26.6 C
Karnataka
Friday, November 22, 2024

    ಸಂಸ್ಕಾರ ಸೌರಭ:ಉಪಯುಕ್ತ ಜ್ಯೋತಿಷ್ಯ ಕೈಪಿಡಿ

    Must read

    ಕೆ ಎನ್ ಜಯಪ್ರಕಾಶ್

    ಜ್ಯೋತಿಷ್ಯ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ. ಜಾತಿ, ವರ್ಗ ಭೇದವೆನ್ನದೆ “ಜ್ಯೋತಿಷ್ಯ” ಹೇಳುವ ಪರಿಹಾರ ಆದಿ-ಅನಾದಿಯಿಂದಲೂ ನಮ್ಮ ಪರಂಪರೆಯಲ್ಲಿ ಸಾಗಿ ಬಂದಿದೆ. ಜ್ಯೋತಿಷ್ಯ ಶಾಸ್ತ್ರವನ್ನು ಈಗ ಎಲ್ಲರೂ ಕಲಿಯಬಹುದಾಗಿದೆ. ಈ ಅಪೂರ್ವ ಶಾಸ್ತ್ರವನ್ನು ಮತ್ತಷ್ಟು ಜನಪ್ರಿಯಗೊಳಿಸುವಲ್ಲಿ ಹಲವು ಸಫಲ ಪ್ರಯತ್ನಗಳು ನಡೆದಿವೆ.

    ಜ್ಯೊತಿಷ್ಯಕ್ಕೆ ಸಂಬಂಧಿಸಿದಂತೆ ಹಲವು ಗ್ರಂಥಗಳು ಹಾಗೂ ನಿಯತಕಾಲಿಕೆಗಳು ಪ್ರಕಟವಾಗುತ್ತಿವೆ. ಅವರವರ ಅಗತ್ಯ, ಆವಶ್ಯಕತೆ, ಬೇಡಿಕೆಗಳಿಗೆ ತಕ್ಕಂತೆ ಕೋರಿಬಂದ ಸಂಗತಿಗಳಿಗೆ ಜ್ಯೊತಿಷ್ಯ ವಿದ್ವಾಂಸರು ‘ಜ್ಯೋತಿಷ್ಯ’ ತಿಳಿಸಿ ಕೇಳುಗರ ಕುತೂಹಲ ತಣಿಸಿದ್ದಾರೆ.

    ದಾವಣಗೆರೆಯ ಜ್ಯೋತಿಷಿ ಡಾ|| ಸಿ ಕೆ ಆನಂದತೀರ್ಥಾಚಾರ್ ಅವರು ವಿವಿಧ ಮೂಲಗಳಿಂದ ಸಂಗ್ರಹಿಸಿ, ಸಂಪಾದಿಸಿರುವ 250 ಪುಟಗಳ “ಸಂಸ್ಕಾರ ಸೌರಭ” ಕೃತಿ ಈಚೆಗೆ ಶ್ರೀ ಭಾಸ್ಕರಾಚಾರ್ಯ ಜ್ಯೊತಿರ್ವಿದ್ಯಾ ಪ್ರತಿಷ್ಠಾನ, ದಾವಣಗೆರೆ, ಇವರಿಂದ ಪ್ರಕಟವಾಗಿ, ಸಮಾರಂಭವೊಂದರಲ್ಲಿ ಲೋಕಾರ್ಪಣೆಗೊಂಡಿದೆ. ಇದು ವಿಶೇಷವಾಗಿ ಶೋಡಷ ಸಂಸ್ಕಾರಗಳು ಮತ್ತು ಮುಹೂರ್ತದ ಮಹತ್ವವನ್ನು ವಿಶ್ಲೇಶಿಸಿರುವ ಗ್ರಂಥವಾಗಿದೆ. ಜ್ಯೋತಿಷ್ಯ ಶಾಸ್ತ್ರವು ಎಲ್ಲಾ ಕಾಲದಿಂದಲೂ ಗೌರವಕ್ಕೆ ಪಾತ್ರವಾಗಿದೆ ಎಂದು ಸಂಗ್ರಹಕಾರರು ಆರಂಭದ ನುಡಿಯಲ್ಲಿ ಹೇಳಿಕೊಂಡಿದ್ದಾರೆ.

    ಕರೋನಾ ಲಾಕ್ಡೌನ್ ಅವಧಿಯಲ್ಲಿ ಆನ್ ಲೈನ್ ತರಗತಿಗಳ ಮೂಲಕ ತಾವುಗಳು ಜ್ಯೋತಿಷ್ಯ ವಿದ್ಯಾರ್ಥಿಗಳಿಗೆ ಬೋಧಿಸಿದ ಪಾಠಗಳು ಈ ಗ್ರಂಥದ ರೂಪವನ್ನು ಪಡೆದಿವೆ ಎಂದೂ ಅವರು ತಿಳಿಸಿದ್ದಾರೆ. ಗ್ರಂಥದ ಕರಡನ್ನು ತಜ್ಞರಿಂದ ಮೇಲು-ಪರಿಶೀಲನೆ ಮಾಡಿಸಿ ಅವರ ಮೆಚ್ಚುಗೆಯ ನುಡಿಗಳು ಹಾಗೂ ಪ್ರೋತ್ಸಾಹದ ನಂತರ ಪುಸ್ತಕ ಪ್ರಕಟಿಸಿರುವುದು ಶ್ಲಾಘನೀಯ ಸಂಗತಿ. ಜ್ಯೋತಿಷ್ಯ ಶಾಸ್ತ್ರದ ತತ್ವವನ್ನು ಜನಸಾಮಾನ್ಯರಿಗೆ ತಿಳಿಸುವ ಈ ಪ್ರಯತ್ನವನ್ನು ಮಂತ್ರಾಲಯದ ಶ್ರೀಗಳು ಹರಿಸಿ-ಅನುಗ್ರಹಿಸಿದ್ದಾರೆ.

    ವಿವಿಧ ಸಂಸ್ಕಾರಗಳ ಕಿರು ಪರಿಚಯ ಹಾಗೂ ಹಲವಾರು ಸಂದರ್ಭಗಳಲ್ಲಿ ಮುಹೂರ್ತ ನಿರ್ಧರಿಸುವ ಅಂಶಗಳು ಗ್ರಂಥದ 26 ಅಧ್ಯಾಯಗಳಲ್ಲಿ ಸ್ಥಾನ ಪಡೆದಿವೆ. ‘ಕಾಲಗಣನೆ’ ಪಂಚಾಂಗದಲ್ಲಿ ಪ್ರಮುಖವಾದುದು. ವಿಕ್ರಮ ರಾಜನಿಂದ ಆರಂಭವಾದ “ವಿಕ್ರಮ ಶಖೆ” ಮುಗಿದು ಈಗ ಕಾಲಗಣನೆಯ ಲೆಕ್ಕಾಚಾರಕ್ಕೆ ಹಿಂದೂ ಪಂಚಾಂಗದಲ್ಲಿ ಚಾಲ್ತಿಯಲ್ಲಿರುವ “ಶಾಲಿವಾಹನ ಶಖೆ” ಪ್ರಾರಂಭವಾದ ಹಿನ್ನೆಲೆಯನ್ನು ಇಲ್ಲಿ ಕಥಾ ರೂಪದಲ್ಲಿ ವಿವರಿಸಿ ಮುನ್ನಡೆಯಲಾಗಿದೆ.

    ಶೋಡಷ ಸಂಸ್ಕಾರಗಳು, ಗರ್ಭದಾನದ ಮಹತ್ವ, ನಾಮಕರಣ, ಕರ್ಣ ಛೇದನ, ಅಕ್ಷರಾಭ್ಯಾಸ, ಉಪನಯನ, ವಿವಾಹ, ಗೃಹ ವಾಸ್ತು, ಪ್ರಯಾಣಕ್ಕೆ ಶುಭ ಮುಹೂರ್ತದಿಂದ ಹಿಡಿದು ಅಂತೇಷ್ಠಿ (ಮರಣ ವಿಚಾರ) ವರೆಗೆ ಓದಿಕೊಂಡು ಹೋಗುವ ಹಾಗೆ ಆಕರ್ಷಿತವಾಗಿ ಆಚಾರ್ಯರು ಯಶಸ್ವಿ ಪ್ರಯತ್ನ ಮಾಡಿದ್ದಾರೆ. ಈ ಸಂಗತಿಗಳು ಪ್ರತಿ ವ್ಯಕ್ತಿಯ ಪ್ರತಿ ಕುಟುಂಬದ “ಜ್ಯೋತಿಷ್ಯ” ಅಗತ್ಯತೆಗಳನ್ನು ಬಹುಮಟ್ಟಿಗೆ ಅವುಗಳ ಪ್ರಾಥಮಿಕ ಹಂತದಲ್ಲಿ ತಿಳಿಸುವುದರಿಂದ ಈ ಕೃತಿ ಒಂದು ಕೈಪಿಡಿಯಂತೆ ಸಹಾಯಕವಾಗಿದ್ದು ಪ್ರತಿ ಮನೆಯಲ್ಲಿ ಇರಬೇಕಾದ ಪುಸ್ತಕವೆಂದು ತಜ್ಞರು ಅಭಿಪ್ರಾಯ ನೀಡಿದ್ದಾರೆ.

    ನಮ್ಮ ಭಾರತ ಕೃಷಿ ಪ್ರಧಾನವಾದ ದೇಶ.ಕೃಷಿ ದೇಶದ ಜೀವಾಳ. ಹೀಗಾಗಿ ಕೃಷಿ ಕ್ಷೇತ್ರಕ್ಕೆ ಸಂಬಂಧ ಪಟ್ಟ ‘ಮುಹೂರ್ತ’ಗಳು ಎಂಬ ಒಂದು ಪ್ರತ್ಯೇಕ ಅಧ್ಯಾಯವೇ ಈ ಕೃತಿಯಲ್ಲಿದೆ (ಪುಟ 156 ರಿಂದ 173). ನಕ್ಷತ್ರಗಳಿಗೂ ಮಳೆಗೂ ಇರುವ ಸಂಬಂಧ, ನಕ್ಷತ್ರಕ್ಕೊಂದು ಗಿಡ ಮೀಸಲಿಟ್ಟಿರುವ ಕಲ್ಪನೆ , ಯಜ್ಞ ಸಂಬಂಧಿ ಸಸ್ಯಗಳು, ವೃಕ್ಷಚ್ಛೇದನದಿಂದ ಆಗುವ ಅನಿಷ್ಠಪ್ರಾಪ್ತಿ ಹಾಗೂ ಹಿಂದುಗಳಿಗೆ ಅತೀ ಪವಿತ್ರವಾದ ತುಳಸಿ ಗಿಡದ ಮಹತ್ವವನ್ನು ವಿಶೇಷವಾಗಿ ವಿವರಿಸಲಾಗಿದೆ. ಹೆಚ್ಚಿನ ಫಸಲು ಇಳುವರಿಗೂ ಹಾಗೂ ಸಂಗೀತಕ್ಕೂ ಇರುವ ವಿದ್ಯಮಾನವನ್ನು ಸಹ ಗುರುತಿಸಲಾಗಿದೆ.

    ಗೃಹವಾಸ್ತು- ಈಚಿನ ದಿನಗಳಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದಿದೆ. ವಾಸ್ತು ಪ್ರಕಾರ ಗೃಹ ನಿರ್ಮಿಸಿ, ದುಖಃ-ಸಂತೋಷ-ಸಂಮೃದ್ಧಿಯಿಂದ ಇರುವ ಬಯಕೆ ಯಾರಿಗೆ ಬೇಡ? ಸುಮಾರು 24 ಪುಟಗಳಲ್ಲಿ ಗೃಹವಾಸ್ತುವಿನ ಮೇಲೆ ಸ್ಮೃತಿಕಾರರು ಬೆಳಕು ಚೆಲ್ಲಿದ್ದಾರೆ.

    ಪ್ರಾಯಶಃ ಜ್ಯೋತಿಷ್ಯವನ್ನು ಅತಿ ಹೆಚ್ಚಾಗಿ ಕೇಳುವ ಸಂದರ್ಭವೆಂದರೆ ಅದು ವಿವಾಹದ ವಿಷಯವಾಗಿ ಎಂದು ಹೇಳಬಹುದು. “ವಿವಾಹ ಸಂಸ್ಕಾರ” ಈ ಗ್ರಂಥದ ಅತಿ ದೊಡ್ಡ ಅಧ್ಯಾಯ.

    ಈ ಗ್ರಂಥರಚನೆಗಾಗಿ ಆಚಾರ್ಯರು 18 ಆಚಾರ್ಯರ ಕೃತಿಗಳಲ್ಲದೇ, ಈಚಿನ ವಿದ್ವಾಂಸರ ೮ ಕೃತಿಗಳನ್ನು ಆಳವಾಗಿ ಅಧ್ಯಯನ ಮಾಡಿರುವುದು ಆಕರ ಗ್ರಂಥಗಳ ಪಟ್ಟಿಯಿಂದ ತಿಳಿಯುತ್ತದೆ.ಶೋಡಷ ಸಂಸ್ಕಾರಗಳು ಪ್ರತಿ ವ್ಯಕ್ತಿಯ ಉತ್ತರೋತ್ತರ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಮತ್ತು ಜನ್ಮಜಾತ ದೋಷಗಳನ್ನು ನಿವಾರಿಸುವಲ್ಲಿ “ಮುಹೂರ್ತ” ಆಯುಧದಂತೆ ರಕ್ಷೆ ನೀಡುತ್ತದೆ ಎಂಬುದೇ ಈ ಕೃತಿಯ ಒಳ ತಾತ್ಪರ್ಯ.

    ಅಂದಹಾಗೆ ಆನಂದತೀರ್ಥಾಚಾರ್ ಜ್ಯೊತಿಷ್ಯದಲ್ಲಿ ಅಪರೂಪವೆನಿಸುವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದು, ಹಲವು ವರ್ಷಗಳಿಮ್ದ ಜ್ಯೋತಿಷ್ಯ ತರಗತಿಗಳನ್ನು ನಿರಂತರವಾಗಿ (ಇತರರೊಂದಿಗೆ) ನಡೆಸಿಕೊಂಡು ಬರುತ್ತಿದ್ದು, ಎರಡು ಪುಸ್ತಕಗಳನ್ನು ಈಗಾಗಲೆ ರಚಿಸಿದ್ದಾರೆ.

    ರೂ 300/- ಮುಖ ಬೆಲೆಯ ಗ್ರಂಥದ ಪ್ರತಿಗಳು ಕೆಳಗಿನ ವಿಳಾಸದಲ್ಲಿ ಮಾರಾಟಕ್ಕೆ ಲಭ್ಯವಿದೆ.ಶ್ರೀ ಭಾಸ್ಕರಾಚಾರ್ಯ ಜ್ಯೋತಿರ್ವಿದ್ಯಾ ಪ್ರತಿಷ್ಠಾನ (ರಿ.)361, ಮೊದಲನೆಯ ಮಹಡಿ, ದೀಕ್ಷಿತ್ ರಸ್ತೆ
    ಕೆ.ಬಿ ಬಡಾವಣೆ, ದಾವಣಗೆರೆ-577 002


    ಕೆ ಎನ್ ಜಯಪ್ರಕಾಶ್, ವಕೀಲರು ಹಾಗೂ ಪತ್ರಕರ್ತರು

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!