ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.
ಬಿತ್ತಿ ಬೆಳೆದಂತಕ್ಕುಂ ವಿಷೋದ್ಯಾನಂ- ‘ಅಭಿನವ ಪಂಪ’ನೆಂದು ಬಿರುದಾಂಕಿತನಾಗಿರುವ ನಾಗಚಂದ್ರ ಕವಿಯ ‘ರಾಮಚಂದ್ರ ಚರಿತ ಪುರಾಣ’ದಲ್ಲಿ ಉದ್ಗರಿಸಿರುವ ವಾಕ್ಯ ಇದು. ವಿಷಬೀಜ ಬಿತ್ತಿ ಬೆಳೆಸಿದರೆ ಆ ಉದ್ಯಾನ ವಿಷೋದ್ಯಾನವಾಗುತ್ತದೆ ಅದನ್ನು ಬಿಟ್ಟು ಹೂ-ಹಣ್ಣು ಔಷಧೀಯ ಸಸ್ಯ ಮುಂತಾದವುಗಳನ್ನು ಬೆಳೆಸಿದರೆ ಅದು ಅಮೃತತ್ವಕ್ಕೆ ಸಮಾನವಾಗಿರುತ್ತದೆ.
“ಬಿತ್ತಿದಂತೆ ಬೆಳೆ” ಅಂದರೆ ಒಳ್ಳೆಯ ಬೀಜ ಬಿತ್ತಿದರೆ ಒಳ್ಳೆಯ ಬೆಳೆಯನ್ನು ಕೊಡುತ್ತದೆ. ಆದರೆ ದೋಷಪೂರಿತ ಬೀಜಗಳು ಹೇಗೆ ಒಳ್ಳೆಯ ಬೆಳೆಯನ್ನು ಕೊಡಲಾಗದು.“ಬಿತ್ತಿ ಬೆಳೆದಂತಕ್ಕುಂ ವಿಷೋದ್ಯಾನಂ” ಎಂಬ ಮಾತನ್ನು ಸಮಾಜಕ್ಕೆ ಈ ಮಾತನ್ನು ಅನ್ವಯಿಸಬಹುದು. ಸಮಾಜದ ವಿಷ ಎಂದರೆ ಗರ್ವ. ನಮ್ಮಲ್ಲಿ ಹಲವರಿಗೆ ವಿದ್ಯಾವಂತರೆಂಬ ಗರ್ವವಿದೆ,ನಮಗೆ ತಿಳಿದಿರುವಂತದ್ದೆ ಅಂತಿಮ ಎಂಬ ಭ್ರಮೆಯೂ ಹಲವರಲ್ಲಿ ಇರುತ್ತದೆ.ಇದು ಕೆಲವೊಮ್ಮೆ ಜನ್ಮತಃ, ಬೆಳೆದ ಸಂದರ್ಭ, ಮನೆಯಲ್ಲಿನ ಸುಖದ ವಾತಾವರಣ, ಸಂಪತ್ತಿನ ಗರ್ವವೂ ಇಲ್ಲಿ ಇರುತ್ತವೆ.ಇಂತಹ ಸಂದರ್ಭಗಳು ಕೆಟ್ಟದ್ದನ್ನೆ ಸೃಷ್ಟಿ ಮಾಡುತ್ತವೆ.ಈ ‘ಗರ್ವ’ ಅನ್ನುವುದು ವಿಷ ಬೀಜವೇ ಇದು ಮತ್ಸರ, ದ್ವೇಷ, ಸೇಡು ಮುಂತಾದವುಗಳನ್ನು ಮಾತ್ರ ಕೊಡಲು ಸಾಧ್ಯ.
ವ್ಯಕ್ತಿಯೊಬ್ಬ ವಿದ್ಯಾವಂತ ಎಂದು ಕರೆಸಿಕೊಂಡರೆ ಸಾಲದು ಆತ ಕರಗತ ಮಾಡಿಕೊಂಡಿರುವ ವಿದ್ಯೆ ಎಂತಹದ್ದು ಎನ್ನುವುದರ ಅರಿವಿರಬೇಕು. ನಿಜಕ್ಕೂ ವಿದ್ಯಾವಂತನಾದವನು ಯುಕ್ತ ಮಾಹಿತಿಗಳನ್ನು ಪಡೆದುಕೊಂಡು ಜೀವನವನ್ನು ರಸೋದ್ಯಾನವಾಗಿಸಿಕೊಳ್ಳಬೇಕೇ ವಿನಾ ಅನಗತ್ಯ ವಿಚಾರಗಳನ್ನೇ ತುಂಬಿಸಿಕೊಂಡು ಮನೆ ಹಾಗು ಮನಸ್ಸನ್ನು ಕಸೋದ್ಯಾನವಾಗಿಸಿಕೊಳ್ಳಬಾರದು.
ಆಭರಣ ನೋಡುವುದಕ್ಕೆ ಆಕರ್ಷಕ, ಅತ್ಯಾಕರ್ಷಕ ಎಂದರೆ ಸಾಲದು ಅದರ ತಾಳುವಿಕೆ, ಮೌಲ್ಯವೂ ಮುಖ್ಯ. ಅವುಗಳನ್ನು ಯಾವ ಲೋಹದಿಂದ ಮಾಡಿದೆ ಎನ್ನುವುದರ ಮೇಲೆಯೂ ಅವುಗಳ ಘನತೆ ನಿರ್ಧಾರವಾಗುತ್ತದೆ. ಹಾಗೆ ನಮ್ಮ ಬದುಕೂ ಕೂಡ. ನಮ್ಮ ಒಡನಾಟವೂ ಇಲ್ಲ ಗಣನೆಗೆ ಬರುವಂಥದ್ದು. “ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ” ಮಾತನ್ನೂ ಇಲ್ಲಿ ಉಲ್ಲೇಖಿಸಬಹುದು.
ನಮ್ಮನ್ನಾವರಿಸಿರುವ ಕೆಟ್ಟದ್ದು ಎನ್ನುವ ಹಾಲಾಹಲವನ್ನು ಕಳೆದು ಅಮೃತತ್ವಕ್ಕೆ ಏರಿಸಬಲ್ಲ ಸದ್ಗುಣಗಳಿಂದ ನಾವು ಆವಕವಾಗಬೇಕು. ಯಾವಾಗಲೂ ಕೆಟ್ಟದ್ದರ ಸುತ್ತಲೂ ಸುತ್ತುತ್ತಿದ್ದರೆ ಅದು ನಮಗೆ ನಾವೇ ಏರ್ಪಡಿಸಿಕೊಳ್ಳುವ ವಿಷವರ್ತುಲವೇ ಸರಿ! ವಿಷತ್ವವನ್ನು ಬಿಟ್ಟು ಅಮೃತತ್ವಕ್ಕೆ ಏರೋಣ. ವಿಷೋದ್ಯಾನ ಅಳಿಸಿ ಅಮೃತೋದ್ಯಾನ ನಿರ್ಮಿಸೋಣ!
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.
ಸುಮಾ ವೀಣಾ ಅವರ ಲೇಖನ ಚೆನ್ನಾಗಿದೆ. ಆದರೆ, ಒಂದು ಅನುಮಾನ. ಇಲ್ಲಿ, `ಗರ್ವ’ ಪದದ ಬದಲಾಗಿ `ಅಹಂಕಾರ’ ಪದ ಬರಬೇಕಿತ್ತೇ?
ಅಂತರ್ಜಾಲದಲ್ಲಿ ಇಂಗ್ಲಿಷ್ ಪದಕೋಶ ಪರಿಶೀಲಿಸಿದಾಗ `ಗರ್ವ’ ಎಂಬುದನ್ನು `ಪ್ರೌಡ್’ ಎನ್ನಲಾಗಿದೆ.
`ಗರ್ವ ಒಪ್ಪಿತ, ಅಹಂಕಾರ ಒಪ್ಪಿತವಲ್ಲ. ಗರ್ವಕ್ಕೂ ಅಹಂಕಾರಕ್ಕೂ ಮಧ್ಯೆ ತೆಳುವಾದ ಗೆರೆ ಇದೆ. ಗರ್ವ ಎಂಬುದು ಹೆಮ್ಮೆ ಎಂಬ ಅರ್ಥವನ್ನೂ ಕೊಡುತ್ತದೆ’ ಎನ್ನುತ್ತಿದ್ದ ವರ್ಷಗಳ ಹಿಂದೆ ಸಹೋದ್ಯೋಗಿಯಾಗಿದ್ದ ಸುಧೀಂದ್ರ ಕಂಚಿತೋಟ. ಹಾಗಾಗಿಯೇ ಅವನು ಸಂಪಾದಿಸಿದ ವಾರ ಪತ್ರಿಕೆಗೆ `ಗರ್ವ’ ಎಂದೇ ಹೆಸರಿಟ್ಟಿದ್ದ. ಲಂಕೇಶ್ ಪತ್ರಿಕೆ, ಹಾಯ್ ಬೆಂಗಳೂರು ಆರ್ಭಟಿಸುತ್ತಿದ್ದ ದಿನಗಳಲ್ಲಿ `ಗರ್ವ’ವನ್ನು ತುಸು ಭಿನ್ನವಾಗಿ ಪ್ರಕಟಿಸಲು ಯತ್ನಿಸ್ತಿದ್ದ. ಪ್ರತಿವಾರವೂ ಆ ಕಪ್ಪು ಸುಂದರಿಯನ್ನು ಓದುಗರಿಗೆ ಮುಟ್ಟಿಸಲು ಸಾಕಷ್ಟು ಶ್ರಮಿಸಿದ್ದ.
ಮಹೇಶ್ ಚಂದ್ರ ಸರ್ ಪ್ರತಿಕ್ರಿಯೆಗೆ ಧನ್ಯವಾದಗಳು ಗರ್ವ ಪದವನ್ನು ಇಲ್ಲಿ ಅಹಂ ಪದಕ್ಕೆ ಸಂವಾದಿಯಾಗಿ ತೆಗೆದುಕೊಂಡಿದ್ದೇನೆ.
👌👌