ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.
ಯಥಾ ರಾಜ ತಥಾ ಪ್ರಜಾ-ಶಿವಕೋಟ್ಯಾಚಾರ್ಯರ ವಡ್ಡಾರಾಧನೆಯ ‘ಕಾರ್ತೀಕ ಋಷಿ’ ಎಂಬ ಕಥೆಯಲ್ಲಿ ಬರುವ ಮಾತಿದು .ರಾಜರು ಕೆಲವೊಮ್ಮೆ ಅಧಿಕಾರದ ದರ್ಪದಿಂದ ಅಧರ್ಮವನ್ನು ಆಚರಣೆ ಮಾಡುತ್ತಾರೆ. ರಾಜಾಧಿಕಾರವನ್ನು ತಮಗೆ ಹೇಗೆ ಬೇಕೋ ಹಾಗೆ ಬಳಕೆ ಮಾಡಿಕೊಳ್ಳುತ್ತಾರೆ. ರಾಜ್ಯದ ಹಿರಿಯರು ಹೇಳಿದರೂ, ಎಚ್ಚರಿಸಿದರೂ ಅದರ ಕಡೆ ಗಮನ ಹರಿಸದೆ ತಮಗೆ ತೋಚಿದ ದುರ್ಮಾರ್ಗದಲ್ಲಿಯೇ ನಡೆದು ಪ್ರಜೆಗಳನ್ನೂ ದಾರಿ ತಪ್ಪಿಸುತ್ತಾರೆ.
‘ಕಾರ್ತೀಕ ಋಷಿ’ ಕಥೆಯಲ್ಲಿ ನಂದೀಶ್ವರ ಹಬ್ಬದ ದಿನ ಅಗ್ನಿರಾಜ ಅಲಂಕೃತೆಯಾದ ತನ್ನ ಮಗಳನ್ನೇ ನೋಡಿ ಮದುವೆಯಾಗಲೇ ಬೇಕು ಎಂದು ತೀರ್ಮಾನಿಸಿ “ನಾನು ರಾಜ್ಯಭಾರ ಮಾಡತಕ್ಕ ಪ್ರದೇಶಗಳಲ್ಲಿ ಹುಟ್ಟಿಬಂದ ಶ್ರೇಷ್ಠವಾದ ವಸ್ತು ಯಾರಿಗೆ ಸೇರಬೇಕಾದುದು?” ಎಂದು ಪಂಡಿತರಲ್ಲಿ ಒಗಟಿನ ರೂಪದಲ್ಲಿ ಕೇಳುತ್ತಾನೆ. “ಒಳ್ಳೆಯದಾದ ಆನೆಯೂ ಕುದುರೆಯೂ ಮುತ್ತೂ ಮಾಣಿಕ್ಯವೂ ಸ್ತ್ರೀರತ್ನ ಮುಂತಾದ ಒಳ್ಳೆಯದಾದ ಶ್ರೇಷ್ಠ ವಸ್ತುಗಳೆಲ್ಲವೂ ಭೂಮಿಯನ್ನು ಆಳತಕ್ಕವನಿಗೆ ಸೇರಬೇಕಾದವು” ಎಂದು ಸರಿಯಾಗಿ ವಿಷಯ ತಿಳಿಯದ ಪಂಡಿತರು ಹೇಳುತ್ತಾರೆ. ಆದರೆ ರಾಜನ ದುರುದ್ದೇಶ ಗಮನಿಸಿ ಕೆಲವರು ತೀವ್ರ ವಿರೋಧ ವ್ಯಕ್ತಪಡಿಸುತ್ತಾರೆ.
ಆಗ ರಾಜ್ಯದಲ್ಲಿ ಒಬ್ಬೊಬ್ಬರನ್ನೇ ಕರೆದು ತಾನು ತನ್ನ ರಾಜ್ಯದಲ್ಲಿ ಅತ್ಯುತ್ತಮವಾದುದನ್ನು ಉಪಭೋಗಿಸಬಹುದು ಎಂದು ಅವರಿಂದಲೇ ಹೇಳಿಸುತ್ತಾನೆ. ಅವನ ಮಾತಿಗೆ ವಿರುದ್ಧವಾಗಿದ್ದವರನ್ನು ಸೆರೆಮನೆಗೆ ಕಳುಹಿಸುತ್ತಾನೆ. ನಂತರ ಅಗ್ನಿರಾಜ ಸ್ವಂತ ಮಗಳು ಕೃತ್ತಿಕೆಯನ್ನು ಮದುವೆಯಾಗುತ್ತಾನೆ.
ರಾಜನ ಧರ್ಮ ವಿರುದ್ಧವಾದ ವರ್ತನೆಗೆ ವೀರಮತಿ ಬ್ರಹ್ಮಚರ್ಯವನ್ನು ಸ್ವೀಕರಿಸುತ್ತಾಳೆ. ಕೃತ್ತಿಕೆಯ ಪ್ರತಿಕ್ರಿಯೆಗಳು ಮಾತಿನಲ್ಲಿ ಬರುವುದೇ ಇಲ್ಲ. ಕಾರ್ತಿಕ ಋಷಿಯ ಕಥೆಯಲ್ಲಿ ಅಗ್ನಿರಾಜ ಸಮಾಜದ ಕಟ್ಟಳೆಗಳನ್ನ ಮುರಿಯಲು ಪ್ರಯತ್ನ ಮಾಡಿದ ನಂತರ “ಯಥಾ ರಾಜ ತಥಾ ಪ್ರಜಾ” ಎಂಬಂತೆ ಕೃತ್ತಿಕಾಪುರ ಭೋಗಂಕಾರೋಹಣ ಅಥವಾ ಭೋಗಪಟ್ಟಣ ಆಗಿಬಿಡುತ್ತದೆ.
ಹಿರಿಯರು ತಮ್ಮನ್ನು ಆಳುವವರು ಹೇಗೆ ನಡೆದುಕೊಳ್ಳುತ್ತಾರೆಯೋ ಹಾಗೆ ಕಿರಿಯರಯ ನಡೆದುಕೊಳ್ಳುತ್ತಾರೆ. ರಾಜನಾದವನಿಗೆ ತನ್ನ ದಾರಿ ಪ್ರಜೆಗಳಿಗೆ ಯಾವಾಗಲೂ ಮಾರ್ಗದರ್ಶನ ನೀಡುವಂತೆ ಇರಬೇಕು ಎಂಬ ಧ್ಯೇಯ ನೆನಪಲ್ಲಿರಬೇಕು. ಆದರ್ಶಗಳಿಗೆ ತಿಲಾಂಜಲಿ ಇತ್ತ ರಾಜ, ನಾಯಕ, ಮನೆಯ ಹಿರಿಯ ಯಾರೇ ಆಗಲಿ ಅವರಂತೆ ಪ್ರಜೆಗಳ, ಕುಟುಂಬ ಸದಸ್ಯರ ನಡತೆಯೂ ಕುಂಟುತ್ತದೆ ಎಂಬುದನ್ನು ಪ್ರಸ್ತುತ ಮಾತು ಹೇಳುತ್ತದೆ. ಹಾಗಾಗಿ ಹಿರಿಯರು, ನೈತಿಕತೆಯನ್ನು ಬಿಡದೆ, ಭ್ರಷ್ಟತೆಗೆ ಇಳಿಯದೆ ಪ್ರಾಮಾಣಿಕ, ಸನ್ನಡತೆಯ ಹಾದಿಯಲ್ಲಿಯೇ ಸಾಗಬೇಕು ಕಿರಿಯರಿಗೆ ಆದರ್ಶಪ್ರಾಯರಾಗಿರಬೇಕು.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.