26.8 C
Karnataka
Saturday, September 21, 2024

    ಹೃದಯಸ್ಪರ್ಶಿ ಭಾವಗೀತೆಗಳ ಸೃಷ್ಟಿಕರ್ತ

    Must read

    ಎಲ್ಲಿ  ಜಾರಿತೋ ಮನವು ಎಲ್ಲೇ ಮೀರಿತೋ …” 

    “ಬನ್ನಿ ಭಾವಗಳೇ ಬನ್ನಿ ನನ್ನೆಡೆಗೆ ಕರೆಯುವೆ ಕೈಬೀಸಿ…..

    ಬಂದೆ ಬರತಾವ ಕಾಲ…..”

    “ಹಿಂದೆ ಹೇಗೇ  ಚಿಮ್ಮುತ್ತಿತ್ತು ಕಣ್ಣ ತುಂಬಾ ಪ್ರೀತಿ…” 

    ಹಾಡುಗಳನ್ನು ಕೇಳದ  ಕನ್ನಡಿಗರು ವಿರಳ. ಇಂತಹ ಅನೇಕ  ಹೃದಯಸ್ಪರ್ಶಿ ಭಾವಗೀತೆಗಳ ಸೃಷ್ಟಿಕರ್ತ ಮತ್ತ್ಯಾರು ಅಲ್ಲ,   ನಿನ್ನೆಯಷ್ಟೇ ನಮ್ಮನ್ನಗಲಿದ  ಕನ್ನಡಿಗರ ಅಚ್ಚುಮೆಚ್ಚಿನ ಕವಿ  ಡಾ.  ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ. 6 ಮಾರ್ಚ್ 2021 ರಂದು ಅವರು ನಮ್ಮನ್ನು ಭೌತಿಕವಾಗಿ ಅಗಲಿದರೂ ತಮ್ಮ ಅಪಾರವಾದ ಸಾಹಿತ್ಯ ಕೃಷಿಯ ಮೂಲಕ ಕರ್ನಾಟಕ  ಮಾತ್ರವಲ್ಲ ಜಗತ್ತಿನಾದ್ಯಂತ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುವರು.   

    1968ರಲ್ಲಿ ಬಿಡುಗಡೆಯಾದ ಅವರ  ಪ್ರಥಮ ’ವೃತ್ತ ಕವನ ಸಂಕಲನ’ ದಿಂದ ಪ್ರಾರಂಭವಾಗಿ ಇತ್ತೀಚಿನ   ‘ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ’  ತನಕ  ಕನ್ನಡ ಸಾರಸ್ವತ ಲೋಕಕ್ಕೆ ಅವರದ್ದು ಅನುಪಮ ಕೊಡುಗೆ. ತಮ್ಮ ಆಪ್ತರ ವಲಯದಲ್ಲಿ  ‘ಎನ್. ಎಸ್. ಎಲ್.’  ಎಂದೇ ಚಿರಪರಿಚಿತರಾಗಿರುವ  ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ  ಅವರು   ಒಬ್ಬ ಶ್ರೇಷ್ಠ ಕವಿ ಅನ್ನುವುದರಲ್ಲಿ ಎರಡು ಮಾತಿಲ್ಲ.   ಆದರೆ   ಕೇವಲ ಕಾವ್ಯಕ್ಕೆ  ಸಿಮೀತವಾಗಿರದೇ   ವಿಮರ್ಶೆ, ಅನುವಾದ, ಮಕ್ಕಳ  ಸಾಹಿತ್ಯ,   ಸಂಶೋಧನಾ ಪ್ರಬಂಧ,    ಮುಂತಾದ ಹಲವಾರು ಪ್ರಕಾರಗಳಲ್ಲಿ  ಅವರ ಸಾಹಿತ್ಯ ಕೃಷಿ ವಿಸ್ತಾರಗೊಂಡಿದ್ದು ಕನ್ನಡ ನಾಡಿಗೆ  ಅಪೂರ್ವವಾದ ಕೊಡುಗೆಯನ್ನು ನೀಡಿರುವರು. ಅಷ್ಟು ಮಾತ್ರವಲ್ಲದೇ  ಸಂಸ್ಕೃತ ಮತ್ತು ಆಂಗ್ಲ  ಭಾಷೆಗಳಲ್ಲಿಯೂ    ಕೃತಿಗಳನ್ನು  ರಚಿಸಿ ಸಾಹಿತ್ಯದಲ್ಲಿ ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲೂ  ಗುರುತಿಸಿಕೊಂಡವರು.  ಹಳೆಗನ್ನಡ ಕಾವ್ಯಗಳನ್ನು ನವ್ಯ  ಸಾಹಿತ್ಯದೊಂದಿಗೆ ಸಮನ್ವಯಗೊಳಿಸಿ ತಮ್ಮದೇ  ಶೈಲಿಯಲ್ಲಿ  ಅಭಿವ್ಯಕ್ತಗೊಳಿಸುವ ಅವರ ಪಾಂಡಿತ್ಯ  ಅನನ್ಯವಾದದ್ದು.

    ತಂದೆ  ಶಿವರಾಮ ಭಟ್ಟ, ತಾಯಿ  ಮೂಕಾಂಬಿಕೆ  ಅವರ ಮಗನಾಗಿ  1936 ಅಕ್ಟೋಬರ 29ರಂದು ಶಿವಮೊಗ್ಗದಲ್ಲಿ  ಜನಿಸಿದ  ಭಟ್ಟರು  ಚಿಕ್ಕಂದಿನಿಂದಲೂ ಒಬ್ಬ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದವರು.   ಮೈಸೂರಿನ ಮಹಾರಾಜ ಕಾಲೇಜಿನಲ್ಲಿ  ಎಂ.ಎ. ಆನರ್ಸ್ ಪದವಿ  ಪಡೆದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿಗಾಗಿ ಸಂಶೋಧನೆ ನಡೆಸಿ ಮುಂದೆ  ತಮ್ಮ ಇಷ್ಟದ ಅಧ್ಯಾಪನದಲ್ಲಿ ವೃತ್ತಿ ಜೀವನವನ್ನು ಪ್ರಾರಂಭಿಸಿದರು.  ಬೆಂಗಳೂರು ವಿಶ್ವವಿದ್ಯಾನಿಲಯದ  ಕನ್ನಡ ಅಧ್ಯಯನ ವಿಭಾಗದಲ್ಲಿ ಸುಮಾರು ಮೂರು  ದಶಕಗಳ ಕಾಲ  ಅಧ್ಯಾಪಕ,   ರೀಡರ್, ಪ್ರಾಧ್ಯಾಪಕ,  ನಿರ್ದೇಶಕ,   ಡೀನ್  ಹಾಗೂ  ಇನ್ನಿತರ ಅತ್ಯುನ್ನತ  ಸ್ಥಾನಗಳಲ್ಲಿ ಸೇವೆ ಸಲ್ಲಿಸಿರುವ ಡಾ. ಲಕ್ಷ್ಮೀನಾರಾಯಾಣ ಭಟ್ಟರು ಒಬ್ಬ ಸರಳ ಸಜ್ಜನಿಕೆಯ ಹಾಗೂ  ನೇರ ನಡೆನುಡಿಯ ವ್ಯಕ್ತಿ ಎಂದು ಅವರನ್ನು ಹತ್ತಿರದಿಂದ ಬಲ್ಲ  ಸಹದ್ಯೋಗಿಗಳ, ಬಂಧುಮಿತ್ರರ  ಮತ್ತು ವಿದ್ಯಾರ್ಥಿಗಳ ನುಡಿನಮನ. 

    ಸಿ. ಅಶ್ವಥ್, ಮೈಸೂರು ಅನಂತಸ್ವಾಮಿ, ಎಸ್. ಪಿ. ಬಾಲಸುಬ್ರಹ್ಮಣ್ಯಂ,  ಶಿವಮೊಗ್ಗ ಸುಬ್ಬಣ್ಣ,  ಎಚ್.ಕೆ.ನಾರಾಯಣ,  ಎಂ.ಡಿ.ಪಲ್ಲವಿ, ಮುಂತಾದ  ಖ್ಯಾತ ಹಿನ್ನೆಲೆ ಗಾಯಕರು ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ  ಅವರ ಕಾವ್ಯಗಳಿಗೆ  ತಮ್ಮ ಧ್ವನಿಯನ್ನು ನೀಡಿ    ಸುಗಮ-ಸಂಗೀತ ಕ್ಷೇತ್ರದಲ್ಲಿ ಒಂದು ಹೊಸ ಸಂಚಲವನ್ನು ಮೂಡಿಸಿದ್ದು ಅವರ ಕಾವ್ಯದಲ್ಲಡಗಿರುವ  ಮಾಂತ್ರಿಕ ಶಕ್ತಿಗೆ ಒಂದು ಉದಾಹರಣೆ. ಶಿಶುನಾಳ ಶರೀಫರ ಗೀತೆಗಳು  ಮತ್ತು ತತ್ವಪದಗಳನ್ನು ಕಲೆಹಾಕಿ  ಅವುಗಳ ಕಂಪನ್ನು  ಕನ್ನಡಿಗರಿಗೆ ಪಸರಿಸಿದ ಕೀರ್ತಿ  ಪ್ರೊ. ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ  ಅವರಿಗೆ ಸಲ್ಲುತ್ತದೆ. ಅವರ ಕೆಲವು ಕೃತಿಗಳು ಹಲವು ಆವೃತ್ತಿಯೊಂದಿಗೆ  ಪ್ರಕಟಣೆಗೊಂಡು  2 ಲಕ್ಷಕ್ಕೂ ಮೀರಿ ದಾಖಲೆ ಮಟ್ಟದಲ್ಲಿ ಖರೀದಿಯಾಗಿರುವುದು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಐತಿಹಾಸಿಕ ಹೆಗ್ಗುರುತು. 

    ಪ್ರೊ. ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ  ಅವರ ಅಪೂರ್ವವಾದ ಸಾಹಿತ್ಯ ಕೃತಿಗಳು ಇಂತಿವೆ: 

    ಕವನ ಸಂಕಲನಗಳು:  ವೃತ್ತ ಕವನ ಸಂಕಲನ;  ಕಾವ್ಯಪ್ರತಿಮೆ; ನಂದನ ಕಿಶೋರಿ; ಬಾರೋ ವಸಂತ; ನಿನ್ನೆಗೆ ನನ್ನ ಮಾತು;  ಸುಳಿ; ದೀಪಿಕಾ;  ಹೊಳೆ ಸಾಲಿನ ಮರ;  ಚಿತ್ರಕೂಟ’, ಅರುಣ ಗೀತೆ; ಭಾವಸಂಗಮ, ನೀಲಾಂಜನ; ಊರ್ವಶಿ ಗೀತ ನಾಟಕ. 

    ಮಕ್ಕಳ ಸಾಹಿತ್ಯ: ಜಗನ್ನಾಥ ವಿಜಯ;  ಮುದ್ರಾಮಂಜೂಷ. 

    ಸಂಶೋಧನಾ ಪ್ರಬಂಧ: ಆಧುನಿಕ ಕನ್ನಡ ಕಾವ್ಯ 

    ವಿಮರ್ಶೆ: ವಿವೇಚನ; ಹೊರಳು ದಾರಿಯಲ್ಲಿ ಕಾವ್ಯ; ಕಾವ್ಯಶೋಧನ 

    ಅನುವಾದ ಗ್ರಂಥಗಳು: ಸುನೀತ (ಶೇಕ್ಸಪಿಯರನ ಐವತ್ತು ಸಾನೆಟ್ಟುಗಳು); ಚಿನ್ನದ ಹಕ್ಕಿ ( ಯೇಟ್ಸ ಕವಿಯ ಐವತ್ತು ಕವನಗಳು); ಮೃಚ್ಛಕಟಿಕ;  ಇಸ್ಪೀಟ್ ರಾಜ್ಯ;  ಟ್ವೆಲ್ಫ್ತ್ ನೈಟ್;  ಭಾರತೀಯ ಗ್ರಂಥ ಸಂಪಾದನಾ ಪರಿಚಯ’.

    ದಿ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೇನಿಂಗ್  (ಎನ್.ಸಿ.ಇ.ಆರ್.ಟಿ) ಸಂಸ್ಥೆಯಿಂದ ಶಿಶು ಸಾಹಿತ್ಯಕ್ಕಾಗಿ ’ಬಾಲಸಾಹಿತ್ಯ ಪುರಸ್ಕಾರ’; ಮೂರುಬಾರಿ ಕರ್ನಾಟಕ  ಸಾಹಿತ್ಯ ಅಕಾಡೆಮಿಯ ಬಹುಮಾನ;   ಶಿವರಾಮಕಾರಂತ ಪ್ರಶಸ್ತಿ;   ರಾಜ್ಯೋತ್ಸವ ಪ್ರಶಸ್ತಿ; ಮಾಸ್ತಿಪ್ರಶಸ್ತಿ;  “ಅನಕೃ ಪ್ರಶಸ್ತಿ” ವರ್ಧಮಾನ ಪ್ರಶಸ್ತಿ’   ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’  ಇನ್ನೂ  ಹತ್ತು ಹಲವಾರು   ಪ್ರಶಸ್ತಿ ಪುರಸ್ಕಾರಗಳು ಅವರ ಸಾಹಿತ್ಯ ಕೃತಿಗಳಿಗೆ  ಮತ್ತು  ಅವರು ನೀಡಿದ ಅನುಪಮ ಕೊಡುಗೆಗೆ   ಅರಸಿಕೊಂಡು ಬಂದವು. 

    ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆಯನ್ನು ನೀಡಿ ಕನ್ನಡ ನಾಡಿನಲ್ಲಿ ಮತ್ತು    ಕನ್ನಡಿಗರ ಹೃದಯದಲ್ಲಿ  ಚಿರಸ್ಥಾಯಿಯಾಗಿರುವ ಪ್ರೊ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ  ಅವರಿಗೆ ಒಂದು ಭಾವಪೂರ್ಣ ಶ್ರದ್ಧಾಂಜಲಿ.  

    ಡಾ. ಪ್ರಶಾಂತ ನಾಯ್ಕ
    ಡಾ. ಪ್ರಶಾಂತ ನಾಯ್ಕ
    ಅನೇಕರಾಷ್ಟ್ರೀಯಸಮ್ಮೇಳನ, ಕಾರ್ಯಗಾರ, ಪರಿಸರ ಸಂರಕ್ಷಣೆಯ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿರುತ್ತಾರೆ. ಸಹ-ಸಂಯೋಜಕರಾಗಿ ಜನತಾ ಜೀವವೈವಿಧ್ಯ ದಾಖಲಾತಿಯನ್ನು ಮಾಡಿರುತ್ತಾರೆ. ಅನೇಕ ಸಂಶೋಧನಾ ಲೇಖನಗಳನ್ನು, ಪುಸ್ತಕಗಳನ್ನು ಪ್ರಕಟಿಸಿರುತ್ತಾರೆ. ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯ ಜೀವವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
    spot_img

    More articles

    5 COMMENTS

    1. ಆಂಗ್ಲ ಭಾಷೆಯಲ್ಲಿನ ಸೊನೆಟ್ ಗಳಿಗೆ ‘ಸುನೀತ’ ಎಂಬ ಕನ್ನಡ ಪದ ಪ್ರಯೋಗವೇ ಚೆಂದ !!
      ಸರಳವಾದ ಮತ್ತು ಉತ್ತಮ ಸಂಸ್ಮರಣೆ.

    2. ….
      ಹರಿಯುವ ನೀರಿಗೆ ಯಾವ ಹೊಣೆ
      ಹಾರುವ ಹಕ್ಕಿಗೆ ಎಲ್ಲಿ ಮನೆ
      ಬಾಳಿನ ಕಡಲಿನ ತೆರೆಗಳ ಸೀಳಿ
      ತಲಪುವುದಾಚೆಯ ದಡದಾ ಕೊನೆ

      ಎಂಥಾ ಮರುಳಯ್ಯಾ ಇದು ಎಂಥಾ ಮರುಳು
      ಬೆಳಗಿನ ಹಿಮದಂತೆ ಹರಿವ ನೆರಳು
      ಥಳ ಥಳ ಮಿನುಗಿ ಸೋಕಲು ಕರಗಿ
      ಹರಿವುದು ಈ ಬಾಳಿನೆಲ್ಲಾ ತಿರುಳು

    3. ಅವರ ಭಾವಗೀತೆಗಳಲ್ಲಡಗಿದ ಭಾವನೆಗಳ ಸೊಗಡೆ ಚಂದ. ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದ್ದೀರಿ. 🙏

    4. ಕವಿ ಪ್ರೊ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಅಪೂರ್ವ ವ್ಯಕ್ತಿತ್ವದ ಬಗ್ಗೆ ಉತ್ತಮ ಮಾಹಿತಿಯುಕ್ತ ಬರವಣಿಗೆಯೊಂದಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದ್ದೀರಿ. ಇದು ಸಕಾಲಿಕ ಹಾಗೂ ಸ್ತುತ್ಯರ್ಹವಾದುದು.

    LEAVE A REPLY

    Please enter your comment!
    Please enter your name here

    Latest article

    error: Content is protected !!