23.2 C
Karnataka
Friday, November 22, 2024

    ಕಾಲದೊಂದೊಂದೇ ಹನಿ…

    Must read


    ಕನ್ನಡದ ಹೆಸರಾಂತ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರ ಅನುಭವ ಕಥನ ಕಾಲದೊಂದೊಂದೇ ಹನಿ… ಪುಸ್ತಕ ಇಂದು ಇನ್ನು ಸ್ವಲ್ಪ ಹೊತ್ತಿನಲ್ಲಿ ಬೆಂಗಳೂರು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಲೋಕಾರ್ಪಣೆ ಆಗಲಿದೆ. ಈ ಕೃತಿಯ ಒಂದು ಅಧ್ಯಾಯವನ್ನು ನಮ್ಮ ಓದುಗರಿಗಾಗಿ ಇಲ್ಲಿ ನೀಡಲಾಗಿದೆ.


    ಅಧ್ಯಾಯ 27. ಮನೆ

    ಕುವೆಂಪು ಅವರು ತಮ್ಮ ‘ಅನಿಕೇತನ’ ಪದ್ಯದಲ್ಲಿ ‘ಮನೆಯನೆಂದೂ ಕಟ್ಟದಿರು, ಕೊನೆಯನೆಂದೂ ಮುಟ್ಟದಿರು’ ಎನ್ನುವ ಸಾಲುಗಳನ್ನು ಬರೆಯುತ್ತಾರೆ. ನಾವೆಲ್ಲ ಸಾಮಾನ್ಯವಾಗಿ ಮಕ್ಕಳಾಗಿದ್ದಾಗ ಹಿರಿಯರು ಇದನ್ನು ಮಾಡಬೇಡ ಎಂದು ಹೇಳಿದ್ದನ್ನೇ ಮಾಡುವ ಆಸೆಯಿದ್ದ ಹಾಗೆ, ನನಗೆ ಮನೆಯನ್ನು ಕಟ್ಟಿ ನೋಡುವ ಒಂದು ಆಸೆ ನನ್ನಲ್ಲಿ ಹುಟ್ಟಿಕೊಂಡಿತು.

    ನಾವು ವಾಸಿಸುತ್ತಿದ್ದ ಮನೆ ಜೀರ್ಣಾವಸ್ಥೆಯನ್ನು ತಲುಪಿ, ಯಾವಾಗ ನೆಲಕ್ಕೆ ಉರುಳಿ ಬೀಳಬಹುದು ಎನ್ನುವ ಭಯದಲ್ಲಿಯೇ ಬದುಕುವ ಪರಿಸ್ಥಿತಿಯಿತ್ತು. ಮನೆಯ ಮಾಡಿನ ಬಿದಿರಿನ ಗಳಗಳೆಲ್ಲ ತುಂಡಾಗಿ ಒಂದೊಂದಾಗಿ ಬೀಳಲು ಆರಂಭವಾಗಿದ್ದವು. ಮಾಡಿಗೆ ಹೊದಿಸಿದ್ದ ಮುಳಿಹುಲ್ಲು ಆಗಾಗ ಹಾರಿಹೋಗಿ, ಶಿಶುನಾಳ ಶರೀಫರು ‘ಸೋರುತಿಹುದು ಮನೆಯ ಮಾಳಿಗೆ’ ಎನ್ನುವ ಪದ್ಯವನ್ನು ಇಂತಹ ಮನೆಯನ್ನು ನೋಡಿಯೇ ಬರೆದಿರಬಹುದು ಎನ್ನುವ ಕಲ್ಪನೆ ಕೂಡಾ ನನಗೆ ಬಂದಿತ್ತು. ಮನೆಗೆ ಹೊದಿಸುತ್ತಿದ್ದ ಮುಳಿಹುಲ್ಲು ಕೂಡಾ ಆಗ ಕಡಿಮೆಯಾಗುತ್ತಾ ಬಂದಿತ್ತು ಹಾಗೂ ಅದರ ಮೌಲ್ಯ ವರ್ಷವರ್ಷವೂ ಜಾಸ್ತಿಯಾಗುತ್ತಲೇ ಇತ್ತು. ಲಭ್ಯತೆ ಕೂಡಾ ಕಡಿಮೆಯಾಗಿದ್ದಲ್ಲದೆ, ಅದನ್ನು ಹೊದಿಸುವ ಕೂಲಿಯೂ ಪ್ರತಿವರ್ಷ ಹೆಚ್ಚುತ್ತಲೇ ಇತ್ತು.

    ಇಂತಹ ಪರಿಸ್ಥಿತಿಯಲ್ಲಿ ಹೇಗಾದರೂ ಒಂದು ಗಟ್ಟಿಯಾದ ಒಂದು ಮನೆ ಕಟ್ಟಿಕೊಳ್ಳಬೇಕು ಯೋಚನೆ ನನಗೆ ಬಂತು. ಅದಕ್ಕೆ ಬೇಕಾದ ಸಂಪನ್ಮೂಲಗಳನ್ನು ಒಟ್ಟುಗೂಡಿಸುವ ಸಲುವಾಗಿ ವರ್ಷವರ್ಷ ಒಂದೊಂದೇ ಕೆಲಸಗಳನ್ನು ಮಾಡುತ್ತ ಬಂದೆ. ಮೊದಲನೆಯ ವರ್ಷ ಮನೆಯ ಜಾಗಕ್ಕೆ ಬೇಕಾದ ನೆಲವನ್ನು ಸಮತಟ್ಟುಗೊಳಿಸಿ, ಅದರಿಂದ ತೆಗೆದ ಮಣ್ಣನ್ನು ತೋಟಕ್ಕೆ ಹಾಕಿಸಿದೆ. ಅದರಿಂದಾಗಿ ಮನೆಯ ಜಾಗ ಸಿದ್ಧವಾಗಿದ್ದರ ಜೊತೆಗೆ, ತೋಟಕ್ಕೆ ಹೊಸ ಮಣ್ಣು ಸಹ ದೊರಕಿತು. ನಂತರ ಒಂದು ಕೆರೆ ತೆಗೆದು ತೋಟಕ್ಕೆ ನೀರು ಹಾಯಿಸಲು ಒಂದು ಪಂಪ್ ಹಾಕಿಸಿ, ಮನೆಗೆ ಸಮತಟ್ಟು ಮಾಡಿದ ಜಾಗದಲ್ಲಿ ಒಂದು ನೀರಿನ ಟ್ಯಾಂಕ್ ಮಾಡಿಸಿದೆ. ಅಷ್ಟಲ್ಲದೇ ಮನೆಗೆ ಒಂದು ಕಚ್ಚಾಮಾರ್ಗದ ವ್ಯವಸ್ಥೆಯನ್ನು ಪೂರ್ವಭಾವಿಯಾಗಿ ಮಾಡಿಸಿದೆ. ಹಳೆಯ ಮನೆಗೆ ಬರುವಾಗ ಹೊಳೆ ಮತ್ತು ಸಂಕವನ್ನು ದಾಟಿಕೊಂಡು ಬರಬೇಕಾಗಿತ್ತು. ಹೊಸ ಮನೆಯ ಜಾಗಕ್ಕೆ ಸ್ವಲ್ಪ ಸುತ್ತಿ ಬಳಸಿ ಮನೆಯವರೆಗೂ ಮಾರ್ಗದ ವ್ಯವಸ್ಥೆಯನ್ನು ಮಾಡಿಸಿದೆ. ಅದರ ನಂತರದ ವರ್ಷ ಮನೆಗೆ ಬೇಕಾಗುವಂತಹ ಕೆಂಪು ಕಲ್ಲು ಕಡಿಸಿ, ಸುಮಾರು ಏಳು ಸಾವಿರ ಕಲ್ಲುಗಳನ್ನು ಸಂಗ್ರಹ ಮಾಡಿ ಇಟ್ಟುಕೊಂಡೆ.

    ಇಷ್ಟೆಲ್ಲ ತಯಾರಿಗಳಾಗಿದ್ದರೂ ಮನೆ ಕಟ್ಟಿಸಲು ಬೇಕಾಗುವ ಧೈರ್ಯ ನನಗೆ ಬಂದಿರಲಿಲ್ಲ. ಅದಕ್ಕೆ ಬೇಕಾದ ಬಂಡವಾಳ ನನ್ನ ಹತ್ತಿರ ಇರಲಿಲ್ಲ. ಆ ಸಮಯದಲ್ಲಿ ನಮ್ಮ ಕುಟುಂಬದವರೊಬ್ಬರ ಮನೆಯನ್ನು ಕಟ್ಟಿಸಲಿಕ್ಕೆ ಮಂಗಳೂರಿನಿಂದ ಜಗದೀಶ್ ಎನ್ನುವ ಕಾಂಟ್ರಾಕ್ಟರ್ ಒಬ್ಬರು ಬಂದಿದ್ದರು. ನಾನು ಅವರನ್ನು ಭೇಟಿ ಮಾಡಲು ಹೋದವನು ನನಗೂ ಒಂದು ಮನೆ ಆಗಬೇಕಿತ್ತು ಎಂದು ಹೇಳಿದೆ. ನಾಲ್ಕು ದಿನ ಕಳೆದ ಮೇಲೆ ಅವರು ನಮ್ಮ ಮನೆಗೆ ನನ್ನನ್ನು ಹುಡುಕಿಕೊಂಡು ಬಂದರು. ಮನೆ ಬೇಕು ಎಂದು ಹೇಳಿದ್ದಿರಲ್ಲ, ಮಾಡಿಸಿಬಿಡೋಣ ಎಂದು ಹೇಳಿದರು. ಆಗ ನಾನು ಮನೆಯ ಪೂರ್ವಭಾವಿ ತಯಾರಿಗಳೆಲ್ಲ ಆಗಿವೆ, ಆದರೆ ಉಳಿದ ಕೆಲಸಕ್ಕೆ ನನ್ನಲ್ಲಿ ಹಣವಿಲ್ಲ ಎಂದು ನಾನು ಅವರ ಹತ್ತಿರ ಹೇಳಿದೆ. ಅವರು ಎಷ್ಟು ಹಣ ಇದೆ ಎಂದು ಕೇಳಿದಾಗ ಇಪ್ಪತ್ತು ಸಾವಿರ ರೂಪಾಯಿಗಳಿರುವುದಾಗಿ ಹೇಳಿದೆ. ನನ್ನ ಜಮೀನಿನ ಸ್ವಲ್ಪ ಭಾಗವನ್ನು ಸರಕಾರ ಮಾರ್ಗ ಮಾಡುವ ಸಲುವಾಗಿ ವಶಪಡಿಸಿಕೊಂಡು ಪರಿಹಾರವಾಗಿ ನೀಡಿದ್ದ ಹಣವನ್ನು ನಾನು ಬ್ಯಾಂಕಿನಲ್ಲಿ ಇಟ್ಟಿದ್ದೆ. ಆ ಹಣಕ್ಕೆ ಸ್ವಲ್ಪ ಬಡ್ಡಿ ಸೇರಿ ಅದು ಇಪ್ಪತ್ತು ಸಾವಿರ ಆಗಿತ್ತು. ಅದರ ಜೊತೆಗೆ ಆ ವರ್ಷದ ಅಡಿಕೆ ಕೂಡಾ ಇತ್ತು. ಅಡಿಕೆಗೆ ಬೆಲೆ ಜಾಸ್ತಿ ಇರದಿದ್ದರೂ ಸ್ವಲ್ಪ ಹಣ ಅದರಿಂದ ಸಿಗುತ್ತಿತ್ತು. ಅದನ್ನು ಅವರಿಗೆ ಹೇಳಿ ಸುಮಾರು ಒಂದು ಲಕ್ಷ ಖರ್ಚಿನಲ್ಲಿ ಒಂದು ಚಿಕ್ಕ ಹಂಚಿನ ಮನೆಯನ್ನು ಮಾಡಲು ಸಾಧ್ಯವಾದರೆ ಮಾಡಿಕೊಡಿ ಎಂದು ಹೇಳಿದೆ. ಆಗ ಅವರು ಹಂಚಿನ ಮನೆಗೆ ಮರವನ್ನು ಕೊಂಡುಕೊಳ್ಳಲು ತುಂಬಾ ಖರ್ಚಾಗುವ ಕಾರಣ ಕಾಂಕ್ರೀಟ್ ಮನೆಯನ್ನೇ ಮಾಡುವುದು ಒಳ್ಳೆಯದು ಎಂದು ಹೇಳಿದರು. ಈಗ ನಿಮ್ಮ ಹತ್ತಿರ ಎಷ್ಟು ದುಡ್ಡು ಇದೆಯೋ ಅದಕ್ಕೆ ತಕ್ಕ ಹಾಗೆ ಕಾಮಗಾರಿಯನ್ನು ಆರಂಭಿಸೋಣ, ಆಮೇಲೆ ಆದಾಗ ಅದನ್ನು ಮುಂದುವರಿಸೋಣ ಎಂದು ಜಗದೀಶ್ ಅವರು ನನಗೆ ಧೈರ್ಯವನ್ನು ತುಂಬಿದರು. ಸರಿ ಎಂದು ನಾನು ಒಪ್ಪಿಕೊಂಡು ಇಪ್ಪತ್ತು ಸಾವಿರ ರೂಪಾಯಿಯಲ್ಲಿ ಜಲ್ಲಿ, ಸಿಮೆಂಟುಗಳನ್ನು ತಂದು ಕೆಲಸ ಆರಂಭ ಮಾಡಿದೆವು.

    ಕೆಲಸ ಮುಂದುವರೆದಂತೆ ನಮಗೆ ಹಣಕಾಸಿನ ಕಷ್ಟಗಳು ಆರಂಭವಾದವು. ಆಗ ಸುಳ್ಯದ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಸಾಲವನ್ನು ಪಡೆದುಕೊಂಡೆ. ಇಪ್ಪತ್ತೈದು ಸಾವಿರದಲ್ಲಿ ಪಾಲು ಬಂಡವಾಳ ಕಳೆದು ಇಪ್ಪತ್ಮೂರು ಸಾವಿರ ರೂಪಾಯಿ ಕೈಗೆ ಸಿಕ್ಕಿತು. ನನ್ನ ತಮ್ಮನ ಹೆಸರಿನಲ್ಲಿ ಇನ್ನೊಂದು ಸಾಲ ಮಾಡಿ ಅದರ ಇಪ್ಪತ್ಮೂರು ಸಾವಿರವನ್ನು ಸೇರಿಸಿಕೊಂಡೆ. ಉಳಿದ ಹಣವನ್ನು ಹೊಂದಿಸುವುದಕ್ಕಾಗಿ ಜಿ ಪಿ ಎಫ್ (ಗವರ್ನ್ಮೆಂಟ್ ಪ್ರೊವಿಡೆಂಟ್ ಫಂಡ್) ನಿಂದ ಸಾಲವನ್ನು ಪಡೆದುಕೊಂಡೆ. ನನ್ನಲ್ಲಿದ್ದ ಎಲ್ ಐ ಸಿ ಪಾಲಿಸಿಗಳಿಂದಲೂ ಸ್ವಲ್ಪ ಸಾಲ ಸಿಕ್ಕಿತು. ನನ್ನ ತಮ್ಮನ ಹತ್ತಿರವೂ ಅವನ ಹತ್ತಿರ ಇದ್ದ ಎಲ್ ಐ ಸಿ ಪಾಲಿಸಿಗಳಿಂದ ಸಾಲವನ್ನು ತೆಗೆಯಲು ಹೇಳಿದಾಗ, ಅವನು ಅಷ್ಟು ಆಸಕ್ತಿಯನ್ನು ತೋರಿಸಲಿಲ್ಲ. ನಮ್ಮ ಮನೆಯ ಹತ್ತಿರವಿದ್ದ ವಿಜಯಾ ಬ್ಯಾಂಕ್ ಮ್ಯಾನೇಜರ್ ಪರಿಚಯ ನನಗೆ ಇತ್ತು. ಅವರ ಹತ್ತಿರ ಹೋಗಿ ಸಾಲವನ್ನು ಕೊಡಲು ಸಾಧ್ಯವಿದೆಯೇ ಎಂದು ವಿಚಾರಿಸಿದೆ. ಮನೆ ಕಟ್ಟುತ್ತಿದ್ದ ಜಾಗದ ಭೂ ಪರಿವರ್ತನೆ ಆಗಬೇಕಾಗಿದ್ದ ಕಾರಣ ಮನೆಯ ಸಲುವಾಗಿ ಸಾಲ ಕೊಡಲು ಅಗವುದಿಲ್ಲ, ಬೇರೆ ಯಾವುದಾದರೂ ಸಾಲ ಕೊಡಲು ಸಾಧ್ಯವಿದೆಯೇ ಎಂದು ನೋಡುತ್ತೇನೆ ಎಂದು ಅವರು ಹೇಳಿದರು. ಆಮೇಲೆ ಅವರು ತೋಟಕ್ಕೆ ಮಣ್ಣು ಹಾಕುವ ಕಾರಣಕ್ಕೆ ಕೃಷಿ ಅಭಿವೃದ್ಧಿಯ ಹೆಸರಿನಲ್ಲಿ ಸ್ವಲ್ಪ ಸಾಲವನ್ನು ಮಂಜೂರು ಮಾಡಿದರು. ಹೀಗೆ ಬೇರೆಬೇರೆ ಕಡೆಗಳಿಂದ ಹಣದ ವ್ಯವಸ್ಥೆಯನ್ನು ಮಾಡಿಕೊಂಡರೂ, ಒಂದು ಲಕ್ಷದಲ್ಲಿ ಮುಗಿಸಬೇಕೆಂದುಕೊಂಡಿದ್ದ ಮನೆಯ ಖರ್ಚು ಏರುತ್ತಲೇ ಹೋಯಿತು. ಹಾಗೆ ಎರಡು-ಎರಡೂವರೆ ಲಕ್ಷ ದಾಟಿದ ಖರ್ಚನ್ನು ನೋಡಿದ ನನಗೆ ನಿಜವಾದ ಮನೆ ಕಟ್ಟಿಸುವ ಕಷ್ಟ ಅರ್ಥವಾಯಿತು.

    ಆರಂಭ ಮಾಡಿದ ಕೆಲಸವನ್ನು ಮಧ್ಯದಲ್ಲಿ ನಿಲ್ಲಿಸಲಾಗದೇ ಸಾಧ್ಯವಿದ್ದ ಎಲ್ಲ ಮೂಲಗಳಿಂದ ಸಾಲವನ್ನು ಪಡೆದುಕೊಂಡೆ. ಮನೆ ಕೆಲಸ ಮುಗಿಯುತ್ತಿದ್ದಂತೆಯೇ ಹಣಕಾಸಿನ ಅಡಚಣೆಯೂ ಜಾಸ್ತಿಯಾಗುತ್ತ ಹೋಯಿತು. ಮನೆಯ ಫ್ಲೋರಿಂಗಿಗೆ ಜಗದೀಶ್ ಅವರು ಹೇಳಿದಂತೆ ಕಡಪಾ ಮತ್ತು ಶಾಬಾದ್ ಕಲ್ಲುಗಳನ್ನು ಹಾಕುವುದು ಎಂದು ನಿರ್ಧಾರ ಮಾಡಿದೆವು. ಧಾರವಾಡದಲ್ಲಿದ್ದ ನನ್ನ ಭಾವನಿಗೆ ಫೋನ್ ಮಾಡಿ ಕೇಳಿದಾಗ ಅವರು ಅಲ್ಲಿಗೆ ಬಂದರೆ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿದರು. ನಾನು ಜಗದೀಶ್ ಅವರೊಂದಿಗೆ ಧಾರವಾಡಕ್ಕೆ ಹೋಗಿ, ಹುಬ್ಬಳ್ಳಿಯಿಂದ ನಮಗೆ ಬೇಕಾದ ಕಲ್ಲುಗಳನ್ನು ತಂದೆವು. ಅಷ್ಟಾಗಿಯೂ ಮನೆ ಕಟ್ಟಿಸುವ ಕೆಲಸದ ಖರ್ಚು ಮುಗಿದಿರಲಿಲ್ಲ. ನಮ್ಮ ಮನೆಯ ಸಮೀಪದ ಶ್ರೀಮಂತ ಬಂಧುಗಳೊಬ್ಬರ ಹತ್ತಿರ ಐದು ಸಾವಿರ ರೂಪಾಯಿಗಳನ್ನು ಹದಿನೈದು ದಿನಗಳ ಸಲುವಾಗಿ ಸಾಲವಾಗಿ ತೆಗೆದುಕೊಂಡು ಬಂದೆ. ಹದಿನೈದು ದಿನಗಳು ಕಳೆದ ಮೇಲೆ ಅವರ ಸಾಲವನ್ನು ಮರಳಿ ಕೊಡಲಾಗದ ಪರಿಸ್ಥಿತಿಯಲ್ಲಿ ಅವರ ಹತ್ತಿರ ಹೋಗಿ ಕಷ್ಟವನ್ನು ಹೇಳಿಕೊಂಡೆ. ಅವರು ಪರವಾಗಿಲ್ಲ ತಡವಾಗಿಯೇ ಕೊಡಿ ಎಂದು ಹೇಳಿದರು. ಅಷ್ಟೇ ಅಲ್ಲದೆ ಮನೆ ಕೆಲಸ ಮುಗಿದಮೇಲೆ ಹಣವನ್ನು ಮರಳಿ ಕೊಡುವಾಗ ಬಡ್ಡಿಯ ಹಣವನ್ನು ಕೂಡಾ ಅವರು ತೆಗೆದುಕೊಳ್ಳಲಿಲ್ಲ. ಮತ್ತೊಬ್ಬ ಶ್ರೀಮಂತ ಬಂಧುಗಳಲ್ಲಿ ಕೇಳಿದಾಗ ಅವರು ಕಷ್ಟದಲ್ಲಿ ಐದು ಸಾವಿರ ಕೊಟ್ಟು, ಹದಿನೈದು ದಿನಗಳೊಳಗೆ ಹಿಂದಿರುಗಿಸಬೇಕೆಂದು ಆದೇಶಿಸಿದರು. ಹದಿನೈದು ದಿನಗಳ ನಂತರ ಅವರ ಹಣವನ್ನು ಅವರ ಸೂಚನೆಯಂತೆ ಹಿಂದಿರುಗಿಸಿದೆ. ಎರಡನೇ ಶ್ರೀಮಂತರು ಹಣದೊಂದಿಗೆ ಬಡ್ಡಿಯನ್ನೂ ತೆಗೆದುಕೊಂಡರು. ನಮ್ಮವರೆಲ್ಲ ಹೀಗೆ ಸಮಯದ ಗಡುವು, ಬಡ್ಡಿಯ ಲೆಕ್ಕಾಚಾರದಲ್ಲಿ ಹಣ ಕೊಟ್ಟರೆ, ಬ್ರಾಹ್ಮಣೇತರರೊಬ್ಬರು ನಿಮಗೆ ಯಾವಾಗ ಬೇಕಾದರೂ ಹಣವನ್ನು ಕೇಳಿ ತೆಗೆದುಕೊಂಡು ಹೋಗಿ, ಅನುಕೂಲವಾದಾಗ ಮರಳಿ ಕೊಡಿ ಎಂದು ಹೇಳಿ ಆಗಾಗ ಹಣವನ್ನು ಕೊಟ್ಟು ಸಹಾಯ ಮಾಡಿದ್ದರು. ಹೀಗೆ ಕಷ್ಟಪಟ್ಟು ಹಣವನ್ನು ಹೊಂದಿಸಿ ಸುಮಾರು ಮೂರೂವರೆ ಲಕ್ಷ ಖರ್ಚು ಮಾಡಿ ಮನೆಯನ್ನು ಕಟ್ಟಿ ಮುಗಿಸಿದೆ.

    ಅದೇ ಸಮಯದಲ್ಲಿ ಚೊಕ್ಕಾಡಿಯ ರಾಮ ದೇವಸ್ಥಾನದ ವಾರ್ಷಿಕೋತ್ಸವ ಸಮಾರಂಭ ನಡೆಯುತ್ತಿತ್ತು. ಅದರಲ್ಲಿ ಊರಿನ ಕೆಲವು ಹಿರಿಯರೆಲ್ಲ ಸೇರಿಕೊಂಡು ನನಗೆ ಒಂದು ಸನ್ಮಾನ ಮಾಡಬೇಕು ಎಂದು ನಿಶ್ಚಯ ಮಾಡಿಕೊಂಡರು. ಆ ಸನ್ಮಾನ ಸಮಾರಂಭಕ್ಕೆ ಲಕ್ಷ್ಮೀಶ ತೋಳ್ಪಾಡಿ, ಬನ್ನಂಜೆ ಗೋವಿಂದಾಚಾರ್ಯ, ಖ್ಯಾತ ಯಕ್ಷಗಾನ ಆರ್ಥಧಾರಿ ಪ್ರಭಾಕರ ಜೋಶಿ ಅವರೆಲ್ಲ ಬಂದಿದ್ದರು. ಜೋಶಿಯವರು ಅಭಿನಂದನಾ ಭಾಷಣ ಮಾಡುತ್ತ ‘ನಮ್ಮ ಚೊಕ್ಕಾಡಿಯವರಿಗೆ ಸರಸ್ವತಿ ಒಳಿದಿದ್ದಾಳೆ, ಆದರೆ ಲಕ್ಷ್ಮಿ ಇನ್ನೂ ಒಲಿದಿಲ್ಲ’ ಎಂದು ಹೇಳಿದರು. ನಾನು ತಕ್ಷಣ ಪಕ್ಕದಲ್ಲಿ ಕುಳಿತಿದ್ದ ಪತ್ನಿ ಲಕ್ಷ್ಮಿಯನ್ನು ತೋರಿಸಿ ‘ಲಕ್ಷ್ಮಿ ಕೂಡಾ ಒಲಿದಿದ್ದಾಳೆ, ನನ್ನ ಪಕ್ಕದಲ್ಲೇ ಕುಳಿತುಕೊಂಡಿದ್ದಾಳೆ, ಹಾಗಾಗಿ ನನ್ನೊಂದಿಗೆ ಇಬ್ಬರೂ ಇದ್ದಾರೆ’ ಎಂದು ಹೇಳಿದೆ. ಸಂಜೆ ಸಮಾರಂಭ ಮುಗಿದ ಮೇಲೆ ಅವರೆಲ್ಲರೂ ಬಂದು ಹೊಸ ಮನೆಯ ಕಾಮಗಾರಿಯನ್ನು ನೋಡಿ ಹರಸಿದರು. 1991 ನೇ ಇಸವಿಯ ಮೇ ಮಧ್ಯಭಾಗದಲ್ಲಿ ಹೊಸ ಮನೆಯ ಒಕ್ಕಲು ಆಯಿತು. ಆದರೂ ಕುವೆಂಪು ಅವರ ‘ಕೊನೆಯನೆಂದೂ ಮುಟ್ಟದಿರು’ ಸಾಲಿನಂತೆ, ಇನ್ನೂ ಸ್ವಲ್ಪ ಕೆಲಸ ಬಾಕಿ ಉಳಿದಿತ್ತು. ಹಳೆಯ ಮನೆಯಲ್ಲಿದ್ದ ಕೆಲವೇ ಕೆಲವು ಮರಗಳನ್ನು ಹೊಸ ಮನೆಗೆ ಬಳಸಿಕೊಂಡು, ಸಂಬಂಧಿಕರ ಮನೆಯಲ್ಲಿದ್ದ ಹಳೆಯ ಮರಗಳನ್ನು ತೆಗೆದುಕೊಂಡು ಬಂದು ಹೇಗೋ ಕಷ್ಟಪಟ್ಟು ಮನೆಯ ಕೆಲಸವನ್ನು ಮಾಡಿ ಮುಗಿಸಿದೆ. ಮನೆ ಕಟ್ಟಿ ಮುಗಿದಿದ್ದರೂ ನಂತರದ ತಾಪತ್ರಯಗಳೆಲ್ಲ ಹಾಗೆಯೇ ಉಳಿದಿದ್ದವು. ಮನೆ ಕಟ್ಟಲು ಮಾಡಿದ್ದ ಸಾಲವನ್ನೆಲ್ಲ ಸಂಬಳದ ದುಡ್ಡಿನಿಂದ, ಅಲ್ಪಸ್ವಲ್ಪ ಕೃಷಿಯ ಆದಾಯದಿಂದ ತೀರಿಸಬೇಕಾಗಿತ್ತು. ಸುಮಾರು ಹತ್ತು ವರ್ಷಗಳ ಕಷ್ಟದ ನಂತರ ಎಲ್ಲ ಸಾಲವನ್ನೂ ತೀರಿಸಿಕೊಂಡೆ. ಆದರೂ ತೊಂದರೆಯಿಲ್ಲದ ಒಂದು ನೆಲೆ ನಮ್ಮ ಮನೆಯವರಿಗೆ ಸಿಕ್ಕಿತು ಎನ್ನುವುದೇ ಒಂದು ಸಂತೋಷದ ಸಂಗತಿ.

    ಆ ಸಂದರ್ಭದಲ್ಲಿ ಬಂದ ಎಲ್ಲ ಕಷ್ಟಗಳನ್ನೂ ಸಹಿಸಿಕೊಂಡ ನನ್ನ ಹೆಂಡತಿ ಮತ್ತು ತಾಯಿಯವರ ಸಹಕಾರ ತುಂಬಾ ದೊಡ್ಡದು ಎನ್ನುವುದು ನನ್ನ ಭಾವನೆ. ಆಗ ಮನೆ ನೋಡಲಿಕ್ಕೆ ಬಂದಿದ್ದ ನಮ್ಮ ಊರಿನವರೊಬ್ಬರು ‘ಅಯ್ಯೋ, ಇಷ್ಟು ದೊಡ್ಡ ಮನೆ ನಿನಗೆ ಬೇಕಿತ್ತಾ’ ಎನ್ನುವ ಪ್ರಶ್ನೆಯನ್ನು ಕೇಳಿದ್ದರು. ಆ ಮಾತು ಕೇಳಿ ನನಗೆ ಬಹಳ ಆಶ್ಚರ್ಯವಾಗಿತ್ತು. ನಾವು ಮೂರು ಜನ ಅಣ್ಣ-ತಮ್ಮಂದಿರಿಗೆ ಅಗತ್ಯವಿದ್ದಷ್ಟು ದೊಡ್ಡ ಮನೆ ಮಾತ್ರ ನಮ್ಮದಾಗಿತ್ತು. ಹಾಗೆ ನನ್ನನ್ನು ಪ್ರಶ್ನಿಸಿದವರ ದೊಡ್ಡ ಮನೆ ಈಗಲೂ ಇದೆ ಎನ್ನುವುದು ಕೂಡಾ ಸತ್ಯದ ಸಂಗತಿ. ಅವರ ಆ ಪ್ರಶ್ನೆ ಮುಂದೆ ನನ್ನ ಬದುಕಿನಲ್ಲಿ ಯಾವ ತಿರುವುಗಳನ್ನೆಲ್ಲ ಪಡೆದುಕೊಂಡು ದಾಂಧಲೆಯನ್ನೆಬ್ಬಿಸಿತು ಎಂಬುದು ನನ್ನ ಬದುಕಲ್ಲಿ ಮರೆಯಲಾಗದ ಸಂಗತಿಯಾಗಿದೆ. ಅದರ ವಿವರ ಮುಂದೆ ಬರಲಿದೆ.


    ಚೊಕ್ಕಾಡಿ ಅವರ ಭಾವಚಿತ್ರ ಸೆರೆಹಿಡಿದದ್ದು ಶಿವ ಸುಬ್ರಹ್ಮಣ್ಯ

    spot_img

    More articles

    4 COMMENTS

    1. ಚೊಕ್ಕಾಡಿ ಅವರ ಅನುಭವದ ಕಥನ ತಿಳಿದುಕೊಂಡರೆ ನಮಗೂ ಕಲಿಯಲು ಬೇಕಷ್ಟು ಸಿಗುತ್ತದೆ . ಖಂಡಿತಾ ಓದುವೆ.ಸದಾ ಖುಷಿ ಖುಷಿಯಿಂದ ಇರಿ.

    2. ಸುಬ್ಬರಾಯ ಚೊಕ್ಕಾಡಿ ಅವರ ಪುಸ್ತಕ ಓದುವ ಕುತೂಹಲ ಹೆಚ್ಚಾಗಿದೆ. ಪುಸ್ತಕ ಕೊಂಡುಕೊಂಡು ಓದುವಾಗ ಸರ್.

    3. ಅಬ್ಬಾ ಮನೆ ಕಟ್ಟಿಸುವುದು ಎಂತಹ ಸಾಹಸ. ತಮ್ಮ ಅನುಭವಗಳನ್ನು ಬರೆಯುವಾಗ ಹಣ ಸಲೀಸಾಗಿ ಹರಿದು ಬಂದಂತೆ ಬರೆದಿದ್ದರು, ಆಗ ಎಷ್ಟು ಭಯ ಮತ್ತು ಹಿಂಸೆಯಾಗಿರಬಹುದು.
      ಸಾಲ ಸೋಲವನ್ನೆಲ್ಲ ಕೃಷಿ ಆದಾಯದ ಮೇಲೆ ಹಿಂತಿರುಗಿ ಕಟ್ಟುವುದು ಕೂಡ ಬಹಳ ಕಷ್ಟವಾದ ಕೆಲಸವೇ.
      ದೊಡ್ಡ ಮನೆಯ ಕನಸು ಕಾಣುವ ನಾವೆಲ್ಲ ಇದರಿಂದ ಕಲಿಯಬೇಕು.

    LEAVE A REPLY

    Please enter your comment!
    Please enter your name here

    Latest article

    error: Content is protected !!