ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.
ಮುತ್ತಮ್ ಮೆಳಸಮ ಕೋದಂತೆ-ಕನ್ನಡದ ಮೊದಲ ಲಕ್ಷಣ ಕೃತಿ ‘ಕವಿರಾಜಮಾರ್ಗ’ದಲ್ಲಿ ಬರುವ ದೇಸೀ ಮಾತಿದು. ಮುತ್ತಿನ ಬಣ್ಣ ಬಿಳಿಪು, ಮೆಣಸು ಕಪ್ಪು ಬಣ್ಣದ್ದು. ಮುತ್ತು ಅಂದಕ್ಕೆ ಉಪಯೋಗಿಸುವುದಾದರೆ ಆಹಾರದಲ್ಲಿ ಉಪಯೋಗಿಸುವುದು ಮೆಣಸು. ದೇಹದ ಒಳ ಹಾಗು ಹೊರೆಗೆ ಇವುಗಳು ಬಳಕೆಯಾಗುವುದು.
ಕಪ್ಪು -ಬಿಳಿಪು , ದೇಹದ ಹೊರ ಹಾಗು ಒಳ ಈ ಅರ್ಥದಲ್ಲಿ ಮುತ್ತು ಹಾಗು ಮೆಣಸು ಪರಸ್ಪರ ವಿರುದ್ಧವಾಗಿರುವುದು. ಹಾಗೆ ಇವುಗಳ ಬೆಲೆಯಲ್ಲಿಯೂ ಅಜಗಜಾಂತರ ವ್ಯತ್ಯಾಸವಿದೆ.ಒಟ್ಟಿಗೆ ಇವುಗಳ ಬಳಕೆ ನಿಷಿದ್ದ ಆದರೆ ಪ್ರತ್ಯೇಕವಾಗಿ ಇವುಗಳಿಗೆ ಅವುಗಳದ್ದೆ ಆದ ಶ್ರೇಷ್ಠತೆ ಖಂಡಿತಾ ಇದೆ. ಪರಸ್ಪರ ಪೂರಕವಾಗಿರುವ ವಸ್ತುಗಳನ್ನು ಬಳಕೆ ಮಾಡದೆ ಹೋದರೆ ಆಗುವ ವೈರುಧ್ಯವನ್ನು ಪ್ರಸ್ತುತ ವಾಕ್ಯದಲ್ಲಿ ಹೇಳಲಾಗಿದೆ. ಹುಣ್ಣಿಮೆ ಅಮವಾಸ್ಯೆಗಳು ಹೇಗೆ ಒಟ್ಟಿಗೆ ಬರಲಾಗದೋ ಹಾಗೆ ಮುತ್ತು ಮತ್ತು ಮೆಣಸು ಎನ್ನಬಹುದು.
ಮುತ್ತು ಮತ್ತು ಮೆಣಸನ್ನು ಏಕಕಾಲಕ್ಕೆ ಒಂದೇ ಸರದಲ್ಲಿ ಅಳವಡಿಸಲು ಸಾಧ್ಯವೇ? ಹಾಗೊಂದು ವೇಳೆ ಸಾಧ್ಯವಾದರೆ ಅಂದವಾಗಿಯಾದರೂ ಕಾಣಬಲ್ಲುದೆ? ಎಂಬ ಪ್ರಶ್ನೆಗಳನ್ನು “ಮುತ್ತಮ್ ಮೆಣಸಮ್ ಕೋದಂತೆ” ವಾಕ್ಯ ಹುಟ್ಟುಹಾಕುತ್ತದೆ. ಈ ‘ಮುತ್ತು’ ಮತ್ತು ‘ಮೆಣಸ’ನ್ನು ಏಕಕಾಲಕ್ಕೆ ಒಂದೇ ಸರದಲ್ಲಿ ಪೋಣಿಸಲಾಗದು ಆಕಾರ, ಬಣ್ಣ, ತಾಳುವಿಕೆಯಲ್ಲೂ ಇವು ಹೊಂದಿಕೆಯಾಗುವುದಿಲ್ಲ . ಹೇತಿ -ಪ್ರಹೇತಿ, ಉತ್ತರಕ್ಕೊಬ್ಬ-ದಕ್ಷಿಣಕ್ಕೊಬ್ಬ ಎಂಬ ಮಾತುಗಳನ್ನು ಇಲ್ಲಿ ಸಂವಾದಿಯಾಗಿ ತೆಗೆದುಕೊಳ್ಳಬಹುದು.
“ಕಿರಿದರಲ್ಲಿ ಪಿರಿದರ್ಥ” ಎಂಬಂತೆ ವೈರುಧ್ಯದ ಬಗೆಗೆ ಹಲವು ಮಾತುಗಳನ್ನು ಹೇಳುವ ಬದಲು ಕೇವಲ ಮೂರು ಪದಗಳಲ್ಲಿ ಹಲವು ಅಯಾಮಗಳ ಅರ್ಥವನ್ನು ಒಟ್ಟಿಗೆ ಸೆರೆಹಿಡಿಯಲಾಗಿದೆ. ಇದೇ ಭಾಷಾ ಸೊಬಗು ಅಲ್ಲವೆ.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.
Very good writing. We expect much more information through kannada press. Com.
Nimage shubha wagali
ಧನ್ಯವಾದಗಳು