26.6 C
Karnataka
Friday, November 22, 2024

    ಬಣ್ಣಗಳ ಹಬ್ಬ ಹೋಳಿ

    Must read

    ಎಂ.ವಿ. ಶಂಕರಾನಂದ

    ಭಾರತದಲ್ಲಿ ಆಚರಿಸುವ ವಿವಿಧ ಬಣ್ಣಗಳ ಹಬ್ಬ ಹೋಳಿ. ಇದನ್ನು ಕಾಮನ ಹುಣ್ಣಿಮೆ, ಹೋಳಿ ಹುಣ್ಣಿಮೆ, ವಸಂತ ಹುಣ್ಣಿಮೆ ಎಂದೆಲ್ಲಾ ಕರೆಯುತ್ತಾರೆ. ಶಿಶಿರ ಋತು ಮುಗಿದು, ವಸಂತ ಋತುವಿನ ಚೈತ್ರ ಮಾಸ ಕಾಲಿಡುವಾಗ ಹಣ್ಣಾದ ಎಲೆಗಳು ಉದುರಿ, ಹೊಸ ಎಲೆಗಳು ಚಿಗುರಿರುತ್ತವೆ. ಆ ಚಿಗುರಿನ ರಸ ಹೀರಿ ಸಂತಸದಿಂದ ಹಾಡುವ ಕೋಗಿಲೆಯ ಕುಹೂ…ಕುಹೂ…. ನಾದ ಕೇಳಿ ಬರುತ್ತಿರುತ್ತದೆ. ಮಾವು, ಮಲ್ಲಿಗೆ ಸಂಪಿಗೆ, ಮುತ್ತಗದ ಗಿಡಮರಗಳು ಹೂಬಿಟ್ಟು ನಿಸರ್ಗ ಬಣ್ಣಬಣ್ಣವಾಗಿ ಕಾಣುವಾಗ ಈ ಹಬ್ಬ ಬರುತ್ತದೆ.

    ಪುರಾಣಗಳ ಪ್ರಕಾರ, ತಾರಕಾಸುರನ ಕಾಟಕ್ಕೆ ದೇವತೆಗಳು ಸೋತುಹೋಗಿದ್ದರು. ಶಿವನ ಪುತ್ರನಲ್ಲದೆ ಬೇರೆ ಯಾರೂ ತನ್ನ ಕೊಲ್ಲದಂತೆ ವರ ಪಡೆದಿದ್ದನವನು. ಆಗ ಬ್ರಹ್ಮನು ಶಿವ ಪಾರ್ವತಿಯರ ವಿವಾಹ ಮಾಡಿಸಲು ಹೇಳುತ್ತಾನೆ. ಆದರೆ ಶಿವ ವಿರಾಗಿಯಾಗಿ, ಕೈಲಾಸದಲ್ಲಿ ತಪಸ್ಸಿನಲ್ಲಿದ್ದಾನೆ. ಅವನು ಪಾರ್ವತಿಯಲ್ಲಿ ಅನುರಕ್ತನಾಗುವಂತೆ ಮಾಡಬಲ್ಲವನೆಂದರೆ ಮನ್ಮಥ ಮಾತ್ರ. ಇಂದ್ರ ಅವನನ್ನು ಕರೆಸಿ, ಈ ಕೆಲಸ ಮಾಡಲು ಹೇಳುತ್ತಾನೆ. ವಸಂತನನ್ನು, ಅಪ್ಸರೆಯರನ್ನು ಅವನ ಜೊತೆ ಕಳಿಸುತ್ತಾನೆ. ಮನ್ಮಥ ಶಿವನಿದ್ದಲ್ಲಿಗೆ ಬರುತ್ತಾನೆ. ಪಾರ್ವತಿ ಶಿವನ ಮುಂದೆ ಧ್ಯಾನದಲ್ಲಿರುತ್ತಾಳೆ. ಮನ್ಮಥನು ಪ್ರಯೋಗಿಸಿದ ಐದು ಹೂವಿನ ಬಾಣಗಳು ಶಿವನಿಗೆ ತಾಕಿ, ಎಚ್ಚರನಾಗಲು ಪಾರ್ವತಿ ಕಾಣಿಸಿ, ಕ್ಷಣಕಾಲ ಪರವಶನಾಗುತ್ತಾನೆ. ನಂತರ ಎಚ್ಚೆತ್ತು ಕೋಪದಿಂದ ತನ್ನ ಮೂರನೆ ಕಣ್ಣನ್ನು ತೆರೆದು ಮನ್ಮಥನ ಬೂದಿ ಮಾಡುತ್ತಾನೆ. ಶಿವ ಪಾರ್ವತಿಯರ ಮದುವೆ ನಡೆದಾಗ ಶಿವನು ಮನ್ಮಥನಿಗೆ ಜೀವ ನೀಡಿ, ಅವನು ಅವನ ಹೆಂಡತಿಗೆ ಮಾತ್ರ ಕಾಣುವಂತೆ ವರ ಕೊಡುತ್ತಾನೆ. ಅಂದಿನಿಂದ ಕಾಮನಿಗೆ ಎಲ್ಲಾ ಸ್ತ್ರೀ ಪುರುಷರ ಹೃದಯದಲ್ಲಿ ಸ್ಥಾನ ದೊರೆಯುತ್ತದೆ. ಈ ಘಟನೆ ಫಾಲ್ಗುಣ ಶುದ್ಧಹುಣ್ಣಿಮೆಯ ಪುಬ್ಬಾ ನಕ್ಷತ್ರದಂದು ನಡೆದಿದ್ದರಿಂದ ಇದನ್ನು ಕಾಮನ ಹುಣ್ಣಿಮೆ ಎನ್ನುತ್ತಾರೆಂದು ಪ್ರತೀತಿ ಇದೆ.

    ಜಾನಪದ ಕಥೆಯೊಂದರ ಪ್ರಕಾರ ಕಾಮ-ರತಿಯರು ಪ್ರೇಮಾಲಾಪದಲ್ಲಿದ್ದಾಗ, ಒಬ್ಬ ಋಷಿ ಇವರ ಅಕಾಲ ಸಂಯೋಗವನ್ನು ಕಂಡು ಶಾಪಕೊಟ್ಟ. ನಂತರ ಅವರು ಭೂ ಲೋಕದಲ್ಲಿ ಬೇರೆ ಬೇರೆ ಜಾತಿಯಲ್ಲಿ ಜನಿಸಿದರು. ಒಂದು ದಿನ ರತಿಯ ಕಂಡ ಕಾಮ ಅನುರಕ್ತನಾಗಿ ಅವಳನ್ನೇ ಮದುವೆಯಾಗಲು ನಿರ್ಧರಿಸಿದ. ಅವನ ತಂದೆ ಪ್ರತಿಭಟಿಸಿದಾಗ ತನ್ನ ಮನೆ ಬಿಟ್ಟು ಅವಳ ಮನೆಯಲ್ಲಿಯೆ ಇರತೊಡಗಿದ. ಅಪಾರ ಬಡತನದ ರತಿಯ ಮನೆಯಲ್ಲಿ ದಿನವೂ ಏಕಾದಶಿಯೆ. ಸ್ವಲ್ಪ ಕಾಲದ ನಂತರ ಹಸಿವನ್ನು ತಾಳದೆ ಕಾಮ ಸತ್ತ. ಅವನ ಸಂಸ್ಕಾರಕ್ಕೆ ಕಟ್ಟಿಗೆ ಕೊಳ್ಳಲೂ ರತಿಗೆ ಶಕ್ತಿಯಿರಲಿಲ್ಲ. ಆಗ ಕಾಮನ ಗೆಳೆಯರು ಕಟ್ಟಿಗೆ, ಬೆರಣಿ ಸೇರಿಸಿ ತಂದು ರತಿಯ ಮನೆಯ ಬೆಂಕಿ ತಂದು ಸಂಸ್ಕಾರ ಮಾಡಿದರು. ಇದು ಸಹ ಫಾಲ್ಗುಣ ಮಾಸದ ಹುಣ್ಣಿಮೆಯಂದು ನಡೆಯಿತಂತೆ.

    ನಾರದ ಪುರಾಣದಂತೆ; ರಾಕ್ಷಸ ರಾಜ ಹಿರಣ್ಯಕಶಿಪು ಹರಿಯನ್ನು ದ್ವೇಷಿಸುತ್ತಿದ್ದ. ಅವನ ಮಗ ಪ್ರಹ್ಲಾದ ಹರಿಭಕ್ತ. ಅವನನ್ನು ತಿದ್ದಲಾಗದೆ, ಕೊಲ್ಲಲು ಹಿರಣ್ಯಕಶಿಪು ನಿರ್ಧರಿಸುತ್ತಾನೆ. ತನ್ನ ಎಲ್ಲ ಪ್ರಯತ್ನ ವಿಫಲವಾದ್ದರಿಂದ ತನ್ನ ತಂಗಿ ಹೋಲಿಕಾಳ ನೆರವು ಕೇಳುತ್ತಾನೆ. ಅವಳನ್ನು ಬೆಂಕಿ ಸುಡುತ್ತಿರಲಿಲ್ಲ. ಅವಳು ಪ್ರಹ್ಲಾದನನ್ನು ಎತ್ತಿಕೊಂಡು ಅಗ್ನಿಕುಂಡ ಪ್ರವೇಶಿಸುತ್ತಾಳೆ. ಹರಿ ಹೋಲಿಕಾಳನ್ನೆ ಸುಟ್ಟು ಪ್ರಹ್ಲಾದನನ್ನು ಕಾಪಾಡುತ್ತಾನೆ. ಈ ದ್ಯೋತಕವಾಗಿ ಸಹ ಹೋಳಿ ಹಬ್ಬ ಆಚರಿಸಲ್ಪಡುತ್ತದೆ.

    ಈ ಆಚರಣೆಯ ಹಿಂದಿರುವ ಸಂದೇಶವೇನೆಂದರೆ ಕೆಟ್ಟದ್ದನ್ನು ಸುಡು ಎಂದು. ಕಾಮ, ಕ್ರೋಧ, ಮದ, ಮತ್ಸರಾದಿ ಅರಿಷಡ್ವರ್ಗಗಳನ್ನು ಸುಟ್ಟು, ಅಸುರಿಶಕ್ತಿಗಳನ್ನು ನಿರ್ನಾಮ ಮಾಡಬೇಕೆಂಬ ಹಟ ಹುಟ್ಟಿದ ಹೊರತು ಪ್ರೀತಿ ಮೊಳೆಯುವುದಿಲ್ಲ. ಬದುಕಿಗೆ ಬಣ್ಣ ಬರುವುದಿಲ್ಲ. ಕಾಮವೆಂದರೆ ಬಯಕೆ, ಅದನ್ನು ಸುಡದ ಹೊರತು ಮುಕ್ತಿಯ ಮಾತು ಬರಿಯ ಕನಸಾಗುತ್ತದೆ.

    ಕಾಮದಹನದ ನೆನಪಿಗೆ ಕಾಮನ ಪ್ರತಿಮೆ ಮಾಡಿಸಿ, ಶೃಂಗರಿಸಿ ಕಾಮನ ಕಟ್ಟೆಯ ಮೇಲೆ ಹಂದರ ಕಟ್ಟಿ, ಇಟ್ಟಿರುತ್ತಾರೆ. ಎಡಗಡೆ ರತಿಯ ಮೋಹಕ ಪ್ರತಿಮೆ ಇಡುವುದುಂಟು. ಕೆಲ ಊರುಗಳಲ್ಲಿ ಸರಕಾರಿ ಕಾಮಣ್ಣ, ಓಣಿಯ ಕಾಮಣ್ಣ, ದೈವದ ಕಾಮಣ್ಣ ಎಂದು ಮೂರು ಬಗೆಯ ಕಾಮಣ್ಣರನ್ನು ಪೂಜಿಸುತ್ತಾರೆ. ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಐದು ದಿನಗಳ ಕಾಲ ಪೂಜಿಸಿ, ಹುಣ್ಣಿಮೆಯ ದಿನ ದಹಿಸುವುದು ಸಂಪ್ರದಾಯ. ಕಾಮದಹನದ ನಂತರ ಓಕುಳಿಯಾಡಿ, ಎಣ್ಣೆ ಮಜ್ಜನ ಮಾಡಿ, ಹೋಳಿಗೆ ಮೆಲ್ಲುವುದೂ ಸಂಪ್ರದಾಯ.

    ಲಂಬಾಣಿ ಜನಾಂಗದವರು ಹೋಳಿ ಹಬ್ಬವನ್ನು ಬಹಳ ವಿಶಿಷ್ಟವಾಗಿ ಆಚರಿಸುತ್ತಾರೆ. ಈ ಹಬ್ಬಕ್ಕೆ ಅವರು ದೋಂಢಾ ಎನ್ನುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಇದನ್ನು ದೋಲ್ ಪೌರ್ಣಮಿ ಎಂದೂ, ಹರ್ಯಾಣದಲ್ಲಿ ದುಲಂದಿ ತ್ಯೋಹಾರ್ ಎಂದೂ ಆಚರಿಸುತ್ತಾರೆ. ಕೆಲವು ಕಡೆ ಇದನ್ನು ಐದು ದಿನಗಳ ಕಾಲ ಆಚರಿಸುತ್ತಾರೆ. ಜೈನರು ಹೋಳಿ ಹಬ್ಬದಂದು ರಾಧಾ ಕೃಷ್ಣನನ್ನು ಪೂಜಿಸಿ, ಗಸಗಸೆಯ ಹಾಲನ್ನು ಕುಡಿಯುತ್ತಾ ಸಂಭ್ರಮದಿಂದ ಹೋಳಿಯನ್ನು ಆಚರಿಸುತ್ತಾರೆ. ಒಟ್ಟಿನಲ್ಲಿ ಜಾತಿ-ಮತ-ವರ್ಗ- ವಯಸ್ಸಿನ ಬೇಧವಿಲ್ಲದೇ ಎಲ್ಲರೂ ಸಂತಸದಿಂದ ನಲಿಯುತ್ತಾ ಆಚರಿಸುವ ವಿಶಿಷ್ಟ ಹಬ್ಬ ಈ ಹೋಳಿ.

    Photo by Shrey Chapra from Pexels


    ತುಮಕೂರಿನ ಎಂ.ವಿ.ಶಂಕರಾನಂದ ಹಲವಾರು ಪುಸ್ತಕ ಪ್ರಕಾಶನ ಸಂಸ್ಥೆಗಳಲ್ಲಿ ಸಂಪಾದಕರಾಗಿ ದುಡಿದಿದ್ದಾರೆ. ಹಲವಾರು ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಲವು ಕೃತಿಗಳನ್ನು ರಚಿಸಿದ್ದಾರೆ. ಅನೇಕ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.

    spot_img

    More articles

    1 COMMENT

    1. ಕಾಮನ ಹಬ್ಬದ ಆಚರಣೆ ಬಗ್ಗೆ ವಿಶೇಷ ಮಾಹಿತಿ ಒದಗಿಸಿದ್ದಾರೆ.🙏🙏

    LEAVE A REPLY

    Please enter your comment!
    Please enter your name here

    Latest article

    error: Content is protected !!