23 C
Karnataka
Saturday, September 21, 2024

    ಎಣ್ಣೆ ಬಂದಾಗ ಕಣ್ಣು ಮುಚ್ಚುವುದು ಜಾಣತನವಲ್ಲ

    Must read

    ಷೇರುಪೇಟೆಯಲ್ಲಿ ಹೂಡಿಕೆಯನ್ನು ದೀರ್ಘಕಾಲೀನವಾಗಿ ಆಯ್ಕೆ ಮಾಡಿಕೊಳ್ಳಿ, ಎಸ್‌ ಐ ಪಿ ವಿಧದಲ್ಲಿ ಹೂಡಿಕೆಯು ಹೆಚ್ಚು ಸುರಕ್ಷಿತ ಮುಂತಾದ ಶಿಫಾರಸುಗಳು ಅನೇಕ ತಜ್ನರ ಅಭಿಪ್ರಾಯವಾಗಿರುತ್ತದೆ. ಈ ರೀತಿಯ ಹೂಡಿಕೆಯು ಪೇಟೆಗಳು ಕನಿಷ್ಠ ಮಟ್ಟದಲ್ಲಿದ್ದಾಗ ಸೂಕ್ತವಾದ ಸಂದೇಶವಾಗಿದೆ. ಆದರೆ ಪೇಟೆಗಳು ಗರಿಷ್ಠ ಮಟ್ಟದಲ್ಲಿ ತೇಲಾಡುತ್ತಿರುವ ಸಂದರ್ಭದಲ್ಲಿ ಅನಿಶ್ಚಿತತೆಯ ಸಮಯದಲ್ಲಿ ದೀರ್ಘಕಾಲೀನ ಹೂಡಿಕೆ ಎಂಬ ಉದ್ದೇಶದಿಂದ ಆಯ್ಕೆಮಾಡಿಕೊಂಡಿದ್ದರೂ ಅನಿರೀಕ್ಷಿತ ಮಟ್ಟದ ಏರಿಕೆಯನ್ನು ಕಂಡಾಗ ಅದನ್ನು ಉಪಯೋಗಿಸಿಕೊಳ್ಳುವುದು ಸಹಜತೆ ಎಂಬುದನ್ನು ಈ ಕೆಳಕಂಡ ಉದಾಹರಣೆಗಳಿಂದ ದೃಢಪಡುತ್ತದೆ.

    ದಿಲೀಪ್‌ ಬ್ಯುಲ್ಡ್‌ ಕಾನ್‌ ಲಿಮಿಟೆಡ್:ಈ ಕಂಪನಿಯು ರೋಡ್ಸ್‌ ಮತ್ತು ಹೈವೇ ವಲಯದ ಕಂಪನಿಯಾಗಿದೆ. ಹಿಂದಿನ ವರ್ಷ ಮಾರ್ಚ್‌ ನಲ್ಲಿ ಭಾರಿ ಕುಸಿತ ಕಂಡು ರೂ.194 ರ ಸಮೀಪಕ್ಕೆ ತಲುಪಿತ್ತು. ಸೆಪ್ಟೆಂಬರ್‌ ಅಂತ್ಯದ ಸಾಧನೆಗಿಂತ ಡಿಸೆಂಬರ್‌ ತಿಂಗಳ ಅಂತ್ಯದ ಸಾಧನೆಯು ಅತ್ಯುತ್ತಮವಾಗಿದೆ ಎಂಬ ಕಾರಣ ಕಳೆದ ಒಂದು ತಿಂಗಳಲ್ಲಿ ರೂ.479 ರ ಸಮೀಪದಿಂದ ರೂ.719 ರವರೆಗೂ ಜಿಗಿತ ಕಂಡು ಹೂಡಿಕೆದಾರರ ಗಮನ ಸೆಳೆದಿದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ದಿನಾಂಕ ಈ ತಿಂಗಳ 2 ರಂದು ರೂ.710 ರ ವಾರ್ಷಿಕ ದಾಖಲೆ ನಿರ್ಮಿಸಿದ ನಂತರದ ದಿನಗಳಲ್ಲಿ ಅಂದರೆ 4 ರಂದು ಷೇರಿನ ಬೆಲೆ ರೂ.620 ರವರೆಗೂ ಜಾರಿತು. ಸೋಜಿಗವೆಂದರೆ ಅಂದೇ ದಿನದ ಕೊನೆಯ ಅರ್ಧ ಗಂಟೆಯ ವಹಿವಾಟಿನಲ್ಲಿ ಷೇರಿನ ಬೆಲೆ ರೂ.645 ರ ಸಮೀಪದಿಂದ ರೂ.719 ರವರೆಗೂ ಜಿಗಿದು ವಿಸ್ಮಯಕಾರಿ ಅಂಶ ಪ್ರದರ್ಶಿಸಿದೆ. ಒಂದೇ ದಿನ ರೂ.651 ರಿಂದ ರೂ.620 ರವರೆಗೂ ಕುಸಿದು ನಂತರ ರೂ.719 ಕ್ಕೆ ಪುಟಿದೆದ್ದು ಸುಮಾರು ರೂ.130 ರಷ್ಟರ ಏರಿಳಿತವನ್ನು ಪ್ರದರ್ಶಿಸಿದೆ. ಒಂದೇ ದಿನ ಶೇ.20 ರಷ್ಟು ಬದಲಾವಣೆಯು ಅಸಹಜ ನಡೆಯಾಗಿದೆ. ಈ ರೀತಿಯ ನಡೆಗೆ ಕಾರಣವೇನಿರಬಹುದೆಂದು ತಿಳಿಯುವ ವೇಳೆಗೆ ಪೇಟೆಯ ಚಟುವಟಿಕೆಯ ಸಮಯ ಮುಗಿದಿತ್ತು. ನಂತರದ ದಿನ ಕಂಪನಿಯಿಂದ ಹೊರಬಿದ್ದ ಪ್ರಕಟಣೆಯಲ್ಲಿ ಕಂಪನಿಯು ಕರ್ನಾಟಕದ ಭಾರತ್‌ ಮಾಲಾ ಪರಿಯೋಜನೆಯ ಮೊದಲನೆಯ ಹಂತದ ರೂ.2,439 ಕೋಟಿಯ ಆರ್ಡರ್‌ ನ್ನು ಪಡೆದಿದೆ ಎಂದು ತಿಳಿಸಿದೆ. ಕೇವಲ ಆರ್ಡರ್‌ ಪಡೆದುಕೊಂಡ ಕಾರಣಕ್ಕೆ ಈ ರೀತಿಯ ಸ್ಪಂದನವು ತಾತ್ಕಾಲಿಕವಾಗಿರುತ್ತದೆ.

    ಬಾಲ್ಮರ್‌ ಲೌರಿ ‌ & ಕೋ ಲಿಮಿಟೆಡ್:ಈ ಕಂಪನಿಯು ಈ ವರ್ಷ ಇಂಟೀರಿಯಂ ಡಿವಿಡೆಂಡ್‌ ವಿತರಿಸುವುದಿಲ್ಲವೆಂಬ ನಿರ್ಧಾರದಿಂದ ಷೇರಿನ ಬೆಲೆ ಮಾರಾಟದ ಒತ್ತಡವನ್ನೆದುರಿಸಬೇಕಾಯಿತು. ಷೇರಿನ ಬೆಲೆಯು ಫೆಬ್ರವರಿ ಕೊನೆ ವಾರದಲ್ಲಿ ರೂ.114 ರಲ್ಲಿದ್ದ ಷೇರಿನ ಬೆಲೆ ಗುರುವಾರದಂದು ರೂ.152 ರವರೆಗೂ ಜಿಗಿತ ಕಂಡಿತು. ಈ ರೀತಿಯ ಏರಿಕೆಗೆ ಯಾವುದೇ ಕಾರಣವಿಲ್ಲದಿದ್ದರೂ ಅನಿರೀಕ್ಷಿತ ಏರಿಕೆಯು ಲಾಭ ನಗದೀಕಾರಿಸಿಕೊಳ್ಳಲು ಉತ್ತಮ ಅವಕಾಶವನ್ನು ಕಲ್ಪಿಸಿತು. ವಾರಾಂತ್ಯದಲ್ಲಿ ರೂ.138 ರ ಸಮೀಪ ಕೊನೆಗೊಂಡಿದೆ.

    ಬಾಲ್ಮರ್‌ ಲೌರಿ ‌ಇನ್ವೆಸ್ಟ್ ಮೆಂಟ್ಸ್ ಲಿಮಿಟೆಡ್:ಈ ಕಂಪನಿ ಸಾರ್ವಜನಿಕ ವಲಯದ ಕಂಪನಿಯಾಗಿದೆ. ಗುರುವಾರದಂದು ಈ ಷೇರಿನ ಬೆಲೆ ರೂ.415 ರ ಆಸುಪಾಸಿನಲ್ಲಿದ್ದು, ನಂತರ ದಿಢೀರ್‌ ರೂ.475 ರವರೆಗೂ ಜಿಗಿತ ಕಂಡಿತು. ಈ ಜಿಗಿತಕ್ಕೆ ಅಧಿಕೃತವಾದ ಕಾರಣವೇನೂ ಇಲ್ಲದಿದ್ದರೂ ಈ ಪ್ರಮಾಣದ ಏರಿಕೆಯು ವಿಸ್ಮಯಕಾರಿಯಾಗಿದೆ. ‌ ಹಿಂದಿನ ವರ್ಷದ ಸೆಪ್ಟೆಂಬರ್‌ ನಲ್ಲಿ ಪ್ರತಿಷೇರಿಗೆ ರೂ.37.50 ಯಂತೆ ಲಾಂಭಾಂಶ ವಿತರಿಸಿದ ನಂತರ ಷೇರಿನ ಬೆಲೆ ರೂ.333 ರ ಸಮೀಪಕ್ಕೆ ಇಳಿಕೆ ಕಂಡಿದ್ದ ಈ ಷೇರು ದಿಢೀರನೆ ಬೆಂಬಲ ಪಡೆದಿದ್ದು ವಿತ್ತೀಯ ಸಂಸ್ಥೆಗಳ ಖರೀದಿ ಕಾರಣವಾಗಿರಬಹುದು.

    ಹಿಂದೂಸ್ಥಾನ್‌ ಕಾಪರ್‌ ಲಿಮಿಟೆಡ್:ಜಾಗತಿಕ ಪೇಟೆಗಳಲ್ಲಿ ಲೋಹಗಳ ಬೆಲೆಯು ಗಗನದತ್ತ ಚಿಮ್ಮುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಲೋಹಗಳ ಷೇರುಗಳು ಏರಿಕೆಯನ್ನು ಕಂಡವು. ಇದರಲ್ಲಿ ಹಿಂದೂಸ್ಥಾನ್‌ ಕಾಪರ್‌ ಸಹ ಒಂದು. ಕಳೆದ ಒಂದೇ ತಿಂಗಳಲ್ಲಿ ರೂ.69 ರ ಸಮೀಪದಿಂದ ರೂ.165 ರ ಸಮೀಪಕ್ಕೆ ಏರಿಕೆ ಕಂಡು ಎಲ್ಲರ ಗಮನ ಸೆಳೆದ ಕಂಪನಿ ಇದಾಗಿದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಕಳೆದ ಎಂಟೊಂಬತ್ತು ವರ್ಷಗಳ ಹಿಂದೆ ಖರೀದಿಸಿದವರಿಗೆ ಆ ಷೇರಿನಿಂದ ಹೊರಬರುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಡಿಸೆಂಬರ್‌ 2012 ರಲ್ಲಿ ಈ ಷೇರಿನ ಬೆಲೆ ರೂ.155 ರ ಸಮೀಪವಿತ್ತು. ಈಗ ರೂ.165 ರ ಸಮೀಪಕ್ಕೆ ಬರುತ್ತಿದ್ದಂತೆಯೇ ಮಾರಾಟದ ಒತ್ತಡದಿಂದ ರೂ.129 ರವರೆಗೂ ಕುಸಿದು ನಂತರ ಮತ್ತೆ ಚೇತರಿಕೆಯಿಂದ ರೂ.142 ರ ಸಮೀಪವಿದೆ.

    ಹೆಚ್‌ ಸಿ ಎಲ್ ಟೆಕ್ನಾಲಜೀಸ್‌ ಲಿಮಿಟೆಡ್:ಕಳೆದ ಒಂದು ತಿಂಗಳಿನಲ್ಲಿ, ಅಂದರೆ ಫೆಬ್ರವರಿ 12 ರಂದು ರೂ.986 ರಲ್ಲಿದ್ದ ಈ ಕಂಪನಿ 24 ರಂದು ಈ ಷೇರು ರೂ.890 ರ ಕನಿಷ್ಠ ದಾಖಲಿಸಿ, ನಂತರ ಕನಿಷ್ಠದಿಂದ ರೂ.971 ರ ಗರಿಷ್ಠದವರೆಗೂ ಏರಿಕೆ ಕಂಡು ಈಗ ರೂ.941 ರ ಸಮೀಪವಿದೆ. ಕಳೆದ 26 ರಂದು ಷೇರಿನ ಬೆಲೆ ರೂ.905 ರಲ್ಲಿತ್ತು. ನಂತರ ಮಾರ್ಚ್‌ 4 ರಂದು ರೂ.969 ರವರೆಗೂ ಏರಿಕೆ ಪ್ರದರ್ಶಿಸಿ 5 ರಂದು ರೂ.941 ರಲ್ಲಿ ವಾರಾಂತ್ಯ ಕಂಡಿದೆ.

    ಇದೇ ರೀತಿ ಅಗ್ರಮಾನ್ಯ ಕಂಪನಿಗಳಾದ ಹೆಚ್‌ ಡಿ ಎಫ್‌ ಸಿ ಬ್ಯಾಂಕ್, ಕೆನರಾ ಬ್ಯಾಂಕ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಟಾಟಾ ಸ್ಟೀಲ್‌, ಟಾಟಾ ಮೋಟಾರ್ಸ್‌, ಐ ಆರ್‌ ಸಿ ಟಿ ಸಿ, ಮುಂತಾದವುಗಳು ರಭಸದ ಏರಿಳಿತಗಳನ್ನು ಪ್ರದರ್ಶಿಸಿವೆ. ಅಂದರೆ ವಹಿವಾಟುದಾರರು, ತ್ವರಿತವಾದ ಏರಿಕೆ ಕಂಡ ಷೇರುಗಳಿಂದ ನಿರ್ಗಮಿಸಿ, ಅನಿರೀಕ್ಷಿತ ಕುಸಿತ ಪ್ರದರ್ಶಿಸಿದ ಕಂಪನಿಗಳನ್ನು ಖರೀದಿಸುತ್ತಾರೆ. ಇಂತಹ ವಾತಾವರಣದಲ್ಲಿ ಷೇರುಗಳ ಬಗ್ಗೆ ವ್ಯಾಮೋಹ ತ್ಯಜಿಸಿ, ಕೇವಲ ಲಾಭಗಳಿಕೆಯತ್ತ ಕೇಂದ್ರೀಕರಿಸಿದಲ್ಲಿ ಮಾತ್ರ ಹೂಡಿಕೆ ಹಣ ಸ್ವಲ್ಪಮಟ್ಟಿನ ಸುರಕ್ಷತೆ ಕಾಣಬಹುದು.

    ಜಾಗತಿಕ ಪೇಟೆಗಳ ಏರಿಳಿತಗಳ ನೆಪದಲ್ಲಿ ಕುಸಿಯುವಂತಾಗುವ, ದೇಶದ ಆಂತರಿಕ ಆರ್ಥಿಕತೆ ನೆಪದಲ್ಲಿ ಏರಿಕೆ ಕಾಣುವಂತಾಗುತ್ತಿರುವ ಈ ಸಂದರ್ಭದಲ್ಲಿ ಯಶಸ್ಸು ಕಾಣಬೇಕೆಂದರೆ ಕೇವಲ ʼ ವ್ಯಾಲ್ಯು ಪಿಕ್-‌ ಪ್ರಾಫಿಟ್‌ ಬುಕ್‌ʼ ಪಟ್ಟು ಅಳವಡಿಸಿಕೊಂಡಲ್ಲಿ ಮಾತ್ರ ಸಾಧ್ಯ. ಸುದ್ಧಿಗಳಿಗೆ ಮಾರುಹೋಗದೆ, ಸುದ್ಧಿಗಳ ಪ್ರಭಾವವನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳುವುದು ಅಗತ್ಯ. Investors in performance based quality shares, generally, never lose money ಎಂಬುದು ನೆನಪಿರಲಿ. ಒಂದು ವೇಳೆ ಖರೀದಿಸಿದ ಷೇರಿನ ಬೆಲೆ ಕುಸಿತಕ್ಕೊಳಗಾದಲ್ಲಿ, ದೀರ್ಘಕಾಲೀನ ಹೂಡಿಕೆಯಾಗಿ ಮುಂದುವರೆಸುವಂತಿದ್ದರೆ ಒಳಿತು.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!