18.8 C
Karnataka
Friday, November 22, 2024

    ಪಿ ಎಸ್ ಯು ಕಂಪನಿಗಳಿಂದ ಲಾಭಾಂಶಗಳ ಸುರಿಮಳೆ

    Must read

    ಹಣಕಾಸಿನ ವ್ಯವಹಾರ ನಡೆಸುವುದು ತಿಳಿದಿದ್ದರೆ ಸಾಕು ಅದು ಆರ್ಥಿಕ ಸಾಕ್ಷರತೆ ಎಂಬುದು ಹೆಚ್ಚಿನವರ ಅಭಿಪ್ರಾಯ. ಈಗಿನ ತಂತ್ರಜ್ಞಾನದ ಯುಗದಲ್ಲಿ ಕೇವಲ ಈ ಸರಳ ಗಣಿತದ ಲೆಕ್ಕ ಕ್ಯಾಲುಕಲೇಟರ್‌ ಗಳು ಮೊಬೈಲ್‌, ಲ್ಯಾಪ್‌ ಟ್ಯಾಪ್‌, ವಾಚ್‌ ಗಳಲ್ಲಿ ಲಭ್ಯವಿರುವುದರಿಂದ ಹೆಚ್ಚಿನವರು ಸರಳ ಗಣಿತದ ಕೂಡುವ, ಕಳೆಯುವ, ಭಾಗಾಕಾರ, ಗುಣಾಕಾರಗಳಿಗೆ ಇವನ್ನೇ ಅವಂಲಂಬಿಸುತ್ತಾರೆ. ಇದು ನಮ್ಮ ಚಿಂತನಾ ಸಾಮರ್ಥ್ಯವನ್ನು ಕ್ಷೀಣಿತಗೊಳಿಸಿದೆ. ಈಗಿನ ಸ್ಪೆಷಾಲಿಟಿ, ಸೂಪರ್‌ ಸ್ಪೆಷಾಲಿಟೀಸ್‌ ಸಮಯದಲ್ಲಿ ಆರ್ಥಿಕ ಸಾಕ್ಷರತೆಯೂ ಸರಳವಾಗಿಲ್ಲ. ಆರ್ಥಿಕ ಪೇಟೆಗಳಲ್ಲಿ ಆಗುತ್ತಿರುವ ಘಟನೆಗಳು, ಅಳವಡಿಸಿಕೊಳ್ಳುತ್ತಿರುವ ಶೈಲಿ, ಬೆಳವಣಿಗೆಗಳ ಬಗ್ಗೆ ಅರಿತುಕೊಳ್ಳುವುದು ಅವಶ್ಯಕವಾಗಿದೆ.

    ಕಾರ್ಪೊರೇಟ್‌ ವಲಯದಲ್ಲಾಗುತ್ತಿರುವ ಬದಲಾವಣೆಗಳು ಅತಿಯಾದ ವೇಗದಲ್ಲಿದ್ದು, ಕೋವಿಡ್ ಪ್ರಭಾವ ಭರ್ಜರಿಯಾದ ಸುಧಾರಣೆಗಳ ಕಾರಣ ಅನಿರೀಕ್ಷಿತ ಮಟ್ಟದ ಅಭಿವೃದ್ಧಿಯ ಅಂಕಿ ಅಂಶಗಳು ಹೊರಬೀಳುತ್ತಿರುವುದರಿಂದ ವಿಶ್ವದ ನಾನಾ ದೇಶಗಳು ಆಕರ್ಷಿತರಾಗಿ ಹೆಚ್ಚಿನ ಹಣವನ್ನು ಭಾರತದಲ್ಲಿ ಹೂಡಿಕೆಗೆ ಹರಿಸುತ್ತಿವೆ. ಇದು ಸ್ಥಳೀಯ ವಿತ್ತೀಯ ಸಂಸ್ಥೆಗಳನ್ನೂ ಸಹ ಚುರುಕುಗೊಳಿಸಿ ಷೇರುಪೇಟೆ, ಬಂಡವಾಳ ಪೇಟೆಗಳಲ್ಲಿ ಉತ್ಸಾಹಮಯ ವಾತಾವರಣವನ್ನು ನಿರ್ಮಿಸಿದೆ. ವಿಶ್ವಮಾನ್ಯತೆ ಪಡೆದ, ದೇಶದ ಹೆಗ್ಗುರುತಾದ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನ ಸೆನ್ಸೆಕ್ಸ್‌ 52 ಸಾವಿರ ಪಾಯಿಂಟುಗಳ ಗಡಿದಾಟಿದ ಸರ್ವಕಾಲೀನ ದಾಖಲೆ ನಿರ್ಮಿಸಿದ ನಂತರವಂತೂ ಷೇರುಪೇಟೆಯಲ್ಲಿ ಚಟುವಟಿಕೆಯು ಗರಿಗೆದರಿದೆ.

    ರಿಲಯನ್ಸ್‌ ಇಂಡಸ್ಟ್ರೀಸ್‌ ಕಂಪನಿಯ ಷೇರಿನ ಬೆಲೆ ಕಳೆದ ಒಂದು ವರ್ಷದಲ್ಲಿ ಕೋವಿಡ್‌ ಕಾರಣದಿಂದ ಮಾರ್ಚ್‌ 2020 ರಲ್ಲಿ ರೂ.880 ಕ್ಕೆ ಕುಸಿದಿದ್ದು ಅಲ್ಲಿಂದ ಸತತವಾದ ಏರಿಕೆಯಿಂದ ಸೆಪ್ಟೆಂಬರ್‌ ತಿಂಗಳಲ್ಲಿ ರೂ.2,368 ರ ವಾರ್ಷಿಕ ಗರಿಷ್ಠಕ್ಕೆ ಜಿಗಿದು ಸಧ್ಯ ರೂ.2,140 ರಲ್ಲಿ ವಹಿವಾಟಾಗುತ್ತಿದೆ. ಅಂದರೆ ಮಾರ್ಚ್‌ 2020 ರಲ್ಲಿ ರೂ.5.50 ಲಕ್ಷ ಕೋಟಿಯಷ್ಠು ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ಹೊಂದಿದ್ದ ಕಂಪನಿ ಸೆಪ್ಟೆಂಬರ್‌ ತಿಂಗಳಲ್ಲಿ ಸುಮಾರುಮೂರು ಪಟ್ಟು ಜಿಗಿತ ಕಂಡು ರೂ.16 ಲಕ್ಷ ಕೋಟಿ ದಾಟಿದೆ. ಈ ಹಂತದಲ್ಲಿ ಕಂಪನಿಯ ಚೇರ್ಮನ್‌ ರ ಆಸ್ತಿಯು ಹೆಚ್ಚಿನ ಜಿಗಿತ ಕಂಡಿದೆ ಎಂದು ವರ್ಣಿಸಲಾಯಿತು. ಇಲ್ಲಿ ಓದುಗರು/ ಹೂಡಿಕೆದಾರರು ಗಮನಿಸಬೇಕಾದ ಅಂಶ ಎಂದರೆ ರಿಲಯನ್ಸ್‌ ಇಂಡಸ್ಟ್ರೀಸ್‌ ಕಂಪನಿಯ ಗಾತ್ರ ಎಷ್ಠಿದೆ ಎಂದರೆ ಪೇಟೆಯಲ್ಲಿ ಒಂದು ರೂಪಾಯಿಯ ಏರಿಕೆಯಾಗಲಿ ಅಥವಾ ಇಳಿಕೆಯಾಗಲಿ ಕಂಡಾಗ ಆ ಷೇರಿನ ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ನಲ್ಲಿ ರೂ.633.94 ರಷ್ಠು ಏರಿಳಿತ ಕಾಣುತ್ತದೆ ಎಂಬುದು.

    ಇದೇ ರೀತಿ ಅನೇಕ ಕಂಪನಿಗಳು ಪೇಟೆಯ ಚೇತರಿಕೆಗನುಗುಣವಾಗಿ ಭರ್ಜರಿ ಏರಿಕೆಯನ್ನು ಪ್ರದರ್ಶಿಸಿವೆ. ಟಾಟಾ ಸ್ಟೀಲ್‌ ಕಂಪನಿಯ ಷೇರಿನ ಬೆಲೆ ಹಿಂದಿನ ವರ್ಷ ಮಾರ್ಚ್‌ ನಲ್ಲಿ ರೂ.250 ರ ಸಮೀಪವಿದ್ದು, ಈ ವರ್ಷ ಅದರ ಬೆಲೆ ರೂ.780 ರವರೆಗೂ ಏರಿಕೆ ಕಂಡು ರೂ.720 ರ ಸಮೀಪ ವಹಿವಾಟಾಗುತ್ತಿದೆ. ಟಾಟಾ ಮೋಟಾರ್ಸ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಕೆನರಾ ಬ್ಯಾಂಕ್‌, ಹೆಚ್‌ ಡಿ ಎಫ್‌ ಸಿ, ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌, ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌, ಕೋಲ್‌ ಇಂಡಿಯಾ, ಐಟಿಸಿ, ಲಾರ್ಸನ್‌ ಅಂಡ್‌ ಟೋಬ್ರೋ, ಆರ್‌ ಇ ಸಿ ಮುಂತಾದ ಅನೇಕ ಕಂಪನಿಗಳು ಸಹ ಅವುಗಳ ಗಾತ್ರಕ್ಕನುಗುಣವಾಗಿ ಏರಿಕೆ ಪ್ರದರ್ಶಿಸಿವೆ.

    ಸಧ್ಯದ ಪರಿಸ್ಥಿತಿಯಲ್ಲಿ ಸೆನ್ಸೆಕ್ಸ್‌, ನಿಫ್ಟಿ, ವಲಯಾವಾರು ಸೂಚ್ಯಂಕಗಳು ಗರಿಷ್ಠ ಮಟ್ಟದಲ್ಲಿವೆ ಹಾಗಾಗಿ ಈ ಸಂದರ್ಭದಲ್ಲಿ ಯಾವ ಶೈಲಿಯಲ್ಲಿ ಷೇರುಪೇಟೆಯಲ್ಲಿ ಚಟುವಟಿಕೆ ನಿರ್ವಹಿಸಿದಲ್ಲಿ ಸುರಕ್ಷತೆ ಸಾಧ್ಯ ಎಂಬುದು ಹಲವರ ಪ್ರಶ್ನೆಯಾಗಿದೆ.

    ಇಲ್ಲಿ ಸಣ್ಣ ಹೂಡಿಕೆದಾರರು ಮಾತ್ರವಲ್ಲದೆ, ನಿವೃತ್ತರು, ಹೂಡಿಕೆಗೆ ಪ್ರತಿಯಾಗಿ ನಿಯತವಾಗಿ ಆದಾಯ ಪಡೆಯಲಿಚ್ಚಿಸುವವರಿಗೆ ಈಗಿನ ಪೇಟೆಗಳು ಸುವರ್ಣಾವಕಾಶ ಕಲ್ಪಿಸುತ್ತಿವೆ ಎನ್ನಬಹುದು. ಆದರೆ INVEST IT & FORGET IT ಮಾಧರಿಯಲ್ಲ INVEST & TRACK IT ಮಾಧರಿ ಚಟುವಟಿಕೆಯಾದಲ್ಲಿ ಮಾತ್ರ ಉತ್ತಮ ಅವಕಾಶಗಳು ಸಾಧ್ಯ. ಹೆಚ್ಚಿನವರು ಷೇರುಪೇಟೆಯಲ್ಲಿಯಾಗಲಿ, ಮ್ಯುಚುಯಲ್‌ ಫಂಡ್‌ ಗಳಲ್ಲಾಗಲಿ, ಬ್ಯಾಂಕ್‌ ಡಿಪಾಜಿಟ್‌ ಗಳಲ್ಲಾಗಲಿ ಹೂಡಿಕೆ ಮಾಡುವುದು ದೀರ್ಘಕಾಲೀನ ಹೂಡಿಕೆಯು ಲಾಭ ಗಳಿಸಿಕೊಡುತ್ತದೆ ಎಂಬ ಚಿಂತನೆಯಿಂದ. ಆದರೆ ಷೇರುಪೇಟೆಯಲ್ಲಿ ಹೆಚ್ಚಿನ ಕಂಪನಿಗಳ ಷೇರುಗಳು ಗರಿಷ್ಠದಲ್ಲಿರುವುದರಿಂದ ಏರಿಕೆ ಲಾಭವಾಗಲಿ, ಅಥವಾ ಆ ಕಂಪನಿಗಳು ನೀಡುವ ಫಲಗಳಾದ ಡಿವಿಡೆಂಡ್‌ ಗಳಾಗಲಿ ಆಕರ್ಷಕವಾಗಿರಲಾರದು.

    ಉದಾಹರಣೆಗೆ ರಿಲಯನ್ಸ್‌ ಇಂಡಸ್ಟ್ರೀಸ್‌ ನಲ್ಲಿ ಈ ಬೆಲೆಯಲ್ಲಿ ಹೂಡಿಕೆ ಮಾಡಿದಲ್ಲಿ ಆ ಕಂಪನಿ ವರ್ಷಾಂತ್ಯದ ನಂತರ ಹಿಂದಿನ ವರ್ಷ ನೀಡಿದ ಪ್ರತಿ ಷೇರಿಗೆ ರೂ.6.50 ಯ ಡಿವಿಡೆಂಡ್‌ ವಿತರಣೆ ಮಾಡಬಹುದು. ಷೇರಿನ ಬೆಲೆ ಈಗಾಗಲೆ ಗರಿಷ್ಠದ ಸಮೀಪದಲ್ಲಿರುವುದರಿಂದ ಷೇರಿನ ಬೆಲೆ ಏರಿಕೆಯೂ ಹೂಡಿಕೆಯ ಮೊತ್ತಕ್ಕೆ ಆಕರ್ಷಕವಾಗಿರಲಾರದು. ಏರಿಕೆ ಕಂಡರೂ ಹೆಚ್ಚಿನ ಹೂಡಿಕೆದಾರರು ಮಾರಾಟ ಮಾಡಲು ಇಚ್ಚಿಸಲಾರರು. ಅದೇ ರೀತಿ ಕೋಟಕ್‌ ಮಹೀಂದ್ರ ಬ್ಯಾಂಕ್‌ ಸುಮಾರು ರೂ.2000 ದ ಸಮೀಪವಿದೆ. ಈ ಬ್ಯಾಂಕ್‌ ನ ಷೇರು ಖರೀದಿಸಿದಲ್ಲಿ ಯಾವ ರೀತಿಯ ಲಾಭ ಗಳಿಸಬಹುದು? ಈ ಕಂಪನಿ ಪ್ರತಿ ರೂ.2,000 ದ ಷೇರಿಗೆ 80 ಪೈಸೆ ಯಂತೆ ಡಿವಿಡೆಂಡ್‌ ಹಿಂದಿನ ವರ್ಷ ನೀಡಿದೆ.

    ಇನ್ನು ಬ್ಯಾಂಕ್‌ ಡಿಪಾಜಿಟ್‌ ಗಳು ಕೇವಲ 5 ರಿಂದ 6% ನಷ್ಟು ಬಡ್ಡಿ ಗಳಿಸಿಕೊಡುತ್ತವೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹೊಸ ಡಿವಿಡೆಂಡ್‌ ನೀತಿಯನ್ನು ಸಾರ್ವಜನಿಕ ವಲಯದ ಕಂಪನಿಗಳಲ್ಲಿ ಜಾರಿಗೊಳಿಸಿದೆ. ಅದರಂತೆ ಸಾರ್ವಜನಿಕ ವಲಯದ ಕಂಪನಿಗಳು ವರ್ಷಕ್ಕೆ ಕನಿಷ್ಠ 2 ಡಿವಿಡೆಂಡ್‌ ಗಳನ್ನು, ಕೆಲವು ಕಂಪನಿಗಳು ವರ್ಷಕ್ಕೆ 4 ಬಾರಿ ಮಧ್ಯಂತರ ಡಿವಿಡೆಂಡ್‌ ಗಳನ್ನು ವಿತರಿಸಬಹುದಾಗಿದೆ. ಈ ದಿಶೆಯಲ್ಲಿ ಅನೇಕ ಕಂಪನಿಗಳು ಸಾಗಿವೆ. ಇದು ಜನಸಾಮಾನ್ಯರನ್ನು ಆಕರ್ಷಿಸುತ್ತಲಿದೆ.

    ಅನೇಕ ಅಗ್ರಮಾನ್ಯ ಕಂಪನಿಗಳು ಇತ್ತೀಚೆಗೆ ಪ್ರಕಟಿಸಿದ ಡಿವಿಡೆಂಡ್‌ ಗಳ ಪ್ರಮಾಣ ಇಂತಿದೆ.

    ಆರ್‌ ಇ ಸಿ ಲಿಮಿಟೆಡ್:ಈ ಷೇರಿನ ಬೆಲೆ ಹಿಂದಿನ ವರ್ಷದ ಮಾರ್ಚ್‌ ನಲ್ಲಿ ರೂ.80 ರಲ್ಲಿತ್ತು, ಸಧ್ಯ ರೂ.152 ರ ಸಮೀಪವಿದೆ. ಅಂದರೆ ಬೆಲೆ ಒಂದೇ ವರ್ಷದಲ್ಲಿ ದ್ವಿಗುಣದ ಸಮೀಪವಿದ್ದರೂ, ಈ ಕಂಪನಿ ನವೆಂಬರ್‌ 2020 ರಲ್ಲಿ ರೂ.6 ರಂತೆ ಡಿವಿಡೆಂಡ್‌ ವಿತರಿಸಿದೆಯಲ್ಲದೆ, ಈಗ ಮತ್ತೊಮ್ಮೆ ರೂ.5 ರ ಡಿವಿಡೆಂಡ್‌ ಪ್ರಕಟಿಸಿದೆ. ಈ ತಿಂಗಳ 17 ರವರೆಗೂ ಡಿವಿಡೆಂಡ್‌ ಯುಕ್ತ ಷೇರು ಖರೀದಿಗೆ ಅವಕಾಶವಿದೆ. ಅಂದರೆ ಒಂದೇ ವರ್ಷದಲ್ಲಿ ರೂ.150 ರ ಬೆಲೆಯಲ್ಲಿರುವ ಸಾರ್ವಜನಿಕ ವಲಯದ ಉತ್ತಮ ಕಂಪನಿ ರೂ.11 ರಷ್ಠು ಡಿವಿಡೆಂಡ್‌ ನೀಡಿದೆ. ವರ್ಷಾಂತ್ಯದ ನಂತರ ಮತ್ತೊಂದು ಡಿವಿಡೆಂಡ್‌ ನಿಡಬಹುದಾದ ಅವಕಾಶವಿದೆ.

    ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿಮಿಟೆಡ್:ಒಂದು ಷೇರಿಗೆ ರೂ.7.50 ಯಂತೆ ಡಿವಿಡೆಂಡನ್ನು ಹಿಂದಿನ ತಿಂಗಳು( ಫೆಬ್ರವರಿ) ವಿತರಿಸಿದ ಈ ಕಂಪನಿಯ ಷೇರಿನ ಬೆಲೆ ಕೇವಲ ರೂ.101 ರಲ್ಲಿದೆ. 2017 ರಲ್ಲಿ ಈ ಕಂಪನಿಯ ಷೇರಿನ ಬೆಲೆ ಸುಮಾರು ರೂ.400 ಕ್ಕೂ ಹೆಚ್ಚಿದ್ದು, 2018 ರಲ್ಲಿ 1:1 ರ ಅನುಪಾತದ ಬೋನಸ್‌ ಷೇರು ವಿತರಿಸಿದ ನಂತರದಿಂದ ಷೇರಿನ ಬೆಲೆ ಹೆಚ್ಚಿನ ಏರಿಕೆ ಪ್ರದರ್ಶಿಸಿಲ್ಲವಾದರೂ ಪ್ರತಿ ವರ್ಷವೂ ಆಕರ್ಷಕ ಡಿವಿಡೆಂಡನ್ನು ವಿತರಿಸುತ್ತಿದ್ದು, ಈ ವಾರ 16 ರಂದು ಎರಡನೇ ಮಧ್ಯಂತರ ಡಿವಿಡೆಂಡನ್ನು ವಿತರಿಸಲು ಮುಂದಾಗಿದೆ. ಈ ತಿಂಗಳ 22 ರವರೆಗೂ ಕಂ-ಡಿವಿಡೆಂಡ್‌ ವಹಿವಾಟಿಗೆ ಅವಕಾಶವಿದೆ.

    ಕೋಲ್‌ ಇಂಡಿಯಾ ಲಿಮಿಟೆಡ್:2010‌ ರಲ್ಲಿ ಪ್ರತಿ ಷೇರಿಗೆ ರೂ.245 ರಂತೆ ಐ ಪಿ ಒ ಮೂಲಕ ವಿತರಣೆಗೊಂಡು ಷೇರುಪೇಟೆ ಪ್ರವೇಶಿಸಿದ ಈ ಸಾರ್ವಜನಿಕ ನವರತ್ನ ಕಂಪನಿಯು ಪ್ರತಿ ವರ್ಷವೂ ಹೂಡಿಕೆದಾರರಿಗೆ ಆಕರ್ಷಕವಾದ ಡಿವಿಡೆಂಡನ್ನು ವಿತರಿಸಿದ ಹೆಗ್ಗಳಿಕೆಯನ್ನು ಹೊಂದಿದೆ. ಕಂಪನಿಯ ಘನತೆ ಹೇಗಿದೆ ಎಂದರೆ ಐ ಪಿ ಒ ಮೂಲಕ ಸಂಗ್ರಹಣೆಯ ಗುರಿ ಇದ್ದುದು ರೂ.15 ಸಾವಿರ ಕೋಟಿಯಾದರೂ ಸಂಗ್ರಹಣೆಯಾಗಿದ್ದು ರೂ.2 ಲಕ್ಷ ಕೋಟಿಯಷ್ಠು. ನವೆಂಬರ್‌ 2020 ರಲ್ಲಿ ಪ್ರತಿ ಷೇರಿಗೆ ರೂ.7.50 ಯಂತೆ ಡಿವಿಡೆಂಡ್‌ ವಿತರಿಸಿದ ಈ ಕಂಪನಿ ಈಗ ಮತ್ತೊಮ್ಮೆ ರೂ.5 ರಂತೆ ಡಿವಿಡೆಂಡ್‌ ಘೋಷಿಸಿದೆ. ಷೇರಿನ ಬೆಲೆ ಮಾತ್ರ ರೂ.150 ರ ಸಮೀಪವಿದೆ.

    ಎನ್‌ ಎಂ ಡಿ ಸಿ ಲಿಮಿಟೆಡ್:ಸಾರ್ವಜನಿಕ ವಲಯದ ಈ ಕಂಪನಿ ಷೇರಿನ ಬೆಲೆ ರೂ.134 ರ ಸಮೀಪವಿದೆ. ಇದು ವಾರ್ಷಿಕ ಗರಿಷ್ಠದ ಸಮೀಪವಿದೆಯಾದರೂ, ಖಾಸಗಿ ವಲಯದ ಕಂಪನಿಗಳಿಗೆ ಹೋಲಿಸಿದಲ್ಲಿ ಇದು ತೀರಾ ಕಳಪೆ ಬೆಲೆಯಾಗಿದೆ. ಆದರೆ ಈ ಕಂಪನಿಯು ಪ್ರತಿ ವರ್ಷವೂ ಆಕರ್ಷಕ ಲಾಭಾಂಶ ವಿತರಿಸುತ್ತಿದೆ. ಸಧ್ಯ ಪ್ರತಿ ಷೇರಿಗೆ ರೂ.7.76 ರಂತೆ ಡಿವಿಡೆಂಡ್‌ ಪ್ರಕಟಿಸಿದ್ದು ಈ ತಿಂಗಳ 21 ರವರೆಗೂ ಡಿವಿಡೆಂಡ್‌ ಯುಕ್ತ ವಹಿವಾಟಿಗೆ ಅವಕಾಶವಿದೆ.

    ಭಾರತ್‌ ಡೈನಾಮಿಕ್ಸ್‌ ಲಿಮಿಟೆಡ್‌ :ರಕ್ಷಣಾ ವಲಯದ ಈ ಕಂಪನಿಯ ಷೇರಿನ ಬೆಲೆಯು ರೂ.363 ರ ಸಮೀಪವಿದೆ. ಈ ಕಂಪನಿಯ ಷೇರಿನ ಬೆಲೆ ಹಿಂದಿನ ವರ್ಷದ ಮಾರ್ಚ್‌ ನಲ್ಲಿ ರೂ.147 ರವರೆಗೂ ಕುಸಿದು ನಂತರ ಆಗಷ್ಟ್ ತಿಂಗಳಲ್ಲಿ ಪುಟಿದೆದ್ದು ರೂ.481 ರವರೆಗೂ ಏರಿಕೆ ಕಂಡಿದೆ. ಆ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಆಫರ್‌ ಫಾರ್‌ ಸೇಲ್‌ ಮೂಲಕ ಶೇ.5 ರಷ್ಠರ ಭಾಗಿತ್ವವನ್ನು ರೂ.330 ರ ಮೂಲ ಬೆಲೆಯಲ್ಲಿ ಮಾರಾಟ ಮಾಡಿದ ಕಾರಣ ಷೇರಿನ ಬೆಲೆ ಕುಸಿತ ಕಂಡಿದೆ. ಆದರೆ ಈಗ ಕಂಪನಿಯು ಪ್ರತಿ ಷೇರಿಗೆ ರೂ.6.70 ರಂತೆ ಮಧ್ಯಂತರ ಡಿವಿಡೆಂಡನ್ನು ಘೋಷಿಸಿದೆ. ಈ ತಿಂಗಳ 17 ರವರೆಗೂ ಕಂ-ಡಿವಿಡೆಂಡ್‌ ವಹಿವಾಟಿಗೆ ಅವಕಾಶವಿದೆ.

    ಪವರ್‌ ಫೈನಾನ್ಸ್‌ ಕಾರ್ಪರೇಷನ್‌ ಲಿಮಿಟೆಡ್:ಒಂದು ವರ್ಷದಲ್ಲಿ ರೂ.74 ರ ಸಮೀಪದಿಂದ ರೂ.140 ರ ಗರಿಷ್ಠದವರೆಗೂ ಜಿಗಿತ ಕಂಡಿರುವ ಈ ಕಂಪನಿಯು ಸಧ್ಯ ರೂ.138 ರ ಸಮೀಪವಿದೆ. ಈಗ ಪ್ರತಿ ಷೇರಿಗೆ ರೂ.8 ರಂತೆ ಡಿವಿಡೆಂಡ್‌ ಘೋಷಿಸಿದೆ. ಇದಕ್ಕೆ ಈ ತಿಂಗಳ 18 ರವರೆಗೂ ಕಂ- ಡಿವಿಡೆಂಡ್‌ ವಹಿವಾಟಿಗೆ ಅವಕಾಶವಿದೆ.

    ಹೀಗೆ ಕಡಿಮೆ ಬೆಲೆಯಲ್ಲಿ ಆಕರ್ಷಕ ಡಿವಿಡೆಂಡ್‌ ಗಳನ್ನು ವಿತರಿಸುತ್ತಿರುವ ಸರ್ಕಾರಿ ಸ್ವಾಮ್ಯದ ಬೃಹತ್‌ ಕಂಪನಿಗಳು ಬ್ಯಾಂಕ್‌ ಡಿಪಾಜಿಟ್ ಗಳಿಗಿಂತಲೂ ಉತ್ತಮವೆನಿಸುತ್ತದೆ. ಅಲ್ಲದೆ ಮಾರ್ಚ್‌ ಅಂತ್ಯದ ವರ್ಷದ ನಂತರ ಮತ್ತೊಮ್ಮೆ ಫೈನಲ್‌ ಡಿವಿಡೆಂಡನ್ನೂ ಸಹ ಘೋಷಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಜೊತೆಗೆ ಹೂಡಿಕೆ ಮಾಡಿದ ಬಂಡವಾಳವು ಷೇರಿನ ಬೆಲೆ ಏರಿಕೆಯಿಂದ ಬೆಳವಣಿಗೆಯನ್ನೂ ಕಾಣುವ ಸಾಧ್ಯತೆಗಳು ಹೆಚ್ಚು. ಪ್ರಮುಖವಾದ ಮತ್ತೊಂದು ಅಂಶವೆಂದರೆ ಷೇರುಪೇಟೆಯಲ್ಲಿ ಖರೀದಿಸಿದ ಷೇರುಗಳನ್ನು ಅವಶ್ಯವಿದ್ದಲ್ಲಿ, ಅನುಕೂಲಕರವಾದ ಲಾಭ ಗಳಿಸಿದಲ್ಲಿ ತಕ್ಷಣ ಮಾರಾಟಮಾಡಿ ಎರಡು- ಮೂರು ದಿನಗಳಲ್ಲಿ ಹಣ ಕೈಗೆಟುಕಿಸಿಕೊಳ್ಳಲು ಅವಕಾಶವಿದೆ. ಇದರಿಂದ ಕಂಪನಿಗಳ ಬಗ್ಗೆ ನಕಾರಾತ್ಮಕ ಭಾವನೆ ಮೂಡಿದಾಗ ನಿರ್ಗಮಿಸಲು ಸಾಧ್ಯ. ಅತಿ ಹೆಚ್ಚಿನ ಮೌಲ್ಯದ ಖಾಸಗಿ ಕಂಪನಿಗಳ ಬಗ್ಗೆ ಹೊರಬೀಳುವ ವೈವಿಧ್ಯಮಯ ವಿಶ್ಲೇಷಣೆಗಳಿಗೆ ತುಲನೆ ಮಾಡಿದಲ್ಲಿ ಸಾರ್ವಜನಿಕ ವಲಯದ ಬೃಹತ್‌ ಕಂಪನಿಗಳು ಹೂಡಿಕೆಗೆ ಉತ್ತಮವಾದರೂ ತುಲನಾತ್ಮಕ ನಿರ್ಧಾರ ಒಳಿತು.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!