ಗಿರೀಶ್ ಪಿಎಂ
ಆ ಶಕ್ತಿಗೆ ಅಮ್ಮ, ತಾಯಿ, ಮಾತೆ, ಜನನಿ ಹೀಗೆ ಹಲವು ನಾಮಗಳು. ಆದರೆ ಆಕೆಯನ್ನು ಬಣ್ಣಿಸಹೊರಟರೆ ಶಬ್ದಗಳು ಸೋಲುತ್ತವೆ. ಅದೊಂದು ಸಂಬಂಧಕ್ಕೆ ಮೀರಿದ ಅನುಬಂಧ. ʼಹೆತ್ತ ಕರುಳುʼ ಎಂಬ ಶಬ್ದ ಅಮ್ಮನನ್ನು ಬಣ್ಣಿಸಲು ಸೂಕ್ತವೇನೋ. ನೋವ ಅನುಭವಿಸಿದರೂ, ಜೀವ ಬೇರೆಯಾದರೂ ಅಮ್ಮನ ಪ್ರೀತಿಯಲ್ಲಿ ಕೊಂಚವೂ ಕೊರತೆಯಾಗದು. ತುತ್ತು ಅನ್ನವಾದರೂ ತನ್ನ ಕರುಳ ಬಳ್ಳಿಗೆ ತಿನ್ನಿಸದೆ ತಾನು ತಿನ್ನಲಾರಳು. ನನಗೂ ಮೊದಲ ಗುರುವಾಗಿ ಗುರಿ ತಲುಪಲು ದಾರಿ ತೋರಿದವರು ಅಮ್ಮನೇ.
ನಮ್ಮದು ಸಣ್ಣ ಮಧ್ಯಮ ಕುಟುಂಬ. ಅಪ್ಪನಿಗೆ ಕೂಲಿ ಕೆಲಸ. ಅಮ್ಮನಿಗೆ ಬೀಡಿ ಕಟ್ಟುವ ಕಾಯಕ. ಅಮ್ಮ ಬೀಡಿ ಕಟ್ಟುವ ಕಲೆಯನ್ನು ಚಿಕ್ಕಂದಿನಲ್ಲೇ ಕಲಿತಿದ್ದರಂತೆ. ಚಿಕ್ಕವಯಸ್ಸಿನಲ್ಲಿ ಮನೆಯಲ್ಲಿ ಹಾಸುಹೊದ್ದು ಮಲಗಿದ್ದ ಬಡತನ. ಜೀವನದ ಬಂಡಿ ಸಾಗಲು, ಮಕ್ಕಳನ್ನು ಓದಿಸಲು ಬೀಡಿ ಕಟ್ಟುತ್ತಾರೆ. ಈಗಲೂ ಕಟ್ಟುತ್ತಲೇ ಇದ್ದಾರೆ. ಅದರಿಂದ ಬಂದ ಹಣದಲ್ಲಿ ಬಿಡಿಗಾಸೂ ಇಟ್ಟುಕೊಳ್ಳದೆ ಎಲ್ಲವನ್ನೂ ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುತ್ತಾರೆ. ಕಷ್ಟಪಟ್ಟು ದುಡಿದು ಮಗನ ಭವಿಷ್ಯ ಉಜ್ವಲವಾಗಲಿ ಎಂಬ ಕನಸು ಕಾಣುತ್ತಾರೆ.
ತನ್ನ ಆರೋಗ್ಯದ ಬಗ್ಗೆ ಕಾಳಜಿವಹಿಸದೆ ಮಕ್ಕಳಿಗೆ ಏನು ಆಗಬಾರದೆಂದು ಪ್ರತಿಕ್ಷಣ ನೆನೆಯುವ ಜೀವ ಅದು. ಕರೆಂಟ್ ಹೋದರೆ ಸೊಳ್ಳೆಕಾಟ ತುಸು ಜಾಸ್ತಿಯೇ ನಮ್ಮಲ್ಲಿ. ಮಕ್ಕಳು ಬೇಗನೆ ಏಳಬೇಕು, ಚೆನ್ನಾಗಿ ನಿದ್ದೆ ಮಾಡಲಿ ಎಂದು ತಾನು ನಿದ್ದೆ ಬಿಟ್ಟು ಬೀಸಣಿಗೆಯಿಂದ ಗಾಳಿ ಹಾಕುವುದು ಆಕೆಗೇನೂ ಹೊಸತಲ್ಲ. ಹೊಟ್ಟೆ ತುಂಬುವಷ್ಟು ಕೈ ತುತ್ತು, ಸಿಹಿ ಮುತ್ತನ್ನು ಕೊಟ್ಟು ಖುಷಿಪಡಿಸುವುದರಲ್ಲಿ ಆಕೆ ಯಾವತ್ತೂ ಶ್ರೀಮಂತೆ. ಒಂಬತ್ತು ತಿಂಗಳು ಹೊತ್ತು, ಹೆತ್ತು ಸಾಕಿ ಸಲಹುತ್ತಿರುವೆ. ನಿನಗೆ ನಾನೇನು ಕೊಡಲಿ ಅಮ್ಮಾ…
ಮಹಿಳಾ ದಿನಾಚರಣೆಯೇನೋ ಕಳೆಯಿತು. ಆದರೆ ನನ್ನ ಅಮ್ಮನ ತ್ಯಾಗವನ್ನು ಒಂದು ದಿನ ನೆನೆದರೆ ಸಾಕೇ? ಆಕೆಯ ನೋವು, ತ್ಯಾಗ ಒಂದೆರಡೇ? ಬಾಲ್ಯದಲ್ಲಿ ತನ್ನ ಮನೆಯಲ್ಲಿ ಕಂಡ ಬಡತನ, ತಿಂದ ಏಟು, ಪತಿಯ ಮನೆಯಲ್ಲಿ ಸಂಸಾರ ಸಾಗರವೆಂಬ ಮಹತ್ವದ ಜವಾಬ್ದಾರಿ ಹೊತ್ತು ಮುನ್ನಡೆಸುವುದು…ಇದೆಲ್ಲಾ ನಿನಗೆ ಹೇಗೆ ಸಾದ್ಯವಾಯಿತಮ್ಮಾ…?
ಎದುರಾಗುವ ಪ್ರತಿಯೊಂದು ನೋವಿಗೂ ಕುಗ್ಗದೆ ಮುಂದೆ ನಡೆಯುವರು ನೀವು. ಅತ್ತೆ, ಮಾವ, ಬಂಧುಗಳ ಸ್ನೇಹ ಸಂಪಾದಿಸಿ ಕುಟುಂಬಕ್ಕೆ ಒಳ್ಳೆಯ ಸೊಸೆ ಎಂದು ಕರೆಸಿಕೊಂಡವರು. ಬೆಟ್ಟದಷ್ಟು ನೋವು ಮನದೊಳಗಿದ್ದರೂ ಒಂದಿಂಚೂ ಮುಖದಲ್ಲಿ ಕಾಣಿಸದು. ಸದಾ ಮಂದಹಾಸದ ನಗು ಹೊಳೆಯೋ ಚಂದಿರನಂತೆ. ಅಮ್ಮನ ಗುಣಶೀಲತೆಯ ಹೊಗಳಲು ನಾ ಏಳು ಜನುಮ ಎತ್ತಿ ಬಂದರೂ ಸಾಲದು.
ಅಮ್ಮಾ ನೀ ಆಕಾಶ…
ಗಿರೀಶ್ ಪಿಎಂ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿ
ಪತ್ರಿಕೋದ್ಯಮ ವಿಭಾಗದ ಪ್ರಥಮ ಬಿಎ ವಿದ್ಯಾರ್ಥಿ
ಚಿತ್ರ : ಕಿರಣ ಆರ್