26 C
Karnataka
Sunday, November 24, 2024

    ಸೆನ್ಸೆಕ್ಸ್‌ ಗರಿಷ್ಠ ; ಪ್ರಭಾವ ಸೀಮಿತ

    Must read

    ಸೆನ್ಸೆಕ್ಸ್‌  ಅಂದರೆ ಸೆನ್ಸಿಟಿವ್‌ ಇಂಡೆಕ್ಸ್‌ ಅತಿ  ಸೂಕ್ಷ್ಮತೆಯನ್ನು ಹೊಂದಿರುವ ಸೂಚ್ಯಂಕವಾಗಿರುತ್ತದೆ ಎಂಬ ಉದ್ದೇಶದಿಂದ 1986 ರಲ್ಲಿ  ತೇಲಿ ಬಿಡಲಾಯಿತು. 

    ಅಂದಿನಿಂದಲೂ ಸೆನ್ಸೆಕ್ಸ್ ನಲ್ಲಿ 30 ಬಲಿಷ್ಠ ಕಂಪನಿಗಳನ್ನು ಸೇರಿಸಲಾಗಿದೆ.   ಆಗಿನಿಂದಲೂ ಸೆನ್ಸೆಕ್ಸ್‌ ಹಲವಾರು ರಭಸದ ಏರಿಳಿತಗಳನ್ನು ಪ್ರದರ್ಶಿಸಿದೆ. ಈ ತಿಂಗಳ 16  ರಂದು 52,516 ಪಾಯಿಂಟುಗಳನ್ನು ತಲುಪಿ  ಸರ್ವಕಾಲೀನ ದಾಖಲೆಯನ್ನು ನಿರ್ಮಿಸಿದೆ.

    2020 ರ ಮಾರ್ಚ್‌ 24 ರಂದು 25,638 ಪಾಯಿಂಟುಗಳಲ್ಲಿದ್ದ  ಸೆನ್ಸೆಕ್ಸ್‌ ಒಂದೇ ವರ್ಷದೊಳಗೆ  ಈ ಮಟ್ಟದಲ್ಲಿ   ದ್ವಿಗುಣಗೊಂಡಿರುವುದೂ  ಸಹ ದಾಖಲೆಯೇ ಆಗಿದೆ. 

    2002 ರ ಡಿಸೆಂಬರ್‌ ನಲ್ಲಿ 3,376 ರಲ್ಲಿದ್ದ ಸೆನ್ಸೆಕ್ಸ್‌   2008 ರ ಜನವರಿಯಲ್ಲಿ 20,201 ನ್ನು ತಲುಪಿ  ನಂತರ ಕೇವಲ ಸುಮಾರು ಆರು ತಿಂಗಳಲ್ಲಿ 10 ಸಾವಿರ ಪಾಯಿಂಟುಗಳೊಳಗೆ  ಕುಸಿದು 2010 ಅಕ್ಟೋಬರ್‌ ತಿಂಗಳಲ್ಲಿ  20,100 ರ  ಗಡಿ ದಾಟಿ ಚೇತರಿಕೆ ಪ್ರದರ್ಶಿಸಿದೆ.   

    ಲೀಸ್ಟಿಂಗ್‌ ಅಂಕಿ ಅಂಶಗಳು:

    ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನಲ್ಲಿ 4,722 ಕಂಪನಿಗಳು ವಹಿವಾಟಿಗೆ ಲೀಸ್ಟಿಂಗ್‌ ಆಗಿವೆ. ಅವುಗಳಲ್ಲಿ ಸುಮಾರು 809 ಕಂಪನಿಗಳು ತಮ್ಮ ಚಟುವಟಿಕೆ ನಿರ್ವಹಣೆಯಲ್ಲಿ ಎಸಗಿರುವ ವಿವಿಧ ಲೋಪಗಳ ಕಾರಣ ಅಮಾನತುಗೊಂಡಿವೆ.  ಅವು ತಮ್ಮ ಲೋಪಗಳನ್ನು ಸರಿಪಡಿಸಿಕೊಳ್ಳುವವರೆಗೂ ವಹಿವಾಟಿಗೆ ಅನುಮತಿ ದೊರೆಯುವುದಿಲ್ಲ.  ಉಳಿದ 3,913 ಕಂಪನಿಗಳು ವಹಿವಾಟಾಗಲು ಅನುಮತಿ ಹೊಂದಿವೆ.  ಇವುಗಳಲ್ಲಿ ಅನೇಕ ಕಂಪನಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ.  ಹೆಚ್ಚಿನವು ಹೂಡಿಕೆದಾರರಿಗೆ ಆಕರ್ಷಣೀಯವಾದ ಲಾಭಾಂಶಗಳನ್ನು, ಬೋನಸ್‌ ಷೇರುಗಳನ್ನು ನೀಡುತ್ತಿವೆ.  ಆದ್ದರಿಂದ ಸೆನ್ಸೆಕ್ಸ್‌ ನಿಂದ ಹೊರಗಿರುವ ಕಂಪನಿಗಳು ಹೂಡಿಕೆಗೆ ಯೋಗ್ಯವಿಲ್ಲವೆಂಬ ಭಾವನೆ ಬೇಡ.  

    ಸೆನ್ಸೆಕ್ಸ್‌ ಕಂಪನಿಗಳ ಅವಸ್ಥೆ:

    1986 ರಲ್ಲಿ ಸೆನ್ಸೆಕ್ಸ್ ನಲ್ಲಿರುವ ಕಂಪನಿಗಳಲ್ಲಿ  ಹೂಡಿಕೆ ಮಾಡಿದ ಕಂಪನಿಗಳಲ್ಲಿ ಹೂಡಿಕೆ ಮಾಡಿದವರಿಗೆ ಅದೇ ರೀತಿ ಏರಿಕೆ ಪ್ರದರ್ಶಿಸಿವೆ ಎಂದಲ್ಲ.  ಕಾರಣ ಸೆನ್ಸೆಕ್ಸ್‌ ನಲ್ಲಿರುವ ಕಂಪನಿಗಳನ್ನು,   ಸೆನ್ಸೆಕ್ಸ್‌ ಸಮಿತಿಯು ಪರಿಶೀಲಿಸುತ್ತಿರುತ್ತದೆ.  ಈ ಪ್ರಕ್ರಿಯೆಯಲ್ಲಿ ಸಾಧನೆಯಾಧಾರಿತ,  ವಹಿವಾಟಿನ ಗಾತ್ರವನ್ನಾಧರಿಸಿ ಆ ಕಂಪನಿಗಳನ್ನು ಮುಂದುವರೆಸುತ್ತದೆ, ಸೂಕ್ತವಾದ ಬದಲಾವಣೆಗಳನ್ನು ಮಾಡುತ್ತಿರುತ್ತದೆ.  ಒಂದು ಸಮಯದಲ್ಲಿ  ಬಾಂಬೆ ಬರ್ಮ,  ಏಶಿಯನ್‌ ಕೇಬಲ್ಸ್‌, ಕ್ರಾಂಪ್ಟನ್‌ ಗ್ರೀವ್ಸ್‌, ಜಿ ಇ ಶಿಪ್ಪಿಂಗ್‌,  ಸಿಂಧಿಯಾ  ಸ್ಟೀಮ್‌ ಶಿಪ್‌,    ಭಾರತ್‌ ಫೋರ್ಜ್‌,  ಬಳ್ಳಾರ್ಪುರ್‌ ಇಂಡಸ್ಟ್ರೀಸ್‌, ಅರವಿಂದ್‌ ಮಿಲ್ಸ್‌, ಬಾಂಬೆ ಡೈಯಿಂಗ್‌,  ಸಿಯಟ್‌, ಸೆಂಚುರಿ ಟೆಕ್ಸ್ ಟೈಲ್ಸ್‌, ಕಾಲ್ಗೇಟ್‌,  ಜಿ ಎಸ್‌ ಎಫ್‌ ಸಿ, ಗುಜರಾತ್‌ ಅಂಬುಜಾ ಸೀಮೆಂಟ್‌, ಹಿಂದೂಸ್ಥಾನ್‌ ಮೋಟಾರ್ಸ್‌, ಸೀಮನ್ಸ್‌, ಸ್ಟೀಲ್‌ ಅಥಾರಿಟೀಸ್‌ ಆಫ್‌ ಇಂಡಿಯಾ, ಟಾಟಾ ಕೆಮಿಕಲ್ಸ್‌, ಕ್ಯಾಸ್ಟ್ರಾಲ್‌, ಝೀ ಟೆಲಿಗಳೂ  ಸಹ  ಸೆನ್ಸೆಕ್ಸ್‌ ನ ಅಂಗವಾಗಿದ್ದವು.  ಇವುಗಳಲ್ಲಿ  ಏಶಿಯನ್‌ ಕೇಬಲ್ಸ್‌,  ಸಿಂಧಿಯಾ  ಸ್ಟೀಮ್‌ ಶಿಪ್‌, ನಂತಹವು ಪೇಟೆಯಿಂದ ನಿರ್ಗಮಿಸಿ ಹೂಡಿಕೆದಾರರ ಗಂಟನ್ನು ಕರಗಿಸಿವೆ.   ಇನ್ನು ಪೀಕೋ,  ಇಂಡಿಯನ್‌ ಆರ್ಗಾನಿಕ್‌, ಇಂಡಿಯನ್‌ ರೇಯಾನ್‌, ಫಿಲಿಪ್ಸ್‌,  ರಾನಬಾಕ್ಸಿ,  ಐ ಪಿ ಸಿ ಎಲ್‌ ಗಳಂತಹ ಕಂಪನಿಗಳು ಬೇರೊಂದು ಕಂಪನಿಗಳಲ್ಲಿ ವಿಲೀನಗೊಳ್ಳುವ ಮೂಲಕ ತಮ್ಮ ಅಸ್ಥಿತ್ವವನ್ನು ಕಳೆದುಕೊಂಡಿವೆ.

    ಫೆಬ್ರವರಿ ಒಂದರಂದು ಸೆನ್ಸೆಕ್ಸ್‌ 2,314 ಪಾಯಿಂಟುಗಳ ಏರಿಕೆ ಕಂಡಾಗ ಅದು ಸಹಜ ಬೆಳವಣಿಗೆ ಎಂದು ಬಿಂಬಿಸಲಾಯಿತು,   ಆದರೆ 26 ರಂದು 1,939 ಪಾಯಿಂಟುಗಳ ಇಳಿಕೆಯನ್ನು ಭಾರಿ ಅಸಹಜ ಬೆಳವಣಿಗೆ ಎನ್ನುವಂತಹ ವಾತಾವರಣ ಮೂಡಿದೆ.  ಇದು ಷೇರುಪೇಟೆಯ ಒಂದು ವಿಸ್ಮಯಕಾರಿ ಅಂಶ.  ಏರಿಕೆಯನ್ನು ಸ್ವಾಗತಿಸುವ, ಇಳಿಕೆಯನ್ನು ತಿರಸ್ಕರಿಸುವ ಗುಣ ಪೇಟೆಯಲ್ಲಿರುವವರಿಗೆ ಮೂಡಿರುತ್ತದೆ.  ಕಾರಣ ಹೂಡಿಕೆದಾರರು ಸದಾ ತಮ್ಮ ಹೂಡಿಕೆಯ ಮೌಲ್ಯ ಹೆಚ್ಚಳವನ್ನು ಬಯಸುವುದಾಗಿದೆ.   ಷೇರುಪೇಟೆ ಬಂಡವಾಳೀಕರಣ ಮೌಲ್ಯವು ಫೆಬ್ರವರಿ 25 ರಂದು ರೂ.206.18 ಲಕ್ಷ ಕೋಟಿ ಇದ್ದುದು 26 ರಂದು ರೂ.200.81 ಲಕ್ಷ ಕೋಟಿಗೆ ಕುಸಿದಿದೆ.  ಅಂದರೆ ಇಳಿಕೆಯ ವೇಗ ಹೆಚ್ಚು ಅದರಂತೆ ಹಾನಿಕಾರಕ ಅಂಶವು ಹೆಚ್ಚಿರುತ್ತದೆ. 

    ಹೂಡಿಕೆ ಗುಚ್ಚದ ನಿರ್ವಹಣೆ:

    ಹೂಡಿಕೆಯಾಗಿ ಆಯ್ಕೆ ಮಾಡಿಕೊಂಡ ಕಂಪನಿಗಳ ಬಗ್ಗೆ ಸದಾ ನಿಗಾ ಇರಿಸಬೇಕಾಗಿದೆ.  ಕಾರಣ ಪರಿಸ್ಥಿತಿಗಳ ಬದಲಾವಣೆ ಬಹಳ ವೇಗವಾಗಿವೆ.  ಪೇಟೆಯಲ್ಲಿ ಚಟುವಟಿಕೆಗೆ ಪ್ರಮುಖ ಪಾತ್ರ ವಹಿಸಿರುವ ವಿತ್ತೀಯ ಸಂಸ್ಥೆಗಳು ಮತ್ತು ವಿದೇಶಿ ವಿತ್ತೀಯ ಸಂಸ್ಥೆಗಳು ತಮ್ಮ ನಿರ್ಧಾರಗಳನ್ನು ವಿವಿಧ ಆಯಾಮಗಳಲ್ಲಿ ವಿಶ್ಲೇಷಿಸಿ ತೀರ್ಮಾನ ತೆಗೆದುಕೊಳ್ಳುತ್ತವೆ.  ಅವರ ನಿರ್ಧಾರಗಳು ಪೇಟೆಯಲ್ಲಿ ಅಂತಹ ಷೇರಿನ ಬೆಲೆಗಳ ಮೇಲೆ ಮಹತ್ತರ ಪ್ರಭಾವ ಬೀರುತ್ತವೆ.  ಈ ಸಂಸ್ಥೆಗಳ ಚಟುವಟಿಕೆಯು ಕೇವಲ ಸೆನ್ಸೆಕ್ಸ್‌ ಕಂಪನಿಗಳಿಗೆ ಸೀಮಿತವಾಗಿರುವುದಿಲ್ಲ.  ಅವು ಸಾಧನೆಯಾಧಾರಿತ, ಉತ್ತಮ ಭವಿಷ್ಯ ಸಾಧ್ಯ ಎಂದೆನಿಸುವ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತವೆ. 

    1990/2000 ದ ದಶಕದಲ್ಲಿದ್ದ ಅನೇಕ ಕಂಪನಿಗಳು ತಮ್ಮ ಅಸ್ಥಿತ್ವವನ್ನೇ ಕಳೆದುಕೊಂಡಿವೆ.  ಆ ದಿನಗಳಲ್ಲಿ ಹೆಚ್ಚು ಚುರುಕಾಗಿದ್ದ ಕಂಪನಿಗಳಲ್ಲಿ ಟೈಪ್‌ ರೈಟಿಂಗ್‌ ಯಂತ್ರಗಳ ತಯಾರಕರಾದ ರೆಮಿಂಗ್ಟನ್‌ ರಾಂಡ್‌,   ಮಯೂರ್‌ ಸಿಂಟೆಕ್ಸ್‌,  ಮೈಸೂರ್‌ ಲ್ಯಾಂಪ್‌, ಮಫತ್ ಲಾಲ್‌ ಫೈನ್‌,  ಸ್ವೀಡ್‌ ಇಂಡಿಯಾ, ಮಾಥರ್‌ ಅಂಡ್‌ ಪ್ಲಾಟ್‌, ಆರ್ಟನ್‌ ಸಿಂಥೆಟಿಕ್ಸ್‌ ಗಳು ಈಗ ಕಣ್ಮರೆಯಾಗಿವೆ.   ಬೂಟ್ಸ್‌ ಇಂಡಿಯಾ, ಕ್ಯಾಡ್‌ ಬರೀಸ್‌, ಓಟೀಸ್‌ ಎಲೆವೇಟರ್‌, ಸ್ಯಾಂಡೋಜ್‌, ಫಿಲಿಪ್ಸ್‌ ನಂತಹ ಕಂಪನಿಗಳೂ  ವಿಲೀನಗೊಳ್ಳುವ/ ಡಿಲೀಸ್ಟಿಂಗ್‌ ಮೂಲಕ ತಮ್ಮ ಅಸ್ಥಿತ್ವವನ್ನು ಕಳೆದುಕೊಂಡಿವೆ.  ಆದರೆ ಕಂಪನಿಗಳಾದ ಐ ಟಿಸಿ,  ಮಹೀಂದ್ರ ಅಂಡ್‌ ಮಹೀಂದ್ರ, ರಿಲಯನ್ಸ್‌ ಇಂಡಸ್ಡ್ರೀಸ್‌ ನಂತಹ ಕಂಪನಿಗಳೂ ಇಂದಿಗೂ ಹೆಚ್ಚಿನ ವಹಿವಾಟು ಪ್ರದರ್ಶಿಸುವುದಲ್ಲದೆ, ಸಾಧನೆಯನ್ನು ಹೊಂದಿವೆ.   ಹಾಗಾಗಿ ಮಧ್ಯಮ ಮತ್ತು ಕೆಳಮಧ್ಯಮ   ಶ್ರೇಣಿಯ ಷೇರುಗಳನ್ನು ಹೊಂದಿರುವ ಹೂಡಿಕೆ ಗುಚ್ಚದ ಬಗ್ಗೆ ಹೆಚ್ಚು ಹೆಚ್ಚು ಪರಿಶೀಲನೆ ಅಗತ್ಯ.    ಪೇಟೆಗಳು ಗರಿಷ್ಠದಲ್ಲಿದ್ದಾಗ ಅವು ಹೆಚ್ಚಿನ ಏರಿಕೆ ಹೊಂದಿರುವುದರಿಂದ  ಒಂದು ಸಣ್ಣ ನಕಾರಾತ್ಮಕ ಸುದ್ಧಿ ಅಥವಾ ಬೆಳವಣಿಗೆಯು ಭಾರಿ ಕುಸಿತಕ್ಕೆ ಕಾರಣವಾಗಬಹುದು. 

    ‘Value pick – profit book’  ಫಲ ಹೇಗಿರುತ್ತದೆ?

    ಷೇರುಪೇಟೆಯ ಚಟುವಟಿಕೆಯು ಯಶಸ್ಸಿಗೆ ವ್ಯಾಲ್ಯು ಪಿಕ್‌ ಹೇಗಿದ್ದರೆ ಸರಿ ಎಂಬುದಕ್ಕೆ ಈ ಕೆಳಗಿನ ಕೋಷ್ಟಕವನ್ನು ನೋಡಿರಿ.   2020 ರ ಮಾರ್ಚ್‌ ನಲ್ಲಿದ್ದ ಬೆಲೆಗೂ 2021 ರ ಫೆಬ್ರವರಿಯ ಬೆಲೆಗೂ ಕೆಲವು ಅಗ್ರಮಾನ್ಯ ಕಂಪನಿಗಳು ಎಂತಹ ಘನವಾದ ಲಾಭವನ್ನು ತಂದುಕೊಟ್ಟಿವೆ ಎಂಬುದನ್ನು ಅರಿಯಬಹುದು.  ಆದರೆ ಆ ಪ್ರಮಾಣದ ಲಾಭವನ್ನು ಕೈಗೆಟುಕಿಸಿಕೊಳ್ಳಬೇಕಾದಲ್ಲಿ ಪ್ರಾಫಿಟ್‌ ಬುಕ್‌ ಮಾಡಿಕೊಳ್ಳುತ್ತಿರಬೇಕು ಎಂಬುದು ನೆನಪಿರಲಿ.

    ಅಗ್ರಮಾನ್ಯ ಕಂಪನಿಗಳ ಷೇರಿನ ಬೆಲೆಗಳು ಕುಸಿತದಲ್ಲಿದ್ದರೆ,  ಆ ಕಂಪನಿಗಳ ಬಗ್ಗೆ ಯಾವುದೇ ನಕಾರಾತ್ಮಕ ಅಂಶಗಳಿಲ್ಲದಿದ್ದರೆ ಅದು ಹೂಡಿಕೆಗೆ ಅಪೂರ್ವವಾದ ಅವಕಾಶವಾಗಿರುತ್ತದೆ.   ಪೇಟೆಯು ಕುಸಿತದಲ್ಲಿದ್ದಾಗ ಗಜಗಾತ್ರದ ಖರೀದಿ ಮಾಡದೆ,  ಪ್ರತಿಯೊಂದು ಕುಸಿತದಲ್ಲೂ ಸ್ವಲ್ಪ ಸ್ವಲ್ಪ ಷೇರುಗಳನ್ನು ಖರೀದಿಸುವುದರಿಂದ ಅಪಾಯದ ಮಟ್ಟವನ್ನು ಮಿತಗೊಳಿಸಬಹುದು.

    ಕೆಲವು ಕಂಪೆನಿಗಳ ವರ್ಷದ ಹಿಂದಿನ ಬೆಲೆಗೂ ಈಗಿನ ಬೆಲೆಯನ್ನು ಗಮನಿಸಿ

    COMPANY NAMEMonthly High In Mar 2020rate @17th Mar 2020Present rate @ 26th Feb 2021
    Tata Steel447282714
    Tata Motors171 077323
    Maruthi Suzuki6,9775,6036,872
    Larsen & Toubro1,2989551,442
    Reliance Inds1,5071,0082,083
    Infosys8115501,252
    T C S2,2281,6582,896
    HCL Tech624452909
    HDFC Bank1,2329751,534
    Kotak Mah Bank1,7391,3211,782
    ICICI Bank549366597
    S B I331214390
    I T C208149204

    ಮೇಲಿನ ಪಟ್ಟಿಯು ಕೇವಲ ಉದಾಹರಣೆಯಾಗಿ ಮಾತ್ರ ನೀಡಿದ್ದು, ಯಾವುದೇ ರೀತಿಯ ಶಿಫಾರಸ್ಸು ಅಲ್ಲ.  ಷೇರುಗಳ ಬೆಲೆಗಳಲ್ಲುಂಟಾಗುವ ಏರಿಳಿತಗಳು ವೈವಿಧ್ಯಮಯ ಕಾರಣಗಳಿಂದಾಗುತ್ತವೆ,  ಆದರೂ  ನಂತರದಲ್ಲಿ ಪರಿಸ್ಥಿತಿಯಲ್ಲಿ ಸುಧಾರಣೆಯಾದ ನಂತರ ಅಗ್ರಮಾನ್ಯ ಕಂಪನಿಗಳ ಷೇರಿನ ದರಗಳು ಪುಟಿದೇಳುತ್ತವೆ ಎಂಬುದು  ಹಲವಾರು ಭಾರಿ ಪ್ರದರ್ಶಿತವಾಗಿದೆ.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!