ಇತ್ತೀಚೆಗೆ ತಾಂತ್ರಿಕತೆ, ಆರ್ಥಿಕತೆ, ಚಿಂತನೆಗಳು ಹೆಚ್ಚಿನ ಬದಲಾವಣೆಗಳನ್ನು ಕಂಡಿವೆಯಾದರೂ ಜನಸಾಮಾನ್ಯರಾದಿಯಾಗಿ ಎಲ್ಲರೂ ಒಂದಲ್ಲಾಒಂದು ರೀತಿಯ ವ್ಯಸನಿಗಳಾಗಿ, ಮನಸ್ಸಿನ ನೆಮ್ಮದಿ ಕಳೆದುಕೊಂಡಿರುತ್ತಾರೆ. ಸರಳೀಕೃತ ತೆರಿಗೆ ಪದ್ದತಿ G S T ಜಾರಿಯಾದರೂ, N S T ಗಾಗಿ ಪರಿತಪಿಸುತ್ತಿದ್ದೇವೆ. ಏನದು N S T? . N S T ಎಂದರೆ ನೆಮ್ಮದಿ, ಸಂತೋಷ, ತೃಪ್ತಿ.
ನಾವು ಸಾಕ್ಷರತೆ ಮತ್ತು ಆರ್ಥಿಕ ಸಾಕ್ಷರತೆ ಎರಡು ಒಂದೇ ನಾಣ್ಯದ ಎರಡುಮುಖಗಳು ಎಂಬುದನ್ನು ಮರೆತು ಕೇವಲ ಸಾಕ್ಷರತೆಗೆ ಹೆಚ್ಚು ಆದ್ಯತೆ ನೀಡಿದ ಕಾರಣ ಆರ್ಥಿಕ ಸಾಕ್ಷರತೆಯು ತುಕ್ಕು ಹಿಡಿಯುವ ಮಟ್ಟಕ್ಕೆ ಹೋಗಿ ಸಂತೋಷ, ನೆಮ್ಮದಿ, ತೃಪ್ತಿಗಳನ್ನು ನಿಶ್ಚೇಷ್ಟಿತಗೊಳಿಸಿದೆ. ಸಾಕ್ಷರತೆಯ ಮಟ್ಟವನ್ನು ಸುಧಾರಿಸಿಕೊಂಡಿರುವ ನಾವುಗಳು ಈಗಲಾದರೂ ಆರ್ಥಿಕ ಸಾಕ್ಷರತೆಯತ್ತ ಗಮನಕೊಡದಿದ್ದಲ್ಲಿ ಹೆಚ್ಚಿನ ಅಪಾಯ ಎದುರಿಸಬೇಕಾಗುವುದು.
ಮನರಂಜನೆ, ಕ್ರೀಡಾ ಚಟುವಟಿಕೆ ಗಳಿಗೆ ನೀಡುವ ಮಟ್ಟದ ಆದ್ಯತೆಯನ್ನು ಸಹ ನಾವು ಆರ್ಥಿಕ ಸಾಕ್ಷರತೆಗೆ ನೀಡುತ್ತಿಲ್ಲ. ಆರ್ಥಿಕ ಸಾಕ್ಷರತೆಯು ತೀರಾ ಕಡೆಗಣಿಸಲ್ಪಟ್ಟಿದೆ. ಈಗ ಪ್ರಕಟವಾಗಿರುವ 149 ದೇಶಗಳ ‘ವರ್ಲ್ಡ್ ಹ್ಯಾಪಿನೆಸ್ಸ್ ಇಂಡೆಕ್ಸ್’ ನಲ್ಲಿ 139 ನೇ ಸ್ಥಾನದಲ್ಲಿದ್ದೇವೆ. ಹಣ ಮತ್ತು ಸ್ವತ್ತು ಸಂಪಾದನೆಯನ್ನೇ ಗುರಿಯಾಗಿಸಿಕೊಂಡಿರುವ ನಮಗೆ, ನೆಮ್ಮದಿ, ಸಂತೋಷ, ತೃಪ್ತಿಯನ್ನು ಕಳೆದುಕೊಳ್ಳುವಂತಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಾಧನೆಯನ್ನು ಮಾಡುತ್ತಿರುವ ಈಗಿನ ಪೀಳಿಗೆಯು ಹಣಕಾಸಿನ ನಿರ್ವಹಣೆಯ ಕೌಶಲ್ಯದಿಂದ ವಂಚಿತರಾಗಿದ್ದಾರೆ ಎನ್ನಬಹುದು. ಈಗಿನ ಶಾಲಾ ಕಾಲೇಜುಗಳಲ್ಲಿ ಬೋಧಿಸುವ ವಿಚಾರಗಳಿಗೂ, ದಿನನಿತ್ಯದಲ್ಲಾಗುತ್ತಿರುವ ಅಳವಡಿಕೆಗಳಿಗೂ ತೀರಾ ಬಿನ್ನತೆಯಿದೆ. ಅಂದರೆ Theory ಯೇ ಬೇರೆ, practical ಜೀವನದ ಶೈಲಿಯೇ ಬೇರೆ. ಹಾಗಾಗಿ ಆರ್ಥಿಕ ಅನಕ್ಷರತೆ ಹೆಚ್ಚಾಗುತ್ತಿದೆ.
ಎಲ್ಲರೂ ಸುಶಿಕ್ಷಿತರಾಗಬೇಕೆಂಬ ಜಾಗೃತಿ ಬೆಳೆದು ಬಡವ ಬಲ್ಲಿದರೆನ್ನದೆ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುತ್ತಿರುವ ಬೆಳವಣಿಗೆಯು ಸ್ವಾಗತಾರ್ಹವಾಗಿದೆ. ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ ಶಿಕ್ಷಣದ ಪಾತ್ರ ಅತಿ ಮುಖ್ಯ ಎಂಬುದು ಮನದಟ್ಟಾಗಿರುವ ಕಾರಣ ಎಲ್ಲರ ಚಿತ್ತ ಶಿಕ್ಷಣ ಪಡೆಯುವತ್ತ ತಿರುಗಿದೆ. ಆದರೆ ನಾವು ಶಿಕ್ಷಣವನ್ನು ಕೇವಲ ನಮ್ಮ ವೃತ್ತಿ ಅಥವಾ ನೌಕರಿಗಾಗಿ ಪಡೆಯುವ ಸ್ಪರ್ಧಾತ್ಮಕ ಚಿಂತನೆಯಲ್ಲಿದ್ದೇವೆ. ತನ್ಮೂಲಕ ನಾವು ಹಣ ಸಂಪಾದನೆಯನ್ನು ಮಾಡುವತ್ತ ನಮ್ಮ ಧ್ಯೇಯವನ್ನು ಕೇಂದ್ರೀಕರಿಸಿದ್ದೇವೆ. ಆಸ್ತಿ, ಹಣವೇ ಸರ್ವಸ್ವ ಎಂಬ ಚಿಂತನೆಯನ್ನು ನಮ್ಮ ಕಣ ಕಣಗಳಲ್ಲೂ ಬೆಳೆಸಿಕೊಂಡಿದ್ದೇವೆ, ವೃತ್ತಿಪರತೆ, ಭಾಧ್ಯತೆ, ಬಧ್ದತೆಗಳನ್ನು ಕೈಬಿಟ್ಟಿದ್ದೇವೆ. ಈ ಚಿಂತನೆಯೇ ನಮ್ಮ ಭವಿಷ್ಯಕ್ಕೆ ಮಾರಕ ಎಂಬುದನ್ನು ಗಮನಿಸುತ್ತಿಲ್ಲ.
ಶೇ.20. 30, 40. 60, ಮುಂತಾದ ವಿವಿಧ ಪ್ರಮಾಣದ ಡಿಸ್ಕೌಂಟ್ ಗೆ ನಾವು ಮಾರುಹೋಗಿ ಖರೀದಿಗೆ ಮುಂದಾಗುತ್ತೇವೆ. ಅಷ್ಟರ ಮಟ್ಟಿಗೆ ಡಿಸ್ಕೌಂಟ್ ನಲ್ಲಿ ಮಾರಾಟಮಾಡುವ ಸಾಮಾಗ್ರಿ ನಿಜವಾಗಿಯೂ ಖರೀದಿಗೆ ಅರ್ಹವೇ? ಇಷ್ಟರ ಮಟ್ಟಿಗೆ ಡಿಸ್ಕೌಂಟ್ ನೀಡುವ ಸಾಮಾಗ್ರಿಯ ಗುಣಮಟ್ಟವು ಕಳಪೆಯೇ? ಅಥವಾ ಅದರ ಬೆಲೆಯನ್ನು ಅತಿಯಾಗಿ ಹೆಚ್ಚಿಸಿ ಡಿಸ್ಕೌಂಟ್ ನೀಡಲಾಗುತ್ತಿದೆಯೇ ಎಂಬ ಅಂಶಗಳನ್ನು ಗಮನಿಸದೆ ಕೇವಲ ಡಿಸ್ಕೌಂಟ್ ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಇದು ಕಳಪೆ ಸಾಮಾಗ್ರಿಗಳಿಗೆ, ಅನರ್ಹ ಪದಾರ್ಥಗಳಿಗೂ ಅರ್ಹ ಬೆಲೆಯನ್ನು ಕೊಟ್ಟಂತಾಗುತ್ತದೆ. ಹಾಗಾಗಿ ಪ್ರದರ್ಶಿಸಿದ ಡಿಸ್ಕೌಂಟ್ ಗಳು ಸಹಜವೇ ಎಂಬುದನ್ನು ದೃಢೀಕರಿಸಿಕೊಂಡು ನಿರ್ಧರಿಸಬೇಕು.
ಷೇರುಪೇಟೆಯ ದೃಷ್ಟಿಯಿಂದ ನೋಡಿದಲ್ಲಿ ಇತ್ತೀಚಿನ ದಿನಗಳಲ್ಲಿ, ಪೇಟೆಗಳು ಸರ್ವಕಾಲೀನ ಗರಿಷ್ಠದ ಹಂತದಲ್ಲಿರುವ ಕಾರಣ, ಜನಸಾಮಾನ್ಯರಲ್ಲಿ ಮೂಡಿರುವ ತೇಜಿ ಚಿಂತನೆಗಳು, ವಿಶ್ಲೇಷಕರ ಸಕಾರಾತ್ಮಕ ಅಭಿಪ್ರಾಯಗಳಿಗೆ ಮನ್ನಣೆ ನೀಡಿ ತೇಲಿಬರುತ್ತಿರುವ ಅನೇಕ ಐ ಪಿ ಒಗಳು ವಿಜೃಂಭಣೆಯ ಯಶಸನ್ನು ಕಾಣುತ್ತಿವೆ. ಸೋಜಿಗವೆಂದರೆ ಕಂಪನಿಗಳು ತೇಲಿಬಿಡುವ ವಿತರಣೆಯ ದರವು ಯೋಗ್ಯವೇ ಎಂಬುದರ ಚಿಂತನೆಯನ್ನೂ ಸಹ ಮಾಡುವ ಗೋಜಿಗೆ ಹೋಗದೆ, ಹರಿದಾಡುತ್ತಿರುವ ಅಭಿಪ್ರಾಯಗಳಿಗೆ ಹೆಚ್ಚು ಆಧ್ಯತೆ ನೀಡುತ್ತೇವೆ.
ಮೂಲಭೂತಾಂಶಗಳನ್ನು ಲೆಕ್ಕಿಸದೆ ಕೇವಲ ಹೊರಗಿನ ಸುದ್ಧಿಗಳಿಗೆ ಒತ್ತು ನೀಡುವುದರಿಂದ ಬಂಡವಾಳ ಸುರಕ್ಷಿತವೂ ಅಲ್ಲ, ಇಂತಹ ಹೂಡಿಕೆಯು ದೀರ್ಘಕಾಲೀನದಲ್ಲಿ ಲಾಭದಾಯಕವೂ ಅಲ್ಲ. ಕೇವಲ ಅನಧಿಕೃತವಾದ ಗ್ರೇ ಮಾರ್ಕೆಟ್ ಪ್ರೀಮಿಯಂ ನ್ನು ಆಧರಿಸಿ, ಪ್ರವರ್ತಕರು, ಹೂಡಿಕೆದಾರರನ್ನಾಧರಿಸಿ ನಿರ್ಧರಿಸುವುದು ತಾತ್ಕಾಲಿಕವಾಗಿದ್ದು, ಅಲಾಟ್ಮೆಂಟ್ ಬಂದಾಕ್ಷಣ ಪೇಟೆ ಉತ್ತಮ ಫಲ ನೀಡುವಂತಿದ್ದರೆ ನಿರ್ಗಮಿಸಿದಲ್ಲಿ ಮಾತ್ರ ಹೂಡಿಕೆ ಮಾಡಿದ ಬಂಡವಾಳ ಸ್ವಲ್ಪ ಮಟ್ಟಿನ ಸುರಕ್ಷತೆ ಕಾಣಬಹುದು.
ಇತ್ತೀಚೆಗೆ ಪೇಟೆ ಪ್ರವೇಶಿಸಿ ಆರಂಭ ಶೂರತ್ವವನ್ನು ಪ್ರದರ್ಶಿಸಿ ಕುಸಿದ ಆನೇಕ ಕಂಪನಿಗಳನ್ನು ಹೆಸರಿಸಬಹುದು. ಕೆಂಕಾನ್ ಸ್ಪೆಷಾಲಿಟಿ ಕೆಮಿಕಲ್ಸ್ ಕಂಪನಿ ಸೆಪ್ಟೆಂಬರ್ 2020 ರಲ್ಲಿ ರೂ.340 ರಂತೆ ವಿತರಿಸಿದ್ದು, ರೂ.730 ರ ಸಮೀಪದಿಂದ ಆರಂಭವಾಗಿ ರೂ.743 ತಲುಪಿ ಅಕ್ಟೋಬರ್ ನಲ್ಲಿ ರೂ.398 ರವರೆಗೂ ಕುಸಿದು ನಂತರ ರೂ.419 ರ ಸಮೀಪಕ್ಕೆ ಹಿಂದಿರುಗಿಸಿದರೂ ಗರಿಷ್ಠದ ಬೆಲೆ ತಲುಪದೆ. ಲಿಸ್ಟಿಂಗ್ ನ ಆರಂಭದ ಸಮಯದಲ್ಲಿ ಖರೀದಿಸಿದವರಿಗೆ ಅತೀವ ಹಾನಿ ಉಂಟುಮಾಡಿದೆ. ಮಿಸ್ಸಸ್ ಬೆಕ್ಟಾರ್ ಫುಡ್ ಸ್ಪೆಷಾಲಿಟೀಸ್ ಲಿಮಿಟೆಡ್, ವಿತರಿಸಿದ ಬೆಲೆ ರೂ.288 ಆದರೂ ಷೇರಿನ ಬೆಲೆ ರೂ.629 ರವರೆಗೂ ಜಿಗಿದು ಈ ವಾರ ರೂ.338 ರವರೆಗೂ ಕುಸಿದು ರೂ.345 ರ ಸಮೀಪವಿದೆ. ಇಂಡಿಗೋ ಪೇಂಟ್ಸ್ ಲಿಸ್ಟಿಂಗ್ ಬೆಲೆಗಿಂತ ಸುಮಾರು ಶೇ.30 ಕ್ಕೂ ಹೆಚ್ಚು ಕುಸಿತದಲ್ಲಿದೆ.
ಅನೇಕ ಕಂಪನಿಗಳು ವಿತರಣೆಯ ನಂತರ ಲಿಸ್ಟಿಂಗ್ ಪ್ರೈಸ್ ಉತ್ತಮವಾಗಿದ್ದು, ನಂತರದ ದಿನಗಳಲ್ಲಿ ಅವುಗಳ ಬೆಲೆ ವಿತರಣೆ ಬೆಲೆಗಿಂತ ಹೆಚ್ಚಿದ್ದರೂ ಆರಂಭದ ಗರಿಷ್ಠಮಟ್ಟವನ್ನು ಉಳಿಸಿಕೊಳ್ಳಲಾಗದೆ ಜಾರಿವೆ. ಆದ್ದರಿಂದ ಹೆಚ್ಚಿನವುಗಳಲ್ಲಿ ಆರಂಭಿಕ ಹಂತದಲ್ಲೇ ಮಾರಾಟಮಾಡುವುದಕ್ಕೆ ಪ್ರೇರೇಪಿಸುತ್ತವೆ. ಇದು ಐ ಪಿ ಒ ಗಳು ಕೇವಲ ವ್ಯವಹಾರಿಕ ಪ್ರಕ್ರಿಯೆ ಎಂದು ಸಾಬೀತುಪಡಿಸಿವೆ.
IPO ಗಳಲ್ಲಿ ಗಮನಿಸಲೇಬೇಕಾದ ಕೆಲವು ಅಂಶಗಳು:
ಇಂದಿನ IPO ಗಳಿಗೆ ಅಪ್ಲೈ ಮಾಡುವಾಗ Risk factor ಗಳನ್ನು ಗಮನಿಸಬೇಕು. ಕೇವಲ ಪೇಟೆಯ ಸುದ್ಧಿಗಳೇ ನಿರ್ಣಾಯಕವಾಗಬಾರದು.
ಉದಾಹರಣೆಗೆ ಒಂದು ಕಂಪನಿ ತನ್ನ ಪ್ರಕಟಣೆಯಲ್ಲಿ ‘ Price/ earnings Ratio cannot be computed as both basic and diluted EPS for the Financial year ended for March 31. 2021 are negative, ಅಲ್ಲದೆ Weighted Average Return on net worth for Fiscals 2020,2019 and 2018 is 1.3% ಎಂದು ಮುದ್ರಿಸಿದ್ದರೂ, ರೂ.1,100 ರ ಬೆಲೆಯಲ್ಲಿ ಅತ್ಯಧಿಕವಾದ ಬೆಂಬಲ ಪಡೆದುಕೊಂಡಿದೆ.
- 2017 ರಲ್ಲಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎಂದು ಸ್ಥಾಪಿತವಾದ ಬ್ಯಾಂಕ್ ನ ಷೇರುದಾರರು ರೂ.58.77 ರಂತೆ ಪಡೆದುಕೊಂಡ ಷೇರುಗಳನ್ನು ಪೇಟೆಯು ಉತ್ತುಂಗದಲ್ಲಿರುವಾಗ ತೇಜಿ ವಾತಾವರಣದಲ್ಲಿ ರೂ.305 ರಂತೆ ಮಾರಾಟಮಾಡಲು ಮುಂದಾಗಿ ಯಶಸ್ವಿಯಾಗಿದ್ದಾರೆ.
- ಸಾಮಾನ್ಯವಾಗಿ ಲಿಸ್ಟಿಂಗ್ ದಿನದಂದು ಷೇರುಗಳು ಗರಿಷ್ಠಮಟ್ಟ ತಲುಪುವುವು. ಇದು ಸಂಬಂಧಿತ Book Running Managers ರವರ ಕಿರೀಟಕ್ಕೆ ಗರಿಯಾಗಿದೆ. ಏಕೆಂದರೆ ಅವರು ಮುಂದಿನ ವಿತರಣೆಗಳಲ್ಲಿ ನೀಡುವ ಪ್ರಕಟಣೆಗಳಲ್ಲಿ ನೇತೃತ್ವ ವಹಿಸಿದ ಕಂಪನಿಗಳಲ್ಲಿ ಲೀಸ್ಟಿಂಗ್ ದಿನದಂದು ವಿತರಣೆ ಬೆಲೆಗಿಂತ ಕಡಿಮೆದರದಲ್ಲಿ ವಹಿವಾಟಾದ ಕಂಪನಿಗಳ ಸಂಖ್ಯೆಯನ್ನು ನಮೂದಿಸುತ್ತಾರೆ. ಅಂದರೆ ಅರ್ಹತಾ ಮಟ್ಟವನ್ನು ಹೆಚ್ಚಿಸುತ್ತದೆ.
- ರೇಟಿಂಗ್ ಸಂಸ್ಥೆಗಳು ತಮ್ಮ ಮಾಪನ ಪ್ರಕ್ರಿಯೆಯಿಂದ ನೀಡಿದ ರೇಟಿಂಗ್ ಗೆ ಯಾವುದೇ ಅವಧಿಯಿರುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ಅವು ಮುಂದಿನ ದಿನಗಳಲ್ಲಿ ಬದಲಾವಣೆ ಕಾಣಬಹುದು.
- ವಿತರಣೆಗೆ SEBI ಅನುಮತಿ ನೀಡಿದೆ ಎಂದರೆ, ಅದು ಷೇರಿನ ವಿತರಣೆದರವನ್ನು ದೃಢೀಕರಿಸಿದೆ ಎಂದಲ್ಲ, ವಿತರಿಸುತ್ತಿರುವ ಕಂಪನಿಯು ಪಾರದರ್ಶಿಕತೆಯೊಂದಿಗೆ ನೀಡಬಹುದಾದ, ಅನುಸರಿಸಬೇಕಾದ ಎಲ್ಲಾ ಅಂಶಗಳನ್ನು ಪಾಲಿಸಿದೆ ಎಂದಷ್ಠೆ. ವಿತರಣೆ ಬೆಲೆಗೂ SEBI ಸಮ್ಮತಿಗೂ ಸಂಬಂಧವಿರುವುದಿಲ್ಲ.
ಬ್ಯಾಂಕ್ ಬಡ್ಡಿದರ ಫ್ಲೋಟ್, ಪೆಟ್ರೋಲ್ ದರ ಫ್ಲೋಟ್, ಬಸ್ ಪ್ರಯಾಣದರ ಫ್ಲೋಟ್, ಹೀಗೆ ಎಲ್ಲವೂ ಫ್ಲೋಟ್ ಎಂದಾದಾಗ ಹೂಡಿಕೆದಾರರ ನಿರ್ಧಾರವೂ ಸಂಧರ್ಭಾನುಸಾರ ತಮ್ಮ ಅನುಕೂಲಕ್ಕೆ ತಕ್ಕಂತೆ ನಿಯಮಗಳಿಗನುಗುಣವಾಗಿ ಫ್ಲೋಟ್ ಆದಲ್ಲಿ ಮಾತ್ರ ಹೂಡಿಕೆ ಮಾಡಿದ ಬಂಡವಾಳ ಸುರಕ್ಷಿತವಾಗಬಹುದು.