20.6 C
Karnataka
Sunday, September 22, 2024

    ನಿಧಾನವಾಗಿ ಯೋಚಿಸಿ ನೋಡಿದಾಗ ನಿಜವು ತಿಳಿವುದು

    Must read

    ವಿಶ್ಲೇಷಣೆಗಳು, ವಿಚಾರಗಳು, ಶಿಫಾರಸುಗಳು ಇತ್ತೀಚಿನ ದಿನಗಳಲ್ಲಿ ತೀವ್ರ ಅಲ್ಪಾಯುವುಳ್ಳವಾಗಿವೆ. ಬದಲಾವಣೆಗೆ ತಕ್ಕಂತೆ ಶೈಲಿ ಬದಲಾಗುತ್ತದೆ.

    ಹಿಂದಿನ ವರ್ಷ ಅಂದರೆ 2020 ರ ಮಾರ್ಚ್‌ ನಲ್ಲಿ ಕೊರೊನ ಕಾರಣ ವ್ಯವಹಾರಿಕ ಚಟುವಟಿಕೆಗಳು ಕ್ಷೀಣಿತಗೊಂಡು, ದೇಶದ ಆರ್ಥಿಕತೆಯು ನಿಶ್ಚೇಷ್ಠಿತ ಅವಸ್ಥೆಯಲ್ಲಿದ್ದ ಕಾರಣ ಬ್ಯಾಂಕಿಂಗ್‌ ವಲಯವೂ ಅದಕ್ಕನುಗುಣವಾಗಿ ನೀರಸಮಯ ವಾತಾವರಣದಲ್ಲಿತ್ತು. ಆ ನಿರುತ್ಸಾಹಿ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಒಂದು ವಿಶಿಷ್ಠ ರೀತಿಯ ಅನುಪಾತವನ್ನು (RATIO) ತೇಲಿಬಿಡಲಾಯಿತು. ಅದೆಂದರೆ ಠೇವಣಿ/ ಷೇರುಪೇಟೆ ಬಂಡವಾಳೀಕರಣ ಮೌಲ್ಯ ( Deposit/ Market Cap Ratio). ಇದರ ಪ್ರಕಾರ ಹಳೆಯ ಖಾಸಗಿ ಬ್ಯಾಂಕ್‌ ಗಳಾದ ಕರೂರು ವೈಶ್ಯ ಬ್ಯಾಂಕ್‌, ಫೆಡರಲ್‌ ಬ್ಯಾಂಕ್‌, ಲಕ್ಷ್ಮೀ ವಿಲಾಸ್‌ ಬ್ಯಾಂಕ್‌, ಕರ್ನಾಟಕ ಬ್ಯಾಂಕ್‌, ಧನಲಕ್ಷ್ಮಿ ಬ್ಯಾಂಕ್‌, ಸೌತ್‌ ಇಂಡಿಯನ್‌ ಬ್ಯಾಂಕ್‌ ಗಳು ಹೆಚ್ಚು ಆಪತ್ತಿಗೊಳಗಾಗಿವೆ ಎಂದು ಬಿಂಬಿಸಲಾಯಿತು.

    ಇಲ್ಲಿ ಮಾರ್ಕೆಟ್‌ ಕ್ಯಾಪ್‌ ಎಂಬುದು ಷೇರುಪೇಟೆಯ ಮೌಲೀಕರಣವೇ ಹೊರತು ಕಂಪನಿಗಳ/ ಬ್ಯಾಂಕ್‌ ಗಳ ಕಾರ್ಯಾಚರಣೆಗೆ ಸಂಬಂಧಿಸಿರುವುದಿಲ್ಲ. ಷೇರುಪೇಟೆಗಳು ಕುಸಿತದಲ್ಲಿದ್ದಾಗ ಸಹಜವಾಗಿ ಮಾರ್ಕೆಟ್‌ ಕ್ಯಾಪ್‌ ಗಳು ಇಳಿಕೆಯಲ್ಲಿರುತ್ತವೆ. ಇದರಲ್ಲಿ ವಿಶೇಷವೇನೂ ಇಲ್ಲ. ಆದರೆ ಈ ರೀತಿಯ ಅನುಪಾತಗಳನ್ನು ತೇಲಿ ಬಿಟ್ಟು ಹೂಡಿಕೆದಾರರಲ್ಲಿ ಗಾಬರಿ/ ಭಯ ಮೂಡಿಸುವ ಪ್ರಯತ್ನಗಳು ನಡೆಯುವ ಕಾರಣ ಅಂತಹ ಕಂಪನಿಗಳಲ್ಲಿನ ಹೂಡಿಕೆದಾರರು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಅಸಮರ್ಥರಾಗಲೂಬಹುದು. ಇಂತಹ ವಿಶ್ಲೇಷಣೆಗಳನ್ನು ಪರಿಶೀಲಿಸಿ ನಿರ್ಧರಿಸಿದರೆ ಮಾತ್ರ ಹೂಡಿಕೆ ಸುರಕ್ಷಿತತೆ ಕಾಣಬಹುದು.

    ಹಿಂದಿನ ವರ್ಷದ ಮಾರ್ಚ್‌ನಲ್ಲಿ ಕರೂರು ವೈಶ್ಯ ಬ್ಯಾಂಕ್‌ ನ ಷೇರಿನ ಬೆಲೆ ರೂ.18 ರ ಸಮೀಪವಿದ್ದು ಈ ತಿಂಗಳು ರೂ.64 ರ ಸಮೀಪದಿಂದ ರೂ.55 ರ ಸಮೀಪದಲ್ಲಿದೆ. ಫೆಡರಲ್‌ ಬ್ಯಾಂಕ್‌ ನ ಷೇರಿನ ಬೆಲೆಯೂ ಸಹ ರೂ.36 ರ ಸಮೀಪದಿಂದ ರೂ.92 ರವರೆಗೂ ಏರಿಕೆ ಕಂಡು ರೂ.77 ರ ಸಮೀಪವಿದೆ.ಲಕ್ಷ್ಮೀ ವಿಲಾಸ್‌ ಬ್ಯಾಂಕ್‌ ವಿಚಾರವೆಂದರೆ, ಆ ಸಮಯದಲ್ಲಾಗಲೇ ಆರ್ಥಿಕ ಒತ್ತಡದಲ್ಲಿದ್ದು, ಹಲವು ಕಂಪನಿಗಳು ಈ ಬ್ಯಾಂಕ್‌ ನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದವು. ಅಂತಿಮವಾಗಿ ಈ ಬ್ಯಾಂಕ್‌ ಡಿಬಿಎಸ್‌ ಬ್ಯಾಂಕ್‌ ನಲ್ಲಿ ವಿಲೀನಗೊಂಡಿತು.

    ಕರ್ನಾಟಕ ಬ್ಯಾಂಕ್‌ ಹಿಂದಿನ ವರ್ಷ ಮಾರ್ಚ್‌ ನಲ್ಲಿ ರೂ.35 ರ ಸಮೀಪದಲ್ಲಿದ್ದು ಈ ವರ್ಷದ ಮಾರ್ಚ್‌ ನಲ್ಲಿ ರೂ.73 ರವರೆಗೂ ತಲುಪಿ ರೂ.61 ರ ಸಮೀಪದಲ್ಲಿ ವಹಿವಾಟಾಗುತ್ತಿದೆ. ಈ ಬ್ಯಾಂಕ್‌ 2007 ರಲ್ಲಿ ರೂ.120.50 ಕೋಟಿ ಮೌಲ್ಯದ ಶೇ.10.50 ಬಡ್ಡಿದರದ ಬಾಂಡ್‌ ಗಳನ್ನು, 2008 ರಲ್ಲಿ ರೂ.29.50 ಕೋಟಿ ಮೌಲ್ಯದ ಶೇ.10.25% ಬಡ್ಡಿದರದ ಹಾಗೂ 11.25% ಬಡ್ಡಿದರದ ರೂ.200 ಕೋಟಿ ಮೌಲ್ಯದ ಬಾಂಡ್‌ ಗಳನ್ನು ಟೈರ್‌ 2 ಕ್ಯಾಪಿಟಲ್‌ ಅಡಿಯಲ್ಲಿ ಸಂಗ್ರಹಿಸಿತ್ತು. ಈ ಎಲ್ಲಾ ಬಾಂಡ್‌ ಗಳನ್ನು ಸರಿಯಾದ ಸಮಯದಲ್ಲಿ ಅಂದರೆ 10 ವರ್ಷದ ಅವಧಿಯಲ್ಲಿ ಹೂಡಿಕದಾರರಿಗೆ ಸಂಪೂರ್ಣವಾಗಿ ಹಿಂದಿರುಗಿಸಿದೆ. ಇನ್ನು 2012 ರಲ್ಲಿ ವಿತರಿಸಿದ‌ 11% ಬಡ್ಡಿದರದ ರೂ.250 ಕೋಟಿ ಮೌಲ್ಯದ ಬಾಂಡ್ ಗಳನ್ನು ಮುಂದಿನ ವರ್ಷ ಅಂದರೆ 2022 ರ ನವೆಂಬರ್‌ ನಲ್ಲಿ ಹಿಂದಿರುಗಿಸಲಿದೆ. ಉಳಿದಂತೆ ಶೇ.12% ವಾರ್ಷಿಕ ಬಡ್ಡಿ ನೀಡುತ್ತಿರುವ ರೂ.400 ಕೋಟಿಯ ಮತ್ತು ರೂ.320 ಕೋಟಿ ಮೌಲ್ಯದ ಬಾಂಡ್ ಗಳಿಗೆ ಬಡ್ಡಿಯನ್ನು ಸೂಕ್ತ ಸಮಯದಲ್ಲಿ ವಿತರಿಸಿ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ.

    ಧನಲಕ್ಷ್ಮಿ ಬ್ಯಾಂಕ್‌ ಷೇರಿನ ಬೆಲೆಯು ಸಹ ಹಿಂದಿನ ವರ್ಷ ಮಾರ್ಚ್‌ ನ ಬೆಲೆ ರೂ.7 ರ ಸಮೀಪದಿಂದ ರೂ.17 ರವರೆಗೂ ಜಿಗಿತ ಕಂಡು ಸಧ್ಯ ರೂ.14 ರ ಸಮೀಪವಿದೆ.ಸೌತ್‌ ಇಂಡಿಯನ್‌ ಬ್ಯಾಂಕ್‌ ಷೇರಿನ ಬೆಲೆ ಹಿಂದಿನ ಮಾರ್ಚ್‌ ನಲ್ಲಿ ರೂ.5 ರ ಸಮೀಪವಿದ್ದು ಈ ವರ್ಷ ಅದು ರೂ.10 ರೂಪಾಯಿ ದಾಟಿ ನಂತರ ರೂ.8.40 ರ ಸಮೀಪವ ವಹಿವಾಟಾಗುತ್ತಿದೆ. ಈ ಬ್ಯಾಂಕ್‌ 2020 ರ ಜನವರಿಯಲ್ಲಿ ಶೇ,13.75 ಬಡ್ಡಿದರದ, ರೂ.500 ಕೋಟಿ ಮೌಲ್ಯದ ಟೈರ್‌ 1 ಬಾಂಡ್ಸ್‌ ಗಳನ್ನು ವಿತರಿಸಿದೆ. 2021 ರ ಜನವರಿಯಲ್ಲಿ ಬಡ್ಡಿಯ ಹಣವನ್ನು ವಿತರಿಸಿದೆ. ಅಂದರೆ ತನ್ನ ಆರ್ಥಿಕ ಸಾಮರ್ಥ್ಯತೆಯನ್ನು ಪ್ರದರ್ಶಿಸಿದೆ.

    ಈ ಎಲ್ಲಾ ವಿಚಾರಗಳು ವಾಸ್ತವಾಂಶಗಳಾಗಿದ್ದು, ಯಾವುದೇ ಶಿಫಾರಸ್ಸಾಗಿ ಅಲ್ಲ. ಈ ಸಂದರ್ಭದಲ್ಲಿ ಒಂದು ವಿಚಾರವನ್ನು ನೆನಪಿನಲ್ಲಿಡಬೇಕು, ಏನೆಂದರೆ ಆರ್‌ ಬಿ ಐ ಆದೇಶದ ಪ್ರಕಾರ ಬ್ಯಾಂಕ್‌ ಗಳು ಲಾಭಾಂಶಗಳನ್ನು, ಮುಂದಿನ ಆದೇಶದವರೆಗೂ ಘೋಷಿಸುವಂತಿಲ್ಲ. ಆದ್ದರಿಂದ ಹೂಡಿಕೆದಾರರು ಬ್ಯಾಂಕಿಂಗ್‌ ವಲಯದಿಂದ ಡಿವಿಡೆಂಡ್‌ ಘೋಷಣೆ/ ವಿತರಣೆ ನಿರೀಕ್ಷಿಸುವಂತಿಲ್ಲ. ಹಾಗಾಗಿ ಡಿವಿಡೆಂಡ್‌ ಘೋಷಿಸದ ಬ್ಯಾಂಕ್‌ ಗಳು ಲಾಭಗಳಿಸುತ್ತಿಲ್ಲ ಎಂದು ಭಾವಿಸಬಾರದು.

    ಬ್ಯಾಂಕಿಂಗ್‌ ವಲಯದ ಷೇರುಗಳಲ್ಲಿ ವಹಿವಾಟಾಗಿ / ವ್ಯವಹಾರಿಕವಾಗಿ ಚಟುವಟಿಕೆ ನಿರ್ವಹಿಸಬೇಕಷ್ಠೆ. ಇದಕ್ಕೆ ಪೂರಕವಾಗಿ ಕೆನರಾ ಬ್ಯಾಂಕ್ ಕಳೆದೆರಡು-ಮೂರು ತಿಂಗಳಲ್ಲಿ ರೂ.130 ರಿಂದ ರೂ.170 ಕ್ಕೆ ತಲುಪಿ ಮತ್ತೆ ರೂ.137 ರ ಸಮೀಪಕ್ಕೆ ಕುಸಿದದ್ದನ್ನು ಕಂಡಿದ್ದೇವೆ. ರೂ.170 ನ್ನು ಎರಡುಬಾರಿ ತಲುಪಿದೆ.

    ಅದೇ ರೀತಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಸಹ ಒಂದೇ ತಿಂಗಳಲ್ಲಿ ರೂ.355 ರ ಸಮೀಪದಿಂದ ರೂ.408 ರವರೆಗೂ ತಲುಪಿ ರೂ.355 ಕ್ಕೆ ಹಿಂದಿರುಗಿದೆ.ಕರ್ನಾಟಕ ಬ್ಯಾಂಕ್‌ ಷೇರು ಕಳೆದ ಒಂದು ತಿಂಗಳಲ್ಲಿ ರೂ.59 ರ ಸಮೀಪದಿಂದ ರೂ.73 ರವರೆಗೂ ಜಿಗಿತ ಕಂಡು ಮತ್ತೆ ರೂ.60 ಸಮೀಪಕ್ಕೆ ಮರಳಿದೆ.

    ಷೇರುಪೇಟೆಯಲ್ಲಿ ವ್ಯವಹರಿಸುವಾಗ ಒಂದಂಶವನ್ನು ನೆನಪಿನಲ್ಲಿಡಬೇಕು, ಡಿವಿಡೆಂಡ್‌ ಗಳು ಸಹ ತೆರಿಗೆಗೊಳಪಡುತ್ತವೆ ಮತ್ತು ಅಲ್ಪಾವಧಿಯ ಲಾಭವೂ ತೆರಿಗೆಗೊಳಪಡುತ್ತವೆ ಆದ್ದರಿಂದ ಅಲ್ಪಾವಧಿಯಲ್ಲಿ ಏರಿಕೆ ಕಂಡಾಗ ಲಾಭದ ನಗದೀಕರಣವೂ ಹೆಚ್ಚಾಗಿ ಷೇರಿನ ಬೆಲೆ ಕುಸಿತಕ್ಕೊಳಗಾಗುತ್ತದೆ. ಪ್ರತಿ ಭಾರಿ ಇಳಿಕೆಯು ಉತ್ತಮ ವ್ಯಾಲ್ಯು ಪಿಕ್‌ ಗೆ ಅವಕಾಶ ಮತ್ತು ಪ್ರತಿ ಭಾರಿ ಏರಿಕೆಯು ಪ್ರಾಫಿಟ್‌ ಬುಕ್‌ ಗೆ ಅವಕಾಶ. ಪೇಟೆಗಳು ಗರಿಷ್ಠದಲ್ಲಿರುವಾಗ ಪ್ರತಿ ನಕಾರಾತ್ಮಕ ಸುದ್ಧಿಯು ಹೆಚ್ಚು ಕುಸಿತವನ್ನುಂಟುಮಾಡುತ್ತದೆ. ಆದ್ದರಿಂದ ಧೀರ್ಘಕಾಲೀನ ಹೂಡಿಕೆ ಎಂಬ ಚಿಂತನೆಯಿಂದ ಹೊರಬಂದು ಬಂಡವಾಳ ಸುರಕ್ಷತೆಯೊಂದಿಗೆ ವೃದ್ಧಿ ಸೂತ್ರವೇ ಒಳಿತೆನ್ನಬಹುದಲ್ಲವೇ? ವಿಶ್ಲೇಷಣೆಗಳನ್ನು ವಿವೇಚಿಸಿ, ತೂಗಿ ಸಂದರ್ಭಾನುಸಾರ ನಿರ್ಧಾರ ತೆಗೆದುಕೊಳ್ಳುವುದು ಆರ್ಥಿಕ ಸಾಕ್ಷರತೆ ತಲುಪುವ ಸುಲಭ ಮಾರ್ಗವೆನ್ನಬಹುದು.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!