಿನ ಆಂತರಿಕ ಅವಶ್ಯಕತೆಯನ್ನು ಈಡೇರಿಸುವ ಕಾರ್ಯವಾಗಿತ್ತು ಮತ್ತು ಅದರಲ್ಲಿ ಆನಂದವನ್ನು ಕಂಡ ವ್ಯಕ್ತಿ.
“Science was a personal endeavour, an aesthetic pursuit and above all joyous experience to C. V Raman” – Prof. Ramaseshan”. ಇಂತಹ ಸಂದರ್ಭದಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವದ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ನಿಜವಾಗಲೂ ಸಮಯೋಚಿತ.
ವೈಜ್ಞಾನಿಕ ಮನೋಭಾವ ಬೆಳೆಯಬೇಕು
ಇತ್ತೀಚಿಗೆ ಮದನಪಲ್ಲಿಯ ವಿದ್ಯಾವಂತ ಕುಟುಂಬವೊಂದರಲ್ಲಿ ಮೂಢ ನಂಬಿಕೆಗೆ ಇಬ್ಬರು ಹೆಣ್ಣು ಮಕ್ಕಳು ಬಲಿಯಾದ ಘಟನೆ ಶಿಕ್ಷಣ ವ್ಯವಸ್ಥೆಯಲ್ಲಿ, ಬೋಧಕ ಕ್ರಮದಲ್ಲಿ ನ್ಯೂನ್ಯತೆಗಳಿರುವ ಬಗ್ಗೆ ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ. ವಿಜ್ಞಾನ, ಪಠ್ಯ ಕ್ರಮದಲ್ಲಿ ಕೇವಲ ಒಂದು ಅಧ್ಯಯನದ, ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಓದುವ ಅಥವಾ ಬೋಧನೆಗೆ ಮಾತ್ರ ಸೀಮಿತವಾದ ವಿಷಯವಾಗಿದೆ. ವಿಜ್ಞಾನದ ಶಿಕ್ಷಣ( Science Education ) ವೈಜ್ಞಾನಿಕ ಮನೋಭಾವವನ್ನು ಬೆಳೆಸುವಲ್ಲಿ ವಿಫಲವಾಗಿರುವ ಅಂಶ ಬೆಳಕಿಗೆ ಬರುತ್ತದೆ. ವಿಪರ್ಯಾಸದ ಸಂಗತಿಯೆಂದರೆ, ವಿಜ್ಞಾನ ಮತ್ತು ತಂತ್ರಜ್ಞಾನ ಹೆಚ್ಚು ಪ್ರಗತಿ ಹೊಂದಿರುವ 21 ನೇ ಶತಮಾನದಲ್ಲಿಯೂ ಸಹ ಇಂತಹ ಘಟನೆಗಳು ನಡೆಯುತ್ತವೆ ಎಂದರೆ ನಿಜವಾಗಿಯೂ ಆಶ್ಚರ್ಯಕರ ಮತ್ತು ಭಯಂಕರ.
ಭೌತಿಕ ಮತ್ತು ಪ್ರಾಕೃತಿಕ ಪ್ರಪಂಚದ ವಿದ್ಯಮಾನಗಳಿಗೆ ಸಂಬಂಧಿಸಿದ, ಪಕ್ಷಪಾತವಿಲ್ಲದ ಅವಲೋಕನ ಹಾಗೂ ವ್ಯವಸ್ಥಿತ ಪ್ರಯೋಗಗಳಿಗೆ ಒಳಗೊಳ್ಳುವಂತೆ ಮಾಡುವ ಕ್ರಮಬದ್ಧ ಅಧ್ಯಯನದ ವಿಧಾನವೇ ವಿಜ್ಞಾನ. ಸಾಮಾನ್ಯ ಸತ್ಯಗಳು ಅಥವಾ ಮೂಲಭೂತ ತತ್ವಗಳಕಾರ್ಯಾಚರಣೆಗಳನ್ನು ಒಳಗೊಂಡಂತೆ ನಡೆಸುವ ಜ್ಞಾನಾನ್ವೇಷಣೆಯೇ ವಿಜ್ಞಾನ. ಒಂದು ಅರ್ಥದಲ್ಲಿ ತಾರ್ಕಿಕವಾಗಿ ವಿವರಿಸಬಲ್ಲ ಮತ್ತು ವಿಶ್ವಾಸಾರ್ಹವಾಗಿ ಅನ್ವಯಿಸಬಲ್ಲ ಪ್ರಕಾರದ ಜ್ಞಾನ ಮಂಡಲ.
ಮೂರು ಭಾಗಗಳಾಗಿ ವಿಜ್ಞಾನ
ವಿಶಾಲವಾಗಿ ಹೇಳುವುದಾದರೆ, ವಿಜ್ಞಾನವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು. ಮೊದಲನೆಯದಾಗಿ, ಅಜೈವಿಕ ವಿಶ್ವದ ಅಧ್ಯಯನವನ್ನು ಒಳಗೊಂಡಿರುವ ಭೌತಿಕ ವಿಜ್ಞಾನ. ಉದಾಹರಣೆ ಕ್ಷೇತ್ರಗಳು : ಖಗೋಳ ಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಭೂಮಿಯ ವಿಜ್ಞಾನ ಇತ್ಯಾದಿ. ಎರಡನೆಯದಾಗಿ ಜೈವಿಕ ವಿಜ್ಞಾನ. ಉದಾಹರಣೆ : ಜೀವ ಶಾಸ್ತ್ರ, ಕೃಷಿ ವಿಜ್ಞಾನ, ಜೀವ ರಸಾಯನ ಶಾಸ್ತ್ರ ಮುಂತಾದವುಗಳು. ಮೂರನೆಯ ಶಾಖೆ, ಸಾಮಾಜಿಕ ವಿಜ್ಞಾನ. ಉದಾಹರಣೆ : ಅರ್ಥಶಾಸ್ತ್ರ, ಸಮಾಜಶಾಸ್ತ್ರ ಇತ್ಯಾದಿ. ಹೀಗೆ ವಿಜ್ಞಾನ, ಮೇಲೆ ತಿಳಿಸಿರುವಂತೆ, ಭೌತಿಕ ಮತ್ತು ನೈಸರ್ಗಿಕ ಪ್ರಪಂಚದ ವಿದ್ಯಮಾನಗಳನ್ನು ತರ್ಕ ಬದ್ಧವಾಗಿ ವಿವರಿಸಬಲ್ಲ ಜ್ಞಾನದ ಗಣಿ.
ಜ್ಞಾನವನ್ನು ಗಳಿಸುವ ವ್ಯವಸ್ಥಿತವಾದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಯಾವುದೇ ವ್ಯಕ್ತಿಯನ್ನು ವಿಜ್ಞಾನಿ ಎಂದು ಕರೆಯುತ್ತಾರೆ.ಸತ್ಯಾನ್ವೇಷಣೆಗೆ ವಿಜ್ಞಾನದ ಮಾರ್ಗವನ್ನು ಆರಿಸಿಕೊಳ್ಳುವ ಮತ್ತು ವೈಜ್ಞಾನಿಕವಾಗಿ ವಿಶ್ಲೇಷಿಸುವ ವ್ಯಕ್ತಿ. ಯಾವುದೇ ಒಂದು ಕ್ರಿಯೆ ಪುನರಾವರ್ತನೆಗೊಳ್ಳ ಬೇಕಾದದ್ದು ವಿಜ್ಞಾನದ ಮೂಲ ಲಕ್ಷಣ.
ಬಹಳ ಜನಪ್ರಿಯವಾದ ಮತ್ತು ಹಲವಾರು ಜನಸಾಮಾನ್ಯರಿಗೂ ತಿಳಿದಿರುವ ನ್ಯೂಟನ್‍ನ ಸೇಬು ಹಣ್ಣಿನ ಪ್ರಕರಣವನ್ನು ಗಮನಿಸಿ. ನ್ಯೂಟನ್, ಮೇಲಿಂದ ಸೇಬು ಬೀಳುವುದನ್ನು ಪರಿಶೀಲಿಸಿದ. ಜೊತೆಗೆ ಯಾವುದೇ ವಸ್ತುವನ್ನು ಮೇಲಕ್ಕೆ ಎಸೆದಾಗ, ಅದು ಪುನಃ ಕೆಳಗೆ ಬೀಳುವುದನ್ನು ಗಮನಿಸಿದ. ಪ್ರಯೋಗಗಳ ಮೂಲಕ ಖಚಿತಪಡಿಸಿಕೊಂಡ ನಂತರ, ಗುರುತ್ವಾಕರ್ಷಣ ತತ್ವವನ್ನು ಪ್ರತಿಪಾದಿಸಿದ. ಯಾವುದೇ ಎರಡು ದ್ರವ್ಯ ರಾಶಿಗಳ ನಡುವೆ ಆಕರ್ಷಣಾ ಬಲವಿರುತ್ತದೆ ಮತ್ತು ಈ ಬಲವು ದ್ರವ್ಯರಾಶಿಗಳ ಗುಣಲಬ್ಧಕ್ಕೆ ನೇರ ಅನುಪಾತದಲ್ಲಿದ್ದು, ಅಂತರದ ವರ್ಗಕ್ಕೆ ವಿಲೋಮಾನುಪಾತವಾಗಿರುತ್ತದೆ ಎಂಬ ವಿಷಯವನ್ನು ಕಂಡುಕೊಂಡ. ಸೂರ್ಯನ ಸುತ್ತಲೂ ಗ್ರಹಗಳು ( ಭೂಮಿಯೂ ಒಳಗೊಂಡಂತೆ ) ಪ್ರದಕ್ಷಿಣೆ ಹಾಕಲು, ಭೂಮಿಯ ಸುತ್ತಲೂ ಚಂದ್ರನು ಪ್ರದಕ್ಷಿಣೆ ಹಾಕಲು ಗುರುತ್ವಾಕರ್ಷಣೆ ಕಾರಣ ಎಂಬ ಅಂಶ, ನ್ಯೂಟನ್‍ನ ಗುರುತ್ವಾಕರ್ಷಣೆ ತತ್ವದ ಮೂಲಕ ಬೆಳಕಿಗೆ ಬಂದಿತು. ಈ ಅಂಶ ಸಾರ್ವತ್ರಿಕ. ಯಾರು ಬೇಕಾದರೂ ಪ್ರಯೋಗ ನಡೆಸಿ ನೋಡ ಬಹುದಾಗಿದೆ.ಇದು ವಿಜ್ಞಾನದ ವೈಶಿಷ್ಠ್ಯ.
ನಿತ್ಯ ಜೀವನದಲ್ಲಿ ಹಾಸು ಹೊಕ್ಕಾದ ವಿಜ್ಞಾನ
ವಿಜ್ಞಾನ ನಮ್ಮ ನಿತ್ಯ ಜೀವನದಲ್ಲಿ ಹಾಸು ಹೊಕ್ಕಾಗಿದೆ.ವಿಜ್ಞಾನವಿಲ್ಲದೇ ಜೀವನವೇ ಇಲ್ಲ. ನಮ್ಮ ದಿನ ನಿತ್ಯದ ಪ್ರತಿಯೊಂದೂ ಕೆಲಸದಲ್ಲಿ ನಮಗೆ ಗೊತ್ತಿದ್ದೂ, ಗೊತ್ತಿಲ್ಲದೆಯೊ ವಿಜ್ಞಾನದ ತತ್ವಗಳನ್ನು ಬಳಸುತ್ತೇವೆ.ನಮ್ಮ ಜೀವದ ಪ್ರತಿಯೊಂದು ಅಂಶವು ಸಹ ಒಂದಲ್ಲಾ ಒಂದು ರೀತಿಯಲ್ಲಿ ವಿಜ್ಞಾನದಿಂದ ಪ್ರಭಾವಗೊಂಡಿದೆ.ವಿಜ್ಞಾನವು ಪ್ರಪಂಚವನ್ನು ಸಂಕುಚಿತಗೊಳಿಸಿದೆ.
ಸಮಾಜದಲ್ಲಿ ಬದಲಾವಣೆ ತರ ಬೇಕಾದರೆ, ಶಿಕ್ಷಣ ಮುಖ್ಯ. ಅದರಲ್ಲೂ, ಸಮಾಜದಲ್ಲಿ ತರ್ಕ ಬದ್ಧವಾಗಿ, ವಿವೇಚನಾ ಶಕ್ತಿಯುಳ್ಳ ವಿದ್ಯಾರ್ಥಿಗಳನ್ನು, ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ವಿಜ್ಞಾನ ಪ್ರಮುಖ ಪಾತ್ರವನ್ನು ವಹಿಸುತ್ತದೆ.ನಮ್ಮ ಚಿಂತನೆಗಳನ್ನು ವಿಶಾಲವಾಗಿ ಮೂರು ಭಾಗಗಳಾಗಿ ವಿಂಗಡಿಸಬಹುದು.
1) ವೈಜ್ಞಾನಿಕ ( Scientific)
2) ಅವೈಜ್ಞಾನಿಕ ( Unscientific)
3) ಮೂಢನಂಬಿಕೆ ( Superstition)
ವಿಜ್ಞಾನದ ತತ್ವಗಳಿಗೆ ಸಂಬಂಧಿಸಿದ ಅಥವಾ ವಿಜ್ಞಾನದ ತತ್ವಗಳನ್ನು ಪ್ರದರ್ಶಿಸುವ ಚಿಂತನೆಗಳಿಗೆ ವೈಜ್ಞಾನಿಕ ಎಂದು ಕರೆಯಬಹುದು.ವೈಜ್ಞಾನಿಕ ಚಿಂತನೆಗಳನ್ನು ವಿಜ್ಞಾನದ ಸೂತ್ರಗಳಿಗೆ ಹಾಗೂ ಪ್ರಯೋಗಗಳಿಗೆ ಅಳವಡಿಸಬಹುದು.ಅಂದರೆ ವಿಜ್ಞಾನದ ತಳಹದಿ ಇರುವಂಥದ್ದು.
ವಿಜ್ಞಾನದ ಸೂತ್ರ, ಪ್ರಯೋಗಗಳಿಗೆ ಒಳಪಡದೆ ವಿಜ್ಞಾನದ ತತ್ವಗಳ ಹಂಗಿಲ್ಲದೆಯೂ, ತಿಳಿವಳಿಕೆಯಿಲ್ಲದೆಯೂ, ಸ್ವತಂತ್ರವಾಗಿ ಆಚರಣೆಯಲ್ಲಿಇರುವಂಥಾದ್ದು ಮತ್ತು ವೈಜ್ಞಾನಿಕ ತತ್ವಗಳಿಗೆ ವಿರುದ್ಧವಾದದ್ದು ಅವೈಜ್ಞಾನಿಕ ಎಂದು ಕರೆಯಬಹುದು.ಯಾವ ಚಿಂತನೆಗಳನ್ನು ವಿಜ್ಞಾನದ ತತ್ವಗಳು ಮತ್ತು ಪ್ರಯೋಗಗಳ ಮೂಲಕ ಸಂಪೂರ್ಣ ತಪ್ಪೆಂದು ದೃಢಪಡಿಸಬಹುದೋ ಅಥವಾ ರುಜುವಾತು ಮಾಡಬಹುದೋ ಅಂತಹ ಚಿಂತನೆಗಳನ್ನು ಮೂಢನಂಬಿಕೆ ಅಥವಾ ಮೌಢ್ಯಎಂದು ಕರೆಯಬಹುದು. ಮೂಢನಂಬಿಕೆಗಳಿಗೆ ಯಾವುದೇ ಆಧಾರವಿರುವುದಿಲ್ಲ.ಸಮಾಜದಲ್ಲಿ ನಡೆಯುವ ಎಲ್ಲ ಕ್ರಿಯೆಗಳನ್ನುವೈಜ್ಞಾನಿಕ ದೃಷ್ಟಿಯಿಂದಲೇ ನೋಡ ಬೇಕಾದ ಅವಶ್ಯಕತೆಯಿಲ್ಲ. ಆ ರೀತಿಯಾದ ಯಾವ ನಿಯಮವೂ ಇಲ್ಲ. ನಮ್ಮ ಸುತ್ತ ಮುತ್ತ ವೈಜ್ಞಾನಿಕವಲ್ಲದ ಎಷ್ಟೋ ವಿಷಯಗಳಿವೆ.ಅವೈಜ್ಞಾನಿಕ ಚಿಂತನೆಗಳಿಗೆ, ಪದ್ಧತಿಗಳಿಗೆ ಕೆಲವು ಉದಾಹರಣೆಗಳನ್ನು ಅವಲೋಕಿಸಿ, ವೈಜ್ಞಾನಿಕ ಮನೋಭಾವ ಮತ್ತು ಮೂಢನಂಬಿಕೆಗಳ ಬಗ್ಗೆ ತಿಳಿಯಲು ಪ್ರಯತ್ನಿಸೋಣ.
ಉದಾಹರಣೆಗೆ, ಹಬ್ಬ ಹರಿ ದಿನಗಳಲ್ಲಿ ಹೊಸ ಬಟ್ಟೆಯನ್ನು ಧರಿಸುತ್ತೇವೆ.ಇದಕ್ಕೆ ಯಾವುದೇ ವೈಜ್ಞಾನಿಕ ತಳಹದಿಯಿಲ್ಲ. ನಮ್ಮ ಸಂತೋಷಕ್ಕೆ, ಖುಷಿಗೆ ಅಳವಡಿಸಿಕೊಂಡಿರುವ ಪದ್ಧತಿ.ಅದೇ ರೀತಿ, ದೀಪಾವಳಿ ಹಬ್ಬದಲ್ಲಿ ಪಟಾಕಿ ಹೊಡೆಯುತ್ತೇವೆ.ಯುಗಾದಿ ಹಬ್ಬದಲ್ಲಿ ಬೇವು ಬೆಲ್ಲ ತಿನ್ನುತ್ತೇವೆ. ತಾತ್ವಿಕವಾಗಿ, ಜೀವನದಲ್ಲಿ ಸಿಹಿ ಕಹಿ ಘಟನೆಗಳು / ಸಂದರ್ಭಗಳು ಬರುವುದು ಸರ್ವೇ ಸಾಮಾನ್ಯ.ಸುಖ – ದುಃಖಎರಡನ್ನೂ ಅನುಭವಿಸಲು ಸಿದ್ದವಿರಬೇಕು, ಎಂದು ಸಾಂಕೇತಿಕವಾಗಿ ತಿಳಿಹೇಳುವ ಪದ್ಧತಿ ಎಂದು ಕೆಲವರು ವ್ಯಾಖ್ಯಾನಿಸುತ್ತಾರೆ. ಆದರೆ, ವಿಜ್ಞಾನದ ತಳಹದಿಯಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ವಿಜ್ಞಾನದ ನೆಲೆಯಲ್ಲಿ ನೋಡುವ ಅವಶ್ಯಕತೆಯೂ ಇಲ್ಲ. ಹೆಚ್ಚು ನೀರು ಬೇಕಾಗಿರುವ ಕಬ್ಬಿನ / ಭತ್ತದ ಬೆಳೆಯನ್ನು ಕಡಿಮೆ ಮಳೆ ಹಾಗೂ ನೀರಿನ ಅಭಾವವಿರುವ ಪ್ರದೇಶದಲ್ಲಿ ಬೆಳೆಯುವುದು ನಿಜವಾಗಿಯೂ ಅವೈಜ್ಞಾನಿಕ. ಅದೇ ರೀತಿ, ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಕೊಳವೆಗಳ ಮೂಲಕ ನೀರು ಹಾಯಿಸುವ ಬದಲು, ತೆರೆದ ಕಾಲುವೆಗಳ ಮೂಲಕ ನೀರನ್ನು ಹರಿಸುವುದು, ಅವೈಜ್ಞಾನಿಕ ಪದ್ಧತಿ. ಕೋವಿಡ್ 19, ನಮ್ಮನ್ನು ಕಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ.ಈ ಸಂದರ್ಭದಲ್ಲಿ, ಹಣೆಬರಹವಿದ್ದಂತೆ ನಡೆಯುತ್ತದೆ ಎಂದು ತಾತ್ಸಾರ ಮಾಡಿ ಮಾಸ್ಕ್ ಧರಿಸದಿರುವುದು ಅವೈಜ್ಞಾನಿಕ ಅಥವಾ ಮೂಢನಂಬಿಕೆಯಾಗ ಬಹುದು.ಸಮಾಜಕ್ಕೆ ತೊಂದರೆಯಾಗದಂತ ಅವೈಜ್ಞಾನಿಕ ಪದ್ಧತಿ / ಆಚರಣೆಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ.
ವೈಜ್ಞಾನಿಕ ಮನೋಭಾವ
ಮುಕ್ತ ಮನಸ್ಸುಳ್ಳ, ನಿಖರವಾದ ಜ್ಞಾನವನ್ನು ಪಡೆಯುವ ಆಸೆಯುಳ್ಳ, ಆತ್ಮ ವಿಶ್ವಾಸದಿಂದ ಜ್ಞಾನವನ್ನು ಹುಡುಕುವ, ಪರಿಶೀಲಿಸಿದ ಹಾಗೂ ದೃಢಪಟ್ಟಿರುವ ಜ್ಞಾನದ ಮೂಲಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬ ಅಚಲ ನಂಬಿಕೆಯುಳ್ಳ ವರ್ತನೆಗೆ ವೈಜ್ಞಾನಿಕ ಮನೋಭಾವ ಎಂದು ಕರೆಯಬಹುದು.
ಸರಳವಾಗಿ ಹೇಳುವುದಾದರೆ, ಪ್ರತಿಯೊಂದು ಕ್ರಿಯೆ / ವಿಷಯವನ್ನು ಸ್ವತಃ ನೋಡಿ, ಮಾಡಿ ಕಲಿಯುವ, ಪ್ರಶ್ನೆಗಳನ್ನು ಕೇಳಿ ನಿಖರವಾದ ಜ್ಞಾನವನ್ನು ಪಡೆದುಕೊಳ್ಳುವ, ಎಲ್ಲ ವಿಷಯಗಳಿಗೂ ಪುರಾವೆಯನ್ನು ಕೇಳುವ, ಪ್ರಯೋಗಗಳನ್ನು ಮಾಡುವ ಮೂಲಕ ಖಚಿತಪಡಿಸಿಕೊಳ್ಳುವ ನಡವಳಿಕೆಯನ್ನು ವೈಜ್ಞಾನಿಕ ಮನೋಭಾವನೆ ಎಂದು ಕರೆಯಬಹುದು. ವೈಜ್ಞಾನಿಕ ಮನೋಭಾವ ಇರುವ ವ್ಯಕ್ತಿಗೆ ಈ ಕೆಳಗಿನ ಲಕ್ಷಣಗಳಿರ ಬೇಕಾಗುತ್ತದೆ.
1)ವಿಮರ್ಶಾತ್ಮಕ ವೀಕ್ಷಣೆ ಮತ್ತು ಚಿಂತನೆ.
2)ಸುತ್ತಲೂ ನಡೆಯುವ ಕ್ರಿಯೆಗಳಿಗೆ ಅಥವಾ ಎಲ್ಲ ವಿಷಯಗಳ ಬಗ್ಗೆ ನಿಖರವಾದ ಜ್ಞಾನವನ್ನು ಪಡೆಯುವ ಹಂಬಲ. ಏಕೆ, ಏನು ಮತ್ತು ಹೇಗೆ ಎಂಬ ಪ್ರಶ್ನೆಗಳಿಗೆ ಉತ್ತರವನ್ನು ಪಡೆಯುವಲ್ಲಿ ಹೆಚ್ಚಿನ ಆಸಕ್ತಿ.
3)ಮೂಢ ಮತ್ತು ತಪ್ಪು ನಂಬಿಕೆಗಳಲ್ಲಿ ವಿಶ್ವಾಸವಿಲ್ಲದಿರುವುದು.
4)ಬೇರೆಯವರ ಅಭಿಪ್ರಾಯಕ್ಕೆ / ವೀಕ್ಷಣೆಗಳಿಗೆ ಗೌರವವನ್ನು ಸೂಚಿಸುವುದು. ಪ್ರಯೋಗಗಳಿಂದ ಖಚಿತಪಡಿಸಿದರೆ ಅಥವಾ ಖಚಿತವಾದ ಪುರಾವೆಗಳನ್ನು ಒದಗಿಸಿದಾಗ, ತನ್ನ ಅಭಿಪ್ರಾಯವನ್ನು ಬದಲಿಸಲು ಸಿದ್ಧವಾಗಿರುವುದು.
5)ವಿಜ್ಞಾನದಲ್ಲಿ ಯಾವುದೇ ಸಿದ್ಧಾಂತ ಅಂತಿಮವಲ್ಲ ಎಂಬ ತಿಳುವಳಿಕೆಯನ್ನ ಹೊಂದಿರುವುದು.
6)ಹಠತ್ತಾಗಿ ತೀರ್ಮಾನಕ್ಕೆ ಬರದೇ ಇರುವುದು.
7)ಪಕ್ಷಾತೀತವಲ್ಲದ ಕುತೂಹಲವನ್ನು ಹೊಂದಿರುವುದು.
8)ತೀಕ್ಷಣವಾಗಿ ವೀಕ್ಷಿಸುವುದು.
9)ಸರಿಯಾದ ಕಾರಣವಿಲ್ಲದೆ ಯಾವುದೇ ಕ್ರಿಯೆ ಪ್ರಕೃತಿಯಲ್ಲಿ ನಡೆಯುವುದಿಲ್ಲ ಎಂಬ ಅಚಲವಾದ ನಂಬಿಕೆ.
10)ಪ್ರಕೃತಿಯಲ್ಲಿ ಪ್ರತಿಯೊಂದು ಕ್ರಿಯೆ ವಿಜ್ಞಾನದ ತತ್ವಗಳು ಹಾಗೂ ನಿಯಮಗಳ ಪ್ರಕಾರ ನಡೆಯುತ್ತವೆ ಎಂಬ ದಿಟ್ಟವಾದ ಆಲೋಚನೆ.
ಮೂಢನಂಬಿಕೆಗಳು ( Superstitions )
ಮೂಢನಂಬಿಕೆಗಳು, ಈಗಾಗಲೆ ಹೇಳಿರುವಂತೆ, ವಿಜ್ಞಾನದ ತತ್ವಗಳು ಮತ್ತು ಪ್ರಯೋಗಗಳ ಮೂಲಕ ಸಂಪೂರ್ಣ ತಪ್ಪೆಂದು ಧೃಡಪಡಿಸಬಹುದಾಂಥ ಚಿಂತನೆಗಳು.ಯಾವ ನಂಬಿಕೆಯಲ್ಲಿ ಮೌಢ್ಯತೆ ಇರುವುದೊ, ಅದನ್ನು ಮೂಢನಂಬಿಕೆ ಎಂದು ಕರೆಯಬಹುದು. ಮೂಢನಂಬಿಕೆಗಳು ಸಾರ್ವಕಾಲಿಕ. ಎಲ್ಲಾ ಕಾಲದ, ಎಲ್ಲಾ ದೇಶದ, ಎಲ್ಲಾ ಜನಾಂಗಗಳಲ್ಲಿ ಮೂಢನಂಬಿಕೆಗಳನ್ನು ನಾವು ಕಾಣುತ್ತೇವೆ.ನಮ್ಮ ದೇಶದಲ್ಲಿ ಹಾಗೂ ಬೇರೆ ದೇಶಗಳಲ್ಲಿ ಪ್ರಚಲಿತದಲ್ಲಿರುವ ಕೆಲವು ಮೂಢನಂಬಿಕೆಗಳನ್ನು ನೋಡೋಣ.
ಅಂಗೈನಲ್ಲಿ ನವೆಯಾದರೆ ದುಡ್ಡು ಸಿಗುತ್ತದೆ, ದಾರಿಯಲ್ಲಿ ಬೆಕ್ಕು ಅಡ್ಡ ಬಂದರೆ ಅಶುಭ, ಮನೆಯಲ್ಲಿ ಕನ್ನಡಿ ಒಡೆದರೆ ಏಳು ವರ್ಷ ಅಶುಭ, ಆರೋಗ್ಯದಲ್ಲಿ, ಆರ್ಥಿಕವಾಗಿ ಅಥವಾ ಸಂಸಾರದಲ್ಲಿ ಸಮಸ್ಯೆಗಳುಂಟಾದಾಗ, ಮಾಂತ್ರಿಕನ ಅಥವಾ ಜ್ಯೋತಿಷ್ಯನ ಸಲಹೆ ಪಡೆಯುವುದು, ಗ್ರಹಣ ಕಾಲದಲ್ಲಿ ಹೊರಗಡೆ ಹೋಗಬಾರದು, ಏನನ್ನು ತಿನ್ನಬಾರದು ಎಂಬ ಅಪಾರ ನಂಬಿಕೆ, ಮುಟ್ಟಾದ ಹೆಣ್ಣು ಮೈಲಿಗೆ, ಸಂಖೈ 13 ಅಶುಭ, ಕೆಲವು ಬಣ್ಣಗಳ ಬಟ್ಟೆಯನ್ನು ಧರಿಸಿದರೆ ಗೆಲುವು ಸಿಗುತ್ತದೆ, ಹೀಗೆ ಹಲವಾರು ಮೂಢನಂಬಿಕೆಗಳನ್ನು ನಾವುಗಳು ಪಟ್ಟಿ ಮಾಡಬಹುದು. ಕೆಲವು ಬಾರಿ, ಗಣೇಶನ ವಿಗ್ರಹ ಹಾಲು ಕುಡಿಯಿತು ಎಂಬ ವಿಷಯವನ್ನು ಸಾರ್ವಜನಿಕರಲ್ಲಿ ನಂಬಿಸಿ ದೊಡ್ಡ ಸುದ್ದಿಯಾಗಿದ್ದನ್ನು ನಾವು ಕೇಳಿದ್ದೇವೆ ಮತ್ತು ಟಿ.ವಿ ಮಾಧ್ಯಮಗಳಲ್ಲಿ ನೋಡಿದ್ದೇವೆ.
ಸಾಮಾನ್ಯವಾಗಿ ಹೆಚ್ಚು ಶಿಕ್ಷಣ ಪಡೆಯದೇ ಇರುವ ನಾಗರಿಕರಲ್ಲಿ ಮೂಢನಂಬಿಕೆಗಳನ್ನು ನಾವು ಕಾಣುತ್ತೇವೆ.ಆದರೆ ಇದು ಯಾವಾಗಲೂ ಅನ್ವಯಿಸುವುದಿಲ್ಲ. ವಿದ್ಯಾವಂತರು ಸಹ ಮೂಢನಂಬಿಕೆಗಳನ್ನು ಅನುಸರಿಸುವುದನ್ನು ನೋಡುತ್ತೇವೆ.ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ನಮ್ಮ ಪ್ರಾಂಶುಪಾಲರು ಮತ್ತು ಭೌತಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಡಾ.ಎಚ್.ನರಸಿಂಹಯ್ಯನವರು ನಮ್ಮ ಕ್ಲಾಸಿನಲ್ಲಿ ಹೇಳಿದ್ದ ಮಾತು ನೆನಪಿಗೆ ಬರುತ್ತದೆ.ಗ್ರಹಣಗಳ ಬಗ್ಗೆ ಕೆಲವು ಭೌತಶಾಸ್ತ್ರದ ಪ್ರಾಧ್ಯಾಪಕರು ಎರಡು ಸಿದ್ಧಾಂತಗಳಲ್ಲಿ ನಂಬಿಕೆಯುಳ್ಳವರಾಗಿದ್ದು, ಒಂದು ಕ್ಲಾಸಿನಲ್ಲಿ ಪಾಠಮಾಡಲು ಮತ್ತು ಇನ್ನೊಂದು ಮನೆಯಲ್ಲಿ ಆಚರಣೆ ಮಾಡಲು.ಹೀಗೆ ಮೂಢನಂಬಿಕೆಗಳು ನಮ್ಮ ಜೀವನದ ಭಾಗವಾಗಿದೆ ಎಂದರೆ ತಪ್ಪಾಗಲಾರದು.
ಮೂಢನಂಬಿಕೆಗಳಿಗೆ ಯಾವುದೇ ಆಧಾರವಿರುವುದಿಲ್ಲ. ಮೂಢನಂಬಿಕೆಗಳು ಅವೈಚಾರಿಕ ಮತ್ತು ಕುರುಡು ನಂಬಿಕೆ.ಅಲೌಕಿಕ ಅಂಶಗಳಲ್ಲಿ ಅಪಾರ ನಂಬಿಕೆ, ವೈಯಕ್ತಿಕ ನಂಬಿಕೆಗಳು ಮತ್ತು ಅನುಭವಗಳು, ಅಸಂಬಂಧಿತ ಘಟನೆಗಳಿಗೆ ಸಂಬಂಧ ಹುಡುಕಲು ಪ್ರಯತ್ನಿಸುವುದು, ಇಂತಹ ಸನ್ನಿವೇಶಗಳು ಮೂಢನಂಬಿಕೆಗೆ ಎಡೆಮಾಡಿಕೊಡುತ್ತವೆ.ಕೆಲವು ಸಂದರ್ಭಗಳಲ್ಲಿ ಮೂಢನಂಬಿಕೆಗಳು ಮನಸ್ಸಿನ ಆತಂಕ ಮತ್ತು ದುಗುಡಗಳನ್ನು ಕಡಿಮೆ ಮಾಡುತ್ತವೆ.ಆದ್ದರಿಂದ ಮನಸ್ಸಿಗೆ ಹೆಚ್ಚು ಒತ್ತಡ ಹಾಗೂ ಆತಂಕವಾದ ಸಮಯದಲ್ಲಿ ಮೂಢನಂಬಿಕೆಗಳಿಗೆ ಮೊರೆ ಹೋಗುವುದು ಹೆಚ್ಚಾಗುತ್ತದೆ.ಹೀಗೆ ಮೂಢನಂಬಿಕೆಗಳು ಸಾವಿರಾರು ವರ್ಷಗಳಿಂದಲೂ, ಪ್ರಪಂಚದ ಎಲ್ಲಾ ದೇಶಗಳಲ್ಲಿಯೂ ಮತ್ತು ಎಲ್ಲಾ ಜನಾಂಗಗಳಲ್ಲಿಯೂ ನಾವು ಕಾಣುತ್ತೇವೆ.ಮೂಢನಂಬಿಕೆಗಳನ್ನು ಹೋಗಲಾಡಿಸುವುದು ಬಹಳ ಕಷ್ಟಕರವಾದ ಸಂಗತಿ ಎಂದೇ ಹೇಳಬಹುದು.ಕೆಲವೊಂದು ಮೂಢನಂಬಿಕೆಗಳು ಸಮಾಜಕ್ಕೆ ಮತ್ತು ಇತರ ನಾಗರಿಕರಿಗೆ ತೊಂದರೆಯುಂಟು ಮಾಡುತ್ತವೆ.ಇಂತಹ ಸಮಾಜಘಾತಕ ಮೂಢನಂಬಿಕೆಗಳನ್ನು ನಾವು ಮೊದಲು ಹೋಗಲಾಡಿಸಬೇಕು.
ಮೂಢನಂಬಿಕೆಗಳ ವಿರುದ್ಧ ಕಾನೂನು
ಮೂಢನಂಬಿಕೆಗಳ ವಿರುದ್ಧವಾಗಿ, ನನಗೆ ತಿಳಿದಿರುವಂತೆ, ಎರಡು ರಾಜ್ಯಗಳು ಕಾನೂನನ್ನು ರೂಪಿಸಿವೆ.ಮಹಾರಾಷ್ಟ್ರ ಸರ್ಕಾರ 2013 ರಲ್ಲಿ ಮೂಢನಂಬಿಕೆ ನಿಷೇಧ ಕಾನೂನು ವಿಧೇಯಕವನ್ನು ಜಾರಿಗೆ ತಂದಿದೆ.ಕರ್ನಾಟಕದಲ್ಲಿ. “The Karnataka Anti – superstition Authority“ ಎಂಬ ಸಂಸ್ಥೆಯನ್ನು ಸ್ಥಾಪಿಸಲು ಚಿಂತನೆ ನಡೆದಿದೆ.
ಕಾನೂನು ರೀತ್ಯ, ಮೂಢನಂಬಿಕೆಗಳನ್ನು ಹೋಗಲಾಡಿಸುವುದು ನಿಜವಾಗಿಯೂ ಕಷ್ಟಕರವಾದಂತ ಸಂಗತಿ. ನಾಗರೀಕರಲ್ಲಿ, ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಬಹಳ ಮುಖ್ಯ.ವಿದ್ಯಾರ್ಥಿಗಳಲ್ಲಿ ( ಮುಂದಿನ ಪ್ರಜೆಗಳಲ್ಲಿ ) ವೈಜ್ಞಾನಿಕ ವಿಷಯದಲ್ಲಿ ಆಸಕ್ತಿ ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಜವಾಬ್ದಾರಿ ಶಿಕ್ಷಕರದು. ಇದರಿಂದ ಮೂಢನಂಬಿಕೆಗಳ ನಿವಾರಣೆಗೆ ಅನುಕೂಲವಾಗುತ್ತದೆ ಮತ್ತು ಆರೋಗ್ಯಕರ ಸಮಾಜವನ್ನು ಕಟ್ಟುವಲ್ಲಿ ಯಶಸ್ವಿಯಾಗಬಹುದು.ನಾವೆಲ್ಲರೂ ನಮ್ಮ ಸುತ್ತ ಮುತ್ತಲೂ ನಡೆಯುವ ಚಟುವಟಿಕೆಗಳನ್ನು ವಿಜ್ಞಾನದ ಕಣ್ಣಿನಿಂದ ನೋಡುವಂತಾಗ ಬೇಕು.
ನಮ್ಮ ಸಂವಿಧಾನ 51A ರಲ್ಲಿ ನಾಗರಿಕರ ಮೂಲಭೂತ ಕರ್ತವ್ಯಗಳಲ್ಲಿ ಹೀಗೆ ಉಲ್ಲೇಖಿಸಲಾಗಿದೆ.“It shall be the duty of every citizen of India to develop scientific temper, humanism and the spirit of inquiry and reform”. ಈ ಪ್ರಯತ್ನದಲ್ಲಿ ನಾವೆಲ್ಲರೂ ಕೈಜೋಡಿಸಬೇಕಾಗಿದೆ.ನಾವು ಮಾಡುವ ಹಲವಾರು ಕಾರ್ಯಗಳಲ್ಲಿ ಸೋಲನ್ನು ಕಾಣಬಹುದು.ಸೋಲುಂಡ ತಕ್ಷಣವೇ ಮೂಢನಂಬಿಕೆಗಳ ಮೊರೆ ಹೋಗುವುದು ಬೇಡ. ಮರಳಿ ಪ್ರಯತ್ನ ಮಾಡುವ. ಸಿ.ವಿ ರಾಮನ್‍ರು ಸೋಲಿನ ಬಗ್ಗೆ ಹೀಗೆ ಹೇಳಿದ್ದಾರೆ. “I am the master of my failure. If I never fail how will I ever learn”.I unquote.
We shall continue to strive hard to achieve our goals without resorting to superstitious beliefs”. ಎಂಬ ಸಂದೇಶದೊಂದಿಗೆ ಲೇಖನವನ್ನು ಮುಗಿಸುವೆ.
Photo by Rohan Makhecha on Unsplash
Nice article sir
ಅರ್ಥಗರ್ಭಿತ ಲೇಖನ. ಡಾ.ಬಿ.ಎಸ್.ಶ್ರೀಕಂಠ ಅವರು ಎಲ್ಲರ ಜೀವನದಲ್ಲೂ ಅಳವಡಿಸಿಕೊಳ್ಳಬೇಕಾದ ವೈಜ್ಞಾನಿಕ ವಿಚಾರಗಳನ್ನು ಸರಳವಾಗಿ ನಿರೂಪಿಸಿದ್ದಾರೆ. ಎಲ್ಲರೂ ವೈಜ್ಞಾನಿಕ ಮನೋಭಾವವನ್ನು ಬೆಳಸಿಕೊಳ್ಳಬೇಕಾಗಿರುವ ಅನಿವಾರ್ಯತೆಯನ್ನು ಸುಂದರವಾಗಿ ಉದಾಹರಣೆಗಳ ಮೂಲಕ ಮಾನದಟ್ಟು ಮಾಡಿ ಕೊಟ್ಟಿದ್ದಾರೆ. ನನ್ನ ಕಾಲೇಜು ಶಿಕ್ಷಕರು ಆಗಿರುವ ಡಾ.ಶ್ರೀಕಂಠ ರವರಿಗೆ ರಾಷ್ರೀಯ ವಿಜ್ಞಾನ ದಿನಾಚರಣೆಯ ಶುಭ ವಂದನೆಗಳು,
Valuable information sir,
It’s valuable information and artical
Very educative article
Nice article sir
ವಿಜ್ಞಾನ ಮತ್ತು ಮೂಢನಂಬಿಕೆ ಈ ವಿಷಯಗಳನ್ನು ತೌಲನಿಕವಾಗಿ ತಮ್ಮ ಲೇಖನದಲ್ಲಿ ವಿವರಣಾತ್ಮಕವಾಗಿ ತಿಳಿಸಿರುತ್ತೀರಿ. ಈ ವಿಷಯಕ್ಕೆ ನೀವು ನೀಡಿರುವ ಉದಾಹರಣೆಗಳಾದ ಮದನಪಲ್ಲಿ ಮತ್ತು ಕೋವಿಡ್-19 ವಿಷಯಗಳು ಪ್ರಸ್ತುತ ಸಂದರ್ಭಕ್ಕೆ ಸೂಕ್ತವಾಗಿವೆ. ಅದಕ್ಕಿಂತಲೂ ಹೆಚ್ಚಾಗಿ ವಿಜ್ಞಾನವನ್ನು ಪಾಠಮಾಡುವ ಪ್ರಾಧ್ಯಾಪಕರು ಮನೆಯಲ್ಲಿ ಮತ್ತು ತರಗತಿಯಲ್ಲಿ ಹೇಗೆ ನಡೆದುಕೊಳ್ಳುತ್ತಾರೆ ಎಂಬುದು ಒಪ್ಪುವಂತಹ, ಸೂಕ್ತವಾದಂತಹ ಉದಾಹರಣೆಯಾಗಿದೆ. ವಿಜ್ಞಾನಕ್ಕೆ ಸಂಬಂಧಿಸಿದಂತಹ ಈ ತರಹದ ಲೇಖನಗಳನ್ನು ನಾವು ನಿಮ್ಮಿಂದ ನಿರೀಕ್ಷಿಸುತ್ತವೆ. ಧನ್ಯವಾದಗಳು ಸರ್. ಶುಭರಾತ್ರಿ
Very good information sir
Congratulations