ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಗಳ ಅಂತಿಮ ವೇಳಾಪಟ್ಟಿ ಪ್ರಕಟವಾಗಿದ್ದು, ಈ ಪರೀಕ್ಷೆಗಳು ಜೂನ್ 21 ರಿಂದ ಜುಲೈ 5 ರವರೆಗೆ ನಡೆಯಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಎಸ್. ಸುರೇಶ್ ಕುಮಾರ್ ಧಾರವಾಡದಲ್ಲಿ ತಿಳಿಸಿದ್ದಾರೆ.
ಈ ಮೊದಲು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದ್ದು, ಸಲಹೆ, ಮನವಿಗಳನ್ನು ಪರಿಗಣಿಸಿ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜೂನ್ 21- ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ, ಜೂ.24-ಗಣಿತ, ಜೂ. 28-ವಿಜ್ಞಾನ, ಜೂ. 30-ತೃತೀಯ ಭಾಷೆಗಳಾದ ಹಿಂದಿ, ಕನ್ನಡ, ಇಂಗ್ಲಿಷ್, ಅರೆಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಜುಲೈ2- ದ್ವಿತೀಯ ಭಾಷೆ ಇಂಗ್ಲಿಷ್/ ಕನ್ನಡ, ಜು.5- ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಶಿಕ್ಷಣ ಸ್ಪಂದನ ರಾಜ್ಯಾದ್ಯಂತ
ಬೆಳಗಾವಿ ವಿಭಾಗದಲ್ಲಿ ಶಿಕ್ಷಣ ಸ್ಪಂದನ ಕಡತ ವಿಲೇವಾರಿ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು ಅಭೂತಪೂರ್ವ ಪ್ರಕ್ರಿಯೆ ವ್ಯಕ್ತವಾಗಿದೆ ಎಂದು ಸಚಿವರು ಹೇಳಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಕಡತ ವಿಲೇವಾರಿಗೆ ಚುರುಕು ಮುಟ್ಟಿಸುವ ಉದ್ದೇಶದಿಂದ ಬಜೆಟ್ ಅಧಿವೇಶನ ಮುಗಿದ ಕೂಡಲೇ ಕಲ್ಯಾಣ ಕರ್ನಾಟಕ ಪ್ರದೇಶದ ಭಾಗದಿಂದ ಆರಂಭಗೊಂಡಂತೆ ಮೈಸೂರು, ಬೆಂಗಳೂರು ವಿಭಾಗಗಳಲ್ಲಿ ನಡೆಸಲಾಗುವುದೆಂದರು.
ಬೆಳಗಾವಿ ವಿಭಾಗದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರು, ಶಿಕ್ಷಕರಿಂದ ಇಂದಿನ ಶಿಕ್ಷಣ ಸ್ಪಂದನಕ್ಕೆ ಒಟ್ಟು 2940 ಅರ್ಜಿಗಳು ಸ್ವೀಕೃತವಾಗಿದ್ದು, 2674 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ, ಉಳಿದ 266 ಅರ್ಜಿಗಳು ವಿವಿಧ ಹಂತಗಳಲ್ಲಿವೆಯಎಂದರು.ಾಹಿತಿ ನೀಡಿದ ಸಚಿವರು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ 90 ಅರ್ಜಿಗಳು ಸ್ವೀಕರಿಸಲಾಗಿದ್ದು, 41 ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತೆಂದರು.
ಮಧ್ಯಾಹ್ನ ಉಪಹಾರ ಯೋಜನೆ ಶೀಘ್ರ ಅನುಷ್ಠಾನ
ಗ್ರಾಮಾಂತರ ಪ್ರದೇಶಗಳಲ್ಲಿನ ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಉಪಹಾರ ಅತ್ಯಂತ ಅವಶ್ಯವಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರದ ಸಹಮತಿಗಾಗಿ ಕೋರಲಾಗಿದ್ದು ಅನುಮತಿ ದೊರೆತ ಕೂಡಲೇ ಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದರು
ಅಧಿಕಾರಿಗಳಿಂದ ಶಾಲಾ ದತ್ತು
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ಇಲಾಖೆಯ ನಿರ್ದೇಶಕ ವೃಂದದ ಅಧಿಕಾರಿಗಳೂ ಸೇರಿದಂತೆ ಪ್ರತಿಯೊಬ್ಬರೂ ಶಾಲಾ ದತ್ತು ತೆಗೆದುಕೊಳ್ಳಲು ಮುಂದಾಗಬೇಕೆಂದು ಹೇಳಿದ ಸಚಿವರು, ಅವಶ್ಯಕತೆ ಬಿದ್ದರೆ ದತ್ತು ಪಡೆದ ಶಾಲೆಗಳಲ್ಲಿ ಅಧಿಕಾರಿಗಳು ಮಕ್ಕಳಿಗೆ ಬೋಧಿಸುವ ಕೆಲಸದಲ್ಲಿಯೂ ತೊಡಗಿಸಿಕೊಳ್ಳಬೇಕೆಂದು ಹೇಳಿದರು. ಈ ನಿಟ್ಟಿನಲ್ಲಿ ನಿರ್ದೇಶನ ನೀಡಲಾಗುವುದೆಂದರು.
ಶಾಲಾರಂಭ ಶೀಘ್ರ
ಶಾಲಾರಂಭಿಸಲು ಆರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ಸಮಿತಿಯ ಸಮ್ಮತಿ ಅವಶ್ಯವಿರುವ ಕಾರಣ, ಶೀಘ್ರದಲ್ಲಿ ಸಭೆ ಸೇರಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದೆಂದರು.
ಇದೇ ಏಪ್ರಿಲ್ ಎರಡರಿಂದ ತಾವು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಎಸ್.ಎಸ್ಎಲ್.ಸಿ ಹಾಗೂ ದ್ವಿತೀಯ ಪಿಯು ಪರೀಕ್ಷಾ ಪೂರ್ವ ಸಿದ್ಧತೆಗಳನ್ನು ಸ್ವತಃ ಪರಿಶೀಲಿಸುವುದಾಗಿ ಹೇಳಿದರು.
ಸಚಿವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರುಗಳಾದ ಅರುಣ ಶಹಾ ಪುರ, ಎಸ್.ವಿ.ಸಂಕನೂರು ಹಾಗೂ ಹಣಮಂತ ನಿರಾಣಿ ಮತ್ತು ಧಾರವಾಡದ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಉಪಸ್ಥಿತರಿದ್ದರು.