26 C
Karnataka
Thursday, November 21, 2024

    ಹೊಯ್ದಾಡುವ ಹೊಸಿಲ ದೀಪ

    Must read

    ಆಕೆ ಯಾವುದೋ ವೈಯುಕ್ತಿಕ ಕಾರಣಕ್ಕಾಗಿ ದೂರದ ಊರಿಗೆ ಪ್ರಯಾಣ ಮಾಡುತ್ತಿದ್ದಳು. ಸುಮಾರು ನಲವತ್ತೈದರ ಆಸುಪಾಸು. ನಲವತ್ತು ದಾಟಿದ ಐವತೈದರ ಒಳಗಿನ ಹೆಣ್ಣಿಗೆ ಇರಬೇಕಾದ ಪ್ರೌಢಿಮೆ ,ಅಂದಚಂದ, ಕಸುವು ಎಲ್ಲವೂ ಅವಳಲ್ಲಿ ಹದವಾಗಿತ್ತು. ಕಾಣದ ನೋವಿನ ಎಳೆಯೊಂದು ಅದೆಲ್ಲದರ ನಡುವೆಯೂ ತಾನೂ ಒಂದು ಪಾಲು ಎಂಬಂತಿದ್ದು ಆ ನೋವು ಇಣುಕಿದಾಗೆಲ್ಲ ಅದನ್ನು ಅಡಗಿಸಿ ಸಹಜವಾಗಿರಲು ಸಾಹಸ ಪಡುತ್ತಿದ್ದಳು.

    ಮೂರು ಸೀಟಿನ ಎಡತುದಿಯ ಬದಿಯಲ್ಲಿ ಇವಳು ಕುಳಿತಿದ್ದಳು.
    ಕಿಟಕಿ ಪಕ್ಕ ಒಬ್ಬ ಧಡೂತಿ ಆಸಾಮಿ. ಮಧ್ಯಕ್ಕೆ ಇಪ್ಪತೈದರ ಆಸುಪಾಸಿನ ಯುವಕ.ಆ ಘಾಟಿ ರಸ್ತೆಯಲ್ಲಿ ಬಸ್ಸು ವಾಲಿದಾಗೆಲ್ಲ ಆ ಹುಡುಗನ ತೀರ ಸನಿಹಕ್ಕೆ ಅಬಾಧಿತವಾಗಿ ಜಾರಿಕೊಳ್ಳುತ್ತಿದ್ದಳು ಇವಳು.ಈ ಬದಿಗೆ ವಾಲಿದಾಗ ಸೀಟಿನಿಂದ ಬೀಳುವ ಬಗೆ.

    ಆ ಹುಡುಗನೂ ಈ ಇವಳೂ ಒಬ್ಬರಿಗೊಬ್ಬರು ಹೀಗೆ ತೀರ ಸನಿಹಕ್ಕೆ ತಾಗಿಕೊಂಡಿದ್ದು ಅವನದೇ ವಯಸ್ಸಿನ ಮಗನ ತಾಯಿಯಾದ ಇವಳಿಗೆ ಮೊದಲಿಗೆ ಏನೂ ಅನಿಸಲಿಲ್ಲ.

    ಮುಂದೆ ಒಂದು ಹೇರ್ಪಿನ್ ತಿರುವು.

    ಇನ್ನೇನು ಸೀಟಿನಿಂದ ಬಿದ್ದೆಹೋದಂತಾದಾಗ ಆ ಹುಡುಗ ಇವಳ ಒಳಭುಜವನ್ನು ಬಲವಾಗಿ ಹಿಡಿದುಕೊಂಡ.ಇವಳು ನಖಶಿಖಾಂತ ನಡುಗಿಹೋದಳು.ಆದರೆ ಅದನ್ನು ತೋರಿಸಿಕೊಳ್ಳದೆ ಒಂದು ಕೃತಜ್ಞತೆಯ ನೋಟವಷ್ಟೇ ಅವನೆಡೆಗೆ ಬೀರಿದಳು.ಎಳೆ ಹುಡುಗನ ಮನಸ್ಸು ನವಿರಾಯಿತು. ಅವಳ ಚಂದಕ್ಕೆ ,ಪ್ರೌಢಿಮೆಗೆ ,ನೋಟಕ್ಕೆ ಆ ಒಂದು ಕ್ಷಣದಲ್ಲಿ ಮಾರುಹೋಗಿದ್ದ ಅವನು.ಈ ಬಗೆಯ ಹಿರಿತನದ ಕುರಿತಾದ ಆಕರ್ಷಣೆ ಇಂದು-ನಿನ್ನೆಯದಲ್ಲ ನಮ್ಮ ನಡುವೆ.

    ಆ ನಂತರದಲ್ಲಿ ಹರೆಯದ ಹುಡುಗನ ಒರಟು ಬೆರಳುಗಳು ಸಾವಕಾಶ ಅವಳ ತೋಳುಗಳ ಮೇಲೆ ನವುರಾಗಿ ಹರಿದಾಡಿದವು.ಒಂದು ಹಂತದಲ್ಲಿ ಅವನ ಮೊಣಕೈ ಅವಳ ಮೃದುತ್ವಕ್ಕಾಗಿ ಕೂಡ ತಡಕಾಡಿತು.

    ಹಾಗಿದ್ರೆ….

    ಇದೆಲ್ಲಾ ನಡೀತಿದ್ದಾಗ ಇವಳೇನು ಮಾಡ್ತಿದ್ದಳು.
    ಹುಡುಗನಿಗೆ ಗದರಿಸಿ ಸರಿಕೂರಲು ಹೇಳಿದಳೇ.?
    ಅಥವಾ ದೊಡ್ಡ ಧ್ವನಿಯಲ್ಲಿ ಕೂಗಾಡಿದಳೆ?
    ವಿಡಿಯೋ ರೆಕಾರ್ಡ್ ಮಾಡಿಕೊಂಡು ಹರಿಬಿಟ್ಟಳೆ?
    ಉಹು..ಇದಾವುದೂ ಅಲ್ಲ.

    ಸದಾಕಾಲ ಗಂಡನ ಕ್ರೌರ್ಯ ಅಸಡ್ಡೆ ಅಹಂಕಾರ ಬೇಜವಾಬ್ದಾರಿತನ ನಡವಳಿಕೆಯಿಂದಾಗಿ ಇನ್ನಿಲ್ಲದಂತೆ ನಲುಗಿಹೋಗಿದ್ದಳು ಈಕೆ. ಪ್ರತಿದಿನ ಅವನಿಂದ ಎದುರಿಸುತ್ತಿದ್ದ ಅವಮಾನಗಳ ಹೊರೆ ಹೊತ್ತೇ ಆ ರಥದ ಗಾಲಿ ನಡೆಯುತಿತ್ತು.ಸಮಾಜಕ್ಕಾಗಿ ಮಕ್ಕಳಿಗಾಗಿ ತನ್ನ ಸುರಕ್ಷತೆಗಾಗಿ ದಾಂಪತ್ಯವನ್ನು ಸಹಿಸಿಕೊಂಡಿದ್ದೀನಿ ಅಷ್ಟೇ ಎನ್ನುವುದನ್ನು ಬಿಕ್ಕಿನ ನಡುವೆ ಹೇಳುವಾಗೆಲ್ಲ ಹಿಡಿಯಾಗುತ್ತಿದ್ದಳು.

    ತೋರಿಕೆಯ ಈ ದಾಂಪತ್ಯದಲ್ಲಿ ಅವಳು ಪತಿಯನ್ನು ಬಯಸಿದಾಗೆಲ್ಲ ಆತ ಕೊಂಕಿನ ಮಾತು ತೆಗೆದು ಕಾಯುವಂತೆ ಮಾಡಿ ಕಾಯದ ಕಾವು ಏರಿಸಿ ತಾನು ಅಂಗಿ ತೊಟ್ಟು ವ್ಯಂಗ್ಯನೋಟ ಬೀರಿ ಆಚೆ ಹೊರಡುತ್ತಿದ್ದನಂತೆ.ಅಥವಾ ಎಲ್ಲದಕ್ಕೂ ತಾನೇ ಮೊದಲು ಪ್ರೇರೇಪಿಸಿ ನಂತರ ಮುಂದುವರೆಯದೆ ಎದ್ದು ಹೊರಡುತ್ತಿದ್ದನಂತೆ.
    ಆಕೆಯ ಆ ಕ್ಷಣದ ನೋವು ನಿರಾಸೆ ಅಪಮಾನ ಅಸಹ್ಯಗಳನ್ನು ಮಾರನೆಯ ದಿನ ಹಂಚಿಕೊಳ್ಳುವಾಗ ನನ್ನ ಜೀವ ಕುದಿಯುತಿತ್ತು.

    ಬಹುತೇಕ ತನ್ನ 35ನೇ ವಯಸ್ಸಿನಿಂದಲೂ ಇಂತಹುದೇ ದಬ್ಬಾಳಿಕೆಯನ್ನು ಸಹಿಸಿ ಸಹಿಸಿ ಒಳಗೊಳಗೇ ಕಾಷ್ಟವಾಗಿದ್ದಳು.

    ಪ್ರಕೃತಿ ಸಹಜವಾದ ಬಯಕೆಗಳನ್ನು ಅಡಗಿಸಿಕೊಂಡು, ಮಿತಿಯ ಗಡಿ ದಾಟದೆ ಪಾಲಿಗೆ ಬಂದದ್ದು ಎಂಬಂತೆ ಸನ್ಯಾಸದ ಬದುಕನ್ನು ಅಪ್ಪಿಕೊಂಡವಳು,ಸಾವಿರ ಸೂಜಿಮೊನೆಯಿಂದ ಚುಚ್ಚುವಂತಹ ಅವಮಾನದ ಬದುಕನ್ನೂ ಅನಿವಾರ್ಯವಾಗಿ ಒಪ್ಪಿಕೊಂಡಿದ್ದಳು.

    ಆದರೆ…

    ಅಚಾನಕ್ಕು ಸಿಕ್ಕ ಈ ಸಾನಿಧ್ಯವನ್ನು ಸ್ಪರ್ಶ ಸುಖವನ್ನು ಅನುಭವಿಸದೇ ಅಸ್ವಾಧಿಸದೆ ಇರುವುದು ಅವಳ ದೇಹಕ್ಕೆ ಸಾಧ್ಯವಾಗಲಿಲ್ಲ.
    ತುಂಬಿದ ಬಸ್ಸಿನಲ್ಲಿ ಕಳ್ಳಬೆಕ್ಕಿನಂತೆ ಅವನ ಬೆರಳುಗಳು ಅವಳ ದೇಹದ ಒಂದು ಬದಿಯ ಮೇಲೆ ಆಡುವಾಗ ಕಾದ ಬಂಡೆಯಂತಹ ಅವಳ ದೇಹ ಪ್ರತಿಕ್ರಿಯಿಸಿದೆ ಇರುವುದಾದರೂ ಹೇಗೆ?

    ಹುಡುಗ ಹಿಡಿದ ಅವಳ ಒಳ ತೋಳಿನ ಮೇಲೆ ತನ್ನ ಬೆರಳಿಂದ ಬರೆದದ್ದೆಲ್ಲವೂ ಅಪ್ಯಾಯಮಾನವೆನಿಸಿತು.
    ಮತ್ತೆ ಮತ್ತೆ ಅವನು ಫೋನ್ ನಂಬರ್ ಪ್ಲೀಸ್ ಅಂತ ಬರೆದು ಕೇಳುತ್ತಿದ್ದುದ್ದು ಗಮನಕ್ಕೆ ಬಂದಿತ್ತಾದರೂ ಅರಿವಾಗದಂತೆ ಸುಮ್ಮನೇ ಇದ್ದಳು.

    ಕಾತರತೆಯ ಈ ಕ್ಷಣಗಳು ಅವಳ ಒಣಗಿದ ಬಾಳಿನಲ್ಲಿ ಚಿರವಾದ ಸಿಹಿ ನೆನಪುಗಳಾಗಿ ಉಳಿದು ಹೋಗಲಿ ಎಂಬಂತೆ ಅವನೆಡೆಗೆ ನೋಡಿದಳು.
    ಅದೇ ಕ್ಷಣಕ್ಕಾಗಿ ಕಾದವನಂತೆ ಹುಡುಗ ಬಯಕೆ ತುಂಬಿಕೊಂಡ ಕಣ್ಣುಗಳಿಂದ ಅವಳೆಡೆಗೆ ಯಾಚನೆಯ ನೋಟ ಬೀರಿದ.
    ಅಸಹಜವೆನಿಸಬಹುದಾದ ಆ ಸಂದರ್ಭಕ್ಕೆ ಅವಳು ಒಂದು ದೀರ್ಘ ನಿಟ್ಟುಸಿರಿನೊಂದಿಗೆ ಪ್ರತಿಕ್ರಿಯಿಸಿದ್ದಳು.ಈ ಕ್ಷಣಕ್ಕೆ ಅವಳಿಗೆ ತನ್ನ ಹೆಣ್ತನ ಸಾರ್ಥಕವಾಯಿತು ಎನಿಸಿತ್ತಂತೆ.

    ******

    ಈಚೀಚಿನ ದಿನಗಳಲ್ಲಿ ಬಹಳ ಗೆಲುವಾಗಿ ನಳನಳಿಸುತ್ತಿದ್ದಆಕೆಯನ್ನು ಕಂಡು ನನಗೂ ಸಂತೋಷವಾಗಿ ಮನೆಯಲ್ಲಿ ಸರಿಗಮವಾ ಅಂತ ತಮಾಷೆಯಾಗಿ ಕೇಳಿದೆ.

    ನಕ್ಕಾಗ ಪುಟ್ಟದಾಗುವ ತನ್ನ ಚುಕ್ಕಿಗಣ್ಣುಗಳನ್ನು ಇನ್ನಷ್ಟು ಚಿಕ್ಕದಾಗಿಸಿ ಅವಳು ಕಣ್ಣು ಮಿಟುಕಿಸಿದಳು.ಅವಳು ಅಷ್ಟೊಂದು ಗೆಲುವಾಗಿದ್ದ ಆ ದೃಶ್ಯ ಬಹುತೇಕ ಅವಳ ನನ್ನ ಪರಿಚಯದ ವ್ಯಾಪ್ತಿಯಲ್ಲಿ ಕಂಡಿರಲಿಲ್ಲ.ಬೆರಗಿನಿಂದ ಏನಾಯಿತೇ ಅಂತ ಒತ್ತಾಯಿಸಿದಾಗ ಬಾಯಿಬಿಟ್ಟಳು.

    ಮನೆಗೆ ಬಂದ ನಂತರ ತನಗೆ ಅಪರಾಧಿ ಪ್ರಜ್ಞೆ ಕಾಡಿದರೂ ಅಂತಹುದೊಂದು ಸುಮಧುರ ಸ್ಪರ್ಶ ತನ್ನ ಬದುಕಿಡೀ ಸಿಕ್ಕೇ ಇರಲಿಲ್ಲವೆಂಬುದನ್ನು ಹೇಳುತ್ತಾ ಕೊನೆಯಲ್ಲಿ ಆ ಹುಡುಗನ ಕಣ್ಣುಗಳಲ್ಲಿದ್ದ ಬೇಡಿಕೆ ನನ್ನನ್ನು ಖುಷಿಯ ಕಡಲಲ್ಲಿ ಮುಳುಗಿಸಿದೆ ಎಂದವಳು ಮತ್ತೆ ಧೀರ್ಘ ನಿಟ್ಟುಸಿರಿಟ್ಟು ಕಣ್ಣು ಮುಚ್ಚಿದಳು. ಬಹುಶಃ ನೆನಪುಗಳನ್ನು ಮತ್ತೆ ಅಪ್ಪಿಕೊಂಡಳು ಕಾಣುತ್ತೆ.

    ******
    ಈ ಘಟನೆಯನ್ನು ಬೇರೆಬೇರೆ ದೃಷ್ಟಿಕೋನದಲ್ಲಿ ಬೇರೆಬೇರೆ ಮನಸ್ಥಿತಿಯವರು ಬೇರೆಬೇರೆ ಬಗೆಯಲ್ಲಿ ವಿಮರ್ಶಿಸಬಹುದು. ಕಟ್ಟಾ ಸಾಂಪ್ರದಾಯಿಕ ಮನಸ್ಸುಗಳು ಆಕೆಯನ್ನು ಹಾದಿತಪ್ಪಿದವಳೆನ್ನಬಹುದು.ರೆಬೆಲ್ ಮನಸ್ಸಿನವರು ಕಟ್ಟಿಕೊಂಡವನಿಗೆ ತಕ್ಕಶಾಸ್ತಿ ಆಗಬೇಕಿದ್ದರೆ ಅವಳು ಮುಂದಿನ ಹೆಜ್ಜೆಯನ್ನೂ ಇಡಬೇಕಿತ್ತು ಎಂದಾರು.

    ಒಂದಷ್ಟು ಸ್ವರಗಳು ಹಾಗೆ ಉಚಿತ ಸಿಕ್ಕಿದ ಸುಖವೆಲ್ಲವನ್ನು ಬಗ್ಗಿಸಿ ಕೊಳ್ಳ ಹೋದರೆ ಅವರು ಮನುಷ್ಯರೆನಿಸಿಕೊಳ್ಳಲಾರರು ಎಂದರು.
    ಯಾವುದೋ ತಪ್ತ ಮನಸ್ಸು ಕೊನೆಗೂ ನಿನಗೊಂದಾದರೂ ಸುಖದ ಅನುಭವ ದಕ್ಕಿತ್ತಲ್ಲ ,ಬಿಡು ಸಾಕು ಎಂದಿತು.
    ಇನ್ನು ಗಂಡಸರು …ಇಂತಹವರಿಂದಲೇ ವಯಸ್ಸಿನ ಗಂಡು ಮಕ್ಕಳು ಹಾದಿ ತಪ್ಪುವುದು ಅಂತ ಸ್ವರವೇರಿಸಿದರೂ ಮುಂದಿನ ಬಾರಿ ಪ್ರಯಾಣದಲ್ಲಿ ತಮ್ಮ ಪಕ್ಕದ ಸೀಟಿಗೆ ಕುಳಿತುಕೊಳ್ಳಬಹುದಾದ ಮೃದು ಮಾಂಸಕ್ಕಾಗಿ ಚಡಪಡಿಸಿ ಕಾಯ್ದರು.ಮುಖವಾಡ ತೊಟ್ಟವರು ಶ್ಯೀ..ಥೂ ಎಂದರು.

    ಆದರೆ..

    ಎಂದೂ ಕಾಣದ ಆಕೆಯ ಪ್ರಸನ್ನ ಮುಖದ ಚಲುವು ನೋಡಿದ ನಾನು ಅವಳು ಸದಾಕಾಲ ಹೀಗೆ ಇದ್ದರೆ ಎಷ್ಟು ಚೆನ್ನ ಅನ್ನಿಸಿ ಮತ್ತೆ ಮತ್ತೆ ಅವಳನ್ನು ನೋಡಿದೆ.

    ಒಂದು ಪ್ರಶ್ನೆ.

    ಈ ಇಡೀ ಪ್ರಸಂಗ ಮಹಿಳಾ ದಿನದ ಸಂದರ್ಭಕ್ಕೆ ಪ್ರಸ್ತುತವೋ ಅಲ್ಲವೋ ತಿಳಿಯುತ್ತಿಲ್ಲ.

    ಇಪ್ಪತ್ತೊಂದನೇ ಶತಮಾನದಲ್ಲಿ ಇದ್ದುಕೊಂಡೂ ನಾವು ಮಹಿಳಾ ದಿನವನ್ನು ಆಚರಿಸುತ್ತಿದ್ದೇವೆ ಎನ್ನುವುದೇ ಮೊದಲಿಗೆ ಆಭಾಸ ಎಂದುಕೊಳ್ಳುವವಳು ನಾನು.ಸಾವಿರ ಪುರುಷರಿಗೆ 950 ಮಾತ್ರ ಹೆಣ್ಣು ಗಳಿದ್ದಾರೆ ಎನ್ನುವುದನ್ನು ಅಂಕಿ-ಅಂಶಗಳಲ್ಲಿ ಕೊಡುವಾಗ ಜಗತ್ತಿಗೆ ಅಗತ್ಯವಿರುವ ಪ್ರತಿಕ್ಷೇತ್ರದಲ್ಲೂ ಅವಳ ಸಂಖ್ಯೆ ಸಮ ಇದೆಯೇ ಎನ್ನುವುದನ್ನು ಯಾಕೆ ಗಮನಿಸುತ್ತಿಲ್ಲ.?

    ಕಡಿಮೆಯಾಗಿದೆಯಾದರೆ ಹೇಗೆ ಮತ್ತು ಏಕೆ ಕಡಿಮೆ ಆಗ್ತಿದೆ?

    ದೌರ್ಜನ್ಯ ,ಅತ್ಯಾಚಾರಗಳನ್ನು ಪ್ರತಿನಿತ್ಯ ನೋಡುತ್ತಿರುವ ನಾವು ಅದರ ಬಗ್ಗೆ ತೆರೆದ ಸ್ವರದಲ್ಲಿ ಮಾತಾಡುತ್ತಿದ್ದೇವೆ.ಇನ್ನೂ ಹತ್ತು ಶತಮಾನದ ನಂತರವೂ ಈ ಸ್ವರದಲ್ಲಿ ಬದಲಾವಣೆ ಬರಬಹುದು ಎಂಬ ಯಾವ ನಂಬಿಕೆಯೂ ಇಲ್ಲ.

    ಆದರೆ,

    ಅದೇ ಅದೇ ಸಮಸ್ಯೆಯ ಮತ್ತೊಂದು ಮಗ್ಗುಲಿದೆ.
    ಇಲ್ಲೀವರೆಗೆ ಯಾರೂ ಬಾಯಿ ಬಿಡದೇ ಹೋದದ್ದು!
    ಬಾಯಿ ಬಿಟ್ಟರೆ ಜಗದ ಹಸಿದ ಕಣ್ಣುಗಳು ಹುರಿದು‌ ಮುಕ್ಕುವ ಭಯವಿರುವಂತದ್ದು.ಸಮಾಜದ ತಿರಸ್ಕಾರದ ನೋಟ ಎದುರಿಸುವ ಆತಂಕ ಹುಟ್ಟುವಂತದ್ದು.

    ಬಹುತೇಕ ದಾಂಪತ್ಯಗಳಲ್ಲಿ ಹೆಂಡತಿ ಬಲವಂತವಾಗಿಯಾದರೂ ಅನುಸರಿಸಲೇಬೇಕಾದ ದಾಂಪತ್ಯ ಪಥ್ಯ ದ ಅನಿವಾರ್ಯತೆ!!

    ಇದು ಯಾಕೆ ಹೀಗೆ?

    ನಿಜವಾಗಿಯೂ ಗಂಡು ದಾಂಪತ್ಯದ ನಡುವಯದಲ್ಲಿ ಹೆಣ್ಣಿನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾನಾ? ಹಾಗೆಂದುಕೊಳ್ಳುವುದಕ್ಕೆ ನಮ್ಮಲ್ಲಿ ಯಾವ ಪುರಾವೆಯೂ ಇಲ್ಲ. ಮೆನ್ ಆರ್ ನಾಟಿ ಎಟ್ ಫಾರ್ಟಿ ಅಂತ ಆರಂಭಿಸಿದವರು ಅರವತ್ತಕ್ಕೆ ಮರಳಿ ಅರಳುವ ವಯಸ್ಸು ಅಂತಂದುಕೊಂಡು ಎಪ್ಪತ್ತು-ಎಂಬತ್ತಕ್ಕೆ ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪೆ ಎನ್ನುವ ಮಾತುಗಳಿಂದ ಬದುಕನ್ನು ಆಸ್ವಾದಿಸುವವರ ಘನವಾದ ಪಡೆಯೇ ನಮ್ಮ ನಡುವಿದೆ.ಇರಲಿ.ತಪ್ಪೆನ್ನುವುದಿಲ್ಲ.

    ಆದರೆ.,

    ಹೆಣ್ಣು ನಲವತ್ತರಿಂದ ಐವತ್ತರ ಆಸುಪಾಸಿನಲ್ಲಿ ದೇಹದಲ್ಲಿ ಸಹಜವಾಗಿ ಹಾರ್ಮೋನುಗಳ ಸ್ರಾವದಲ್ಲಿ ಏರಿಳಿತಗಳನ್ನು ಹೊಂದುತ್ತಾಳೆ.
    ಆ ಸಂದರ್ಭದಲ್ಲಿ ಅವಳ ತುಡಿತ ಮಿಡಿತಗಳು ಒಂದು ಮುಟಿಗೆ ಮಿಗಿಲೆ ಆಗಿರುತ್ತವೆ ಎನ್ನುವುದೂ ನಿಜ. ಆದರೆ ಹಾಗೆಲ್ಲ ನಮ್ಮ ಹುಳಿ ಮುಪ್ಪಾಗಿಲ್ಲ ಅಂತ ತೋರಿಸಿ ಕೊಳ್ಳಬಹುದೆ ಈ ಲೋಕದಲ್ಲಿ?
    ಮೇಲೆ ಉದಾಹರಿಸಿದ ಘಟನೆಯಲ್ಲಿ ಗಂಡನ ಕ್ರೌರ್ಯಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ ನಾನು,ಅದೇ ಮನುಷ್ಯ ತನ್ನ ವೃತ್ತಿ ಜಾಗದಲ್ಲಿ ಇತರ ಸಂಬಂಧಗಳನ್ನು ಹೊಂದಿರುವುದು ಕೂಡ ತಿಳಿದವಳು.
    ಅದನ್ನು ಸಣ್ಣದೊಂದು ಹುಸಿನಗೆಯೊಂದಿಗೆ ಒಪ್ಪಿಕೊಳ್ಳುವ ಸಮಾಜ ಇವಳ ಒಂದು ಗಂಟೆಯ ಪ್ರಯಾಣದ ಪುಳಕವನ್ನು ಕೊಳಕು ಎನ್ನುವ ಹೆಸರಿಟ್ಟು ಅಟ್ಟುತ್ತದೆ.

    ಮನುಷ್ಯರಲ್ಲಿ ಮಾತ್ರ ಇರುವ ಈ ವಿವಾಹಗಳ ಮೂಲ ಉದ್ದೇಶವೇ ಸಹಜ ಲೈಂಗಿಕ ಅವಕಾಶ ಮತ್ತು ಸಂತಾನಾಭಿವೃದ್ಧಿ.ಈಗೀಗ ಎರಡನೆಯ ಉದ್ದೇಶ ತನ್ನ ಅರ್ಥ ಕಳೆದುಕೊಂಡು ಮಕ್ಕಳು ಹುಟ್ಟಿಸುವ ‌ಮತ್ತು ಅವರನ್ನು ಘಟ್ಟ ತಲುಪಿಸುವ ಗೋಜೆ ತಮಗೆ ಬೇಡವೆನ್ನುತ್ತಿದೆ.
    ಇದನ್ನು ತಪ್ಪೆನ್ನಲಾಗದು.ಮಕ್ಕಳಿರಲವ್ವ ಮನೆ ತುಂಬಾ ಎನ್ನುವುದರಿಂದ ಆರಂಭವಾದ ಈ ಸರಣಿ ನಾವಿಬ್ಬರು ನಮಗಿಬ್ಬರು ಎಂಬಲ್ಲಿಗೆ ಬೆಳೆದು ಹೆಣ್ಣಾಗಲಿ ಗಂಡಾಗಲಿ ನಮಗೊಂದೇ ಮಗುವಿರಲಿ ಎಂದು ಮುಂದುವರೆದು ಈಗ ‘ನನಗೆ ನಾನು’ ಎನ್ನುವಲ್ಲಿಗೆ ನಿಂತಿದೆ.

    ಜಗದ ಸರ್ವಭಾವ ಗಳು ಹರಿಯುವ ನೀರು.
    ಕಾಲಕಾಲಕ್ಕೆ ಬದಲಾಗುವ ಅನಿಸಿಕೆ ಅಭಿಪ್ರಾಯಗಳಿಗೆ ತಪ್ಪು ಒಪ್ಪಿನ ಹೇರಿಕೆ /ಹೇಳಿಕೆ ಸಲ್ಲದು.
    ಅದೇ ನದಿಯಲ್ಲಿ ಅದೇ ನೀರಿಗೆ ನೀವು ಮತ್ತೆ ಮತ್ತೆ ಕಾಲಿಡಲಾರಿರಿ ಎನ್ನುವ ಮಾತಿದೆ.

    ಇಂತಹುದೊಂದು ಪ್ರಸಂಗವನ್ನು ಬರೆಯುವ ಮೊದಲು ಸಾಕಷ್ಟು ಗಟ್ಟಿತನವಿರಬೇಕು ಎನ್ನುವುದನ್ನೂ ನಾನು ಒಪ್ಪಿಕೊಳ್ಳುತ್ತೇನೆ. ಯಾಕೆಂದರೆ ಅಕ್ಷರಲೋಕಕ್ಕೆ ಒಂದು ಹುಚ್ಚುತನವಿದೆ.
    ಹೆಣ್ಣು ಏನನ್ನೇ ಬರೆಯಲಿ,ಅದು ಅವಳ ಸ್ವಂತ ಅನುಭವವೇ ಇರಬೇಕು ಅಂತ ನಿರ್ಧರಿಸಿ ಬಿಡುವುದು. ಆಕೆಯೊಬ್ಬಳ ಅನುಭವ ಅಂತ ಇಲ್ಲಿ ದಾಖಲಾದರೂ ನಮ್ಮ ಮುಕ್ಕಾಲು ಹೆಣ್ಣುಗಳ ಅಡಗಿಸಿಕೊಂಡಿರುವ ಸತ್ಯ ಇದು. ಈ ಬರಹ ಒಬ್ಬ ಗಂಡಸಿನ ಮನಸ್ಸನ್ನಾದರೂ ಬದಲಿಸಿದರೆ ಆ ಮಟ್ಟಿಗೆ ಈ ಅಕ್ಷರಗಳು ಸಾರ್ಥಕ.

    ಬಹುತೇಕ ನಡುವಯಸ್ಸಿನ ಹೆಣ್ಣುಮಕ್ಕಳು ಅನುಭವಿಸುತ್ತಿರುವ ಮಾನಸಿಕ ಒಂಟಿತನ ,ದಾಂಪತ್ಯ ಪಥ್ಯ, ಮಕ್ಕಳ ಅವಜ್ಞೆ, ಶಾರೀರಿಕ ಏರುಪೇರುಗಳು, ಕುಂದುತ್ತಿರುವ ಸೌಂದರ್ಯ, ಏರುತ್ತಿರುವ ದೇಹತೂಕ ಇವೆಲ್ಲವುಗಳನ್ನು ಬಾಯಿಬಿಟ್ಟು ಹೇಳಲಾರರು. ಹಾಗಂತ ಈ ಎಲ್ಲ ಸಮಸ್ಯೆಗಳನ್ನು ಎಲ್ಲಾ ಹೆಣ್ಣು ಮಕ್ಕಳು ಎದುರಿಸುತ್ತಾರೆ ಎನ್ನುವಂತಿಲ್ಲ.
    ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹೆಣ್ಣುಮಕ್ಕಳು ಭಾವನಾತ್ಮಕವಾಗಿ ಬಲವಾಗಿದ್ದಾರೆ.

    ಕೆಲವರು ಫೇಸ್ಬುಕ್ ವಾಟ್ಸಪ್ಪ್ ಗಳಿಗೆ ಮೊರೆ ಹೋಗಿ ತಮ್ಮ ಒಂಟಿತನದಿಂದ ಮುಕ್ತಿ ಹೊಂದುತ್ತಿರುವ ಭ್ರಮೆಯಲ್ಲಿ ಇರುತ್ತಾರೆ.
    ಇದು ಸಹ ಮತ್ತೊಂದು ಅಪಾಯಕ್ಕೆ ಆಹ್ವಾನ ನೀಡುವಂಥದ್ದೆ.

    ನಡುವಯಸ್ಸಿನ ಹೆಣ್ಣಿಗೆ ಬೇಕಾಗುವ ಅವಶ್ಯಕತೆಗಳನ್ನು /ಅನಿವಾರ್ಯತೆಗಳನ್ನು ಅರಿಯುವಲ್ಲಿ‌ ಕುಟುಂಬದ ಮನಸ್ಸುಗಳ ಪಾತ್ರವೇನು? ಅಕಸ್ಮಾತ್ ಅವಳಲ್ಲಿ ಭಾವನೆಗಳ ಏರಿಳಿತ, ದುಃಖ ,ಸಿಡುಕು ಇದ್ದರೂ ಪ್ರೀತಿಯಿಂದ ಅವಳನ್ನು ಸಮಾಧಾನಿಸುವುದೂ ಏಕೆ ಅವಶ್ಯಕ?
    ಒಂದು ಮನೆಯ ಪರಿಸರ ಆ ಮನೆಯ ಹೆಣ್ಣಿನ ಭಾವನೆಗಳ ಮೇಲೆ ನಿರ್ಧರಿತವಾಗುವುದು ಬಹುತೇಕ ನಮ್ಮೆಲ್ಲರ ಅನುಭವಕ್ಕೂ ಬಂದಿದೆ.
    ಅವಳಿಗೆ ಸಿಡುಕಿದ್ದರೆ ಮನೆಯ ಗೋಡೆಗೋಡೆಗೂ ತಳಮಳ.
    ಅವಳು ದುಃಖಿಸಿದರೆ ಮನೆ ಅನಾಥ. ಪ್ರಸನ್ನಳಾಗಿ ನಗುನಗುತ್ತಿದ್ದರೆ ಮನೆಯೇ ನವವಧು.

    ಅದೆಷ್ಟೇ ಮುಂದುವರೆದ ಹೆಣ್ಣಾದರೂ ಪ್ರೀತಿಗಾಗಿ ಹಂಬಲಿಸುವ ಆರ್ತಳಾಗುವ ಅವಳ ಸ್ವಭಾವ ಎಂದೂ ಬದಲಾಗದು.
    ಹೆಣ್ಣಿನ ನಡುವಯಸ್ಸು ಹೊಸ್ತಿಲ ಮೇಲೆ ಹೊಯ್ದಾಡುವ ದೀಪದಂತೆ.
    ಕ್ಷಣಚಿತ್ತ ಕ್ಷಣಪಿತ್ತ.ಆ ಬದಿಗೋ ಈ ಬದಿಗೋ.
    ಬೊಗಸೆ ಕೈಗಳನ್ನು ಕುಡಿಯ ಸುತ್ತ ಘಳಿಗೆ ಇಟ್ಟರೆ ಸಾಕು, ಕುಡಿ ಧೃಢವಾಗುತ್ತದೆ.ಬದುಕು ಬಲವಾಗುತ್ತದೆ.

    ಕೇವಲ ಮಾರ್ಚ್ ತಿಂಗಳ ಮಹಿಳಾ ದಿನದ ಆಚರಣೆಯಿಂದ ಮತ್ತೇನನ್ನೂ ಸಾಧಿಸಲಾಗುವುದಿಲ್ಲ.ಪ್ರತಿದಿನ ಪ್ರತಿ ಕ್ಷಣ ಅವಳು ನಮ್ಮಂತೆಯೇ ಎನ್ನುತ್ತಲೇ ಅವಳ ಭಿನ್ನತೆಗಳನ್ನು ಗೌರವಿಸುವುದರ ಮೂಲಕ ಅವಳನ್ನು ಸಧೃಢಗೊಳಿಸುವುದು,ಆ ನಿಟ್ಟಿನಲ್ಲಿ ತಾವೂ ಸಂಸಾರದೊಳಗೆ ಒಳಗೊಳ್ಳುವುದು,ಅವಳ ಹಕ್ಕಿನ ಪ್ರೀತಿಯನ್ನು ಭರಪೂರ ನೀಡುವುದು ನಿಜವಾದ ಮಹಿಳಾದಿನದ ಆಚರಣೆ.

    ನಂದಿನಿ ಹೆದ್ದುರ್ಗ
    ನಂದಿನಿ ಹೆದ್ದುರ್ಗ
    ನಂದಿನಿ ಹೆದ್ದುರ್ಗ ಅವರ ವಾಸ ಹಾಸನ ಜಿಲ್ಲೆ ಆಲೂರು ತಾಲೂಕಿನ ಹೆದ್ದುರ್ಗ ಎನ್ನುವ ಪುಟ್ಟ ಹಳ್ಳಿಯಲ್ಲಿ. ಬದುಕಿಗೆ ಕಾಫಿ ತೋಟ,ಕೃಷಿ. ಆಸಕ್ತಿ ಕೃಷಿ,ಕಾವ್ಯ,ಸಾಹಿತ್ಯ, ತಿರುಗಾಟ. ಮೂವತ್ತೈದನೇ ವಯಸಿನಲ್ಲಿ ಬರವಣಿಗೆ ಪ್ರಾರಂಭ. ಮೊದಲಿಗೆ ಹಾಸನದ ಪ್ರಾದೇಶಿಕ ಪತ್ರಿಕೆ ಜನತಾ ಮಾಧ್ಯಮಕ್ಕೆ ಅಂಕಣ ಬರಹಗಳನ್ನು ಬರೆಯುವುದರೊಂದಿಗೆ ಸಾಹಿತ್ಯಾರಂಭ. 2016 ಅಕ್ಟೋಬರ್ ನಲ್ಲಿ ಸಕಲೇಶಪುರದಲ್ಲಿ ನಡೆದಂತಹ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ "ಅಸ್ಮಿತೆ" ಎನ್ನುವ ಕವನ ಸಂಕಲನ ಖ್ಯಾತ ಕವಿ ಬಿ ಆರ್ ಲಕ್ಷ್ಮಣರಾವ್ ಅವರಿಂದ ಬಿಡುಗಡೆ. ಆ ನಂತರದಲ್ಲಿ ಅವರ ಮಾರ್ಗದರ್ಶನದಲ್ಲಿ ಕವಿತೆ ಬರೆಯಲು ಆರಂಭ. ಜನವರಿ 1,2017ರಲ್ಲಿ ಮೊದಲ ಕವನಗಳ ಗುಚ್ಛ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟ. 2018ಜನವರಿಯಲ್ಲಿ ಬೆಂಗಳೂರಿನ ಅಂಕಿತ ಪ್ರಕಾಶನದಿಂದ ಎರಡನೇ ಸಂಕಲನ "ಒಳಸೆಲೆ"ಬಿಡುಗಡೆ. ಕನ್ನಡದ ಖ್ಯಾತ ವಿಮರ್ಶಕಿ ಎಮ್ ಎಸ್ ಆಶಾದೇವಿಯವರ ಮುನ್ನುಡಿ ಮತ್ತು ಸುವಿಖ್ಯಾತ ಕವಿ ಎಚ್ ಎಸ್ ವೆಂಕಟೇಶ ಮೂರ್ತಿಯವರ ‌ಬೆನ್ನುಡಿಯಿರುವ ಈ ಸಂಕಲನಕ್ಕೆ ಶಿವಮೊಗ್ಗದ ಕರ್ನಾಟಕ ಸಂಘ ಕೊಡುವ ಪ್ರತಿಷ್ಠಿತ ಜಿ ಎಸ್ ಎಸ್ ಪ್ರಶಸ್ತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಗೌರವದ ಪುರಸ್ಕಾರ.ಮಂಡ್ಯದ ಅಡ್ಡ್ವೆಸರ್ ಕೊಡಮಾಡುವ ಅಡ್ಡ್ವೆಸರ್ ವರ್ಷದ ಸಂಕಲನ ಪುರಸ್ಕಾರ ದೊರೆತಿದೆ. ದಸರಾಕವಿಗೋಷ್ಠಿ,ಆಳ್ವಾಸ್ ನುಡಿಸಿರಿ, ಬಾಗಲಕೋಟೆಯ ನುಡಿಸಡಗರ ,ಧಾರವಾಡದಲ್ಲಿ ನಡೆದ ರಾಜ್ಯ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಕವನ ವಾಚನ. ಇತ್ತೀಚೆಗೆ ಪ್ರಕಟವಾದ ಬ್ರೂನೊ..ದಿ ಡಾರ್ಲಿಂಗ್ ಎನ್ನುವ ಪ್ರಬಂಧ ಸಂಕಲನ ರತಿಯ ಕಂಬನಿ ಎಂಬ ಕವಿತಾ ಸಂಕಲನ ಮತ್ತು ಇಂತಿ ನಿನ್ನವಳೇ ಆದ ಪ್ರೇಮಕಥೆಗಳ ಸಂಕಲನ ಅಪಾರ ಓದುಗರ ಮೆಚ್ಚುಗೆ ಗಳಿಸಿವೆ.. ರತಿಯ ಕಂಬನಿ ಸಂಕಲನಕ್ಕೆ ಪ್ರತಿಷ್ಠಿತ ಅಮ್ಮ ಪ್ರಶಸ್ತಿ ಲಭಿಸಿದೆ.
    spot_img

    More articles

    5 COMMENTS

    1. ಈ ಲೇಖನವನ್ನು ಪೂರ್ವಗ್ರಹ ಪೀಡಿತರಾಗದೆ, ನಮ್ಮ ಸುತ್ತು ಇರುವ ಅಕ್ಕ ತಂಗಿಯರ ಸಹಜ ವೇದನೆ ಏನೋ ಅಂತ ಪುರುಷ ಸಮಾಜ ಓದುವ ಪ್ರೌಢಿಮೆ ಬೆಳೆಸಿಕೊಂಡ ದಿನ ನಿಜವಾದ ಮಹಿಳಾದಿನ ಆಗುತ್ತದೆ. ಪೂಜ್ಯತೆಯಲ್ಲಿ ಹೆಣ್ಣನ್ನು ಬಂಧಿಸಿ ಬಿಟ್ಟೆವಾ?! ಅವಳ ಸಹಜ ಭಾವನೆಗಳ ವ್ಯಕ್ತತೆಗೂ ಅಡ್ಡಿ ಮಾಡಿ ಬಿಟ್ಟೆವಾ??!!

      • ಧನ್ಯವಾದಗಳು ಸರ್.ನಿಮ್ಮ ಪ್ರತಿಕ್ರಿಯೆ ಖುಷಿ ಕೊಟ್ಟಿದೆ

    2. ಅಂತರರಾಷ್ಟ್ರೀಯ ಮಹಿಳಾ ದಿನದಂದು ಉಪಯುಕ್ತ ಮತ್ತು ಅರ್ಥಪೂರ್ಣವಾದ ಲೇಖನ

    LEAVE A REPLY

    Please enter your comment!
    Please enter your name here

    Latest article

    error: Content is protected !!